ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಜೀವಿನಿ: ಮೊದಲ ಪ್ರೀತಿಯ ಬೆರುಗನ್ನು ಆಪ್ತವಾಗಿಸುವ ಕಾದಂಬರಿ

By ಶ್ರೀಶೈಲ ಮಗದುಮ್ಮ
|
Google Oneindia Kannada News

ಪ್ರಪಂಚದ ಯಾವುದೇ ಭಾಷೆಯ ಸಾಹಿತ್ಯ, ಚಲನಚಿತ್ರ, ನಾಟಕ, ಸಣ್ಣಕಥೆ ಹಾಗು ಜನಪದ ಪ್ರಕಾರಗಳನ್ನು ಗಮನಿಸಿದಾಗ ಪ್ರೇಮಕಥೆಗಳದ್ದೇ ಮೇಲುಗೈ.

ಪ್ರೇಮವೆನ್ನುವುದು ಯಾವತ್ತು ಕ್ಲೀಷೆಯಾಗಿ ನಮಗೆ ಕಾಣಿಸಿಯೇ ಇಲ್ಲ. ನಾವು ಹೇಗೆ ತಾಯಿಯ ಬಗ್ಗೆ, ಚಂದಮಾಮನ ಬಗ್ಗೆ, ಪ್ರಕೃತಿಯ ಬಗ್ಗೆ ಎಷ್ಟೋ ಭಾಷೆಯಲ್ಲಿ ಮಿಲಿಯನ್ ಗಟ್ಟಲೇ ಕತೆಗಳು, ಕವನಗಳು ರಚಿತವಾದರೂ ಅದು ಯಾವತ್ತಿಗೂ ಚರ್ವಿತಚರ್ವಣ ಅಂತ ಅನ್ನಿಸುವುದೇ ಇಲ್ಲ.

ಇದಕ್ಕೆಲ್ಲ ಕಾರಣ ಪ್ರೀತಿಯೆನ್ನುವ ಒರತೆ ಇರಬಹುದೆನೋ... ಇಂದಿನ ಸಿನಿಮಾಗಳನ್ನು ಗಮನಿಸಿದಾಗಲಂತೂ ಶೇ 60 ರಷ್ಟು ಸಿನಿಮಾಗಳು ಹದಿಹರೆಯದ ಹುಡುಗ ಹುಡುಗಿಯರ ಪ್ರೇಮಕಥೆಯನ್ನು ಇಟ್ಟುಕೊಂಡೆ ಮಾಡುವಂತದ್ದು. ಅದೊಂತರಾ ಟಿ.ಆರ್.ಪಿ ಆಶಯ ಅಂಥನಿಸಿದ್ದರೂ ಎಲ್ಲರಲ್ಲಿಯೂ ಅದರ ಬಗ್ಗೆ ಬಿಟ್ಟಿರದ ಭಾವ.

ಸಂಜೋತಾ ಪುರೋಹಿತರವರ ಚೊಚ್ಚಲ ಕಾದಂಬರಿ "ಸಂಜೀವಿನಿ" ಕೂಡ ಒಂದು ಚಂದದ ಪ್ರೇಮಕತೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ನೋಡದೆ ಮೇಸೆಜ್ ಮೂಲಕ ಪರಿಚಯವಾದ ಹುಡುಗ ಹುಡುಗಿಯ ಮಧ್ಯೆ ಪ್ರೀತಿಯಾಗಿ, ಆ ಪ್ರೀತಿ ಮನೆಯವರಿಗೆ ಗೊತ್ತಾಗಿ, ಅವರು ಆಕ್ಷೇಪಿಸಿದಾಗ ನಿಂತು ಹೋಗುವ ಪ್ರೀತಿಯ ಅಗಲಿಕೆ ಇಬ್ಬರಲ್ಲೂ ವಿರಹ ವೇದನೆಯನ್ನು ಸೃಷ್ಟಿಸುತ್ತದೆ.

ಆ ವಿರಹ ಬೂದಿಯಲ್ಲಿ ಬೆಂದು ಸುಟ್ಟಕಲೆ ಮಾಯುವ ಮುನ್ನವೇ ಹೆತ್ತವರ ಮಾತನ್ನು ವಿರೋಧಿಸಲಾಗದೇ ಹುಡುಗಿ ಇನ್ನೊಂದು ಮದುವೆಗೆ ಒಪ್ಪಿಕೊಳ್ಳುತ್ತಾಳೆ. ಇಬ್ಬರ ಮನಸಿನಲ್ಲಿ ವಿರಹ, ನೋವು ಇದ್ದರೂ ಅದನ್ನು ಮುಚ್ಚಿಕೊಳ್ಳಲು ಇಬ್ಬರು ನಡೆಸುವ ಪರದಾಟ ಈ ಕಾದಂಬರಿಯ ಕಥಾವಸ್ತು. ಇದನ್ನು ಕೇಳಿದಾಗ ವಾಚ್ಯ ಅನ್ನಿಸಿದರೂ ಈ ಕಾದಂಬರಿ ಮೇಲೆ ತಿಳಿಸಿದ ಕ್ಲೀಷೆಯನ್ನೇ ವಿಭಿನ್ನವಾಗಿ ಚಿತ್ರಿಸಿ ಬೋರು ಹೊಡೆಸದಂತೆ ನೋಡಿಕೊಳ್ಳುತ್ತಾರೆ ಲೇಖಕಿ. ತುಂಬಾ ದಿನದ ನಂತರ ಭೇಟಿಯಾದ ಕ್ಲಾಸ್ ಮೇಟ್ ಒಬ್ಬ ತನ್ನ ಕತೆಯನ್ನು ಹೇಳುವಾಗ ಕೇಳಿಸಿಕೊಳ್ಳುವ ಆಪ್ತತೆ ಈ ಕಾದಂಬರಿ ಓದುವಾಗ ಸಿಕ್ಕಿತು.

Sanjota Purohits Sanjeevini Kannada Novel review

ಕಾದಂಬರಿಯ ಕಥಾವಸ್ತು ನಮ್ಮ ನಡುವೆಲ್ಲೋ ನಡೆದು ಹೋದ ಅಥವಾ ನಮಗೆ ಆಗಿ ಹೋದ ಕತೆಯಂತೆ ಭಾಸವಾದರು, ಕತೆ ಹೇಳುವ ಶೈಲಿ ವಿಭಿನ್ನವಾಗಿದೆ, ಆಪ್ತವಾಗಿದೆ. ಕ್ಲೀಷೆಯಲ್ಲಿಯೂ ತಾಜಾತನವಿದೆ ಎಂದರೆ ತಪ್ಪಾಗಲಾರದು. ಪ್ರೀತಿ- ಪ್ರೇಮ ಎನ್ನುವ ವಿಚಾರಗಳನ್ನು ಇಟ್ಟುಕೊಂಡು ಹದಿಹರೆಯದ ಹುಡುಗ ಹುಡುಗಿಯ ತುಮುಲಗಳನ್ನು ಸಶಕ್ತವಾಗಿ ಬಿಚ್ಚಿಡುತ್ತಾ ಹೋಗುತ್ತಾರೆ. ಅಲ್ಲಲ್ಲಿ ಕವನಗಳ ಮುಖಾಂತರ ಕಾದಂಬರಿಯ ಸೊಗಸನ್ನು ಹೆಚ್ಚಿಸಿದ್ದರೂ ದ್ವೀತಿಯಾರ್ಧದಲ್ಲಿ ಅವುಗಳನ್ನು ಬಿಟ್ಟು ಬಿಟ್ಟಿದ್ದಾರೆ. ಇಡೀ ಕಾದಂಬರಿ ನಾಯಕಿಯ ಸ್ವಗತದಲ್ಲಿ ನಿರೂಪಿತವಾಗಿದ್ದು ಕೊನೆಯಲ್ಲಿ ಮಾತ್ರ ನಾಯಕನ ಸ್ವಗತ ಕಥಾ ಹಂದರವನ್ನು ಮರಳಿ ನಿರೂಪಿಸುತ್ತಾ ಸ್ವಲ್ಪ ಮಟ್ಟಿಗೆ ಬೋರು ಹೊಡೆಸುತ್ತದೆ.

{blurb}

ಇಲ್ಲಿ ನಾಯಕನ ಸ್ವಗತ ಪುರ್ಣವಾಗಿ ತೆರೆದಿಡುವುದಕ್ಕಿಂತ ತೇಲಿಸಿ ನಿರೂಪಿಸುವ ತಂತ್ರ ಅನುಸರಿಸಬಹುದಿತ್ತು. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ನಾಯಕನ ಭಿನ್ನಪ (ಕನ್ಷೇಷನ್) ಅಷ್ಟೇನು ಗಟ್ಟಿ ಅನ್ನಿಸುವುದಿಲ್ಲ. ಅವ ಪ್ರೀತಿಯನ್ನು ತೊರೆದ ಬಗ್ಗೆ ಸಮಝಾಯಿಷಿ ಕೊಟ್ಟರೂ ಇಷ್ಟೇನಾ ಎನ್ನುವ ಅಭಿಪ್ರಾಯ ಮೂಡುತ್ತದೆ. ಕಥಾ ತಂತ್ರದಲ್ಲಿ ಇನ್ನಷ್ಟು ರಮ್ಯ ಹಾಗು ರೋಚಕತೆಯನ್ನು ಅಳವಟಿಸಿಕೊಳ್ಳಬಹುದಿತ್ತು.

ಇಂಜಿನಿಯರಿಂಗ್ ಕಾಲೇಜಿನ ವಾತವರಣ, ಹಾಸ್ಟೆಲ್ ಜೀವನ, ಗೆಳೆತನ, ಸಾಂಪ್ರದಾಯಿಕ ಕುಟುಂಬಗಳ ಚೌಕಟ್ಟುಗಳು, ವಯೋಸಹಜ ಆಕರ್ಷಣೆಗಳು, ಐಟಿ ಕಂಪನಿಗಳಲ್ಲಿನ ಕೆಲಸದ ವಾತಾವರಣ ಇವೆಲ್ಲವನ್ನು ಎಷ್ಟು ಬೇಕೊ ಅಷ್ಟೇ ಉಪಯೋಗಿಸಿದ ಫ್ರೌಡಿಮೆ ಮೆಚ್ಚುವಂತದ್ದು.

ಸಂಜೀವಿನಿ ಅಂದರೆ "ಸೆಲುಗಿನೆಲ್ಲ ಬ್ರಯೊಪೆರಿಸ್ಟ್‌" ಎನ್ನುವ ಜಾತಿಗೆ ಸೇರಿದ ಔಷಧಿಯ ಸಸ್ಯ. ಪುರಾಣದಲ್ಲಿ ಇದು ಸತ್ತವರನ್ನು ಬದುಕಿಸುವ ಸಸ್ಯ, ಈ ಕಾದಂಬರಿಯಲ್ಲಿ "ಸಂಜೀವಿನಿ" ಸಾವಿನ ಪರ್ಯಾಯ ಸ್ಥಿತಿಗೆ ಮುಟ್ಟಿದ ಪ್ರೀತಿಯನ್ನು ಚೇತನಗೊಳಿಸಿ ಮತ್ತೆ ಆರೋಗ್ಯ ಸ್ಥಿತಿಗೆ ತರುವ ಜೀವಮೂಲಿಕೆ ಎನ್ನುವುದಕ್ಕಿಂತ ಸಾವಿನಿಂದಲೇ ಮುಕ್ತಿ ಕೊಡಬಲ್ಲ ಮಾಯಾಮೂಲಿಕೆಯ ರೂಪಕವಾಗಿ ಬಂದಿದೆ ಎನ್ನಬಹುದು. ಇದು ಲೇಖಕಿಯ ಮೊದಲ ಕಾದಂಬರಿಯಾದರೂ ಪ್ರೌಢತೆಯಿಂದ ಕೂಡಿದೆ. ಇನ್ನೂ ಇವರಿಂದ ಒಳ್ಳೊಳ್ಳೆಯ ಕಾದಂಬರಿಗಳು ಸಾರಸ್ವತ ಲೋಕಕ್ಕೆ ಸಿಗಲಿ ಎಂದು ಆಶಿಸುತ್ತಾ ಲೇಖಕಿಗೆ ಶುಭವಾಗಲಿ.

ಪುಸ್ತಕ ಮಳಿಗೆಗಳಲ್ಲಿ ಹಾಗು ಆನಲೈನ್ ನಲ್ಲಿ ಲಭ್ಯವಿರುವ "ಸಂಜೀವಿನಿ"ಯನ್ನು ಸಮಯ ಸಿಕ್ಕಾಗ ಓದಿ ನೋಡಿ. ಇದು ಲೇಖಕಿಯ ಬದುಕಿನ ಪ್ರೇಮಕತೆ ಎಂದು ತಿಳಿದ ಮೇಲಂತೂ ಕತೆ ಹಾಗು ಪಾತ್ರಗಳು ಇನ್ನು ಮನಸಿಗೆ ಹತ್ತಿರವಾಗುತ್ತವೆ.

English summary
Sanjota Purohit's Sanjeevini Kannada Novel review by Srisailam Mugdham. This first novel by Sanjota which is a love story with good narrative style.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X