ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾದಂಬರಿಯಲ್ಲಿ ಡಿ-ಮಿಥಿಫೈ ಆದ ಅಂಶಗಳು

By ವಿಜಯರಾಘವನ್
|
Google Oneindia Kannada News

ಈ ಲೇಖನವನ್ನು ದೀರ್ಘಗೊಳಿಸದಿರಲು ಕೆಳಗೆ ನಾನೊಂದು ಪಟ್ಟಿಯನ್ನು ಕೊಡುತ್ತೇನೆ; ಇವು ಡಿ-ಮಿಥಿಫೈ ಆದ ಮುಖ್ಯ ವಿಚಾರಗಳು.

1. ಈಗಾಗಲೇ ಹೇಳಿದ ಪಾಯಸದ ಪ್ರಕರಣ. ದಶರಥನು ಪುತ್ರಕಾಮೇಷ್ಠಿ ಯಾಗ ಮಾಡಿಸುವುದಿಲ್ಲವಾದ್ದರಿಂದ ಯಜ್ಞಕುಂಡದಿಂದ ದಿವ್ಯ ಪುರುಷನು ಬಂದು ಪಾಯಸದ ಪಾತ್ರೆಯನ್ನು ಕೊಡುವುದಿಲ್ಲ. ಬದಲಿಗೆ ಹಿಮಾಲಯದ ವೈದ್ಯನೊಬ್ಬನಿಂದ ದೀರ್ಘಕಾಲೀನ ಔಷಧ ಚಿಕಿತ್ಸೆಗೆ ತನ್ನನ್ನು, ತನ್ನ ಅರಸಿಯರನ್ನೂ ದಶರಥ ಒಳಪಡಿಸಿಕೊಳ್ಳುತ್ತಾನೆ. ಅದರಿಂದ ಮಕ್ಕಳನ್ನು ಪಡೆಯುತ್ತಾನೆ. ಅವನ ವೈದ್ಯ ಈ ಸಂಬಂಧಗಳನ್ನು ಗೌರವಿಸದ ಕೇವಲ ವೈದ್ಯ.

2. ಶಿವಧನಸ್ಸಿಗೂ ಶಿವನಿಗೂ ಸಂಬಂಧವಿಲ್ಲ. ಅತಿ ಭಾರದ, ಅದು ಜನಕ ಸುಮ್ಮನೆ ಮಾಡಿಸಿದ ಲೋಹದ ಬಿಲ್ಲು, ಅದಕ್ಕೆ ಲೋಹದ ಹೆದೆ. ಸ್ವಯಂವರವೆಂಬ ಯಾವುದೇ ಸಮಾರಂಭವನ್ನು ಆಯೋಜಿಸಲಾಗಿಲ್ಲ. ಆದರೆ ಅದನ್ನು ಹೆದೆಯೇರಿಸಿ ಗುರಿಯನ್ನು ಹೊಡೆದುರುಳಿಸುವವನು ಮಾತ್ರ ಸೀತೆಯ ಗಂಡ ಅಂಥ ಅವನು ಘೋಷಿಸಿಬಿಟ್ಟಿದ್ದಾನೆ. ಅಂದರೆ ಜನಕನಿಗೆ ಯಾವುದೇ ದ್ವಿತೀಯ ದರ್ಜೆಯ ಗಂಡಸನ್ನು ಸೀತೆಗೆ ತಂದುಕೊಳ್ಳುವ ಮನಸ್ಸಿಲ್ಲ. ಅಷ್ಟರ ಮಟ್ಟಿಗೆ ಅವನು ಪ್ರಜ್ಞಾವಂತ. ಆದರೆ ಇಲ್ಲಿ ಅವನು ತನ್ನ ಮೂರ್ಖತನಕ್ಕೆ ಬೆಲೆ ತೆರುವವನು.

SL Bhyrappa's novel Uttarakhanda review by Vijayaraghavan

3. ಕೈಕೇಯಿಗೆ ದಶರಥ ವರ ಕೊಡುವುದಿಲ್ಲ; ಬದಲಿಗೆ ಅವಳ ಅಪ್ಪ ಅದನ್ನು ವಾಗ್ದಾನವಾಗಿ ಗಳಿಸಿಕೊಳ್ಳುತ್ತಾನೆ, ಮಗಳಿಗಾಗಿ.

4. ಮೂಲ ರಾಮಾಯಣದಂತೆ ಅಹಲ್ಯೆಯನ್ನು ಇಂದ್ರನು ಛದ್ಮವೇಷದಲ್ಲಿ ಕೂಡುವುದಿಲ್ಲ. ಅವಳ ಗಂಡ ಗೌತಮನು ಆರಾಧನೆಗೆ ಬೇಕಷ್ಟು ಜೀವ ಹಿಡಿದುಕೊಳ್ಳಲು ತಿಂದುಕೊಂಡು ಇದ್ದವನು, ಕೈಲಾಗದವನು. ರಾಜನೊಬ್ಬನ ದೇಹ ಸೌಷ್ಠವಕ್ಕೆ ಸೋತು ಅವಳು ಅವನಿಗೆ ಒಲಿಯುತ್ತಾಳೆ. ಗೌತಮ ಋಷಿಯಂತಲ್ಲ, ಸಾಮಾನ್ಯ ಮನುಷ್ಯನಂತೆ ಹೊಂಚು ಹಾಕಿ ಅವರನ್ನು ಹಿಡಿಯುತ್ತಾನೆ. ಅವನನ್ನು ಎದುರಿಸುವುದಿಲ್ಲ. ಅವರ ಅನೈತಿಕ ಕೂಟವನ್ನು ಕುಟೀರ ಕುಟೀರಗಳಿಗೆ ಕೂಗಿ ಹೇಳಿ ಮನೆ ತೊರೆದು ಹಿಮಾಲಯಕ್ಕೆ ಹೋಗಿಬಿಡುತ್ತಾನೆ. ಅವಳು ಅವನ ಶಾಪದಿಂದ ಕಲ್ಲಾಗುವುದಿಲ್ಲ. ಅನ್ನಾಹಾರ ವರ್ಜಿಸಿ ಕಲ್ಲು ಹೃದಯದವಳಾಗುತ್ತಾಳೆ. ಅರಸನೂ ಸಹಸ್ರಯೋನಿಯಾಗುವುದಿಲ್ಲ. ಉಶ್ಶಾಪಗಳಿಲ್ಲ. ಯಾವ ರಾಮನ ಪಾದಸ್ಪರ್ಶದಿಂದಲೂ ಅವಳು ಕಲ್ಲಿನ ಜೀವ ತೊರೆದು ಮರಳಿ ಹೆಣ್ಣಾಗುವುದಿಲ್ಲ. ರಾಮ, ವಿಶ್ವಾಮಿತ್ರರ ಪ್ರಯತ್ನದಿಂದ ಸತಿ ಪತಿ ಗತವ ಮರೆತು ಒಂದಾಗುತ್ತಾರೆ. ಆ ಯೋಗ್ಯತೆಯನ್ನು ಭೈರಪ್ಪನವರು ಸ್ವಯಂ ತಮ್ಮ ಕಥಾನಾಯಕಿ ಸೀತೆಗೆ ಕಲ್ಪಿಸುವುದಿಲ್ಲ.

5. ಸೀತೆಯನ್ನು ರಾವಣ ಪುಷ್ಪಕ ವಿಮಾನದಲ್ಲಿ ಹೊತ್ತೊಯ್ಯುವುದಿಲ್ಲ, ಜಟಾಯು, ಸಂಪಾತಿಗಳಿಲ್ಲ, ಲಕ್ಷ್ಮಣರೇಖೆಯಿಲ್ಲ, ಮಾರೀಚ ಮಾಯಾಜಿಂಕೆಯ ಮೂರ್ತರೂಪವಿಲ್ಲ, ರಾವಣನ ಕಡೆಯ ಆಳುಗಳು ಚಟ್ಟದಂತಹ ವಾಹನದಲ್ಲಿ ಅವಳನ್ನು ಹೊತ್ತೊಯ್ಯುತ್ತಾರೆ. ಯುದ್ಧ ಮತ್ತು ರಾವಣನ ಸಾವಿನ ಬಳಿಕ ಅವರು ವಾಪಸ್ಸು ಬರುವುದೂ ನಡೆದೆ, ಅಂತಹ ಪಲ್ಲಕ್ಕಿಯಲ್ಲೇ.

6. ಅನಸೂಯ ಅತ್ರಿಗಳ ವಿಷಯದಲ್ಲಿ ತ್ರಿಮೂರ್ತಿಗಳನ್ನು ಶಿಶುಗಳನ್ನಾಗಿಸಿದ ಪ್ರಸ್ತಾಪವಿಲ್ಲ.

7. ಯಾವದೇ ಋಷಿಗಳಿಂದ ಅವರಿಗೆ ದಿವ್ಯಾಸ್ತ್ರಗಳು ದೊರೆಯುವುದಿಲ್ಲ.

8. ಕಿಷ್ಕಿಂದೆಯಲ್ಲಿ ವಾನರರಿಲ್ಲ; ಮನುಷ್ಯರಿದ್ದಾರೆ, ಸಂಸ್ಕೃತ ಬಲ್ಲವರು; ಆದರೆ ಕತೆಯಲ್ಲಿ ವಾಲಿ ಸುಗ್ರೀವರ ವೀರಾವೇಶದ ಕದನ, ಸಾರೂಪ್ಯದ ಗೊಂದಲ ಇವಿಲ್ಲ. ಜೊತೆಗೆ ವಾಲಿಯ ಹತ್ಯೆಯ ನಿರ್ಧಾರವೂ ಯುಕ್ತಾಯುಕ್ತತೆಯ ಆಧಾರದ ಮೇಲಿಲ್ಲ.

9. ಹನುಮಂತ ಸಮುದ್ರ ಲಂಘನ ಮಾಡುವುದಿಲ್ಲ, ಸುರಸೆಯಿಲ್ಲ, ಸಿಂಹಿಣಿಯಿಲ್ಲ, ಮಾಯಮಂತ್ರಗಳ ರಾಕ್ಷಸರಿಲ್ಲ. ಲಂಕಾದಹನದ ಪ್ರಸಂಗವಿಲ್ಲ. ಬದಲಿಗೆ ಅವನು ಊರಿನ ಸರ್ವೇಕ್ಷಣ ಮಾಡಿ ಕಡಲು ಈಜಿಕೊಂಡು ಹಿಂತಿರುಗುತ್ತಾನೆ.

10. ರಾವಣನಿಗೆ ಒಂದೇ ತಲೆ. ಅವನು ಮುದುಕನಾಗುತ್ತಿರುವ ಕಾಮುಕ. ಹೆಂಗಸರನ್ನು ಭೋಗಿಸಿ ದೊಡ್ಡಿಗಳಲ್ಲಿ ಕೂಡಿಹಾಕುವವ. ಅವನಿಗೆ ಸಾವಿಂದ ರಕ್ಷಣೆಯ ವರವಿಲ್ಲ. ಶೂರ್ಪನಖಿ ಇಚ್ಛಾರೂಪ ಧರಿಸಬಲ್ಲವಳಲ್ಲ. ಅವಳು ಮೋಹಿತೆಯಲ್ಲ, ಕಾಮುಕಿ. ಇದು ಸಬಾಲ್ಟ್ರನ್ ನಂಬಿಕೆಗಳಿಗೆ ವಿರುದ್ಧವಾದದ್ದು.

11. ಮಹಾಯುದ್ಧದಲ್ಲಿ ರಾಮಸೇತುವಿನ ನಿರ್ಮಾಣವಿಲ್ಲ, ಮಂತ್ರಾಸ್ತ್ರಗಳಿಲ್ಲ, ಇಂದ್ರಜಿತುವಿನ ಯಾಗವಿಲ್ಲ, ಸಂಜೀವಿನಿ ಪರ್ವತವಿಲ್ಲ. ಸತ್ತವರು ಬದುಕುವುದಿಲ್ಲ. ಮರಳಿ ಬಂದಲ್ಲಿ ಪ್ರತಿಮಾಗೃಹವಿಲ್ಲ, ಚಿತ್ರಪಟವೂ ಇಲ್ಲ.

12. ಸೀತೆಯನ್ನು ಭೂಮಿ ಬಾಯ್ದೆರೆದು ನುಂಗುವುದಿಲ್ಲ; ನೆಲದೊಡಲಿನಲ್ಲಿ ಮಲಗಿ ಅವಳು ಇಚ್ಛಾಮರಣ ಹೊಂದುತ್ತಾಳೆ.

13. ಶೂದ್ರ ತಪಸ್ವಿಯ ತಪಸ್ಸಿನಲ್ಲಿ ಶಂಭೂಕನ ಹೆಸರಿಲ್ಲ. ಆದರೆ ಕಾಲಧರ್ಮದ ಹೆಸರಿನಲ್ಪ್ಲಿ ಅವನ ಶಿರಚ್ಛೇಧನವನ್ನು ರಾಮ ಮಾಡುತ್ತಾನೆ. ಅದು ಧರ್ಮಪಾಲನೆಯ ಕರ್ತವ್ಯವೆಂದೂ, ಯುಗಧರ್ಮವೆಂದು ಬಿಂಬಿಸಲಾಗುತ್ತದೆ. ಆದರದು ಹೆಣ್ಣಾದ ಸೀತೆಯಲ್ಲಿ ತೀವ್ರ ಪರಾಮರ್ಶೆಗೆ ಒಳಪಡುತ್ತದೆ. ಈ ಪರಾಮರ್ಶೆ ಅನೇಕ ಬುದ್ಧಿಜೀವಿಗಳು ಒಳಗೇ ನೆನೆಯುವಂಥದ್ದು. ಅದನ್ನು ಸಮನ್ವಿತವಾಗಿಸುವ, ಸಾಮಾಜಿಕ ಪ್ರಶ್ನೆಯಾಗಿಸುವ ಪ್ರಯತ್ನವಿಲ್ಲ. ಸಾಮಾಜಿಕ ಚಿಂತನೆಗೂ ರಾಜಕಾರಣಕ್ಕೂ ನಡುವೆ ಇರುವ ಕಂದರದಂತೆ ಈ ಆಲೋಚನೆಗಳು ಇವೆ.

14. ರಾಮಾವತಾರದ ಕೊನೆಯಲ್ಲಿ ಸಂಭವಿಸುವ ರಾಮಾವತಾರ ಮುಗಿಸುವ ಘಟನೆಗಳಿಲ್ಲ. ಹನುಮಂತ ರಾಜಮುದ್ರೆಯನ್ನರಸಿ ಅಣಿಮಾ ರೂಪದಲ್ಲಿ ಪಾತಾಳಕ್ಕೆ ಹೋಗುವುದಿಲ್ಲ. ಲಕ್ಷ್ಮಣನ ವಿಚಾರವೂ ಅಂತೆಯೇ ಇದೆ. ಲಕ್ಷ್ಮಣ ಅಧಿಕಾರದ ಕೇಂದ್ರವಾಗಿ ಮುಂದುವರಿಯುವನೇ ಹೊರತು ದಶಾವತಾರದ ಶೇಷನಂತೆ ದೇಹತ್ಯಾಗ ಮಾಡಿ ಹಿಂದಿನ ಆದಿಜನ್ಮಕ್ಕೆ ಹಿಂತಿರುಗುವುದಿಲ್ಲ.

15. ತಾಟಕೀವಧೆಯಿಲ್ಲ. ಇಂತಹ ಸಣ್ಣ ಪುಟ್ಟ ಎಷ್ಟೋ ಸಂಗತಿಗಳಿಲ್ಲಿ ಘಟಿಸುವುದಿಲ್ಲ. ಮುಂದುವರಿಯುವುದು....

English summary
Kannada wellknown novelist, Indian writer SL Bhyrappa's new novel Uttarakhanda review by Vijayaraghavan, writer from Kolar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X