ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾರ ತೂಗಿದಂತೆ ಜೋಶಿ ಬರೆಯುತ್ತಾರೆ : ವಿಶ್ವೇಶ್ವರ ಭಟ್

By Prasad
|
Google Oneindia Kannada News

ಅಕಾರದಿಂದಲೇ ಆದಿತ್ಯವಾರದ ಅಂಕಣವನ್ನು ಆರಂಭಿಸುವ ಅಕ್ಷರ ಕೃಷಿಕ ಶ್ರೀವತ್ಸ ಜೋಶಿಯವರ ಅಂಕಣಬರಹಗಳ ಸಂಕಲನ ಪರ್ಣಮಾಲೆ-1 ಮತ್ತು ಪರ್ಣಮಾಲೆ-2 ಎಂಬ ಎರಡು ಪುಸ್ತಕಗಳು ಅನೌಪಚಾರಿಕವಾಗಿ ಬಿಡುಗಡೆಯಾಗಿವೆ.

ಈ ಸುಂದರ ಕಾರ್ಯಕ್ರಮಕ್ಕೆ ಮತ್ತಷ್ಟು 'ಅ'ಕಾರಗಳು ಸೊಗಸು ತಂದಿದ್ದವು. ಅಮೆರಿಕದಿಂದ ಬೆಂಗಳೂರಿಗೆ ಬಂದಿರುವ ಅನುಪಮಾ ಮಂಗಳವೇಢೆ ಅವರ ಅಸ್ಖಲಿತ ಕನ್ನಡದ ನಿರೂಪಣೆಯಿದ್ದರೆ, ಪುಸ್ತಕವನ್ನು ಪ್ರಕಟಿಸಿದವರು ಅಶ್ವತ್ಥನಾರಾಯಣ ಸುಬ್ರಮಣ್ಯ ಅವರು. ಕಾರ್ಯಕ್ರಮಕ್ಕೆ ಬಂದಿದ್ದವರೆಲ್ಲರೂ ಕೂಡ ಅಕ್ಷರ ಪ್ರೇಮಿಗಳೇ.

In Pics : ಶ್ರೀವತ್ಸ ಜೋಶಿಯವರ 'ತಿಳಿರು ತೋರಣ' ಬಿಡುಗಡೆ

ಈ ಕಾರ್ಯಕ್ರಮ ಕೂಡ ಹಲವು ವಿಶೇಷತೆಗಳ ಸಮಾಗಮವಾಗಿತ್ತು. ಪುಸ್ತಕ ಬಿಡುಗಡೆಯನ್ನು ಮೊದಲೇ ನಿರ್ಧರಿಸಿ ಕರೆದುಕೊಂಡು ಬಂದ ಮುಖ್ಯ ಅತಿಥಿಗಳಿಂದ ಬಿಡುಗಡೆ ಮಾಡದೆ, ಸಭಿಕರಲ್ಲಿಯೇ ಕುಳಿತಿದ್ದ, ಶ್ರೀವತ್ಸ ಜೋಶಿಯವರ ಅಭಿಮಾನಿ ಬಳಗದಲ್ಲಿರುವ, ಶಿವಮೊಗ್ಗದ ಪದ್ಮಿನಿ ಅಶೋಕ್ ಅವರಿಂದ ಬಿಡುಗಡೆ ಮಾಡಿಸಿದ್ದು.

ಎಲ್ಲರ ಮಾತುಗಳಲ್ಲಿಯೂ 'ಅ'ಕಾರದ ಬಗ್ಗೆಯೇ ಮಾತು, ಚರ್ಚೆ ನಡೆಯುತ್ತಿದ್ದುದರಿಂದ, ಎರಡೂ ಪುಸ್ತಕ ಬಿಡುಗಡೆ ಮಾಡಿದ, ಪದ್ಮಿನಿ ಅಶೋಕ್ ಅವರನ್ನು 'ಅಶೋಕರ ಪದ್ಮಿನಿ' ಎಂಬುದಾಗಿ ಸಂಬೋಧಿಸಬಹುದಾಗಿತ್ತು ಎಂದು ಪುಸ್ತಕ ಪ್ರಕಟಿಸಿರುವ ಅಶ್ವತ್ಥನಾರಾಯಣ ಸುಬ್ರಮಣ್ಯ ಅವರು ನಗೆ ಚಟಾಕಿ ಹಾರಿಸಿದರು.

ಬೆಂಗಳೂರಿನ ಬನಶಂಕರಿಯಲ್ಲಿರುವ ಸುಚಿತ್ರಾ ಸಿನೆಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಆವರಣದ ನಾಣಿ ಅಂಗಳದಲ್ಲಿ ಸಭಾಂಗಣ ತುಂಬಿ ತುಳುಕುವಷ್ಟು ಪುಸ್ತಕ ಪ್ರೇಮಿಗಳು ಸೇರಿದ್ದರು. ಕರ್ನಾಟಕದ ಹಲವು ಕಡೆಗಳಿಂದ ಮಾತ್ರವಲ್ಲ ಅಮೆರಿಕದಿಂದಲೂ ಹಲವರು ಬಂದಿದ್ದರು. ಉಪ್ಪಿಟ್ಟು ಕಾಫಿ ಹೀರಿದ ಎಲ್ಲರಲ್ಲಿಯೂ ನಗೆ ತುಳುಕಾಡುವಂತೆ ವಾಗ್ಝರಿಗಳು ವೇದಿಕೆಯ ಮೇಲಿಂದ ತೇಲಿಬರುತ್ತಿದ್ದವು.

ಇಸ್ತ್ರಿ ಅಂಗಿ ಧರಿಸಿಯೇ ಜೋಶಿ ಬರೆಯುತ್ತಾರೆ

ಇಸ್ತ್ರಿ ಅಂಗಿ ಧರಿಸಿಯೇ ಜೋಶಿ ಬರೆಯುತ್ತಾರೆ

ಶ್ರೀವತ್ಸ ಜೋಶಿಯವರು ಅಂಕಣ ಬರೆಯುವ ಮುನ್ನ ನೀಟಾಗಿ ಇಸ್ತ್ರಿ ಮಾಡಿದ ಅಂಗಿ ಧರಿಸಿಯೇ ಲೇಖನ ಬರೆಯಲು ಕೂಡುತ್ತಾರೆ. ಅಕ್ಷರ ಮಿತಿಗಳ ಅರಿವಿಟ್ಟುಕೊಂಡೇ, ಒಂದೇ ಒಂದು ಪದವನ್ನೂ ಬದಲಿಸಲಾಗದಂತೆ, ಅತ್ಯಂತ ಸ್ವಾರಸ್ಯಕರವಾದ ಪದಗಳನ್ನು ಹೆಣೆದು ಬರೆಯುವ ಅವರ ನೈಪುಣ್ಯತೆಯೇ ಸೋಜಿಗ ಎಂದು ಅತಿಥಿಯಾಗಿ ಆಗಮಿಸಿದ್ದ, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಅವರು ಜೋಶಿಯವರನ್ನು ಹೊಗಳಿದರು.

ಅಮೆರಿಕದಲ್ಲಿದ್ದು ಜೋಶಿ ಬರೆಯುತ್ತಿರುವುದೇ ಅಚ್ಚರಿ

ಅಮೆರಿಕದಲ್ಲಿದ್ದು ಜೋಶಿ ಬರೆಯುತ್ತಿರುವುದೇ ಅಚ್ಚರಿ

ಶ್ರೀವತ್ಸ ಜೋಶಿಯವರ ಬರಹಗಳು ಬಂಗಾರ ತೂಗಿದಂತೆ ಇರುತ್ತವೆ ಎಂದ ಭಟ್ಟರು, ದೂರದ ಅಮೆರಿಕದಲ್ಲಿದ್ದೂ, ಕಳೆದ ಹದಿನಾರು ವರ್ಷಗಳಿಂದ ಎಂದೂ ತಪ್ಪದೆ ಅತ್ಯಂತ ಶಿಸ್ತಿನಿಂದ ಅಂಕಣ ಬರೆಯುತ್ತಿರುವುದು ನಿಜಕ್ಕೂ ಅಚ್ಚರಿ ಎಂದರು ವಿಶ್ವೇಶ್ವರ ಭಟ್ಟರು. ಇಂದು ಎಲ್ಲವೂ ಸುಲಭವಾಗಿ ನಡೆಯುತ್ತಿದೆ, ಆದರೆ ಬರೆಯುವುದು ಕಷ್ಟ. ಕೇವಲ 15 ಸಾವಿರಕ್ಕೆ ಸುಪಾರಿ ಕೊಟ್ಟುಬಿಡಬಹುದು, ಆದರೆ, ಲೇಖಕರಿಂದ ಬರೆಸುವುದು ಎಷ್ಟು ಕಷ್ಟಕರ ಎಂದು ಮಾರ್ಮಿಕವಾಗಿ ನುಡಿದರು.

ಓದುಗ ಅಭಿಮಾನಿಯಿಂದಲೇ ಪುಸ್ತಕ ಬಿಡುಗಡೆ

ಓದುಗ ಅಭಿಮಾನಿಯಿಂದಲೇ ಪುಸ್ತಕ ಬಿಡುಗಡೆ

ಮೊದಲ ಪುಸ್ತಕ ಬಿಡುಗಡೆಯಾದಾಗಿನ ಪ್ರಸಂಗಗಳನ್ನು ಹಿಡಿದುಕೊಂಡು ಇಂದಿನವರೆಗೆ ಅಂಕಣ ಪಯಣದ ಬಗ್ಗೆ ಕೆಲ ಮಾತುಗಳಲ್ಲಿ ವರ್ಣಿಸಿದ ಶ್ರೀವತ್ಸ ಜೋಶಿಯವರು, ಕಾರ್ಯಕ್ರಮ ಅನೌಪಚಾರಿಕವಾಗಿರಲಿ, ಮೋದಿ, ಅಪನಗದೀಕರಣದ ಬಗ್ಗೆ ಭಾಷಣಗಳನ್ನು ಕೊರೆಸುವವರ ಬದಲು, ನಮ್ಮಲ್ಲೊಬ್ಬರೇ ಪುಸ್ತಕ ಬಿಡುಗಡೆ ಮಾಡಲೆಂದು ನಿರ್ಧರಿಸಿದ್ದಾಗಿ ಹೇಳಿ ಹೊಸ ಸಂಪ್ರದಾಯವನ್ನು ಆರಂಭಿಸಿದ್ದಾರೆ.

ಅಮೆರಿಕದಲ್ಲಿದ್ದುಕೊಂಡು ಏನು ಮಾಡುತ್ತೀರಿ?

ಅಮೆರಿಕದಲ್ಲಿದ್ದುಕೊಂಡು ಏನು ಮಾಡುತ್ತೀರಿ?

ಕೊನೆಯಲ್ಲಿ ಸಭಿಕರೊಂದಿಗೆ ಮುಕ್ತ ಸಂವಾದದ ಅವಕಾಶವನ್ನು ಒದಗಿಸಲಾಗಿತ್ತು. ಮೊದಲ ಪ್ರಶ್ನೆಯನ್ನು ವೇದಿಕೆಯ ಮೇಲಿದ್ದ ವಿಶ್ವೇಶ್ವರ ಭಟ್ ಅವರೇ ಆರಂಭಿಸಿದರು. ಅಮೆರಿಕದಲ್ಲಿದ್ದುಕೊಂಡು, ಕಳೆದ ಹದಿನಾರು ವರ್ಷಗಳಿಂದ ಅಂಕಣಗಳನ್ನು ತಪ್ಪದೆ ಬರೆದುಕೊಂಡು, ಫೇಸ್ ಬುಕ್ಕಿನಲ್ಲಿ ನಿರಂತರವಾಗಿ ಬರೆಯುವುದಲ್ಲದೆ, ಪ್ರತಿಯೊಬ್ಬರಿಗೂ ಪ್ರತಿಕ್ರಿಯೆ ನೀಡುತ್ತಿರುತ್ತೀರಿ. ಹಾಗಿದ್ರೆ ಅಮೆರಿಕದಲ್ಲಿದ್ದುಕೊಂಡು ಏನು ಮಾಡುತ್ತೀರಿ? ಎಂದು ಭಟ್ಟರು ವಾಗ್ಬಾಣ ಬಿಟ್ಟರು.

ಒಬ್ಬ 'ಪತ್ರಕರ್ತ'ನಂತೆ ಹೇಗೆ ಯೋಚಿಸುತ್ತೇನೆ

ಒಬ್ಬ 'ಪತ್ರಕರ್ತ'ನಂತೆ ಹೇಗೆ ಯೋಚಿಸುತ್ತೇನೆ

ಈ ಪ್ರಶ್ನೆಗೆ ಶ್ರೀವತ್ಸ ಜೋಶಿಯವರು, ಅಮೆರಿಕದಲ್ಲಿ ತಾವು ಮಾಡುತ್ತಿರುವುದೇನು, ಚಿಕ್ಕಂದಿನಲ್ಲಿಯೇ ಅಕ್ಷರ ದುಡಿಮೆಯ ಬಗ್ಗೆ ತಮಗೆ ಹೇಗೆ ಪ್ರೀತಿ ಹುಟ್ಟಿತು, ತಾವು ಕೂಡ ಒಬ್ಬ 'ಪತ್ರಕರ್ತ'ನಂತೆ ಹೇಗೆ ಯೋಚಿಸುತ್ತೇನೆ, ತಪ್ಪುಒಪ್ಪುಗಳನ್ನು ಹೇಗೆ ಪರಾಮರ್ಶಿಸಿ ಪತ್ರಿಕೆಯ ಲೇಖನಗಳ ಮೌಲ್ಯ ಹೆಚ್ಚಿಸಲು ಪ್ರಯತ್ನ ಪಡುತ್ತೇನೆ ಮುಂತಾದ ಸಂಗತಿಗಳನ್ನು ಸ್ವಾರಸ್ಯಕರವಾಗಿ ಹಂಚಿಕೊಂಡರು.

English summary
Kannada columnist Srivathsa Joshi's two books, collection of columns in Vishwavani, released on December 16, at Suchitra Film Society, Banashankari, Bengaluru. Journalist Vishweshwar Bhat was the chief guest. The books were released informally by one of the audience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X