• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಕಾಶ್ ರೈ ಪುಸ್ತಕಕ್ಕೆ ಅಂಕಣಕಾರ ಜೋಗಿ ಮುನ್ನುಡಿ

By Prasad
|

ಸಂಕೀರ್ಣತೆಯಲ್ಲೂ ಸರಳತೆ ಇರುವ ಅಪರೂಪದ ವ್ಯಕ್ತಿ, ಪ್ರತಿಭಾವಂತ ನಟ, ಹೋರಾಟಗಾರ, ಚತುರ ಮಾತುಗಾರ, ಭಾವಜೀವಿ, ತತ್ತ್ವಜ್ಞಾನಿ ಪ್ರಕಾಶ್ ರೈ. ಅವರಲ್ಲೊಬ್ಬ ಸೃಜನಾತ್ಮಕ ಬರಹಗಾರನೂ ಇದ್ದಾನೆ. ರೈ ಅವರ ಅಂಕಣ ಬರಹಗಳ ಸಂಕಲನ 'ಇರುವುದೆಲ್ಲವ ಬಿಟ್ಟು...' ಪುಸ್ತಕ ರೂಪದಲ್ಲಿ ಪ್ರಕಾಶಿಸಲಿದೆ. ಇದಕ್ಕೆ ಪತ್ರಕರ್ತ ಗಿರೀಶ್ ರಾವ್ ಅವರು ಮುನ್ನುಡಿ ಬರೆದಿದ್ದು, ಅದನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ಪುಸ್ತಕ ಬಿಡಗಡೆಯ ವಿವರಗಳನ್ನು ಲೇಖನದ ಕೊನೆಯಲ್ಲಿ ತಿಳಿದುಕೊಳ್ಳಿ.

***

ಪ್ರಿಯ ಪ್ರಕಾಶ್,

ಇಲ್ಲಿಯ ಎಲ್ಲ ಬರಹಗಳನ್ನೂ ನಾನು ನಿಮ್ಮ ಮಾತಿನಲ್ಲೇ ಕೇಳಿದ್ದೇನೆ. ನಿಮ್ಮ ನೂರೆಂಟು ಕೆಲಸಗಳ ನಡುವೆ, ಟಿಪ್ಪಣಿ ಮಾಡಿಕೊಂಡು, ಆ ಟಿಪ್ಪಣಿಯನ್ನು ಅಂಕಣದ ರೂಪಕ್ಕೆ ತಂದು, ಅಲ್ಲಲ್ಲಿ ಕೊಂಚ ತಿದ್ದಿ, ಬರೆದದ್ದನ್ನು ಬದಲಾಯಿಸಿ, ಎಷ್ಟೋ ಸಲ ಇಡೀ ಬರಹವನ್ನೇ ಇದೀಗ ಬೇಡ ಎಂದು ಬಚ್ಚಿಟ್ಟು- ನೀವು ಒಂದೊಂದು ಅಂಕಣ ಬರೆಯುವಾಗಲೂ ತೋರುತ್ತಿದ್ದ ಶ್ರದ್ಧೆ ಮತ್ತು ತನ್ಮಯತೆ ನನ್ನನ್ನು ಎಷ್ಟೋ ಸಲ ವಿಸ್ಮಯಗೊಳಿಸಿದೆ. ತಡವಾಗಿ ಹೂ ಬಿಟ್ಟ ಮರದ ಅನೂಹ್ಯ ಪುಳಕ ಇಲ್ಲಿಯ ಪ್ರತಿಬರಹದಲ್ಲೂ ಹಿಗ್ಗಾಗಿ ಚಿಮ್ಮಿದೆ.

ಸೈಟು, ರಾಜಕಾರಣಿಗಳೊಂದಿಗೆ ಫೈಟು : ಪ್ರಕಾಶ್ ರೈ ಸಂದರ್ಶನ

ಮನುಷ್ಯ ಕಳೆದುಹೋದಾಗ ಏನಾಗುತ್ತದೆ ಎಂದು ಯೋಚಿಸುವಂತೆ ಮಾಡುವ ಲೇಖನವೊಂದು ಈ ಸಂಕಲನದಲ್ಲಿದೆ. ನಮ್ಮನ್ನು ಯಾರು ಯಾಕೆ ಹುಡುಕುತ್ತಾರೆ, ಯಾವಾಗ ಹುಡುಕುತ್ತಾರೆ? ಆ ಹುಡುಕಾಟವೇ ನಮ್ಮೆಲ್ಲರ ಹುಮ್ಮಸ್ಸಿನ ಮೂಲವೇ? ಯಾರೂ ತನ್ನನ್ನು ಹುಡುಕುವುದಿಲ್ಲ ಅನ್ನಿಸಿದಾಗ ಮನುಷ್ಯ ಏನಾಗುತ್ತಾನೆ? ಅದೇ ಸಾರ್ಥಕತೆಯಾ? ಈ ಪ್ರಶ್ನೆಗೆ ಲೇಖನದ ಕೊನೆಯಲ್ಲಿ ಉತ್ತರ ಸಿಗುತ್ತದೆ ಎಂದು ಓದುತ್ತಾ ಹೋದೆ. ಕಣ್ಮುಂದೆ ಹಬ್ಬಿದ ಮಹಾರಣ್ಯದಲ್ಲಿ ಇದ್ದಕ್ಕಿದ್ದಂತೆ ಮರೆಯಾಗಿಹೋಗುವ ಕಾಲುದಾರಿಯಂತೆ ಬರಹ ಕೊನೆಯಾಗಿತ್ತು. ಮುಂದಿನ ದಾರಿಯನ್ನು ನೀನು ಹುಡುಕಿಕೊಳ್ಳಬೇಕು. ಅದು ನಿನ್ನ ಉತ್ಸಾಹ, ಚೈತನ್ಯ ಮತ್ತು ಕುತೂಹಲಕ್ಕೆ ಬಿಟ್ಟದ್ದು ಎಂಬ ಸೂಚನೆಯನ್ನು ಕೊಟ್ಟು ನೀವು ಸುಮ್ಮನಾಗುತ್ತೀರಿ. ಓದುಗನಾದ ನನ್ನನ್ನೂ ಕೊಂಚ ದೂರ ನಿಮ್ಮೊಂದಿಗೆ ಕರೆದೊಯ್ದು, ನಂತರ ನನ್ನ ಪಾಡಿಗೆ ಬಿಟ್ಟು ಬಿಡುವ ರೀತಿ ನನಗಿಷ್ಟವಾಯಿತು. ಇಲ್ಲಿ ಬಂಧನವೂ ಉಂಟು, ಸ್ವಾತಂತ್ರ್ಯವೂ ಉಂಟು; ಯಾವುದು ಎಷ್ಟು ಬೇಕೋ ಅಷ್ಟು.

ಸೋಲಿನ ಹಿಂದಿರುವ ಗೆಲುವು, ದೇಹದ ನಶ್ವರತೆ ಮತ್ತು ಅಹಂಕಾರ, ಅಮ್ಮನ ದೇವರುಗಳು ನಿಮ್ಮ ನಾಸ್ತಿಕತೆ, ಭಾಷೆಯ ಮೂಲಕ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವ ಕಲೆ, ಕಾಸಿನಸರದ ಪ್ರಯಾಣದ ಮೂಲಕ ತಲೆಮಾರುಗಳ ಕತೆ ಹೇಳುವ ವಿನಯ, ಮನಸ್ಸಿನ ಮಾತನ್ನೇ ಕೇಳಬೇಕು ಎಂಬುದನ್ನು ಕಲಿಸಿದ ಸಂಗತಿಗಳು, ಮೌನದ ಬೆಟ್ಟವನ್ನು ಹೆಗಲಲ್ಲಿ ಹೊತ್ತು ಸಾಗುವ ಕಷ್ಟ- ಎಷ್ಟೊಂದು ಅನುಭವಗಳನ್ನು ನೀವು ಮಾತಾಗಿಸಿದ್ದೀರಿ ಎಂದು ನೋಡುತ್ತಿದ್ದೆ. ಪಯಣಿಗ, ನಟ, ನಿರ್ದೇಶಕ, ತಂದೆ, ಮಗ, ತಾಯಿ, ಗೆಳತಿ, ಓದುಗ, ಕತೆಗಾರ, ನಿರ್ದೇಶಕ- ಹೀಗೆ ಹತ್ತಾರು ಸ್ಥಾನಗಳಲ್ಲಿ ನಿಂತು ಬದುಕನ್ನು ನೋಡುವುದರ ಅನುಕೂಲ ಏನೆಂಬುದು ಇಲ್ಲಿಯ ಬರಹಗಳನ್ನು ಮತ್ತೊಮ್ಮೆ ಓದುತ್ತಾ ಹೋದಾಗ ಅರಿವಾಗುತ್ತಾ ಹೋಯಿತು.

***

ಕಲಿಸುತ್ತಾ ಹೋಗುತ್ತದೆ ಜೀವನ ಹೊಸ ವಿದ್ಯೆಗಳನ್ನು. ಏಳು ಸುತ್ತಿನ ಕೋಟೆಯೊಳಗೆ ಬಂದಿಯಾದ ರಾಜಕುಮಾರಿಯಂತೆ ನಾವು ಯಾರದೋ ಆಗಮನಕ್ಕೆ ಕಾಯುತ್ತಿದ್ದೇವೆ. ಬರುವವನು ರಾಜಕುಮಾರನೋ ರಾಕ್ಷಸನೋ ಗೊತ್ತಿಲ್ಲ. ರಾಜಕುಮಾರನ ವೇಷದ ರಾಕ್ಷಸನೂ ಆಗಿರಬಹುದು, ರಾಕ್ಷಸನ ರೂಪದ ರಾಜಕುಮಾರನೂ ಆಗಿರಬಹುದು. ಹೊರಗಿನ ವೇಷವನ್ನು ನೋಡಿ ಮೋಸಹೋಗುವ ಹಾಗಿಲ್ಲ. ಒಳಮನಸ್ಸನ್ನು ತಿಳಿಯುವ ದಾರಿ ಗೊತ್ತಿಲ್ಲ. ಅಂಥದ್ದೊಂದು ಸಂದಿಗ್ಧದಲ್ಲಿ ನಿಂತಿರುವ ಎಲ್ಲರಿಗೂ ಇಂಥ ತಿಳಿವಳಿಕೆಗಳು ಬೇಕು. ನಮ್ಮೆದುರು ಧುತ್ತೆಂದು ಬಂದು ನಿಂತ ಸನ್ನಿವೇಶವನ್ನೋ ವ್ಯಕ್ತಿಯನ್ನೋ ಆ ಕ್ಷಣವನ್ನೋ ಹೇಗೆ ಮುಖಾಮುಖಿಯಾಗಬೇಕು ಎಂಬುದು ನಮಗೆ ಗೊತ್ತಿದ್ದಾಗಲೇ ಅಚ್ಚರಿಯ ಜೊತೆಗೆ ನಿರಾಳವೂ ನಮ್ಮದಾಗುತ್ತದೆ. ಅಂಥದ್ದನ್ನು ಕಲಿಸುವಂಥ ಬರಹಗಳು ಇಲ್ಲಿವೆ.

ಮೌನೇಶ್ ಕುಟುಂಬಕ್ಕೆ ಪ್ರಕಾಶ್ ರೈ 1 ಲಕ್ಷ ರುಪಾಯಿ ನೆರವು

ಇವನ್ನು ಬರೆದಿರುವ ನಿಮ್ಮ ಪಯಣದ ಹೆಜ್ಜೆಗುರುತುಗಳು ಕೂಡ ನಮಗೆ ಸ್ಪಷ್ಟವಾಗಿಯೇ ಕಾಣಿಸುತ್ತಾ ಹೋಗುತ್ತವೆ. ಹಾಗೆ ನೋಡಿದರೆ, ಇವು ನಿಮ್ಮ ಆತ್ಮಚರಿತ್ರೆಯ ಅಸ್ಪಷ್ಟ ದಾಖಲೆಗಳಂತೆಯೂ ಕಾಣಿಸುತ್ತವೆ. ನಿಮ್ಮ ಅಂತರಂಗದ ಭಾವತಂತುವಿನೊಂದಿಗೆ ಸಂಬಂಧವಿಲ್ಲದ ಒಂದೇ ಒಂದು ಬರಹವೂ ಇಲ್ಲಿಲ್ಲ. ನಿಮ್ಮ ಬದುಕಿನ ಘಟನೆಗಳನ್ನು ಒಳಗೊಳ್ಳದ ಹುಸಿ ಅನುಭವಗಳಿಂದ ಕಟ್ಟಿದ ಅಕ್ಷರ ಸೇತುವೆ ಇದಲ್ಲ. ಈ ಸೇತುವಿನ ಮೂಲಕ ದಾಟುತ್ತಿರುವ ಎಲ್ಲರೂ ನಿಮ್ಮ ಎದೆಬಡಿತವನ್ನು ಕೇಳಿಸಿಕೊಳ್ಳುವಂತೆ ಮಾಡಿದ್ದೀರಿ.

ನನಗೊಂದು ಬಾಲ್ಯದ ಪ್ರಸಂಗ ನೆನಪಾಗುತ್ತಿದೆ. ನಾವೆಲ್ಲರೂ ಚಿಕ್ಕವರಿದ್ದಾಗ ಪತ್ತೇದಾರಿ ಕತೆಗಳನ್ನು ಓದಿದವರೇ. ಪತ್ತೇದಾರಿ ಕತೆಗಳಲ್ಲಿ ಒಬ್ಬ ಕೊಲೆಗಾರನಿರುತ್ತಾನೆ. ಅವನನ್ನು ಹಿಡಿಯುವುದಕ್ಕೊಬ್ಬ ಪತ್ತೇದಾರ ಇರುತ್ತಾರೆ. ಇಡೀ ಕತೆ ಅವರಿಬ್ಬರ ನಡುವಿನ ಕಣ್ಣಾಮುಚ್ಚಾಲೆಯಲ್ಲಿ ನಡೆಯುತ್ತದೆ. ಒಮ್ಮೆ ಪತ್ತೇದಾರನ ಮೇಲುಗೈಯಾದರೆ ಮತ್ತೊಮ್ಮೆ ಕೊಲೆಗಾರ ಗೆಲ್ಲುತ್ತಾನೆ. ಇಂಥ ಹೊತ್ತಲ್ಲಿ ಬಹುತೇಕ ಕತೆಗಳಲ್ಲಿ ಒಂದು ಮಾತು ಬರುತ್ತದೆ. ಪತ್ತೇದಾರ ಆದವನು ಎಂಥಾ ಚಾಣಾಕ್ಷ ಕೊಲೆಗಾರನೇ ಆದರೂ ಒಂದಲ್ಲ ಒಂದು ತಪ್ಪು ಮಾಡಿರುತ್ತಾನೆ' ಎಂದು ನಂಬಿರುತ್ತಾನೆ.

ಇದನ್ನು ಓದುವಾಗೆಲ್ಲ ಬಾಲ್ಯದ ಮನಸ್ಸು ತಪ್ಪೇ ಮಾಡದ ಕೊಲೆಗಾರ ಆಗುವುದು' ಹೇಗೆ ಅಂತಲೇ ಯೋಚಿಸುತ್ತಿತ್ತು. ನಾವೆಲ್ಲರೂ, ಒಂದು ವೇಳೆ ನಾವಾಗಿರುತ್ತಿದ್ದರೆ, ಅಂಥ ತಪ್ಪು ಮಾಡುತ್ತಿರಲಿಲ್ಲ ಎಂದು ಭಾವಿಸುತ್ತಿದ್ದೆವು. ಎಷ್ಟೋ ಸಲ ಈ ಕೊಲೆಗಾರ ಶತದಡ್ಡ, ನಾವು ಅವನಿಗಿಂತ ಬುದ್ಧಿವಂತಿಕೆಯಿಂದ ಕೊಲೆ ಮಾಡುತ್ತಿದ್ದೆವು ಎಂದು ಲೆಕ್ಕಾಚಾರ ಹಾಕುತ್ತಿದ್ದೆವು. ನಮ್ಮ ಬಾಲ್ಯದ, ತಾರುಣ್ಯದ ಮಾತುಕತೆಗಳು ಕೂಡ ಹೇಗೆ ಒಂದೇ ಒಂದು ಸುಳಿವು ಬಿಡದೇ ಕೊಲೆಮಾಡುವುದು ಎಂಬುದರ ಸುತ್ತಲೇ ಸಾಗುತ್ತಿತ್ತು.

ಮೋದಿ, ಅಮಿತ್ ಶಾ, ಹೆಗಡೆ ಹಿಂದೂ ಅಲ್ಲ: ನಟ ಪ್ರಕಾಶ್ ರೈ

ಬಾಲ್ಯದ ಓದುಗ ಮನಸ್ಸು ಯೋಚಿಸುತ್ತಿರುವುದನ್ನೇ ಇವತ್ತು ನಮ್ಮ ರಾಜಸತ್ತೆ ಯೋಚಿಸುತ್ತಿದೆ. ನಮ್ಮ ನಾಯಕರು ಹೇಗೆ ಒಂದೇ ಒಂದು ಸುಳಿವು ಬಿಡದೇ ಕೊಲೆ, ಸುಲಿಗೆ ಮಾಡಬಹುದು ಎಂದು ಅವರು ಲೆಕ್ಕಾಚಾರ ಹಾಕುತ್ತಿದ್ದಾರೆ. ಅಂದಿಗೂ ಇಂದಿಗೂ ಇರುವ ವ್ಯತ್ಯಾಸ ಅದೇ.

ಈಗ ನಮಗೆ ಬಹುಚಾಣಾಕ್ಷನಾದ ನಮ್ಮ ಕಾಲದ ಕೊಲೆಗಾರ ಬಿಡುವ ಒಂದೇ ಒಂದು ಸುಳಿವನ್ನು ಎತ್ತಿ ತೋರಿಸಿ, ಅವನು ಅಪರಾಧಿ ಎಂದು ತೋರಿಸಿಕೊಡುವ ಪತ್ತೇದಾರರು ಬೇಕು. ಅಂಥ ಪತ್ತೇದಾರರ ಕೆಲಸವನ್ನು ಮಾಡುತ್ತಿರುವವರು ಕವಿ, ಬರಹಗಾರ, ಕತೆಗಾರ, ನಿರ್ದೇಶಕರು. ನೀವು ಈ ಪುಸ್ತಕದಲ್ಲಿ ಅಂಥದ್ದೇ ಕೆಲಸಕ್ಕೆ ಕೈ ಹಾಕಿದ್ದೀರಿ. ಸುಳಿವೇ ಕೊಡದಂತೆ ತಪ್ಪು ಮಾಡುವ ಮನಸ್ಸು, ಕಾಲ, ಸನ್ನಿವೇಶಗಳನ್ನು ಭೂತಕನ್ನಡಿಯಲ್ಲಿ ತೋರಿಸಿ, ನಾವು ಎಲ್ಲೆಲ್ಲಾ ತಪ್ಪಿದ್ದೇವೆ ಅನ್ನುವುದನ್ನು ನಮ್ಮ ಮುಖಕ್ಕೇ ಹಿಡಿಯುವಂಥ ಬರಹಗಳು ಇಲ್ಲಿವೆ.

ಇದನ್ನು ನೀವು ಬರೆಯುತ್ತಿರುವುದು ಕೂಡ ಈ ಸಂದರ್ಭದಲ್ಲಿ ಮುಖ್ಯ. ಬೇರೆ ಬೇರೆ ವೃತ್ತಿಗಳಲ್ಲಿ ಇರುವವರು ಬರೆಯುತ್ತಿದ್ದಾಗ, ಸಾಹಿತ್ಯ ಸಮೃದ್ಧವಾಗುತ್ತದೆ. ನಮ್ಮ ಅನುಭವದ ಬಣವೆಯೊಳಗೆ ಯಾವುದೋ ಊರಿನ ಜೋಳ, ಗೋಧಿ, ರಾಗಿಗಳು ಸೇರಿಕೊಂಡು ನಮ್ಮ ಊಟ ಮತ್ತಷ್ಟು ರುಚಿಯಾಗುತ್ತದೆ. ನೀವೇ ಹೇಳಿದ ಹಾಗೆ ಮಾತುಗಳಲ್ಲಿ ಕಳೆದುಹೋಗುತ್ತಿದ್ದ, ಗಾಳಿಯಲ್ಲಿ ಲೀನವಾಗುತ್ತಿದ್ದ ಮಾತು-ಕತೆಗಳನ್ನು ಅಕ್ಷರಗಳಲ್ಲಿ ಹಿಡಿದು ನಮ್ಮ ಮುಂದಿಟ್ಟಿದ್ದಕ್ಕೆ ಥ್ಯಾಂಕ್ಸ್.

ಒಬ್ಬ ನಟನಾಗಿ, ಒಂದು ಸನ್ನಿವೇಶಕ್ಕೆ ಸ್ಪಂದಿಸುವುದು ನಿಮಗೆ ಚೆನ್ನಾಗಿ ಗೊತ್ತಿದೆ. ಕಣ್ಣಂಚಿನ ಒಂದು ನೋಟ, ಒಂದು ಸುಳಿನಗೆ, ತುಟಿಯ ಸಣ್ಣ ಚಲನೆ, ಬೆರಳುಗಳ ವಿಶಿಷ್ಟ ವಿನ್ಯಾಸ ಮತ್ತು ಕೊರಳು ಕೊಂಕಿಸುವ ಭಂಗಿಯಲ್ಲಿ ವಿಷಾದ, ವ್ಯಂಗ್ಯ, ಮೌನ, ಆಕ್ರೋಶ ಮತ್ತು ಅಕ್ಕರೆಗಳನ್ನು ಸೂಚಿಸಬಲ್ಲ ನೀವು, ಬರಹಗಳಲ್ಲೂ ನಿಮ್ಮದೇ ಆದ ಭಾವಭಂಗಿಯನ್ನು ಹುಡುಕಿಕೊಂಡಿದ್ದೀರಿ. ಹೀಗಾಗಿಯೇ ಇವು ನಿಮ್ಮ ವ್ಯಕ್ತಿವಿಶಿಷ್ಟ ನಟನೆಯಷ್ಟೇ ವಿಶಿಷ್ಟ ಬರಹಗಳು ಕೂಡ. 'ನಮ್ಮ ಗೆಲುವುಗಳು ನಮ್ಮ ಗೋರಿಗಳಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ' ಮುಂತಾದ ಮೌನ ಮತ್ತು ಮಾತು ಅಚ್ಚುಕಟ್ಟಾಗಿ ಬೆರೆತಿರುವ ಬಹಳಷ್ಟು ಸಾಲುಗಳನ್ನು ಈ ಪುಸ್ತಕದಲ್ಲಿ ನಾನು ಕಂಡಿದ್ದೇನೆ.

ಬರಹ ಮುಂದುವರಿಯಲಿ. ಬರಹಗಾರನಿಗೆ ತನ್ನ ದೇಹಕ್ಕಿಂತ ಭಾಷೆಯ ದೇಹ ಹೆಚ್ಚು ಮುಖ್ಯ. ನಟನಿಗೆ ಭಾಷೆಯ ದೇಹಕ್ಕಿಂತ ತನ್ನ ದೇಹ-ಭಾಷೆ ಅನಿವಾರ್ಯ. ನಟನೇ ಬರಹಗಾರ ಆದಾಗ ದೇಹದ ಸಹಜ ಬಳುಕಿನಂತೆ, ಭಾಷೆಯೂ ಪಲುಕಿ ನಲಿದು ಉಲಿಯುತ್ತದೆ ಅನ್ನುವುದನ್ನು ತೋರಿಸಿಕೊಟ್ಟ ಅಂಕಣಗಳ ಸಂಗ್ರಹ ಇದು.

ಬರೆಯುತ್ತಿರಿ, ನಿಮ್ಮೊಳಗೆ ಸಹಸ್ರಾರು ಕತೆಗಳಿವೆ ಎಂಬುದು ನಿಮ್ಮೊಂದಿಗೆ ಸಾಕಷ್ಟು ಪಯಣಿಸಿದ ನನಗೆ ಗೊತ್ತಿದೆ. ಸದ್ಯಕ್ಕೆ ನೀವು ಕೈಗೆತ್ತಿಕೊಂಡಿರುವ ಹೊಸ ಹೊಣೆಗಾರಿಕೆ ನಿಮಗೆ ಬರೆಯುವುದಕ್ಕೆ ಸಮಯ ಕೊಡಲಿ ಎಂಬ ಹಾರೈಕೆ. ಬರಹಗಳ ಮೂಲಕ ನೀವು ಕೊಟ್ಟ ಸಂತೋಷಕ್ಕೆ ನಮಸ್ಕಾರ.

ನಿಮ್ಮ

ಜೋಗಿ

***

ಇರುವುದೆಲ್ಲವ ಬಿಟ್ಟು... ಪುಸ್ತಕ ಬಿಡುಗಡೆಯ ವಿವರಗಳು

ಎಲ್ಲಿ? : ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿಪಿ ವಾಡಿಯಾ ರಸ್ತೆ, ಬಸನವಗುಡಿ, ಬೆಂಗಳೂರು.

ಎಂದು? : 4ನೇ ಫೆಬ್ರವರಿ, ಭಾನುವಾರ, ಬೆಳಿಗ್ಗೆ 10.30ಕ್ಕೆ, ಉಪಾಹಾರದ ನಂತರ.

ಪ್ರಕಾಶಕರು : ಸಾವನ್ನಾ ಪ್ರಕಾಶನ

ಯಾರ್ಯಾರು ಬರಲಿದ್ದಾರೆ? : ಕವಿ ಡಾ. ಎಚ್ಎಸ್ ವೆಂಕಟೇಶ ಮೂರ್ತಿ, ರಂಗಕರ್ಮಿ ಡಾ. ವಿಜಯಾ, ನಟ ಸುದೀಪ್, ಕವಿ ಜಯಂತ್ ಕಾಯ್ಕಿಣಿ, ನಟ ಅಚ್ಯುತ್ ಕುಮಾರ್, ನಟಿ ಶ್ರುತಿ ಹರಿಹರನ್, ಪತ್ರಕರ್ತ ಜೋಗಿ ಮತ್ತು ಜಮೀಲ್ ಸಾವನ್ನಾ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Actor, fighter, orator, creative writer Prakash Rai's Kannada column collection Iruvudellava Bittu is getting released in Bengaluru on 4th February at Indian Institute of World Culture, Basavanagudi. Jogi has written foreword to it. All are welcome.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more