ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಯ 'ಮನಸು ಮಾತಾಡಿತು' ಪುಸ್ತಕಕ್ಕೆ ಮರಕಿಣಿ ಮುನ್ನುಡಿ

By Prasad
|
Google Oneindia Kannada News

ಬದುಕಿನಲ್ಲಿ ನಡೆದ ಸತ್ಯ ಸಂಗತಿಗಳನ್ನು, ಮನಸಿನ ಹಳವಂಡಗಳನ್ನು, ಎಲ್ಲ ಅಡೆತಡೆಗಳನ್ನು ಮೀರಿನಿಂತ ಯಶೋಗಾಥೆಗಳನ್ನು ಹೃದಯಕ್ಕೆ ತಟ್ಟುವಂತೆ ಅತ್ಯಂತ ಮನೋಜ್ಞವಾಗಿ ಬಿಡಿಸಿಡುವ, ಓದೋದುತ್ತಲೇ ಮನಸ್ಸನ್ನು ಆರ್ದ್ರವಾಗಿಸುವ, ಎಲ್ಲವನ್ನೂ ಕಳೆದುಕೊಂಡವನಿಗೆ ಆಶಾಭಾವನೆ ಉಕ್ಕಿಸುವ ಪತ್ರಕರ್ತ ಮಣಿಕಾಂತ್ ಅವರ ಲೇಖನಗಳ ವೈಶಿಷ್ಟ್ಯತೆಯೇ ವಿಭಿನ್ನವಾದುದು. ಅವರ ಅಂಕಣಬರಹ 'ಭಾವತೀರಯಾನ' ಈಗ 'ಮನಸು ಮಾತಾಡಿತು' ಎಂಬ ಪುಸ್ತಕವಾಗಿ ಬಂದಿದೆ. ಆ ಪುಸ್ತಕಕ್ಕೆ ಮತ್ತೊಬ್ಬ ಹಿರಿಯ ಪತ್ರಕರ್ತ ಉದಯ ಮರಕಿಣಿ ಅವರು ಬರೆದಿರುವ ಮುನ್ನುಡಿ ಇಲ್ಲಿದೆ. ಒನ್ಇಂಡಿಯಾ ಓದುಗರಿಗಾಗಿ ಅದನ್ನು ಇಲ್ಲಿ ತೆರೆದಿಡುತ್ತಿದ್ದೇವೆ. ಪುಸ್ತಕ ಕೊಂಡು ಓದಿರಿ - ಸಂಪಾದಕ.

***
ಮಣಿಕಾಂತ್ ಎಂಬ ಹೆಸರನ್ನು ಮೊದಲಬಾರಿ ಕೇಳಿದಾಗ ನನಗೆ ಮಣಿಕಂಠ, ಶಬರಿಮಲೆ ಅಯ್ಯಪ್ಪ, ತಮಿಳು ಲೇಖಕ ಜಯಕಾಂತನ್, ಮಣಿರತ್ನಂ ಎಲ್ಲರೂ ಒಟ್ಟೊಟ್ಟಿಗೇ ನೆನಪಾಗಿ ಕಲಸುಮೇಲೋಗರ ಆಗಿ, ಈತ ಯಾರೋ ತಮಿಳು ಲೇಖಕನಿರಬಹುದು ಎಂದು ಅಂದುಕೊಂಡಿದ್ದೆ. ಆದರೆ ಅವರ ಬರವಣಿಗೆ ಅನುವಾದ ಮಾಡಿದಂತಿರಲಿಲ್ಲ. ಪರವಾಗಿಲ್ವೇ, ತಮಿಳು ಪ್ರಜೆಯೊಬ್ಬ ಕನ್ನಡದಲ್ಲಿ ಇಷ್ಟು ಚೆನ್ನಾಗಿ ಬರೀತಿದ್ದಾನಲ್ಲಾ ಎಂಬ ಮೆಚ್ಚುಗೆ ಮೂಡಿತು. ಆಮೇಲೆ ವಿಚಾರಿಸಿದರೆ ಇದು ಅಚ್ಚ ಕನ್ನಡದ ಪ್ರತಿಭೆಯೇ ಎಂದು ತಿಳಿದು ಅಚ್ಚರಿಯಾಯಿತು, ಸಂತೋಷವೂ ಆಯಿತು. ಮಣಿಕಾಂತ್ ಎಂಬ ಅಪರೂಪದ ಪ್ರತಿಭೆ ನನ್ನ ಓದಿನೊಳಗೆ ನುಗ್ಗಿ ಬಂದದ್ದು ಹಾಗೆ.

ಕಳೆದ ಹದಿನೈದು ವರ್ಷಗಳಲ್ಲಿ ನಾನು ಮಣಿಕಾಂತ್ ಅವರನ್ನು ಭೇಟಿಯಾಗಿದ್ದು ಬೆರಳೆಣಿಕೆಯಷ್ಟೇ ಸಾರಿ. ಮೊದಲ ಸಲ ನೋಡಿದಾಗ ವಿನಯ, ವಿಧೇಯತೆ ಮತ್ತು ಸಂಕೋಚದ ಪಾಕವೆರೆದು ತಯಾರಿಸಿದ ಮೂರ್ತಿಯಂತಿದ್ದ ಮಣಿ, ಈಗ ಇಷ್ಟೆಲ್ಲಾ ಅವಾಂತರ ಮಾಡಿದ ನಂತರವೂ ಹಾಗೇ ಇದ್ದಾರೆ ಅನ್ನೋದು ಸೋಜಿಗ. ಈ ಮನುಷ್ಯ ಬರೆದ ಪುಸ್ತಕವೊಂದು (ಅಮ್ಮ ಹೇಳಿದ ಎಂಟು ಸುಳ್ಳುಗಳು) ಐದೇ ವರ್ಷಗಳಲ್ಲಿ 75 ಸಾವಿರ ಕೃತಿಗಳ ಮಾರಾಟ ಕಂಡಿದೆ ಎಂದು ಯಾರಿಗಾದರೂ ಪರಿಚಯ ಮಾಡಿಸಿದರೆ ಅವರು ನಂಬಲಿಕ್ಕಿಲ್ಲ. ಅಂಥಾ ಪಾಪದ ಮನುಷ್ಯ ನಮ್ಮ ಮಣಿಕಾಂತ್!

ಆದರೆ ಕನ್ನಡದ ಅತ್ಯಂತ ಜನಪ್ರಿಯ ಲೇಖಕರ ಪಟ್ಟಿಯಲ್ಲಿ ಮಣಿಕಾಂತ್ ಹೆಸರೂ ಇದೆ. ದಿನಪತ್ರಿಕೆಗಳಲ್ಲಿ ವಾರಕ್ಕೊಮ್ಮೆ ಪ್ರಕಟವಾಗುವ ಟಾಪ್ ಟೆನ್ ಪುಸ್ತಕಗಳ ಪಟ್ಟಿಯಲ್ಲಿ ಮಣಿ ಪುಸ್ತಕ ಕಂಪಲ್ಸರಿ. ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರತಿ ಬುಧವಾರ ಪ್ರಕಟವಾಗುವ ಅವರ 'ಭಾವತೀರಯಾನ' ಅಂಕಣಕ್ಕೆ ಲಕ್ಷಾಂತರ ಖಾಯಂ ಓದುಗರಿದ್ದಾರೆ, ಅದರಲ್ಲಿ ನಾನೂ ಒಬ್ಬ. ಮಣಿಕಾಂತ್ ಅಂದರೆ ನನ್ನ ದೃಷ್ಟಿಯಲ್ಲಿ ಅವರಷ್ಟೇ ಬರೆಯಬಹುದಾದ ಹಾಗೂ ಬರೆಯದೇ ಇರುವ ಅವರದೇ ಅಂಕಣದ ಪಾತ್ರವೊಂದರಂತೆ ತನ್ನೆಲ್ಲಾ ಮಿತಿಗಳನ್ನು ಮೀರಿ, ಎತ್ತರಕ್ಕೆ ಏರಿನಿಂತ ಸಹೃದಯಿ. ಬರವಣಿಗೆ ಮತ್ತು ನಿಜಬದುಕು - ಇವೆರಡರಲ್ಲೂ ಅವರದು ಭಾವತೀರಯಾನ. ಅವರು ಆ ಅಂಕಣದಲ್ಲಿ ಬರೆದ ಬರಹಗಳೇ ಈ 'ಮನಸ್ಸು ಮಾತಾಡಿತು' ಪುಸ್ತಕವಾಗಿದೆ. [ಕ್ಯಾನ್ಸರ್ ಇದೆ; ಆದರೆ ಚಿಂತೆ ಇಲ್ಲ!]

Uday Marakini's foreword to Manikanth's new book

ಮೊದಮೊದಲು ಮಣಿಕಾಂತ್ ಅಂಕಣ ಲೇಖನಗಳನ್ನು ಓದುತ್ತಿದ್ದಾಗ ಇವುಗಳನ್ನು ಯಾವ ಕೆಟಗರಿಗೆ ಸೇರಿಸುವುದು ಅಂತಾನೇ ಅರ್ಥವಾಗುತ್ತಿರಲಿಲ್ಲ. ಈಗಲೂ ಆ ಗೊಂದಲ ಮುಂದುವರಿದಿದೆ. ಮಣಿ ಬರೆಯುವುದು ಕತೆಗಳಲ್ಲ, ಆದರೆ ಶೈಲಿ ಕಥಾನಕದ್ದು. ಅವರು ಹೇಳುವ ಘಟನೆಗಳು ಯಾವುದೂ ಕಾಲ್ಪನಿಕವಲ್ಲ, ಆದರೆ ಅವುಗಳು ನಮ್ಮ ಕಲ್ಪನೆಗೂ ಮೀರಿದ್ದು. ಕೆಲವೊಮ್ಮೆ ತೀರಾ ಸಿನಿಮೀಯ ಅಂತ ಅನಿಸಿದ್ದೂ ಇದೆ. ಆದರೆ ಅವರು ನೀಡುವ ವಿವರಗಳು, ವಿಳಾಸಗಳು, ಫೋನ್ ನಂಬರುಗಳನ್ನು ಗಮನಿಸಿದಾಗ ನಂಬದೇ ವಿಧಿಯಿಲ್ಲ.

ಅದು ಪ್ರಬಂಧವಲ್ಲ, ಪ್ರಹಸನವಲ್ಲ, ಹರಟೆಯೂ ಅಲ್ಲ. ತಲೆಚಿಟ್ಟು ಹಿಡಿಸುವಂಥ ಕಾವ್ಯಾತ್ಮಕ ಬರವಣಿಗೆಯೂ ಅಲ್ಲ. ಹಾಗೆ ನೋಡುತ್ತಾ ಹೋದರೆ ಅದರಲ್ಲಿ ವರದಿಗಾರಿಕೆಯ ಕಸುಬೂ ಕಾಣಿಸುತ್ತದೆ. ಆದರೆ ವರದಿಯಂತೆ ಕೇವಲ ಅಂಕಿಅಂಶಗಳ ಒಣದಾಖಲೆಯಲ್ಲ. ಮೊಜಾರ್ಟನ ಸಿಂಫೋನಿಯಂತೆ ಇಡೀ ಬರಹವನ್ನು ಹಂತಹಂತವಾಗಿ ಕಟ್ಟುತ್ತಾ ಹೋಗಿ ತಾರಕಕ್ಕೆ ತಂದು ನಿಲ್ಲಿಸುವ ಪ್ರತಿಭೆ ಅವರಲ್ಲಿದೆ.

ಓದುಗನ ಕುತೂಹಲ, ಆತಂಕ ಎಲ್ಲವೂ ಅದರ ಜೊತೆಜೊತೆಗೆ ಗರ್ಭಕಟ್ಟುತ್ತಾ ಹೋಗಿ ಕೊನೆಯ ಪ್ಯಾರಾಗೆ ಬರುವಷ್ಟರ ಹೊತ್ತಿಗೆ ಟಪ್ಪಂತ ಎರಡು ಹನಿ ಕಣ್ಣೀರು ಬೀಳಬೇಕು. ಅದು ಖಡ್ಡಾಯ. ಬುಧವಾರ ಬೆಳ್ಳಂಬೆಳಿಗ್ಗೆ ಸುದ್ದಿಪತ್ರಿಕೆ ಓದುತ್ತಾ ಕಣ್ಣೀರು ಹಾಕುವುದು ನೋಡುವವರ ಕಣ್ಣಿಗೆ ತಮಾಷೆಯಾದರೆ, ಓದುಗನ ಪಾಲಿಗೆ ಮುಜುಗರ. [ಐ ಲವ್ ಯೂ ಅಂತ ಹೇಳಿಬೇಕಿದ್ದರೆ...]

ಆದರೆ ಮಣಿ ಕಣ್ಣೀರು ಹಾಕಿಸುವುದಂತೂ ನಿಜ. ಪಿಟೀಲು ವಾದಕನೊಬ್ಬ ಪಿಟೀಲಿನ ತಂತಿಗಳನ್ನು ಮೀಟಿದಷ್ಟೇ ಸಲೀಸಾಗಿ ಮಣಿ ನಮ್ಮ ಭಾವನೆಗಳ ತಂತಿಗಳನ್ನು ಮೀಟುತ್ತಾರೆ. ಅಲ್ಲಿ ಸಪ್ತ ಸ್ವರಗಳು ಹೊರಟರೆ ಇಲ್ಲಿ ನವರಸಗಳ ಮೆರವಣಿಗೆ. ಫೇಸ್ ಬುಕ್ಕಲ್ಲಿ ಯಾರೋ ಒಬ್ಬ ನಿರಕ್ಷುರಕುಕ್ಷಿ ಮಣಿಕಾಂತ್ ಬಗ್ಗೆ ವಿಚಾರಿಸುತ್ತಾ ಮಣಿಕಾಂತ್ ಅಂದರೆ ಕಣ್ಣೀರು ಹರಿಸುವ ಬರಹಗಾರರಾ ಎಂದು ಕೇಳಿದ್ದ. ನನಗೆ ನಗು ಬಂದಿತ್ತು. ಕಣ್ಣೀರು ಅಂದರೆ ಅಳುವೇ ಆಗಬೇಕಿಲ್ಲ, ಆನಂದಬಾಷ್ಪವಾಗಿರಬಹುದು, ಭಾವಾತಿರೇಕದ ಪರಾಕಾಷ್ಠೆಯೂ ಆಗಿರಬಹುದು. ಅದು ಕನ್ನಡ ಸೀರಿಯಲ್ಲುಗಳ ಸ್ತ್ರೀಪಾತ್ರಗಳ ಅವಸ್ಥೆ ಕಂಡಾಗ ಉಕ್ಕುವಂಥಾ ಕಣ್ಣೀರಲ್ಲ. ದೂರದಲ್ಲೆಲ್ಲೋ ಕುಳಿತಿರುವ, ನಮಗಾರಿಗೂ ಗೊತ್ತೇ ಇರದ ಜೀವವೊಂದು ತನ್ನ ಬದುಕಲ್ಲಿ ನೊಂದುಬೆಂದು ಕೊನೆಗೆ ಸಾರ್ಥಕ್ಯ ಅನುಭವಿಸಿದನ್ನು ಓದಿದಾಗ ಹೃದಯತುಂಬಿ ಹೊರಹೊಮ್ಮುವ ಕಣ್ಣೀರು.

ಈ ಮಾತು ಯಾಕೆ ಹೇಳುತ್ತಿದ್ದೇನೆ ಅಂದರೆ ಮಣಿಕಾಂತ್ ಬರೆಯುವ ಅಂಕಣಗಳು ದುಃಖಾಂತ್ಯ ಕಾಣುವುದು ಕಡಿಮೆಯೇ. ಅದಕ್ಕೆ ಕಾರಣ ಅವರ ಜೀವನ್ಮುಖಿ ನಿಲುವು ಮತ್ತು ಸಮಾಜಮುಖಿ ಧೋರಣೆ. ಬಹಳ ಶುದ್ದ ಅಂತಃಕರಣ ಅವರದು. ಅವರು ಹೆಕ್ಕುವ ಅಥವಾ ಅವರಿಗೆ ದಕ್ಕುವ ಪಾತ್ರಗಳೂ ಅದೇ ಮಾದರಿಯವು. ಕೆಲವೊಮ್ಮೆ ಒಂದು ಅನುಮಾನವೂ ಕಾಡುತ್ತದೆ- ಮಣಿ ತಾನಾಗಿ ಅಂಥಾ ಪಾತ್ರಗಳನ್ನು ಹುಡುಕಿಕೊಂಡು ಹೋಗುತ್ತಾರೋ ಅಥವಾ ಆ ಪಾತ್ರಗಳೇ ತಾವಾಗಿ ಮಣಿಯನ್ನು ಅರಸಿಕೊಂಡು ಬರುತ್ತಾವೋ? ಗೊತ್ತಿಲ್ಲ. ಆದರೆ ಇಂಥಾ ಧನ್ಯಮಿಲನದಿಂದ ಲಾಭವಾಗುವುದು ನಮ್ಮಂಥ ಓದುಗರಿಗೆ. [ಮಾತು ನಿಂತರೂ ಅವನು ಮಹಾಸೇತುವೆ ಕಟ್ಟಿದ!]

Uday Marakini's foreword to Manikanth's new book

ಕೊಲ್ಕೋತ್ತಾದ ಯಾವುದೋ ಗಲ್ಲಿಯಲ್ಲಿ ಮನೆಕೆಲಸ ಮಾಡುತ್ತಿದ್ದ ಅರೆ ಅನಕ್ಷರಸ್ತ ಹೆಣ್ಮಗಳೊಬ್ಬಳು ಬೆಸ್ಟ್ ಸೆಲ್ಲರ್ ಆಗುವ ಪುಸ್ತಕ ಬರೆದಿದ್ದಾಳೆ ಅನ್ನುವ ಸಂಗತಿ ನಮಗೆ ಗೊತ್ತಾಗುವುದು ಮಣಿಕಾಂತ್ ಮೂಲಕವೇ. ಹೋಟೆಲ್ ಮಾಣಿಯಾಗಿದ್ದ ಗಣೇಶ ಐಎಎಸ್ ಪಾಸು ಮಾಡಿದ ಸಾಧನೆ ಜಗಜ್ಜಾಹೀರು ಆಗುವುದು ಮಣಿಯವರಿಂದಲೇ. ಅಂಥಾ ದಿವ್ಯಚೇತನಗಳನ್ನು ನಮಗೆ ಪರಿಚಯ ಮಾಡಿಸಿದ್ದಕ್ಕಾದರೂ ಮಣಿಗೊಂದು ಥ್ಯಾಂಕ್ಸ್ ಹೇಳಲೇಬೇಕು. ಕೊಲೆ ಸುಲಿಗೆ ಅತ್ಯಾಚಾರದ ಸುದ್ದಿಗಳೇ ದೈನಿಕವಾಗಿರುವಾಗ, ಎಡ-ಬಲ ಸಿದ್ಧಾಂತಗಳ ಹೋರಾಟಗಳು ಮತ್ತು ಪ್ರತಿಭಟನೆಗಳೇ ನಿತ್ಯದೃಶ್ಯವಾಗಿರುವಾಗ ಮಣಿಕಾಂತ್ ಬರಹಗಳು ಮನಸ್ಸಿಗೆ ಆಹ್ಲಾದವನ್ನು ನೀಡುತ್ತವೆ. ನಾವಂದುಕೊಂಡಷ್ಟು ಈ ಜಗತ್ತು ಕೆಟ್ಟಿಲ್ಲ ಎಂಬ ಸಮಾಧಾನ ನೀಡುತ್ತವೆ.

ಮಣಿಕಾಂತ್ ಅಂಕಣ ಬರಹಗಳೆಲ್ಲವೂ ಸಾಮಾನ್ಯವಾಗಿ ವ್ಯಕ್ತಿಕೇಂದ್ರೀಕೃತಾದದ್ದು. ತಿರುಕನ ಕನಸೊಂದು ನಿಜವಾಗುವ ವಿಸ್ಮಯದಂತೆ ಕಾಣಿಸುವಂಥಾದ್ದು. ಮಣಿಕಾಂತ್ ತಮ್ಮ ಲೇಖನಕ್ಕಾಗಿ ಆಯ್ದುಕೊಳ್ಳುವ ವ್ಯಕ್ತಿಗಳು ಯಾರೂ ಪ್ರಸಿದ್ಧರಲ್ಲ, ಆದರೆ ಮಣಿಯಷ್ಟೇ ಸಜ್ಜನರು. ಅವರೆಲ್ಲರೂ ಸಮಾಜದ ಕೆಳಸ್ತರದಿಂದ ಬಂದವರು, ಶೋಷಿತರು, ಅತ್ಯಾಚಾರಕ್ಕೊಳಗಾದವರು, ಕಡುಬಡವರು, ಅಂಗವಿಕಲರು, ಮಾನಸಿಕವಾಗಿ ಅಸ್ವಸ್ಥರು. ಹಾಗಂತ ಅವರ್ಯಾರೂ ತಮ್ಮ ಗತಿಸ್ಥಿತಿಗೆ ಕೊರಗುವ ಜಾಯಮಾನದವರಲ್ಲ, ತಮ್ಮ ಪಾಲಿಗೆ ದಕ್ಕಿದ್ದಿಷ್ಟೇ ಎಂದು ಸುಮ್ಮನೇ ಕೂರುವ ಅಲ್ಪತೃಪ್ತರೂ ಅಲ್ಲ. ಅವರು ನಮಗಿಂತ ದೊಡ್ಡ ಕನಸು ಕಾಣುತ್ತಾರೆ, ತಮ್ಮ ಮಿತಿಯನ್ನು ಮೀರಿ ನಿಲ್ಲುತ್ತಾರೆ, ಅಸಾಧ್ಯ ಅನ್ನುವುದನ್ನು ಸಾಧಿಸಿ ತೋರಿಸುತ್ತಾರೆ, ನಾರ್ಮಲ್ ಆಗಿರುವ ನಮ್ಮನಿಮ್ಮಂತವರಿಗೇ ಮಾದರಿಯಾಗುತ್ತಾರೆ. ತಮ್ಮ ಸೋಲಿಗೆ ಇನ್ನೆಲ್ಲೋ ಕಾರಣಗಳನ್ನು ಹುಡುಕಿ ಸಂತೃಪ್ತರಾಗುವ ಸೋಂಬೇರಿಗಳು ನಾಚುವಂತೆ ಮಾಡುತ್ತಾರೆ.

ಉದಾಹರಣೆಗೆ ದೇವೇಂದರ್ ಸಿಂಗ್ ಎಂಬ ಸೈನಿಕನ ಕತೆಯನ್ನೇ ನೋಡಿ. ಯುದ್ಧದಲ್ಲಿ ಮೈತುಂಬಾ ಗಾಯಮಾಡಿಕೊಂಡ ಈತನಿಗೆ ಒಂಬತ್ತು ಸರ್ಜರಿಗಳು ನಡೆಯುತ್ತವೆ. ಹಾಗಿದ್ದೂ ಪವಾಡವೆಂಬಂತೆ ಆತ ಬದುಕುಳಿಯುತ್ತಾನೆ, ಆದರೆ ಬಲಗಾಲನ್ನು ಕಳಕೊಳ್ಳುತ್ತಾನೆ. ಅಲ್ಲಿಂದ ಆತನ ಬದುಕು ಇನ್ನೊಂದು ತಿರುವು ಪಡೆದುಕೊಳ್ಳುತ್ತದೆ. ಸಿಂಗ್ ಬ್ಲೇಡ್ ರನ್ನರ್ ಆಗುತ್ತಾನೆ, ಐದು ಮ್ಯಾರಥಾನ್ ಗಳಲ್ಲಿ ಚಿನ್ನದ ಪದಕ ಗೆಲ್ಲುತ್ತಾನೆ. ಆತನ ಓಟ ಇನ್ನೂ ನಿಂತಿಲ್ಲ. [ಈ ಕ್ಷಣದಿಂದಲೇ ಸಿಗರೇಟು ಸೇದೋದು ಬಿಡಿ]

ನನಗಿಷ್ಟವಾದ ಇನ್ನೊಂದು ಪ್ರಸಂಗವೆಂದರೆ 'ಆಶ್ರಮದ ಹಾದಿಯಲ್ಲಿ ನಡೆದವನಿಗೆ ಅಮ್ಮ ಕಾಣಿಸಿದಳು'. ಈ ಲೇಖನದ ಕಥಾನಾಯಕ ಕಾಲೇಜು ಪ್ರಾಧ್ಯಾಪಕನಾಗುವ ಕನಸು ಕಾಣುತ್ತಾ ಎಂಎ ಓದುತ್ತಾನೆ. ಆದರೆ ಲಂಚಕೇಳುವ ಆಡಳಿತ ಮಂಡಳಿಗಳಿಂದಾಗಿ ಈತನಿಗೆ ನೌಕರಿ ಸಿಗುವುದಿಲ್ಲ, ಕೊನೆಗೆ ಆತ ಡ್ರೈವರ್ ಆಗುತ್ತಾನೆ, ತನ್ನದೇ ಟ್ರಾವೆಲ್ಸ್ ಕಂಪನಿ ಶುರು ಮಾಡುತ್ತಾನೆ. ಈತ ಡ್ರೈವರ್ ಅನ್ನುವ ಕಾರಣಕ್ಕೆ ಪ್ರೀತಿಸಿದ ಹುಡುಗಿಯ ಜೊತೆ ಮದುವೆ ಸಾಧ್ಯವಾಗುವುದಿಲ್ಲ. ಭಗ್ನಪ್ರೇಮಿಯಾಗಿ ಅವಿವಾಹಿತನಾಗಿ ಉಳಿಯುವ ಈತನಿಗೆ ಒಂದು ದಿನ ತನ್ನದೇ ಟ್ರಾವೆಲ್ಸ್ ಕಂಪನಿಯಿಂದ ಅಜ್ಜಿಯೊಬ್ಬಳನ್ನು ಡ್ರಾಪ್ ಮಾಡಬೇಕಾದ ಸಂದರ್ಭ ಬರುತ್ತದೆ. ಕಾರಲ್ಲಿ ಹೋಗುತ್ತಿದ್ದಾಗ ಅಜ್ಜಿಯ ಕತೆ ತೆರೆದುಕೊಳ್ಳುತ್ತದೆ. ಆಕೆಗೆ ಕ್ಯಾನ್ಸರ್ ಆಗಿದೆ, ಆಕೆಯ ಮಕ್ಕಳು ವಿದೇಶದಲ್ಲಿದ್ದಾರೆ, ತನ್ನ ಮುಂದಿನ ಬದುಕನ್ನು ಆಶ್ರಮದಲ್ಲಿ ಕಳೆಯುವುದಕ್ಕೆ ನಿರ್ಧರಿಸಿರುವ ಆಕೆ ಈಗ ಅಲ್ಲಿಗೇ ತೆರಳುತ್ತಿದ್ದಾಳೆ.

ಆಶ್ರಮದ ಮುಂದೆ ಕಾರು ನಿಂತಾಗ ಆಕೆ ಕಾರಿನ ಬಾಡಿಗೆ ಕೊಡುವುದಕ್ಕೆ ಮುಂದಾಗುತ್ತಾಳೆ. ಈತ ನಿರಾಕರಿಸುತ್ತಾನೆ. 'ನಿನ್ನ ಮಕ್ಕಳಿಗೆ ಈ ಗೊಂಬೆಗಳನ್ನು ಕೊಡು' ಅನ್ನುತ್ತಾಳೆ. ಆದರೆ ಈತ 'ನೀನೇ ಯಾಕೆ ಬಂದು ನನ್ನ ಜೊತೆಗಿರಬಾರದು' ಅನ್ನುತ್ತಾನೆ. ಹೀಗೆ ಆ ಒಂದು ಕ್ಷಣದಲ್ಲಿ ಆಕೆಗೆ ಒಬ್ಬ ಮಗನೂ, ಈತನಿಗೆ ಒಬ್ಬ ತಾಯಿಯೂ ಸಿಗುತ್ತಾಳೆ. ಎಂಥಾ ಅದ್ಭುತ ಕತೆ. ಯಾರಾದರೂ ನಿರ್ಮಾಪಕರು ಮನಸ್ಸು ಮಾಡಿದರೆ 'ಬಂಗಾರದ ಮನುಷ್ಯ' ಥರದ್ದೇ ಮತ್ತೊಂದು ಸಿನಿಮಾ ಕನ್ನಡಕ್ಕೆ ದಕ್ಕಬಹುದು. ಕ್ಷಮಿಸಿ, ನಾನು ಸಿನಿಮಾ ಪತ್ರಕರ್ತನಾಗಿರುವುದರಿಂದ ಇಂಥಾ ದುಷ್ಟಯೋಚನೆ ಬಂದಿರಲಿಕ್ಕೂ ಸಾಕು.

ಹಾಗೆ ನೋಡುತ್ತಾ ಹೋದರೆ, 'ಮನಸ್ಸು ಮಾತಾಡಿತು' ಪುಸ್ತಕದಲ್ಲಿರುವ ಎಲ್ಲಾ ಲೇಖನಗಳನ್ನು ಸಾಕ್ಷ್ಯಚಿತ್ರಗಳನ್ನಾಗಿಸಬಹುದು. ಅಷ್ಟೇಕೆ ಸರ್ಕಾರ ಮನಸ್ಸು ಮಾಡಿದರೆ ಕಾಲೇಜುಗಳಿಗೆ ಇದನ್ನು ಪಠ್ಯಪುಸ್ತಕವನ್ನಾಗಿಸಬಹುದು. ಐಕಾನ್ ಗಳಿಲ್ಲದೇ ದಾರಿತಪ್ಪಿರುವ ಇಂದಿನ ಪೀಳಿಗೆಗೆ ಈ ಪುಸ್ತಕದಲ್ಲಿರುವ ಪಾತ್ರಗಳು ಮಾದರಿಯಾಗಬಹುದು. ಯುವಜನಾಂಗದಲ್ಲಿ ಜೀವನೋತ್ಸಾಹ ಬೆಳೆಸುವ, ಸ್ಫೂರ್ತಿಯನ್ನು ತುಂಬುವ ಕೆಲಸವನ್ನು ಈ ಪುಸ್ತಕ ಮಾಡಬಹುದು.

ಈ ಪುಸ್ತಕದಲ್ಲಿ ಇನ್ನಷ್ಟು ವಿಶೇಷಗಳಿವೆ. ಒಬ್ಬ ವ್ಯಕ್ತಿ ಅಥವಾ ಘಟನೆಯ ಬಗ್ಗೆ ಹೇಳುತ್ತಾ ಹೋಗುವ ಹೊತ್ತಲ್ಲಿ ಮಣಿಕಾಂತ್ ಒಂದಿಷ್ಟು ಸ್ವಾರಸ್ಯಕರ ಮಾಹಿತಿಗಳನ್ನೂ ಒದಗಿಸುತ್ತಾರೆ. 'ಚಮ್ಮಾರನ ಮಗ ತಾಜ್ ಮಹಲ್ ಎದುರೇ ಸ್ಟಾರ್ ಹೋಟೆಲ್ ಕಟ್ಟಿದ' ಲೇಖನದಲ್ಲಿ ಗೋಬರ್ ಚೌಕಿ ಎಂಬ ಊರಿನ ಪ್ರಸ್ತಾಪ ಬರುತ್ತದೆ. ಆ ಊರಿಗೆ ಆ ಹೆಸರು ಯಾಕೆ ಬಂತು? ತಾಜ್ ಮಹಲ್ ಕಟ್ಟುವುದಕ್ಕೆ ಅಮೃತಶಿಲೆಗಳನ್ನು ಸಾಗಿಸಲು ಬಳಸಲಾಗುತ್ತಿದ್ದ ಜಾನುವಾರುಗಳನ್ನು ಕಟ್ಟಿಹಾಕುತ್ತಿದ್ದ ಜಾಗವಂತೆ ಅದು. ಅಲ್ಲಿ ಸಗಣಿ ರಾಶಿಯಾಗಿ ಬೀಳುತ್ತಿದ್ದುದರಿಂದ ಗೋಬರ್ ಚೌಕಿ ಎಂಬ ಹೆಸರು ಬಂತು.

'ಮಾಡರ್ನ್ ವಿಶ್ವಾಮಿತ್ರ 1200 ಎಕರೆ ಕಾಡು ಸೃಷ್ಟಿಸಿದ' ಲೇಖನದಲ್ಲಿ ಇದೇ ಥರದ ಇನ್ನೊಂದು ಮಾಹಿತಿಯಿದೆ. ಫಲವತ್ತಾಗಿಲ್ಲದ ಜಾಗದಲ್ಲಿ ಗಿಡ ಬೆಳೆಯುವುದಕ್ಕೆ ಕೆಂಪಿರುವೆ ಸಹಾಯ ಮಾಡುತ್ತದೆಯಂತೆ. ಅದು ಹೇಗೆ? ಗೂಡು ನಿರ್ಮಾಣಕ್ಕಾಗಿ ಇರುವೆಗಳು ಗುಂಡಿ ತೋಡುತ್ತವೆ. ಕೆಲವು ಗಿಡಗಳು ಹೇನು ಸಾಕುತ್ತವೆ. ಆ ಹೇನುಗಳು ಸ್ರವಿಸುವ ಸಿಹಿದ್ರವವೇ ಇರುವೆಗಳ ಆಹಾರ. ಆಹಾರ ಕೊಂಡೊಯ್ಯುವ ನೆಪದಲ್ಲಿ ಇರುವೆಗಳು ಹೇನುಗಳನ್ನು ಸಾಗಿಸುತ್ತವೆ. ಆ ಜಾಗದಲ್ಲಿ ಗಿಡಗಳು ತಲೆಯೆತ್ತುತ್ತವೆ. ಎಷ್ಟು ಸರಳವಾದ ತರ್ಕ.

ಮಣಿಕಾಂತ್ ತಮ್ಮ ಲೇಖನಗಳಿಗೆ ನೀಡುವ ಶೀರ್ಷಿಕೆಗಳು ಗಮನ ಸೆಳೆಯುವಂಥಾದ್ದು. ಇದನ್ನು ಭೂತ ಕ್ರಿಯಾಪದ ಎಂದು ಕರೆಯಬಹುದೇನೋ. ಶೀರ್ಷಿಕೆಯ ಆರಂಭದ ಪದ ಕಥಾನಾಯಕನ ವೃತ್ತಿ ಅಥವಾ ಹಿಂದಿನ ಗತಿಸ್ಥಿತಿಯನ್ನು ಸೂಚಿಸಿದರೆ, ಕೊನೆಯ ಪದಗಳು ಆತನ ವರ್ತಮಾನವನ್ನು ಹೇಳುತ್ತವೆ. ಉದಾಹರಣೆಗೆ...

ಮನೆಕೆಲಸದ ಹೆಂಗಸು ಬೆಸ್ಟ ಸೆಲ್ಲರ್ ಪುಸ್ತಕ ಬರೆದಳು, ಚಮ್ಮಾರನ ಮಗ ತಾಜ್ ಮಹಲ್ ಎದುರೇ ಸ್ಟಾರ್ ಹೋಟೆಲ್ ಕಟ್ಟಿದ, ವೇಟರ್ ಆಗಿದ್ದ ಗಣೇಶ ಐಎಎಸ್ ಪಾಸ್ ಮಾಡಿದ, ಬರಿಗೈಲಿ ಬಂದ ಮಾಯಿಗೌಡ ಪುಸ್ತಕಗಳ ಮಹಲು ಕಟ್ಟಿದ, ಮಾಡರ್ನ್ ವಿಶ್ವಾಮಿತ್ರ 1200 ಎಕರೆ ಕಾಡು ಸೃಷ್ಟಿಸಿದ - ಮೊದಲಾದ ಶೀರ್ಷಿಕೆಗಳು. ಇಂಥಾ ಶೀರ್ಷಿಕೆಗಳೇ ಈ ಲೇಖನಗಳನ್ನು ಓದುವಂತೆ ನಮ್ಮನ್ನು ಪ್ರೇರೇಪಿಸುತ್ತವೆ.

ಪ್ರತಿಯೊಂದು ಲೇಖನವೂ ಜೀವನದ ಒಂದು ಮೌಲ್ಯವನ್ನು ಹೇಳುವುದು ಮತ್ತೊಂದು ಸೊಗಸು. ಲಾಟರಿ ಮಾರಾಟಗಾರ ಸುಧಾಕರನ ಕತೆಯಲ್ಲಿ ಪ್ರಾಮಾಣಿಕತೆ ಕಂಡರೆ, ಪುಸ್ತಕಪ್ರೇಮಿ ಮಾಯಿಗೌಡ ಆತ್ಮವಿಶ್ವಾಸಕ್ಕೆ ಸಂಕೇತ. ತಾಜ್ ಮಹಲ್ ಎದುರು ಹೋಟೆಲ್ ಕಟ್ಟಿದ ಚಮ್ಮಾರ ಛಲ ಮತ್ತು ಪರಿಶ್ರಮಕ್ಕೆ ಉಪಮೆಯಾಗುತ್ತಾನೆ.

ಲೇಖನಗಳ ನಿರೂಪಣೆಯಲ್ಲಿ ಮಣಿಕಾಂತ್ ಧಾರಾಳವಾಗಿ ಉದ್ಧರಣ ಚಿಹ್ನೆಗಳ ಮೊರೆ ಹೋಗುತ್ತಾರೆ. ಹಾಗಾಗಿ ಇಡೀ ಪ್ರಸಂಗವು ಕಥಾನಾಯಕನೇ ನಮ್ಮೆದುರು ಕುಳಿತು ತನ್ನದೇ ಭಾಷೆಯಲ್ಲಿ ನಿರೂಪಿಸಿದಂತಿರುತ್ತದೆ. ಲೇಖಕರು ಮಧ್ಯೆ ಎಲ್ಲೂ ಮೂಗುತೂರಿಸುವುದಿಲ್ಲ. ಪಾತ್ರವೇ ನಮ್ಮ ಮುಂದೆ ಕುಳಿತು ತನ್ನ ಕತೆ ಹೇಳುತ್ತದೆ. ಇಲ್ಲಿ ಮಣಿಕಾಂತ್ ಸೂತ್ರಧಾರ ಅಷ್ಟೆ. ಆದರೂ ಅವರು ಕೊನೆಗೊಂದು ಷರಾ ಬರೆಯುತ್ತಾರೆ. ಅದು ಇಡೀ ಲೇಖನದ ಸಾರಸಂಗ್ರಹದ ಜೊತೆ ಒಂದು ನೀತಿಪಾಠವನ್ನೂ ಹೇಳುತ್ತದೆ.

ಪತ್ರಿಕೆಗಳ ಅಂಕಣ ಬರಹಗಳಿಗೆ ಒಂದು ಮಿತಿ ಇರುತ್ತದೆ. ನೀವು ಹೇಳಬೇಕಾಗಿರುವುದನ್ನು ಒಂದು ಸೀಮಿತ ಚೌಕಟ್ಟೊಳಗೆ ಮುಗಿಸಬೇಕು. ಜಾಸ್ತಿಯಾಗುವಂತಿಲ್ಲ, ಕಡಿಮೆ ಆಗುವಂತೆಯೂ ಇಲ್ಲ. ಅದೊಂದು ಕಲೆ. ಮಣಿಕಾಂತ್ ಅವರಿಗೆ ಅದು ಕರಗತವಾಗಿದೆ. ಹಳೆಯ ರಾಜ್ ಕುಮಾರ್ ಚಿತ್ರಗಳಲ್ಲಷ್ಟೇ ಕಾಣಿಸುವ ಅತಿಯಾದ ಆದರ್ಶ ಮತ್ತು ಭಾವುಕತೆಯನ್ನೇ ನೆಚ್ಚಿಕೊಂಡು ಮಣಿ ಬರೆಯುತ್ತಿದ್ದಾರೆ ಎಂದು ಕೆಲವೊಮ್ಮೆ ನಿಮಗೆ ಅನಿಸಬಹುದು. ಆದರೆ ಬದಲಾದ ಕಾಲಘಟ್ಟದಲ್ಲಿ ಇಂಥಾ ಬರವಣಿಗೆಯ ಅಗತ್ಯ ನಮಗಿದೆ. ನಮ್ಮನ್ನು ಕಾಡುತ್ತಿರುವ ಸಿನಿಕತನದಿಂದ ಪಾರಾಗುವುದಕ್ಕಾದರೂ ಮಣಿ ಲೇಖನಗಳನ್ನು ಓದಬೇಕಾಗಿದೆ. ಪೀಯೂಸಿಯಲ್ಲಿ ಅಂದುಕೊಂಡಷ್ಟು ಅಂಕಗಳು ಸಿಗಲಿಲ್ಲ ಎಂಬ ಕಾರಣಕ್ಕೆ ನೇಣುಹಾಕಿಕೊಂಡು ಸಾಯುವ ಹುಡುಗಿ ಕೈಗೆ ಇಂಥಾದ್ದೊಂದು ಪುಸ್ತಕ ಸಿಕ್ಕಿದ್ದರೆ ಆಕೆ ಮನಸ್ಸು ಬದಲಾಯಿಸುತ್ತಿದ್ದಳೇನೋ ಅನ್ನುವ ಆಶಾವಾದ ನನ್ನದು. ಯಾಕೆಂದರೆ ಇಲ್ಲಿರುವ ಎಲ್ಲಾ ಪಾತ್ರಗಳು ನಾವು ಜೀವನದಲ್ಲಿ ಅತ್ಯಂತ ಬೇಸತ್ತ ಕ್ಷಣಗಳಲ್ಲಿ ನೆನಪಾಗಬೇಕಾದ ಪಾತ್ರಗಳೇ.

ಅಂಥಾ ಪಾತ್ರಗಳನ್ನು ಹುಡುಕಿ, ಕೈ ಹಿಡಿದು ಕರಕೊಂಡು ಬಂದು ನಮ್ಮ ಮುಂದೆ ನಿಲ್ಲಿಸಿ ಅವರ ಕತೆ ಕೇಳಿಸಿದ ಮಣಿಕಾಂತ್ ಅವರಿಗೆ ನನ್ನ ದೊಡ್ಡ ಥ್ಯಾಂಕ್ಸ್.

(ವಿ.ಸೂ. : ಮನಸು ಮಾತಾಡಿತು ಅಂಕಣ ಬರಹಗಳ ಸಂಕಲನ ಇದೇ ಗುರುವಾರ, ಜುಲೈ 28ರಿಂದ ಕರ್ನಾಟಕದ ಎಲ್ಲಾ ಪುಸ್ತಕದಂಗಡಿಗಳಲ್ಲಿ ಸಿಗುತ್ತದೆ. ಸಪ್ನಾ, ನವ ಕರ್ನಾಟಕ ದಲ್ಲಿ ಆನ್ ಲೈನ್ ಬುಕ್ಕಿಂಗ್ ಕೂಡ ಇದೆ.)

English summary
Manikanth, one of the prominent Kannada writers has come out with another book 'Manasu Mataditu', a compilation of his weekly column in Kannada daily Kannada Prabha. The book is hitting the shelf on 28th July. Senior Journalist Uday Marakini has written the foreword to this essay collections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X