• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಸ್ತಕ ವಿಮರ್ಶೆ: ನಮ್ಮ ಬೆಂಗಳೂರು 'ಜೋಗಿ' ಕಂಡಂತೆ

By ಸತೀಶ್ ನಾಯ್ಕ್, ಭದ್ರಾವತಿ
|

ಜೋಗಿ ಅವರು ಕೂಡಾ ಇಲ್ಲಿ ಹಾಗೆಯೇ ತಾವು ಕಂಡ ಬೆಂಗಳೂರಿನ ಕುರಿತಾಗಿನ ಒಂದು ಚಿತ್ರಣವನ್ನ ಕಾದಂಬರಿಯ ಕತೆಯಲ್ಲಿ ಹೇಳುತ್ತಾ ಹೋಗುತ್ತಾರೆ. ನಾವೆಲ್ಲರೂ ಕಂಡ ಬೆಂಗಳೂರನ್ನು ಜೋಗಿ ಅವರು ಕೂಡಾ ಕಂಡಿದ್ದಾರೆ. ಅದನ್ನು ಪರಿಚಯ ಮಾಡಿಕೊಡುವುದರೊಟ್ಟಿಗೆ ಬಹುಶಃ ನಾವ್ಯಾರೂ ಕಂಡಿರಲಾರದ ಬೆಂಗಳೂರಿನ ಒಂದು ರೂಪವನ್ನೂ ಚಿತ್ರಿಸುತ್ತಾ ಹೋಗುತ್ತಾರೆ.

ಈ ಬೆಂಗಳೂರು ಒಂದ್ ಇಂಗ್ಲಿಷ್ ಸಿನಿಮಾ ಇದ್ದ ಹಾಗೆ. ಐದನೇ ತರಗತಿಯ ಮಕ್ಕಳ ಮನಸ್ಥಿತಿಯವರಿಗೆ ನಿಲುಕೋದು ಒಂದು ಥರವಾದ್ರೆ.. ಹತ್ತನೇ ತರಗತಿಯ ಮನಸ್ಥಿತಿಯ ಮಕ್ಕಳಿಗೆ ನಿಲುಕೋದು ಇನ್ನೊಂದು ಥರ.

ಆ ಮಕ್ಕಳಿಗೆ ಪಾಠ ಮಾಡುವ ಮೇಷ್ಟ್ರಿಗೋ.. ಕಾಲೇಜು ಹುಡುಗನಿಗೋ.. ಕಾಲೇಜಿನ ಉಪನ್ಯಾಸಕನಿಗೋ.. ಇನ್ನಾರೋ ದಾರಿಹೋಕನಿಗೋ.. ಓದಿದವನಿಗೋ.. ಓದದೆ ಉಳಿದ ಅನಕ್ಷರಸ್ಥನಿಗೋ.. ಟೈಮ್ ಪಾಸಿಗೆ ಸಿನಿಮಾ ನೋಡೋಕೆ ಬಂದ ಮನೆಯವರಿಗೋ.. ನಡು ವಯಸ್ಕನಿಗೋ.. ಮುದುಕನಿಗೋ ಎಲ್ಲರಿಗೂ ಒಂದೊಂದು ಬಗೆಯಲ್ಲಿ ದಾಖಲಾಗಿ ಹೋಗಿರುತ್ತದೆ.

ಎಲ್ಲರೂ ಕಂಡ ಸಿನಿಮಾ ಒಂದೇ ಆದರೂ.. ಅದನ್ನ ಅರ್ಥ ಮಾಡಿಕೊಂಡು ದಕ್ಕಿಸಿಕೊಂಡ ಬಗೆ ಮಾತ್ರ ಒಬ್ಬೊಬ್ಬರಿಗೂ ಭಿನ್ನವಾಗಿರತ್ತೆ. ಎಲ್ಲರ ಮಟ್ಟಿಗೂ ಅವರು ಕಂಡದ್ದು ನಿಜವೂ.. ಅವರು ಅರ್ಥ ಮಾಡಿಕೊಂಡದ್ದು ಸತ್ಯವೂ ಆಗಿರುತ್ತದೆ. ಒಬ್ಬೊಬ್ಬರಿಗೂ ಒಂದೊಂದು ಥರ ಅರ್ಥವಾಗಿಯೂ.. ಅಥವ ನೋಡಿದಷ್ಟೂ ಹೊತ್ತು ಏನೂ ಅರ್ಥವಾಗದೆಯೂ, ಎಲ್ಲರೂ ಅರ್ಥ ಮಾಡಿಕೊಳ್ಳಲು ಇನ್ನು ಬಹಳಷ್ಟು ವಿಚಾರಗಳು ಆ ಇಂಗ್ಲಿಷ್ ಸಿನಿಮಾದಲ್ಲಿ ಅಡಕವಾಗಿರಬಲ್ಲುದಾದ ಸಾಧ್ಯತೆ ಇರಬಲ್ಲುದಾಗಿರುತ್ತದೆ.

Jogi alias Girish Rao's Bengaluru Kannada book review

ಜೋಗಿ ಅವರು ಕೂಡಾ ಇಲ್ಲಿ ಹಾಗೆಯೇ ತಾವು ಕಂಡ ಬೆಂಗಳೂರಿನ ಕುರಿತಾಗಿನ ಒಂದು ಚಿತ್ರಣವನ್ನ ಕಾದಂಬರಿಯ ಕತೆಯಲ್ಲಿ ಹೇಳುತ್ತಾ ಹೋಗುತ್ತಾರೆ. ನಾವೆಲ್ಲರೂ ಕಂಡ ಬೆಂಗಳೂರನ್ನು ಜೋಗಿ ಅವರು ಕೂಡಾ ಕಂಡಿದ್ದಾರೆ. ಅದನ್ನು ಪರಿಚಯ ಮಾಡಿಕೊಡುವುದರೊಟ್ಟಿಗೆ ಬಹುಶಃ ನಾವ್ಯಾರೂ ಕಂಡಿರಲಾರದ ಬೆಂಗಳೂರಿನ ಒಂದು ರೂಪವನ್ನೂ ಚಿತ್ರಿಸುತ್ತಾ ಹೋಗುತ್ತಾರೆ.

ನಾವು ಕಂಡ ಚಿತ್ರಣಗಳು ನಮ್ಮ ನೆನಪುಗಳಲ್ಲಿ ದಾಖಲಾದ ಬೆಂಗಳೂರಿನ ಕುರಿತಾದ ಹಲವಷ್ಟು ವಿಚಾರಗಳನ್ನ ಕೆದಕಿ ಹಿನ್ನೋಟಕ್ಕೆ ನೂಕಿದರೆ, ನಾವು ಕಾಣಲಾರದೆ ಉಳಿದ ಬೆಂಗಳೂರಿನ ಚಿತ್ರಣ ನಮ್ಮನ್ನು ಬೆಂಗಳೂರಿನ ಕುರಿತಾಗಿ ಮತ್ತಷ್ಟು ಕುತೂಹಲದಿಂದ ಚಿಂತಿಸುವಂತೆ ಮಾಡುತ್ತದೆ.

ಕಾದಂಬರಿಯ ತುಂಬ ಎಷ್ಟೊಂದು ಕಥೆಗಳು: ನರಸಿಂಹನೂ.. ಅವನಪ್ಪನೂ.. ಅಮ್ಮನೂ.. ಅಕ್ಕನೂ.. ನಾಗರಾಜ ಮೂರ್ತಿಯೂ.. ಮಂಗಳೆಯೂ.. ಸರೋಜಿನಿಯೂ.. ಮೋಹಿನಿಯೂ.. ಗೋವಿಂದ ಭಿಡೆಯೂ.. ಆಯುರ್ವೇದ ಡಾಕ್ಟರೂ.. ಮೇಷ್ಟರೂ.. ಅಂಜನಪ್ಪನೂ.. ಪ್ರಸಾದ್ ಶಣೈಯೂ.. ಲಕ್ಷ್ಮಣ ಪೂಜಾರಿಯೂ.. ಸಹನಳೂ.. ಪುತ್ತೂರಿನ ಬಸ್ಸಿನಲ್ಲಿ ಸಿಕ್ಕ ಮುದುಕನೂ.. ಅಳಿಲೂ.. ಬಾದಾಮಿ & ಸಂಪಿಗೆಯ ಮರವೂ.. ಇಡೀ ಕಾದಂಬರಿಯ ತುಂಬ ಎಷ್ಟೊಂದು ಕಥೆಗಳು. ಒಂದೊಂದು ಪಾತ್ರಗಳ ಬದುಕಿನ ಕಥೆಯೂ ಎಷ್ಟು ವಿಭಿನ್ನ.. ಎಷ್ಟು ವೈವಿಧ್ಯ.. ಎಷ್ಟೂ ರೋಚಕ.. ಎಷ್ಟು ಅನಿರ್ದಿಷ್ಟ.. ಎಷ್ಟು ಅಭೇದ್ಯ.. ಎಷ್ಟು ಅನೂಹ್ಯ.. ಮತ್ತು ಎಷ್ಟು ಸತ್ಯ ದರ್ಶನವೂ ಅನಿಸುತ್ತದೆ.

Satish Naik Bhadravathi

ಇಲ್ಲಿನ ಎಲ್ಲರ ಕಥೆಯ ಒಂದಷ್ಟು ಘಟನೆಗಳಿಗೆ ನಾವೆಲ್ಲರೂ ಸಾಕ್ಷಿಗಳಾಗಿರಬಹುದಾದ ಸಾಧ್ಯತೆಗಳಿವೆ. ಹಾಗಾಗಿ ಇದು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನಮಗೆ ಸಂಬಂಧಿಸಿದ, ನಾವು ಬಲ್ಲ ಕಥೆಯೇ ಹೌದೇನೋ ಅನಿಸಿದರೂ ಆಶ್ಚರ್ಯವಿಲ್ಲ. ಬೆಂಗಳೂರೆಂಬ ಒಂದು ಶಾಲೆಗೆ ಬಂದು ಸೇರಿದ ಮಕ್ಕಳೆಲ್ಲರಲ್ಲೂ ಇರಬೇಕಾದ ಸಾಮಾನ್ಯವಾಗೊಂದು ಶಿಸ್ತಿನ, ಕಟ್ಟುಪಾಡಿನ ಪರಿಪಾಠವೊಂದನ್ನ ರೂಢಿಸಿಕೊಳ್ಳಬೇಕಾದ ಬಗೆ ಈ ಕಥೆಯನ್ನ ನಮಗೆಲ್ಲರಿಗೂ ಹಾಗೆ ಸಂಬಂಧಿಸಿಕೊಡುತ್ತದೆ.

ಜೋಗಿ ಎಂಬ ಅಚ್ಚರಿ ಬರಹಗಾರ: ಜೋಗಿ ಅವರನ್ನ ಕಂಡರೆ ಆಶ್ಚರ್ಯ ಅನಿಸೋದು ಎಷ್ಟು ಬರೀತಾರಪ್ಪ ಈ ಮನುಷ್ಯ ಅನ್ನೋ ವಿಚಾರಕ್ಕೆ. ಈಗಷ್ಟೇ ಅವರ ಹೊಸ ಪುಸ್ತಕವನ್ನ ಕೊಂಡವರು ಇನ್ನೂ ಅದನ್ನ ಓದಿಯೇ ಇರೋದಿಲ್ಲ ಆಗಲೇ ಮತ್ತೊಂದು ಪುಸ್ತಕ!

{blurb}

ಒಂದು ಕವಿತೆ ಬರೆದು ಒಂದು ವಾರಕ್ಕೆ ಖಾಲಿಯಾಗಿ ಕೂತುಬಿಡುವ ನಮ್ಮಂಥವರ ಮಧ್ಯೆ ಪತ್ರಿಕೆಯಲ್ಲಿನ ಅಂಕಣ.. ಸಿನಿಮಾ ವಿಮರ್ಶೆ.. ದಿನಮಾನದ ಅನೇಕ ರಾಜಕೀಯ & ಸಾಮಾಜಿಕ ವಿಚಾರಗಳ ಕುರಿತಾದ ಅವರ ಟೀಕೆ, ವಿಡಂಬನೆ, ಅಭಿಪ್ರಾಯ, ವಿಚಾರ ಮಂಥನ.. ಸಿನಿಮಾ ಮತ್ತು ಧಾರಾವಾಹಿಗಳಿಗೆ ಬರೆಯೋದು. ಜೊತೆಗೆ ಅಷ್ಟೊಂದು ಪುಸ್ತಕಗಳನ್ನ ಓದೋದು ಮಾಡೋದು ಜೋಗಿ ಅವರಿಂದ ಹೇಗೆ ಸಾಧ್ಯ ಅನಿಸುತ್ತದೆ.

ನಮಗಾರಿಗೂ ಸಿಕ್ಕದ ಅಷ್ಟೊಂದು ಸಮಯ ಅವರಿಗೆ ಎಲ್ಲಿಂದ ಸಿಕ್ಕಬಹುದೆಂಬ ಕುತೂಹಲವಿದೆ. ನೆಚ್ಚಿನವರ ಒಂದು ಕಥೆಯನ್ನೋ ಲೇಖನವನ್ನೋ ಕವಿತೆಯನ್ನೋ ಆಸ್ಥೆಯಿಂದ ಮನಸಿಟ್ಟು ಕೂತು ಓದಲು ಸಮಯ ಹೊಂದಿಸಿಕೊಳ್ಳಲಾಗದೆ ಒದ್ದಾಡುವ ನಾವುಗಳು, ಅಷ್ಟೆಲ್ಲವನ್ನೂ ಅನವರತವಾಗಿ ಬರೆಯೋ ಜೋಗಿಯವರನ್ನ ಕಂಡು ಹುಬ್ಬು ಹಾರಿಸುವಂತಾಗದೆ ಇರಲಾಗುವುದಿಲ್ಲ. ಬರವಣಿಗೆಯನ್ನ ಒಂದು ತಪಸ್ಸಿನಂತೆ ಭಾವಿಸುವ ಜೋಗಿಯವರಿಂದ ಮಾತ್ರ ಅಂಥದ್ದೊಂದು ಲವಲವಿಕೆಯನ್ನ ನಿರಂತರವಾಗಿ ಕಾಯ್ದುಕೊಳ್ಳಲು ಸಾಧ್ಯವೇನೋ.

Jogi

ಬೇಸರ ಎನಿಸದ ಕಥೆಗಳು: ಅದೇನು ಬರೆದರೂ, ಎಷ್ಟು ಬರೆದರೂ ಜೋಗಿ ಸರ್ ಬರಹಗಳು ಯಾವ ಕ್ಷಣಕ್ಕೂ ಬೇಸರವೆನಿಸೋದಿಲ್ಲ. ಅವರು ಬರೆವ ಪ್ರತಿ ಬರಹಗಳು ಪ್ರತಿ ಓದುಗನ ಪ್ರೀತಿಯನ್ನ ಗೆದ್ದೇ ತೀರುತ್ತವೆ. ಅವರೊಳಗೆ ಅಡಗಿರಬಹುದಾದ ಕಥಾ ವಸ್ತುಗಳ ಕುರಿತಾಗಿ ನನ್ನಲ್ಲಿ ಆಶ್ಚರ್ಯವಿದೆ. ಅವರ ಸರಳ ನಿರೂಪಣೆಯ ಕುರಿತಾಗಿ ಪ್ರೀತಿಯಿದೆ. ಪಾತ್ರಗಳ ಮನಸ್ಥಿತಿಗಳನ್ನು ಭಾವನಾತ್ಮಕವಾಗಿ ಬಲು ಸಮರ್ಥ ರೀತಿಯಲ್ಲಿ ತೆರೆದಿಡುವ ಕುರಿತಾಗಿ ಅಭಿಮಾನವಿದೆ.

ಅವರ ಚಿಂತನೆಗಳ ಕುರಿತಾಗಿ ಬೆರಗಿದೆ. ವಿಚಾರಗಳನ್ನು ತಾರ್ಕಿಕವಾಗಿ ವಿಶ್ಲೇಷಿಸುವ ರೀತಿಗೆ ಸೋಜಿಗವೆನಿಸಿದ್ದಿದೆ. ಅಷ್ಟು ಬರೆದರೂ ಒಬ್ಬ ಲೇಖಕ ಖಾಲಿಯಾಗದೇ ಉಳಿಯೋದು.. ಎಷ್ಟು ಬರೆದರೂ ಓದುಗನ ದೃಷ್ಟಿಯಲ್ಲಿ ಯಾವ ಕ್ಷಣಕ್ಕೂ ಲೇಖಕ ನೀರಸ ಅನಿಸಿಕೊಳ್ಳದೇ ಉಳಿಯೋದು ಸವಾಲಿನ ಕೆಲಸವೇ ಸರಿ. ಜೋಗಿ ಅಂತಹ ಸವಾಲುಗಳನ್ನ ಇಲ್ಲಿಯವರೆಗೂ ಅನಾಯಾಸವಾಗಿ ಗೆಲ್ಲುತ್ತ ಬಂದಿದ್ದಾರೆ. ಆ ವಿಚಾರಕ್ಕಾಗಿ ನಿಜಕ್ಕೂ "ಗ್ರೇಟ್ ಮಾರಾಯ" ಅನಿಸಿಕೊಳ್ಳುತ್ತಾರೆ.

ಆರು ಋತುಮಾನಗಳಿಗೆ ತಕ್ಕ ಹಾಗೆ.. ಆಯಾ ಕಾಲಮಾನಗಳ ಹವಾಮಾನ, ಗುಣಮಾನಗಳಿಗೆ ತಕ್ಕ ಹಾಗೆ ವಿವಿಧ ದೃಷ್ಟಿಕೋನಗಳಿಂದ.. ವಿವಿಧ ಕಥಾವಸ್ತುಗಳಿಂದ ಬೆಂಗಳೂರೆಂಬ ಮಹಾನಗರದ ವಿಶಿಷ್ಟ ಪ್ರಪಂಚದ ಜೀವಂತಿಕೆಯನ್ನು ಚಿತ್ರಿಸಿಕೊಡುವ ಹಲವು ಕಥಾ ಮಾಲಿಕೆಯ ಮೊದಲ ಸಂಚಿಕೆ "ಗ್ರೀಷ್ಮ"ದ ನರಸಿಂಹನ ಕತೆ. ಪುಸ್ತಕ ಹಿಡಿದು ಕೂತದ್ದಷ್ಟೇ ನೆನಪು ಮತ್ತೆ ಇಹಕ್ಕೆ ಬಂದದ್ದು ಪೂರ್ತಿ ಮುಗಿಸಿದ ಮೇಲೇನೆ.

ಈ ತಿಂಗಳಲ್ಲಿ ಹಿಡಿದ ಪುಸ್ತಕಗಳಲ್ಲಿ ಒಂದೇ ಬೈಠಕ್ ಗೆ ಓದಿ ಮುಗಿಸಿದ್ದು ಇದು ಎರಡನೇ ಪುಸ್ತಕ. ಓದುಗನನ್ನು ಹಾಗೆ ಮಂತ್ರಮುಗ್ಧನನ್ನಾಗಿಸಿ ಓದಿಸಿಕೊಳ್ಳುವ ಶಕ್ತಿ ಬೆಂಗಳೂರು ಕಾದಂಬರಿಗಿದೆ. ಕಾದಂಬರಿ ಅದೆಷ್ಟು ಇಷ್ಟವಾಗುವ ಹೋಯಿತು ಅಂದ್ರೆ, ಇನ್ನುಳಿದ ಮಾಲಿಕೆಗಳು ಈ ಕ್ಷಣಕ್ಕೆ ಸಿಕ್ಕಿದ್ದರೂ ಅದೇ ಹಸಿವಿನಲ್ಲಿ ಅದೇ ಅವಸರದಲ್ಲಿ ಓದಿ ಮುಗಿಸುತ್ತಿದ್ದುದು ಸತ್ಯ.

ಮತ್ತೊಂದು ಒಳ್ಳೆಯ ಪುಸ್ತಕವನ್ನೋದಿದ ಖುಷಿ ನನ್ನದು. ಜೋಗಿ ಸರ್ ರ ಬಹುತೇಕ ಎಲ್ಲಾ ಪುಸ್ತಕಗಳನ್ನು ಓದಿಕೊಂಡಿರುವ ನಾನು ಎಲ್ಲ ಪುಸ್ತಕಗಳಿಂದಲೂ ಸಂತಸ ಪಟ್ಟಿದ್ದೇನೆ. ಈ ಪುಸ್ತಕದಿಂದ ದೊರೆತ ಸಂತೋಷಕ್ಕೆ ಮಾತ್ರ ಹಂಚಿಕೊಳ್ಳಲೇಬೇಕೆನ್ನುವ ಅದಮ್ಯ ಉತ್ಸುಕತೆಯನ್ನ ತೋರಿದ್ದೇನೆ. ಹಂಚಿಕೊಂಡಷ್ಟೂ ಅಗಾಧವಾಗೋದು ಸಂತೋಷದ ಸ್ವಭಾವ. ಈ ಪುಸ್ತಕವನ್ನೋದುವ ಯಾರಿಗೂ ಈ ಪುಸ್ತಕ ನಿರಾಸೆ ಮಾಡುವುದಿಲ್ಲ ಎನ್ನುವ ಭಾವನೆ ನನ್ನದು.

ಬರವಣಿಗೆಯ ವಿಚಾರದಲ್ಲಿ ಜೋಗಿ ಹೀಗೆ ನಿರಂತರ ಹರಿಯಬೇಕು. ನಿರಂತರ ಹರಿದರೂ ಯಾವತ್ತಿಗೂ ಖಾಲಿಯಾಗದೆ ಉಳಿಯಬೇಕು. ಅವರಂಥವರುಗಳ ಬರಹಗಳನ್ನ ಮೊಗೆದು ಓದಿಕೊಳ್ಳುವ ಮೂಲಕ ನಾವುಗಳೂ ಸಾಧ್ಯವಾದಷ್ಟು ತುಂಬಿಕೊಳ್ಳುತ್ತಾ ಹೋಗಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jogi alias Girish Rao's Bengaluru Kannada book review by Satish Naik Bhadravathi. Bengaluru is like watching a English film. How the Writer Jogi has narrated the perception of Bengaluru from different views
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more