ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮುಕ್ಕು ಚಿಕ್ಕಿಯ ಕಾಳು' ಕಾದಂಬರಿ ಬಗ್ಗೆ ಜಯಲಕ್ಷ್ಮಿ ಪಾಟೀಲ್ ಸಂದರ್ಶನ

|
Google Oneindia Kannada News

'ಮುಕ್ಕು ಚಿಕ್ಕಿಯ ಕಾಳು...' ಶೀರ್ಷಿಕೆಯಲ್ಲೇ ಬೆಟ್ಟದಷ್ಟು ಕುತೂಹಲ ಹೊತ್ತು ಸಾಹಿತ್ಯ ಲೋಕಕ್ಕೆ ಕಾಲಿಡುತ್ತಿರುವ ಕಾದಂಬರಿ. ರಂಗಭೂಮಿ ಕಲಾವಿದೆ, ಕಿರುತೆರೆ ನಟಿ, ಸಾಹಿತಿ, ಕವಿ, ಸಮಾಜಸೇವಕಿ... ಹೀಗೆ ಹತ್ತಾರು ಪಾತ್ರಗಳನ್ನು ನಿರ್ವಹಿಸುತ್ತ, ಎಲ್ಲ ಪಾತ್ರಕ್ಕೂ ನ್ಯಾಯ ಒದಗಿಸುತ್ತಿರುವ 'ಜನದನಿ'(ಎನ್ ಜಿಒ)ಯ ಜಯಲಕ್ಷ್ಮಿ ಪಾಟೀಲ್ ಈ ಮೂಲಕ ತಮ್ಮ ಚೊಚ್ಚಲ ಕಾದಂಬರಿಯನ್ನು ಹೊರತರುತ್ತಿದ್ದಾರೆ.

'ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಈ ಸಮಾಜ ವಹಿಸುವ ಪಾತ್ರ ಮತ್ತು ಅದನ್ನು ಸ್ವೀಕರಿಸುವ ಅಥವಾ ಧಿಕ್ಕರಿಸುವ ವ್ಯಕ್ತಿಯ ಧಿಕ್ಕರಿಸುವ ಮನೋಭಾವದ ಸುತ್ತ ಹೆಣೆದಿರುವ ಕಾದಂಬರಿ 'ಮುಕ್ಕು ಚಿಕ್ಕಿಯ ಕಾಳು'. ಇದೇ ಜುಲೈ15ರಂದು, ಬೆಳಿಗ್ಗೆ 10:30ಕ್ಕೆ, ‌ ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ 'ವಾಡಿಯಾ ಸಭಾಂಗಣ'ದಲ್ಲಿ ಕಾದಂಬರಿ ಬಿಡುಗಡೆಯಾಗಲಿದೆ.

ಅತ್ಯಾಚಾರದ ವಿರುದ್ಧ 'ಜನದನಿ': ಜಯಲಕ್ಷ್ಮೀ ಪಾಟೀಲರೊಂದಿಗೆ ಸಂದರ್ಶನಅತ್ಯಾಚಾರದ ವಿರುದ್ಧ 'ಜನದನಿ': ಜಯಲಕ್ಷ್ಮೀ ಪಾಟೀಲರೊಂದಿಗೆ ಸಂದರ್ಶನ

'ಅಂಕಿತ ಪುಸ್ತಕ ಪ್ರಕಾಶನ' ಪ್ರಕಟಿಸುತ್ತಿರುವ ಈ ಪುಸ್ತಕಕ್ಕೆ ಸಿಎನ್ ಆರ್ ಅವರು ಮುನ್ನುಡಿ ಮತ್ತು ಕೆ.ಸತ್ಯನಾರಾಯಣ ಬೆನ್ನುಡಿ ಬರೆದಿದ್ದಾರೆ.

2006 ರಲ್ಲಿ 'ನೀಲ ಕಡಲ ಬಾನು' ಎಂಬ ಕವನ ಸಂಕಲನದ ನಂತರ ಪ್ರಕಟಿತ ಕೃತಿಯಾಗಿ ಹೊರಬರುತ್ತಿರುವುದು 'ಮುಕ್ಕು ಚಿಕ್ಕಿಯ ಕಾಳು'. ವಿಜಯ ತೆಂಡೂಲ್ಕರ್ ಅವರ ಮರಾಠಿ ಮೂಲದ 'ಬೇಬಿ' ನಾಟಕವನ್ನು ಇವರು ಅನುವಾದಿಸಿದ್ದಾರೆ. ಇದು ಅಪ್ರಕಟಿತ ನಾಟಕ. ರಂಗಶಂಕರ ನಡೆಸುತ್ತಿರುವ ಕಾರ್ಯಾಗಾರದಲ್ಲಿ ಈ ನಾಟಕವನ್ನು workshop text ಆಗಿ ಬಳಸಲಾಗುತ್ತಿದೆ. 'ಹನಿಯುತಿದೆ ಭುವಿಯೊಡಲಲಿ' ಎಂಬ ಕವನ ಸಂಕಲನ ಈ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ.

ತಮ್ಮ ಮೊದಲ ಕಾದಂಬರಿ 'ಮುಕ್ಕು ಚಿಕ್ಕಿಯ ಕಾಳು' ಕುರಿತು ಜಯಲಕ್ಷ್ಮಿ ಪಾಟೀಲ್ ಅವರು ಒನ್ ಇಂಡಿಯಾಕ್ಕೆ ನೀಡಿದ ಸಂದರ್ಶನ ಇಲ್ಲಿದೆ.

ಕತೆಯೇ ಕಾದಂಬರಿಯಾಗಿ ಬೆಳೆದು...

ಕತೆಯೇ ಕಾದಂಬರಿಯಾಗಿ ಬೆಳೆದು...

"ಕತೆ ಬರೆಯಲೆಂದು ಆರಂಭಿಸಿದ ವಿಷಯವೊಂದು ಬೆಳೆಯುತ್ತಾ ಬೆಳೆಯುತ್ತಾ ಕಾದಂಬರಿಯಾದದ್ದು ನನಗೂ ಸೋಜಿಗವೇ. 'ಕಮ್ಮಟ' ಕಥಾ ಸ್ಪರ್ಧೆಗಾಗಿ ಒಂದು ಪಾತ್ರದ ಸುತ್ತಷ್ಟೇ ಹೆಣೆಯಲು ಹೋದ ಕತೆ ಕ್ರಮೇಣ ಆ ವ್ಯಕ್ತಿಯ ಕುಟುಂಬ, ಸಮಾಜ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪಿಸುವಲ್ಲಿ ವಹಿಸುವ ಪಾತ್ರ, ಅದನ್ನು ಧಿಕ್ಕರಿಸುವ ಅಥವಾ ಸ್ವೀಕರಿಸುವ ಆತನ ಸ್ವಭಾವ... ಹೀಗೇ ಬದುಕಿನ ನಾನಾ ಸ್ತರಗಳತ್ತ ವಿಸ್ತರಿಸಿಕೊಳ್ಳುತ್ತಾ ಹೋಗಿ ಕಾದಂಬರಿಯಾಗಿ ನಿಂತಿತು! ಕತೆಯನ್ನು ಓದಿದ ಕೆಲವರು, 'ಇದಕ್ಕೆ ಕಾದಂಬರಿಯಾಗುವ ತಾಕತ್ತಿದೆ' ಎಂದು ಮೆಚ್ಚು ನುಡಿದು ಪ್ರೋತ್ಸಾಹಿಸಿದರು. ಈ ಪ್ರೋತ್ಸಾಹದಿಂದಲೇ ರೂಪುಗೊಂಡಿದ್ದು 'ಮುಕ್ಕು ಚಿಕ್ಕಿಯ ಕಾಳು.'

'ಮುಕ್ಕು ಚಿಕ್ಕಿಯ ಕಾಳು' ಹೊಳೆದದ್ದು

'ಮುಕ್ಕು ಚಿಕ್ಕಿಯ ಕಾಳು' ಹೊಳೆದದ್ದು

ಹಾಗೆ ಹೇಳುವುದಕ್ಕೆ ಹೋದರೆ ಪುಸ್ತಕ ಬರೆದದ್ದಕ್ಕಿಂತ ಹೆಚ್ಚು ತಲೆಕೆಡಿಸಿಕೊಂಡಿದ್ದು ಶೀರ್ಷಿಕೆ ನೀಡುವುದಕ್ಕೆ. ಶೀರ್ಷಿಕೆಗಾಗಿ ತಲೆಕೆಡಿಸಿಕೊಂಡು ಕೂತಿದ್ದಾಗ, ಆಪ್ತರಾದ ರಾಜಕುಮಾರ ಮಡಿವಾಳ್ ವರಕವಿ ದ.ರಾ.ಬೇಂದ್ರೆ ಅವರ 'ಗರಿ' ಕವನ ಸಂಕಲನದ ಕವನವೊಂದರಲ್ಲಿ ಬರುವ 'ಮುಕ್ಕು ಚಿಕ್ಕಿಯ ಕಾಳು' ಎಂಬ ಶೀರ್ಷಿಕೆಯನ್ನು ಸೂಚಿಸಿದರು. ಈ ಶೀರ್ಷಿಕೆ ನನಗೆ ಅದೆಷ್ಟು ಹಿಡಿಸಿತು ಅಂದ್ರೆ, ಬೇಂದ್ರೆ ಅಜ್ಜಾರು ಇದನ್ನು ನನ್ನ ಕಾದಂಬರಿಗಾಗಿಯೇ ಬರದರೇನೋ ಎನ್ನಿಸತೊಡಗಿಬಿಟ್ಟಿತ್ತು. ಈ ಶೀರ್ಷಿಕೆಗೆ ಹೊರತಾಗಿ ಬೇರೆ ಯಾವುದೂ ನನ್ನ ಕಾದಂಬರಿಗೆ ಸೂಕ್ತವಲ್ಲ ಅನ್ನಿಸಿಬಿಟ್ಟಿತ್ತು.

ಏನಿದೆ ಕಾದಂಬರಿಯಲ್ಲಿ?

ಏನಿದೆ ಕಾದಂಬರಿಯಲ್ಲಿ?

'ಮುಕ್ಕು ಚಿಕ್ಕಿಯ ಕಾಳು' ಎಂಬ ಶೀರ್ಷಿಕೆಯ ಅರ್ಥವೇನು, ಕಾದಂಬರಿಗೂ ಶೀರ್ಷಿಕೆಗೂ ಏನು ಸಂಬಂಧ? ಕಾದಂಬರಿಯ ಆಶಯವೇನು? ಎಲ್ಲವನ್ನೂ ಕಾದಂಬರಿಯನ್ನು ಓದಿಯೇ ತಿಳಿಯಬೇಕು. ಈಗಲೇ ಹೇಳಿದರೆ ಕುತೂಹಲ ಇರೋಲ್ಲ. ಸಹೃದಯ ಓದುಗರು ನೀಡುವ ಪ್ರತಿಕ್ರಿಯೆಯೇ ಬರಹಗಾರರಿಗೆ ಶ್ರೀರಕ್ಷೆ. ಅನಿಸಿಕೆ ಋಣಾತ್ಮಕವಾಗಿಯೇ ಇರಲಿ ಅಥವಾ ಧನಾತ್ಮಕವಾಗಿರಲಿ ಅದು ಪ್ರಶ್ನೆಯಲ್ಲ. ನಮಗೆ ಪ್ರತಿಕ್ರಿಯೆ ಮುಖ್ಯ. ಓದುಗರು ನನ್ನ ಕಾದಂಬರಿಯನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನನಗಂತೂ ಇದೆ.'

ಅಂಕಿತ ಪುಸ್ತಕಕ್ಕೆ ಧನ್ಯವಾದ

ಅಂಕಿತ ಪುಸ್ತಕಕ್ಕೆ ಧನ್ಯವಾದ

'ಮತ್ತಷ್ಟು ಖುಷಿ ಕೊಟ್ಟ ವಿಚಾರ ಎಂದರೆ ಅಂಕಿತ ಪುಸ್ತಕ ಇದನ್ನು ಪ್ರಕಟಿಸುತ್ತಿರುವುದು. ಹಲವು ಉತ್ತಮ ಪುಸ್ತಕ ನೀಡಿದ ಕಂಬತ್ತಳ್ಳಿ ದಂಪತಿ, ನನ್ನನ್ನು ಪ್ರೋತ್ಸಾಹಿಸಿ, ಈ ಪುಸ್ತಕ ಪ್ರಕಟಿಸುತ್ತಿರುವುದಕ್ಕೆ ನಾನು ಚಿರಋಣಿ. ಮುಖಪುಟ ಬರೆದುಕೊಟ್ಟ ಸೃಜನ್, ಮುನ್ನುಡಿ ಬರೆದುಕೊಟ್ಟ ವಿಮರ್ಶಕರಾದ ಸಿಎನ್ ಆರ್ ಸರ್ ಮತ್ತು ಬೆನ್ನುಡಿ ಬರೆದುಕೊಟ್ಟ ಕೆ. ಸತ್ಯನಾರಯಣ ಸರ್ ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ. ಈ ಕಾದಂಬರಿ ಪ್ರಕಟವಾಗುವಲ್ಲಿ ನನಗೆ ನೆರವು ನೀಡಿದ, ಬೆನ್ತಟ್ಟಿದ ನೂರಾರು ಜನರಿದ್ದಾರೆ. ಅವರಿಗೆಲ್ಲ ನನ್ನ ನಮನ'

ಲೋಕಾರ್ಪಣೆ ಯಾವಾಗ?

ಲೋಕಾರ್ಪಣೆ ಯಾವಾಗ?

ಮುಕ್ಕು ಚಿಕ್ಕಿಯ ಕಾಳು
ಅಂಕಿತ ಪ್ರಕಾಶನ
ಬೆಲೆ: 130 ರೂ.
ಪುಟಗಳು: 136
ಯಾವಾಗ: ಜುಲೈ 15, ಭಾನುವಾರ ಬೆಳಿಗ್ಗೆ10:30ಕ್ಕೆ
ಎಲ್ಲಿ: ವಾಡಿಯಾ ಸಭಾಂಗಣ, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬೆಂಗಳೂರು

English summary
Kannada actor, social worker, theatre artict as wll as writer Jayalakshmi Patil is going to release her first ever kannada novel 'Mukku Chikkiya Kalu' on July 15th, Sunday. Venue: Wadia hall, Indian institute of world culture, Bengaluru. Time: 9:30 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X