ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರಾಜ್ ಸರ್ಕಾರ್ ಅವರ ಮುಸ್ಸಂಜೆಯಿಂದ ಮುಂಜಾವಿಗೆ

By * ಶಿಕಾರಿಪುರ ಹರಿಹರೇಶ್ವರ, ಮೈಸೂರು
|
Google Oneindia Kannada News

Devaraj Sarkar, Mysuru
ತಮಸೋ ಮಾ ಜ್ಯೋತಿರ್ ಗಮಯ||'- ಉಪನಿಷದ್ ವಾಣಿಯನ್ನು ನಾವೆಲ್ಲ ಕೇಳಿದ್ದೇವೆ. ಕತ್ತಲಿಂದ ಬೆಳಕಿನ ಕಡೆ ನಮ್ಮನ್ನು ಕೊಂಡೊಯ್ಯಿ- ಅಂತ ದೇವರನ್ನ ನಾವು ಕೇಳಿಕೊಳ್ಳುವ ಈ ಮಾತು ಎಲ್ಲರಿಗೂ ಚಿರಪರಿಚಿತ. ಇದರ ಹಿನ್ನೆಲೆಯಲ್ಲಿ ಮೂಡಿಬಂದಿರುವ ಒಂದು ಸುಂದರ ಕಥಾಹಂದರದ ಇಂಗ್ಲೀಷ್ ಕಾದಂಬರಿ ಡಸ್ಕ್ ಟು ಡಾನ್ ಮೊನ್ನೆ ಮೈಸೂರಿನಲ್ಲಿ ಕಲಾಮಂದಿರದ ಮನೆಯಂಗಳದ ಸಭಾಂಗಣದಲ್ಲಿ ಲೋಕಾರ್ಪಣೆಗೊಂದಿತು.

ಬರೆದವರು: ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರೂ, ಶಿವಮೊಗ್ಗದ (ಆಗಿನ) ಇಂಟರ್‌ಮೀಡಿಯಟ್ ಕಾಲೇಜಿನಲ್ಲಿ ನಾನು ಓದುತ್ತಿದ್ದಾಗ ಅಲ್ಲಿನ ಜನಪ್ರಿಯ ಮೇಷ್ಟರಾಗಿದ್ದ ಪ್ರೊ| ದೇವರಾಜ್ ಸರ್ಕಾರ್ ಅವರು.

ವಿಸ್ತಾರವಾದ ವರ್ಣಪಟಲದ ಮೇಲೆ ಹರಡಿಕೊಂದಿರುವ ಈ ಕಾದಂಬರಿಯ ಸಮಕಾಲೀನ ಸಮಾಜದ ಸಾಮಾನ್ಯನೊಬ್ಬನ ಏಳುಬೀಳುಗಳ ಕಥೆ ರೋಚಕವಾಗಿದೆ. ಹಳ್ಳಿಯೊಂದರ ಹಳೆಯ ಕೆರೆಯ ದಂಡೆಯಮೇಲೆ ಗೆಳೆಯನೊಂದಿಗೆ ಒಬ್ಬ ತರುಣ ಗಾಳಿಸವಾರಿಗೆ ಹೊರಟಿದ್ದ. ಕಾಡು ಹರಟೆ ಎತ್ತೆತ್ತಲೋ ಸಾಗುತ್ತಿತ್ತು. ಪಡುವಣ ದಿಕ್ಕಿನಲ್ಲಿ ನೇಸರು ಮುಳುಗುತ್ತಿದ್ದ; ಮೆಲ್ಲ ಮೆಲ್ಲಗೆ ಕಣ್ಮರೆಯಾಗುತ್ತಿದ್ದ. ಸಂಸ್ಕೃತದಲ್ಲಿ ಈ ಮುಸ್ಸಂಜೆಯ ಬಗ್ಗೆ ಒಂದು ಸುಂದರ ಮುಕ್ತಕವಿದೆ, ವಾಲ್ಮೀಕಿ ಹೇಳಿದುದನ್ನು ಹೀಗೆ ಕನ್ನಡಿಸಬಹುದು:

ಕುಣಿ ಕುಣಿವ ತಂಗದಿರ ಚಂದಿರನ ಕೈತಾಗಲಾಗಿ
ಸಂತಸದಿ ಚುಕ್ಕೆಗಳು ಬೀಗಿದವು ಹಿಗ್ಗಿ;
ತನ್ನ ಬಣ್ಣದುಡುಗೆಯ ತೊಡೆದು, ಮುನಿದು,
ಬಿಸುಟು ಓಡಿದಳು ಸಂಧ್ಯೆ, ಓ ನೋಡಿ, ನೋಡಿ!

ಇರಲಿ, ಕುದುರೆ ಅಡ್ಡ ದಿಡ್ಡಿ ಎಲ್ಲೆಲ್ಲೋ ಓಡಿತು. ಈ ಮುಸ್ಸಂಜೆಯ ಮಬ್ಬಿನ ಮುಸುಕಿನ ಬೆಳಕಿನಲ್ಲಿ ಈ ಗೆಳೆಯರಿಬ್ಬರೂ ಚರ್ಚಿಸುತ್ತಿದುದೇನು ಗೊತ್ತ? ತಮ್ಮ ನೆಂಟರ ಪೈಕಿ ಒಬ್ಬರ ಸಂಧ್ಯಾರಾಗ ಅನುರಾಗಗಳ ಬಗ್ಗೆ, ಮದುವೆಯ ಬಗ್ಗೆ. ಹಾಂ, ಹೇಳುವುದನ್ನ ಮರೆತೆ. ಈತ ಹುಟ್ಟಿದ್ದು ಸಮಾಜದಲ್ಲಿ ಹಿಂದುಳಿದ ಪಂಗಡದ ಒಂದು ಕುಲದಲ್ಲಿ. ಅಷ್ಟೇ ಅಲ್ಲ, ಕಡುಬಡತನದ ಕುಟುಂಬವೊಂದರಲ್ಲಿ. ಸುತ್ತ ಮುತ್ತಣ ಬಂಧುಗಳು ಸಾಂಪ್ರದಾಯಿಕ ಮನೋಭಾವದ ಹಳೆಯ ಪಳೆಯುಳಿಕೆಗಳು. ಕೆಲವರಲ್ಲಂತೂ ಜಾತಿಭೂತ ಮೆಟ್ಟಿ ಕುಣಿದಾಡುತ್ತಿದೆಯೇನೋ ಎನ್ನುವಷ್ಟರ ಮಟ್ಟಿನ ಹುಂಬತನ. ಇದನ್ನೆಲ್ಲ ಗೆಳಯರಿಬ್ಬರು ಮಾತನಾಡಿಕೊಳ್ಳುತ್ತ ಹೋಗುತ್ತಿದ್ದಾರೆ.

ಏನು ಮಾತನಾಡಿಕೊಂಡರೆ ಏನು ಪ್ರಯೋಜನ? ಹಿರಿಯರಿಗೆ ಅವರ ಕೂಪಮಂಡೂಕತನವನ್ನ ಈ ಯುವಕರು ಮನಗಾಣಿಸುವುದಾದರೂ ಹೇಗೆ? ಎಷ್ಟು ತಲೆ ಚಚ್ಚಿಕೊಳ್ಳಬೇಕು? ಆದರೇನು ನಮ್ಮ ಕಥಾನಾಯಕ ಭಾವಜೀವಿ. ತನ್ನ ಯೋಚನಾಲಹರಿಗಳನ್ನ ಬರೆಹಕ್ಕಿಳಿಸಲು ಪ್ರಯತ್ನಿಸುತ್ತಾನೆ. ಮೊದಲು ಮೆಲ್ಲ ಮೆಲ್ಲನೆ ಹೆಜ್ಜೆಯಿಡ ತೊಡಗುತ್ತಾನೆ. ಆಮೇಲೆ ದಾಪುಗಾಲು, ಕೊನೆಗೆ ನಾಗಾಲೋಟ. ಹೀಗೆ ಕಾವ್ಯವಿಹಾರದ ಜಾಗಿಂಗ್ ಅಥವಾ ಜಾಗೋಪಾಸನೆಯಲ್ಲಿ ನಿರತನಾಗಿದ್ದಾಗ, ಸತತ, ಅವಿರತ ನಿರತನಾಗಿದ್ದಾಗ ಏನಾಯ್ತು? ಮಿಂಚಿನಂತೆ ಸುಳಿದು ಬಂದಿಳಿದಳು ಎಲ್ಲಿಯೋ ಬಾಂದಳದಿಂದ ಒಬ್ಬಳು ಸೌದಾಮಿನಿ, ಬಳ್ಳಿ ಬಾಲೆ. ಇವಳೂ ಒಬ್ಬಳು ಕವಯಿತ್ರಿ!

ಮೊದಲ ನೋಟದಲ್ಲೇ ನಮ್ಮ ಹುಡುಗನ ಮನಸೆಳೆದದ್ದು ಈ ಹುಡುಗಿಯ ಬೆಡಗಿಯ ಬಿನ್ನಾಣವಲ್ಲ; ಮೈಮಾಟವಲ್ಲ; ಇನಿದನಿಯ ತಂಪಲ್ಲ, ಕಂಪಲ್ಲ. ಕೇಳಿಲ್ಲವೇ? ಕಾಳಿದಾಸನ ಕುಮಾರಸಂಭವದ ಪಾರ್ವತಿಯ ತೊಳಲಾಟ-

ತನ್ನ ಮನದರಕೆಗಳನೆಲ್ಲ ತನ್ನೆದುರೇ ಸುಟ್ಟನೇ
ಹುಟ್ಟಡಗಿಸಿದನೇ ಈ ಉರಿಗಣ್ಣ ಎನುತ ಪರಿತಪಿಸಿ;
ಬಲು ಚೆಲುವೆ ತಾನೆಂಬ ಹಮ್ಮು ಇದ್ದುದು ಸಹಜ;
ಮನಸಾರೆ ಅದ ಹಳಿದು ಈಗ ಹೊರನಡೆದಳು-
ತನ್ನೊಲವು ಆ ಎಲ್ಲೆ ಮೀರಿ ಇರುವುದ ತೋರಿ
ಅವನ ಗೆಲ್ಲುವೆನೆಂದು ಇವಳು ಪಣ ತೊಟ್ಟಳು!

ಇಲ್ಲೂ ಹಾಗೇ ಆಗುತ್ತದೆ. ಆದರೆ ಬೇರೊಂದು ರೀತಿ. ಸರಿ ಬಿಡಿ, ಇಬ್ಬರೂ ಕನಸುಗಾರರೇ. ಒಂದು ಹೆಜ್ಜೆ ಮುಂದೆಹೋಗಿ ಹಗಲುಗನಸು ಕಾಣುವವರೇ. ಸ್ನೇಹ ಪ್ರೀತಿಯ ಮಜಲು ದಾಟಿ ಪ್ರಣಯದ ಜಾಡು ಹಿಡಿಯುತ್ತದೆ. ಅವಳೂ ಪ್ರತಿಸ್ಪಂದಿಸತೊಡಗಿ, ಸ್ವರ್ಗಕ್ಕೆ ಇನ್ನೇನು ಮೂರು ಗೇಣು ಇದೆ ಎನ್ನುವಾಗ, ಅವಳು ದೂರವಾಗುತ್ತಾಳೆ. ಸೀಮೋಲ್ಲಂಘನ ಮಾಡುತ್ತಾಳೆ; ಗಡಿ ದಾಟುತ್ತಾಳೆ.

ಹಾಡುಹಕ್ಕಿಗಳು ಮತ್ತೆ ಒಂದಾದವೇ? ಈ ಬಾನಾಡಿಗಳು, ಈ ದ್ವಾ-ಸುಪರ್‍ಣಾಗಳು ಮತ್ತೆ ಭೆಟ್ಟಿಯಾಗಿ, ಅಮೆರಿಕಾದ ಕಾಡು-ಮೇಡುಗಳಲ್ಲಿ ಪ್ರಯೋಗಶಾಲೆಗಳ ಬೃಂದಾವನಗಳಲ್ಲಿ ಹಾರಾಡಿ, ಕೂಡಿ, ಆಮೇಲೆ ಒಂದೇ ಮರದ ಮೇಲೆ ಕುಳಿತು, ಒಂದೇ ಹಣ್ಣನ್ನು ಕಚ್ಚಿ ಕಚ್ಚಿ ಹಂಚಿಕೊಂಡು ತಿನ್ನುತ್ತಾ ಸುಖಿಸಿದವೇನು? ಮುಸ್ಸಂಜೆಯಲ್ಲಿ ಹೊರಟ ಪಯಣ ಅರುಣೋದಯವನ್ನು ಕಂಡಿತಾ? ಮುಂದಿನ ಕಥೆಯನ್ನು ರಜತ ಪರದ ಮೇಲೆ ನೋಡಿ ಆನಂದಿಸಿ, ಎನ್ನಲೇ? ಇಲ್ಲ; ಪುಸ್ತಕ ಡಾನ್ ಟು ಡಸ್ಕ್, ಸಾರಿ, ಡಸ್ಕ್ ಟು ಡಾನ್- ಓದಿ ಸಂತೋಷ ಪಡಿ.

***
ಲೇಖಕರ ಪರಿಚಯ : ಪ್ರೊ| ಎಚ್ ಬಿ ದೇವರಾಜ್ ಸರ್ಕಾರ್ (ಜನನ: ಡಿಸೆಂಬರ್ 18, 1929) ಅವರ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವೆಲ್ಲ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ (1945)ಯಲ್ಲಿ ನಡೆಯಿತು. ಅನಂತರ ಇಂಟರ್ ಮೀಡಿಯಟ್ ಕಾಲೇಜು, ತುಮಕೂರು (1947), ಸೆಂಟ್ರಲ್ ಕಾಲೇಜು, ಬೆಂಗಳೂರು, ಬಿ ಎಸ್‌ಸಿ ಅನರ್ಸ್(1950), ಎಮ್‌ಎಸ್‌ಸಿ, ಮೈಸೂರು ವಿಶ್ವವಿದ್ಯಾನಿಲಯ (1960), ಪಿಎಚ್ ಡಿ, ಮೈಸೂರು ವಿಶ್ವವಿದ್ಯಾನಿಲಯ (1967), ಉನ್ನತ ವ್ಯಾಸಂಗ (1966-67) (ಫೋರ್ಡ್ ಫೌಂಡೇಶನ್‌ನ ಫೆಲೋ) - ಹೀಗೆ ವ್ಯಾಸಂಗವನ್ನು ಮುಂದುವರಿಸಿದರು.

ಶಿವಮೊಗ್ಗ ಇಂಟರ್‌ಮೀಡಿಯಟ್ ಕಾಲೇಜಿನಲ್ಲಿ ಅಧ್ಯಾಪಕ (1950-55) ವೃತ್ತಿಯನ್ನು ಪ್ರಾರಂಭಿಸಿದ ಇವರು, ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರು (1943-45), ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಅಧ್ಯಯನ ಪ್ರಾಣಿಶಾಸ್ತ್ರ ಸಂಶೋಧನ ವಿಭಾಗದಲ್ಲಿ ವಿವಿಧ ಹುದ್ದೆಗಳಲ್ಲಿ ಅಧ್ಯಾಪಕರು(1965-69); ವಿಭಾಗದ ಮುಖ್ಯಸ್ಥರು (1969), ಕೊಮೆನಿಯನ್ ವಿಶ್ವವಿದ್ಯಾನಿಲಯ, ಬ್ರಾಟಿಸ್ಲಾವ, ಜೆಕೊಸ್ಲೊವಾಕಿಯ, ಸಂದರ್ಶಕ ಪ್ರಾಧ್ಯಾಪಕ (1980-81), ವಿವಿಧ ವಿಶ್ವವಿದ್ಯಾನಿಲಯಗಳು, ಸಂದರ್ಶಕ ವಿಜ್ಞಾನಿ (1986), ಗುಜರಾತ್ ವಿಶ್ವವಿದ್ಯಾನಿಲಯ, ಅಹಮದಾಬಾದ್, ಸಂದರ್ಶಕ ಪ್ರಾಧ್ಯಾಪಕ (1992-93)- ಹುದ್ದೆಗಳನ್ನು ಅಲಂಕರಿಸಿದರು. ಕ್ರೀಡಾಪಟುವಾದ ಸರ್ಕಾರ್‌ಗೆ ನಾಟಕ ಒಂದು ಹವ್ಯಾಸ. ವಿದ್ಯಾರ್ಥಿದೆಸೆಯಲ್ಲಿಯೇ (ಈಗ ಪ್ರೊ| ಆಗಿರುವ) ಪ್ರಭು ಪ್ರಸಾದ್ ಅವರೊಂದಿಗೆ ರಿಫಂಡ್ ಎಂಬ ವಿನೂತನ ಇಂಗ್ಲಿಷ್ ರಂಗಪ್ರಯೋಗವನ್ನು ಕೂಡ ಮಾಡಿದವರು.

ವಿಜ್ಞಾನ ಕರ್ನಾಟಕ ಪತ್ರಿಕೆಯ ಸಂಪಾದಕ(1973-75); ಪಠ್ಯಪುಸ್ತಕ ಸಮಿತಿ ಸದಸ್ಯ, ಪಠ್ಯಕ್ರಮ ಪರಿಷ್ಕರಣ ಸಮಿತಿ ಸದಸ್ಯ, ಕನ್ನಡ ವಿಜ್ಞಾನ ವಾಙ್ಮಯ ಶಿಬಿರ ಸಂಘಟಕ, ವಿಜ್ಞಾನ ಗೋಷ್ಠಿಗಳ ಅಧ್ಯಕ್ಷ- ಮುಂತಾದವುಗಳಾಗಿದ್ದ ಸರ್ಕಾರ್ ಅವರ ಇಪ್ಪತ್ತೈದಕ್ಕೂ ಹೆಚ್ಚು ವೈಜ್ಞಾನಿಕ ಗ್ರಂಥಗಳು ಪ್ರಕಟಿತವಾಗಿವೆ. ಅವುಗಳಲ್ಲಿ ಕೆಲವು: ಕಶೇರುಕ ಜೀವನ, ಜೀವಕೋಶ ವಿಜ್ಞಾನ, ತೌಲನಿಕ ಕಶೇರುಕ ಭ್ರೂಣಶಾಸ್ತ್ರ,ಅನುವಂಶೀಯ ವಾಹಕಗಳು, ಪರತಂತ್ರ ಜೀವಿಗಳು, ಸಂಶೋನೋತ್ಪತ್ತಿಯ ನಿಯಂತ್ರಣ, ಸಂಧಿಪದಿಗಳು, ತಳಿವಿಜ್ಞಾನ ಅಭ್ಯಾಸಕ್ಕೆ ಪೀಠಿಕೆ, ಮತ್ತು ವಚನಗಳಲ್ಲಿ ಪರಿಸರ, ವಚನ ವಿಜ್ಞಾನ ವಾಙ್ಮಯ ಇತ್ಯಾದಿ. ಪ್ರಬುದ್ಧ ಕರ್ನಾಟಕ, ವಿಜ್ಞಾನ ಕರ್ನಾಟಕ ಮುಂತಾದ ವಿಶಿಷ್ಟ ಪತ್ರಿಕೆಗಳು, ದಿನ, ವಾರ, ಮಾಸಿಕ ಪತ್ರಿಕೆಗಳಲ್ಲಿ ಜೀವನ ಚರಿತ್ರೆ, ಮತ್ತು ವಿಜ್ಞಾನ ಸಂಶೋಧನೆಗಳ ನೂರಾರು ಲೇಖನಗಳನ್ನು ಬರೆದಿರುವ ಪ್ರೊ| ಸರ್ಕಾರ್ ಅವರು ಈಗ ಮಡದಿ ಮಕ್ಕಳೊಂದಿಗೆ ಮೈಸೂರಿನಲ್ಲಿ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ.

***
ಮೈಸೂರಿನ ಡಿ ಲೋಕಪ್ಪ ಅವರ ಸಂವಹನ ಪ್ರಕಾಶನದ ವತಿಯಿಂದ ಏರ್ಪಾಟಾದ ಅಂದಿನ ಸಭೆಯಲ್ಲಿ (ವೇದಿಕೆಯ ಮೇಲೆ ನಾನೂ ಇದ್ದೆ!), ಪ್ರೊಫೆಸರ್ ಸರ್ಕಾರ್ ಅವರ ಇನ್ನೊಬ್ಬ ಶಿಷ್ಯರಾದ ಪ್ರೊ| ಸಿ.ಪಿ.ಕೆ ಅವರ ಅಧ್ಯಕ್ಷತೆಯಲ್ಲಿ ಲೋಕಾರ್ಪಣೆಗೊಂಡ, ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯಗಳ ತೌಲನಿಕ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ| ಸಿ. ನಾಗಣ್ಣ ಅವರಿಂದ ಮುಕ್ತಕಂಠದಿಂದ ಪ್ರಶಂಸಿಸಲ್ಪಟ್ಟ- ಈ ಡಸ್ಕ್ ಟು ಡಾನ್ ಪುಸ್ತಕವನ್ನು ಕೊಂಡು ಓದಿ; ನಿಮ್ಮ ಅಭಿಪ್ರಾಯಗಳನ್ನು ನಮ್ಮ ಮೇಷ್ಟರು ಪ್ರೊಫೆಸರ್ ಡಾ| ದೇವರಾಜ್ ಸರ್ಕಾರ್ ಅವರಿಗೆ ಕರೆದೋ/ಬರೆದೋ ಹೇಳಿ, ಉಪಕರಿಸಿರಿ!

(ಪುಸ್ತಕ ವಿವರ : ಡಸ್ಕ್ ಟು ಡಾನ್, ಇಂಗ್ಲೀಷ್‌ನಲ್ಲಿ ಸಾಮಾಜಿಕ ಕಾದಂಬರಿ: ಲೇಖಕ ಹಾಗೂ ಪ್ರಕಾಶಕರು: ಪ್ರೊ| ಎಚ್.ಬಿ. ದೇವರಾಜ್ ಸರ್ಕಾರ್, 2967/1, ದೇವಶ್ರೀ, 14ನೇ ಮುಖ್ಯರಸ್ತೆ, ಸರಸ್ವತೀಪುರಂ, ಮೈಸೂರು- 570 009; ದಪ್ಪರಟ್ಟಿನ ರಕ್ಷಾ ಕವಚ; ಪುಟಗಳು: 744; ಬೆಲೆ ರೂ. 500.)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X