ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೋದಯ ಕಾಲದಲ್ಲಿ ಸಹೃದಯ ವಿಮರ್ಶೆ

By ತೇಜಸ್ವಿನಿ ಹೆಗ್ಡೆ
|
Google Oneindia Kannada News

ಡಾ.ಜಿ.ಬಿ. ಹರೀಶ್ ಅವರು 'ನವೋದಯ ಕಾಲದಲ್ಲಿ ಸಹೃದಯ ವಿಮರ್ಶೆ' ಅನ್ನುವುದರ ಕುರಿತು ಸವಿವರವಾಗಿ ಮಾತನಾಡಿದರು.

ವಿವರಣೆ : ಎಲ್ಲಾ ಕಾಲದ ವಿಮರ್ಶೆಗಳೂ ಸಹೃದಯ ವಿಮರ್ಶೆಗಳೇ. ಸಾಮಾನ್ಯವಾಗಿ ನವೋದಯ ಕಾಲದ ವಿಮರ್ಶೆಗಳನ್ನು ಹೆಚ್ಚು ಪ್ರಶಂಸಾತ್ಮಕ ವಿಮರ್ಶೆಗಳೆಂದು ಕರೆಯುವ ಪ್ರತೀತಿ ಇದೆ. ಕ್ರಿಟಿಕ್ ಅಥವಾ ವಿಮರ್ಶೆ ಅನ್ನುವ ಪದ ನಮ್ಮಲ್ಲಿನ್ನೂ ಶೈಶವ ಸ್ಥಿತಿಯಲ್ಲಿದೆ. ಇದು ಹುಟ್ಟಿದ್ದೇ ಬ್ರಿಟೀಶರ ಕಾಲದಲ್ಲಿ. ನವೋದರ ಕಾಲವೆಂದರೆ - ಇಂಗ್ಲೀಶ್ ನಾಟಕ ಹಾಗೂ ಸಾಹಿತ್ಯ, ಕನ್ನಡ ಕಾವ್ಯ ಜಗತ್ತು, ಸಂಸ್ಕೃತದ ಕಾವ್ಯ ಮೀಮಾಂಸೆ ಇವೆಲ್ಲವನ್ನೂ ಒಳಗೊಂಡಿದ್ದ ಕಾಲ. ನವೋದಯ ಕಾಲದ ವಿಮರ್ಶೆ ಕೇವಲ ಪ್ರಶಂಸಾತ್ಮಕ ವಿಮರ್ಶೆ ಅಲ್ಲವೇ ಅಲ್ಲಾ. ಆದರೆ ಇಲ್ಲಿ ಬಳಸಿದ ಭಾಷೆ ಮಾತ್ರ ಸಹೃದಯ ಭಾಷೆಯಾಗಿದೆ.

ಓರ್ವ ವಿಮರ್ಶಕ ಲೇಖಕನ ಕೃತಿಯಲ್ಲಿ ಕೇವಲ ಅವಗುಣಗಳನ್ನು ಮಾತ್ರ ಹೇಳುತ್ತಾ ಹೋದರೆ, ಆತ ಕುಗ್ಗಿ ಬರೆಯುವುದನ್ನೇ ನಿಲ್ಲಿಸಿ ಬಿಡುವ ಅಪಾಯವಿದೆ. ಅಂತಹ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟಿವೆ. ಆ ಕಾಲದಲ್ಲಿ ಸಾಹಿತಿಗಳು, ವಿಮರ್ಶಕರು ಕನ್ನಡದಲ್ಲಿ ಬರೆಯುತ್ತಿದ್ದವರೇ ಕಡಿಮೆ. ಕನ್ನಡದಲ್ಲಿ ಭಾಷಣವನ್ನು ಮಾಡೂತ್ತಿದ್ದವರೂ ವಿರಳ. ಕನ್ನಡ ಸಾಹಿತ್ಯವನ್ನು ಕನ್ನಡಮಯಗೊಳಿಸಿದ ಸಾಹಿತಿಗಳೂ ಆರಂಭದಲ್ಲಿ ಇಂಗ್ಲೀಷ್ ಅನ್ನೇ ನೆಚ್ಚಿದ್ದರು. ಉದಾಹರಣೆಗೆ, ಬಿ.ಎಂ.ಶ್ರೀ. 'ಮುನ್ನುಡಿಯ' ಪರಂಪರೆ ಕೊಟ್ಟಿದ್ದೇ ನವೋದಯ ಕಾಲ.

E Hottige : Book review, debates and discussions - part 3

ಅಂದು ಓದುಗರಿಗಾಗಿ ಬರೆವ ವಿಮರ್ಶೆ ಮತ್ತು ಪರಸ್ಪರ ವಿಮರ್ಶಕರೇ ಸಂವಾದಿಸಿಲು ಬರೆದ ವಿಮರ್ಶೆಗಳನ್ನು ಕಾಣುತ್ತೇವೆ. ನಮ್ಮದು ರಮ್ಯ ಬರಹವೆಂದು ನವೋದಯ ಕಾಲದವರು ಹೇಳಿಕೊಂಡಿಲ್ಲ. ಆನಂತರ ಬಂದ ನವ್ಯದವರು ಹಾಗೆಂದರು. ಹೀಗಾಗಿ ನವೋದಯ ಸಾಹಿತ್ಯವನ್ನು ಬರಿಯ ರಮ್ಯ, ರಸ ಸಾಹಿತ್ಯವೆನ್ನಲಾಗದು. ಇದರಲ್ಲೂ ಅನೇಕ ಒಳ ಸುಳಿಗಳಿವೆ. ಸೂಕ್ಷ್ಮವಾಗಿ ನೋಡಿದರೆ ನವೋದಯ ಸಾಹಿತ್ಯದಲ್ಲಿ ಮೂರು ತಲೆಮಾರುಗಳಿವೆ.

1) ಬಿ.ಎಂ.ಶ್ರೀ, ಮಾಸ್ತಿ, ಕೃಷ್ಣ ಶಾಸ್ತ್ರಿ - ಮುಂತಾದವರ ತಲೆಮಾರು, 2) ಪು.ತಿ.ನ, ಕಾರಂತ, ಬೇಂದ್ರೆ ಮುಂತಾದವರಿದ್ದು ಮತ್ತು 3) ಕೆ.ಎಸ್.ನರಸಿಂಹ ಸ್ವಾಮಿ ಅವರ ಕಾಲದ ತಲೆಮಾರು. ಸಾಹಿತ್ಯದ ಅಭಿರುಚಿಯನ್ನು ಕಾಪಾಡುವುದು, ಗುಣಪಕ್ಷೀಯಪಾತವಾದ ವಿಮರ್ಶೆಗೆ ಒತ್ತುಕೊಡುವುದು ಅಂದಿನ ಕಾಲದ ವಿಮರ್ಶಕರ ಮುಖ್ಯೋದ್ದೇಶವಾಗಿತ್ತು. ಇಂಗ್ಲೀಷ್ ಸಾಹಿತ್ಯವನ್ನು ಓದಲು ಪ್ರೇರೇಪಿಸುವುದು, ಸಂಸ್ಕೃತ ಕಾವ್ಯದಿಂದ ರಸಕ್ಕೆ ಮಹತ್ವ ಕೊಡುವುದು, ಕವಿಯನ್ನು ಸಹೃದಯತೆಯಿಂದ ಸ್ವೀಕರಿಸುವಂತೆ ಮಾಡುವುದು - ಇವೇ ಪ್ರಮುಖ ಉದ್ದೇಶಗಳಾಗಿದ್ದವು. ಪ್ರಚೋದನೆಗೆ ಹೋಗದೆ, ಆಸಕ್ತಿ, ಅಭಿರುಚಿ ಬೆಳೆಸುವ, ಭಾವೋದ್ದೀಪನಕ್ಕೆ ಪ್ರೇರೇಪಿಸುವ ಸಂಸ್ಕೃತಿಯನ್ನು ಕಟ್ಟುವಲ್ಲಿ ನವೋದಯ ಸಾಹಿತ್ಯ ವಿಮರ್ಶೆ ಕೆಲಸ ಮಾಡಿದೆ.

ಸಾಹಿತ್ಯ ಹೇಗೆ ಒಂದು ಸೃಜನಶೀಲ, ಸ್ವತಂತ್ರ ಕಲೆಯೋ, ವಿಮರ್ಶೆಯೂ ಹಾಗೇ. ನವೋದಯ ವಿಮರ್ಶೆ ಬಹಳ ವೈವಿಧ್ಯಮವಾಗಿದೆ. ನಾಸ್ತಿಕರಾಗಿದ್ದ ಕಾರಂತರು, ಆಸ್ತಿಕರಾಗಿದ್ದ ಡಿ.ವಿ.ಜಿ.ಯವರು, ಆಧಾತ್ಮದ ಜೊತೆ ವೈಚಾರಿಕತೆಯನ್ನೂ ಪ್ರತಿಪಾದಿಸಿದ ಕುವೆಂಪು ಅವರು, ಅರವಿಂದರ ಶಿಷ್ಯರಾಗಿದ್ದ ಬೇಂದ್ರೆಯವರು ಹೀಗೆ ಬಹಳ ವಿಭಿನ್ನತೆಯನ್ನು ಹೊಂದಿದೆ. ಅಂದು ಅಭಿಪ್ರಾಯ ಬೇಧವನ್ನು ಚರ್ಚೆಯ ಮೂಲಕವೇ ಮಾಡಲಾಗುತ್ತಿತ್ತು. ಸ್ಪಂದನೆ, ಪ್ರತಿ ಸ್ಪಂದನೆಗಳನ್ನೆಲ್ಲಾ ಆರೋಗ್ಯಕರ ಚರ್ಚೆಯ ಮೂಲಕವೇ ಮಾಡಲಾಗುತ್ತಿತ್ತು. ಶೈಲಿಯ ಕುರಿತು ವಿಮರ್ಶಿಸಿದವರು, ಅದರ ಮೇಲೆ ಅಧ್ಯಯನ ಕೊಟ್ಟವರು ನವೋದಯ ಕಾಲದ ವಿಮರ್ಶಕರು. ಈ ರೀತಿ ಆ ಕಾಲದ ವಿಮರ್ಶೆಗಳು ಒಂದು ಹಿಡಿ ಮುಷ್ಠಿಗೆ ಸಿಗುವಷ್ಟು ಸರಳವಾಗಿಲ್ಲ ಎಂದು ವಿಸ್ತ್ರತವಾಗಿ ವಿವರಿಸಿದರು.

ನವ್ಯ ಸಾಹಿತ್ಯದ ವಿಮರ್ಶೆಯನ್ನು ಹೇಗೆ ಮಾಡಬೇಕು? ಯಾವ ರೀತಿ ನೊಡಬೇಕು? ಎಂಬುದನ್ನು ಸೋದಾರಣವಾಗಿ ವಿವರಿಸಿದರು. ಲೋರೆನ್ಸ್‌ನು ಬರೆದಿರುವ ವಿಮರ್ಶೆಯ ಕುರಿತಾದ ಲೇಖನದ ಭಾಗವನ್ನು ಉದ್ದರಿಸಿ ನವ್ಯದ ಮೇಲೆ ಅದರ ಪ್ರಭಾವ ಹೇಗಾಯಿತು ಎಂಬುದನ್ನು ವಿವರಿಸಿದರು. ವಿಮರ್ಶಕ ಎಂ.ಜಿ.ಕೃಷ್ಣ ಮೂರ್ತಿಯವರು ನವೋದಯದಿಂದ ನವ್ಯದ ಕಾಲಘಟ್ಟ ಹೇಗೆ ಬದಲಾವಣೆ ಕಂಡಿತು ಎಂಬುದನ್ನು, ಕೃಷ್ಣಮೂರ್ತಿಯವರು ನವ್ಯದ ಸಾಹಿತ್ಯವನ್ನು ಹೇಗೆ ವಿಭಿನ್ನವಾಗಿ ನೋಡಿದರು ಎಂಬುದನ್ನು ವಿವರಿಸಿದರು. ಸಾವಯವ ಶಿಲ್ಪದ ಸಮಗ್ರೀಕರಣ ಥಿಯರಿ ಇಟ್ಟುಕೊಂಡು ಪರಿಪೂರ್ಣ ಚಿತ್ರಣವನ್ನು ಕೊಡುವ ಶಿಲ್ಪ ಹೇಗೆ ಅಡಿಗರ ರಾಮನವಮಿ ಕವಿತೆಯಲ್ಲಿ ಸಾಕಾರಗೊಂಡಿದೆ ಎಂಬುದರ ಚಿತ್ರಣವನ್ನು ನೀಡಿದರು.

(ಅನಿವಾರ್ಯ ಕಾರಣಗಳಿಂದಾಗಿ ನಾನು ಮೊದಲ ದಿನದ ಈ ಕೊನೆಯ ಸೆಷನ್‌ಅನ್ನು ಅಟೆಂಡ್ ಮಾಡಲಾಗಲಿಲ್ಲ.. ಹಾಗಾಗಿ ಒಂದೊಳ್ಳೆ ಉಪನ್ಯಾಸವನ್ನು ಕೇಳುವ ಅವಕಾಶದಿಂದ ವಂಚಿತಳಾದೆ. ಆಮೇಲೆ ಅಲ್ಲಿದ್ದ ಸ್ನೇಹಿತರಿಂದ, ಜಯಶ್ರೀ ಕಾಸರವಳ್ಳಿ ಮೇಡಮ್ ಅವರಿಂದ ಕೆಲವು ಅಂಶಗಳನ್ನಷ್ಟೇ ಕಲೆ ಹಾಕಿ ಬರೆಯಲಾಗಿದ್ದು. ಕ್ಷಮೆ ಇರಲಿ.)

English summary
E Hottige is a platform set for debates and book reviews. Kannada literary enthusiasts get together to to discuss the present, past and future of Kannada literature. Tejaswini Hegde writes about the seminar conducted on November 21 and 22 at Kappanna Angala, JP Nagar, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X