• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಪುಸ್ತಕ ದೇಶಭಕ್ತ ಕನ್ನಡಿಗರಿಗೆ ಮಾತ್ರ

By * ರೇಣುಕಾ ನಿಡಗುಂದಿ, ನವದೆಹಲಿ
|

ಭಾರತದ ರಾಷ್ಟ್ರೀಯ ಸಂಗ್ರಾಮದ ಇತಿಹಾಸದಲ್ಲಿ ಕರ್ನಾಟಕದ ಜನಸಾಮಾನ್ಯರ ಕೊಡುಗೆ ಏನೆಂದು ನಮಗೆ ಗೊತ್ತಿದ್ದಿಲ್ಲ. ಜನಸಾಮಾನ್ಯರ ಹೋರಾಟದಲ್ಲಿ ಮಹಿಳೆಯರು ತೋರಿದ ಶಕ್ತಿ ಸಾಹಸಗಳು ನಿರ್ಣಾಯಕವಾಗಿದ್ದವೆಂಬ ವಿವರಗಳನ್ನು ಬಿರಾದರ ಅವರ ಈ ಪುಸ್ತಕ ಕಟ್ಟಿಕೊಡುತ್ತದೆ. ಜನಪದ ವಿದ್ವಾಂಸ, ಸಾಹಿತಿ ಮತ್ತು ವಿಮರ್ಶಕ ಡಾ.ಪುರುಷೋತ್ತಮ ಬಿಳಿಮಲೆಯವರು ಈ ಕೃತಿಗೆ ಬರೆದ ಮುನ್ನುಡಿ ಈ ಕೃತಿ ಯಾಕೆ ಕನ್ನಡಿಗರಿಗೆ ಪ್ರಾಮುಖ್ಯವಾಗುತ್ತದೆ ಎಂಬುದನ್ನು ಪರಿಚಯಿಸಿದೆ.

ಭಾರತದ ರಾಷ್ಟ್ರೀಯ ಚಳುವಳಿಯನ್ನು ಸರಳೀಕರಿಸಿ ನೋಡುವಂತಿಲ್ಲ. ಅದು ಬಹಳ ಸಂಕೀರ್ಣ ಸ್ವರೂಪದ ಹೋರಾಟವಾಗಿತ್ತು. ಬ್ರಿಟಿಷರನ್ನು ಭಾರತದಿಂದ ಹೊರದಟ್ಟುವುದಷ್ಟೇ ಅದರ ಉದ್ದೇಸವಾಗಿರಲಿಲ್ಲ. ಭಾರತೀಯ ಸಮಾಜವನ್ನು ಪುನರ್‌ನಿರ್ಮಿಸುವ ಹೊಣೆಗಾರಿಕೆಯನ್ನು ಕೂಡಾ ಹೋರಾಟದ ಮುಂಚೂಣಿಯಲ್ಲಿರುವ ನಾಯಕರು ಹೊತ್ತುಕೊಳ್ಳಬೇಕಾಗಿತ್ತು.

ಈ ನಾಯಕರಲ್ಲಿ ಬಹುತೇಕ ಜನರು ತಾವು ಬಲವಾಗಿ ವಿರೋಧಿಸುತ್ತಿರುವ ಬ್ರಿಟಿಷರ ಮೂಲ ಸಂಸ್ಥಾನವಾದ ಇಂಗ್ಲೆಂಡಿನಲ್ಲಿಯೇ ಶಿಕ್ಷಣ ಪಡೆದವರಾಗಿದ್ದರು. ಈ ಪಾಶ್ಚಾತ್ಯ ಶಿಕ್ಷಣವು ಅವರಿಗೆ ಆಧುನಿಕತೆಯ ಪಾಠವನ್ನು ಕಲಿಸಿಕೊಟ್ಟಿತ್ತು. ಮನುಕುಲದ ಅಭಿವೃದ್ಧಿಗೆ ಅಗತ್ಯವಾಗಿದ್ದ ಸ್ವಾತಂತ್ರ್ಯ, ಸಹೋದರತೆ ಮತ್ತು ಸಮಾನತೆಯನ್ನು ಇವರೆಲ್ಲ ಒಪ್ಪಿಕೊಂಡಿದ್ದರು.

ಆದರೆ ಈ ಮೌಲ್ಯಗಳನ್ನು ಬೋಧಿಸಿದ ಬ್ರಿಟಿಷರು ಭಾರತದಲ್ಲಿ ನಡೆಸುತ್ತಿದ್ದ ಅನಾಹುತಗಳನ್ನು ಇವರು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಹೀಗಾಗಿ ಒಂದು ಕಡೆಯಿಂದ ಬ್ರಿಟಿಷರಿಂದ ಕಲಿಯುವುದು, ಇನ್ನೊಂದು ಕಡೆಯಿಂದ ಅವರನ್ನು ವಿರೋಧಿಸುವುದು ಈ ಎರಡೂ ಕೆಲಸಗಳನ್ನು ಸಮಾನವಾಗಿ ನಡೆಸಿಕೊಂಡು ಹೋಗುವ ನಿಪುಣತೆಯನ್ನು ಜಾಣತನವನ್ನು ನಮ್ಮ ರಾಷ್ಟ್ರೀಯ ನಾಯಕರು ತೋರಿಸಬೇಕಾಗಿತ್ತು.

ಮಿತ್ರ ಡಾ. ಜಿ.ಎ. ಬಿರಾದಾರರ ಪ್ರಸ್ತುತ ಪುಸ್ತಕವು 'ಮುಂಬಯಿ ಕರ್ನಾಟಕದಲ್ಲಿ ಸವಿನಯ ಕಾನೂನುಭಂಗ ಚಳುವಳಿ'ಯ ಚರಿತ್ರೆಯನ್ನು ಕಟ್ಟಿ ಕೊಡುವುದರ ಜೊತೆಗೆ ಆ ಚಳುವಳಿಯ ಇತರ ಸಂಕೀರ್ಣ ಮುಖಗಳ ಕಡೆಗೆ ನಮ್ಮ ಗಮನ ಸೆಳೆಯುವುದರಿಂದಾಗಿ ಮುಖ್ಯ ಕೃತಿಯಾಗಿದೆ.

ಚಳುವಳಿಯ ನಾಯಕರ ಹಾಗೂ ಚಳುವಳಿದಾರರ ಮುಂದೆ ಇದ್ದ ಏಕೈಕ ಶತ್ರುವೆಂದರೆ ಬ್ರಿಟಿಷರು. ನಮಗೆಲ್ಲಾ ತಿಳಿದಿರುವ ಹಾಗೆ ಉಪ್ಪಿನ ಸತ್ಯಾಗ್ರಹ, ಪ್ರಭಾತ ಫೇರಿ, ಕಾನನ ಸತ್ಯಾಗ್ರಹ, ಈಚಲ ಗಿಡಗಳ ಸಂಹಾರ, ಪಿಕೆಟಿಂಗ್, ಧ್ವಜಾರೋಹಣ, ಚುನಾವಣಾ ಬಹಿಷ್ಕಾರ, ಕರ ನಿರಾಕರಣ ಮತ್ತಿತರ ಘಟನೆಗಳು ಬ್ರಿಟಿಷರನ್ನು ವಿರೋಧಿಸವ ಚಳುವಳಿಗಳ ಹಾಗೆ ಜನರನ್ನು ಒಗ್ಗೂಡಿಸುವ ತಂತ್ರಗಳೂ ಆಗಿದ್ದುವು.

ಬಡ ರಾಷ್ಟ್ರವೊಂದರ ಜನರನ್ನು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಎತ್ತಿಕಟ್ಟುವ ಕೆಲಸ ಸುಲಭಗೊಳಿಸಿದುವು. ಕಡಲಿನಿಂದ ಉಪ್ಪು ನೀರು ತಂದು, ಕುದಿಸಿ, ಉಪ್ಪು ಮಾಡುವುದರ ಜೊತೆಗೆ ಅದನ್ನು ಮಾರುವ ಕೆಲಸವನ್ನು ಯಾರಾದರೂ ಸುಲಭವಾಗಿ ಮಾಡಬಹುದಿತ್ತು. ಅದೇ ರೀತಿ ಮೆರವಣಿಗೆ ಹೋಗುವುದು, ಮರಗಳನ್ನು ಕಡಿಯುವುದು, ಧ್ವಜವನ್ನು ಅರಳಿಸುವುದು, ಚುನಾವಣೆಗೆ ಬಹಿಷ್ಕಾರ ಹಾಕುವುದು, ತೆರಿಗೆ ನೀಡದಿರುವುದು-ಇವೆಲ್ಲಾ ಭಾರತದ ಸಾಮಾನ್ಯ ಪ್ರಜೆಯೊಬ್ಬ ಮಾಡಬಹುದಾದ ಕೆಲಸಗಳಾಗಿದ್ದುವು.

ಇಂಥ ಚಳುವಳಿಗಳ ಪರಿಣಾಮ ಘೋರತರವೇ ಆಗಿದ್ದರೂ ಕೂಡಾ ಅವುಗಳನ್ನು ಮಾಡುವುದಕ್ಕೆ ವಿಶೇಷ ತರಬೇತಿಯಾಗಲೀ, ಸಿದ್ಧತೆಯಾಗಲೀ ಬೇಕಿರಲಿಲ್ಲ. ಬ್ರಿಟಿಷರ ಗುಂಡುಗಳಿಗೆ ಭಾರತೀಯರು ಗುಂಡುಗಳನ್ನೇ ಉತ್ತರವಾಗಿ ನೀಡಿದ್ದರೆ ಅದರ ಪರಿಣಾಮವೇ ಬೇರೆಯಾಗಿರುತ್ತಿತ್ತು.

ಆದರೆ ಅವರ ಬೃಹತ್ ಸೇವೆಗಳಿಗೆ ಉತ್ತರವಾಗಿದ್ದುದು ಒಂದು ಹಿಡಿ ಉಪ್ಪು. ಬ್ರಿಟಿಷರ ಕೋವಿ, ಕೋಟು-ಟೈಗಳಿಗೆ ಗಾಂಧೀಜಿ ಉತ್ತರಿಸಿದ್ದು ಒಂದು ದೊಣ್ಣೆ, ಖಾದಿ ಶಾಲು ಮತ್ತು ಲಂಗೋಟೆಯ ಮೂಲಕ ಈ ಬಗೆಯ ಪ್ರತಿಭಟನೆಯನ್ನು ಇದಿರಿಸುವುದಾಗಲೀ ಅರ್ಥಮಾಡಿಕೊಳ್ಳುವುದಾಗಲೀ ಬ್ರಿಟಿಷರಿಗೆ ಸುಲಭವಾಗಿರಲಿಲ್ಲ. ಎಷ್ಟೋ ಬಾರಿ ಅವರು ಹತಾಶರಾಗಿದ್ದರು ಕೂಡಾ. ಫ್ರೆಂಚ್ ಕವಿ ಬೋದಿಲೇರ್ ಹೇಳಿದ ಹಾಗೆ "ಪಂಚತಾರಾ ಹೋಟೆಲಿನ ಅಧಿಕಾರಿಗಳನ್ನು ಭಿಕ್ಷುಕ ಮಾತ್ರ ನಡುಗಿಸಬಲ್ಲ"

ಡಾ. ಬಿರಾದಾರರ ಪ್ರಸ್ತುತ ಕೃತಿಯಲ್ಲಿ ಮುಂಬಯಿ ಕರ್ನಾಟಕ ಪ್ರಾಂತ್ಯದಲ್ಲಿ ಈ ಬಗೆಯ ಹೋರಾಟಗಳು ಹೇಗೆ ನಡೆದವು ಎಂಬ ಬಗ್ಗೆ ಸಾಕಷ್ಟು ವಿವರಗಳಿವೆ. ಉತ್ತರಕನ್ನಡ, ಬಿಜಾಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸಾಮಾನ್ಯ ಕನ್ನಡಿಗರು 1930ರ ದಶಕದಲ್ಲಿ ಸ್ವಾತಂತ್ರ ಚಳುವಳಿಯಲ್ಲಿ ಪಾಲ್ಗೊಂಡ ಬಗೆಯ ಹೃದಯಂಗಮ ಚಿತ್ರ ಇಲ್ಲಿದೆ.

ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಹಿರಿಯರ ಅನುಭವಗಳನ್ನು ಲೇಖಕರು ಅಚ್ಚುಕಟ್ಟಾಗಿ ತುಂಬ ಶ್ರಮವಹಿಸಿ ಇಲ್ಲಿ ಕ್ರೋಢೀಕರಿಸಿಕೊಟ್ಟಿದ್ದಾರೆ. ಯಾವ ಕನ್ನಡಿಗನಾದರೂ ಹೆಮ್ಮೆ ಪಟ್ಟುಕೊಳ್ಳಬಹುದಾದ ಅನೇಕ ಸಂಗತಿಗಳು ಕೃತಿಯುದ್ದಕ್ಕೂ ಹರಡಿಕೊಂಡಿವೆ.

ಶ್ರೀನಿವಾಸರಾವ್ ಮಂಗಳವೇಡೆ, ಕೌಜಲಗಿ, ಕರ್ನಾಡ್ ಸದಾಶಿವ ರಾವ್, ಆರ್.ಆರ್. ದಿವಾಕರ, ಹಡೀಕರ್ ಮತ್ತಿತರ ನಾಯಕರ ಜೊತೆಗೆ ಕೈಜೋಡಿಸಿದ ಶ್ರೀ ಸಾಮಾನ್ಯರ ನೂರಾರು ಹೆಸರುಗಳೂ ಈ ಕೃತಿಯಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದ್ದು, ಚಳುವಳಿಯ ಸಾರ್ವತ್ರಿಕ ಆಯಾಮದ ಕಡೆ ನಾವು ಯೋಚಿಸುವಂತೆ ಪ್ರೇರಣೆ ನೀಡುತ್ತದೆ.

ಕೃತಿಯು 'ಸವಿನಯ ಕಾನೂನು ಭಂಗ ಚಳುವಳಿ'ಯ ಚಾರಿತ್ರಿಕ ವಿವರಗಳನ್ನು ನೀಡುವುದರ ಜೊತೆಗೆ ಈ ಚಳುವಳಿಯು ಇದಿರಿಸುತ್ತಿದ್ದ ಆಂತರಿಕ ಸಮಸ್ಯೆಗಳನ್ನು ಆ ಆಂತರಿಕ ಸಮಸ್ಯೆಗಳನ್ನು ನಮ್ಮ ಚಳುವಳಿಗಾರರು ಬಗೆಹರಿಸಿಕೊಂಡ ಬಗೆಯನ್ನು ಸೂಕ್ಷ್ಮವಾಗಿ ದಾಖಲಿಸುತ್ತಿದೆ ಎಂಬುದು ನಮಗಿಂದು ಮುಖ್ಯವಾದ ವಿಚಾರವಾಗಿದೆ.

ಈ ವಿಷಯದಲ್ಲಿ ಲೇಖಕರಾದ ಡಾ. ಬಿರಾದಾರರು ತುಂಬ ನಿಸ್ಸಂಕೋಚವಾದ ಹಾದಿಯನ್ನು ಅನುಸರಿಸಿರುವುದೂ ಮೆಚ್ಚತಕ್ಕ ವಿಚಾರವಾಗಿದೆ. ಕೃತಿಯುದ್ದಕ್ಕೂ ಅವರು ನೀಡಿರುವ ವಿವರಗಳನ್ನು ಅವಲೋಕಿಸಿದಾಗ ಈ ಕೆಳಗಿನ ಅಂಶಗಳು ಚಳುವಳಿಯ ಸಂದರ್ಭದಲ್ಲಿ ಆಗಾಗ ತಲೆ ಎತ್ತುತ್ತಿತ್ತು. ಎಂಬುದು ಸ್ಪಷ್ಟವಾಗುತ್ತದೆ.

*ಬ್ರಾಹ್ಮಣ ಮತ್ತು ಬ್ರಾಹ್ಮಣೇತರರ ನಡುವಣ ಸಂಘರ್ಷ.

*ಹಿಂದೂ ಮತ್ತು ಮುಸ್ಲಿಮರ ನಡುವಣ ಮತ ಭೇದ

*ಜಾತಿ-ಜಾತಿಗಳ ನಡುವಣ ಬಿಕ್ಕಟ್ಟುಗಳು.

*ಅಸ್ಪೃಶ್ಯತೆಯ ಸಮಸ್ಯೆ.

*ಕರ್ನಾಟಕದ ಏಕೀಕರಣ ಹೋರಾಟ.

ಮೇಲಿನ ಐದು ವಿಚಾರಗಳು ಸ್ವಾತಂತ್ರ್ಯ ಹೋರಾಟವನ್ನು ಸುಲಭವಾಗಿ ದಿಕ್ಕೆಡಿಸಬಹುದಾಗಿತ್ತು. ಹಾಗಾಗಿ ಚಳುವಳಿಯ ಮುಂಚೂಣಿಯಲ್ಲಿದ್ದ ನಾಯಕರುಗಳು ಈ ಸಂಘರ್ಷಗಳನ್ನು ಗಮನಿಸಿ, ಅವುಗಳಿಗೆ ತಾಳ್ಮೆಯಿಂದ ಉತ್ತರಿಸುತ್ತಾ, ಅಂಥ ಸಮಸ್ಯೆಗಳನ್ನು ಸಂಘರ್ಷಾತೀತಗೊಳಿಸಬೇಕಾಗಿತ್ತು. ಇದು ಅಂದಿನ ತುರ್ತು ಅಗತ್ಯವೂ ಹೌದು.

ಪುಟ 13ರಲ್ಲಿ ಡಾ. ಬಿರಾದಾರರು ನೀಡುವ ವಿವರಗಳನ್ನು ಗಮನಿಸಿರಿ"ಗಾಂಧಿಯವರ ಅಖಿಲ ಭಾರತ ಪ್ರವಾಸ ಸಂದರ್ಭದಲ್ಲಿ ಮುಂಬೈ ಕರ್ನಾಟಕದ ನಿಪ್ಪಾಣಿ, ಚಿಕ್ಕೋಡಿ, ಹುಕ್ಕೇರಿ, ಸಂಕೇಶ್ವರ, ಬೆಳಗಾವಿ, ಮಿರಜ್, ಸಾಂಗ್ಲಿ, ಗದಗ, ಬಾಗಲಕೋಟೆ, ವಿಜಾಪುರ ಮೊದಲಾದ ಸ್ಥಳಗಳಿಗೆ ಭೇಟಿ ನೀಡಿ ಜನತೆಯು ಅಸಹಕಾರ ಚಳುವಳಿಯಲ್ಲಿ ಭಾಗವಹಿಸುವಂತೆ ಕೇಳಿಕೊಂಡರು.

ಗಾಂಧೀಜಿಯವರ ಪ್ರವಾಸದ ಸಂದರ್ಭದಲ್ಲಿ ಅವರಿಗೆ ಕಂಡದ್ದು ಬ್ರಾಹ್ಮಣ-ಬ್ರಾಹ್ಮಣೇತರರ ನಡುವಿನ ವಿವಾದ. 1920ರ ನವಂಬರ ೮ರಂದು ನಿಪ್ಪಾಣಿಯಲ್ಲಿ ಮಹಾತ್ಮಗಾಂಧಿಯವರ ಸಮ್ಮುಖದಲ್ಲಿ ಅಲ್ಲಿ ನೆರೆದ ಸಭಿಕರಲ್ಲಿ ಒಬ್ಬನು ಬ್ರಾಹ್ಮಣರನ್ನು ಬಲವಾಗಿ ಟೀಕಿಸಿದರು.

ಇಂಥ ಸಂದರ್ಭದಲ್ಲಿ ಸ್ವಲ್ಪ ಎಚ್ಚರಿಕೆ ತಪ್ಪಿದರೂ ಅಸಹಕಾರ ಚಳುವಳಿ ಹಾದಿ ತಪ್ಪಬಹುದಿತ್ತು. ಆದರೆ ದೂರಾಲೋಚನೆಯಿದ್ದ ಗಾಂಧೀಜಿ ಇದಕ್ಕೆ ಉತ್ತರಿಸಿದ್ದು ಹೀಗೆ "ಶ್ರೀ ಮಾರುತಿ ರಾಯರು ಹೇಳಿದ್ದನ್ನೆಲ್ಲಾ ನಾನು ಎಚ್ಚರಿಕೆಯಿಂದ ಕೇಳಿದ್ದೇನೆ. .

ಲೋಕದಲ್ಲಿ ಇತರರ ಕೈಯಿಂದ ತಮ್ಮ ಪಾದ ತೊಳೆಸಿಕೊಂಡು ಅದನ್ನು ತೀರ್ಥ ಎಂದು ಕೊಡುವ ಬ್ರಾಹ್ಮಣರು ಇಲ್ಲವೇ ಇಲ್ಲ. ಜನರ ಅಜ್ಞಾನವನ್ನು ಆಧರಿಸಿ ಬರೆದ ಗ್ರಂಥಗಳು ಎಷ್ಟೋ ಹಿಂದು ಜನರಲ್ಲಿ ಧರ್ಮಗ್ರಂಥ ಎನಿಸಿಕೊಂಡಿವೆ.

ಆದರೆ ಸತ್ಯ-ಅಸತ್ಯಗಳ ವಿವೇಚನೆ ಮಾಡಬೇಕು ನಾವು. ಇಡೀ ಬ್ರಾಹ್ಮಣ ಸಮಾಜವನ್ನು ದ್ವೇಷಿಸಿ, ಅವರಿಂದ ದೂರ ಇರುವುದು ಆತ್ಮ ಘಾತಕನ. . ."ಪುಟ 13-14). ಹೀಗೆ ಗಾಂಧೀಜಿ ಸಂಘರ್ಷಮಯ ವಾತಾವರಣವನ್ನು ಸಂಘರ್ಷಾತೀತಗೊಳಿಸಿ ಚಳುವಳಿ ಸ್ಥಗಿತವಾಗದಂತೆ ನೋಡಿಕೊಂಡರು. ಇಂಥ ಬಿಕ್ಕಟ್ಟುಗಳು ಹಿಂದೂ ಮತ್ತು ಮುಸ್ಲಿಮರ ನಡುವೆಯೂ ಕಾಣಿಸಿಕೊಂಡದ್ದನ್ನೂ ಈ ಕೃತಿ ದಾಖಲಿಸುತ್ತದೆ.

ಉದಾಹರಣೆಗೆ ಪುಟ 37ರಲ್ಲಿ ಡಾ. ಅನ್ನಿಬೆಸೆಂಟರು ಮಾಡಿದ ಭಾಷಣದಲ್ಲಿ ಬರುವ ಮಾತುಗಳನ್ನು ಗಮನಿಸಿರಿ. -"ನಮ್ಮ ಮುಸಲ್ಮಾನ ಬಂಧುಗಳು ಬಹುಸಂಖ್ಯಾತರಿದ್ದಲ್ಲಿ ತಮಗೊಂದು ಪ್ರತ್ಯೇಕ ಪ್ರಾಂತವಾಗಿರಲಿ, ಅಲ್ಪ ಸಂಖ್ಯಾತರಿದ್ದಲ್ಲಿ ಕಾದಿಟ್ಟ ಪ್ರಾತಿನಿಧ್ಯವನ್ನಾಗಲೀ ಬೇಡುವರು. ಬಹುಸಂಖ್ಯಾತರು ಅಲ್ಪ ಸಂಖ್ಯಾತರ ಹಿತವನ್ನು ನುಂಗಿ ನೀರು ಕುಡಿಯುವರೆಂಬ ಭೀತಿಯೇ ಇದಕ್ಕೆ ಕಾರಣವಾಗಿದೆ.

ಹಿಂದೂ-ಮುಸಲ್ಮಾನರೇ ಆಗಲಿ, ಬ್ರಾಹ್ಮಣ ಬ್ರಾಹ್ಮಣೇತರರೇ ಆಗಲಿ, ಪರಸ್ಪರ ಹೃದಯಲ್ಲಿ ಮನೆಮಾಡಿಕೊಂಡಿರುವ ಈ ಅವಿಶ್ವಾಸವನ್ನು ದೂರ ಮಾಡಲೇಬೇಕು. ತಾವೆಲ್ಲರೂ ಒಂದೇ ನಾಡಿನವರೆಂದೂ ಭಾರತೀಯರೆಂದೂ ಕೂಡಿ ಕೆಲಸ ಮಾಡಿದರೆ ಈ ಒಡಕುಗಳ ಭೂತವು ಸದ್ಯದಲ್ಲಿಯೇ ಮಾಯವಾಗುವುದು" (ಪುಟ:37) ರಾಷ್ಟ್ರೀಯ ಹೋರಾಟವು ಆಂತರಿಕ ಬಿಕ್ಕಟ್ಟುಗಳಿಗೆ ತಾತ್ಕಾಲಿಕವಾಗಿ ತಡೆಯೊಡ್ಡಿದ್ದ ಕಥಾನಕವಿದು.

ಭಾರತೀಯ ಸಮಾಜವು ಜಾತಿಗಳ ನಡುವೆ ಒಡೆದು ಹೋಗಿರುವುದು ನಮಗೆಲ್ಲಾ ತಿಳಿದೇ ಇದೆ. ಜಾತಿಗಳ ನಡುವಣ ತಾರತಮ್ಯವು ಯಾವುದೇ ಚಳುವಳಿಗಳಿಗೆ ತಡೆಯುಂಟು ಮಾಡುವುದಲ್ಲದೆ, ಚಳುವಳಿಗಳನ್ನು ಪ್ರತಿಗಾಮಿಯಾಗಿಸಬಹುದು.

ಈ ಕೃತಿಯುದ್ದಕ್ಕೂ ಜಾತಿಗಳ ನಡುವಿನ ಶ್ರೇಣೀಕರಣವನ್ನು ಚಳುವಳಿಗಳು ಮೀರಿ ನಿಂತ ಬಗೆಯ ಕುತೂಹಲಕರ ವಿವರಗಳಿವೆ. ಲಿಂಗಾಯತರು ಕಾಂಗ್ರೆಸ್ ಸೇರಿದ ಆನಂತರ ಆ ಪಕ್ಷಕ್ಕೆ ಒಂದು ಬಗೆಯ ಸರ್ವ ಗ್ರಾಹಕತೆ ಲಭಿಸಿದ್ದು (ಪುಟ:82), ಬ್ರಾಹ್ಮಣೇತರ ಪಕ್ಷಗಳು ಸ್ವಾತಂತ್ರ್ಯ ಹೋರಾಟಕ್ಕೆ ತಂದುಕೊಟ್ಟ ವಿಶೇಷ ಬಲ (ಪುಟ:83-84)ಗಳ ಬಗ್ಗೆ ಈ ಕೃತಿಯಲ್ಲಿ ಅಪೂರ್ವ ಮಾಹಿತಿಗಳಿವೆ.

1930ರಷ್ಟು ಹಿಂದೆ ಕರ್ನಾಟಕ ಬ್ರಾಹ್ಮಣೇತರ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಿದ್ದಪ್ಪ ಹೊಸಮನಿಯವರು ಹೇಳಿದ ಮಾತುಗಳಿವು". ನನಗೆ ತಿಳಿದ ಮಟ್ಟಿಗೆ ಮತ್ತು ನನ್ನ ಹಾಗೂ ಹಲವು ಬ್ರಾಹ್ಮಣೇತರ ಮುಂದಾಳುಗಳ ವಿಚಾರ ಸರಣಿಯನ್ನು ನೋಡಲಾಗಿ, ಈಗ ನಮ್ಮೆಲ್ಲರ ದೃಷ್ಟಿಕೋನವು ವಿಸ್ತೃತವಾಗುತ್ತಲಿದೆಯೆಂದು ನಾನು ಧಾರಾಳವಾಗಿ ಹೇಳಬಲ್ಲೆ.

'ಬ್ರಾಹ್ಮಣೇತರ' ಈ ಹೆಸರು ನಮ್ಮಲ್ಲಿ ರಾಷ್ಟ್ರೀಯತ್ವದ ಭಾವನೆಯ ಸಂಪೂರ್ಣ ವಿಕಾಸವಾಗದಿದ್ದಾಗ, ಅಂದರೆ ಜಾತಿ ವೈಶಿಷ್ಟ್ಯಕ್ಕೆ ಪ್ರಾಧಾನ್ಯ ಕೊಟ್ಟಾಗ್ಗೆ ಕೆಲವು ಕಾಲ ನಮ್ಮ ಉದ್ದೇಶವನ್ನು ಈಡೇರಿಸಿತು. ಪ್ರತಿಯೊಂದು ಬಣದಲ್ಲಿ ಸಾಕಷ್ಟು ಜಾಗ್ರತಿಯುಂಟಾದುದರಿಂದ ನಮಗೆ ಇನ್ನು ಮುಂದೆ ಈ ಹೆಸರು ನಿರರ್ಥಕವು" (ಪುಟ:88) : ಬ್ರಾಹ್ಮಣ-ಬ್ರಾಹ್ಮಣೇತರ ಸಮಸ್ಯೆಗಳನ್ನು ರಾಷ್ಟ್ರೀಯ ಹೋರಾಟ ತಾತ್ಕಾಲಿಕವಾಗಿಯಾದರೂ ಹಿಂದೆ ತಳ್ಳಿದ್ದರ ಬಗ್ಗೆ ಈ ಮಾತುಗಳು ವಿಶೇಷ ಬೆಳಕು ಚೆಲ್ಲುತ್ತವೆ.

ಸ್ವಾತಂತ್ರ್ಯ ಚಳುವಳಿಯು ಅಸ್ಪೃಶ್ಯತೆಗೆ ಹೇಗೆ ಪ್ರತಿಕ್ರಿಯಿಸಿತೆಂಬುದನ್ನು ಅರ್ಥಮಾಡಿಕೊಳ್ಳಲು ಈ ಕೃತಿ ವಿಶೇಷ ನೆರವು ನೀಡುತ್ತದೆ. ಗಾಂಧೀಜಿಯಂತೂ ಅಸ್ಪೃಶ್ಯತೆಗೆ ಬದ್ಧ ವಿರೋಧಿಯಾಗಿದ್ದರು. ಆದರೆ ಅವರ ಅನುಯಾಯಿಗಳಲ್ಲಿ ಕೆಲವರಿಗಾದರೂ ಈ ವಿಷಯದಲ್ಲಿ ಗೊಂದಲವಿತ್ತು. ಈ ಗೊಂದಲವನ್ನು ಅರ್ಥ ಮಾಡಿಕೊಳ್ಳಲು ನಾವು ಈ ಕೃತಿಯಲ್ಲಿ ಬರುವ ಸಿರಸಿ ಮಾರಿಕಾಂಬಾ ದೇವಳದ ಘಟನೆಯನ್ನು ಪರಿಶೀಲಿಸಬೇಕು.

ಗಾಂಧೀಜಿಯ ಶಿರಸಿ ಭೇಟಿ ಸಂದರ್ಭದಲ್ಲಿ ಸಿರಸಿಯ ಜನರು ಮಾರಿಕಾಂಬಾ ದೇವಳಕ್ಕೆ ಹರಿಜನರ ಪ್ರವೇಶಕ್ಕೆ ಒಪ್ಪಿದ್ದರು. ಆದರೆ ಅಲ್ಲಿನ ಪ್ರಾಣಿಬಲಿ ನಿಂತಿರಲಿಲ್ಲ. ಕಾರಣ ಗಾಂಧಿಯವರು ದೇವಳಕ್ಕೆ ಹೋಗಲು ಒಪ್ಪಲಿಲ್ಲ. ಜೊತೆಗೆ "ಪ್ರಾಣಿಬಲಿ ಕೊಡುವ ಯಾವ ದೇವಾಲಯಕ್ಕೂ ಹೋಗಗೊಡಬಾರದು" ಎಂಬ ಅಭಿಪ್ರಾಯವನ್ನು ಅವರು ಪ್ರಕಟಿಸಿದರು. ಇದರ ಪರಿಣಾಮವಾಗಿ ಅಲ್ಲಿ ಪ್ರಾಣಿಬಲಿಯೂ ನಿಂತಿತು.

ಇದಕ್ಕೆ ಕಾರಣ ಕರ್ತರಾದವರನ್ನೆಲ್ಲಾ ಗಾಂಧಿ ಅಭಿನಂದಿಸಿದರು. (ವಿವರಗಳಿಗೆ ನೋಡಿ ಪುಟ:301-302) ಇಂಥ ಘಟನೆಗಳು ಅಸ್ಪೃಶ್ಯತೆ, ಪ್ರಾಣಿಬಲಿ ಮತ್ತು ದಲಿತ ಸಂಸ್ಕೃತಿಯನ್ನು ಹೊಸ ಎಚ್ಚರದಲ್ಲಿ ನೋಡಲು ನಮ್ಮನ್ನು ಪ್ರೇರೇಪಿಸುತ್ತವೆ. ಈ ಅರ್ಥದಲ್ಲಿ ಕೃತಿಯ ಕೊನೆಯ ಭಾಗ "ಮಹಾತ್ಮರ ಹರಿಜನ ಪ್ರವಾಸ" ತುಂಬ ಉಪಯುಕ್ತವಾದ ಮಾಹಿತಿಗಳನ್ನು ಒಳಗೊಂಡಿದೆ.

1930 ರ ದಶಕದಲ್ಲಿ ಕರ್ನಾಟಕ ಏಕೀಕರಣ ಚಳುವಳಿಯೂ ನಡೆಯುತ್ತಿತ್ತು. ಪ್ರಾದೇಶಿಕ ಭಾವದಿಂದ ಕೂಡಿದ್ದ ಈ ಚಳುವಳಿಯು ರಾಷ್ಟ್ರೀಯ ಚಳುವಳಿಗೆ ಪೂರಕವಾಗಿ ಕೆಲಸ ಮಾಡಬೇಕಿತ್ತು. ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮದ್ರಾಸ್ ಕರ್ನಾಟಕ ಮತ್ತು ಮೈಸೂರು ಪ್ರಾಂತ್ಯಗಳಲ್ಲಿ ಹರಿದು ಹಂಚಾಗಿ ಹೋಗಿದ್ದ ಕನ್ನಡಿಗರು ದೇಶದ ಬಿಡುಗಡೆಗೆ ಹೋರಾಡುತ್ತಲೇ, ತಾವು ಒಂದಾಗುವ ಕನಸು ಕಾಣುತ್ತಿದ್ದರು.

ಈ ಕೃತಿಯ ಪುಟ:39ರಲ್ಲಿ ನೀಡಲಾದ 'ಕರ್ನಾಟಕ ಸರ್ವಪಕ್ಷೀಯ ಪರಿಷತ್ತಿನ ೧೧ ನಿರ್ಣಯಗಳನ್ನು ಗಮನಿಸಿದರೆ ನಮ್ಮ ಹಿರಿಯರು ಹೇಗೆ ತಮ್ಮ ಮುಂದಿದ್ದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಿದ್ದರು ಎಂಬ ವಿಷಯ ಸ್ಪಷ್ಟವಾಗುತ್ತದೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಕುತೂಹಲದ ಅಂಶವೆಂದರೆ ಪ್ರಖ್ಯಾತವಾದ 'ಉಪ್ಪಿನ ಸತ್ಯಾಗ್ರಹ'ಕ್ಕೆ ಮಾತ್ರ ಈ ಆಂತರಿಕ ಭಿನ್ನತೆಗಳ ಸಮಸ್ಯೆ ಕಾಣಲಿಲ್ಲ ಎಂಬುದು. ಕಾನೂನು ಭಂಗ ಮಂಡಲದ ಸದಸ್ಯರು 16.03.1930ರಲ್ಲಿ ನೀಡಿದ ವರದಿಯೊಂದರಲ್ಲಿ ಹೀಗೆ ಬರೆದಿದ್ದರು-

"ಕರ್ನಾಟಕದಲ್ಲಿ ಈ ಚಳುವಳಿಗೆ ಸುಸಂಘಟಿತ ವಿರೋಧವಿಲ್ಲ. ಪಂಗಡಗಳ ಪೀಕಲಾಟವಿಲ್ಲ. ಸುಶಿಕ್ಷಿತರು ಮಾತ್ರ ತುಸು ಉದಾಸೀನತೆಯನ್ನು ತೋರಿಸುತ್ತಿರುವವರು" (ಪುಟ:50).

ಬಹುಶಃ ಈ ಕಾರಣಕ್ಕೇನೇ ಸವಿನಯ ಕಾನೂನುಭಂಗ ಚಳುವಳಿಗಳಲ್ಲಿ 'ಉಪ್ಪಿನಸತ್ಯಾಗ್ರಹ' ಅಪಾರ ಯಶಸ್ಸನ್ನೂ ಕಾಣಲು ಸಾಧ್ಯವಾಯಿತು ಎಂದು ತೋರುತ್ತದೆ.

ಕೃತಿಯ ಕೊನೆಯಲ್ಲಿ 'ಮಹಿಳೆಯರ ಪಾತ್ರ' ಎಂಬ ಭಾಗವನ್ನು ಪ್ರತ್ಯೇಕವಾಗಿ ನೀಡಲಾಗಿದ್ದು ಅದು ಒಟ್ಟಾರೆ ಚಳುವಳಿಯಲ್ಲಿ ಕರ್ನಾಟಕದ ಮಹಿಳೆಯರು ತಮ್ಮನ್ನ ತೊಡಗಿಸಿಕೊಂಡ ಬಗೆಯನ್ನು ವಿವರಿಸುತ್ತದೆ.

ಮ್ಯಾಜಿಸ್ಟ್ರೇಟರನ್ನೇ ಬೆದರಿಸಿದ ಕೃಷ್ಣಬಾಯಿ, 16 ರೂಗಳಿಗೆ ಉಪ್ಪುಕೊಂಡುಕೊಂಡ ಗಂಗೋವಳಿ ಮನೆತನದ ಮಹಿಳೆ, ಗಾಂಧೀ ಭಾವಚಿತ್ರಕ್ಕೆ ಒದ್ದ ಬ್ರಿಟಿಷ್ ಅಧಿಕಾರಿ ವೆಲ್ಸನ್ ಕಪಾಳಕ್ಕೆ ಬಾರಿಸಿದ ನಾಗವ್ವ ಪಾಟೀಲ, ಪೋಲಿಸರ ಲಾಠೀ ಪ್ರಹಾರಕ್ಕೆ ಮೈಕೊಟ್ಟು ನಿಂತರ ಕಾಶೀಬಾಯಿ ಗದ್ರೆ, ಶೇಂದಿ ಅಂಗಡಿಗಳ ಮುಂದೆ ಪಿಕೆಟಿಂಗ್ ನಡೆಸಿದ ಭಟ್ಕಳದ ಕಲ್ಯಾಣಬಾಯಿ ಹಾಗೂ ಕೃಷ್ಣಾಬಾಯಿ, ವಿದೇಶೀ ಬಟ್ಟೆಗಳನ್ನು ಬಹಿಷ್ಕರಿಸಿದ ಉಮಾಬಾಯಿ ಕುಂದಾಪುರ, ಚಿಕ್ಕ ಮಕ್ಕಳನ್ನು ಪೋಲಿಸರಿಂದ ಸಂರಕ್ಷಿಸಿದ ಕಾಯಿಪಲ್ಲೆ ಮಾರುವ ಬಸವ್ವ ಕಳಸಣ್ಣ,

ಗುಳೇದಗುಡ್ಡ ನಗರ ಸಭೆಯ ಮೇಲೆ ರಾಷ್ಟ್ರಧ್ವಜ ಹಾರಿಸಿದ ಮುಸ್ಲಿಂ ಮಹಿಳೆ ಫಕೀರವ್ವ ಹಂಪಿ ಹೊಳೆ, ಮೊದಲಾದವರ ಜೊತೆಗೆ ಚಿನ್ನಾಭರಣ, ಆಸ್ತಿ ಕಳೆದುಕೊಂಡು ಬೀದಿ ಪಾಲಾದ ಅನೇಕ ಮಹಿಳೆಯರ ಹೆಸರುಗಳು ಇಲ್ಲಿ ಕಾಣಿಸಿಕೊಂಡಿವೆ. ನಾವು 'ಪುರುಷಪ್ರಧಾನ' ಎಂದು ಸಾಮಾನ್ಯವಾಗಿ ಅಂದುಕೊಳ್ಳುವ ಚಳುವಳಿಯ ಹಿಂದೆ ಎಷ್ಟೊಂದು ಮಹಿಳೆಯರಿದ್ದರು ಎಂಬುದನ್ನು ಗಮನಿಸಿದಾಗ ಆಶ್ಚರ್ಯವಾಗುತ್ತದೆ.

ಹೀಗೆ ಈ ಕೃತಿಯು ಮುಂಬಯಿ ಕರ್ನಾಟಕದಲ್ಲಿ ನಡೆದ ಸವಿನಯ ಕಾನೂನುಭಂಗ ಚಳುವಳಿಯ ಚರಿತ್ರೆಯನ್ನು ಅದರೆಲ್ಲಾ ಸಂಕೀರ್ಣತೆಗಳೊಂದಿಗೆ ಕಟ್ಟಿಕೊಡುತ್ತದೆ. 1920-30ರ ದಶಕದ ಕರ್ನಾಟಕದ ಚರಿತ್ರೆಯನ್ನು ಅಧ್ಯಯನ ಮಾಡ ಬಯಸುವ ಇತಿಹಾಸಕಾರರು ಮತ್ತು ಸಮಾಜ ಶಾಸ್ತ್ರಜ್ಞರಿಗೆ ಈ ಕೃತಿಯು ಒಂದು ಅಪೂರ್ವ ಆಕರ ಗ್ರಂಥವಾಗಿದೆ. ದೆಹಲಿಯಲ್ಲಿ ಕುಳಿತು ಇಂಥದ್ದೊಂದು ಮಹಾಕಾರ್ಯ ಮಾಡಿದ ಗೆಳೆಯರಾದ ಡಾ. ಜಿ.ಎ. ಬಿರಾದಾರ ಅವರಿಗೆ ಅಭಿನಂದನೆಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more