ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಲಭ ರೂಪೀ ರಾಮಾಯಣ ‘ರಾಮ ನೀತಿ ’

By ಮಮತಾ ದೇವ , ಸುಳ್ಯ
|
Google Oneindia Kannada News

ಬದುಕು ನೀತಿ ನಿಯಮಗಳನ್ನೊಳಗೊಂಡಿದ್ದರೆ ಮಾತ್ರ ಶೋಭಿಸುತ್ತದೆ ಎಂಬುದನ್ನು ತಾನು ಸ್ವತ: ಪಾಲಿಸಿ ಜಗತ್ತಿಗೆ ಆದರ್ಶವನ್ನು ಸಾರಿದ ಕೀರ್ತಿ ಮರ್ಯಾದಾ ಪುರುಷೋತ್ತಮನೆಂದೇ ಕರೆಯಲ್ಪಡುವ ಶ್ರೀರಾಮನದು ಎಂಬುದು ಜಗತ್ತಿಗೇ ತಿಳಿದ ವಿಚಾರ. ರಾಮಾಯಣದಲ್ಲಿ ಬರುವ ಅನೇಕ ಪಾತ್ರಗಳು ಸಹಾ ಎಲ್ಲರಿಗೂ ಆದರ್ಶವಾಗಿವೆ.

ಆದರೆ ಓದುವುದು ಸಾಧ್ಯವೇ ? ಇಂತಹ ಮಹತ್ವದ ಕಥೆಯಿರುವ ಸಂಪೂರ್ಣ ರಾಮಾಯಣವನ್ನು ಓದಬೇಕೆಂದರೆ ಎಲ್ಲರಿಗೂ ಸಾಧ್ಯವೇ ? ಆದಿ ವಾಲ್ಮೀಕಿ ರಾಮಾಯಣದಲ್ಲಿ 24,000 ಶ್ಲೋಕಗಳಿವೆ. ಇಂದಿನ ಗಡಿಬಿಡಿಯ ಬದುಕಿನಲ್ಲಿ ಇಷ್ಟೆಲ್ಲವನ್ನೂ ಜನ ಸಾಮಾನ್ಯರು, ಮಕ್ಕಳು ತಾಳ್ಮೆಯಿಂದ ಓದುತ್ತಾರಾ?

ರಾಮಾಯಣದ ತಿಳುವಳಿಕೆ ಮನುಷ್ಯ ಜೀವನವನ್ನೇ ಪರಿವರ್ತಿಸುವ ಶಕ್ತಿಯುಳ್ಳದ್ದು ಎಂಬುದು ಸಾರ್ವಕಾಲಿಕ ಸತ್ಯ. ಇಂತಹ ಉತ್ತಮ ಕೃತಿಯ ಸಾರ ಸಂಗ್ರಹಿಸಿ ಸುಲಭವಾಗಿ ಗ್ರಹಿಸಿ ಹಾಡಿಕೊಳ್ಳಲು ಮತ್ತು ಅಭಿನಯಿಸಲೂ ಆಗುವಂತೆ ಹಿರಿಯ ಪತ್ರಕರ್ತ, ಸಾಹಿತಿ , ಖ್ಯಾತ ಅಂಕಣಕಾರರೂ ಆಗಿರುವ ಪ್ರೊ. ವಿ ಬಿ ಅರ್ತಿಕಜೆಯವರು ರಚಿಸಿದ 'ರಾಮ ನೀತಿ' (ರಾಮಾಯಣ ಪದ್ಯ ವೈವಿಧ್ಯ) ಎನ್ನುವ ಪುಸ್ತಕವನ್ನು ಬರೆದಿದ್ದಾರೆ. (ಶ್ರೀರಾಮ, ನೆಟ್ಟ ಬಾಣವನ್ನು ಮಾತ್ರ ಹಿಂತೆಗೆಯಬೇಡ)

Book review of Prof. V B Artikaje written Rama Neeti

40 ಪುಟಗಳ ಪುಟ್ಟ ಪುಸ್ತಕ ರೂಪದಲ್ಲಿ ಪುತ್ತೂರಿನ ಜ್ಞಾನಗಂಗಾ ಪುಸ್ತಕ ಮಳಿಗೆ ಪ್ರಕಾಶನದಲ್ಲಿ 2014ರ ರಾಮ ನವಮಿಯಂದು ಈ ಪುಸ್ತಕ ಹೊರ ತಂದಿದ್ದು ಹಲವಾರು ವಿದ್ಯಾರ್ಥಿಗಳಿಗೆ, ಜನರಿಗೆ ಉಚಿತವಾಗಿ ನೀಡಲಾಗಿದೆ. ಚುಟುಕಾಗಿರುವ ಪದ್ಯಗಳು ಅತ್ಯಂತ ಸರಳವಾಗಿ ಅರ್ಥವಾಗುವಂತದ್ದು, ಲಯಬದ್ಧವಾಗಿದ್ದು, ಓದಿಸಿಕೊಂಡು ಹೋಗುತ್ತದೆ.

ಉದಾಹರಣೆಗೆ ಮೊದಲ ಏಕಪದಿ ಹೀಗಿದೆ:
" ಕೌಸಲ್ಯೆ- ದಶರಥರ ಸುತನಾಗಿ ಜನನ, ಪಿತನ ಭಾಷೆಗೆ ಮಣಿದು ಕಾನನಕೆ ಪಯಣ
ಸೀತೆಯನ್ವೇಷಣೆಗೆ ಸಾಗರೋತ್ತರಣ, ಲಂಕೆಯಲಿ ಸಮರ ದಶಶಿರಯೂಥ ಹನನ "

ಎಲ್ಲಾ ವಯೋಮಾನದವರಿಗೂ ಆಪ್ತವೆನಿಸಬಹುದಾದ ಸಂಗ್ರಹ ಯೋಗ್ಯ ಕೃತಿಯಾಗಿದ್ದು ಪ್ರತಿ ಮನೆಯಲ್ಲೂ , ಎಲ್ಲರ ಮನದಲ್ಲೂ ಸದ್ಭಾವನೆಯನ್ನು ,ಸತ್ ಚಿಂತನೆಯನ್ನು ಉಂಟು ಮಾಡುವುದರಲ್ಲಿ ಎರಡು ಮಾತಿಲ್ಲವೆನ್ನಬಹುದು.

ಒಂದು ಚುಟುಕದಿಂದ ಆರಂಭವಾಗುವ ರಾಮಾಯಣದ ಕಥೆ ಪ್ರತಿ ಅಧ್ಯಾಯದಲ್ಲಿ ಹೊಸರೂಪ ತಳೆದು ಒಟ್ಟು ಏಳು ಚುಟುಕಗಳೊಂದಿಗೆ ( ಏಕಪದಿಯಿಂದ ಸಪ್ತಪದಿಯವರೆಗೆ ) ಹಾಡಿನ ರೂಪದಲ್ಲಿ ಓದಿಸಿಕೊಂಡು ಹೋಗುವಂತೆ ಬರೆಯಲಾಗಿದೆ. ಏಳು ಮತ್ತು ಎಂಟನೇ ಅಧ್ಯಾಯಗಳಲ್ಲಿ ಇಪ್ಪತ್ತು ಚುಟುಕು ಪದ್ಯಗಳ ರಾಮಾಯಣ 'ರಾಮ ಕೀರ್ತಿ' ಹಾಗೂ ಮೂವತ್ತೆರಡು ಚೌಪದಿಗಳ 'ಗೀತ ರಾಮಾಯಣ' ವಿಶೇಷವಾಗಿ ಹಾಡಿ-ಕುಣಿಯಲು ಮತ್ತು ನೃತ್ಯರೂಪಕಕ್ಕಾಗಿ ಬಳಸಲು ಯೋಗ್ಯವಾಗಿವೆ.

ಕೊನೆಯ ಎರಡು ಅಧ್ಯಾಯಗಳಲ್ಲಿ ' ರಾಮಾಯಣದ ನೀತಿಸಾರ ' ಹಾಗೂ ' ರಾಮ ಉವಾಚ 'ಗಳಿದ್ದು ರಾಮಾಯಣದ ಮಹತ್ವವನ್ನು ಸಂಕ್ಷಿಪ್ತರೂಪದಲ್ಲಿ ತಿಳಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಮಕ್ಕಳಿಗೆ ಇಲ್ಲಿ ವಿಶೇಷವಾಗಿ ಹಿತವಚನವಿದೆ.

ಹನ್ನೊಂದನೇ ಪದ್ಯ-
"ಮಕ್ಕಳೆಂತಿರಬೇಕು ? ರಾಮಲಕ್ಷ್ಮಣರಂತೆ, ದೇಹವೆರಡಾದರೂ ಮನಸೇಕವಾಗಿ
ವಾಲಿಸುಗ್ರೀವರಂತಿರಲು ಫಲವೇನುಂಟು, ಹಗಲಿರುಳು ಕಚ್ಚಾಟ ಮುಗಿಯದಿರಲಾಗಿ "

ಹಾಗೆಯೇ ಹದಿನೈದನೇ ಪದ್ಯದಲ್ಲಿ ಹೆಚ್ಚು ನಿದ್ರಿಸದೇ ನಿರಂತರ ಅಭ್ಯಾಸ ಮಾಡಬೇಕೆಂಬ ನೀತಿಯನ್ನು ಹೀಗೆ ಹೇಳಲಾಗಿದೆ
" ಕುಂಭಕರ್ಣನ ಹಾಗೆ ವರ್ಷಾರ್ಧನಿದ್ರಿಸಿರೆ, ಮಾಡಲಪ್ಪುದೆ ನಿತ್ಯ ತಾಯ್ನಾಡ ಸೇವೆ?
ಯುದ್ಧ ಬಂದಾಗಷ್ಟೆ ಶಸ್ತ್ರವನು ಹಿಡಿವವಗೆ, ಶತ್ರುಗಳ ಕೈಯಿಂದ ಸಿಕ್ಕುವುದು ಸಾವೇ "

ರಾಮಾಯಣ ಮಹಾಕಾವ್ಯದಲ್ಲೇನಿದೆಯೆಂದು ಓದಿ ತಿಳಿಯದವರೆಲ್ಲರೂ ಒಮ್ಮೆ ಓದಿದರೆ ರಾಮಾಯಣ ನೀಡುವ ಸಂದೇಶ ಹಾಗೂ ರಾಮನ ನೀತಿ ಸುಲಭವಾಗಿ ಅರಿವಾಗಲು ಸಾಧ್ಯ. ಒಟ್ಟಿನಲ್ಲಿ ಜೀವನ ಯಶಸ್ವಿಯಾಗಬೇಕಾದರೆ ಶ್ರೀರಾಮನ ನೀತಿ ಬೇಕೇ ಬೇಕು. (ಉತ್ತಿಷ್ಠ ಭಾರತದಿಂದ ಗೀತೆಯ ಕುರಿತು ಅಭಿಯಾನ)

ಜಗತ್ತಿನಲ್ಲಿ ಅತ್ಯಂತ ಗೌರವಕ್ಕೆ ಪಾತ್ರನಾದ ಸದ್ಗುಣಿ ಶ್ರೀರಾಮನ ಆದರ್ಶಗಳು ಯಾವತ್ತಿಗೂ ಪ್ರಸ್ತುತವಾಗಿಯೇ ಇರುತ್ತವೆ. (ಮಾತೃಭಕ್ತಿ, ಪಿತೃಭಕ್ತಿ,ಏಕಪತ್ನೀ ವ್ರತ,ಭ್ರಾತೃಪ್ರೇಮ,ಸಖ್ಯಪ್ರೇಮ ಮೊದಲಾದವು) ನಿತ್ಯವೂ ರಾಮಾಯಣ ಪಾರಾಯಣ ಮಾಡಬೇಕೆನ್ನುವವರಿಗೆ ಇದೊಂದು ಸುಲಭ ಮಾರ್ಗವಾಗಿದೆ.

ಈಗಾಗಲೇ ಸಂಕ್ಷೇಪ ರಾಮಾಯಣ ಮತ್ತು ಇಪ್ಪತ್ತು ಭಾಮಿನಿ ಷಟ್ಪದಿಯಲ್ಲಿ ರಚಿಸಿದ 'ರಾಮಕೀರ್ತಿ'ಯ ಸಹಸ್ರಾರು ಪ್ರತಿಗಳನ್ನು ಉಚಿತವಾಗಿ ಮುದ್ರಿಸಿ ವಿತರಿಸಿ ಸಾಮಾಜಿಕ ಕಳಕಳಿಯಿಂದ ಸಂಸ್ಕೃತಿ ಸಂರಕ್ಷಣೆಯನ್ನು ಸದ್ದಿಲ್ಲದೆ ಮಾಡುತ್ತಿರುವ ಪ್ರೊ. ವಿ ಬಿ ಅರ್ತಿಕಜೆಯವರ ಪ್ರಯತ್ನ ಸ್ತುತ್ಯಾರ್ಹ.

ಪುಸ್ತಕದ ಹೆಸರು : ರಾಮ ನೀತಿ ( ರಾಮಾಯಣ ಪದ್ಯ ವೈವಿಧ್ಯ )
ಲೇಖಕರು : ವಿ.ಬಿ. ಅರ್ತಿಕಜೆ
ಪ್ರಕಾಶಕರು: ಜ್ಞಾನಗಂಗಾ ಪುಸ್ತಕ ಮಳಿಗೆ, ಮುಖ್ಯರಸ್ತೆ,ಪುತ್ತೂರು, ದ.ಕ., 574201
ಪ್ರಕಟಣೆ: ಮೊದಲ ಮುದ್ರಣ 2014
ಪುಟಗಳು : 4 + 36
ಬೆಲೆ : ಮೂವತ್ತು ರೂಪಾಯಿಗಳು
ಮುಖಪುಟ ವಿನ್ಯಾಸ : ಪ್ರಸನ್ನ ರೈ ಪುತ್ತೂರು

English summary
Book review of Prof. V B Artikaje written Rama Neeti
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X