• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಂಧರ್ವ ಲೋಕದ ಪಂಚಕನ್ಯೆಯರು

By Staff
|

*ಸುಮ ಚರಣ್‌, ಬೆಂಗಳೂರು

Meet New Pop Girls, Mahuva Kamath, Seema Ram Chandani, Anushka Manchanda, Neha Bhasin, and Pratichi Mahapatraಯುವಜನತೆಯ ಆಕರ್ಷಿಸುವ ಸೆಳಕು ಪಾಪ್‌ ಸಂಗೀತಕ್ಕೆ ಇದ್ದುದರಿಂದಲೋ ಏನೋ 1995ರಿಂದ ಈಚೆಗೆ ಪಾಪ್‌ ಗಾಯಕ/ಗಾಯಕಿಯರು ಪಾರ್ಥೇನಿಯಂಗಿಂತ ವೇಗವಾಗಿ ಹುಟ್ಟಿಕೊಂಡರು. ನೆನ್ನೆ ಕಾಲೇಜಿನ ವೇದಿಕೆ ಮೇಲೆ ನಿಂತವ ಇವತ್ತು ಕ್ಯಾಸೆಟ್‌ ಕಂಪನಿಗಳ ಕದ ತಟ್ಟುತ್ತಾನೆ. ಮರುದಿನ ಟಿವಿ ಛಾನೆಲ್ಲುಗಳಲ್ಲಿ ಪ್ರತ್ಯಕ್ಷ ! ಬಾತ್ರೂಂ ಹಾಡುಗಾರರೂ ಆಲ್ಬಂ ಕಟ್‌ ಮಾಡಲು ತೊಡಗಿದ್ದೇ ತಡ, ಪಾಪ್‌ ಗುಣಮಟ್ಟ ಪಾಪ ಪಾಪ ಎಂಬಂತಾಯಿತು. ಮುಂದೇನು ಎಂಬ ಪ್ರಶ್ನೆ ಸಹೃದಯರಲ್ಲಿ ಗಂಭೀರವಾಗಿ ತಲೆಯಾಡಿಸುತ್ತಿರುವ ಇವತ್ತಿನ ಪರಿಸ್ಥಿತಿಯಲ್ಲಿ ಸ್ಟಾರ್‌ ಟಿವಿಯ ಚಾನೆಲ್‌ ವಿ ಗಂಧರ್ವಲೋಕದ ಪಂಚ ಕನ್ಯೆಯರ ಕೈಗೆ ಮೈಕ್‌ ಕೊಟ್ಟು ನಿಲ್ಲಿಸಿದೆ!

ತಂಪು ಪಾನೀಯ ತಯಾರಕ ಕೋಕ್‌ ಹಾಗೂ ಇಂಡಿಯಾಟೈಮ್ಸ್‌ನ ಸಹಯೋಗದಿಂದ ಚಾನೆಲ್‌ ವಿ ಪ್ರಾಯೋಜಿಸಿದ ಪಾಪ್‌ ಗಾಯಕಿಯರ ಸ್ಪರ್ಧೆಯಲ್ಲಿ ದೇಶದ ಮೂಲೆಮೂಲೆಗಳಿಂದ ಸುಮಾರು 2,000 ಹುಡುಗಿಯರು ಭಾಗವಹಿಸಿದ್ದರು. ಈ ಪೈಕಿ ಅನೇಕರು ಹುಡುಗಾಟದ ಹುಡುಗೀರು. ಎದೆ ತುಂಬಿ ಹಾಡಿದ್ದು ಕೆಲವೇ ಕೆಲವರು. ಅಂತಹ ಕೆಲವೇ ಮಂದಿಯಲ್ಲಿ ಐದು ಹುಡುಗಿಯರನ್ನು ಅನರ್ಘ್ಯ ರತ್ನಗಳೆಂದು ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದವರೇ ಹೆಕ್ಕಿ, ತೆಗೆದರು.

ಹಾಡೋದಷ್ಟೇ ಅಲ್ಲ, ಮೂತಿ ಹೇಗೆ ಮಾಡ್ತಾರೆ ಅನ್ನೋದೂ ಮುಖ್ಯ

ಆಯ್ಕೆ ಸಮಯದಲ್ಲಿ ಸ್ಪರ್ಧಾಳುಗಳ ಗಾಯನ ಸಾಮರ್ಥ್ಯದ ಜೊತೆಗೆ ಅವರ ಹಾವ-ಭಾವ, ನೃತ್ಯ ಭಂಗಿಗಳನ್ನು ಕೂಲಂಕಷವಾಗಿ ನೋಡಿ, ಈ ಭವಿಷ್ಯದ ತಾರೆಗಳನ್ನು ಸೋಸಿರುವ ಕಷ್ಟದ ಕೆಲಸದಲ್ಲಿ ತೊಡಗಿಕೊಂಡವರ ಪೈಕಿ ಬೆಂಗಳೂರು ಮೂಲದ ಚಿತ್ರ ಸಂಗೀತ ನಿರ್ದೇಶಕ ಸಂದೀಪ್‌ ಚೌಟ ಕೂಡ ಒಬ್ಬರು.

ಇನ್ನುಳಿದ ಆಯ್ಕೆಗಾರರು-ಹಿಂದೂಸ್ತಾನಿ ಸಂಗೀತ ಹಾಗೂ ಪಾಪ್‌ ಗಾಯನದಲ್ಲಿ ಹೆಸರು ಮಾಡಿರುವ ಸುಪ್ರಸಿದ್ಧ ಗಾಯಕಿ ಶುಭಾ ಮುದ್ಗಲ್‌, ಚಾನೆಲ್‌ ವಿ ನಿರ್ವಾಹಕಿ (ವಿಡಿಯೋ ಜಾಕಿ-VJ) ಸುಷ್ಮಾ ರೆಡ್ಡಿ ಮತ್ತು ವಸ್ತ್ರ ವಿನ್ಯಾಸಕಾರ ಮನೀಶ್‌ ಮಲ್ಹೋತ್ರ. ವಿಶೇಷ ಆಹ್ವಾನಿತರಾಗಿ ಖ್ಯಾತ ಬರಹಗಾರ್ತಿ ಶೋಭಾ ಡೆ ಹಾಗೂ ವಿದೇಶಗಳಲ್ಲಿ ಮಡೋನ, ಡೀಪೆಚ್‌ ಮೋಡ್‌ ನಂತಹ ಗಾಯಕಿಯರನ್ನು/ ಗಾಯನ ತಂಡವನ್ನು ಆಯ್ಕೆ ಮಾಡಿ ಪಳಗಿರುವ ಸೀಮೊಸ್‌ ಸ್ಟೈನ್‌- ತೀರ್ಪುಗಾರರ ದಂಡು ಬಲು ಜೋರು.

ಇಂತಹ ಘಟಾನುಘಟಿಗಳಿಂದ ಚಾನೆಲ್‌ ವಿ ಪಾಪ್‌ ತಂಡಕ್ಕೆ ನವದೆಹಲಿಯ ನೇಹಾ ಭಾಸಿನ್‌ ಮತ್ತು ಅನುಶ್ಕ ಮನ್‌ಚಂದ ಹಾಗೂ ಮುಂಬಯಿ ಬೆಡಗಿಯರಾದ ಪ್ರತಿಚಿ ಮಹಾಪಾತ್ರ, ಮಹುವಾ ಕಾಮತ್‌ ಹಾಗೂ ಸೀಮಾ ಆಯ್ಕೆಯಾಗಿದ್ದಾರೆ. ಅಂದಹಾಗೆ, ಇವರ ಪಾಪ್‌ ಬ್ಯಾಂಡ್‌ನ ಹೆಸರು-VIVA !

ಪಂಚಕನ್ಯೆಯರ ಪುಟ್ಟ ಪರಿಚಯ

ನೇಹಾ ಭಾಸಿನ್‌ : ಸಮಾಜ ಶಾಸ್ತ್ರ ಪದವಿಯ ಎರಡನೇ ವರ್ಷದಲ್ಲಿ ಅಭ್ಯಾಸ ಮಾಡುತ್ತಿರುವ ಹತ್ತೊಂಬತ್ತು ವರ್ಷದ ಪೋರಿ. ಹಾಡುಗಳನ್ನು ಬರೆಯುವುದು ಮತ್ತು ಅವುಗಳನ್ನು ಸ್ವಂತ ಟ್ಯೂನಿನಲ್ಲಿ ಹಾಡುವುದು ಈಕೆಗೆ ಅಂಗೈನೆಲ್ಲಿ. ನೇರ ನುಡಿ, ದಿಟ್ಟ ಮಾತುಗಳೇ ಬಂಡವಾಳ. ಮಾಡಬೇಕೆಂದಿರುವ ಕೆಲಸವನ್ನು ಮಾಡಿಯೇ ತೀರುವುದು ಜಾಯಮಾನ. ಆ ಛಲಬಲದಿಂದಲೇ ಅಂತೆ ಈಕೆ ಗೆದ್ದದ್ದು!

Meet New Pop Girls, Mahuva Kamath, Seema Ram Chandani, Anushka Manchanda, Neha Bhasin, and Pratichi Mahapatraಪ್ರತಿಚಿ ಮಹಾಪಾತ್ರ : ವಾಣಿಜ್ಯ ಪದವೀಧರೆ. ವಯಸ್ಸು ಇಪ್ಪತ್ತನಾಲ್ಕು. ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿಯಿಂದ ಕಸೂತಿ ಶಾಸ್ತ್ರದಲ್ಲಿ ಡಿಪ್ಲೋಮಾ ಪಡೆದಿರುವಾಕೆ. ಮಧುರ ಕಂಠದ ಈ ಚೆಲುವೆ, ಕಳೆದ ಆರು ವರ್ಷಗಳಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನದ ಸಾಣೆಗೆ ಒಡ್ಡಿಕೊಂಡಿದ್ದಾರೆ. ಗೆಳತಿಯ ಸಲಹೆಯ ಮೇರೆಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಿದರೂ, ಗೆಲುವಿಗೆ ಕಾರಣ ತನ್ನ ಪ್ರತಿಭೆ, ಆತ್ಮ ವಿಶ್ವಾಸ ಹಾಗೂ ಕಠಿಣ ಪರಿಶ್ರಮ ಎನ್ನುತ್ತಾಳೆ. ಕಿರುತೆರೆ ಮೂಲಕ ಹೆಸರು ಮಾಡಬೇಕೆಂಬುದು ಈಕೆಯ ಕನಸು.

ಅನುಶ್ಕ ಮನ್‌ಚಂದ : ಚಾನೆಲ್‌ ವಿ ಪಾಪ್‌ ಸ್ಟಾರ್‌ ಸ್ಪರ್ಧೆಗಾಗಿ ಹನ್ನೆರಡನೇ ಇಯತ್ತೆಯ ಓದನ್ನೇ ಮೊಟಕುಗೊಳಿಸಿದ ಈಕೆಯ ವಯಸ್ಸು ಕೇವಲ ಹದಿನೆಂಟು! ದೆಹಲಿಯ ಆಯ್ಕೆ ಸುತ್ತಿನಲ್ಲಿ ಒಳ್ಳೆಯ ಪ್ರದರ್ಶನ ನೀಡಿದರಾದರೂ ಹದಿನೆಂಟು ವರ್ಷದವಳಾಗಿಲ್ಲವೆಂದು ಅವಳನ್ನು ಆಯ್ಕೆಗಾರರು ಕೈಬಿಟ್ಟಿದ್ದರಂತೆ. ಆದರೆ (ಅವಳೇ ಹೇಳುವಂತೆ) ವಿಧಿ ಅವಳ ಪರವಾಗಿದ್ದ ಕಾರಣ ಕಳೆದ ಫೆಬ್ರವರಿ 11ಕ್ಕೆ ಹದಿನೆಂಟು ತುಂಬಿ ಈಗ 2000 ಹುಡುಗಿಯರಲ್ಲಿ ಆಯ್ಕೆಯಾದುದಕ್ಕೆ ಹೆಮ್ಮೆಯಿದೆ. ಆಯ್ಕೆ ಸುತ್ತುಗಳಲ್ಲಿ ಅನೇಕ ಪಾಠ ಕಲಿತೆ ಎನ್ನುವ ಅನುಶ್ಕ ಪ್ರಕಾರ ಸ್ಟಾರ್‌ ಆಗಲು ಜನಾನುರಾಗಿಯಾಗಿರುವುದು ಬಹುಮುಖ್ಯ. ಸಂಗೀತಾಭ್ಯಾಸ ಮಾಡಿದ್ದು ಕಡಿಮೆಯಾದರೂ, ಪಿಯಾನೋ, ಗಿಟಾರ್‌, ಕೊಳಲು ಹಾಗೂ ಡ್ರಮ್ಸ್‌ ವಾದ್ಯಗಳನ್ನು ಸರಾಗ ನುಡಿಸಬಲ್ಲ ಮೋಡಿಗಾರ್ತಿ.

ಮಹುವಾ ಕಾಮತ್‌ : ಕೊನೆಯ ಸುತ್ತಿನಲ್ಲಿ ಆಯ್ಕೆಯಾಗುವ ಮೂಲಕ ಸಂಗೀತದಲ್ಲಿ ಹೆಸರು ಮಾಡಲು ಎರಡನೇ ವರ್ಷದ ವಾಣಿಜ್ಯ ಪದವಿಗೇ ಅಲ್ಪ ವಿರಾಮ ಕೊಟ್ಟ ಮಹುವಾ ಕಾಮತ್‌ಗೆ ಇಪ್ಪತ್ತರ ಹರೆಯ. ಕಾಲೇಜಿಗೆ ಬೆನ್ನು ತೋರಿದರೇನಂತೆ, ತೆಗೆದುಕೊಂಡಿರುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪರೀಕ್ಷೆಗಾಗಿ ಅಭ್ಯಾಸ ಜೋರಾಗಿದೆ. ಅನುಶ್ಕಳಂತೆ ಆಯ್ಕೆ ಸುತ್ತುಗಳಲ್ಲಿ ಅನೇಕ ಪಾಠ ಕಲಿತು ಎಂತಹ ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧಳಾಗಿದ್ದೇನೆ ಎನ್ನುವ ಮಹುವಾ, ಪರಿಶ್ರಮ, ಅಚಲ ನಿರ್ಧಾರ, ಧ್ಯೇಯ ಹಾಗೂ ಅತೀವ ತಾಳ್ಮೆಯೇ ನನ್ನ ಅಸೆಟ್ಟುಗಳೆನ್ನುತ್ತಾಳೆ. ಅಲಾನಾ ಮೊರ್ಸೆಟಿ, ಟ್ರೇಸಿ ಚಾಪ್ಮನ್‌ ಹಾಗೂ ಡೀಡೋ ಈಕೆಗೆ ಇಷ್ಟವಾದ ಸಂಗೀತಗಾರರು.

ಸೀಮಾ ರಾಮ್‌ ಚಂದಾನಿ : ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸೀಮಾ ರಾಮ್‌ಚಂದಾನಿಗೆ (22), ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೆಂದರೆ ಬಹಳ ಇಷ್ಟ. ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡದೇ ಇದ್ದರೂ ಸಹ ಕೆಲವು ವಾದ್ಯಗಳನ್ನು ನುಡಿಸಲು ಕಲಿತಿರುವ ಸೀಮಾ, ಪುಣೆಯ ಗಾಯನ ತಂಡಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದಾಳೆ. ಮನೆಯವರ ಇಚ್ಛೆಯ ಮೇರೆಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾದ ಮೇಲೆ ಈಗ ‘ಸ್ಟಾರ್‌’ ಆಗಲು ಪ್ರತಿಭೆ ಹಾಗೂ ಸಮಯ ಸ್ಫೂರ್ತಿ ಬಹಳ ಅಗತ್ಯವೆಂದು ನಂಬಿದ್ದಾಳೆ.

ಗಾಯಕಿಯರ ಕಂಠಸಾಣೆ

ವಿವಿಧ ಹಿನ್ನೆಲೆಯಿಂದ ಬಂದು ಒಟ್ಟಿಗೆ ಪಾಪ್‌ ಹಾಡಲು ಸೇರಿರುವ ಈ ಐವರಿಗೆ ಸೈನಿಕರಿಗೆ ನೀಡುವಂತೆ ಅನೇಕ ರೀತಿಯ ತರಬೇತಿ ನೀಡಲಾಗುತ್ತಿದೆ. ಹಾಗೆ ನೀಡುವ ತರಬೇತಿಯನ್ನೇ ಚಾನೆಲ್‌ ವಿ, 16 ಕಂತುಗಳ ಸರಕಾಗಿ ಪ್ರಸಾರ ಮಾಡುತ್ತಿದೆ (ಪ್ರತಿ ಗುರುವಾರ ರಾತ್ರಿ 8 ಗಂಟೆಗೆ ಹಾಗೂ ಅದರ ಮರು ಪ್ರಸಾರ ಪ್ರತಿ ಶುಕ್ರವಾರ ರಾತ್ರಿ 11 ಗಂಟೆಗೆ). ಚಾನೆಲ್‌ ವಿಯ ಹಿರಿಯ ಅಧಿಕಾರಿ ಸಮೀರ್‌ ನಾಯರ್‌ ಹೇಳುವಂತೆ ಆದಾಯ ಗಳಿಕೆಯ ದೃಷ್ಟಿಯಿಂದ ಈ ಕಾರ್ಯಕ್ರಮ-ಚಾನೆಲ್‌ ವಿಯ ‘ಕೌನ್‌ ಬನೇಗ ಕರೋಡ್‌ ಪತಿ’!

ಪಂಚಕನ್ಯೆಯರ ಮ್ಯಾನೇಜರ್‌ ಆಗಿರುವ ನಯನಿಕಾ ಚಟರ್ಜಿ ಇವರನ್ನು ಸ್ಟಾರ್‌ಗಳನ್ನಾಗಿ ಮಾಡುವ ಬಗ್ಗೆ ಎಷ್ಟು ಉತ್ಸುಕರಾಗಿದ್ದಾರೆಯೋ ಅದಕ್ಕೂ ಇಮ್ಮಡಿ ಆಸಕ್ತಿಯಿಂದ ಈ ಐವರು ತಮ್ಮನ್ನು ಸ್ಟಾರ್‌ಗಳನ್ನಾಗಿ ಮಾಡಲು ಟೊಂಕ ಕಟ್ಟಿರುವ ಜೊತೆ ಸಹಕರಿಸುತ್ತಿದ್ದಾರೆ.

ಖ್ಯಾತ ನೃತ್ಯ ಸಂಯೋಜಕ ಶೈಮಾಕ್‌ ದಾವರ್‌ ಇವರಿಗೆ ಹೆಜ್ಜೆ ಹಾಕುವುದು ಹೇಗೆ ಎಂದು ಹೇಳಿಕೊಟ್ಟರೆ, ವಸ್ತ್ರ ವಿನ್ಯಾಸದ ನಿರ್ವಹಣೆಯ ಜವಾಬ್ದಾರಿಯನ್ನು ಮನೀಶ್‌ ಮಲ್ಹೋತ್ರ ಹೊತ್ತಿದ್ದಾರೆ. ದೇಹದ ಸಪೂರತೆ ಹೇಗೆ ಕಾಪಾಡಬೇಕೆಂದು ವ್ಯಾಯಾಮ ಹೇಳಿಕೊಡುವ ಹೊಣೆ ಡಯಾನ ಪಾಂಡೆ ಅವರದ್ದು. ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು ಅಂತ ಹೇಳಿಕೊಡಲು ಅಂಜಲಿ ಮುಖರ್ಜಿ ಇದ್ದಾರೆ.

ಇಂತಹ ಕಟ್ಟು ನಿಟ್ಟಿನ ವಾತಾವರಣದಲ್ಲಿ ಮನೆಯ ಎಲ್ಲರಿಂದ ದೂರವಾಗಿ, ಬೇಕೆನಿಸಿದ್ದೆಲ್ಲಾ ತಿನ್ನದೆ ಇರಬೇಕಾದ ಸ್ಥಿತಿ. ಮನೆಯವರು ನೆನಪಾಗಿ ಪಂಚತಾರೆಯರು ಒಮ್ಮೊಮ್ಮೆ ಖಿನ್ನರಾಗುವುದೂ ಉಂಟು. ಆಗ ಕಣ್ಣು ತುಂಬಿಬರುತ್ತದೆ. ಆದರೆ ಭವಿತವ್ಯದ ಕನಸೇ ಕರ್ಚೀಪು! ಸದ್ಯಕ್ಕೆ ಎಲ್ಲರನ್ನೂ, ಎಲ್ಲವನ್ನೂ ಮರೆತು ಕೇವಲ ಸಂಗೀತಕ್ಕೆ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದಾರೆ.

ಪಂಚಕನ್ಯೆಯರನ್ನು ಮುಂದಿನ ಎರಡು ವರ್ಷಗಳಿಗೆ ದತ್ತು ತೆಗೆದುಕೊಂಡು, ಇವರಿಗಾಗಿ ಕಂಡಾಪಟ್ಟೆ ಹಣ ಚೆಲ್ಲುತ್ತಿರುವ ಚಾನೆಲ್‌ ವಿಯ ಪ್ರಯತ್ನದ ಬರಕತ್ತು ಈಗ ತಾನೇ ಬಿಡುಗಡೆಯಾಗಿರುವ ಪಂಚಕನ್ಯೆಯರ ಪಾಪ್‌ ಗೀತೆಗಳ ಧ್ವನಿ ಮುದ್ರಿಕೆಯ ಬಿಕರಿಯಿಂದ ಗೊತ್ತಾಗಲಿದೆ. ಹಾಡುಗಳಿಗೆ ಸಾಹಿತ್ಯ ಹೊಸೆದಿರುವುದು ಕವಿ ಜಾವೇದ್‌ ಅಖ್ತರ್‌. ಹಿಂದಿ ಚಿತ್ರಗಳ ಸಂಗೀತ ಸಂಯೋಜನೆಯಲ್ಲಿ ಹೆಸರು ಮಾಡಿರುವ ಜತಿನ್‌-ಲಲಿತ್‌, ಶಂಕರ್‌-ಇಶಾನ್‌-ಲೋಯ್‌, ಸಂದೀಪ್‌ ಚೌಟ ಹಾಗೂ ಇನ್ನೂ ಅನೇಕ ನಿರ್ದೇಶಕರು ಟ್ಯೂನ್‌ ಹಾಕಿದ್ದಾರೆ.

ಟೀವಿಯಲ್ಲಿ ನಡೆಸುವ ಸಂಗೀತ ಕಾರ್ಯಕ್ರಮಗಳನ್ನು ಗೆಲ್ಲುವ ಮೂಲಕ ಬಾಲಿವುಡ್‌ ಚಿತ್ರಗಳ ಅವಕಾಶಗಳ ಏಣಿ ಹತ್ತಿ, ಮೆರೆದು, ಭೇಷ್‌ ಎನಿಸಿಕೊಂಡ ಸಂಜೀವಿನಿ ಹಾಗೂ ಸುನಿಧಿ ಚೌಹಾನ್‌ರಂತೆ ಈ ಐವರೂ ಗಗನಚುಂಬಿಗಳಾಗುವರೇ ಅಥವಾ ಚಾನೆಲ್‌ ವಿಯ ಬಂಡವಾಳದ ಕೋಳಿಗಳಾಗುವರೇ? ಕಾಲವೇ ಉತ್ತರ ಕೊಡಲಿದೆ.

ಇದನ್ನೂ ಓದಿ...

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more