• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿ-ಮಿಥಿಫೈ ಆಗಿರುವ ಭೈರಪ್ಪನವರ ಉತ್ತರಕಾಂಡ

By ವಿಜಯರಾಘವನ್
|

ಭೈರಪ್ಪನವರ ಇಡೀ ಕಾದಂಬರಿಯ ಉದ್ದಕ್ಕೂ ಉಳಿದ ರಾಮಾಯಣಗಳಲ್ಲಿ ಬರುವಂಥ ಎಲ್ಲ ಅಮಾನುಷ, ಅತಿಮಾನುಷ ಪಾತ್ರ, ಘಟನೆಗಳನ್ನು ಡಿ-ಮಿಥಿಫೈ ಮಾಡಿರುವುದನ್ನು ಕಾಣಬಹುದು. ಅದನ್ನು ಮುಂದೆ ಗಮನಿಸಲಾಗಿದೆ. ಅದರ ಜೊತೆಗೆ ಎಲ್ಲ ಘಟನೆಗಳನ್ನೂ ಸಂಭಾವ್ಯತೆಯ ಪರಿಧಿಯೊಳಗೆ ತರಲು ಅವರು ಶ್ರಮಿಸುತ್ತಾರೆ. ಅದರಿಂದ ತಾವು ರಾಮಾಯಣದ ರಮ್ಯ ಕಥಾನಕದಿಂದ ಎಷ್ಟು ದೂರ ಸರಿಯುತ್ತಿರುವೆನೆಂದಾಗಲಿ, ಅದರಿಂದ ಓದುಗರ ಮೇಲೆ ಯಾವ ಪರಿಣಾಮವು ಉಂಟಾಗುವುದೆಂದಾಗಲೀ ಚಿಂತಿಸಿದಂತೆ ತೋರುವುದಿಲ್ಲ.

ಅಂತಹ ನಿರ್ದಯೆಯೊಂದು ಕಾದಂಬರಿಯುದ್ದಕ್ಕೂ ಕಥಾ ಪಾತ್ರ, ವಸ್ತುಗಳನ್ನು ಆವರಿಸಿಕೊಂಡಿರುವುದು ಕಥನವು ಒಂದು ಪೂರ್ವನಿರ್ಧರಿತ ಆಘಾತ ನೀಡುವ ಪ್ರಯತ್ನವೆಂಬಂತೆ ತೋರುತ್ತದೆ. ಮೊದಲಲ್ಲಿಯೇ ನಾವು ಅಯೋಧ್ಯೆಯ ಸೀತಾ ಸಂಗಾತಿಯಾದ ಸುಕೇಶಿಯ ಮನುಷ್ಯ ಹೃದಯವನ್ನು, ವಾಲ್ಮೀಕಿ ಋಷಿಗಳ ಹೃದಯ ವೈಶಾಲ್ಯವನ್ನು ಎದುರುಗೊಂಡಂತೆಯೇ ರಾಮನ ಸೀತಾ ಪರಿತ್ಯಾಜ್ಯ ಕ್ರಿಯೆಯ ಅಮಾನವೀಯತೆಯನ್ನೂ ಎದುರುಗೊಳ್ಳುತ್ತೇವೆ. ಅಲ್ಲಿ ಎಲ್ಲೂ ರಾಮನಿಗೆ ಅವಳನ್ನು ಪರಿತ್ಯಜಿಸಬೇಕಾಗಿ ಬಂದಿದ್ದರ ಕುರಿತ ತಳಮಳವಿಲ್ಲ. ಲಕ್ಷ್ಮಣನನ್ನು ಕರೆದು ಅವಳನ್ನು ವಾಲ್ಮೀಕಿ ಮುನಿಯ ಆಶ್ರಮದ ಬಳಿ ಬಿಡು ಎಂದ. ರಾಜಾಜ್ಞೆ ಮಾಡಿದ. ಆಜ್ಞೆ ಮೀರದ ಲಕ್ಷ್ಮಣನೂ ಬಿಟ್ಟು ಹೊರಟ. ಇದು ರಾಮನ ಆ ತೀರ್ಮಾನವನ್ನು ಕುರಿತ ಭೈರಪ್ಪನವರ ಅಸೂಕ್ಷ್ಮತೆ. ಆ ಕ್ಷಣದಲ್ಲಿ ಲಕ್ಷ್ಮಣನೂ ಅಮಾನವೀಯನಂತೆ ಕಂಡರೂ ಕೊನೆಗೆ ಅವನು ಮಾಡಿದ್ದು ಮನಸ್ಸೊಲ್ಲದ ಕೆಲಸವನ್ನು, ಪಾಲಿಸಿದ್ದು ರಾಜಾಜ್ಞೆಯನ್ನು ಎಂಬುದು ತಿಳಿಯುತ್ತದೆ.

ಪಾತ್ರ ಹಾಗೂ ಘಟನೆಗಳನ್ನು ಡಿ-ಮಿಥಿಫೈ ಮಾಡಿರುವುದÀನ್ನು ಮೊದಲು ಗ್ರಹಿಸಲು ಸಾಧ್ಯವಾಗುವುದು ಅಹಲ್ಯಾ, ಗೌತಮರ ಸಂಬಂಧದ ಮರುಜೋಡಣೆಯಿಂದ. ಇಂತಹ ಸಂದರ್ಭಗಳಲ್ಲಿ ಭೈರಪ್ಪನವರು ತಾವು ಪರಿಭಾವಿಸುವ ಸಂಭಾವ್ಯತೆಯನ್ನು ಓದುಗರ ಹಿಂದಿನೋದಿನ ನೆನಪಿನ ಮನಸ್ಥಿತಿಯ ಮೇಲಿನ ಆಕ್ರಮಣದ ಅಸ್ತ್ರವನ್ನಾಗಿ ಪ್ರಯೋಗಿಸುತ್ತಾರೆ. ಅಲ್ಲದೆ ಇದನ್ನೊಂದು ಸಮಕಾಲೀನ ಕತೆಗಾರರ ಬತ್ತಳಿಕೆಯ ಅಸ್ತ್ರದಂತೆ ನಿರೂಪಿಸಲು ಬಳಸಿಕೊಳ್ಳುತ್ತಾರೆ. ಅದು ಕತೆಗಾರನಿಗಿರುವ ಪೊಯೆಟಿಕ್ ಲೈಸೆನ್ಸ್ ಎಂಬಂತೆ ಬಳಕೆಯಾಗಿದೆ. ಅಹಲ್ಯಾ, ಗೌತಮರ ಸಂಬಂಧದ ಮರುಜೋಡಣೆಯನ್ನು ರಾಮ ಮಾಡಬೇಕಿದೆ. ಆದರೆ ಏಕೆಂಬುದಿಲ್ಲ. ಇದು ಮುಂದೆ ಅವನದೇ ಬದುಕಿನಲ್ಲಿ ಉದ್ಭವಿಸುವ ಸಂದರ್ಭಕ್ಕೆ ಹೋಲಿಕೆಗೆ ಒದಗುತ್ತದೆ.

ಗೌತಮನ ಮನಸ್ಥಿತಿಯನ್ನು ಅವನು ಅಹಲ್ಯೆಯ ಸಹಜ ಬಯಕೆಯನ್ನು ತೀರಿಸಲಾಗದೆ ಪರಪುರುಷ ಅರಸನಿಗೆ ಒಲಿದ ಅಹಲ್ಯೆಯನ್ನು ಕಂಡು ಹಿಡಿದು ಅಲ್ಲಿನ ಕುಟೀರಗಳಿಗೆಲ್ಲ ಕೂಗಿಹೇಳಿ ಹಿಮಾಲಯಕ್ಕೆ ತೊಲಗಿ ಹೋಗುವುದರಲ್ಲಿ ನೋಡಬಹುದು. ಅವನಿಗೂ ಲಂಕೆಯನ್ನು ಮರಳಿ ಪಡೆದ ರಾಮನು ಸೀತೆಯನ್ನು ನಡೆಸಿಕೊಳ್ಳುವುದಕ್ಕೂ ವ್ಯತ್ಯಾಸವೇನೂ ಕಂಡುಬರುವುದಿಲ್ಲ. ಅಹಲ್ಯೆ ಗೌತಮರ ಮರುಸಮಾಗಮ ಮಾಡಿಸಿದ ರಾಮನೇ ಬಳಿಕ ಅದೇ ವಿಚಾರವು ತನ್ನ ಮುಂದೆ - ಸುಳ್ಳಾಗಿದ್ದರೂ ಸಂಶಯದ ಕಾರಣದಿಂದ - ಲಂಕೆಯಲ್ಲಿ, ಸೀತೆಯ ರೂಪದಲ್ಲಿ, ನಿಂತಾಗ ಗೌತಮನು ತಳೆಯುವ ನಿಲುವನ್ನೇ ತಳೆಯುವುದು ಕಾದಂಬರಿಕಾರರು ನುಡಿವ ಗಂಡಸು ಕೆಟ್ಟರೆ ತಾನಷ್ಟೇ ಕೆಡುತ್ತಾನೆ; ಹೆಂಗಸು ಕೆಟ್ಟರೆ ಇಡೀ ಕುಟುಂಬ, ಸಮಾಜ ಕೆಡುತ್ತದೆ ಎನ್ನುವ ಪರಂಪರಾಗತ ಸುಳ್ಳನ್ನು ಒಪ್ಪಿ ಸಾಧಿಸುವ ಪ್ರಯತ್ನದಂತೆ ನೋಡಬಹುದಾಗಿದೆ.

ಇದೇ ಹಿನ್ನೆಲೆಯಿಂದ ಕೈಕೆಯಿಯ ವ್ಯಕ್ತಿತ್ವವನ್ನು ಗಮನಿಸಬೇಕು. ಅವಳಂತೂ ಕೆಡುಕಿನ ಮೂರ್ತಿಯಂತೆ ಚಿತ್ರಿತಳಾಗಿದ್ದಾಳೆ. ಆದರೆ ಇಲ್ಲಿ ಅವಳ ಕೆಡುಕಿನಲ್ಲಿ ಮಂಥರೆಯ ಪಾತ್ರ ಕಿರಿದು. ಅವಳು ಧಾತುದೋಷದ ಕೆಡುಕಿ. ಕುವೆಂಪು ಹಾಗೂ ಇವರ ಚಿತ್ರಣವನ್ನು ಗಮನಿಸಿದರೆ ಸಿಗುವ ವ್ಯಕ್ತಿತ್ವಗಳು ಬೇರೆಯೇ. ಕೈಕೆಯಿ ಕೆಟ್ಟ ಬಿತ್ತದ ಬೆಳೆಯಂತೆ - ಬ್ಯಾಡ್ ಸ್ಟಾಕ್ - ನಿಂದ ಬಂದವಳಂತೆ ಚಿತ್ರಿತಳಾಗಿದ್ದಾಳೆ. ಭರತನೇ ಅವಳನ್ನು ಮಾತೃತ್ವವನ್ನು ಪವಿತ್ರಗೊಳಿಸದ ತಾಯಿ ಎಂದು ಕರೆಯುತ್ತಾನೆ. ಭಾರತೀಯ ಸ್ಕ್ರಿಪ್ಚರ್ಸ್ ನ ಅಪಾರ ಜ್ಞಾನವಿರುವ ಮತ್ತು ಅಲ್ಲಿನ ಬಹಳಷ್ಟನ್ನು ಒಪ್ಪಿಕೊಳ್ಳುವಂತೆ ಬರೆಯುವ ಭೈರಪ್ಪನವರಿಂದ ಇದಕ್ಕಿಂತ ಭಿನ್ನವಾದುದನ್ನು ಅಪೇಕ್ಷಿಸಬಾರದೇನೋ ಎಂಬ ಮನಸ್ಸಂತೂ ಓದುಗನಲ್ಲಿ ಮೂಡುವುದು ಸಹಜ. ಇದನ್ನು ಇನ್ನಷ್ಟು ವಿವರವಾಗಿ ಮುಂದೆ ಗಮನಿಸಬಹುದು.

English summary
Kannada wellknown novelist, Indian writer SL Bhyrappa's new novel Uttarakhanda review by Vijayaraghavan, writer from Kolar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more