ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು..

By Staff
|
Google Oneindia Kannada News

*ವಿಶಾಖ ಎನ್‌.

1980ರ ದಶಕದ ಆದಿಯಲ್ಲಿ ಸುಗಮ ಸಂಗೀತ ಕ್ಷೇತ್ರ ಗರಿ ಗೆದರಿತು. ಪಿ.ಕಾಳಿಂಗ ರಾವ್‌ ಗೀತೆಗಳ ನಂತರ ಬಿಕೋ ಎನ್ನುತ್ತಿದ್ದ ಲೈಟ್‌ ಮ್ಯೂಸಿಕ್‌ ಸೀರಿಯಸ್‌ ಆದದ್ದು ನಿಸಾರ್‌ ಅಹಮದರ ನಿತ್ಯೋತ್ಸವ ಕೆಸೆಟ್ಟು ಹೊರ ಬಂದ ನಂತರ. ಮೈಸೂರು ಮಲ್ಲಿಗೆ, ಭಾವ ಸಂಗಮ, ನಾಕುತಂತಿ, ಇಂಚರ, ದೀಪಿಕಾ ಹೀಗೆ ಒಂದೊಂದಾಗಿ ಭಾವ ಗೀತೆಗಳ ಕೆಸೆಟ್ಟುಗಳು ಮಾರುಕಟ್ಟೆಗೆ ಬಂದವು. ಅವಕ್ಕೆ ಸಾಕಷ್ಟು ಬೇಡಿಕೆಯೂ ಇತ್ತು. ಮೈಸೂರು ಅನಂತ ಸ್ವಾಮಿ, ಸಿ.ಅಶ್ವಥ್‌ ಅಂಥವರು ಮನೆ ಮಾತಾಗಿದ್ದು , ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟರು ಕೆಸೆಟ್ಟಿಗಾಗಿ ಕವಿತೆ ಬರೆಯಲು ಪ್ರಾರಂಭಿಸಿದ್ದೂ ಆಗಲೇ.

ಸಂಗೀತ ಕ್ಷೇತ್ರದಲ್ಲಿ ಒಳ್ಳೆ ಅವಕಾಶ ಹುಡುಕಿಕೊಂಡು ಅದೇ ಸಮಯಕ್ಕೆ ಮೈಸೂರಿನಿಂದ ಬೆಂಗಳೂರಿಗೆ ಇಬ್ಬರು ಸಹೋದರರು ಬಂದರು. ಒಬ್ಬ ಮ್ಯಾಂಡೋಲಿನ್‌ ವಾದಕ ಎನ್‌.ಎಸ್‌.ಪ್ರಸಾದ್‌. ಮತ್ತೊಬ್ಬ ಕೊಳಲು ವಾದಕ ಎನ್‌.ಎಸ್‌.ಮುರಳೀಧರ್‌.

ಮುರಳೀಧರ್‌ ಒಬ್ಬ ಒಳ್ಳೆ ಕೊಳಲು ವಾದಕ ಎಂದು ಗುರ್ತಿಸಿಕೊಂಡಿದ್ದವರು. ಅವಕಾಶ ಅರಸಿ ಬಂದ ಈತನ ಅದೃಷ್ಟವೋ ಏನೋ, ಅದೇ ವೇಳೆಗೆ ಬೆಂಗಳೂರಲ್ಲಿ ಹಲವು ರೆಕಾರ್ಡಿಂಗ್‌ ಸ್ಟುಡಿಯೋಗಳು ತಲೆಯೆತ್ತುತ್ತಿದ್ದವು. ಜೊತೆಗೆ ಕೆಸೆಟ್‌ ಲೋಕದಲ್ಲಿ 'ನಿತ್ಯೋತ್ಸವ" ಜೀವ ಸಂಚಲನೆ ತಂದಿತ್ತು. ಮೈಸೂರು ಅನಂತರ ಸ್ವಾಮಿ, ಸಿ.ಅಶ್ವಥ್‌ ಇನ್ನಷ್ಟು ಭಾವಗೀತೆಗಳನ್ನು ಕೆಸೆಟ್ಟಿಗೆ ತುಂಬುವ ಕೆಲಸದಲ್ಲಿ ತೊಡಗಿಕೊಂಡಿದ್ದರು. ಆದರೆ, ಪಕ್ಕ ವಾದ್ಯಕ್ಕೆ ಕೊಳಲು ವಾದಕರ ಕೊರೆಯಿತ್ತು. ಅದನ್ನು ಯಶಸ್ವಿಯಾಗಿ ತುಂಬಿದವರು ಎನ್‌.ಎಸ್‌.ಮುರಳೀಧರ್‌ ಉರುಫ್‌ ಮುರಳಿ.

ಎಲ್ಲೆಲ್ಲೂ ಮೋಹಕ ಮುರಳಿ : ಕಛೇರಿಗಳಿಗಲ್ಲದೆ ರೆಕಾರ್ಡಿಂಗ್‌ ಸೆಷನ್‌ಗಳಿಗೆ ಕೊಳಲು ನುಡಿಸುವ ಏಕೈಕ ಎಂಬ ಪಟ್ಟವನ್ನು ಆಗ ಗಿಟ್ಟಿಸಿದವರು ಮುರಳಿ. ಇವರ ಏಕಸ್ವಾಮ್ಯ ದೀರ್ಘ ಕಾಲ ಮುಂದುವರೆಯಿತು. ಅನಂತ ಸ್ವಾಮಿ, ಅಶ್ವಥ್‌, ರತ್ನಮಾಲ ಪ್ರಕಾಶ್‌, ಬಿ.ಕೆ.ಸುಮಿತ್ರ, ಕಸ್ತೂರಿ ಶಂಕರ್‌, ಪುತ್ತೂರು ನರಸಿಂಹ ನಾಯಕ್‌, ಜಿ.ವಿ.ಅತ್ರಿ ಮೊದಲಾದವರಿಂದ ಹಿಡಿದು ಐಎಎಸ್‌ ಅಧಿಕಾರಿ ವೈ.ಕೆ.ಮುದ್ದುಕೃಷ್ಣನವರಂಥ ಗಾಯಕರಿಗೂ ಕೊಳಲ ಸಾಥಿ ಮುರಳಿ. ಪರಿಣಾಮ ಹತ್ತು ಹದಿನೈದು ವರ್ಷಗಳಲ್ಲಿ 2000ಕ್ಕೂ ಹೆಚ್ಚು ಹಾಡುಗಳಿಗೆ ಕೊಳಲು ನುಡಿಸಿದ ಹೆಮ್ಮೆ ಮುರಳಿ ಅವರದ್ದು. 25 ಕೆಸೆಟ್ಟುಗಳಿಗೆ ಸಂಗೀತವನ್ನೂ ಸಂಯೋಜಿಸಿದರು.

ಹೊಸ ನೀರು : ಮುರಳಿ ಏಕಸ್ವಾಮ್ಯ ಮುರಿದದ್ದು ಒರಿಸ್ಸಾದಿಂದ ಬೆಂಗಳೂರಿಗೆ ಬಂದ ಪಟ್ನಾಯಕ್‌ ಎಂಬ ಕೊಳಲು ವಾದಕ. ಬುಟ್ಟೋ ಎಂದು ಹೆಸರು ಬದಲಿಸಿಕೊಂಡ ಪಟ್ನಾಯಕ್‌ ಕೂಡ ಪ್ರತಿಭಾವಂತ. ಈತ ಇಲ್ಲಿಗೆ ಕಾಲಿಟ್ಟಾಗ ಭಾವಗೀತೆಗಳ ಕೆಸೆಟ್ಟುಗಳ ಅಬ್ಬರ ಸಾಕಷ್ಟು ಕಡಿಮೆಯಾಗಿತ್ತು. ಕಛೇರಿಗಳ ಮೂಲಕ ಬುಟ್ಟೋ ಹೀರೋ ಆದರು. 90ರ ದಶಕದಲ್ಲಿ ಕೆ.ಎಸ್‌.ರಾಮನ್‌, ರಾಜೇಶ್‌ ಮತ್ತು ಪ್ರವೀಣ್‌ ಗೋಡ್ಖಿಂಡಿ ಸೆಷನ್‌ಗಳಿಗೆ ಕೊಳಲು ನುಡಿಸಲು ಪ್ರಾರಂಭಿಸಿದರು. ಹೀಗಾಗಿ ಮುರಳಿಗೆ ಸಾಕಷ್ಟು ಕಾಂಪಿಟಿಟರ್‌ಗಳು ಹುಟ್ಟಿಕೊಂಡಂತಾಯಿತು.

ಸುಗಮ ಸಂಗೀತದಲ್ಲೇ ಸಾಕಷ್ಟು ಹೆಸರು ಮಾಡಿ, ಕರ್ನಾಟಕ ನಾಟಕ ಸಂಗೀತ ಅಕಾಡೆಮಿಯ ಕಲಾಶ್ರೀ ಗೌರವವನ್ನೂ ಗಿಟ್ಟಿಸಿಕೊಂಡಿದ್ದ ಮುರಳಿ ಫ್ಯೂಷನ್‌ ಸಂಗೀತದ ಪ್ರಯೋಗಗಳನ್ನೇನೂ ಗಂಭೀರವಾಗಿ ಮಾಡಿರಲಿಲ್ಲ. ಪ್ರವೀಣ್‌ ಗೋಡ್ಖಿಂಡಿಯಂಥ ಯುವ ಪ್ರತಿಭೆಗಳು ಚಿಕ್ಕ ತಂಡಗಳನ್ನು ಕಟ್ಟಿಕೊಂಡು ಅಂಥಾ ಪ್ರಯತ್ನಕ್ಕೂ ಕೈ ಹಾಕಿದರು. ಬರಬರುತ್ತಾ ಮುರಳಿ ಮಸುಕಾದರು.

ಪಿ.ಕಾಳಿಂಗರಾಯರು ಕುಡಿದು ಹಾಳಾದರು ಅನ್ನುವ ಮಾತನ್ನು ಅವರ ಆಪ್ತರು ಇಂದಿಗೂ ಹೇಳುತ್ತಾರೆ. ಅದೇ ರೀತಿ ಮುರಳಿ ಹತ್ತಿರದವರು ಹೇಳುವುದು- ಆತ ಕಂಠಪೂರ್ತಿ ಕುಡಿಯುತ್ತಿದ್ದ. ಸಾಲದ್ದಕ್ಕೆ ಗುಟ್ಕಾ ದಾಸನಾಗಿದ್ದ. ಸಾವನ್ನು ತಾನೇ ತಂದುಕೊಂಡ. ಅದೂ 47 ರ ವಯಸ್ಸಿನಲ್ಲಿ .

ಇನ್ನು ಮುಂದೆ, ಮೋಹನ ಮುರಳಿ ನಾದ ಕೇಳಿ ಬರುವುದಿಲ್ಲ ; ಕೇಳಿಸುತ್ತಿರುವುದು ಅವರ ಹತ್ತು ವರ್ಷ ವಯಸ್ಸಿನ ಮಗನ ರೋದನ!

ಮುರಳೀಧರ್‌ ಕೊಳಲ ದನಿಯನ್ನು ನೀವು ಕೇಳಿದ್ದೀರಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X