ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಸ್ಸಿನಿಂದ ಸತ್ಯದ ತೇಜಸ್ಸಿನೆಡೆಗೆ ದಾರಿ ತೋರುವ ‘ನನ್ನಿ’

By ತೇಜಸ್ವಿನಿ ಹೆಗಡೆ
|
Google Oneindia Kannada News

ನಾನು ನನ್ನ ಹೈಸ್ಕೂಲ್‌ಅನ್ನು ಓದಿದ್ದು ಕ್ರಿಶ್ಚನ್ ಸಂಸ್ಥೆಯೊಂದರಲ್ಲಿಯೇ. ಮೊತ್ತ ಮೊದಲಬಾರಿ ನನ್ನದಲ್ಲದ ಧರ್ಮವೊಂದರ ಪರಿಚಯವಾಗಿದ್ದು ಅಲ್ಲಿಯೇ ನನಗೆ.

ನಾನು ಅಲ್ಲಿ ಯಾವ ಪೂರ್ವಾಗ್ರಹಗಳಿಲ್ಲದೇ ಬೆರೆತದ್ದು, ಕಲಿತದ್ದು, ನಲಿದದ್ದು. ನನ್ನ ಹೆತ್ತವರು ಯಾವುದನ್ನೂ, ಯಾವತ್ತೂ ತಲೆಗೆ ತುಂಬಿಸಿರಲೂ ಇಲ್ಲ. ಮೂರುವರುಷಗಳಲ್ಲಿ ನಾನು ಅಲ್ಲಿಂದ ಪಡೆದದ್ದು ಅಸಂಖ್ಯಾತ! ಪ್ರತಿ ದಿವಸ ಪ್ರಾರ್ಥನೆಗೆ ಹಾಡುತ್ತಿದ್ದ 'ಅಗಣಿತ ತಾರಾಗಣಗಳ ನಡುವೆ..' ಹಾಡನ್ನು ಇಂದೂ ಗುನುಗುತ್ತಿರುತ್ತೇನೆ.

ಆ ದಿನಗಳು ನಿಸ್ಸಂಶಯವಾಗಿಯೂ ಮಧುರ ನೆನಪುಗಳಿಂದ ತುಂಬಿದ ನನ್ನ ಅವಿಸ್ಮರಣೀಯ ಕಾಲಘಟ್ಟವಾಗಿವೆ. ಕಿನ್ನಿಗೋಳಿಯ ಲಿಟ್ಲ್‌ಫ್ಲವರ್ ಹೈಸ್ಕೂಲ್ ನನಗೆ ನನ್ನನ್ನು ಪರಿಚಯಿಸಿದ, ನನ್ನೊಳಗೆ ಚಿಗುರುತ್ತಿದ್ದ ಪ್ರತಿಭೆಯನ್ನು ಗುರುತಿಸಿದ ತಾಣ. ಸತ್ಯಕ್ಕೆ ಯಾವ ಬಣ್ಣವೂ ಇಲ್ಲವೆಂಬುದನ್ನು ಇಂದು ನನಗೆ ಮನಗಾಣಿಸಲು ಕಾರಣವಾದ ಜಾಗವೂ ಹೌದು.

ಹಾಗಾಗಿ ನನಗೆ ಕಲಿಸಿದ ಅಲ್ಲಿಯ ಎಲ್ಲಾ ಸಿಸ್ಟರ್ಸ್‌ಗಳಿಗೂ ನಾನು ಸದಾ ಚಿರ ಋಣಿ. ಗುರುಭ್ಯೋ ನಮಃ ಎಂದೇ ಅಕ್ಷರ ತಿದ್ದಿಸಿದ ನನ್ನ ಅಪ್ಪನ ಬುನಾದಿಯಡಿ ನನ್ನ ಬಾಲ್ಯ, ಹದಿವಯಸ್ಸು ಅರಳಿದ್ದೂ ಇದಕ್ಕೆ ಕಾರಣವೆನ್ನಬಹುದು.

Nunni

ಈ ರೀತಿಯ ನನ್ನ ಪೀಠಿಕೆಗೆ ಒಂದು ಬಲವಾದ ಕಾರಣವಿದೆ. 'ನನ್ನಿ' ಎಂದರೆ ನನ್ ಓರ್ವಳ ಸತ್ಯಾನ್ವೇಷಣೆಯ ಕಥೆ ಎಂಬುದಷ್ಟೇ ನನಗೆ ಗೊತ್ತಿದ್ದುದು ಓದುವ ಮೊದಲು. ನಾನು ಹೈಸ್ಕೂಲ್ ಕಲಿತ ನನ್ನ ಶಾಲೆ, ಸಿಸ್ಟರ್ಸ್‌ಗಳೊಂದಿಗೆ ಒಡನಾಡಿದ್ದು, ಅಲ್ಲಿಯ ಆಶ್ರಮದಲ್ಲಿ ಓದುತ್ತಿದ್ದ ಕ್ರಿಶ್ಚನ್ ಗೆಳತಿಯರ ಒಳಗುದಿಯನ್ನು, ಅನಿಸಿಕೆಗಳನ್ನು ಕೇಳಿದ್ದು ಎಲ್ಲವೂ ಗಟ್ಟಿಯಾಗಿ ಇನ್ನೂ ಸ್ಮೃತಿಯಲ್ಲಿ ಉಳಿದುಕೊಂಡಿವೆ.. ಆಗಾಗ ನೆನಪಾಗಿ ನನ್ನ ಮತ್ತೆ ಗತಕಾಲಕ್ಕೆಳೆಯುತ್ತಿರುತ್ತವೆ.

ಆ ದಿನಗಳ ನನ್ನ ಅನುಭವವೇ ಇಂದು ಈ ಕೃತಿಯನ್ನು ಮತ್ತಷ್ಟು ಆಪ್ತವಾಗಿ ಓದಿಸಿಕೊಳ್ಳಲು, ತೀರ ಭಿನ್ನವಲ್ಲದ ಪರಿಸರದೊಳಗೆ (ಕಾದಂಬರಿಯಲ್ಲಿ ಬರುವ) ನನ್ನನ್ನು ಸಮೀಕರಿಸಿಕೊಂಡು, ಹೆಚ್ಚು ತಾದಾತ್ಮ್ಯತೆಯಿಂದ ಒಳಗೆಳೆದುಕೊಳ್ಳಲು ಸಾಧ್ಯವಾಯಿತು ಎನ್ನಬಹುದು. [ಇದು ಹಳೆ-ಹೊಸ ಪುಸ್ತಕಗಳ ಆನ್ ಲೈನ್ ಅಂಗಡಿ]

ಅಂತೆಯೇ ಓದಲು ತೆಗೆದುಕೊಂಡಾಗಲೂ, ಓದುವಾಗಲೂ ಯಾವುದೇ ಪೂರ್ವಾಗ್ರಹವಿಲ್ಲದೇ ಓದಿದ್ದೇನೆ.. ವಿಶ್ಲೇಷಿಸಿದ್ದೇನೆ.. ಗಂಟೆಗಟ್ಟಲೇ ಚಿಂತಿಸಿದ್ದೇನೆ ಮತ್ತು ಸಂಶಯವಿದ್ದ ವಿಷಯಗಳ ಗುರುತು ಹಾಕಿಕೊಂಡು, ಕಾದಂಬರಿಯನ್ನೋದಿ ಮುಗಿಸಿದ ಮೇಲೆ, ಲೇಖಕರ ಪರಿಚಯ ಮಾಡಿಕೊಂಡು ಅವರೊಂದಿಗೇ ಖುದ್ದಾ ನನ್ನ ಸಂದೇಹಗಳನ್ನು ಕೇಳಿ ನಿವಾರಿಸಿಕೊಂಡಿದ್ದೇನೆ.

ಇದು ಹಾಗೇ.. ಇದು ಹೀಗೇ.. ಇದು ಅದೇ... ಎಂಬೆಲ್ಲಾ ಸ್ವಯಂ ನಿರ್ಧಾರಕ್ಕೆ ಬರದೇ ಪರಾಮರ್ಶಿಸಿ ಅರಿಯಲು, ತಿಳಿಯಲು ಯತ್ನಿಸಿದ್ದು. ಹಾಗಾಗಿ ಅಷ್ಟೇ ವಸ್ತುನಿಷ್ಠವಾಗಿ ಈ ಪುಟ್ಟ ವಿಮರ್ಶೆಯನ್ನೂ ಬರೆಯಲು ಪ್ರಯತ್ನಿಸುತ್ತಿದ್ದೇನೆ. [ಭೈರಪ್ಪ ಹೊಗಳಿದ 'ಕರ್ಮ' ಕೃತಿ ವಿಶ್ವದೆಲ್ಲೆಡೆ ಲಭ್ಯ]

ಮೊದಲು ಕಥೆಯ ಸ್ಥೂಲ ಚಿತ್ರಣ : 'ಸಿಸ್ಟರ್ ರೋಣಾ'ಳಿಂದ ಆರಂಭವಾಗುವ ಕಥೆ 'ರೋಣಾ'ಳೊಂದಿಗೆ ಕೊನೆಯಾಗುವುದು. ರೋಣಾಳಿಂದ ಸಿಸ್ಟರ್ ರೋಣಾಳಾಗುವ ಪ್ರಕ್ರಿಯೆ... ಅದಕ್ಕಿರುವ ಹಿನ್ನಲೆ... ಆನಂತರ ಆಕೆ ಸ್ವಯಂ ವಿಮರ್ಶೆಗೆ, ವಿಶ್ಲೇಷಣೆಗೆ ಹೊರಟು, ಅಚಾನಕ್ಕಾಗಿ ಸಿಗುವ ಯುರೋಪ್ ಲೇಖಕ ಎಡಿನ್ ಬರ್ಗ್‌ನ ಪುಸ್ತಕಗಳ ಪ್ರಭಾವಕ್ಕೆ ಸಿಲುಕಿ ಸತ್ಯಾನ್ವೇಷಣೆಗೆ ಹೊರಟು..

ಆ ಪಥದಲ್ಲಿ ತನ್ನ ಸಹಜ ಗುಣ ಧರ್ಮದಿಂದ ಅದೇ ಸತ್ಯ ಅವಳನ್ನು ಸುಟ್ಟು, ಘಾಸಿಗೊಳಿಸಿ, ತಪದಲ್ಲಿ ಬೆಂದು ಬೆಳಗುವ ಚಿನ್ನದಂತೇ ಆಕೆ ಮತ್ತೆ ಎಲ್ಲಾ ಕಳಚಿ ರೋಣಳಾಗುವ ಕಥೆ. ಈ ಕಥೆ ಆರಂಭದಿದ್ದ, ಅಂತ್ಯದವರೆಗೂ ಬರುವ ಮತ್ತೊಂದು ಪಾತ್ರವಿದೆ. ಮೊದ ಮೊದಲು ಆ ಪಾತ್ರವೇ ಪ್ರಧಾನ ಪಾತ್ರವೆಂಬಂತೇ ಭಾಸವಾಗುವ.. ಕಥೆಯುದ್ದಕ್ಕೂ ಸುಳ್ಳಿಗೂ, ಸತ್ಯಕ್ಕೂ ಇರುವ ಅಂತರ ಅಂದರೆ ಬ್ಲಾಕ್ ಆಂಡ್ ವೈಟ್‌ಅನ್ನು ಸ್ಪಷ್ಟವಾಗಿ ಓದುಗರಿಗೆ ಕಾಣಿಸುವಂಥ ಪಾತ್ರ! ಅದೇ ಮದರ್ ಎಲಿಸಾರದ್ದು.

ಈ ಮೂರು ಪ್ರಮುಖ ಪಾತ್ರಗಳಲ್ಲದೇ ಇನ್ನೂ ಹಲವು ಪಾತ್ರಗಳು ತಮಗೊದಗಿಸುವ ಅತ್ಯಗತ್ಯ ಕಾರ್ಯವನ್ನು ಮಾಡಿ, ತಮ್ಮ ತಮ್ಮ ಕೆಲಸದಾನಂತರ ಸತ್ಯಾನ್ವೇಷಣೆಗೆ ರೋಣಾಳನ್ನು ಇನ್ನಷ್ಟು ಉತ್ತೇಜಿಸಿ ಮಾಯವಾಗುತ್ತವೆ. (ಅತಿ ಕ್ಲುಪ್ತವಾಗಷ್ಟೇ ಕಥೆ ಹೇಳುತ್ತಿದ್ದೇನೆ. ಪೂರ್ತಿ ತಿಳಿಯಲು 'ನನ್ನಿ'ಯ ಓದೊಂದೇ ದಾರಿ.)

Nunni

ನನ್ನ ಪ್ರಕಾರ ಪ್ರತಿ ಕಾದಂಬರಿಯ ಒಂದೊಂದು ಪಾತ್ರವೂ ಆ ಕಾದಂಬರಿಯ ಜೀವಂತಿಕೆಯೇ ಆಗಿರುತ್ತದೆ. ಹೀಗಾಗಿ, ಆಯಾ ಕಾದಂಬರಿಯು ಅದರ ಓದುಗ ಓದುವಷ್ಟು ಹೊತ್ತೂ ಕಣ್ಮುಂದೆ ನಡೆವ ಒಂದು ತುಂಬು ಜೀವನವೆನಿಸಿಕೊಂಡು ಬಿಡುತ್ತದೆ. ನನ್ನಿಯ ಕೆಲವು ಓದುಗರಿಗೆ ಮದರ್ ಎಲಿಸಾರೋ, 'ಸಿ.ರೋಣಾಳೊ' ಅಥವಾ ಕೇವಲ ರೋಣಾಳೋ, ಮಿಲ್ಟನ್ ಫಾಬ್ರಿಗಾಸ್‌ನೋ, ತೇಗೂರಿನ ರಾಯಪ್ಪನೋ ಕಾದಂಬರಿಯ ಜೀವಾಳದಂತೇ, ಪ್ರಮುಖ ಪಾತ್ರ ಅಂದರೆ ಹೀರೋ/ಸೆಂಟರ್ ಎಂದು ಅನಿಸಿರಬಹುದು.

ಆದರೆ, ನನಗೆ ಮಾತ್ರ 'ನನ್ನಿ' ಕಾದಂಬರಿಯ ಜೀವನದೊಳಗಿನ ಸೆಂಟರ್ ಆಫ್ ಅಟ್ರಾಕ್ಷನ್, ಪ್ರಮುಖ ಪಾತ್ರಧಾರಿ ಎಂದೆನಿಸಿಕೊಂಡವ ಎರಿಕ್ ಬರ್ಗ್‌ನೇ. ಎರಿಕ್ ಯುರೋಪಿನಲ್ಲೆಲ್ಲೋ ಇರುವವನೆಂದು ಹೇಳುವ ಈ ಕಾದಂಬರಿ, ಅವನ ಮೂಲಕ ಹೇಳಿಸುವ ಕಟು ವಾಸ್ತಿವಿಕತೆಯನ್ನು ಬಿಚ್ಚಿ, ಎಳೆಯೆಳೆಯಾಗಿ ಹರವಿ, ಬೆಚ್ಚಿ ಬೀಳುವಂತಹ ಸತ್ಯ ಶೋಧನೆಯನ್ನು ಮಾಡಿಸುತ್ತದೆ. ಎರಿಕ್ ಕೃತಿಯ ಕಟು ಸತ್ಯಗಳ ಬಗ್ಗೆ ಮುಂದೆ ಓದಿ...

English summary
Karanam Pavan Prasad Nunni Kannada novel review Tejaswini Hegde. Nunni reveals around a 'Nun' who is in search of Truth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X