• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರವಿ ಬೆಳಗೆರೆ ಹೊಸ ಪುಸ್ತಕ 'ಇಡ್ಲಿ ವಡ ಡೆಡ್ಲಿ ಮರ್ಡರ್' ಒಂದು ಅಧ್ಯಾಯ

By ರವಿ ಬೆಳಗೆರೆ
|

ಲೇಖಕ- ಹಿರಿಯ ಪತ್ರಕರ್ತ ಅವರ ಹೊಸ ಪುಸ್ತಕ 'ಇಡ್ಲಿ ವಡ ಡೆಡ್ಲಿ ಮರ್ಡರ್' ಪುಸ್ತಕ ಭಾನುವಾರ (ಏಪ್ರಿಲ್ ಇಪ್ಪತ್ತೆಂಟನೇ ತಾರೀಕು) ಸಂಜೆ ಐದು ಗಂಟೆಗೆ ಬಿಡುಗಡೆ ಆಗುತ್ತಿದೆ. ಭಾವನಾ ಪ್ರಕಾಶನದ ಪುಸ್ತಕ ಇದು. ಶರವಣ ಭವನ ಹೋಟೆಲ್ ಗಳ ಸಮೂಹದ ಮಾಲೀಕ ರಾಜಗೋಪಾಲ್ ಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಆಗಿದ್ದು, ಆ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಕಾಯಂ ಮಾಡಿದೆ.

ಅಪಾರ ಶ್ರೀಮಂತಿಕೆ, ಯಶಸ್ಸು, ಕೀರ್ತಿ, ಇಬ್ಬರು ಹೆಂಡತಿಯರು ಇದ್ದ ರಾಜಗೋಪಾಲ್ ಗೆ ಶರಣಾಗಲು ಇದೇ ವರ್ಷದ ಜುಲೈ ಒಂಬತ್ತನೇ ತಾರೀಕಿನ ತನಕ ಸಮಯಾವಕಾಶ ಇದೆ. ಅಂದಹಾಗೆ ಈ ಕೊಲೆ ಮಾಡಿಸಿದ್ದು ಒಂದು ಹೆಣ್ಣಿನ ಸಲುವಾಗಿ. ತಮಿಳುನಾಡಿನಲ್ಲಿ ನಡೆದ ಈ ಪ್ರಕರಣ ಇಡೀ ದೇಶದಲ್ಲಿ ಸುದ್ದಿ ಆಗಿತ್ತು.

ಶರವಣ ಭವನ್ ಹೋಟೆಲ್ ಮಾಲೀಕರಿಗೆ ಜೀವಾವಧಿ ಶಿಕ್ಷೆ ಕಾಯಂ

ಆ ಕೊಲೆ ಪ್ರಕರಣದ ರೋಚಕ ಸಂಗತಿಗಳನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ. ಪುಸ್ತಕ ಬಿಡುಗಡೆಗೆ ಇನ್ನೇನು ಕೆಲ ಗಂಟೆಗಳು ಇರುವಂತೆಯೇ 'ಇಡ್ಲ ವಡ ಡೆಡ್ಲಿ ಮರ್ಡರ್' ಪುಸ್ತಕದ ಒಂದು ಭಾಗವನ್ನು ಒನ್ ಇಂಡಿಯಾ ಕನ್ನಡದ ಓದುಗರಿಗಾಗಿ ಪ್ರಕಟಿಸಲು ರವಿ ಬೆಳಗೆರೆ ಅವರು ಒಪ್ಪಿಗೆ ನೀಡಿದ್ದಾರೆ. ಆ ಭಾಗವನ್ನು ಇಲ್ಲಿ ಕೊಡಲಾಗಿದೆ -ಸಂಪಾದಕ.

 ರಾಜಗೋಪಾಲ್ ಆ ಹೊತ್ತಿಗೆ 'ಶರವಣ ಭವನ'ದ ಸರಮಾಲೆಯನ್ನೇ ಸೃಷ್ಟಿಸಿದ್ದ

ರಾಜಗೋಪಾಲ್ ಆ ಹೊತ್ತಿಗೆ 'ಶರವಣ ಭವನ'ದ ಸರಮಾಲೆಯನ್ನೇ ಸೃಷ್ಟಿಸಿದ್ದ

ಕೃತಿಕಾ ಎರಡನೇ ಪತ್ನಿಯಾದ ಬಳಿಕ ಪಂಡಿಚ್ಚಿ ಹೇಳಿದ ಮಾತು ಸತ್ಯವಾಯಿತಾ ಗೊತ್ತಿಲ್ಲ. ಅವಳಿಗೆಂದೇ ಬೇರೆ ಮನೆ ಮಾಡಿ ಇರಿಸಿದ. ಎರಡು ಚಿಕ್ಕಮಕ್ಕಳನ್ನು ಕಟ್ಟಿಕೊಂಡು ಗಂಡನ ಬಡತನದಿಂದ ಬಿಎಂಡಬ್ಲ್ಯೂ ಕಾರಿನ ತನಕ ಎಲ್ಲವನ್ನೂ ನೋಡಿದ, ಮೊದಲ ಪತ್ನಿ ವಳ್ಳಿಯಮ್ಮೈ ಈ ಎರಡನೇ ಮದುವೆಯನ್ನೂ ನೋಡಿದಳು: ಬಾಯಿ ತೆರೆಯದೆ.

ತಮಿಳುನಾಡಿನಲ್ಲೇಕೆ, ಇಡೀ ದಕ್ಷಿಣ ಭಾರತದಲ್ಲೇ ಬಹುಪತ್ನಿತ್ವವಿದೆ. ಗಂಡ ಇನ್ನೊಂದು ಮದುವೆ ಮಾಡಿಕೊಂಡ ಎಂಬುದು ಅಸಲು ಸುದ್ದಿಯೇ ಇಲ್ಲ. ಅವನಿಗೆ ನನ್ನಿಂದ ಏನೋ ಕೊರತೆಯಾಯಿತು: ಅದಕ್ಕಾಗಿ ಇನ್ನೊಂದು ಮದುಯಾಗಿರಬೇಕು ಎಂಬ ಭಾವನೆ ಇರುವುದಿಲ್ಲ. It is just natural. ಒಂದು, ಎರಡು, ಮೂರು ಮದುವೆಗಳಾಗುತ್ತಲೇ ಇರುತ್ತವೆ. ಅಲ್ಲದೆ ಕೃತ್ತಿಕಾಳನ್ನು ತಂದು ಮನೆ ಮಾಡಿಟ್ಟುಕೊಂಡ ರಾಜಗೋಪಾಲ್ ಆ ಹೊತ್ತಿಗೆ 'ಶರವಣ ಭವನ'ದ ಸರಮಾಲೆಯನ್ನೇ ಸೃಷ್ಟಿಸಿದ್ದ. ಯಾವುದಕ್ಕೂ ಕಡಿಮೆ ಇರಲಿಲ್ಲ. ವಳ್ಳಿಯಮ್ಮೈಯನ್ನೂ ಅವಳ ಮಕ್ಕಳನ್ನೂ ಅವನು ನಿಕೃಷ್ಟ ಮಾಡಲಿಲ್ಲ. ಅವರಿಗೆ ತಕ್ಕ ಶ್ರೀಮಂತಿಕೆ, ಮನೆ, ಕಾರು, ಒಡವೆ, ಅನುಕೂಲ ಎಲ್ಲವೂ ಇದ್ದವು.

ಕೃತಿಕಾ ಮೊದಮೊದಲು ಒಲ್ಲೆ ಅಂದಳು. ಆದರೆ ನಲವತ್ತರ ಅಂಚಿನಲ್ಲಿದ್ದ ರಾಜಗೋಪಾಲನಲ್ಲಿ ಎಂಥ ಕಸುವಿತ್ತೆಂದರೆ, ಬೆಳಕು ಹರಿಯುವುದರೊಳಗಾಗಿ ಅವಳಿಗೆ ಗಂಡನೆಂದರೆ ಇವನೇ ಅನ್ನಿಸಿತ್ತು. ಅವಳಿಗೆ ಇರಲು ಬಂಗಲೆ ಕಟ್ಟಿಸಿದ. ಆಳುಕಾಳುಗಳನ್ನಿಟ್ಟ. ಓಡಾಡಲು ಕಾರು ಕೊಟ್ಟ. ಕೃತಿಕಾ ಅದಿಷ್ಟೂ ಐಶ್ವರ್ಯದ ಮಧ್ಯೆ ಖಿಲ್ಲನೆ ನಕ್ಕಳು.

 1999ರಲ್ಲಿ ಜಾರ್ಜ್ ಟೌನ್ ನ 'ಶರವಣ ಭವನ' ಆರಂಭ

1999ರಲ್ಲಿ ಜಾರ್ಜ್ ಟೌನ್ ನ 'ಶರವಣ ಭವನ' ಆರಂಭ

ಅವಳು ನಕ್ಕ ದಿನವೇ 'ಶರವಣ ಭವನ' ಮಾಲೀಕ ರಾಜಗೋಪಾಲ್ ಪಾಸ್ ಪೋರ್ಟ್ ಮಾಡಿಸಿಕೊಂಡು ಮೊದಲ ಬಾರಿಗೆ ದೇಶ ಬಿಟ್ಟು ಹೊರಟ. ಆ ಹೊತ್ತಿಗೆ ಜಾರ್ಜ್ ಟೌನ್ ನ ಅವನ ಮತ್ತೊಂದು 'ಶರವಣ ಭವನ' ಆರಂಭವಾಗಿತ್ತು. ನಿಜ, ಹೋಟೆಲಿಗೆ ಆಗುವಷ್ಟು ವಿಶಾಲವಾದ ಜಾಗ ಅದಾಗಿರಲಿಲ್ಲ. ಆದರೆ ಲಕ್ಷ್ಮಿ ರಾಮನಾಥನ್ ಹೇಳಿ ಕಳಿಸಿದ್ದರು. ಅವರ ತಂದೆ ಶಂಕರ್ ಅಯ್ಯರ್, ದೊಡ್ಡ ಹೆಸರಿದ್ದ ಮನುಷ್ಯ. ಅದೇ ಜಾಗದಲ್ಲಿ 'ಶಂಕರ್ ಕೆಫೆ' ನಡೆಸುತ್ತಿದ್ದ. ಆತನ ಪಾಲುದಾರ ಮದರಾಸಿನ ಮೇಯರ್ ಆಗಿದ್ದ ರಾಮನಾಥನ್. ಶಂಕರ್ ಅಯ್ಯರ್ ತೀರಿಕೊಂಡ ಮೇಲೆ 'ಶಂಕರ್ ಕೆಫೆ' ನಡೆಸುವುದು ಅಸಾಧ್ಯವಾಗಿತ್ತು. ಮಾಜಿ ಮೇಯರ್ ಮಗಳು ಲಕ್ಷ್ಮಿ ರಾಮನಾಥನ್ ಕರೆದು, ನೀವು ಇರುವಷ್ಟೇ ಜಾಗದಲ್ಲಿ ಶರವಣ ಭವನ ನಡೆಸಬೇಕು' ಅಂದಾಗ ರಾಜಗೋಪಾಲ್ ನಿರುತ್ತರನಾಗಿದ್ದ. ಕಟ್ಟಡಕ್ಕೆ ಬೇಕಾದ ಬದಲಾವಣೆಗಳನ್ನು ಮಾಡಿಕೊಡಲು ಲಕ್ಷ್ಮಿ ರಾಮನಾಥನ್ ಒಪ್ಪಿದ್ದಳು. ಜಾರ್ಜ್ ಟೌನ್ ನಂತಹ ದಟ್ಟ ಜನನಿಬಿಡ ಪ್ರದೇಶದಲ್ಲಿ ಅದೊಂದು ಶುಭ ಗಳಿಗೆ ಪುಟ್ಟ ಗಾತ್ರದ 'ಶರವಣ ಭವನ' ಆರಂಭವಾಗಿತ್ತು. ಅದನ್ನು ವಾರಿಯರ್ ಸ್ವಾಮಿಗಳೇ ಉದ್ಘಾಟಿಸಿದ್ದರು. ಕಡಿಮೆ ಬಾಡಿಗೆ, ಅದಕ್ಕಿಂತ ಕಡಿಮೆ ಅಡ್ವಾನ್ಸು- ರಾಜಗೋಪಾಲ್ ಕೃತಿಕಾ ತಂದ ಮೊದಲ ಅದೃಷ್ಟಕ್ಕೆ ಸಂತುಷ್ಟನಾಗಿ ಹೋಗಿದ್ದ. ಫೆಬ್ರುವರಿ 1999ರಲ್ಲಿ ಜಾರ್ಜ್ ಟೌನ್ ನ 'ಶರವಣ ಭವನ' ಆರಂಭವಾಯಿತು.

ಇಲ್ಲೊಂದು ಮಾತು ಹೇಳಬೇಕು: ಒಂದು ಬಾಳೆದೆಲೆ ಹರಿದರೆ ಮಧ್ಯೆ ಸಿಗುವ ಕಡ್ಡಿಯಿಂದ ಟೇಬಲ್ ಒರೆಸುತ್ತಿದ್ದ ತಿರುನಲ್ವೇಲಿಯ ಮಾಮೂಲಿ ಆರೆ ಅನಕ್ಷರಸ್ಥ ಹುಡುಗ ರಾಜಗೋಪಾಲ್ ಹೋಟೆಲ್ ಇಂಡಸ್ಟ್ರಿಗೆ ಕೈಯಿರಿಸಿದಾಗ ಅದರ ಪ್ರತಿ- ಇಂಚನ್ನೂ ತಿಳಿದುಕೊಂಡಿದ್ದ. ಪ್ರತಿಯೊಂದರಲ್ಲೂ ಪರ್ ಫೆಕ್ಷನ್. ಗ್ರಾಹಕರಿಗೆ ರುಚಿ ಬೇಕು. ಶುಚಿ ಬೇಕು. ಕಾರ್ಮಿಕರಿಗೆ ಅನುಕೂಲ ಬೇಕು. ಮಾಲೀಕನಿಗೆ ಲಾಭ ಬೇಕು. ಕೊಡುವವರಿಗೆ, ಕೊಡುತ್ತೇನೆಂದ ದಿನ ಹಣ ಕಟ್ಟಿ ಬಿಡಬೇಕು. ವ್ಯಾಪಾರದಲ್ಲಿ ಕೇವಲ ಒಳ್ಳೆಯತನ ಸಾಲದು. ಕರಾರುವಾಕ್ಕಾಗಿ ಆರ್ಥಿಕ ನಿಷ್ಠೆ ಬೇಕು. ಅದನ್ನು ಪಾಲಿಸದಿದ್ದರೆ ಅವನು ಎಂಥ ಜಾಣನಾದರೂ ವ್ಯವಹಾರದಲ್ಲಿ ಸೋಲುತ್ತಾನೆ. ಈ ಸಂಗತಿ ರಾಜಗೋಪಾಲ್ ಗೆ ಅಶೋಕನಗರದ ಸ್ಲಮ್ ಬಳಿ ದಿನಸಿ ಅಂಗಡಿ ಆರಂಭಿಸಿದಾಗಲೇ ಗೊತ್ತಾಗಿತ್ತು. ಹೆಣ್ಣಿಗಾಗಿ ಕೊಲೆಯಂತಹ ಹುಚ್ಚು passion murderಗೆ ಕೈ ಹಾಕದೆ ಹೋಗಿದ್ದರೆ ಇವತ್ತು 'ಶರವಣ ಭವನ'ದ ಒಡೆಯ ಹೋಟೆಲ್ ಸಾಮ್ರಾಜ್ಯದ ಅಧಿಪತಿಯಾಗಿ, ಅನಭಿಷಿಕ್ತ ದೊರೆಯಾಗಿ ಮೆರೆಯುತ್ತಿದ್ದ.

 ಕೃತಿಕಾ ಮೊದಲ ಹೆಂಡತಿಗಿಂತ ಘನವಾಗಿ ಮೆರೆಯುತ್ತಿದ್ದಳು

ಕೃತಿಕಾ ಮೊದಲ ಹೆಂಡತಿಗಿಂತ ಘನವಾಗಿ ಮೆರೆಯುತ್ತಿದ್ದಳು

ಕಾಲ ಬದಲಾಯಿತು. ಅದನ್ನು ತಕ್ಷಣ ಗಮನಿಸಿದವನು ರಾಜಗೋಪಾಲ್. ಮದರಾಸಿನಲ್ಲಿ ಒಂದೆರಡು Fast Food ಅಂಗಡಿಗಳು ತಲೆ ಎತ್ತಿದವು. ಮೊದಲನೆಯದು ಪುರುಸುವಾಕ್ಕಮ್ ನಲ್ಲಿ ಆರಂಭವಾದ ಹೋಟೆಲು. ಅಲ್ಲಿ ಮಾಜಿ ಎಂ.ಪಿ.ಪುಟ್ಟುಸ್ವಾಮಿ ಎಂಬಾತ ಹರಿಪ್ರಿಯ ಎಂಬ ಲಾಡ್ಜು ನಡೆಸುತ್ತಿದ್ದ. ಹೆಸರಿಗಷ್ಟೇ ಲಾಡ್ಜು. ಇರಲಿಕ್ಕೆ ರೂಮುಗಳಿದ್ದವೇ ಹೊರತು ತಿನ್ನಲಿಕ್ಕೆ ಹತ್ತಿರದಲ್ಲಿ ಯಾವುದೇ ಹೋಟೆಲು ಇರಲಿಲ್ಲ. "ನೀವೇಕೆ ಒಂದು ಶರವಣ ಭವನವನ್ನು ನನ್ನ ಮೇಲ್ಮಹಡಿಯಲ್ಲಿ ನಡೆಸಬಾರದು" ಅಂದ ಪುಟ್ಟುಸ್ವಾಮಿ. ಆ ಹೊತ್ತಿಗೆ ಜಾರ್ಜ್ ಟೌನ್ ಹೋಟೆಲಿನ ಕೆಲಸ ನಡೆದಿತ್ತು. ಇದ್ದ ಹಣವನ್ನೆಲ್ಲ ರಾಜಗೋಪಾಲ್ ಅಲ್ಲಿ ತೊಡಗಿಸಿದ್ದ. ಆದರೆ ಪುಟ್ಟುಸ್ವಾಮಿ ಬಿಡಲಿಲ್ಲ. 1990ರಲ್ಲಿ ಮತ್ತೆ ಗಂಟು ಬಿದ್ದ. ಆಗ once again, ನೆರವಿಗೆ ಬಂದದ್ದು ಇಂಡಿಯನ್ ಬ್ಯಾಂಕ್. ಮತ್ತದೇ ವಾರಿಯರ್ ಸ್ವಾಮಿಗಳನ್ನು ಕರೆಸಿ 1990ರಲ್ಲಿ ಅತ್ಯಂತ ಪ್ರಸಿದ್ಧ ಹಾಗೂ ಶ್ರೀಮಂತರ ಸ್ಥಾವರವಾದ ಪುಸುವಾಕ್ಕಮ್ ನಲ್ಲಿ 'ಶರವಣ ಭವನ' ಆರಂಭಿಸಿಯೇ ಬಿಟ್ಟ. ಈ ಬಾರಿ ವಾರಿಯರ್ ಸ್ವಾಮಿಗಳೂ ಇದ್ದರು. ರಾಜಗೋಪಾಲ್ ನ ಇಬ್ಬರು ಹೆಂಡತಿಯರೂ ಇದ್ದರು. ಕೃತಿಕಾ ಮೊದಲ ಹೆಂಡತಿಗಿಂತ ಘನವಾಗಿ ಮೆರೆಯುತ್ತಿದ್ದಳು. ಒಂದು ಚಿಕ್ಕ ರಾಜಿ, ಪುರುಸುವಾಕ್ಕಮ್ ನ ಅಡುಗೆ ಮನೆ ತುಂಬ ಚಿಕ್ಕದಾದ್ದರಿಂದ ಟಿ.ನಗರ್ ನ ಹೊಸ ಹೋಟೆಲಿನಲ್ಲಿ ಶರವಣ ಭವನದಿಂದ ಕೆಲವು ತಿನಿಸುಗಳನ್ನು ತರಿಸಿ ಗ್ರಾಹಕರಿಗೆ ಬಡಿಸಲಾಗುತ್ತಿತ್ತು.

ಅದರಿಂದ ಶುರುವಾದದ್ದೇ fast food ವಿಚಾರ. ಇಲ್ಲಿ ಅಡುಗೆ ಮಾಡಿ ಇನ್ನೊಂದೆಡೆಗೆ ಕಳಿಸಿ ಮಾರಬಹುದಾದರೆ, ದೈತ್ಯ ಗಾತ್ರದ ಹೋಟೆಲುಗಳೇಕೆ ಬೇಕು?

ಮೊಟ್ಟ ಮೊದಲ ಬಾರಿಗೆ 1990ರಲ್ಲಿ ರಾಜಗೋಪಾಲ್ ಸಿಂಗಫೂರ್ ಗೆ ಹೋದ. ಜೊತೆಯಲ್ಲಿ ಕೃತಿಕಾ. ಅಲ್ಲಿ ಹೋಟೆಲುಗಳಿಗೆ ಸಂಬಂಧಿಸಿದ ಪಾತ್ರೆ ಪಡಗಗಳ ಎಕ್ಸಿಬಿಷನ್ನು. ಅಲ್ಲೊಂದು ಹೋಟೆಲಿದೆ. ಇವತ್ತಿಗೂ ಅದು ಭಾರತೀಯರು ಸಾಮಾನ್ಯವಾಗಿ ಉಳಿದುಕೊಳ್ಳಲು ಇಚ್ಛಿಸುವ ಸ್ಟಾರ್ ಹೋಟೆಲು. ಅದರ ಹೆಸರು 'ಪಾರ್ಕ್ ರಾಯಲ್'. ಕೃತಿಕಾಳೊಂದಿಗೆ ಸ್ಟಾರ್ ಹೋಟೆಲಿನ ಹಾಸಿಗೆಯ ಮೇಲೆ ಹೊರಳಿದ ಮೇಲೆ ಮೈ ಮೋಹವು ಬಿಟ್ಟು ಹೋಗಿತ್ತು. ಅವನು ಸುಮ್ಮನೆ ತಿರುಗಾಡಲು ಹೊರಟ: ಒಬ್ಬನೇ.

 ಸಿಂಗಪೂರ್ ನಲ್ಲಿ ಒಂದು 'ಶರವಣ ಭವನ' ಆರಂಭಿಸುತ್ತೇನೆ

ಸಿಂಗಪೂರ್ ನಲ್ಲಿ ಒಂದು 'ಶರವಣ ಭವನ' ಆರಂಭಿಸುತ್ತೇನೆ

ಹೋಟೆಲಿನ ಹಿಂದಿನ ರಸ್ತೆಯಲ್ಲಿ ಶುಭ್ರವಾದ ಬಿಳೀ ಪಂಚೆ, ಅರ್ಧ ತೋಳಿನ ಅಂಗಿ ತೊಟ್ಟು ಸುಮ್ಮನೆ ನಡೆದ. ಅಲ್ಲಿ ಮುಸ್ತಾಫಾ ಮಾರ್ಕೆಟ್ ಇದೆ. ಎಷ್ಟೋ ವರ್ಷಗಳ ಹಿಂದೆ ಭಾರತದಿಂದ ಸಿಂಗಫೂರ್ ಗೆ ಬಂದು ಚಿಕ್ಕ ಅಂಗಡಿ ಆರಂಭಿಸಿ ಇವತ್ತು ಇಡೀ ಬೀದಿ ಆಕ್ರಮಿಸಿಕೊಂಡ ಮುಸಲ್ಮಾನ ಮುಸ್ತಾಫಾ. ಅದಲ್ಲ ಅವನನ್ನು ಆಕರ್ಷಿಸಿದ್ದು.

ಅಲ್ಲಿನ ತಮಿಳರು.

ಯಾವ ಕಾಲಕ್ಕೆ ಸಿಂಗಪೂರ್ ಗೆ ವಲಸೆ ಹೋದರೋ ಗೊತ್ತಿಲ್ಲ. ಈಗ ತಲೆಮಾರುಗಳೇ ಆಗಿವೆ. ಕೂಲಿ, ವ್ಯಾಪಾರ, ಕೊಂಚ ರಾಜಕೀಯ-ಒಂದೆರಡೇ? ಸಾವಿರಾರು ತಮಿಳರು ಅಲ್ಲಿ ನೆಲೆಗೊಂಡು ಬಿಟ್ಟಿದ್ದಾರೆ. ಮುಸ್ತಾಫಾ ಮಾರ್ಕೆಟ್ ನ ಬೀದಿಯಲ್ಲಿ ಒಂದು ಸುತ್ತು ಹೊಡೆದರೆ ಸಿಕ್ಕುವುದು ಸಾವಿರ ಮುಖಗಳು.

"ಇಲ್ಲಿ ಒಂದು ಮಳಿಗೆಗೆ ಬಾಡಿಗೆ ಎಷ್ಟು?" ವಿಚಾರಿಸಿದ ರಾಜಗೋಪಾಲ್. ಬಾಡಿಗೆಯೊಂದೇ ಅಲ್ಲ, ಸಿಂಗಪೂರ್ ನಲ್ಲಿ ಯಾವುದೇ ದೇಶದ, ಯಾವುದೇ ಮನುಷ್ಯ ಒಂದು ವ್ಯಾಪಾರ ಮಾಡುತ್ತಾನೆಂದರೆ ಅದಕ್ಕೆ ಸಿಂಗಪೂರ್ ಡಾಲರ್ ಗಳ ಲೆಕ್ಕದಲ್ಲಿ ಲಕ್ಷಗಟ್ಟಲೆ ಸಾಲ ಕೊಡುತ್ತದೆ ಸಿಂಗಪೂರ್ ಸರ್ಕಾರ. ಅತಿ ಕಡಿಮೆ ಬಡ್ಡಿ. ವ್ಯಾಪಾರ, ತೆರಿಗೆ, ಬದುಕುವ ನಿಯಮ. ಇದರಲ್ಲಿ ಮಾತ್ರ ನಗರಕ್ಕೆ ನೂರು ನಿಯಮ. Yes, ಅವತ್ತೇ ನಿರ್ಧರಿಸಿದ ರಾಜಗೋಪಾಲ್: ಸಿಂಗಪೂರ್ ನಲ್ಲಿ ಒಂದು 'ಶರವಣ ಭವನ' ಆರಂಭಿಸುತ್ತೇನೆ.

"ಇದು ನಿನ್ನನ್ನು ಮದುವೆಯಾದದ್ದರ ಅದೃಷ್ಟ" ಅಂದ.

ಖಿಲ್ಲನೆ ನಕ್ಕಳು ಕೃತಿಕಾ.

 ನಾನು ಹೇಳಿದ್ದು ನಿಜವಾಯ್ತೇನೋ?

ನಾನು ಹೇಳಿದ್ದು ನಿಜವಾಯ್ತೇನೋ?

ಅವಳಿಗೆ ಗೊತ್ತಿತ್ತು: ಮಧ್ಯವಯಸ್ಕ ರಾಜಗೋಪಾಲ್ ಗೆ ಬದುಕಿನಲ್ಲಿ thrill ಬೇಕು. ಸಾಕಷ್ಟು ಸಾಧಿಸಿಯಾಗಿದೆ. ಕೋಟ್ಯಂತರ ರುಪಾಯಿ. ಸಾಲುಗಟ್ಟಲೆ ಹೋಟೆಲು. 'ಶರವಣ ಭವನ' ಎಂಬ ದೊಡ್ಡ ಹೆಸರು: Brand name. ಈಗ ಅವನಿಗೆ ಸುಖ ಬೇಕು. ಕಾಯಬೇಕು. ಪ್ರತಿ ಚಿಕ್ಕ ಕದಲಿಕೆಯಲ್ಲೂ ಸುಖ ಕಾಣುವ ಜೀವ. ಅವತ್ತು ಸಂಜೆ ಸಿಂಗಪೂರ್ ನ 'ಲಿಟ್ಲ್ ಇಂಡಿಯಾ'ಗೆ ಕರೆದೊಯ್ದು ಕೃತಿಕಾ ತೋರಿದ ಆಭರಣ ಕೊಡಿಸಿದ ರಾಜಗೋಪಾಲ್. ಕುಳಂತೈ ತಿರುಚ್ಚಿಯ ಮಾತು ನಿಜವಾಗಿತ್ತು.

ವಿದೇಶದಲ್ಲಿ ಹೋಟೆಲು ಆರಂಭಿಸಲು ನಿರ್ಧರಿಸಿದ್ದ ರಾಜಗೋಪಾಲ್. ಸಿಂಗಪೂರ್ ನಲ್ಲಿ ನಡೆದ ಎಕ್ಸಿಬಿಷನ್ ಗೆ ಹೋದ. ಫಾಸ್ಟ್ ಫುಡ್ ಹೋಟೆಲು ಆರಂಭಿಸಲು ಬೇಕಾದ ಎಲ್ಲ ಪಾತ್ರೆ ಪಡಗ ವೀಕ್ಷಿಸಿದ. ಯಾವುದನ್ನು ಖರೀದಿಸಿದರೆ ತನಗೆ ಗಿಟ್ಟುತ್ತದೆ ಎಂಬುದನ್ನು ಸೂಕ್ಷ್ಮವಾಗಿ ವೀಕ್ಷಿಸಿದ. ಇಲ್ಲಿ ರಾಜಗೋಪಾಲ್ ಬಗ್ಗೆ ಒಂದು ಮಾತು ಹೇಳಬೇಕು: ಆತ ಸೋಮಾರಿಯಲ್ಲ, ಚಟಗಳಿಲ್ಲ, ವ್ಯಾಪಾರದಲ್ಲಿ ನಿಪುಣ. ಮಾಡಿದ ಕೆಲಸ ಕರಾರುವಾಕ್ಕು. ಹಣಕಾಸಿನ ವಿಷಯದಲ್ಲಿ ಕಡ್ಡಿ ಮುರಿದಂತೆ. ಕುಡಿತದಂತಹ ಚಟಗಳಿರಲಿಲ್ಲ. ಅರೆ ಅನಕ್ಷರಸ್ಥ ರಾಜಗೋಪಾಲ್ ಯಾವುದೇ ಪ್ರಶಸ್ತಿಗೆ ಅರ್ಹನಾದ ಮನುಷ್ಯ.

ಆದರೆ, ಅವನಿಗೆ ನೆನಪಾದದ್ದು ಅದೇ ಮಾಂತ್ರಿಕ: ಕರುಂಡಿ.

ಅವನನ್ನು ಕೇಳದೆ ರಾಜಗೋಪಾಲ್ ಏನೂ ಮಾಡುತ್ತಿರಲಿಲ್ಲ. ಸಿಂಗಪೂರ್ ನಿಂದ ಬಂದವನೇ ಮದರಾಸಿನ ಏರ್ ಪೋರ್ಟ್ ಗೆ ತನ್ನ ಬಿ.ಎಂ.ಡಬ್ಲ್ಯೂ ಕಾರು ತರಿಸಿಕೊಂಡು ಊರಿಗೆ ಹೊರಟ. ತಿರುನಲ್ವೇಲಿ ಕಡೆಗೆ.

ನಾನು ಹೇಳಿದ್ದು ನಿಜವಾಯ್ತೇನೋ?

ಕರುಂಡಿಯ ಗೊಗ್ಗರು ದನಿಯಲ್ಲಿ ಹೊರಟ ಶಬ್ದ ಅದೊಂದೇ.

 ಐವತ್ತು ಸಾವಿರ ರುಪಾಯಿಗಳ ಎರಡು ಕಂತೆ ಕರುಂಡಿಯ ಕಾಲಿಗಿಟ್ಟ

ಐವತ್ತು ಸಾವಿರ ರುಪಾಯಿಗಳ ಎರಡು ಕಂತೆ ಕರುಂಡಿಯ ಕಾಲಿಗಿಟ್ಟ

ಇದಿಷ್ಟೂ ಆದದ್ದು ಅವಳನ್ನು ಅದುವೆಯಾದದ್ದರಿಂದಲೇ. ರಾಜಗೋಪಾಲ್ ಮನೆಯ ನಿರ್ವಹಣೆ ವಳ್ಳಿಯಮ್ಮೈ ಮಾಡುತ್ತಾಳೆ. ಕರುವು ಹಾಕಲಾಗದಂತಹ ಗೊಡ್ಡು ಹೆಂಗಸು. ಮಕ್ಕಳು ಹುಟ್ಟಿವೆ ನಿಜ. ಅದರೆ ಹೋರಿಗೆ ಪ್ರತಿ ನಿತ್ಯ ಹೊಸ ಮಣಕ ಬೇಕು. "ಒಬ್ಬಳಿದ್ದಾಳೆ. ಎಡಗೆನ್ನೆಯ ಮೇಲೆ ಮಚ್ಚೆಯಿರುವವಳು. ಇಪ್ಪತ್ತು ಕೂಡ ದಾಟಿಲ್ಲ. ಯಾರೊಂದಿಗೋ ಮದುವೆಯಾಗಿದೆ: ನಿಜ. ಸೀತೆಗೆ ರಾಮಚಂದ್ರನೊಂದಿಗೇ ಮದುವೆಯಾಗಿರಲಿಲ್ಲವೆ? ಎತ್ತಿಕೊಂಡು ಹೋಗಲು ಒಂದು ಮಾಯಾ ಜಿಂಕೆ ಸಾಕು. ಮಾಯೆಗೇನು ಕಡಿಮೆ. ಲಕ್ಷ ಲಕ್ಷವಿದೆ. ಅಮೇಲೆ ನೋಡುತ್ತಿರು. ಕೋಟಿಗಳಲ್ಲಿ ಹೊರಳಾಡುತ್ತೀಯ. ನಿನ್ನ ಹೆಸರು ದೇಶ ದೇಶಗಳಿಗೆ ಹರುಡುತ್ತದೆ, ಮುಟ್ಟಿದ್ದು ಬಂಗಾರ. ಕಂಡದ್ದು ಚಿನ್ನ. ಯಾರವಳು ರಂಭೆ? ತೆಕ್ಕೆಗೆ ಬೀಳುತ್ತಾಳೆ. ಅದೊಂದು ಹುಡುಗಿಯನ್ನು ಮದುವೆಯಾಗು. ಆನಂತರದ ನಿನ್ನ ಬದುಕೇ ಬಂಗಾರ" ಅಂದುಬಿಟ್ಟ.

ಅನಾಮತ್ತು ಐವತ್ತು ಸಾವಿರ ರುಪಾಯಿಗಳ ಎರಡು ಕಂತೆ ಕರುಂಡಿಯ ಕಾಲಿಗಿಟ್ಟು ಮೇಲೆದ್ದ ರಾಜಗೋಪಾಲ್. ಸಿಂಗಪೂರ್ ನಲ್ಲಿ ನೋಡಿದ ಬೀದಿ, ಮುಸ್ತಾಫಾ ಮಾರ್ಕೆಟ್ ಅವನ ಕಣ್ಣೆದುರಿಗಿತ್ತು. ಕಾರಿನಲ್ಲಿ ಕುಳಿತು ಕದವೆಳೆದುಕೊಂಡವನಿಗೆ ಶುರುವಾದದ್ದು ಒಂದೇ ಯೋಚನೆ: ಎಡಗೆನ್ನೆಯ ಮೇಲೆ ಮಚ್ಚೆ ಇರುವವಳು ಯಾರು? ಎಲ್ಲಿದ್ದಾಳೆ? ಅವನಿಗೆ ಗಣಪತಿಯ ಹೊರತು ತಕ್ಷಣಕ್ಕೆ ಮತ್ಯಾವ ಹೆಸರೂ ನೆನಪಾಗಲಿಲ್ಲ. ಜ್ಯೋತಿಷ್ಯ ಕೇಳುವುದಷ್ಟೇ ಅಲ್ಲ, ಕ್ಷುದ್ರ ಪೂಜೆ ಮಾಡಿಸುತ್ತಾರೆ. ಅದಕ್ಕಿಂತ ಹೆಚ್ಚಾಗಿ, ಬೆತ್ತಲೆ ಮಲಗಿ ಎಣ್ಣೆ ಹಚ್ಚಿಸಿಕೊಂಡು ಎಳೇ ಹುಡುಗಿಯರ ಕೈಲಿ ಬೆನ್ನು ತೊಳೆಸಿಕೊಳ್ಳುತ್ತಾರೆ. ಅದನ್ನೆಲ್ಲ ರಾಜಗೋಪಾಲನೊಂದಿಗೆ ಹಂಚಿಕೊಳ್ಳುವವನೇ ಗಣಪತಿ.

 ರಾಮಸ್ವಾಮಿಯನ್ನು ಕರೆಸು ಎಂದಿದ್ದ ರಾಜಗೋಪಾಲ್

ರಾಮಸ್ವಾಮಿಯನ್ನು ಕರೆಸು ಎಂದಿದ್ದ ರಾಜಗೋಪಾಲ್

"ಅಂಥವಳಿದ್ದಾಳಾ ನೋಡು" ದಾರಿಯಲ್ಲೇ ಫೋನು ಮಾಡಿ ಕೇಳಿದ. ಮೊಬೈಲ್ ಫೋನ್ ಬಂದು ಕೆಲವೇ ದಿನಗಳಾಗಿದ್ದವು. ರಾಜಗೋಪಾಲ್ ಎರಡು ಕೊಂಡುಕೊಂಡಿದ್ದ. ಆದರೆ ಅರ್ಧ ಗಂಟೆಯೊಳಗಾಗಿ ಗಣಪತಿಯಿಂದ ಉತ್ತರ ಬರುತ್ತದೆ ಅಂದುಕೊಂಡಿರಲ್ಲ.

"ವಣಕ್ಕುಂ, ನಮ್ಮಲ್ಲೇ ಕೆಲಸ ಮಾಡುತ್ತಿರುವ ರಾಮಸ್ವಾಮಿ ಇದ್ದಾರಲ್ಲ? ಅವರ ಮಗಳು ಜೀವಜ್ಯೋತಿಗೆ ಇವತ್ತಿಗೆ ಸರಿಯಾಗಿ ಇಪ್ಪತ್ತು. ಕೆನ್ನೆಯ ಮೇಲೆ ಬೇಳೆ ಕಾಳಿನಷ್ಟು ಮಚ್ಚೆ ಇದೆ. ಜಾತಿಯಿಂದ ನಾಡಾರ್. ತಿರುನಲ್ವೇಲಿ ಕಡೆಯವಲೇ. ನೋಡಲಿಕ್ಕೆ ಕಳೆಯಾಗಿದ್ದಾಳೆ. ಸ್ವಲ್ಪ ದುಡ್ಡಿನಾಸೆ. ಇರುತ್ತಲ್ವೇ ಅಣ್ಣಾಚಿ? ಗಂಡ ಕ್ರಿಶ್ಚಿಯನ್. ಪ್ರಿನ್ಸ್ ಶಾಂತಕುಮಾರ್ ಅಂತ. ಅಂಥ ಕುಳವೇನಲ್ಲ. ಅವರಿಬ್ಬರೂ ಓಡಿ ಹೋಗಿ ಮದುವೆಯಾದದ್ದು. ಆದರೇನಂತೆ? ನಮ್ಮ ರಾಮಸ್ವಾಮಿಯ ಮಗಳು. ಅವರ ಅಮ್ಮನ ಹೆಸರು ತವಮಣಿ. ಇಷ್ಟಕ್ಕೂ ಅಣ್ಣಾಚ್ಚಿಗೆ ಅವರೊಂದಿಗೆ ಕೆಲಸವಿತ್ತಾ?" ಕೇಳಿದ್ದ.

ರಾಜಗೋಪಾಲ್ ಉತ್ತರಿಸಿದ್ದಿಷ್ಟೆ: "ರಾಮಸ್ವಾಮಿನ ಕರೆಸು"

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
Senior journalist, writer Ravi Belagere new book Idli Vada Deadly Murder releasing in April 26th, 5 PM at Hai Bangalore weekly news paper office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X