ಯುಗಾದಿ ವಿಶೇಷ : ಬೆಂಗಳೂರಲ್ಲಿ ರೋಜರ್ ವಾಟರ್ಸ್ ಸಂಗೀತ
*ಇನ್ಫೋ ಇನ್‌ಸೈಟ್
ಬೆಂಗಳೂರು ಸಂಗೀತ ನಗರಿಯಾಗುತ್ತಿದೆಯೇ? ಸಿಲಿಕಾನ್ ಗರಿ ಮೂಡಿದ್ದೇ ತಡ ಪಾಶ್ಚಾತ್ಯ ಗಾಯಕರು ಒಬ್ಬರ ನಂತರ ಒಬ್ಬರಂತೆ ಇಲ್ಲಿಗೆ ಲಗ್ಗೆಯಿಡುತ್ತಿದ್ದಾರೆ. ಸ್ಕಾರ್ಪಿಯನ್, ಡೀಪ್ ಪರ್ಪಲ್, ಬ್ರಿಯಾನ್ ಆ್ಯಡಮ್ಸ್ ಬಂದು ಹೋದದ್ದಾಯಿತು. ಯುಗಾದಿಯ ದಿನ (ಏಪ್ರಿಲ್ 13) ರೋಜರ್ ವಾಟರ್ಸ್ ಸಂಗೀತ ಸಂಜೆ. ಅರಮನೆ ಮೈದಾನದಲ್ಲಿ, ಸಂಜೆ 7.30ಕ್ಕೆ.
ಇಂಥಾ ಸಂಗೀತವನ್ನು ಬೆಂಗಳೂರಿಗರು ಈ ಹಿಂದೆ ಕೇಳಿರುವುದೇ ಇಲ್ಲ ಎನ್ನುತ್ತಾರೆ ಆಯೋಜಕರು. 360 ಡಿಗ್ರಿ ಕ್ವಾಡ್ರಫೋನಿಕ್ ಧ್ವನಿ ಕಾರ್ಯಕ್ರಮದ ವಿಶೇಷ. ನಗರದಲ್ಲಿ ಮೊದಲ ಬಾರಿಗೆ ಹೊಮ್ಮಲಿರುವ ವಿಶೇಷ ಪ್ರಕಾರದ ಧ್ವನಿಯಿದು. ರೋಜರ್ ತಂಡ ಸಂಗೀತ ಹೊಮ್ಮಿಸಲು ಬಳಸುವ ಉಪಕರಣಗಳ ತೂಕ 32 ಟನ್‌ಗಳು. ಇವೆಲ್ಲವನ್ನೂ ತನ್ನ ಖಾಸಗಿ ಜೆಟ್ ವಿಮಾನದಲ್ಲಿ ರೋಜರ್ ಹೊತ್ತು ತರಲಿದ್ದಾರೆ. ಎಂಟಿವಿ, ಬಿಪಿಎಲ್, ಪೆಪ್ಸಿ, ಸೋನಿ ಮೊದಲಾಗ ದಿಗ್ಗಜ ಕಂಪನಿಗಳು ಈ ಸಂಗೀತ ಕಾರ್ಯಕ್ರಮದ ಪ್ರಾಯೋಜಕರು. 30 ಸಾವಿರ ಪ್ರೇಕ್ಷಕರು ಸಂಗೀತ ಸಂಜೆಯಲ್ಲಿ ನೆರೆಯುವ ನಿರೀಕ್ಷೆಯಿದೆ.
ರೋಜರ್ ವಾಟರ್ಸ್ ನಿಮಗೆ ಗೊತ್ತೆ?
ಪಾಶ್ಚಾತ್ಯ ಸಂಗೀತ ಕ್ಷೇತ್ರದ ಅನುಭವಿ ಗಾಯಕ. 1966ರಲ್ಲಿ ಪಿಂಕ್ ಫ್ಲಾಯ್ಡ್ ಎಂಬ ಸಂಗೀತ ತಂಡ ಕಟ್ಟಿ, ಜಗತ್ತಿನಾದ್ಯಂತ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ತನ್ನದೇ ಆದ ವಿಶೇಷ ಸಂಯೋಜನೆಗಳಿಗೆ ಈತ ಹೆಸರು ವಾಸಿ. ಅನದರ್ ಬ್ರಿಕ್ ಇನ್ ದಿ ವಾಲ್, ವಿಶ್ ಯೂ ವರ್ ಹಿಯರ್, ಟೈಮ್, ಬ್ರೀಥ್, ಶೈನ್ ಆನ್ ಯೂ ಕ್ರೇಜಿ ಡೈಮಂಡ್, ಅನಿಮಲ್ಸ್ ಮೊದಲಾದವು ರೋಜರ್ಸ್ ಹಾಡಿರುವ ಜನಪ್ರಿಯ ಗೀತೆಗಳು. 30 ವರ್ಷಗಳಿಂದ ತಾವು ಸಂಯೋಜಿಸಿರುವ ಹಾಡುಗಳ ಪೈಕಿ ಕೆಲವನ್ನು ರೋಜರ್ ಪಟ್ಟಿ ಮಾಡಿಕೊಂಡಿದ್ದಾರೆ. ಅವನ್ನು ಕೇಳುವ ಭಾಗ್ಯ ಬೆಂಗಳೂರಿಗರದ್ದು.
ಮೂರು ಗಂಟೆ ಅವಧಿಯ ಸಂಗೀತ ಕಾರ್ಯಕ್ರಮದಲ್ಲಿ ರೋಜರ್ ತಂಡದ ಹೊರತು ಯಾರೂ ಮಾತಾಡುವುದಿಲ್ಲ. ನೇರವಾಗಿ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ನಡುವೆ 20 ನಿಮಿಷಗಳ ವಿರಾಮ ಇರುತ್ತದಷ್ಟೆ.
ಡಿಎನ್‌ಎ ನೆಟ್‌ವರ್ಕ್ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಟಿಕೆಟ್‌ಗಳು ಬ್ರಿಗೇಡ್ ರಸ್ತೆಯ ಪ್ಲಾನಟ್ ಎಂನಲ್ಲಿ ಮಾರಾಟಕ್ಕಿವೆ. ಹೆಚ್ಚಿನ ವಿವರಣೆಗಾಗಿ 5526622 ನಂಬರಿಗೆ ಫೋನಾಯಿಸಿ. ಅಂದಹಾಗೆ, ಟಿಕೆಟ್ ದರ- 900, 1500 ಹಾಗೂ 2500 ರುಪಾಯಿ. ಬೆಂಗಳೂರಿನಲ್ಲಿ ಹಿಂದೆಂದೂ ಸಂಗೀತ ಸಂಜೆಗೆ ಈ ಪರಿಯ ಟಿಕೆಟ್ ದರ ಇರಲಿಲ್ಲ ! ವಿದೇಶಕ್ಕೆ ವಿಮಾನದ ಮೂಲಕ ಹೋಗಿ ರೋಜರ್ ವಾಟರ್ಸ್ ಸಂಗೀತ ಕೇಳುವುದಕ್ಕೆ ಆಗುವ ಖರ್ಚಿಗಿಂತ ಇದು ಕಡಿಮೆಯಲ್ಲವೇ? ರೋಜರ್ ಸಂಗೀತದ ಮೌಲ್ಯ ಅಭಿಮಾನಿಗಳಿಗೆ ಗೊತ್ತಿದೆ. ಕಾರ್ಯಕ್ರಮ ಯಶಸ್ವಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಆಯೋಜಕರ ವಾದ.
ಮುಖಪುಟ / ಸಾಹಿತ್ಯ ಸೊಗಡು