ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

140 ಅಕ್ಷರಗಳ ಕಾಲದಲ್ಲಿ ಜೋಗಿ ಏನು ಹೊತ್ತುಬಂದಿ

By ಜಿ ಎನ್ ಮೋಹನ್
|
Google Oneindia Kannada News

Kannada writer Jogi's two books
ಖ್ಯಾತ ಪತ್ರಕರ್ತ, ಲೇಖಕ ಗಿರೀಶ್ ರಾವ್ (ಜೋಗಿ) ಅವರ 'ಗುರುವಾಯನಕೆರೆ' (ಒಂದು ಊರಿನ ಆತ್ಮಚರಿತ್ರೆ) ಮತ್ತು 'ಹಲಗೆ ಬಳಪ' (ಹೊಸ ಬರಹಗಾರರಿಗೆ ಮೊದಲ ಪಾಠಗಳು) ಎರಡು ಪುಸ್ತಕಗಳು ಸೆ.16, ಭಾನುವಾರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಬಿಡುಗಡೆಯಾಗುತ್ತಿವೆ. 'ಹಲಗೆ ಬಳಪ' ಪುಸ್ತಕಕ್ಕೆ 'ಅವಧಿ' ಮ್ಯಾಗಜಿನ್ ಸಂಪಾದಕ ಜಿ.ಎನ್. ಮೋಹನ್ ಅವರು ಮುನ್ನುಡಿ ಬರೆದಿದ್ದಾರೆ. ಆ ಮುನ್ನುಡಿಯನ್ನು ಇಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.

***
ಇದು ಫೇಸ್ ಬುಕ್, ಟ್ವಿಟರ್, ಆರ್ಕುಟ್ ಗಳ ಕಾಲ. ಏನಿದ್ದರೂ 140 ಅಕ್ಷರಗಳ ಮಿತಿಯೊಳಗೆ ಮುಗಿಸಿಬಿಡಬೇಕು ಎನ್ನುವುದನ್ನು ಇವತ್ತಿನ ಈ ಹೊಸ ಮಾಧ್ಯಮಗಳು ನಮಗೆ ಕಲಿಸಿಕೊಡುತ್ತಿದೆ. 140 ಅಕ್ಷರಗಳ ಆಚೆಯೂ ಒಂದು ಲೋಕವಿದೆ ಎನ್ನುವುದನ್ನೇ ನಂಬಲಾಗದ ಸ್ಥಿತಿಗೆ ನಾವು ಬಂದು ನಿಂತಿದ್ದೇವೆ. ನಮ್ಮೊಳಗಿನ ಅನುಭವ, ಅದರ ಗಾಢತೆ ಎಲ್ಲಕ್ಕೂ ಈಗ 140 ಅಕ್ಷರಗಳ ಕ್ಯಾನ್ವಾಸ್ ಮಾತ್ರ.

ಬರಹದ ಮಾತಿರಲಿ ಓದುವುದೂ ಸಹಾ 140 ಅಕ್ಷರಗಳಿಗೆ ಮುಗಿದು ಹೋಗುತ್ತಿದೆ. ಕಾನೂರು ಹೆಗ್ಗಡತಿ, ಗ್ರಾಮಾಯಣ, ಮಲೆಗಳಲ್ಲಿ ಮದುಮಗಳು, ಅರಮನೆಯಂತಹ ಬೃಹತ್ ಕಾದಂಬರಿಗಳು, ಖಂಡ ಕಾವ್ಯಗಳು, ಇತ್ತು ಎನ್ನುವುದೇ ಆಶ್ಚರ್ಯ ಹುಟ್ಟಿಸುವ ಕಾಲದತ್ತ ನಾವು ಸರಿಸಲ್ಪಡುತ್ತಿದ್ದೇವೆ.

ಚಿಟಿಕೆ ವೇಗದಲ್ಲಿ ಎಲ್ಲವೂ ಆಗಿಬಿಡಬೇಕು ಎಂದು ನಿರೀಕ್ಷಿಸುವ ಒಂದು ಹೊಸ ಪೀಳಿಗೆ ತಲೆ ಎತ್ತುತ್ತಿದೆ. ಮಾತು ಕಥೆ, ಪ್ರೀತಿ ಪ್ರಣಯ, ನೋವು ನಲಿವು ಎಲ್ಲವೂ ಚಿಟಿಕೆ ಹೊಡೆಯುವುದರಲ್ಲಿ ಮುಗಿದುಹೋಗಬೇಕು. ಜಾಗತೀಕರಣ ತಂದಿಟ್ಟ ಸ್ಥಿತಿ ಇದು. ಎಲ್ಲಕ್ಕೂ ವೇಗ, ಎಲ್ಲಕ್ಕೂ ಅಲ್ಪಾಯಸ್ಸು.

ಜಾಗತೀಕರಣ ಎನ್ನುವುದು ಬರೀ ಮಾರುಕಟ್ಟೆಯನ್ನಲ್ಲ, ಭಾಷೆ ಬರಹವನ್ನೂ ಬದಲಿಸುತ್ತದೆ, ಭಾಷೆ ಬರಹವನ್ನು ಮಾತ್ರವಲ್ಲ, ಆಲೋಚನೆಯ ವಿಧಾನವನ್ನೇ ತಿದ್ದುತ್ತದೆ ಎಂದು ಆಗ ನಮಗೆ ಗೊತ್ತಿರಲಿಲ್ಲ. ಆದರೆ ಜಾಗತೀಕರಣ, ಅದು ತಂದಿಟ್ಟ ತಾಂತ್ರಿಕ ಅನುಕೂಲಗಳು ಎಲ್ಲೋ ಬದುಕನ್ನು ಸಪಾಟಾಗಿ ಮಾಡಿ, ಸಂವೇದನೆಯನ್ನೂ ಸಪಾಟಾಗಿ ಮಾಡಿ ಅತಿ ವೇಗವನ್ನು ಮಾತ್ರ ಕಲಿಸಿಕೊಡುತ್ತಿದೆಯೇ ಅನಿಸುತ್ತಿದೆ. ಹೀಗೆ ಹೇಳುವಾಗ ಎಲ್ಲೋ ನನಗೆ ಒಂದು ರೈಲು ಬಂದಾಗ, ಒಂದು ಬಸ್ಸು ಸಂಚರಿಸಲು ಆರಂಭವಾದಾಗ ಜನ ತಲ್ಲಣಗೊಂಡಿದ್ದು, ಊರು ಹಾಳಾಗಿ ಹೋಯಿತು ಎನ್ನುವ ಆತಂಕಕ್ಕೆ ಬಿದ್ದದ್ದು ನೆನಪಿಗೆ ಬರುತ್ತದೆ. ನಾನು ಸಹಾ ಹಾಗೆ ಹೊಸ ಕಾಲವನ್ನು ಸ್ವಾಗತಿಸಲಾಗದೆ ಆತಂಕಕ್ಕೆ ಸಿಕ್ಕಿದ್ದೆನೆಯೇ ಅನಿಸುತ್ತದೆ ಆದರೆ ಹಾಗಲ್ಲ ಎನ್ನುವುದನ್ನು ಇಂಗ್ಲಿಷ್ ಸಾಹಿತ್ಯ ಹಿಡಿಯುತ್ತಿರುವ ದಾರಿ ನೋಡಿದಾಗ ಅನಿಸುತ್ತದೆ.

ಅಲ್ಲಿ ಜಗತ್ತು ಮತ್ತೆ ಮತ್ತೆ ಆಸ್ವಾದಿಸಿದ, ಮತ್ತೆ ಮತ್ತೆ ಓದಿದ, ಮತ್ತೆ ಮತ್ತೆ ಅಪ್ಪಿಕೊಂಡ ಕೃತಿಗಳನ್ನು ಈಗ 140 ಅಕ್ಷರಗಳಿಗೆ ಇಳಿಸುವ ಕೆಲಸ ನಡೆಯುತ್ತಿದೆ. ನಿಮಗೆಲ್ಲರಿಗೂ ಗೊತ್ತು ಟ್ವಿಟರ್ ಎನ್ನುವುದು 140 ಅಕ್ಷರಗಳ ಮಿತಿಯೊಳಗೆ ಎಲ್ಲವನ್ನೂ ಬಣ್ಣಿಸುವ ಒಂದು ಸಾಮಾಜಿಕ ತಂತ್ರಜ್ಞಾನ. ಅಲ್ಲಿ ಈಗ ಶೇಕ್ಸ್ ಪಿಯರ್ ನ ಬಹುತೇಕ ನಾಟಕಗಳು 140 ಅಕ್ಷರಕ್ಕೆ ಇಳಿಸಲ್ಪಟ್ಟಿದೆ. ಚಾರ್ಲ್ಸ್ ಡಿಕನ್ಸ್, ಜೆ ಡಿ ಸ್ಯಾಲಿನ್ಜರ್, ಜೇನ್ ಆಸ್ಟಿನ್, ಡಿ ಎಚ್ ಲಾರೆನ್ಸ್.. ಹೀಗೆ ಅನೇಕ ಸಾಹಿತಿಗಳು, ಅವರ ಮಹಾನ್ ಕೃತಿಗಳೂ ಈಗ 140 ಅಕ್ಷರಗಳ ಬಲೆಯೊಳಗೆ. ನಾನು ಶೇಕ್ಸ್ ಪಿಯರ್ ಕಟ್ಟಿಕೊಟ್ಟ ಮಾನವ ವ್ಯಾಪಾರಗಳ ಲೋಕದಲ್ಲಿ ನನ್ನನ್ನು ನಾನೇ ಕಂಡುಕೊಂಡವನು, ನನ್ನನ್ನು ನಾನೇ ತಿದ್ದಿಕೊಂಡವನು. ಒಂದು ಕೃತಿ ಎನ್ನುವುದು ನನಗೆ ನನ್ನನ್ನು ತೋರಿಸುವ, ನನ್ನನ್ನು ರೂಪಿಸುವ ದಾರಿಯೂ ಹೌದು. ನನಗೆ ಅದು ಕನ್ನಡಿ. ಅಂತಹ ಮಾನವ ವ್ಯಾಪಾರವನ್ನು ನಮ್ಮೆದುರು ನಿಲ್ಲಿಸುವ ಕೃತಿಗಳು ಈಗ 140 ಅಕ್ಷರಗಳಲ್ಲಿ. ಇಷ್ಟು ಅಕ್ಷರಗಳಲ್ಲಿ ಒಬ್ಬ ಏನನ್ನು ಕಂಡುಕೊಳ್ಳಲು ತಾನೇ ಸಾಧ್ಯ. ಅದನ್ನೇ ಜೋಗಿ ತಮ್ಮ ಈ ಕೃತಿಯ ಒಂದು ಕಡೆ ಸ್ವಾರಸ್ಯವಾಗಿ ಬಣ್ಣಿಸುತ್ತಾರೆ. ರಾಮಾಯಣ ಎನ್ನುವದು ಏನು? ಅದನ್ನು ಕೆಲವೇ ಪದಗಳಲ್ಲಿ ಹಿಡಿದು ನಿಲ್ಲಿಸಬಹುದೇ?

ಪೂರ್ವಂ ರಾಮತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ
ವೈದೇಹಿ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ|
ವಾಲೀ ನಿರ್ದಲನಂ ಸಮುದ್ರ ತರಣಂ ಲಂಕಾಪುರೇ ದಾಹನಂ
ಪಶ್ಚಾದ್ರಾವಣ ಕುಂಭಕರ್ಣ ಹನನಂ ಏತದ್ಧಿ ರಾಮಾಯಣಂ||

(ರಾಮ ಕಾಡಿಗೆ ಹೋದ. ಬಂಗಾರದ ಜಿಂಕೆ ಹಿಂದೆ ಹೋದ, ಕೊಂದ. ಸೀತೇನ ರಾವಣ ಹೊತ್ಕೊಂಡು ಹೋದ. ಜಟಾಯು ತಡೆದ, ಸತ್ತ, ವಾಲೀನ ಕೊಂದ ಸಮುದ್ರ ದಾಟಿದ, ಲಂಕೇನ ಸುಟ್ಟ, ರಾವಣ ಕುಂಭಕರ್ಣರನ್ನು ಕೊಂದ.)

ಈಗಿನ ಹೊಸ ಪೀಳಿಗೆಯ ಮುಂದೆ ಈ ಹೊಸ ಸವಾಲು ನಿಂತಿದೆ. 'ಮಲೆಗಳಲ್ಲಿ ಮದುಮಗಳು' 140 ಅಕ್ಷರಗಳಲ್ಲಿ ಹೇಗಿರಬಹುದು ಎನ್ನುವುದನ್ನು ಕಲ್ಪಿಸಿಕೊಳ್ಳಲೂ ಆಗದೇ ನಾನು ಇಕ್ಕಟ್ಟಿನಲ್ಲಿದ್ದೇನೆ. ನನ್ನೆದುರು ಟಿ ಕೆ ದಯಾನಂದ್ ಬರೆದ 'ರಸ್ತೆ ನಕ್ಷತ್ರಗಳು', ಅರೀಫ್ ರಾಜಾ ಅವರ 'ಜಂಗಮ ಫಕೀರನ ಜೋಳಿಗೆ' ಸೈಫ್ ಜಾನ್ಸೆ ಕೊಟ್ಟೂರು ಅವರ 'ಅಯ್ಯಂಗಾರಿಯ ಐದು ಪೈಸೆ ಬ್ರೆಡ್ಡು' ಶಿವರಾಜ ಬೆಟ್ಟದೂರು ಅವರ 'ಈ ಲೋಕದ ಇನ್ನೊಂದು ಗಿಡ' ವಿ ಆರ್ ಕಾರ್ಪೆಂಟರ್ ನ 'ಅಪ್ಪನ ಪ್ರೇಯಸಿ' ಹಣಮಂತ ಹಾಲಗೇರಿಯ 'ಕೆಂಗುಲಾಬಿ' ಗವಿಸಿದ್ಧ ಹೊಸಮನಿಯ 'ವಿಳಾಸ ಇಲ್ಲದವರ ಹುಡುಕುತ್ತಾ..' ಟಿ ಎಸ್ ಗೊರವರ ಅವರ 'ಆಡು ಕಾಯೋ ಹುಡುಗನ ದಿನಚರಿ' ವೀರಣ್ಣ ಮಡಿವಾಳರ 'ನೆಲದ ಮರೆಯ ನಿಧಾನ' , ಛಾಯಾ ಭಗವತಿ ಅವರ ‘ಪುಟಾಣಿ ಕೆಂಪು ಶೂ', ವಿಠ್ಠಲ ದಳವಾಯಿಯ ‘ಬೂದಿಯ ನೆರಳು' ಕೃತಿಗಳನ್ನು ಇಟ್ಟುಕೊಂಡು ಕುಳಿತಿರುವಾಗ ಈ 140 ಅಕ್ಷರಗಳ ಪೀಳಿಗೆಯ ಬಗ್ಗೆ ಆತಂಕಗೊಳ್ಳುವುದು ಬೇಕಾಗಿಲ್ಲವೇನೋ.. ಆದರೆ ಆ ಪೀಳಿಗೆಯೂ ಇದೆ. ಅದರ ಪ್ರಭಾವ ಪರಿಣಾಮಗಳು ಇನ್ನು ನಾವು ಕಾಣಬೇಕಿದೆ ಅಷ್ಟೇ.

ಈ ಪೀಳಿಗೆಯೊಂದು ಇದೆ ಎನ್ನುವುದು ಜೋಗಿಗೆ ಮನವರಿಕೆಯಾಗಿರುವುದರಿಂದಲೇ ಜೋಗಿ ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಈ ಕೃತಿಯ ಹಿಂದೆ ಹಲ್ಲು ಕಚ್ಚಿ ನಿಂತಿದ್ದಾರೆ ಎನಿಸುತ್ತದೆ. ಜೋಗಿ 'ಹಲಗೆ- ಬಳಪ' ಎನ್ನುವ ಈ ಹೊಸತನದ ಕೃತಿ ನನಗೆ ಕಳಿಸಿಕೊಟ್ಟಾಗ ಅವರಿಗೂ ನನಗೂ ಚೆನ್ನಾಗಿ ಗೊತ್ತು ಹಲಗೆ, ಬಳಪ ಗೊತ್ತಿಲ್ಲದ ಲೋಕವೊಂದು ಈಗ ರೂಪುಗೊಂಡಿದೆ ಎಂದು. ಟಚ್ ಪ್ಯಾಡ್ ಸ್ಕ್ರೀನ್ ಗಳೇ ಹಲಗೆಯಾಗಿ ಸ್ತೈಲಸ್ ಗಳೇ ಬಳಪವಾಗಿರಿಸಿಕೊಂಡ ಪೀಳಿಗೆಗೆ ಜೋಗಿ ಅಕ್ಷರಾಭ್ಯಾಸ ಮಾಡಿಸಲು ಹೊರಟಿದ್ದಾರೆ. ಹಾಗಾಗಿಯೇ ಜೋಗಿ 'ಹಲಗೆ- ಬಳಪ' ಎಂದು ಇದಕ್ಕೆ ಹೆಸರಿಟ್ಟಿರುವುದೂ ಅರ್ಥಪೂರ್ಣ.

ಜಾಗತೀಕರಣ ಓದು ಬರಹ ಎಲ್ಲವನ್ನೂ ಮಾರುಕಟ್ಟೆಗೆ ಒಗ್ಗಿಸಿ ಕೂತಿದೆ. ಬರಹ ಎನ್ನುವುದು ಈಗ ಉತ್ಪನ್ನ ಸಹಾ. ಇಂತಹ ಕಾಲದಲ್ಲಿ ಸಿಗುವ ಪಾಠಗಳೇ. ಒಂದಿಷ್ಟು ಬರೆವ ಕಲೆ, ಅದಕ್ಕೆ ಬೇಕಿದ್ದ ಅಷ್ಟಿಷ್ಟು ಅನುಭವ ಇದ್ದರೆ ಸಾಕು ಇನ್ನು ಪ್ರಕಾಶನ ಸಂಸ್ಥೆಯೇ ಅದನ್ನು ತೀಡಿ ತಿಕ್ಕಿ ಒಂದು ಕೃತಿಯಾಗಿ ರೂಪಿಸಿಬಿಡುತ್ತದೆ. ಅದು ಈಗ ವೈಯಕ್ತಿಕ ಅನುಭವದ ಅಭಿವ್ಯಕ್ತಿಯಲ್ಲ. ಕಂಪನಿ ಸಾಹಿತ್ಯ. ಅಂತಹ ಕಾಲಕ್ಕೆ ಹೆಜ್ಜೆ ಇಕ್ಕುತ್ತಿರುವ ವೇಳೆಗೆ ಜೋಗಿ ಬರಹದ ಪ್ರೀತಿಯನ್ನು ಉಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಬರಹ ಹೇಗಿರಬೇಕು ಎನ್ನಲೂ, ಏನು ಓದಬೇಕು ಎಂದು ದಿಕ್ಕು ತೋರಿಸಲೂ ಆಗ ಗುರುಗಳಿದ್ದರು. ಇಲ್ಲಿ ಬರಹಗಾರರು ನಿರೂಪಿಸಿರುವ ಕಥನಗಳನ್ನು ಓದಿದರೂ ಅದು ಸುಸ್ಪಷ್ಟ. ಅದು ಗುರುವಾಗಿರಬಹುದು, ಮನೆಯ ಯಾರೊಬ್ಬರೂ ಆಗಿರಬಹುದು, ನೆರೆಯ ಗ್ರಂಥಾಲಯವಾಗಿರಬಹುದು, ಆದರೆ ಈ ಎಲ್ಲವೂ ಈಗ ಮುಕ್ಕಾಗುತ್ತಿರುವ ದಿನಗಳಲ್ಲಿ, ಎಲ್ಲವೂ ಮಾರಾಟಕ್ಕೆ ಎನ್ನುವ ದಿನಗಳಲ್ಲಿ, ಎಲ್ಲವೂ ಅತಿ ವೇಗದಲ್ಲಿ ಎನ್ನುವ ದಿನಗಳಲ್ಲಿ ಎಲ್ಲವೂ ಚಿಟಿಕೆ ಹೊಡೆಯುವುದರಲ್ಲಿ ಎನ್ನುವ ದಿನಗಳಲ್ಲಿ ಜೋಗಿ ಈ ಪುಸ್ತಕದ ಮೂಲಕ ಗುರುವಾಗುತ್ತಿದ್ದಾರೆ. ಜೋಗಿಯ ಈ 'ಹಲಗೆ ಬಳಪ'ದ ಲಾಭ ಈಗ ಗೊತ್ತಾಗದಿರಬಹುದು ಆದರೆ ನಾಳೆ ಎಲ್ಲೋ ತಾಕುವ ಕವಿತೆಯ ಸಾಲುಗಳು, ಕಾಡುವ ಕಥೆಗಳು, ನಮ್ಮನ್ನು ಒಂದು ಚಣ ಯೋಚನೆಗೆ ಹಚ್ಚುವ ವಿಮರ್ಶೆ ಎಲ್ಲದರ ಹಿಂದೆ ಜೋಗಿ ಇರುತ್ತಾರೆ, ಅವರ ಈ ಹಲಗೆ ಬಳಪ ಇರುತ್ತದೆ ಎನ್ನುವುದು ಸತ್ಯ.

ಬರವಣಿಗೆಯ ದಿಕ್ಕು ದೆಸೆ ಪ್ರೇರಣೆ ಎಲ್ಲವೂ ಒಬ್ಬೊಬ್ಬರಿಗೆ ಒಂದು ರೀತಿ. ಹಾಗಾಗಿಯೇ ಈ ಕೃತಿ ಎಲ್ಲೂ ನಾವು ಹೇಳಿದ್ದೆ ದಾರಿ ಎಂದು ಸಾರುತ್ತಿಲ್ಲ. ಆ ಕಾರಣಕ್ಕಾಗಿಯೇ ಜೋಗಿ ಇಲ್ಲಿ ಹಲವು ಹಿರಿಯ ಕಿರಿಯ ಲೇಖಕರ ಸ್ವ ನಿರೂಪಣೆಯನ್ನು ಕೊಟ್ಟಿದ್ದಾರೆ ಅಭಿವ್ಯಕ್ತಿಗೆ ಅಷ್ಟೊಂದು ದಾರಿಗಳು. ಜೋಗಿ ಇಲ್ಲಿ ಒಬ್ಬ ವಿದ್ಯಾರ್ಥಿ ಅಷ್ಟೇ. ಮೇಷ್ಟ್ರು ತೋರಿಸಿದ ದಾರಿಯನ್ನು ತಮಗೆ ಬೇಕಾದಂತೆ ಕಟ್ಟಿಕೊಂಡ ಒಬ್ಬ ವಿದ್ಯಾರ್ಥಿ. ಆದರೆ ಮೇಷ್ಟ್ರ ಬಳಗದಲ್ಲಿ ಇನ್ನೂ ಹಲವರಿದ್ದರಲ್ಲಾ.. ಅವರೆಲ್ಲರೂ ತಮಗೆ ಬೇಕಾದಂತೆ, ತಮಗೆ ಬೇಕಾದ ದಿಕ್ಕಲ್ಲಿ, ತಮಗೆ ಬೇಕಾದಂತೆ ಬರವಣಿಗೆಯ ದಾರಿಯನ್ನು ಹುಡುಕಿಕೊಂಡಿರಬಹುದು. ಗುರುವಾಯನಕೆರೆ ಜೋಗಿಗೆ ಒಂದು ರೀತಿ ಕಂಡರೆ ನನಗೆ ಇನ್ನೊಂದೇ ರೀತಿ. ಹಾಗಾಗಿಯೇ ಇಲ್ಲಿ ಜೋಗಿಯಾಗಲೀ ಯಾರಾಗಲೀ ಬರಹಕ್ಕೆ ಇದೊಂದೇ ದಾರಿ ಎಂದು ಹೇಳುತ್ತಿಲ್ಲ. ಬರಹವೆಂಬ ನದಿಯತ್ತ ಎಷ್ಟೆಲ್ಲಾ ತೊರೆಗಳು ಸಾಗಬಹುದು ಎನ್ನುವುದನ್ನಷ್ಟೇ ನಿರೂಪಿಸುತ್ತಿದ್ದಾರೆ.

ನನಗೆ ಖುಷಿಯಾಗುವುದು ಜೋಗಿಗೆ ಮಾತ್ರವೇ ಇದು ಹೊಳೆಯುತ್ತದಲ್ಲಾ ಎಂದು ಮತ್ತು ಜೋಗಿಗೆ ಮಾತ್ರವೇ ಇಷ್ಟು ಸ್ವಾರಸ್ಯಕರವಾಗಿ ಈ ಎಲ್ಲವನ್ನೂ ಕಟ್ಟಿಕೊಡಲು ಬರುತ್ತದಲ್ಲಾ ಎಂದು. 'ಬಂದೆ ಜೋಗಿ ಬಾ, ಬಾರೋ ಜೋಗಿ ಬಾ, ಏನು ಹೊತ್ತು ಬಂದಿ..' ಎಂದು ಬೇಂದ್ರೆ ಕೇಳಿದ್ದರು. ಅವರ ಮುಂದಿದ್ದ ಜೋಗಿ ಯಾರೋ? ನನಗೆ ಗೊತ್ತಿಲ್ಲ. ಆದರೆ ನನಗಂತೂ ಪ್ರತಿ ಬಾರಿಯೂ ಈ ಜೋಗಿಯ ಎದುರು 'ಏನು ಹೊತ್ತು ಬಂದಿ?' ಎಂದು ಕೇಳುವ ಹಂಬಲ.

English summary
Kannada writer Girish Rao's (Jogi) two books are being released at Indian Institute of World Culture in Bangalore on 16th September, 2012. Journalist GN Mohan, Avadhi magazine editor, has written foreword to Jogi's book Halage-Balapa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X