ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕನಸಿನ ಚಿಟ್ಟೆ ಹಿಡಿಯಲು ಹೊರಟು...' ಮೂಡಿದ ಬಗೆ

By Prasad
|
Google Oneindia Kannada News

ಯಾವುದೇ ಘನ ಉದ್ದೇಶವಿಲ್ಲದೆ, ಏನೋ ಹಂಚಿಕೊಳ್ಳಲು, ಹೇಳಿಕೊಳ್ಳಲು ಸ್ಮಾರ್ಟ್ ಫೋನಿನಿಂದ ಫೇಸ್ ಬುಕ್-ಗೆ ಅಂತ ಬರೆದಿದ್ದು ಕೊನೆಗೆ ಒಂದು ಸಾಹಿತ್ಯ ಕೃತಿಯಾಗಿ ಹೊಮ್ಮಿತು. ಕುತೂಹಲಕ್ಕೆ ಗೂಗಲ್-ನಲ್ಲಿ ಮೊಬೈಲ್ ಫೋನ್ ನಿಂದ ಕೃತಿ ರಚಿಸಿದವರು ಯಾರಿದ್ದೀರಿ? ಎಂದೆ. ಆಗ ಒಂದು ಹೊಸ ಜಗತ್ತೇ ತೆರೆದುಕೊಂಡು ನನ್ನನ್ನು ವಿನೀತನಾಗಿಸಿತು.

ಜಪಾನ್ ದೇಶದ ಯೋಶಿ ಎಂಬಾತ ಸುಮಾರು 2003ರಲ್ಲಿ ಜಗತ್ತಿನ ಮೊದಲ ಸೆಲ್ ಫೋನ್ ಕಾದಂಬರಿ 'ಡೀಪ್ ಲವ್' ಬರೆದ. ಅದು ಜನಪ್ರಿಯವಾಗಿ, ಮುಂದೆ ಪುಸ್ತಕ ರೂಪದಲ್ಲಿ ಪ್ರಕಟವಾಗಿ ಲಕ್ಷಾಂತರ ಪ್ರತಿಗಳು ಮಾರಾಟವಾದವು. ಟಿವಿ ಸೀರಿಯಲ್ ಕೂಡ ಆಗಿ ಜನಪ್ರಿಯತೆ ಗಳಿಸಿತು. ಹಾಗಾಗಿ ಜಪಾನನ್ನು ಸೆಲ್ ಫೋನ್ ಕೃತಿಯ ಜನ್ಮಸ್ಥಳವಾಗಿ ಗುರುತಿಸಲಾಗುತ್ತದೆ. ನಂತರ ಇದು ಅಮೇರಿಕಾ, ಯುರೋಪ್, ಆಫ್ರಿಕಾಗೆ ಹಬ್ಬಿ ಜನಪ್ರಿಯತೆಗಳಿಸಿತು.

ಸೆಲ್ ಫೋನ್ ಕೃತಿಗಳು ತಮ್ಮ ಪುಟ್ಟ ಗಾತ್ರದಿಂದ, ಆಕರ್ಷಕ ಶೈಲಿಯಿಂದ, ಮುಖ್ಯವಾಗಿ ಅಂಗೈಯಲ್ಲಿರುವ ಮೊಬೈಲಲ್ಲಿ ದೊರಕುವುದರ ಮೂಲಕ ಯುವಜನರನ್ನು ಆಕರ್ಷಿಸಿತು. 'ಮಿನಿಮಲಿಸಂ' ಅಂದರೆ ಕಡಿಮೆ ಪದಗಳಲ್ಲಿ ಪರಿಣಾಮಕಾರಿಯಾಗಿ ಕತೆ ಹೇಳುವ ಶೈಲಿಯನ್ನು ಇದು ನೆಚ್ಚಿಕೊಂಡಿತು ಮತ್ತು ಬೆಳಸಿತು.

First ever Kannada novel written on mobile

'ಕನಸಿನ ಚಿಟ್ಟೆ ಹಿಡಿಯಲು ಹೊರಟು...' ಕನ್ನಡ ಸಾಹಿತ್ಯ ಜಗತ್ತಿನ, ಪ್ರಾಯಶಃ ಭಾರತದ, ಮೊದಲ ಮೊಬೈಲ್ ಫೋನ್ ಕೃತಿ. ಎಂಟು ಜ್ಞಾನಪೀಠ ಪಡೆದು ಬೀಗುತ್ತಿರುವ ಕನ್ನಡ ಸಾಹಿತ್ಯ ಜಗತ್ತಿಗೆ ಮತ್ತೊಂದು ನವಿಲು ಗರಿ.

***
ಕತೆ, ಕತೆಗಾರನನ್ನು ಕಂಡುಕೊಳ್ಳುತ್ತದೆ ; ಓದುಗರನ್ನು, ಕೇಳುಗರನ್ನು ಆಯ್ದುಕೊಳ್ಳುತ್ತದೆ ಎಂಬುದು ಹಳೆಯ ಮಾತಾಯಿತು. ಈಗ ಕತೆ ತಾನು ಪ್ರಕಟವಾಗುವ ಮಾಧ್ಯಮವನ್ನು ಆಯ್ದುಕೊಳ್ಳುತ್ತದೆ ಎಂದು ತೋರುತ್ತಿರುವುದು ; ವಿಷ್ಣು ಕಂಬವನ್ನು ಆಯ್ದುಕೊಂಡು ನರಸಿಂಹನಾಗಿ ಅಚ್ಚರಿ ಪಡಿಸಿದಂತೆ. ತಾಮ್ರದರೇಕು, ತಾಳೆಗರಿ, ಕಾಗದ, ಲ್ಯಾಪ್ಟಾಪ್ ಆಯಿತು ಈಗ ಕತೆ ಮೊಬೈಲನ್ನು ಆಯ್ದುಕೊಂಡಿದೆ!

ನನಗೆ ಗೊತ್ತಿರುವ ಮಟ್ಟಿಗೆ ಕವಿತೆಗಳನ್ನು ಹೊರತು ಪಡಿಸಿ, ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಮೊಬೈಲ್ ಮಾಧ್ಯಮದ ಮೂಲಕ ಪ್ರಕಟಗೊಂಡ ಕತೆಗಳು, ನೀಳ್ಗತೆ, ಕಿರು ಕಾದಂಬರಿಗಳು ಇಲ್ಲ (ಬೇರೆ ಭಾಷೆಯ ಬಗ್ಗೆ ನನಗೆ ಮಾಹಿತಿಯಿಲ್ಲ). ಹಾಗಾಗಿ, ನಾನು ಇದನ್ನು ಕನ್ನಡ ಸಾಹಿತ್ಯ ಜಗತ್ತಿನ ಒಂದು ವರ್ಲ್ಡ್ ರೆಕಾರ್ಡ್ ಎಂದು ಹೆಮ್ಮೆಯಿಂದ, ದೊಡ್ಡ ಹುಮ್ಮಸ್ಸಿನಿಂದ, ಕೊಂಚ ಹುಂಬತನದಿಂದ ಹೇಳಿಕೊಳ್ಳುತ್ತೇನೆ.

ಇದನ್ನು ನಾನು ಬರೆದಿದ್ದು ನನ್ನ ನಿತ್ಯದ ಆಫೀಸ್ ಬಸ್ ಪ್ರಯಾಣದಲ್ಲಿ. (ಬೆಂಗಳೂರು ವಿಶ್ವವಿದ್ಯಾಲಯದ ಹತ್ತಿರದ ನನ್ನ ಮನೆಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಪಯಣಿಸುವಾಗ ದೊರೆತ ಸಮಯಾವಕಾಶವನ್ನು ಬಳಸಿಕೊಂಡಿದ್ದು ಕವಿತೆ ಮತ್ತು ಈ ಕತೆ ಬರೆಯಲು. ಹಾಗಾಗಿ ನನ್ನ ಮೊಬೈಲ್-ಗೆ ಮತ್ತು ಕನ್ನಡ ಕೀ ಬೋರ್ಡ್-ಗೂ ಕೂಡ ಅರ್ಪಣೆಯ ಪಟ್ಟಿಯಲ್ಲಿ ಜಾಗ ಸಿಕ್ಕಿದೆ.

ಏನೋ ಬರೆಯಲು, ಸಾಧಿಸಿ ತೋರಿಸಲು ಮೊದಲ ಅಧ್ಯಾಯ ಬರೆದೆ. ಮೊದಲನೆ ಅಧ್ಯಾಯದ ಕೊನೆ ಸಾಲುಗಳು ಮಾತ್ರ ನನ್ನನ್ನು ಮೀರದ್ದಾಗಿತ್ತು. ನಂತರ ನನ್ನನ್ನು ನಾನು ಕತೆಗೆ, ಚಿಟ್ಟೆಗೆ ಒಪ್ಪಿಸಿಕೊಂಡೆ. ಮುಂದಿನದೆಲ್ಲ ನನ್ನ ಸೋಲು ಮತ್ತು ಚಿಟ್ಟೆಯ ಗೆಲುವು. ಎಷ್ಟೋ ಸಾರಿ ಏನು ಬರೆಯಬೇಕೆಂದು ಗೊತ್ತಿರದೆ, ಗುರಿಯಿರದೆ (ಗುರು ಮೊದಲೇ ಇಲ್ಲ) ಶುರು ಮಾಡುತ್ತಿದ್ದೆ. ಕೊನೆಗೆ ನನ್ನ ಅಹಂ ಕರಗಿ- ಸೋತು ದಿವ್ಯ ಸಂತೃಪ್ತಿಯನ್ನು ಅನುಭವಿಸಿದೆ.

ಸಾಮಾನ್ಯವಾಗಿ ನಾನು ಕತೆ ಬರೆದರೆ ಒಂದು ವಿನ್ಯಾಸ, ರೂಪುರೇಖೆ ಇಟ್ಟುಕೊಂಡು ಬರೆಯಲು ಕುಳಿತುಕೊಳ್ಳುತ್ತೇನೆ. ಆದರೆ ಇಲ್ಲಿ ಆಗಿದ್ದೆ ಬೇರೆ. ಈ ಕತೆ ನನ್ನನ್ನು ಸಂಪೂರ್ಣವಾಗಿ ಹಣಿದಿದೆ. ನಾನು ಕೇವಲ ಮಾಧ್ಯಮವಾಗಿ ಬಳಕೆಯಾಗಿದ್ದೇನೆ ಎಂದರೆ ಅತಿಶಯವಿಲ್ಲ. ಅಷ್ಟರ ಮಟ್ಟಿಗೆ ಕತೆ ನನ್ನನ್ನು ವಿನೀತನನ್ನಾಗಿಸಿದೆ.

ಸುಮಾರು ಒಂದು ತಿಂಗಳ ಅವಧಿಯಲ್ಲಿ ಹನ್ನೆರಡು ಭಾಗವಾಗಿ ನನ್ನ ಫೇಸ್ಬುಕ್ ವಾಲ್‌‍ನಲ್ಲಿ ಇದು ಪ್ರಕಟವಾಯಿತು. ಓದಿ ಪ್ರೋತ್ಸಾಹಿಸಿದ ಫೇಸ್ ಬುಕ್ ಗೆಳೆಯ-ಗೆಳತಿಯರನ್ನು ಪ್ರೀತಿಯಿಂದ ಇಲ್ಲಿ ನೆನೆಯುತ್ತೇನೆ.

***
ನಾವು ಕನಸುಗಳ ನಿಯಂತ್ರಣ ಕಳೆದುಕೊಳ್ಳುವ ವಿಷಾದಕರ, ಅಪಾಯಕರ ಸ್ಥಿತಿಯ ಬಗ್ಗೆ ಲಂಕೇಶರು ಬರೆದಿದ್ದು ಯಾಕೋ ನೆನಪಾಗುತ್ತಿದೆ; "ನಮಗೆ ಬೀಳುವ ಬಹುತೇಕ ಕನಸುಗಳು ಆತಂಕದಿಂದ ಕೂಡಿರುತ್ತವೆ? ಕಳೆದುಕೊಳ್ಳುವ ಕನಸು, ಕಷ್ಟ-ನಷ್ಟದ ಕನಸು, ಇತ್ಯಾದಿ.. ನಮಗೆ ಸಂತೋಷದ ಸೌಹಾರ್ದದ ಕನಸುಗಳೇಕೆ ಬೀಳುವುದಿಲ್ಲ? ಇದು ಅಧುನಿಕ ಒತ್ತಡದ ಬದುಕಿನ ಸೃಷ್ಟಿಯೇ? ನಮ್ಮ ನಟನೆಗಳೆಲ್ಲಾ ಕಳಚಿ ಬೀಳುವುದು, ನಮ್ಮ ಬದುಕಿನ ಗ್ರಹಿಕೆ ಪ್ರಕಟಗೊಳ್ಳುವುದು ಕನಸಿನಲ್ಲೇ ಅಲ್ಲವೇ?"

ಇವೆಲ್ಲಾ ನನ್ನ ಅಂತರಂಗದಲ್ಲಿ ಮೂಡಿದ, ಕಾಡಿದ ಅಮೂರ್ತ ಪ್ರಶ್ನೆಗಳು, ಈ ಕೃತಿಯ ರೂಪಿಸಿವೆ ಎಂದು ನಂಬುತ್ತೇನೆ.

***
ಬರೆದಾದ ಮೇಲೆ ಪುಸ್ತಕವಾಗಿ ಪ್ರಕಟಿಸುವ ಮುನ್ನ ಈ ಕೃತಿಯನ್ನು ತಿದ್ದಿ ಬರೆಯುವ, ಚೆಂದಗೊಳಿಸುವ, ಪ್ರಖರಗೊಳಿಸುವ ಎಲ್ಲ ಪ್ರಲೋಭನೆಗಳನ್ನು ಮೀರಬೇಕಾಗಿ ಬಂತು. (ಕಾಗುಣಿತವನ್ನು ಮತ್ತು ಗೊಂದಲಗೊಳಿಸುವ ವಾಕ್ಯಗಳನ್ನು ಮಾತ್ರ ತಿದ್ದಿದ್ದೇನೆ ಅಷ್ಟೇ). ಈ ಪ್ರಯೋಗಾತ್ಮಕ ಕೃತಿ ತನ್ನ ಇತಿಮಿತಿ, ಹೊಳಪಿನೊಂದಿಗೆ ಯಥಾ ಸ್ಥಿತಿಯಲ್ಲಿ ಕನ್ನಡ ಓದುಗರನ್ನು ತಲುಪಲಿ ಎಂಬುದು ನನ್ನ ಆಶಯ. ಜಾಸ್ತಿ ಮಾತು ಬೇಡ, ಇನ್ನು ನೀವುಂಟು, ಕತೆಯುಂಟು... ನಾನು ಗೌರವ ಪೂರ್ವಕವಾಗಿ ದೂರ ಸರಿಯುತ್ತೇನೆ... (ಭಾನುವಾರ, ಜ.5ರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೃತಿ ನಿಮ್ಮ ಕೈ ಸೇರಲಿದೆ).

English summary
Kannada Sahitya Parishat will witness a news kind of book release on January 5, Sunday evening at 5 pm. A Kannada novel completely written on mobile by Vidyashankar Harapanahalli will be released in mobile format only. Be there to buy the book.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X