• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಡಿನ ಜಾಗದಲ್ಲಿ ಬುದ್ಧಿವಂತಿಕೆಯ ತೋಪು ನೆಟ್ಟಿರುವ ಭೈರಪ್ಪ

By ವಿಜಯರಾಘವನ್
|

ಕಥೆಗಳಿಗೂ ಭಾರತೀಯ ಬದುಕಿಗೂ ಅವಿನಾಭಾವ ಸಂಬಂಧವಿದೆ. ಅದನ್ನು ಕಳೆದರೆ ನಮಗೆ ಬದುಕಿನಲ್ಲಿ ಏನೂ ಉಳಿಯುವುದಿಲ್ಲ. ತೆಲುಗಿನಲ್ಲಿ ಎನ್ ಟಿಆರ್ ನಟಿಸಿದ ಸಂಪೂರ್ಣ ರಾಮಾಯಣದ ಕಥೆಯ ಒಂದು ಚಲನಚಿತ್ರವಿದೆ. ಮೂರೂವರೆ ಘಂಟೆಯ ಆ ಚಲನಚಿತ್ರದಲ್ಲಿ ರಾಮಾಯಣದ ಕಥೆ ಎಂಥ ಮಾಯಾನಿರೂಪಣೆಯಿಂದ ಮುಗಿಯುತ್ತದೆಂದರೆ ಅದನ್ನು ಮರೆಯಲು ಸಾಧ್ಯವೇ ಇಲ್ಲ.

ಅಂಥದೇ ಕಥೆ ಲವಕುಶ. ಅವು ಮನಸ್ಸಿನಲ್ಲಿ ಹುಟ್ಟುಹಾಕುವ ಕನಸುಗಳಿಗೆ ಕೊನೆಯೇ ಇಲ್ಲ. ಭೈರಪ್ಪನವರು ತಮ್ಮ ಕಥಾನಕದಲ್ಲಿ ನಮ್ಮೆಲ್ಲ ಮಹೋಪಮೆಗಳನ್ನೂ ಕನಸುಗಳನ್ನೂ ನಿರ್ಮೂಲ ಮಾಡಿ ಕಾಡಿನ ಜಾಗದಲ್ಲಿ ಬುದ್ಧಿವಂತಿಕೆಯ ತೋಪು ನೆಟ್ಟಿದ್ದಾರೆ. ಅವರಲ್ಲಿ ಪಾತ್ರಗಳ ಕುರಿತ ಅನುಕಂಪವಿಲ್ಲ. ಬದಲಿಗೆ ಒಂದು ಬಗೆಯ ಇದೇ ಸರಿಯೆಂಬ ತರ್ಕವಿದೆ. ಮಹಾಕಾವ್ಯವು ತರ್ಕಾತೀತವೆನ್ನುವ ಔದಾರ್ಯದ ಸುಳಿಯಿಂದ ಅವರು ತಪ್ಪಿಸಿಕೊಂಡು ನಡುಗಡ್ಡೆಯ ಕೋಡನ್ನೆರಿ ಕೂತುಬಿಟ್ಟಿದ್ದಾರೆ.

ಅವರ ರಾಮನಿಗೆ ಧರ್ಮವೇ ಶುದ್ಧಿಯಾಗಿದೆ, ಆದರೆ ಆ ಧರ್ಮವೇ ಅವನ ಮಟ್ಟಿಗೆ ಶುದ್ಧಿಯಾಗಿಲ್ಲ. ಅದನ್ನು ಅವನ ಕೈಲಿ ಸೋಸಲಾಗಿಲ್ಲ. ಅವನು ತನ್ನ ಜೊತೆಗಿದ್ದವರ ಆತ್ಮೋದ್ಧಾರಕ್ಕೆ ನೆರವಾಗುವವನಲ್ಲ. ಸ್ವಯಂಕೇಂದ್ರಿತನಾಗಿ ಕೊನೆಗೆ ತನ್ನ ಸೋಲಿನಿಂದ ಚಿಕ್ಕವರಾದ ಕುಶ ಲವರಿಗೆ ಅಧಿಕಾರ ಹಸ್ತಾಂತರಿಸಿ ಸರಯೂ ನದಿಯ ಪಾಲಾಗುವವನು. ಎಲ್ಲ ಪರಿಹರಿಸಿಕೊಳ್ಳದ ದ್ವಂದ್ವಗಳ ಜನರ ಸಾಮಾನ್ಯ ಕತೆಯಂತೆಯೇ ರಾಮನ ಬದುಕೂ ಈ ಕಥಾನಕದಲ್ಲಿ ಕಳೆದುಹೋಗುತ್ತದೆ.

ರಾಮನಿಗೆ ಹೋಲಿಸಿದರೆ ಸೀತೆಯೇ ಅತಿ ಹೆಚ್ಚು ತಳಮಳಗಳನ್ನು ಅನುಭವಿಸುವವಳು. ಅವಳದೊಂದು ದುರ್ಬಲ ಮನಸ್ಸು. ಯಾವಾಗಲೂ ಅವಳಿಗೆ ಯಾವುದೂ ಒಮ್ಮೆಲೇ ಅದರೆಲ್ಲ ಆಯಾಮಗಳೊಂದಿಗೆ ದಕ್ಕುವುದೇ ಇಲ್ಲ. ಅವಳು ನೆಲಕ್ಕೆ ಮರಳಿ ಕೃಷಿಕಳಾಗುವ ಇಚ್ಛೆ ತೋರಿದಾಗ ಅವಳಿಗೆ ಎದುರಾಗುವ ಪ್ರಶ್ನೆ ಉಳಿದವರು ಹೇಳುವ ಜಿಂಕೆ ಹಂದಿಗಳು ತಿಂದುಬಿಟ್ಟರೆ? ಎನ್ನುವುದು.

ವಾಲ್ಮೀಕಿಗಳು ಅನ್ನುವ ಮಾತು ರಕ್ಷಿಸಿಕೊಳ್ಳಲು ಆಗದಿರುವ ಏನನ್ನೂ ಮಾಡಬಾರದು ಎಂದು ಸೂಚಿಸುವಂತಿದೆ. ಇದು ನೆಲ ಮತ್ತು ಸಂಪನ್ಮೂಲ ಹಾಗೂ ಮಹಿಳೆಯರ ಕುರಿತ ಪುರುಷ ನೋಟದ ಸಮಸ್ಯೆಗಳು. ಈ ವ್ಯಕ್ತಿತ್ವದ ಫಲವಾಗಿಯೇ ಸೀತೆ ಗಂಗೆ ದಾಟುವಾಗ ಮುಂತಾಗಿ ಹಲವೆಡೆ ಎಲ್ಲರೊಳಿತಿಗಾಗಿ ಹರಕೆಗಳನ್ನು ತೊಡುತ್ತಾಳೆ. ಹರಕೆಗಳು ಪುರುಷರ ಅಗತ್ಯವಾಗುವುದಿಲ್ಲ. ಜೊತೆಗೆ ಅವರಿಗೆ ತಮ್ಮ ಬದುಕಿನ ಬಗ್ಗೆ ಪಶ್ಚಾತ್ತಾಪವೂ ಇಲ್ಲ. ಅದೇನಿದ್ದರೂ ತಮ್ಮ ತಪ್ಪುಗಳನ್ನು ಸರಿಯೆಂದು, ಶಾಪದ ಫಲವೆಂದು ಸಾಧಿಸಲು ಬಳಸಿಕೊಳ್ಳುವ ಅಸ್ತ್ರಗಳಾಗಿವೆ. ಆಡಳಿತ ನಡೆಸಲಾರದ ಭರತ ಪಾದುಕೆಯ ಆಳ್ವಿಕೆಯ ನೆಪದಲ್ಲಿ ಅರಾಜಕತೆಯನ್ನು ನಿರ್ಮಿಸುತ್ತಾನೆ. ಅದರ ವಿವರಣೆ ಇನ್ನಷ್ಟು ಚರ್ಚೆ ಬೇಡುತ್ತದೆ.

ಉತ್ತರಕಾಂಡದ ಹೆಸರಿನಲ್ಲಿ ಭೈರಪ್ಪ ಬರೆದಿರುವುದು ಉತ್ತರಪೂರ್ವಕಾಂಡದ ಕತೆಯನ್ನು. ಉತ್ತರಕಾಂಡದ ಕತೆ ಕೆಲವು ಪುಟಗಳಿರಬಹುದು. ಉತ್ತರಕಾಂಡದ ಅಶ್ವಮೇಧ ಕುದುರೆಯ ಕತೆಯೂ ಅತ್ಯಂತ ಸಾಮಾನ್ಯಗೊಳಿಸಲ್ಪಟ್ಟಿದೆ. ಒಟ್ಟಿನಲ್ಲಿ ಉಪ್ಪಿನ ಗುಣ ಕಳೆದುಕೊಂಡ ಉಪ್ಪು ಹಾಕಿದ ಅಡುಗೆಯನ್ನು ಭೈರಪ್ಪನವರು ನಮಗೆ ಉಣಬಡಿಸಿದ್ದಾರೆ. ಕಳಚಿಕೊಂಡ ಪಾತ್ರಗಳು, ಹರಳುಗಟ್ಟದ ಚಿಂತನೆಗಳು ಇವು ಕಾದಂಬರಿಯ ಯಶಸ್ಸಿಗೆ ಕಡಿವಾಣ ಹಾಕಿಬಿಟ್ಟಿವೆ.

ಇಷ್ಟು ದೊಡ್ಡ ಕಾದಂಬರಿಯನ್ನು ಮಹಾಕಾವ್ಯವೆಂಬ ಎಲ್ಲ ಕುತೂಹಲದಿಂದ ಭೈರಪ್ಪನವರ ಕಾದಂಬರಿಯೆಂದು ಓದಿದ ಬಳಿಕ ಪ್ರಶ್ನೆಯೊಂದು ಮೂಡುತ್ತದೆ. ಮನುಷ್ಯನ ಮನಸ್ಸು ಅದಮ್ಯ ಕುತೂಹಲಗಳ, ಮ್ಯಾಜಿಕಲ್ ಆದದ್ದರ ಕನಸುಗಳನ್ನು ತುಂಬಿಕೊಂಡಿರುವಂಥದ್ದು. ಚಂದಮಾಮ, ರಕ್ಕಸರು, ಬೇತಾಳಗಳು, ಮಾತನಾಡುವ ಮರ-ಗಿಡ-ಪ್ರಾಣಿಗಳು, ಹ್ಯಾರಿ ಪಾಟರ್, ಟಾಮ್ ಅಂಡ್ ಜೆರ್ರಿಗಳ ಕಲ್ಪಕ ಶಕ್ತಿಯನ್ನು ಬುಲ್‍ಡೋಜ್ ಮಾಡಿ ಭೈರಪ್ಪನವರು ತಮ್ಮ ಹೊಸ ಕಗ್ಗ ಹೊಸೆದಿದ್ದಾರೆ. ಹಾಗೆ ಮಾಡುವುದರ ಮೂಲಕ ಜನರ ಮುಗ್ಧತೆಯನ್ನು, ಕಣ್ಣಲ್ಲಿನ ಕನಸುಗಳನ್ನು, ಪಾತ್ರಗಳ ಕುರಿತ ಮೋಹವನ್ನು, ಹೆಮ್ಮೆಯನ್ನು, ಆರ್ಡಿನರಿ ಅಲ್ಲದ ಎಲ್ಲವನ್ನೂ ಕದ್ದುಬಿಟ್ಟಿದ್ದಾರೆ. ಹಾಗೆ ಮಾಡುವುದು ವಿಹಿತವೇ?

ಭೈರಪ್ಪನವರು ಏನು ಹೇಳುವರೆಂದು ಗೊತ್ತಿಲ್ಲ. ಅವರಿಗೆ ಅವರದೇ ಆದ ಸಮರ್ಥನೆಗಳಿರಬಹುದು. ಆದರೆ ಕಾದಂಬರಿಯ ಕೊನೆಯಲ್ಲಿ ಅವರು ತಾರಕನ ಹತ್ತಿರ ವಾಲ್ಮೀಕಿ ಮುನಿಗಳ ಕೈಲಿ ಒಂದು ಮಾತು ಹೇಳಿಸಿದ್ದಾರೆ: "ಕತೆಯನ್ನು ಸುಖಾಂತ್ಯ ಮಾಡಬೇಕು ಅಂತ ನಾನೇ ಅಯೋಧ್ಯೆಗೆ ಹೋಗಿ ಧರ್ಮಸಭೆ ಏರ್ಪಡಿಸಿದೆ. ಆದರೂ ಕಥೆಯ ದಿಕ್ಕನ್ನು ಬದಲಿಸಲು ಆಗಲಿಲ್ಲ. ಕಾವ್ಯದಲ್ಲಿ ಕೂಡಾ ಸುಖವನ್ನು ಸೃಷ್ಟಿಸುವುದು ಸಾಧ್ಯವಿಲ್ಲದಂತಾಯಿತಲ್ಲ! ಕವಿಯು ಏನನ್ನು ತಾನೇ ಬದಲಿಸಬಲ್ಲ? ಎಂಬ ವೈಫಲ್ಯ ಬಾಧಿಸುತ್ತಿದೆ. ಇನ್ನು ಮುಗಿಸೋದೇನಿದೆ?" ಎಂದು. ಈ ಮಾತು ಅವರಿಗಷ್ಟೇ ಅನ್ವಯವಾಗುವಂಥದ್ದು ಎಂದು ಓದುಗರಿಗೆ ಅನ್ನಿಸದೆ ಇರದು.

ಆದರೆ ಒಂದು ಮಾತು. ಭೈರಪ್ಪನವರು ಇನ್ನೂ ಬಹಳ ಮುಖ್ಯವಾದ ಕೃತಿಗಳನ್ನು ರಚಿಸಬಲ್ಲರೆಂಬುದಕ್ಕೆ ಕಾದಂಬರಿಯ ಕೊನೆಯ ಇಪ್ಪತ್ತು ಮೂವತ್ತು ಪುಟಗಳು ಸಾಕ್ಷಿಯಾಗಿವೆ. ಅವರ ತೀಕ್ಷ್ಣ ವಿಚಾರಮತಿಯು ಇಲ್ಲಿ ಪ್ರಕಾಶಕ್ಕೆ ಬರುತ್ತದೆ. ಜೊತೆಗೇ ಪರ್ವದ ಹಿಡಿತದಿಂದ ಅವರು ತಪ್ಪಿಸಿಕೊಂಡಿಲ್ಲ ಎನ್ನುವುದೂ ಗಮನಕ್ಕೆ ಬರುತ್ತದೆ. ಆದರೆ ಪರ್ವ ಗೆದ್ದಿದ್ದರೆ ಉತ್ತರಕಾಂಡ ಹಲವು ಕಾರಣಗಳಿಂದ ಸೋಲುತ್ತದೆ. ಇದು ಭೈರಪ್ಪನವರ ಪರ್ವಾನಂತರದ ಸಾಹಿತ್ಯದ ದುರಂತ. ಮುಂದುವರಿಯುವುದು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada wellknown novelist, Indian writer SL Bhyrappa's new novel Uttarakhanda review by Vijayaraghavan, writer from Kolar district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more