ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಚನದಲ್ಲಿ ನಾದಾಮೃತ ತುಂಬಿ

By Staff
|
Google Oneindia Kannada News

* ಸತ್ಯನಾರಾಯಣ

ಸಿ. ಅಶ್ವತ್ಥ್‌ ಸದಾ ಅತೃಪ್ತರು, ಆ ಕಾರಣಕ್ಕೇ ಸೃಜನಶೀಲರು ಮತ್ತು ಕ್ರಿಯಾ ಶೀಲರು. ಕಾಲಿಗೆ ಇರುವೆ ಕಚ್ಚಿದಂತೆ ಓಡಾಡುತ್ತಲೇ ಇರುತ್ತಾರೆ. ಕೆಲವು ತಿಂಗಳ ಹಿಂದಷ್ಟೇ ಕುವೆಂಪು ಕವನಗಳಿಗೆ ರಾಗ ಹಾಕಿ, ಸಾವಿರ ಮಕ್ಕಳಿಂದ ನ್ಯಾಷನಲ್‌ ಕಾಲೇಜಿನ ಮೈದಾನದಲ್ಲಿ ಹಾಡಿಸಿದ ಅಶ್ವತ್ಥ್‌ ಕಣ್ಣಿಗೆ ಈ ಬಾರಿ ಬಲಿಯಾಗಿರುವುದು ಬಸವಣ್ಣನ ವಚನಗಳು.

ಬಸವಣ್ಣ ತನ್ನ ವಚನಗಳಲ್ಲಿ ನಾಮಾಮೃತ ತುಂಬಿದರೆ, ಅದಕ್ಕೆ ನಾದಾಮೃತ ತುಂಬುವ ಕೆಲಸವನ್ನು ಅಶ್ವತ್ಥ್‌ ಮಾಡಿದ್ದಾರೆ. ಈ ಹಿಂದೆ ಬಸವಣ್ಣನ ವಚನಗಳು ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತದ ಉಡುಗೆ ತೊಟ್ಟು ಕ್ಯಾಸೆಟ್‌ ರೂಪದಲ್ಲಿ ಬಂದಿವೆ. ಆದರೆ ಅದಕ್ಕೆ ಜನಪದ ರಾಗ ಹಾಕುವ ಪ್ರಯತ್ನ ಮಾಡಿರುವುದು ಅಶ್ವತ್ಥ್‌ ಹೆಗ್ಗಳಿಕೆ. ಈ ಮೂಲಕ ಮಾತಿನ ರೂಪದಲ್ಲಿ ಜನರನ್ನು ತಲುಪಿದ್ದ ವಚನಗಳು ಹಾಡಾಗಿ ಅವರ ಹೃದಯ ಮುಟ್ಟಲಿವೆ ಎಂಬ ನಿರೀಕ್ಷೆ ಅವರದು.

ಶರಣವಾಹಿನಿ ಎಂಬ ಹೆಸರಿನಲ್ಲಿ ಕ್ಯಾಸೆಟ್‌ ಆಗಲಿರುವ ಬಸವಣ್ಣನ ವಚನಗಳನ್ನು ಇದೇ ನವೆಂಬರ್‌ ಅಂತ್ಯದಲ್ಲಿ ಎಂದಿನಂತೆ ನೂರಾರು ಎಳೆಯರು ನ್ಯಾಷನಲ್‌ ಕಾಲೇಜ್‌ ಮೈದಾನದಲ್ಲಿ ಹಾಡಲಿದ್ದಾರೆ. ಒಂದು ಹಾಡಿನಲ್ಲಿ ನಾಲ್ಕು ವಚನಗಳು, ಹೀಗೆ ಒಟ್ಟು ಹತ್ತು ಹಾಡುಗಳು ಕ್ಯಾಸೆಟ್‌ನಲ್ಲಿ ಅಡಕವಾಗಲಿದ್ದು, 40 ವಚನಗಳನ್ನು ನೀವು ಇದರಲ್ಲಿ ಕೇಳಬಹುದು. ಹಾಡುಗಳ ರೆಕಾರ್ಡಿಂಗ್‌ ಇದೇ 26, 27ರಂದು ನಡೆಯಲಿದೆ.

ಬಸವಣ್ಣನ ವಚನಗಳನ್ನು ಹಾಡಿಗೆ ಅಳವಡಿಸುವುದು ಸುಲಭದ ಕೆಲಸವೇನಲ್ಲ ಅನ್ನುತ್ತಾರೆ ಅಶ್ವತ್ಥ್‌. ಯಾಕೆಂದರೆ ತಾಳಕ್ಕೆ ಒಗ್ಗುವ ವಚನಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಶ್ವತ್ಥ್‌ಗೆ ನೆರವಾಗಿದ್ದಾರೆ ಕವಿ ಎಚ್‌. ಎಸ್‌. ವೆಂಕಟೇಶ್‌ ಮೂರ್ತಿ. ವಾದ್ಯ ಸಂಯೋಜನೆ ಒದಗಿಸಿದ್ದಾರೆ ಪ್ರವೀಣ್‌ ಡಿ. ರಾವ್‌. ಹಿಮ್ಮೇಳದಲ್ಲಿ ಬಾಲಿ ಸಹಕಾರವಿದೆ.

ತಮ್ಮೆಲ್ಲಾ ಪ್ರಯತ್ನಗಳಿಗೆ ಪ್ರಾಯೋಜಕರನ್ನು ಹಿಡಿಯುವಲ್ಲಿ ಅಶ್ವತ್ಥ್‌ ಅವರನ್ನು ಮೀರಿಸಿದವರಿಲ್ಲ. ಈ ಬಾರಿ ಕೊಳದ ಮಠದ ಶಾಂತವೀರ ಸ್ವಾಮಿ ಅಶ್ವತ್ಥ್‌ ಪ್ರಯತ್ನಕ್ಕೆ ಹಣ ಸುರಿದಿದ್ದಾರೆ. ಈ ವ್ಯಾಪಾರ ಕುದುರಿಸಿದವರು ಈಗ ನಾನಾ ಕಾರಣಕ್ಕೆ ಸುದ್ದಿಯಲ್ಲಿರುವ ಆದರ್ಶ ಸುಗಮ ಸಂಗೀತ ಅಕಾಡೆಮಿಯ ಸ್ಥಾಪಕ ಕಿಕ್ಕೇರಿ ಕೃಷ್ಣ ಮೂರ್ತಿ. ಹಾಡಿನ ಧ್ವನಿ ಮುದ್ರಣಕ್ಕೇ ಮೂರು ಲಕ್ಷ ಖರ್ಚಾಗುತ್ತದೆ, ಜೊತೆಗೆ ನ್ಯಾಷನಲ್‌ ಕಾಲೇಜಿನಲ್ಲಿ ನಡೆಯಲಿರುವ ಲೈವ್‌ ಶೋದ ಹಾಡುಗಾರರಿಗೆ ಬಿ. ಜಯಶ್ರೀ ಅವರಿಂದ ವಿಶಿಷ್ಟ ರೀತಿಯ ವಸ್ತ್ರವಿನ್ಯಾಸವಿರುತ್ತದೆ. ಇದಕ್ಕೆ ಮುಂಚೆ ಅಶ್ವತ್ಥ್‌ ಕರ್ನಾಟಕ ಪ್ರವಾಸ ಮಾಡಿ ಹಾಡುಗಾರರ ಆಯ್ಕೆ ಮಾಡಲಿದ್ದಾರೆ.

ಶರಣವಾಹಿನಿಯಲ್ಲಿರುವ ವಚನಗಳಿಗೆ ರಾಗ ಹಾಕುವ ಸಂದರ್ಭದಲ್ಲಿ ಅಶ್ವತ್ಥ್‌ ಸಾಕಷ್ಟು ಸ್ವಾತಂತ್ರವನ್ನು ತೆಗೆದುಕೊಂಡಿದ್ದಾರೆ. ಅರಬ್ಬಿ, ಬಂಗಾಲಿ, ಅಸ್ಸಾಮಿ, ರಾಜಸ್ತಾನಿ ಮತ್ತು ಕರ್ನಾಟಕ ಜನಪದ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಎಲ್ಲೋ ಕೇಳಿದ ರಾಗಗಳಿವು ಎಂದೆನಿಸಿದರೂ ಜನಪ್ರಿಯವಾಗುವ ಎಲ್ಲಾ ಅಂಶಗಳೂ ಇಲ್ಲಿವೆ.

ಅಷ್ಟಕ್ಕೂ ಅಶ್ವತ್ಥ್‌ ಈ ಬಾರಿ ಕೈ ಇಟ್ಟಿರುವುದು ಬಸವಣ್ಣನ ಕೃತಿಗಳ ಮೇಲೆ. ಹಾಗಾಗಿ ಅದು ಸ್ವದೇಶ ಮತ್ತು ವಿದೇಶಗಳಲ್ಲಿ ಹಿಟ್‌ ಆಗುವುದಂತೂ ಖಚಿತ. ಅವರನ್ನು ಕಾಪಾಡುವುದಕ್ಕೆ ಕೂಡಲ ಸಂಗಮದೇವನಿದ್ದಾನೆ ಮತ್ತು ಶರಣರಿದ್ದಾರೆ. ಕೊಳದ ಮಠದ ಸ್ವಾಮಿಗಳಂತೂ ಇದ್ದೇ ಇದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X