ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರ್ಕು ಕಾದಂಬರಿಯ ಆಯ್ದ ಭಾಗ: ಅಂಬರಕ್ಕೆ ಮಳೆ ಜಡಿದೂ

By ಶಿವಾನಂದ ಕರ್ಕಿ
|
Google Oneindia Kannada News

ಮೂಲತಃ ಕೃಷಿ ಕುಟುಂಬದಿಂದ ಬಂದಿರುವ ಶಿವಾನಂದ ಕರ್ಕಿ ಜನಪದ ವಿಚಾರದಲ್ಲಿ ಸ್ನಾತಕೋತ್ತರ ಪ್ದವಿ ಪಡೆದಿದ್ದಾರೆ. ಇವರ ಎರಡನೇ ಕೃತಿ 'ಗುರ್ಕ'. ಇವರು ಸೃಷ್ಟಿಸಿರುವ ಮಲೆನಾಡಿನ ಈ 'ಮಾಯಾಲೋಕ'ದಲ್ಲಿ ಊರು ಸುಡುತ್ತದೆ, ಬೇಗುತ್ತದೆ, ಬಾಯಾರುತ್ತದೆ. ನಂತರ ಮಳೆ ಬಂದು ಎಲ್ಲವೂ ತಣ್ಣಗಾಗುತ್ತದೆ. ಕತೆ ಅಷ್ಟಕ್ಕೆ ನಿಲ್ಲದೆ ಹಣ ಅಥವಾ ದುಡ್ಡು ಎಲ್ಲ ಪರಿಕಲ್ಪನೆ ಹೇಗೆ ಮಳೆಯ ಕಾಡಿನ ಜನರ ಜೀವಂತಿಕೆಯ ಹೃದಯ ಸೀಳಿತು ಎಂಬುದರ ಗಟ್ಟಿ ನಿರೂಪಣೆಯನ್ನೂ ಒಳಗಾಗುತ್ತದೆ.

ಈ ಕಾದಂಬರಿ ಶನಿವಾರ ಮೇ 28ರಂದು ತೀರ್ಥಹಳ್ಳಿ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಮಧ್ಯಾಹ್ನ 3.30ಕ್ಕೆ ಲೋಕಾರ್ಪಣೆಗೊಳ್ಳಲಿದೆ. ವೈವಿಧ್ಯ ಕಳೆದುಕೊಂಡ ಮಲೆನಾಡು, ಗ್ರಾಮೀಣ ಜನಜೀವನದ ಮೇಲಿನ ಗಂಭೀರ ಪರಿಣಾಮ, ಹಣ, ವ್ಯಾಮೋಹ, ಆಸೆ, ಪರಿಸರ ಕಾದಂಬರಿ ಮೂಲ ಕಥಾವಸ್ತು. ಈ ಕಾದಂಬರಿ ಆಯ್ದ ಭಾಗ ನಿಮ್ಮ ಓದಿಗೆ ಇಲ್ಲಿದೆ-- ಸಂಪಾದಕ.

ಅಂಬರಕ್ಕೆ ಮಳೆ ಜಡಿದೂ....

ಶಿವಕುಮಾರ ಚಿಕ್ಕವನಿದ್ದಾಗ ಅವನ ಅಜ್ಜಿ ಸಾವಂತ್ರಮ್ಮ ಒಂದು ಚೂರು ಶೀತ, ತಲೆನೋವು, ಜ್ವರ ಅಂತ ಕಾಣಿಸಿಕೊಂಡರೆ ಸಾಕು, "ಹಣಗೆರೆ ಒಡೆಯಾ ನೀನೇ ಕಾಪಾಡಪ್ಪಾ ಹುಡುಗುನ ಹೆಸರಲ್ಲಿ ನಿಂಗೆ ಸಕ್ರೆ ಒದ್ಕಿ ಮಾಡಿಸ್ತೀನಿ" ಅಂತ ಹರಕೆ ಹೇಳಿಕೊಳ್ಳುತ್ತಿದ್ದಳು.

ಅದೂ, ಇದೂ ಅಂತ ಔಷಧಿ ಮಾಡಿದ ಮೇಲೆ ಶಿವಕುಮಾರನ ಶೀತ, ಜ್ವರ, ತಲೆನೋವು ಕಡಿಮೆಯಾಗುತ್ತಿತ್ತು! ಆದರೆ, ಶಿವಕುಮಾರನ ಅಜ್ಜಿ ಮಾತ್ರ ತಾನು ಹಣಗೆರೆ ಒಡೆಯನ ಬಳಿ ಪ್ರಾರ್ಥನೆ ಮಾಡಿಕೊಂಡಿದ್ದಕ್ಕೆ ಮೊಮ್ಮಗನಿಗೆ ಅಂಟಿದ ಜಾಡ್ಯ ಹೊರಟು ಹೋಗಿದ್ದು ಎಂದು ನಂಬುತ್ತಿದ್ದಳು.

ಹಣಗೆರೆ ಸಮೀಪ ತನ್ನ ತಮ್ಮಂದಿರ, ಮನೆ ಜಮೀನು ಇದ್ದಿದ್ದರಿಂದ ಆಗಾಗ್ಗೆ ಆ ಊರಿಗೆ ಹೋಗುತ್ತಿದ್ದ ಸಾವಂತ್ರಮ್ಮ ಬಸ್ಸಿಳಿದವಳೇ ಹಣಗೆರೆಯ ಹಜರತ್ ಸೈಯದ್ ಸಾದತ್ ದರ್ಗಾ ಹಾಗೂ ಭೂತರಾಯ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗಿ ಅರ್ಧ ಕೆಜಿ ಸಕ್ಕರೆಯನ್ನು ದೇವಸ್ಥಾನದ ಸಮಾದಿ ಬಳಿ ಕುಳಿತಿದ್ದ ಮುಜಾವರ್ ಸಾಬರ ಬಳಿ ಕೊಡುತ್ತಿದ್ದಳು. ದೇವರಿಗೆ ಸಕ್ಕರೆ ಒದಿಕೆ ಮಾಡಿಲು ಮುಜಾವರ್ ಪಠಿಸುತ್ತಿದ್ದ. ಸಾವಂತ್ರಮ್ಮಳಿಗೆ ಅರ್ಥವಾಗದ ಅರೇಬಿಕ್ ಪ್ರಾರ್ಥನೆಯನ್ನು ಒಂದು ಚೂರೂ ಬಿಡದೇ ಕೇಳಿಸಿಕೊಂಡು ನವಿಲುಗರಿಯ ಗುಚ್ಚದಿಂದ ತಲೆ ಮೇಲೆ ಬಡಿಸಿಕೊಂಡು ಬರುತ್ತಿದ್ದಳು.

ಜೊತೆಯಲ್ಲಿ ಶಿವಕುಮಾರನನ್ನು ಕರೆದುಕೊಂಡು ಹೋಗಿ ಸಕ್ಕರೆ ಜೊತೆ ವಿಭೂತಿಯನ್ನು ಮಿಶ್ರಣ ಮಾಡಿದ್ದ ಪ್ರಸಾದ ನೀಡಿ ತಿನ್ನುವಂತೆ ಹೇಳಿ ಕೈಮೇಲೆ ಹಾಕಿದ ವಿಭೂತಿ ಮಿಶ್ರಿತ ಸಕ್ಕರೆಯನ್ನು ನಾಲಿಗೆ ಮೇಲೆ ಇಟ್ಟು ಹಣೆಗೆ ಉದ್ದನೆಯ ವಿಭೂತಿ ಪಟ್ಟೆ ಬಳಿದು ಅಂತ್ರ, ತಾಯತದ ಹಾರ ಹಾಕಿಸುತ್ತಿದ್ದಳು. ಅಲ್ಲಿದ್ದ ಸಮಾಧಿ ಪಕ್ಕದಲ್ಲಿನ ಎರಡು ಜೋಡಿ ಮತ್ತಿ ಮರದಲ್ಲಿ ನೆಲೆ ನಿಂತ ಭೂತಪ್ಪ, ಚೌಡಮ್ಮಳಿಗೆ ಕಾಯಿ ಒಡೆದು ಮರದ ಸುತ್ತಲೂ ನೆಟ್ಟಿದ್ದ ತ್ರಿಶೂಲಗಳಿಗೆ, ಹರಕೆ ಒಪ್ಪಿಸಿ ವಿರೋಧಿಗಳ ಬಾಯಿ ಮುಚ್ಚಿಸಿದ್ದ ಬೀಗಗಳಿಗೆ, ದೇವರಲ್ಲಿ ಪ್ರಾರ್ಥಿಸಿಕೊಂಡ ಪತ್ರಗಳಿಗೆ, ತ್ರಿಶೂಲಕ್ಕೆ ಸೇರಿದಂತೆ ಮತ್ತಿ ಮರಕ್ಕೆ ಕುಂಕುಮ ಬಳಿದು, ಹೂವು ಹಾಕಿ ದೈನ್ಯತಾ ಭಾವದಿಂದ ನಮಸ್ಕರಿಸಿ ಮತ್ತಿಮರದ ಬುಡಕ್ಕೆ ಅಡ್ಡಬಿದ್ದು, "ಸ್ವಾಮೀ ಕಾಪಾಡಪ್ಪಾ ಹಣಗೆರೆ ಒಡೆಯಾ" ಎನ್ನುತ್ತಿದ್ದಳು.

Garku Kannada Novel by Shivanand Karki, Read this chapter

ಶಿವಕುಮಾರ ತನ್ನ ಅಜ್ಜೀಮನೆಗೆ ಹೋಗಿದ್ದಾಗ ವಾರ ಪೂರ್ತಿ ಉಳಿದರೂ ಒಂದೇ ಒಂದು ದಿನ ಬಿಡದಂತೆ ಬೆಳಿಗ್ಗೆ ಎದ್ದು ಮುಖ, ಕೈ ಕಾಲು ತೊಳೆದ ನಂತರ ಹಣಗೆರೆ ದೇವರ ಪ್ರಸಾದವನ್ನು ತಿನ್ನಬೇಕಿತ್ತು.

"ಏನಾದರೂ ಈ ಮೊಮ್ಮಕ್ಕಳ ಜೀವ ಉಳಿಸಿಕೊಂಡಿದ್ದರೆ ಅದು ಹಣಗೆರೆ ಒಡೆಯನ ಕೃಪೆಯಿಂದ" ಎಂದು ಸಾವಂತ್ರಮ್ಮ ನಂಬಿದ್ದಳು.

ಹಣಗೆರೆಯ ವಿಶೇಷತೆಯೇ ಹಾಗಿತ್ತು. ಒಂದು ಸಣ್ಣ ಕಟ್ಟಡದಲ್ಲಿ ತಣ್ಣಗೆ ಮಲಗಿದ್ದ ದಾರ್ಶನಿಕನೊಬ್ಬನ ಸಮಾಧಿ ಹಾಗೂ ಅದರ ಪಕ್ಕದಲ್ಲಿ ಮುಗಿಲೆತ್ತರಕ್ಕೆ ತಲೆ ಎತ್ತಿದ ಜೋಡಿ ಮತ್ತಿ ಮರದಲ್ಲಿ ಆಶ್ರಯ ಪಡೆದಿದ್ದ, ಭೂತರಾಯ, ಚೌಡಮ್ಮನಿಗೆ ಅದು ಎಂಥಹ ದೈವೀಶಕ್ತಿ ಇತ್ತೋ ಗೊತ್ತಿಲ್ಲ!

ಪ್ರತಿ ನಿತ್ಯ ಸಾವಿರಾರು ಭಕ್ತರು ಬಂದು ಹಣಗೆರೆಯಲ್ಲಿ ಜಮಾಯಿಸುತ್ತಿದ್ದರು. ಬಯಲು ನಾಡಿನಿಂದ ಬರುವವರಿಗೆ ಹಣಗೆರೆಯ ಸುತ್ತಮುತ್ತ ಸುಮಾರು ವರ್ಷಗಳಿಂದ ನಿರ್ಮಾಣ ಮಾಡಿದ ಸಾಗುವಾನಿ ಪ್ಲಾಂಟೇಷನ್ ಮೋಹಕವಾಗಿ ಕಂಡು, ಪ್ಲಾಂಟೇಷನ್ ಸೆರಗಂಚಿನ ದೊಡ್ಡ ಘಟ್ಟಸಾಲು ಹೊಸ ಲೋಕದಂತೆ ಕಾಣಿಸಿ ದೈವೀಶಕ್ತಿಯ ಜೊತೆ ಪ್ರಕೃತಿ ಮಾತೆಯ ಸೊಬಗು ಬೆರೆತು ಪ್ರವಾಸಿಗರು ಹೆಚ್ಚಾಗಿದ್ದರು.

ಇಡೀ ಹಣಗೆರೆ ಒಂದು ಸೌಹಾರ್ದ ಧಾರ್ಮಿಕ ಕೇಂದ್ರ

ಹಜರತ್ ಸೈಯದ್ ಸಾದತ್ ದರ್ಗಾ ಭೂತರಾಯ ಚೌಡೇಶ್ವರಿ ದೇವಸ್ಥಾನದ ಪಕ್ಕ ಒಂದು ಮಸೀದಿ ಇದ್ದು, ಇಡೀ ಹಣಗೆರೆ ಒಂದು ಸೌಹಾರ್ದ ಧಾರ್ಮಿಕ ಕೇಂದ್ರವಾಗಿ ಹೊರಹೊಮ್ಮಿತ್ತು. ಸುಮಾರು ನಾಲ್ಕು ನೂರು ವರ್ಷಗಳ ಇತಿಹಾಸದ ಇದೆ ಎಂದು ನಂಬುತ್ತಿದ್ದ ಈ ಧಾರ್ಮಿಕ ಕೇಂದ್ರಕ್ಕೆ ರಾಜ್ಯ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಪ್ರವಾಸಿಗರು, ಭಕ್ತರು ಬರುತ್ತಿದ್ದರು. ದೇವಸ್ಥಾನದ ಸುತ್ತ ಹತ್ತಿಪ್ಪತ್ತು ಮನೆಗಳನ್ನು ಬಿಟ್ಟರೆ ಏನೂ ಆ ಭಾಗದಲ್ಲಿ ಕಂಡು ಬರುತ್ತಿರಲಿಲ್ಲ!

ಯಥೇಚ್ಛ ಬಿದಿರ ಹಿಂಡಿಲು, ಗಿಜಕಲು ಕಾಡಿನ ನಡುವೆ ಅಲ್ಲಲ್ಲಿ ಸಣ್ಣ ಪುಟ್ಟ ಅಂಗಡಿ ಬಿಟ್ಟರೆ ಮತ್ತೇನೂ ಇರಲಿಲ್ಲ. ಹಣಗೆರೆಯ ಸುತ್ತಲೂ ದೊಡ್ಡ ದೊಡ್ಡ ಹಳ್ಳಿಗಳು ನಿರ್ಮಾಣವಾಗಿದ್ದವು. ಶರಾವತಿ ಮಳುಗಡೆ ಸಂತ್ರಸ್ತರನ್ನು ರಾತ್ರಿ ವೇಳೆ ಲಾರಿಯಲ್ಲಿ ತುಂಬಿಕೊಂಡು ಬಂದು ಕಣ್ಣಿಗೆ ಬಟ್ಟೆಕಟ್ಟಿದಂತೆ ಎಲ್ಲರನ್ನೂ ದೊಡ್ಡ ಕಾಡಿನ ನಡುವೆ ಸುರಿದು ಹೋಗಿದ್ದರು.

ಬೆಳಕು ಬಿಟ್ಮೇಲೆ ತಾವೆಲ್ಲಿದ್ದೇವೆ ಎಂಬುದೇ ತಿಳಿಯದಾದ ಸಂತ್ರಸ್ತರು ಅಲ್ಲೇ ನೆಲೆ ನಿಂತು ಕಾಡು ಕಡಿದು ಜಮೀನು ಅಭಿವೃದ್ಧಿಪಡಿಸಿ ಬದುಕು ಕಟ್ಟಿಕೊಳ್ಳುವಂತಾಗಿತ್ತು. ಊರು ಬೆಳೆಯುತ್ತಾ ಹೋದಂತೆ ದೇವಸ್ಥಾನಕ್ಕೆ ಬರುವ ಭಕ್ತರ ದಂಡೂ ಹೆಚ್ಚತೊಡಗಿತು. ಅಲ್ಲಲ್ಲಿ ಬಿದಿರ ಹಿಂಡಿಲನ್ನು ಕೊರೆದು ನಾಲ್ಕು ಬಿದಿರ ದಬ್ಬೆಯ ಕೂರುವ ಬೆಂಚು ಮಾಡಿದ್ದ ಕಳ್ಳಂಗಡಿ ಬಿಟ್ರೆ ಅಂಥ ಮತ್ಯಾವ ಸೌಲಭ್ಯವೂ ಇಲ್ಲದ ಊರಾಗಿತ್ತು. ಸುತ್ತಮುತ್ತಲಿನ ಜನರು ಬೈನೇ ಮರದಿಂದ ಕಳ್ಳು ತೆಗೆದು ಮಾರುತ್ತಿದ್ದರು. ಕಾಡು ಕಡಿದು ಸಮತಟ್ಟಾದ ಜಾಗದಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ಕಾಣುವಂತೆ ಭತ್ತದ ಗದ್ದೆಗಳನ್ನು ನಿರ್ಮಿಸಿಕೊಂಡ ರೈತರು ಮುಂಗಾರಿನ ವೇಳೆ ಹದಮಳೆ ಬಿದ್ದಾಗ ಬಿತ್ತಿ ಭತ್ತ ಬೆಳೆಯುತ್ತಿದ್ದರು.

ಹೆಚ್ಚು ಹೆಚ್ಚು ಭತ್ತ ಬೆಳೆಯುವ ಮೂಲಕ ಬದುಕನ್ನು ಕಟ್ಟಿಕೊಂಡಿದ್ದರು. ಹತ್ತಾರು ಸಾಬರ ಮನೆಗಳನ್ನು ಬಿಟ್ಟರೆ ಹಿಂದೂ ಜನಾಂಗದವರ ಮನೆಗಳು ಬಹಳ ಕಡಿಮೆ ಇದ್ದವು. ಹಣಗೆರೆಯ ಸುತ್ತ ಮುತ್ತಲ ಹಳ್ಳಿಗಳಲ್ಲಿ ರೈತಾಪಿ ಮಾಡಿಕೊಂಡಿದ್ದ ನೂರಾರು ಮನೆಗಳಿದ್ದವು. ಸಂಜೆ ವೇಳೆ ಹಗಲಿಡೀ ಜಮೀನಿನಲ್ಲಿ ದುಡಿದವರು ಕಳ್ಳಂಗಡಿಗೆ ಹೋಗಿ ಕಳ್ಳು ಕುಡಿಯುತ್ತಾ, ಚಾ ಅಂಗಡಿಯಲ್ಲಿ ಗೋಲಿಬಜೆ, ನೀರುಳ್ಳಿ ಬಜೆ ಅಂಥ ತಿಂದು ಅಲ್ಲೇ ಇದ್ದ ಸಾರಾಯಿ ಅಂಗಡಿಯಲ್ಲಿ ಸಾರಾಯಿ ಕುಡಿದು ತಮ್ಮ ತಮ್ಮ ಮನೆಗಳಿಗೆ ವಾಪಸ್ಸು ಹೋಗುತ್ತಿದ್ದರು.

ಹೀಗೆ ಮನೆಗೆ ಹೋದವರು, "ಹಣಗೆರೆಯಲ್ಲಿ ಇವತ್ತು ಜನವೋ ಜನ. ಅದು ಯಾವ ಯಾವುದೋ ಊರಿನಿಂದ ಜನರು ಬರುತ್ತಿದ್ದಾರೆ" ಎಂದು ಹಣಗೆರೆ ಪೇಟೆಯ ಕಥೆಗಳನ್ನು ಹೇಳುತ್ತಿದ್ದರು. ಹಣಗೆರೆಯಲ್ಲಿ ಜನರು ಸೇರುತ್ತಾರೆ ಎಂಬುದನ್ನು ಅರಿತ ಸುತ್ತಮುತ್ತಲಿನ ಊರಿನವರು, "ಹೇಗೂ ದಿನಾ ಸಂಜೆ ಹಣಗೆರೆಗೆ ಹೋಗುತ್ತೇವೆ ತಮದೂ ಅಂತ ಒಂದು ಅಂಗಡಿ ತೆರೆದು ವ್ಯಾಪಾರ ಮಾಡಿದರೆ ಹೇಗೆ?" ಎಂದು ತಮ್ಮ ಮನಸ್ಸಿನಲ್ಲಿಯೇ ಅಂದುಕೊಂಡು ಜಲ್ಲಿ ರಸ್ತೆ ಬದಿಯಲ್ಲಿ ಖಾಲಿ ಇದ್ದ ಜಾಗದಲ್ಲೆಲ್ಲಾ ನಿಧಾನಕ್ಕೆ ಒಬ್ಬೊಬ್ಬರಾದಂತೆ ಅಂಗಡಿ ತೆರೆದು ಊದುಬತ್ತಿ, ಕರ್ಪೂರ, ಸಕ್ಕರೆ, ಕೋಳಿ, ಹಣ್ಣು ಕಾಯಿ ಮಾರಲು ಪ್ರಾರಂಭಿಸಿದರು. ಉಳಿದವರು ಸಾಬರೂ, ಹಿಂದೂಗಳೆನ್ನದೇ ಜಮೀನು ಮಾಡಿಕೊಂಡಿದ್ದರು.

ಒಬ್ಬರ ಮನೆಯ ಬೇಸಾಯಕ್ಕೆ ಇನ್ನೊಬ್ಬರು ನೆರವಾಗುತ್ತಾ ಅಣ್ಣ ತಮ್ಮಂದಿರಂತೆ ಬದುಕು ಮಾಡಿದರು. ಸುಖ, ಕಷ್ಟಗಳಲ್ಲಿ ಒಬ್ಬರಿಗೊಬ್ಬರು ನೆರವಾದರು, ಹಿಂದೂ, ಮುಸ್ಲಿಂ ಎನ್ನುವ ಯಾವ ಭಾವನೆಯೂ ಅವರಲ್ಲಿ ಸುಳಿಯದಾಗಿತ್ತು. ಹಿಂದೂಗಳಿಗೆ ಕನ್ನಡ ಭಾಷೆ ಮಾತ್ರ ಗೊತ್ತಿದ್ದರೂ ಅಲ್ಲಿನ ಬಹುತೇಕರು ಸುಲಲಿತವಾಗಿ ಉರ್ದು ಭಾಷೆಯನ್ನು ಮಾತನಾಡುವಷ್ಟು ಅವರು ಒಬ್ಬರಿಗೊಬ್ಬರು ಬೆರೆತರು. ಮದುವೆ, ಮಂಜಿ, ತೊಟ್ಟಿಲು ಶಾಸ್ತ್ರ ಅಂತ ಎಲ್ಲಾ ಕಾರ್ಯಕ್ರಮಗಳಿಗೂ ತಪ್ಪದೇ ಹೋಗುತ್ತಿದ್ದರು. ಸತ್ತರೆ, ಕೆಟ್ಟ್ರೆ ಒಬ್ಬರಿಗೊಬ್ಬರು ಹೆಗಲು ಕೊಡುತ್ತಿದ್ದರು. ಚಪ್ಪರ ಹಾಕುವುದರಿಂದ ಹಿಡಿದು ಅಡುಗೆ ಮಾಡಿ ಬಂದವರಿಗೆಲ್ಲಾ ಬಡಿಸಿ ಆಥಿತ್ಯ ನೀಡುತ್ತಿದ್ದರು.

ಹೀಗೆ ಬೆಳೆದು ಬಂದ ಹಣಗೆರೆ ನಿಧಾನಕ್ಕೆ ಅಭಿವೃದ್ದಿ ಹೊಂದುತ್ತಾ ರಾಜ್ಯದ ಪ್ರತಿಷ್ಠಿತ ಸೌಹಾರ್ದ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಯಿತು.

Garku Kannada Novel by Shivanand Karki, Read this chapter

ಭಕ್ತರು ಕುರಿ ಹರಕೆ ಹೇಳಿಕೊಂಡವರು ಹಣಗೆರೆಗೆ ಬಂದು ಹರಕೆ ಒಪ್ಪಸಿ ಅಲ್ಲಿಯೇ ಅಡುಗೆ ಮಾಡಿ ಭೂತರಾಯ, ಚೌಡೇಶ್ವರಿಗೆ ಎಡೆ ಇಟ್ಟು ದೈವಸನ್ನಿಧಿಯಲ್ಲಿ ಒಂದು ದಿನ ಉಳಿಯುತ್ತಿದ್ದರು. ಇದು ಹಿಂದಿನಿಂದಲೂ ಬಂದ ಪದ್ದತಿಯಾಗಿತ್ತು. ಹುಣ್ಣಿಮೆ ಅಮವಾಸ್ಯೆ ಸಂದರ್ಭದಲ್ಲಿ ಕಿಕ್ಕಿರಿದು ಜನ ಸೇರುತ್ತಿದ್ದರು. ಅಲ್ಲೇ ಇರುವ ಮನೆಗಳಲ್ಲಿನ ಕೋಣೆಗಳನ್ನು ಭಕ್ತರಿಗೆ ಬಾಡಿಗೆಗೆ ನೀಡಿ ಒಂದೂ, ಎರಡೋ ಚಾಪೆ ಕೊಡುತ್ತಿದ್ದರು. ಇದೇ ಕ್ರಮದಲ್ಲಿ ಉಳಿದರೆ ಮಾತ್ರ ಹೇಳಿಕೊಂಡಿದ್ದ ಹರಕೆ ಸಲ್ಲಿಕೆಯಾಗುತ್ತದೆ ಎಂದು ಭಕ್ತರು ನಂಬಿದ್ದರು.

ಮುಜಾವರ್ ಸಾಬರ ಮನೆಯ ಪಾತ್ರೆಗಳನ್ನು ಬಾಡಿಗೆಗೆ ಪಡೆದು ಅಲ್ಲಿ ಇಲ್ಲಿ ಬಿದ್ದ ಕಟ್ಟಿಗೆ ಒಟ್ಟುಮಾಡಿ ಅಡುಗೆ ಸಿದ್ದಪಡಿಸಿ ಭಕ್ತರು ಹರಕೆ ಒಪ್ಪಿಸಿದ ನಂತರ ಆ ಬಯಲು ಕಾಡಿನಲ್ಲಿ ಸಾಮೂಹಿಕವಾಗಿ ಊಟ ಮಾಡುತ್ತಿದ್ದರು.

ವರ್ಷಗಳು ಉರುಳಿದಂತೆ ಸಾವಿರಾರು ಭಕ್ತರು ಹಣಗೆರೆಯಲ್ಲಿ ಪ್ರತಿ ನಿತ್ಯ ಗಿಜಿಗುಡುವಂತಾಯಿತು. ಸುತ್ತ ಮುತ್ತಲಿನ ಕಾಡಲ್ಲಿನ ಕಟ್ಟಿಗೆ ಬರಿದಾದವು, ಊರು ಬೆಳೆಯುತ್ತಾ ಹೋಯಿತು. ಮೂರು ನಾಲ್ಕು ದಿನಗಳ ಕಾಲ ಭಕ್ತರು ಒಂದೇ ಪ್ರದೇಶದಲ್ಲಿ ಉಳಿಯುತ್ತಿದ್ದುದರಿಂದ ಅವರಿಗೆ ಶೌಚಾಲಯದ ವ್ಯವಸ್ಥೆ ಸರಿಯಾಗಿ ಇಲ್ಲದಿದ್ದರಿಂದ ಮಲ ವಿಸರ್ಜನೆಗೆ ಬಯಲನ್ನೇ ಆಶ್ರಯಿಸುವಂತಾಯ್ತು. ಇಡೀ ಊರು ಹೇಲಿನ ರಾಶಿಯಿಂದ ತುಂಬಿ ಹೋಗಿದ್ದು ಓಡಾಡುವಾಗ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿತ್ತು. ಅಪ್ಪೀ ತಪ್ಪಿ ಒಂದು ಚೂರು ಗಮನ ಮರೆತರೆ ಖಂಡಿತಾ ಕಾಲು ಹೇಲಿನ ಮೇಲೆಯೇ ಇರುವಂತಾಗಿತ್ತು.

ಈ ಭಾಗದ ಜನರಿಗೆ ಸರಿಯಾದ ಸಮಯಕ್ಕೆ ಮಳೆ ಬಂದರೆ ಮಾತ್ರ ಬೆಳೆ ಇಲ್ಲದಿದ್ದರೆ ತಮಗಿದ್ದ ಭತ್ತದ ಗದ್ದೆಗಳನ್ನು ನೀರಿಲ್ಲದ ಕಾರಣಕ್ಕೆ ಬೀಳು ಬಿಡುತ್ತಿದ್ದರು.

ಅದೊಂದು ವರ್ಷ ಮೇ ತಿಂಗಳ ಕೊನೆಯಲ್ಲಿ ಬಹಳ ಜೋರು ಮಳೆ ಬಂದಿತ್ತು. ಇಡೀ ಭೂಮಿ ಕೆಸರು ರಾಡಿಯಾಗುವಂತಾಗಿ ರೈತರಲ್ಲಿ ಬಿತ್ತನೆಯ ಹುಚ್ಚೆಬ್ಬಿಸಿತ್ತು. ಬಹಳಷ್ಟು ರೈತರು ಮಳೆ ಬಂದ ಪ್ರಮಾಣ ನೋಡಿ ಮೊದಲೇ ಬಿತ್ತುವ ಕೆಲಸ ಮುಗಿಸಿಕೊಂಡರೆ ಒಳ್ಳೆಯದು ಎಂಬ ಕಾರಣಕ್ಕೆ ಹೂಟಿ ಶುರುಮಾಡಿ ಜಮೀನಿನಲ್ಲಿ ಎಷ್ಟು ಸಾಧ್ಯವೋ ಅಷ್ಟೂ ಭಾಗವನ್ನು ಬಿತ್ತನೆ ಮಾಡಿದ್ದರು. ಆದರೆ, ಅದೇಕೋ ಬಿತ್ತನೆಯಾದ ನಂತರ ಆಡು ಮಳೆಯೂ ಬರದಂತಾಯಿತು. ಇನ್ನೇನು ಮಳೆ ಬಂದೇ ಬರುತ್ತದೆ ಎಂದು ರೈತರಿಗೆ ಕಾಯುವುದೇ ಆದರೂ ಆಕಾಶದಲ್ಲಿ ಮೋಡಗಳು ಚಲ್ಲಾಪಿಲ್ಲಯಾಗಿ ಹರಿದಾಡಿದರೂ ಮಳೆ ಬೀಳುವ ಯಾವ ಲಕ್ಷಣಗಳೂ ಗೋಚರಿಸುತ್ತಿರಲಿಲ್ಲ.

ಅದೇ ವರ್ಷ ಹಣಗೆರೆಗೆ ಭಕ್ತರ ಸಂಖ್ಯೆ ಹೆಚ್ಚಾಗಿ ಊರೆಲ್ಲಾ ಜನರಾಗಿ ಎಲ್ಲಿ ಬೇಕೋ ಅಲ್ಲಿ ಮಕ್ಕಳು ಮರಿ, ಗಂಡಸರು, ಹೆಂಗಸರು, ವಯಸ್ಸಾದವರು ಎನ್ನದೇ ಎಲ್ಲರೂ ಹೇತು ಹಾಕಿದ್ದರು. ಜೋರು ಮಳೆ ಸುರಿದಿದ್ದರಿಂದ ಹೇಲಿನ ಕುಳ್ಳೆ ಮೇಲೆ ನೀರು ತಾಕಿದ್ದಕ್ಕೆ ಹೇತಲ್ಲೆಲ್ಲಾ ಹಸರಿಸಿ ಹೋಗಿತ್ತು. ಸುಡು ಬಿಸಿಲಿಗೆ ಬಾಡಿ ಗಾಳಿ ಬೀಸಿದಲೆಲ್ಲಾ ಹೇಲಿನ ವಾಸನೆ ಹರಡುವಂತಾಗಿತ್ತು. ಇಡೀ ಹಣಗೆರೆ ಹೇಲಿನ ಗಬ್ಬು ನಾಥದಿಂದ ತುಂಬಿಹೋಗಿತ್ತು.

ದೂರದಿಂದ ಬಂದ ಭಕ್ತರು ಮೊದ ಮೊದಲು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದವರು ನಂತರ ಹೇಲಿನ ವಾಸನೆಗೆ ಒಗ್ಗಿ ಹೋಗಿದ್ದರು. ಅಂಗಡಿಯವರು ವ್ಯಾಪಾರ ಮಾಡಬೇಕು ಎಂಬ ಕಾರಣಕ್ಕೆ ಹೇಲಿನ ವಾಸನೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ವ್ಯಾಪಾರದಲ್ಲೇ ಮುಳುಗಿದ್ದರು. ಇಡೀ ಹಣಗೆರೆಯಲ್ಲಿ ಹಜರತ್ ಸೈಯದ್ ಸಾದತ್ ದರ್ಗಾ ಹಾಗೂ ಭೂತರಾಯ, ಚೌಡೇಶ್ವರಿ ದೇವಸ್ಥಾನದ ಒಳಗೆ ಮಾತ್ರ ಊದುಬತ್ತಿ, ಕರ್ಪೂರದಂಥಹ ಪರಿಮಳ ಬಿಟ್ಟರೆ ಇಡೀ ಊರಿಗೆ ಊರೇ ಹೇಲು ವಾಸನೆಯಿಂದ ತುಂಬಿತ್ತು.

ಹಣಗೆರೆ ಸಮೀಪದ ಸುನಿಲ ಹೆಚ್ಚಿನ ವ್ಯಾಸಂಗ ಮಾಡಿದ್ದರೂ ತನ್ನ ಜಮೀನು ಅಭಿವೃದ್ಧಿ ಪಡಿಸುವ ಸಲುವಾಗಿ ಉನ್ನತ ಹುದ್ದೆಗೇರಬಹುದಾಗಿದ್ದರೂ ಹಳ್ಳಿ ಕಡೆಗೆ ಮುಖ ಮಾಡಿದ್ದ. ಹಣಗೆರೆಯಲ್ಲಿ ಸುನಿಲನ ಮಾತಿಗೆ ಬಹಳ ಗೌರವ ಕೊಡುತ್ತಿದ್ದರು. ಎಂಥಹದೇ ವಿವಾದಗಳಿದ್ದರೂ ಅದನ್ನು ಬಹಳ ಪ್ರೀತಿಯಿಂದ ಬಗೆಹರಿಸುತ್ತಿದ್ದ. ಇಡೀ ಹಣಗೆರೆ ಜನರಿಗೆ ಸುನಿಲನ ಮೇಲೆ ಎಲ್ಲಿಲ್ಲದ ಪ್ರೀತಿ, ವಿಶ್ವಾಸ. ಯಾವುದೇ ಸಮಸ್ಯೆ ಇದ್ದರೂ ಅದು ಸುನಿಲನ ಗಮನಕ್ಕೆ ಬರದೇ ಮುಂದೆ ಹೋಗುತ್ತಿರಲಿಲ್ಲ. ಇಡೀ ಊರಿನಲ್ಲಿ ಯಾರಿಗೂ ತೊಂದರೆ ಆಗದಂತೆ ಸೌಹಾರ್ಧತೆಗೆ ಧಕ್ಕೆ ಆಗದಂತೆ ಸುನಿಲ ಎಚ್ಚರ ವಹಿಸಿದ್ದ.

Garku Kannada Novel by Shivanand Karki, Read this chapter

ತನ್ನೂರನ್ನು ಕಟ್ಟುವ ಮುನ್ನ ಇಲ್ಲಿನ ಜನರ ಮನಸ್ಸನ್ನು ಗೆಲ್ಲಬೇಕು. ಅವರಿಗೆ ಅರಿವಿನ ಪಾಠ ಮಾಡಿ ಅಣ್ಣ ತಮ್ಮಂದಿರಂತೆ ಬದುಕಲು ಅವಕಾಶ ಮಾಡಿಕೊಡಬೇಕೆಂಬ ಸುನಿಲನ ಪ್ರಯೋಗಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಆಗೊಮ್ಮೆ ಈಗೊಮ್ಮೆ ಯಾವಗಲಾದರೂ ಅಪರೂಪಕ್ಕೆ ಹಣಗೆರೆ ಕಡೆಗೆ ಮುಖ ಮಾಡಿ ಅಲ್ಲಿನ ಸದ್ಯದ ವಿದ್ಯಮಾನಗಳನ್ನು ಸುನಿಲ ತಿಳಿದುಕೊಂಡು ಬರುತ್ತಿದ್ದ.

ಬಷೀರಣ್ಣನಿಗೆ ಸ್ವಲ್ಲ ಮಾತ್ರ ಗದ್ದೆ ಇದ್ದು, ಹಣಗೆರೆಯ ಒಂದು ದೂರದ ತುದಿಯಲ್ಲಿ ಗೂಡಅಂಗಡಿಯನ್ನು ಇಟ್ಟುಕೊಂಡು ಕೃಷಿಯ ಜೊತೆಗೆ ಸಣ್ಣ ಕೈ ವ್ಯಾಪಾರದ ಮೂಲಕ ಜೀವ ಹಿಡಿದಿಟ್ಟುಕೊಂಡಿದ್ದ. ಅವನಿಗೆ ಐದು ಮಂದಿ ಹೆಣ್ಣು ಮಕ್ಕಳಿದ್ದು ಅವರಲ್ಲಿ ಮೂರು ಮಂದಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದ. ಸುನಿಲನಿಗೆ ಯಾವಾಗಲಾದರೂ ಬಷೀರಣ್ಣನ ಗೂಡಅಂಗಡಿ ಮುಂದೆ ಬಿದಿರಡ್ಡೆಯ ಬೆಂಚಿನ ಮೇಲೆ ಕುಳಿತು ಒಂದು ಸೀಗರೇಟು ಸೇದು ಮನೆಗೆ ವಾಪಸ್ಸಾಗುತ್ತಿದ್ದ.

ಬಷೀರಣ್ಣನ ಜೊತೆ ಅದೂ ಇದೂ ಅಂತ ಯಾವಾಗಲೂ ಮಾತಾಡುತ್ತಿದ್ದ. ಅಂದು ಬಷೀರಣ್ಣ ಬಹಳ ಬೇಸರದಲ್ಲಿದ್ದಂತೆ ಕಂಡು ಬಂತು.
"ಏನ್ ಬಷೀರಣ್ಣ, ಹೇಗಿದ್ದೀರಿ?" ವಿಚಾರಿಸಿದ ಸುನಿಲ.

"ಹೇಗಿರೋದು ಸುನಿಲಣ್ಣ, ಭಾರೀ ಸಮಸ್ಯೆ ಅಬ್ಬಿಟ್ಟೈತೆ. ಏನು ಮಾಡಿದರೂ ನಮ್ದೂಕೆ ಕೈ ಹತ್ತಲ್ಲಾ, ಈ ಜೀವನವೇ ಸಾಕು ಅಂತ ಅನ್ಸಿ ಬಿಟ್ಟೈತೆ" ಎಂದ ಬಷೀರ.

"ಯಾಕೆ ಏನಾತು ಮಾರಾಯ? ಯಾವತ್ತೂ ಜೀವನ ಬೇಜಾರು ಅಂತ ಅನ್ನಿಸಬಾರದು, ಕಷ್ಟದ ನಡುವೆ ಬದುಕುವ ಸುಖ ಹೆಚ್ಚಿನದ್ದು, ಅದನ್ನು ಕಳ್ಕೋ ಬಾರ್ದು" ಸುನಿಲ ಮಾತು ಮುಂದುವರಿಸಿದ.

"ಮೊನ್ನೆ ನೋಡಿ ಆ ಬೈರಣ್ಣನ ಮಗನಿಗೆ ಆ್ಯಕ್ಸಿಡೆಂಟಾತು. ತಕ್ಷಣಕ್ಕೆ ನಮ್ಮ ಕಲಾಂ ಆಸ್ಪತ್ರೆಗೆ ಸೇರಿಸ್ಸಿದ್ದ. ಭಾರಿ ಮೈಯಿಂದ ರಕ್ತ ಸೋರಿದ್ದಕ್ಕೆ ಡಾಕ್ಟ್ರು ಆಗಲ್ಲ, ತಕ್ಷಣ ರಕ್ತ ಕೊಟ್ಟ್ರೆ ಬದುಕ್ತಾನೆ ಅಂದ್ರಂತೆ. ಕಲಾಂ ಹುಡ್ಗ ನಂದು ರಕ್ತ ಆಗ್ತದ ನೋಡಿ ಅಂದ್ನಂತೆ. ನೋಡಿದ್ರೆ ಅವನ ರಕ್ತ ಮ್ಯಾಚ್ ಆಗ್ತಿತ್ತಂತೆ, ತಕ್ಷಣ ಕಲಾಂ ಅವ್ನಿಗೆ ರಕ್ತ ಕೊಟ್ಟು ಉಳಿಸಿದ್ನಂತೆ. ನಿಮ್ಗೆ ಗೊತ್ತಾಯ್ತ ಸುನಿಲಣ್ಣಾ?" ಬಷೀರ ಕತೆ ಮುಂದುವರಿಸಿದ.

"ಇಲ್ಲ ಬಷೀರಣ್ಣ ನಾನು ಊರಲ್ಲಿ ಇರ್ಲಿಲ್ಲ". ಸುನಿಲ ಕುತೂಹಲ ಹೆಚ್ಚಾಯಿತು.

"ಈಗ ನೋಡಿ ಸುನೀಲಣ್ಣ ಮನುಷ್ಯರಾದವರು ಯಾರೂ ಈ ಊರಲ್ಲಿ ಇರಂಗಿಲ್ಲ! ಎಲ್ಲಿ ನೋಡಿದ್ರೂ ಹೇಲಿನ ಗಬ್ಬು ನಾಥ, ಹೇಲಿನದ್ದೇ ವಾಷಣ, ನಮ್ಗೆ ವಾಷಣ ಕುಡ್ದು ಕುಡ್ದು ಸಾಕಾಗಿ ಹೋಗಿದೆ. ಹೇಲಿನ ವಾಷಣ ತಡೆಯಕ್ಕೆ ಆಗ್ದೆ ಅಂಗ್ಡಿ ಒಳಗಿದ್ದ ಬೀಡಿ ಸೇದೂ ಸೇದೂ ಬೀಡಿ ಎಲ್ಲಾ ಖಾಲಿ ಆಗ್ಬಿಟೈತೆ. ಮಳೆ ಬೇರೆ ಕೈ ಕೊಟ್ಟೈತೆ, ದೇವ್ರು ನಮ್ಗೆ ಏನು ಒಳ್ಳೆದು ಮಾಡಿದ್ದಾನೆ? ಜನ ನೋಡಿದ್ರೆ ಅದು ಯಾವ್ದೋ ಊರಿಂದ ಬರ್ತಾರೆ, ದೇವ್ರ ಹೆಸರಲ್ಲಿ, ತಿಂದುಂಡು ಹೇಲ್ತಾರೆ, ನಾವು ಬರೀ ವಾಷಣ ಕುಡ್ಕಂಡು ಇರ್ಬೇಕಷ್ಟೆ. ಈ ವಾಷಣ ತಡೆಯಕ್ಕೆ ಏನಾದ್ರೂ ಮಾಡ್ಬೇಕು ಸುನಿಲಣ್ಣ, ಈ ಬಕ್ತರನ್ನ ಹಿಂಗೇ ಬಿಟ್ರೆ ಮನೆ ಒಳ್ಗೆ ಬಂದು ಹೇಲ್ತಾರೆ".

ಬಷೀರ ವ್ಯಗ್ರನಾಗಿದ್ದ. ಎಲ್ಲವನ್ನೂ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದ ಸುನಿಲ, "ನಂದೂ ಸುಮಾರು ಕೆಲ್ಸ ಬಾಕಿ ಐತೆ. ಗದ್ದೆಗೆ ಇನ್ನೂ ಬೇಲಿ ಆಗಿಲ್ಲ. ಎಲ್ಲರೂ ಬಿತ್ತಿದರೂ ನಾನು ಇನ್ನೂ ಬಿತ್ತಿಲ್ಲ. ಬೀಜದ ಭತ್ತ ಮನೇಲೇ ಇದೆ. ಇನ್ನೊಂದು ಸಾರಿ ಮಳೆ ಬಿದ್ದ ನಂತ್ರ ಬೀಜ ಹಾಕ್ತೇನೆ" ಎನ್ನುವಾಗಲೂ ಬಷೀರಣ್ಣ ಬೇಸರದಲ್ಲೇ ಇದ್ದ.

"ಈ ಮಳೆ ನಂಬ್ಕಂಡು ಸಾಕಾಗಿ ಹೋಗೈತೆ. ಆಕಾಸ ನೋಡಿ ನೋಡಿ ಮ್ಯಾಣೆ ವಾರೆ ಆಬ್ಬಿಟ್ಟೈತೆ. ಹಣಗೆರೆಗೆ ದೇವ್ರು ಏನು ಒಳ್ಳೇದು ಮಾಡೈತೆ ಹೇಳಿ ಸುನಿಲಣ್ಣ? ದೇವ್ರು ಇದ್ದಿದ್ರೆ ಹಿಂಗೆ ಯಾಕೆ ಆಗ್ತೈತೆ ಸುನಿಲಣ್ಣ?" ಎಂದು ಟಾಪಿಕ್ ಚೇಂಜ್ ಮಾಡದೆ ಬಷೀರ ಹೇಳುತ್ತಿರುವಾಗಲೇ ಒಂದು ಬಸ್ಸಿನಲ್ಲಿ, ಮೂರುನಾಲ್ಕು ಟೆಂಪೋದಲ್ಲಿ ಧೂಳೆಬ್ಬಿಸುತ್ತಾ ಭಕ್ತರು ಬಂದು ಹಣಗೆರೆಯ ದೇವಸ್ಥಾನ, ಮಸೀದಿ ಬಳಿ ಇಳಿದರು.

ಗಾಳಿ ಬೀಸಿದ ಸುಮಾರು ಎರಡು ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲೆಲ್ಲಾ ಹೇಲಿನ ವಾಸನೆ ಗಾಳಿ ಮೂಗಿಗೆ ಬಡಿಯುತ್ತಿತ್ತು. ಬಿಸಿಲೇರುತ್ತಿದ್ದಂತೆ ಗುಮ್ಮೆನ್ನುವ ವಾಸನೆಯನ್ನು ಯಾರಿಂದಲೂ ತಡೆದುಕೊಳ್ಳಲಿಕ್ಕೆ ಸಾಧ್ಯವೇ ಇಲ್ಲದಂತಾಗಿತ್ತು. ಬಷೀರಣ್ಣ ಅಂಗಡಿಯಲ್ಲಿ ಮಾರಲು ತಂದಿಟ್ಟಿದ್ದ ಬೀಡಿ ಕಟ್ಟುಗಳನ್ನು ಒಂದೊಂದಾಗಿ ತೆಗೆದು ಪುಸು ಪುಸು ಅಂತ ಸೇದುತ್ತಾ ಹೇಲಿನ ವಾಸನೆಯನ್ನು ಬೀಡಿ ವಾಸನೆ ಮೂಲಕ ಹೊಡೆದೋಡಿಸುವ ಪ್ರಯತ್ನ ನಡೆಸಿದ್ದ.

ಮೋಡ ಕಾಣ್ತದೆ ಮಳೆ ಬರಲ್ಲ

ಅದೇ ಹೊತ್ತಿಗೆ ಬಂದಿಳಿದ ಭಕ್ತರನ್ನ ನೋಡಿ ಉಗ್ರ ರೂಪತಾಳಿ, "ಎಲ್ಲಿ ಮಳೆ ಬತ್ತದೆ ಸುನಿಲಣ್ಣ, ನಾನು ಮಳೆಗಾಗಿ ಕಾಯ್ತಾ ಹದಿನೈದು ದಿನ ಆತು. ಮೋಡ ಕಾಣ್ತದೆ ಮಳೆ ಬರಲ್ಲ. ಈ ಹಣಗೆರಿ ದೇವರು ಅದೇನು ಜನಕ್ಕೆ ಒಳ್ಳೆದು ಮಾಡ್ತಾನೋ ಗೊತ್ತಿಲ್ಲ, ನಮ್ಗಂತೂ ಶಾಪ ಆಗಿಬಿಟ್ಟಿದ್ದಾನೆ, ಎಲ್ರೂ ದೇವ್ರು... ದೇವ್ರು...ಅಂಥ ಹೇಳ್ದಂಗೂ ನನ್ನ ಮೈಗೆ ಬೆಂಕಿ ಕೊಟ್ಟಂತೆ ಆಗ್ತದೆ ಎಂದ.

"ಏನು ಮಾಡಕ್ಕಾಗುತ್ತೆ ಬಷೀರಣ್ಣ, ನಾವು ಪ್ರಕೃತಿ ಜೊತೆ ಬದುಕ್ಬೇಕು, ಕಾಡು ಹಾಳು ಮಾಡ್ದಂಗೆ ಜಾಗ್ರತೆ ವಹಿಸಬೇಕು" ಅಂತ ಸುನಿಲ ಉತ್ತರಿಸುವ ಪ್ರಯತ್ನ ಮಾಡಿದ.

"ನಾವೆಲ್ಲಿ ಹಾಳು ಮಾಡೀವಿ ಸುನಿಲಣ್ಣ? ಎಲ್ಲಾ ಫಾರೆಸ್ಟನವ್ರೇ ಹಾಳು ಮಾಡವ್ರೆ. ಹಗಲು ಕಳ್ಳರ ಜೊತೆ ಕುಡ್ದು, ತಿಂದು ರಾತ್ರಿ ನಾಟಾ ಕುಯ್ದು ಮಾರಕ್ಕೆ ಬಿಡ್ತವ್ರೇ" ಮತ್ತೆ ದೂರವ ದನಿಯಲ್ಲಿ ಮುಂದುವರಿಸಿದ.

"ನೋಡು ಬಷೀರಣ್ಣ ನಾವು ಮಳೆ ಬಿದ್ದಾಗ ಬೆಳೆ ಬೆಳೀಬೇಕು, ರೈತರದ್ದು ಇದೇ ಪಾಡು ಇದಕ್ಕೆ ಮುಕ್ತಾಯ ಅನ್ನೋದು ಇಲ್ಲ" ಸುನಿಲ ನಿರ್ಣಾಯಕ ದನಿಯಲ್ಲಿ ಎಂದ.

"ಮಳೆ ಬಿದ್ದಾಗ್ಲೇ ಬಿತ್ತೀನಿ ಸುನಿಲಣ್ಣ, ಬೇವರ್ಸಿ ಮಳೆ ಕೈಕೊಟ್ಟಿದೆ. ಈ ಜನ, ದೇವ್ರು, ಮಳೆ ನೋಡ್ತಾ ಇದ್ರೆ ಸಿಟ್ಟು ನೆತ್ತಿಗೆ ಹೋಗ್ತೈತೆ" ಬಷೀರನ ದೂರು ಮುಗಿಯಲಿಲ್ಲ.

"ಅದ್ಕೆ ಏನು ಮಾಡಕ್ಕಾಗುತ್ತೇ ಮಾರಾಯ" ಸುನಿಲ ಕೂಡ ನಿಡುಸುಯ್ದ.

"ಅಂಬರಕ್ಕೆ ಹೋಗ್ಬಿಟ್ಟಿ ಮಳೆ ಜಡ್ದು, ದೇವ್ರೀಗೆ ಹಿಡ್ದು ಖೇ...(ಧು) ಬಿಡ್ಬೇಕು" ಬಷೀರ ತನ್ನೊಳಗಿದ್ದ ಅಗ್ನಿಜ್ವಾಲೆಯನ್ನು ಹೊರಹಾಕಿದ.

ಸುನಿಲನಿಗೆ ಬಷೀರಣ್ಣನ ಕಠೋರ ಮಾತು ಇಂಥಹ ಸೂಕ್ಷ್ಮ ಸ್ಥಳದಲ್ಲಿ ಭಾವೈಕ್ಯತೆಯಿಂದ ಬದುಕು ಕಟ್ಟಿಕೊಂಡವರಿಗೆ ಈ ಪರಿಯಲ್ಲಿ ಸಿಟ್ಟು ಬರಲು ಕಾರಣವೇನು ಎಂದು ಕಾಡಲಾರಂಭಿಸಿತು.

"ಬಷೀರಣ್ಣ, ನಾನು ಹೀಗೆ ಹೇಳ್ತೀನಿ ಅಂಥ ಬೇಜಾರು ಮಾಡ್ಕೋಬೇಡಿ, ಯಾರ ಹತ್ರಾನೂ ಹೀಗೆ ಮಾತಾಡ್ಬೇಡಿ ಅದನ್ನೇ ಒಂದು ಕಥೆ ಕಟ್ಟಿ ನಮ್ಮ ಮಧ್ಯೆ ತಂದು ಇಟ್ಟರೆ ಕಷ್ಟ" ಎಂದ.

"ಈಗ ಮನುಷ್ಯರೆಲ್ಲಾ ದೇವರಾಗಿದ್ದಾರೆ. ಮನುಷ್ಯರ ಮನಸ್ಸನ್ನು ನೋವು ಮಾಡ್ಬಾರ್ದು. ದೇವ್ರು ಈಗ ದೇವಸ್ಥಾನ, ಮಸೀದಿ, ಚರ್ಚುಗಳಲ್ಲಿಲ್ಲ. ಎಲ್ಲಾ ದೇವರುಗಳು ಮನುಷ್ಯರ ಮೇಲೆ ಆಳಿಕೆಯಾಗಿ ಮದದಿಂದ ತೊನೆದಾಡುತ್ತಾ ಗೀಳಿಡುತ್ತಿವೆ. ನೀನು ದೇವ್ರ ಬಗ್ಗೆ ಹೇಳ್ದೆ ಅಂದ್ರೆ ಅದು ಮನುಷ್ಯರ ಬಗ್ಗೇನೇ ಹೇಳಿದ್ದು ಅಂಥಾನೇ ಅರ್ಥ. ಹಂಗಾಗಿ ಬಹಳ ಎಚ್ಚರಿಕೆಯಿಂದ ಇದ್ದು ಮಾತಾಡ್ಬೇಕು ಬಷೀರಣ್ಣಾ" ಅಂತೇನೋ ಅಂದ.

"ಜೀವನ ಪೂರ್ತಿ ದೇವ್ರು, ದೇವ್ರು ಅಂಥ ಕೈ ಮುಗಿದು ಸಲಾಂ ಹಾಕಿ ಸಾಕಾಗಿದೆ. ನಮ್ಮ ಹೊಟ್ಟೆ ಮೇಲೆ ಬರೆ ಎಳ್ದ್ರೆ ಯಾರಿಗೆ ಬೈಬೇಕು ನೀವೇ ಹೇಳಿ ಸುನೀಲಣ್ಣ? ಜೀವನ ಪೂರ್ತಿ ಕೈಮುಗಿದ ನಮ್ಗೆ ನಮ್ಮ ದೇವರಿಗೆ ಬೈಯೋ ಹಕ್ಕಿಲ್ವಾ" ಎಂದ ಬಷೀರಣ್ಣ.

ಬಷೀರಣ್ಣನನ್ನು ಸಮಾಧಾನಪಡಿಸಿ ಸೀದಾ ಹಣಗೆರೆ ಹಿಂಭಾಗದ ಗದ್ದೆ ಬಯಲಿಗೆ ಸುನಿಲ ಕಾಲಿಡುತ್ತಾನೆ. ಕಣ್ಣ ಹಾಯಿಸಿದಷ್ಟು ದೂರದವರೆಗೂ ಉತ್ತಿ ಬಿತ್ತಿದ ಭತ್ತದ ಗದ್ದೆಗಳು ಸುನಿಲನ ಕಣ್ಣಿಗೆ ಬೀಳುತ್ತದೆ. ಹಣಗೆರೆ, ಕೆರೆಹಳ್ಳಿ, ಸಿರನಲ್ಲಿ, ಕುಣಜೆ, ಮಾಕೇರಿ ಹೀಗೆ ಎಲ್ಲಾ ಭತ್ತದ ಗದ್ದೆಗಳಲ್ಲಿ ಬಿತ್ತಿದ ಬೀಜಗಳು ಮಳೆ ಬರದೇ ಇದ್ದಿದ್ದರಿಂದ ಮೊಳಕೆಯಲ್ಲೇ ಸೀದು ಒಣಗಿ ಹೋಗಿದ್ದವು.

ಕೆಲವರಂತೂ ಊಟಕ್ಕೂ ಭತ್ತ ಇಟ್ಟುಕೊಳ್ಳದೇ ಬಿತ್ತಿದ್ದರು. ಎಲ್ಲಾ ರೈತರು ಮಳೆಗಾಗಿ ಆಕಾಶ ನೋಡುವಂತಾಗಿತ್ತು.

ಸುನಿಲನಿಗೆ ಮತ್ತೆ ಮನೆ ಕಡೆ ಹೋಗಲು ಮನಸ್ಸಾಗದೇ ಅದೇ ಬಷೀರಣ್ಣನ ಗೂಡಾ ಅಂಗಡಿಕಟ್ಟೆಯ ಮೇಲಿನ ಬೆಂಚಿನ ಮೇಲೆ ಕುಳಿತು ಇನ್ನೊಂದು ಸೀಗರೇಟು ಹೊತ್ತಿಸಿ, "ಬಷೀರಣ್ಣಾ ನೀನು ಹೇಳೋದು ಸರಿ ಇದೆ. ಈ ವರ್ಷ ಯಾರು ಬಿತ್ತಿದ ಬೀಜವೂ ಹುಟ್ಟಿಲ್ಲ. ನಿಂಗೆ ನಮ್ಮನೆಯಲ್ಲಿನ ಬೀಜದ ಭತ್ತ ಕೊಡ್ತೀನಿ" ಎಂದು ಬೇಸರದ ಹೆಜ್ಜೆಗಳನ್ನಿಡುತ್ತಾ ಮನೆ ಕಡೆಗೆ ನಡೆದ. ಸುನಿಲನ ಮಾತು ಕೇಳಿಸಿಕೊಂಡ ಬಷೀರಣ್ಣ ಸುನಿಲ ಮನೆ ಕಡೆ ಹೆಜ್ಜೆ ಹಾಕುವುದನ್ನು ಮರೆಯಾಗುವ ತನಕನೋಡುತ್ತಲೇನಿಂತು ಭಾವುಕನಾಗಿ ಕಣ್ಣಲ್ಲಿ ನೀರು ತುಂಬಿಕೊಂಡ.

ಗಣಗರೆಕಟ್ಟೆಯ ನೆತ್ತಿ ಸುಡುತ್ತಿದ್ದ ಬಿಸಿಲು, ವ್ಯಾಪಿಸಿದ ಹೇಲಿನ ವಾಸನೆ, ಹಚ್ಚಿದ್ದ ಸಿಗರೇಟಿನ ತಂಬಾಕಿನ ಘಾಟಿನ ನಡುವೆ ದೂರದಿಂದ ಕಂಡ್ರು ವಾಸನೆಯೊಂದು ನಿಧಾನಕ್ಕೆ ವ್ಯಾಪಿಸತೊಡಗಿತು. ಅದು ದೂರದಲ್ಲೆಲ್ಲೋ ಕಾಡಿಗೆ ಬಿದ್ದ ಗರ್ಕಿನ ವಾಸನೆ ಎಂಬುದು ಅಂಗಡಿ ಕಟ್ಟಯ ಮೇಲೆ ಕುಳಿತಿದ್ದ ಸುನಿಲಿಗೂ, ಬಷೀರನಿಗೂ ಅರ್ಥವಾಗಿತ್ತು.

English summary
Garku Kannada Novel a by Shivanand Karki is scheduled to launched on May 28, 2022 at Thirthahalli. Here is a chapter from Novel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X