• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಜಯ ಭಾಸ್ಕರ್‌ : ಎಲ್ಲೆಲ್ಲು ಸಂಗೀತವೇ ಎಲ್ಲೆಲ್ಲು ಸೌಂದರ್ಯವೇ !

By Staff
|

*ವಿಶಾಖ ಎನ್‌.

‘ಕ್ಯಾ ಭಾಯ್‌? ಆಪ್‌ ಕಾಪಿ ಕರ್‌ತೇ ಹೈ!’

ಇದು ಭಾರತಕ್ಕೆ ಸ್ವಾತಂತ್ರ್ಯ ಬಂದ ಐದು ವರ್ಷದ ನಂತರ ಮುಂಬಯಿಯಲ್ಲಿ ಕೇಳಿಬರುತ್ತಿದ್ದ ಮಾತು. ಕನ್ನಡದ ಸಿನಿಮಾ ಸಂಗೀತವನ್ನು ಹಿಂದಿಯವರು ಕಿಚಾಯಿಸುತ್ತಿದ್ದ ಪರಿ. ಇದನ್ನು ಕೇಳಿಸಿಕೊಂಡವರು ಹಿಂದಿ ಚಿತ್ರಗಳ ಸಂಗೀತ ಸಂಯೋಜಕರಾದ ನೌಶಾದ್‌ ಹಾಗೂ ಮದನ್‌ ಮೋಹನ್‌ ಅವರ ಸಾಥಿ. ಹಿಂದಿ ರಾಗಗಳಿಗೆ ಪಿಯಾನೋ ದನಿ ಹೊಮ್ಮಿಸುತ್ತಿದ್ದಾತ. ಈ ಮಾತು ಎಸೆದದ್ದು ಆತನ ಕನ್ನಡತನಕ್ಕೆ ಸವಾಲು. ಈ ಸವಾಲೇ ಮುಂಬಯಿಯಲ್ಲಿದ್ದ ಕನ್ನಡಿಗನನ್ನು ಬೆಳೆಸಿದ್ದು, ಸ್ವಂತ ರಾಗಗಳ ಹೊಸೆವಂತೆ ಮಾಡಿದ್ದು. ಅವರ ಹೆಸರೇ ವಿಜಯ ಭಾಸ್ಕರ್‌!

ಬೆಂಗಳೂರು ಟು ಬೆಂಗಳೂರು ವಯಾ ಮುಂಬಯಿ

ಬೆಂಗಳೂರಿನ ಮಲ್ಲೇಶ್ವರಂನ ಗಲ್ಲಿಗಳಲ್ಲಿ ಓದಿ- ಬೆಳೆದ ಹುಡುಗನ ಸೆಳೆದದ್ದು ಕಂಟೋನ್ಮೆಂಟಿನ ಟೈ ತೊಟ್ಟ ಬ್ರಿಟಿಷರು ಬಳಸುತ್ತಿದ್ದ ಪಿಯಾನೋ. ಪ್ರೊ.ಜಿ.ವಿ.ಭಾವೆ ಅವರ ಬಳಿ ಹಿಂದೂಸ್ತಾನಿ ಸಂಗೀತದ ಸಾಣೆಗೆ ಒಡ್ಡಿಕೊಂಡಿದ್ದ ವಿಜಯ ಭಾಸ್ಕರ್‌ ತಟ್ಟಿದ್ದು ಮೈಸೂರು ಅರಮನೆಯ ಬಾಗಿಲನ್ನ. ಪಿಯಾನೋ ವಾದಕ ಲೆನಿಹಂಟ್‌ ಬಳಿ ಪಿಯಾನೋ ನುಡಿಸುವುದರ ಜೊತೆಗೆ ಪಾಶ್ಚಾತ್ಯ ಸಂಗೀತದ ಗಂಧ- ಗಾಳಿಯನ್ನೂ ತುಂಬಿಕೊಂಡದ್ದಾಯಿತು. ಲಂಡನ್ನಿನ ಟ್ರಿನಿಟಿ ಕಾಲೇಜ್‌ ಆಫ್‌ ಮ್ಯೂಸಿಕ್‌ನಲ್ಲೂ ಪಾಶ್ಚಾತ್ಯ ಸಂಗೀತದ ಡಿಪ್ಲೋಮ ಪಡೆದು ಬೀಗಿದ್ದಾಯಿತು. ಕೊನೆಗೆ ಅವಕಾಶದ ಬೆನ್ನು ಹತ್ತಿ ಮುಂಬಯಿಗೆ ಪಯಣ. ಪಿಯಾನೋ ನಿಪುಣನಾದ್ದರಿಂದ ನೌಶಾದ್‌ ಬೆನ್ನು ತಟ್ಟಿದರು. ಪಳಗಲು ಅದು ಗರಡಿ.

ಕನ್ನಡಿಗರು ‘ಕಾಪಿ’ಗಳು ಎಂಬ ಮಾತು ವಿಜಯ ಭಾಸ್ಕರ್‌ ಮನಸ್ಸಲ್ಲಿ ಹಚ್ಚಿದ ಕಿಡಿ ಕನ್ನಡ ಚಿತ್ರ ಸಂಗೀತದ ಅವಕಾಶಕ್ಕೆ ಹಪಹಪಿಸುವಂತೆ ಮಾಡಿತ್ತು. ಆರ್‌.ನಾಗೇಂದ್ರ ರಾವ್‌ ಸಹಾಯಕ ಬಿ.ಆರ್‌.ಕೃಷ್ಣಮೂರ್ತಿ ಒಂದೊಮ್ಮೆ ಮುಂಬಯಿಗೆ ಬಂದವರು ವಿಜಯ ಭಾಸ್ಕರ್‌ ಜೊತೆ ಮಾತಿಗೆ ಕೂತರು. ಏನೇನೋ ಸುತ್ತಿ ಬಂದ ಮಾತು ಸಂಗೀತಕ್ಕೆ ಬಂದು ನಿಂತಿತು. ವಿಜಯ ಭಾಸ್ಕರ್‌ ಮನಸ್ಸಿನ ಇಂಗಿತ ಹೊರ ಬಿತ್ತು. ಶ್ರೀ ರಾಮ ಪೂಜಾ ಸಿನಿಮಾದಲ್ಲಿ ಸಂಗೀತ ನಿರ್ದೇಶನ ಮಾಡುವ ಅವಕಾಶ. ಇದು ನಡೆದದ್ದು 1953ರಲ್ಲಿ.

ಪಿಯಾನೋ ಪ್ರಿಯ ಹೊಸೆದ ದೇಸೀ ರಾಗಗಳು

‘ಸೂಟು ಬೂಟುಧಾರಿ ವಿಜಯ ಭಾಸ್ಕರ್‌ ಠಾಕುಠೀಕು. ಆತನ ಇರುವಿನಂತೆಯೇ ಸಂಗೀತವೂ ಪಾಶ್ಚಾತ್ಯಮಯ’. ಪಾಶ್ಚಾತ್ಯ ಪಿಟೀಲು ವಾದಕರಿಂದ ಕನ್ನಡ ಚಿತ್ರಕ್ಕೆ ಪಿಟೀಲು ಕುಯ್ಯಿಸಿದ್ದರಿಂದ ವಿಜಯ ಭಾಸ್ಕರ್‌ಗೆ ಸಿಕ್ಕ ಹಣೆಪಟ್ಟಿ ಇದು. ಆದರೆ ಅದರಿಂದ ಕಿಂಚಿತ್ತೂ ವಿಚಲಿತರಾಗದ ವಿಜಯ ಭಾಸ್ಕರ್‌ ಸಂಗೀತ ಸಂಯೋಜನೆಯಲ್ಲಿ ದೇಸೀ ರಾಗಗಳ ಬಳಕೆಗೇ ಒತ್ತು ಕೊಟ್ಟರು. ಇವರ ಸಂಗೀತ ಪ್ರೇಮ ಕೈಲಾಸಂರ ತಿಪ್ಪಾರಳ್ಳಿ ಪ್ರೇಮದಂತೆ. ಆಂಗ್ಲ ತೊಡುಗೆಗೆ ದೇಸೀ ನಡುಗೆಯಂತೆ. ‘ಸಂತ ತುಕಾರಾಂ’ ಹಾಗೂ ‘ನಾಂದಿ’ ಅವರ ಪಾಶ್ಚಾತ್ಯ ಸಂಗೀತಗಾರ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ವೇದಿಕೆಗಳಾದವು. ‘ಜಯತು ಜಯ ವಿಠಲಾ, ನಿನ್ನ ನಾಮವು ಶಾಂತಿ ಧಾಮವು ಸೌಖ್ಯದಾ ರಾಮ...’ ಮನೆಮನೆಯ ರೇಡಿಯೋಗಳಲ್ಲಿ ಅನುರಣಿಸಿತು. ಅದೇ ಸಮಯದಲ್ಲಿ ತೆರೆಕಂಡ ನಾಂದಿ ಚಿತ್ರದ ‘ಹಾಡೊಂದ ಹಾಡುವೆ ನೀ ಕೇಳು ಮಗುವೆ’ ಕೂಸುಗಳಿಗೆ ಲಾಲಿಯಾಯಿತು. ವಿಜಯ ಭಾಸ್ಕರ್‌ ಅಂದಿನ ಮಟ್ಟಿಗೆ ಏಕಮಾವಾದ್ವಿತೀಯ.

ಮೂಡಣ ಮನೆಯ ಮುತ್ತಿನ ನೀರು : ಕಲಿತದ್ದು ಪಾಶ್ಚಾತ್ಯ ಸಂಗೀತವೇ ಆದರೂ ಕನ್ನಡದ ಕವಿಗಳೆಂದರೆ ವಿಜಯ ಭಾಸ್ಕರ್‌ಗೆ ಮೆಚ್ಚು. ಈ ಕಾರಣಕ್ಕೇ ಕವಿ ಹೃದಯ ಸಿನಿಮಾ ಸಹೃದಯರಿಗೆ ಹೃದ್ಯ. ಈ ಕೆಲಸಕ್ಕೆ ಪಿ.ಕಾಳಿಂಗರಾಯರ ಗೆಳೆತನವೂ ಕಾರಣವಿರಬಹುದು. ಮೈಸೂರಿನ ಯಾವುದೋ ಪಾರ್ಕಿನ ಬೆಂಚುಕಲ್ಲಿನ ಮೇಲೆ ಕಾಳಿಂಗರಾಯರು ಹಾಗೂ ವಿಜಯ ಭಾಸ್ಕರ್‌ ಕೂತಿದ್ದರೆಂದರೆ, ಅಲ್ಲಿ ಸಂಗೀತ ಅಥವಾ ಕವಿಗಳ ಬಗೆಗಿನ ಮಾತು ಹೊನಲಾಗುತ್ತಿತ್ತು. ‘ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ ನುಣ್ಣನೆ ಎರಕಾವ ಹೊಯ್ದ’ (ಬೆಳ್ಳಿಮೋಡ ಚಿತ್ರ) ಮೂಲಕ ವರಕವಿ ಬೇಂದ್ರೆ ಜನಮನದಲ್ಲಿ ಚಿರಾಯು.

ಸಂಗೀತದಾಟ- ಆ್ಯಕ್ಸಿಡೆಂಟಲ್ಸ್‌ : ಕನ್ನಡ ಚಿತ್ರಗಳ ಮಟ್ಟಿಗೆ ಮೊದಲ ಸೃಜನಶೀಲ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್‌. ಅದಕ್ಕೆ ಮೊದಲಿದ್ದ ಬಹುತೇಕ ಸಂಯೋಜಕರು ‘ಕಾಪಿ’ಗಳು. ಈ ಬಗ್ಗೆ ಕಾಳಿಂಗರಾಯರಿಗೂ ವಿಷಾದವಿತ್ತು. ದೇಸೀ ರಾಗಗಳಲ್ಲಿ ಕ್ವಚಿತ್‌ ಆಟ ಆಡುವುದು ವಿಜಯ ಭಾಸ್ಕರರ ಅನನ್ಯತೆ. ರಾಗಗಳಿಗೆ ಚ್ಯುತಿ ಬಾರದಂತೆ, ಕೊಂಚ ಬದಲಾವಣೆ ತರುತ್ತಿದ್ದ ಇಂಥಾ ನೋಟ್‌ಗಳನ್ನು ಹಿಂದಿ ಚಿತ್ರಗಳಿಗೂ ಇವರು ಕಾಣಿಕೆಯಾಗಿ ಕೊಟ್ಟಿದ್ದರು. ಒಂದೊಮ್ಮೆ ನೌಶಾದ್‌ ಸಂಗೀತದ ಬಳಗದಲ್ಲಿ ಸಿತಾರ್‌ ನುಡಿಸುವವ ಆ್ಯಬ್ಸೆಂಟ್‌. ಆಗ ಸಿತಾರ್‌ ಎತ್ತಿಕೊಂಡ ವಿಜಯ ಭಾಸ್ಕರ್‌ ಅವರನ್ನು ಕಂಡು ನೌಶಾದ್‌ ದಂಗು. ರಾಗಗಳಲ್ಲಿ ಕ್ವಚಿತ್‌ ಆಟ ಆಡಿರುವುದು ಶುಭಮಂಗಳ ಚಿತ್ರದ ಸ್ನೇಹದ ಕಡಲಲ್ಲಿ ಹಾಡಲ್ಲಿ ವೇದ್ಯ. ಈ ರೀತಿಯ ಆಟದ ನೋಟ್‌ಗಳನ್ನು ಸಂಗೀತದ ಭಾಷೆಯಲ್ಲಿ ಆ್ಯಕ್ಸಿಡೆಂಟಲ್‌ ಎನ್ನುತ್ತಾರೆ.

ಮಲೆಯಾಳಂ ಸಿನಿಮಾದಲ್ಲಿ ಭಾಸ್ಕರ ದ್ವಯರೆಂದರೆ ಫೇಮಸ್ಸು

ಕಮರ್ಷಿಯಲ್‌ ಚಿತ್ರಗಳ ಜೊತೆಗೆ ಕಲಾತ್ಮಕ ಚಿತ್ರಗಳಲ್ಲೂ ವಿಜಯ ಭಾಸ್ಕರ್‌ ಛಾಪು ಉಂಟು. ವಿಜಯ ಭಾಸ್ಕರ್‌, ಪಿ.ಲಂಕೇಶ್‌ ಮೆಚ್ಚಿನ ಸಂಗೀತ ನಿರ್ದೇಶಕ ಕೂಡ. ಈ ಕಾರಣಕ್ಕೇ ಲಂಕೇಶರ ಎಲ್ಲಿಂದಲೋ ಬಂದವರು ಚಿತ್ರದ ಸಂಗೀತ ಹೊಮ್ಮಿಸಿದ್ದು ವಿಜಯ ಭಾಸ್ಕರ್‌. ತಮ್ಮ ಹಿಂದಿ ಚಿತ್ರ ‘ವಿವೇಕಾನಂದ’ಕ್ಕೆ ಜಿ.ವಿ.ಅಯ್ಯರ್‌ ಕರೆದದ್ದು ವಿಜಯ ಭಾಸ್ಕರ್‌ ಅವರನ್ನೇ. ಮಲೆಯಾಳಂ ಸಿನಿಮಾದಲ್ಲಿ ಭಾಸ್ಕರ ದ್ವಯರೆಂದರೆ ಫೇಮಸ್ಸು. ಒಬ್ಬರು ಸಾಹಿತಿ ಪಿ.ಭಾಸ್ಕರ್‌. ಇನ್ನೊಬ್ಬರು ನಮ್ಮ ವಿಜಯ ಭಾಸ್ಕರ್‌. ಅಡೂರ್‌ ಗೋಪಾಲಕೃಷ್ಣನ್‌ ನಿರ್ದೇಶನದ ಮಲೆಯಾಳಂ ಸಿನಿಮಾಗಳ ಅನನ್ಯ ಸಂಗೀತಗಳಲ್ಲಿನ ಅನೇಕ ಸಂಯೋಜನೆಗಳು ವಿಜಯ ಭಾಸ್ಕರ್‌ ಹೊಸೆದವು.

ಸಂಗೀತ ಸಹಜವಾಗಿರಬೇಕು. ಪುಸ್ತಕದಿಂದ ಕಲಿತು ಸಂಗೀತ ಸಂಯೋಜನೆ ಖಂಡಿತ ಸಾಧ್ಯವಿಲ್ಲ ಎಂದು ನಂಬಿದ್ದ ವಿಜಯ ಭಾಸ್ಕರ್‌, ರಾಗಗಳಿಗೆ ಕುಂದು ತರುವ ಹುಚ್ಚಾಟಕ್ಕೆ ಹೋಗುತ್ತಿರಲಿಲ್ಲ. ಇಂಗ್ಲಿಷ್‌ ಸಾಹಿತ್ಯವೂ ಇವರಿಗೆ ಬೇಕಿರಲಿಲ್ಲ. ತೊಂಬತ್ತರ ದಶಕದ ನಂತರ ಕನ್ನಡ ಹಾಡುಗಳ ಮನಾಂತರ್ಗತ ಶಕ್ತಿ ಕಡಿಮೆಯಾಗಲು ಸಾಹಿತ್ಯದ ಕಲಬೆರಕೆಯೇ ಕಾರಣ ಅನ್ನುವುದು ಭಾಸ್ಕರ್‌ ವಾದ. ಗಾಯಕ/ಗಾಯಕಿಯರ ಮಿತಿಗಳು ಇವರಿಗೆ ಅಂಗೈನೆಲ್ಲಿ. ಪಿ.ಸುಶೀಲಾ ಮೆಚ್ಚು. ವಾಣಿ ಜಯರಾಂ ಕಂಡರೂ ಇಷ್ಟ. ಈ ಹಾಡನ್ನು ಎಸ್‌.ಜಾನಕಿ ಹಾಡಿದರೇ ಚೆನ್ನ ಅಂದದ್ದೂ ಉಂಟು. ‘ಪಿ.ಬಿ.ಶ್ರೀನಿವಾಸ್‌ ಮೀಡಿಯಮ್‌ ರೇಂಜಿನ ಗಾಯಕ. ಅವರಲ್ಲಿ ಸಂಗೀತ ಸಂಯೋಜನೆಯನ್ನು ಮನನ ಮಾಡಿಕೊಂಡು ಜೀವತುಂಬುವ ಶಕ್ತಿಯಿತ್ತು. ಅದರ ಮಿತಿಯ ಅರಿವು ನಮಗಿತ್ತು. ಘಂಟಸಾಲ ಸ್ಥಾಯಿ ಸೂಪರ್ಬ್‌...’ ಹೀಗೆ ವಿಜಯ ಭಾಸ್ಕರ್‌ ಮಾತು ನೇರ. ಗೆಳೆಯ ಜಿ.ಕೆ.ವೆಂಕಟೇಶ್‌ ಕೆಲಸವನ್ನು ಮೆಚ್ಚಿದವರೂ ಇವರೇ, ತಪ್ಪು ಮಾಡಿದಾಗ ಮಾತಿನಲ್ಲೇ ಛೇಡಿಸಿದ್ದೂ ಇವರೇ.

ಪುಟ್ಟಣ್ಣ ಫೇವರೇಟ್‌ : ಪರ್ಫೆಕ್ಷನಿಸ್ಟ್‌ ಎಂದೇ ಹೆಸರಾಗಿದ್ದ ಪುಟ್ಟಣ್ಣ ಕಣಗಾಲ್‌ ರಂಗನಾಯಕಿ ಚಿತ್ರದ ಸಂಗೀತ ನಿರ್ದೇಶನವನ್ನು ಎಂ.ರಂಗರಾವ್‌ಗೆ ವಹಿಸಿದರು. ಕಣಗಾಲ್‌ ಸಿನಿಮಾಗಳಿಂದ ಭಾಸ್ಕರ್‌ಗೆ ಕೊಕ್‌ ಅಂತ ಸ್ಯಾಂಡಲ್‌ವುಡ್‌ ಮಾತಾಡಿತು. ಆದರೆ ಪುಟ್ಟಣ್ಣ ಕಣಗಾಲ್‌ ಮೆಚ್ಚು ವಿಜಯ ಭಾಸ್ಕರ್‌ ಅವರೇ ಅನ್ನುವುದು, ಮಾನಸ ಸರೋವರ ಸಿನಿಮಾಗೆ ಮತ್ತೆ ವಿಜಯ ಭಾಸ್ಕರ್‌ಗೇ ಪುಟ್ಟಣ್ಣ ಬುಲಾವು ಕೊಟ್ಟಾಗ ಗೊತ್ತಾಯಿತು. ನಾಗರಹಾವು, ಶರಪಂಜರ, ಮಾನಸ ಸರೋವರ ಚಿತ್ರಗೀತೆಗಳ ಸೊಗಸ ಮೆಚ್ಚದವರಾರು? ‘ಹಾವಿನ ದ್ವೇಷ ಹನ್ನೆರಡು ವರುಷ..’ ಇವತ್ತೂ ಎದೆ ತುಂಬಿ ಹಾಡುವ ಎಸ್ಪಿ ಬಾಲು ಅವರ ಮೆಚ್ಚು. ‘ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು..., ಹಾಡು ಹಳೆಯದಾದರೇನು ಭಾವ ನವನವೀನ..’ ಶಿವರುದ್ರಪ್ಪನವರ ಈ ಕವನಗಳ ಇವತ್ತೂ ರೇಡಿಯೋದಲ್ಲಿ ಅಭಿಮಾನಿಗಳು ಪದೇ ಪದೇ ಕೇಳುವುದು ಯಾಕೆ? ಉತ್ತರ- ವಿಜಯ ಭಾಸ್ಕರ್‌.

ಎರಡು ಬಾರಿ ಸುರ್‌ ಸಾಗರ್‌ ಪ್ರಶಸ್ತಿ, 8 ರಾಜ್ಯ ಪ್ರಶಸ್ತಿಗಳು, ಕಳೆದ ವರ್ಷ ಡಾ.ರಾಜ್‌ಕುಮಾರ್‌ ಪ್ರಶಸ್ತಿ...ಏನೆಲ್ಲಾ ಸಂದರೂ ವಿಜಯ ಪತಾಕೆ ಹಾರುತ್ತಲೇ ಇತ್ತು. ಹೃದಯ ಬೇನೆ ಇರುಸು ಮುರುಸು ಮಾಡಿದರೂ, ಸಂಗೀತ ಉಸಿರಾಡುತ್ತಲೇ ಇತ್ತು. ನೀಲಾ ಚಿತ್ರದಲ್ಲಿ ವಸುಂಧರಾ ದಾಸ್‌ (ನೀಲಾ) ಗೂ ಹಾಗಲ್ಲಮ್ಮಾ ಹೀಗೆ.. ಅಂತ ಹೇಳಿಕೊಟ್ಟರು. ತ್ರಿವೇಣಿಯವರ ‘ಪೂರ್ವಾಪರ’ಕ್ಕೆ ಎಡಕಲ್ಲು ಗುಡ್ಡದ ಮೇಲೆ ಫೇಮ್‌ನ ಚಂದ್ರು ಸಂಗೀತ ಕೊಡಿ ಅಂತ ಕೇಳಿದರು. ಅದಕ್ಕೂ ಸೈ ಎಂದರು ಭಾಸ್ಕರ್‌. 300ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಸಂಗೀತ. ತಮಿಳು, ಮಲೆಯಾಳಂ, ಕೊಂಕಣಿ, ತುಳು, ಮರಾಠಿ ಚಿತ್ರಗಳಿಗೂ ಸಂಗೀತ. ಒಟ್ಟು 500ಕ್ಕೂ ಹೆಚ್ಚು ಗೀತೆಗಳಿಗೆ ವಿಜಯ ರಾಗ.

ಎಲ್ಲೆಲ್ಲು ಸಂಗೀತವೇ ಎಲ್ಲೆಲ್ಲು ಸೌಂದರ್ಯವೆ (ಮಲಯ ಮಾರುತ) ಹಾಡಿದೆ. ಹಾಡೊಂದ ಹಾಡುವೆ.. ಜೋಗುಳ ಇದೆ. ನೀನೇ ಸಾಕಿದ ಗಿಳಿ... ಸ್ಯಾಡ್‌ ಸಾಂಗಿದೆ. ಬಾರೆ ಬಾರೆ ಚೆಂದದ ಚೆಲುವಿನ ತಾರೆ... ಪ್ರೇಮಗೀತೆಯಿದೆ. ಮೂಡಲ ಮನೆಯಾ.. ಪ್ರಕೃತಿ ಗೀತೆಯಿದೆ. ಕನ್ನಡ ನಾಡಿನ ವೀರರಮಣಿಯ...ಓಬವ್ವನ ಗೀತೆಯಿದೆ. ಹೆಜ್ಜೆ ಹೆಜ್ಜೆ ಮಾತಾಡು... ಗೆಜ್ಜೆ ತಾಳ ಇದೆ. ಇಷ್ಟೆಲ್ಲಾ ಇರುವಾಗ ವಿಜಯ ಭಾಸ್ಕರ್‌ ಇನ್ನಿಲ್ಲ ಎನ್ನುವುದು ಹೇಗೆ!

Have you heard Vijay Bhaskars compositions?

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more