• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾರಿಜಾತ ಪೂಜಾ ಪರಿಚಾರಕ

By * ಶ್ರೀವತ್ಸ ಜೋಶಿ, ವರ್ಜೀನಿಯಾ
|

ಓಂ ಮಿತ್ರಾಯ ನಮಃ ಎಂದು ಸೂರ್ಯನಮಸ್ಕಾರ ಮಂತ್ರದಿಂದ ಆರಂಭಿಸಲೇ ಅಥವಾ ಓಂ ಕೇಶವಾಯ ನಮಃ ಎಂದು ಆಚಮನ ಮಂತ್ರವನ್ನೆತ್ತಿಕೊಳ್ಳಲೇ ತಿಳಿಯುತ್ತಿಲ್ಲ; ಯಾಕೆ ಎಂದು ಹೇಳುತ್ತೇನೆ.

ಕನ್ನಡ ಛಂದಸ್ಸನ್ನು ಸುಲಲಿತವಾಗಿ ಪರಿಚಯಿಸುವ 'ಛಂದೋಮಿತ್ರ ಎಂಬ ಪುಸ್ತಕವನ್ನೂ, ಅದನ್ನು ಬರೆದ ಹಿರಿಯ ವಿದ್ವಾಂಸ ಪ್ರೊ.ಅ.ರಾ.ಮಿತ್ರ ಅವರನ್ನೂ ಪರಿಚಯಿಸುತ್ತ ನಾನು ಒಂದು ಲೇಖನ ಬರೆದಿದ್ದೆ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗುವ ನನ್ನ ಅಂಕಣ 'ಪರಾಗಸ್ಪರ್ಶ'ದಲ್ಲಿ. ಅದರಲ್ಲಿ ಭೋಗ ಷಟ್ಪದಿ ಛಂದಸ್ಸನ್ನು ಅನುಸರಿಸಿ ಬರೆದ ಕೆಲವು ಷಟ್ಪದಿಗಳನ್ನೂ ಸೇರಿಸಿದ್ದೆ. ಲೇಖನದ ಕೊನೆಯಲ್ಲಿ, “ಇಂಥದೇ ಷಟ್ಪದಿಗಳನ್ನು ನೀವೂ ಬರೆಯಬಲ್ಲಿರಿ, ಬರೆದು ಕಳಿಸಿ ಎಂದು ಓದುಗರನ್ನು ಪ್ರಚೋದಿಸಿದ್ದೆ. ಅದಕ್ಕೆ ಪ್ರತಿಕ್ರಿಯೆಯಾಗಿ, ಸ್ವರಚಿತ ಷಟ್ಪದಿಗಳೊಂದಿಗೆ, ಹಲವಾರು ಓದುಗರು ಸ್ಪಂದಿಸಿದ್ದರು. ಅವರಲ್ಲೊಬ್ಬರು ಕೇಶವ ಹೆಬ್ಬಾರ್!

ಅದು ಕೈಬರಹದ ಪತ್ರ. ಅದರಲ್ಲಿ ಚಂದದ ನಾಲ್ಕು ಕವನ(ಷಟ್ಪದಿ)ಗಳು. ಅಡಿಕೆತೋಟ, ಹಳ್ಳಿ ಪರಿಸರ, ಬದುಕಿನ ಸಣ್ಣಸಣ್ಣ ಅಂದ ಆನಂದಗಳು ಆ ಕವನಗಳ ವಸ್ತು. ಕೇಶವ ಹೆಬ್ಬಾರರು ಆ ಪತ್ರವನ್ನು ತಮ್ಮ ಹಳ್ಳಿಯ ಸಮೀಪದಲ್ಲೇ ಇರುವ ಒಂದು ಸೈಬರ್‌ಕೆಫೆಯಲ್ಲಿ ಸ್ಕ್ಯಾನ್ ಮಾಡಿಸಿ ಇಮೇಲ್ ಮೂಲಕ ನನಗೆ ಕಳಿಸಿದ್ದರು. ಪತ್ರ ತಲುಪಿ ಆ ಕವನಗಳನ್ನು ಓದಿದಾಗ ನನಗೆ ತುಂಬ ಸಂತೋಷವೇನೋ ಆಯ್ತು, ಆದರೆ ಅವು ಭೋಗಷಟ್ಪದಿ ಛಂದಸ್ಸಿನ ನಿಯಮಗಳನ್ನು ಪಾಲಿಸುತ್ತಿರಲಿಲ್ಲವಾದ್ದರಿಂದ ಮತ್ತು ಓದುಗರ ಷಟ್ಪದಿಗಳನ್ನು ಅಳವಡಿಸಿಕೊಂಡ ಲೇಖನವನ್ನು ಆ ವಾರದ ಅಂಕಣವಾಗಿ ಪತ್ರಿಕೆಗೆ ನಾನು ಅವತ್ತೇ ಕಳಿಸುವುದಿತ್ತಾದ್ದರಿಂದ ಕೇಶವ ಹೆಬ್ಬಾರರ ಕವನಗಳನ್ನು ಅದರಲ್ಲಿ ಸೇರ್ಪಡೆಗೊಳಿಸುವುದಾಗಿರಲಿಲ್ಲ.

ಪತ್ರದಲ್ಲಿ ಅವರ ದೂರವಾಣಿ ಸಂಖ್ಯೆ ಇತ್ತು; ಕರೆ ಮಾಡಿ ಮಾತಾಡಿದೆ, ಕವನಗಳನ್ನು ಸೇರಿಸಿಕೊಳ್ಳಲಾಗದ್ದಕ್ಕೆ ವಿಷಾದ ವ್ಯಕ್ತಪಡಿಸಿದೆ. ಬಹುಶಃ ನಾವು ನೀವಾಗಿದ್ದರೆ ನಿರಾಸೆಗೊಂಡು ಅದನ್ನಲ್ಲಿಗೇ ಬಿಟ್ಟುಬಿಡುತ್ತಿದ್ದೆವೊ ಏನೊ. ಆ ಜಾಯಮಾನದವರಲ್ಲ ಕೇಶವ ಹೆಬ್ಬಾರ್. ತನ್ನೆಲ್ಲ ಹುರುಪು ಹುಮ್ಮಸ್ಸುಗಳನ್ನು ಒಟ್ಟುಮಾಡಿ ಮರಳಿ ಯತ್ನವ ಮಾಡು ಎಂಬಂತೆ, ವಾರ ಕಳೆದ ಮೇಲೆ ಮತ್ತೊಂದು ಕವನ ಬರೆದು ಕಳಿಸಿದರು. ಅದು ಭೋಗ ಷಟ್ಪದಿ ನಿಯಮವನ್ನು ನೂರು ಪ್ರತಿಶತ ಪಾಲಿಸುತ್ತಿತ್ತು! ಆ ಕವನದ ಜತೆಯಲ್ಲೇ ಒಂದು ಆತ್ಮೀಯವಾದ, ಆರ್ದ್ರವಾದ ಪತ್ರವೂ ಇತ್ತು. ಅದರಲ್ಲೇನಿತ್ತು ಗೊತ್ತೇ?

ಪತ್ರಿಕೆಯಲ್ಲಿ ತನ್ನ ಕವನ ಪ್ರಕಟವಾಗದಿದ್ದರೇನಂತೆ, ಈ ಹಿಂದೆ ಬರೆದಿರುವಂಥವೂ ಸೇರಿ ಸುಮಾರು ಮೂವತ್ತಕ್ಕೂ ಹೆಚ್ಚು ಕವನಗಳು ಸಿದ್ಧವಾಗಿವೆ, ಈಗ ಅವುಗಳನ್ನೆಲ್ಲ ಒಟ್ಟು ಸೇರಿಸಿ ತಾನೇ ಒಂದು ಪುಸ್ತಕ ಪ್ರಕಟಿಸುತ್ತಿರುವುದಾಗಿಯೂ ಅದಕ್ಕೆ ಮುನ್ನುಡಿ ಬರೆದುಕೊಡಬೇಕೆಂದೂ ನನಗೊಂದು ಪ್ರೀತಿಯ ಆದೇಶ!

ಅಯ್ಯೋ ದೇವರೇ! ವಯಸ್ಸು ಜ್ಞಾನ ಜೀವನಾನುಭವ ಎಲ್ಲದರಲ್ಲೂ ನನಗಿಂತ ಹಿರಿಯರಾದ, ನನಗೆ ಪಿತೃಸಮಾನರಾದ, ಕೇಶವ ಹೆಬ್ಬಾರರ ಕೃತಿಗೆ ನಾನು ಮುನ್ನುಡಿ ಬರೆಯುವುದೇ? ಅದಕ್ಕೆ ನನಗೆಲ್ಲಿಯ ಅರ್ಹತೆ?

ವಿನೀತಭಾವದಿಂದಲೇ ನಿರಾಕರಿಸಿದೆ, ನನ್ನ ಅಸಹಾಯಕತೆಯನ್ನು ತಿಳಿಸಿದೆ, ಅವರ ಮನವೊಪ್ಪಿಸಲು ಯತ್ನಿಸಿದೆ. “ಊಹುಂ, ಸಾಧ್ಯವೇ ಇಲ್ಲ. ತಮ್ಮಿಂದಲೇ ನನ್ನ ಪುಸ್ತಕಕ್ಕೆ ಮುನ್ನುಡಿ ಆಗಬೇಕು ಎಂದು ಒಂದೇ ಹಠ. ಸ್ವಂತ ಮಗನಿಗಿಂತಲೂ ಕಿರಿಯ ಪ್ರಾಯದ ನನ್ನನ್ನು ಅವರು ಬಹುವಚನದಿಂದ ಗೌರವಿಸಿದ್ದರು! ನೆನಪಿರಲಿ, ಅದನ್ನವರು ಕಾರ್ಯಸಾಧನೆಗಾಗಿ ಮಾಡಿದ್ದಲ್ಲ. ಸ್ವಸ್ಥ ಸ್ವಚ್ಛ ಮನಸ್ಸಿನ ಆರ್ದ್ರತೆಯಿಂದ, ಆತ್ಮೀಯತೆಯಿಂದ ಮಾಡಿದ್ದು. ಕೊನೆಗೂ ಒಪ್ಪಿಕೊಂಡೆ, ಒಂದು ಷರತ್ತಿನ ಮೇಲೆ. ಏನೆಂದರೆ ನಾನು ಬರೆದದ್ದನ್ನು 'ಮುನ್ನುಡಿ' ಎಂದು ಕರೆಯುವಂತಿಲ್ಲ, ನಾನೇ ಅದಕ್ಕೊಂದು ಸೂಕ್ತ ತಲೆಬರಹ ಕೊಟ್ಟು ಬರೆದುಕಳಿಸುತ್ತೇನೆ ಎಂದೆ.

ಕೇಶವ ಹೆಬ್ಬಾರರು ನನಗೆ ಪಿತೃಸಮಾನ ಎಂದೆನಲ್ಲ? ಈ ಸಂದರ್ಭದಲ್ಲಿ ನಾನು ನಮ್ಮ ದಿವಂಗತ ತಂದೆಯವರ ನೆನಪು ಮಾಡಿಕೊಳ್ಳುತ್ತಿದ್ದೇನೆ. ನನ್ನ ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ, ಸಂಕಷ್ಟಿ, ಶಿವರಾತ್ರಿ, ನೃಸಿಂಹಜಯಂತಿ ಇತ್ಯಾದಿ ವಿಶೇಷ ಪೂಜಾ ಸಮಾರಂಭಗಳಿದ್ದಾಗ, ಅಥವಾ ನಿತ್ಯಪೂಜೆಯಲ್ಲೂ, 'ಪರಿಚಾರಕ ಕೆಲಸವನ್ನು ನಾನು ಮಾಡುತ್ತಿದ್ದೆ. ಪೂಜೆಗೆ ಹೂ ಕೊಯ್ದು ತರುವುದು, ಗಂಧ ತೇದುಕೊಡುವುದು, ದೇವರ ಮಂಟಪವನ್ನು ಅಲಂಕರಿಸುವುದು, ದಕ್ಷಿಣೆ ಬ್ರಾಹ್ಮಣೋಪಚಾರಕ್ಕೆ ಎಲ್ಲವನ್ನೂ ಅಣಿಗೊಳಿಸುವುದು ವಗೈರಾ.

ಪರಿಚಾರಕನಾಗಿ ನಾನದನ್ನು ಸಂತೋಷದಿಂದ ಮಾಡುತ್ತಿದ್ದೆ. ಈಗ ಕೇಶವ ಹೆಬ್ಬಾರರು ಪುಸ್ತಕಕ್ಕೆ ಮುನ್ನುಡಿ ಬರೆದುಕೊಡಬೇಕೆಂದು ಕೇಳಿಕೊಂಡಾಗ ನನಗೆ ನೆನಪಾದದ್ದು ಬಾಲ್ಯದಲ್ಲಿ ನಾನು ಮಾಡುತ್ತಿದ್ದ ಪೂಜಾ ಪರಿಚಾರಕತ್ವ. ಈ ಕವನ ಸಂಕಲನ ಪುಸ್ತಕಕ್ಕೆ 'ಪಾರಿಜಾತ ಎಂದು ಹೂವಿನದೇ ಹೆಸರಿರುವುದು ಮತ್ತೂ ಒಳ್ಳೆಯದೇ ಆಯ್ತು; ಕೇಶವ ಹೆಬ್ಬಾರರು ಈ ಕವನಗಳಿಂದ ಮಾಡುತ್ತಿರುವ ಶಾರದಾಪೂಜೆಯಲ್ಲಿ ನನ್ನ ಪಾತ್ರ ಒಬ್ಬ ಪರಿಚಾರಕನದು ಎಂದುಕೊಳ್ಳುವುದು ಸಮಂಜಸವಾಯ್ತು, ಅರ್ಥಪೂರ್ಣವಾಯ್ತು. ನನಗೆ ಅದೇ ಖುಶಿ.

ನಿರಕ್ಷರಕುಕ್ಷಿಯೆಂದೇ ತನ್ನನ್ನು ಗುರುತಿಸಿಕೊಳ್ಳುವ ಕೇಶವ ಹೆಬ್ಬಾರರು ಇಲ್ಲಿ ಬರೆದಿರುವ ಕವನಗಳು ರಸವತ್ತಾಗಿವೆಯೆಂದು ಹೇಳಿದರೆ ಸಾಲದು. “ವಿ.ವಿಗಳ ಹಂಗೇಕೆ? ಗೌ.ಡಾ.ಗಳೇಕೆ? ವೇ.ಮೂ, ನ್ಯಾ.ಮೂಗಳೆಂಬ ವ್ಯಾಮೋಹವೇಕೆ? ಜ್ಞಾನಪೀಠಗಳೆಲ್ಲ ಜ್ಞಾನಿಗಳಿಗಿರಲಿ ಸುಜ್ಞಾನವೊಂದೇ ಬರಿದೆ ಎನಗಿರಲಿ.. ಎನ್ನುವ ಅವರ ಸರಳ ಸಾಚಾತನ, “ಸರ್ವಜ್ಞ ನಾನೆಂಬ ಗರ್ವವೆನಗಿಲ್ಲ, ಸರ್ವರಿಗೂ ನಮಿಸುವೆನು ಕೇಳಿರೀ ಸೊಲ್ಲ... ಎನ್ನುವ ವಿನೀತಭಾವ ಎಲ್ಲ ಕವಿತೆಗಳಲ್ಲೂ ಎದ್ದುಕಾಣುತ್ತದೆ. ಅದೇ ಒಂದು ಆಕರ್ಷಣೆಯೂ ಆಗುತ್ತದೆ. ಬದುಕಿನಲ್ಲಿ ತಾನು ಕಂಡ ತೃಪ್ತಿ ಧನ್ಯತಾಭಾವಗಳನ್ನೇ ಅವರು ಕವಿತೆಗಳ ಪಾಕವಾಗಿ ಎರಕಹೊಯ್ದಿದ್ದಾರೆ. ಸೃಷ್ಟಿಸೌಂದರ್ಯ ಏನೆಂದು ತಿಳಿದುಕೊಳ್ಳಲು “ದೇವಲೋಕವೇಕೆ ಕ್ಯಾಲಿಫೋರ್ನಿಯಾ ಏಕೆ ಸರಿಸಾಟಿಯೇ ಇಲ್ಲ ಈ ನವೋದಯಕೆ" ಎಂದು ತನ್ನ ಮನೆ 'ನವೋದಯ'ದ ಅಂಗಳವನ್ನೇ ಕೊಂಡಾಡುವ ಅವರ ಮಾತು ಸ್ವಾಭಿಮಾನದ ಪ್ರತೀಕ. ಅಷ್ಟಕ್ಕೂ “ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ"|| ಎಂದು ಸಾಕ್ಷಾತ್ ಶ್ರೀರಾಮಚಂದ್ರನೂ ಅದನ್ನೇ ತಾನೆ ಹೇಳಿದ್ದು?

ಹಾಗಂತ ಬರೀ ಆತ್ಮಾಭಿಮಾನ, ಆತ್ಮಸ್ತುತಿಗಳಿಗೆ ಅಂಟಿಕೊಂಡಿಲ್ಲ ಈ ಚತುರ ಕವಿ. ತನ್ನ ಸುತ್ತಮುತ್ತಲ ಘಟನಾವಳಿಗಳ ಸೂಕ್ಷ್ಮಗ್ರಾಹಿಯಾಗಿ, ಒಮ್ಮೆ ವೇದಾಂತಿಯಾಗಿ, ಒಮ್ಮೆ ವೈರಾಗ್ಯ ಬಂದವನಾಗಿ, ಒಮ್ಮೆ ದೈವಭಕ್ತನಾಗಿ, ಮತ್ತೊಮ್ಮೆ ದೇವರಿಗೇ “ಮುಂದುವರಿದ ನಾವು ನಿನ್ನನ್ನೂ ಮುಂದುವರಿಸದೆ ಬಿಡೆವು ಎಂದು ಅಭಯ ನೀಡುವವನಾಗಿ ಕವನ ಕಟ್ಟುತ್ತಾರೆ, ಹೂಗಳನ್ನು ಪೋಣಿಸಿ ಹೂಮಾಲೆ ಕಟ್ಟಿದಂತೆ ಅಕ್ಷರಗಳನ್ನು ಪೋಣಿಸುತ್ತಾರೆ.

ಒತ್ತಾಯದ ಪ್ರಾಸ ತುರುಕುವುದಿಲ್ಲ, 'ಹೋದರೆ ಯಾರಿಗೆ? ಕವನದ ದಾರಿಗೆ, ದರ್ಬಾರಿಗೆ, ಬಾರಿಗೆ! ರೀತಿಯ, 'ಕಮರಿಯಲಿ ಕುರಿಮರಿಯ ಪರಿ ಕವನದ ಕಮರಿ ಕುರಿಮರಿ ಪರಿ ರೀತಿಯ ಪ್ರಾಸ ಪದಗಳಾಟ ಅತ್ಯಂತ ಸಹಜವಾಗಿದ್ದು ಖುಶಿ ಕೊಡುತ್ತದೆ. ಇನ್ನು, ಕವಿತೆಗಳ ವಸ್ತು ವೈವಿಧ್ಯವೂ ಓದುಗನನ್ನು ಬೆರಗುಗೊಳಿಸುವಂತಿದೆ. ಇಲ್ಲಿ ಅಧ್ಯಾತ್ಮವಿದೆ, ರಾಜಕೀಯ ವಿಡಂಬನೆಯಿದೆ, ಸಾಮಾಜಿಕ ಚಿಂತನೆಯಿದೆ, ಪ್ರಚಲಿತ ಸಂಗತಿಗಳ ಬಗ್ಗೆ ಚಾಟಿಯೇಟಿನ ವ್ಯಾಖ್ಯಾನವಿದೆ, ಆದರ್ಶಗಳ ಅವಸಾನದ ಕುರಿತು ಮರುಕವಿದೆ, ಪ್ರಕೃತಿವರ್ಣನೆಯಿದೆ, ಕ್ಷೇತ್ರವೈಭವವಿದೆ, ಕೊನೆಗೆ ನಾಯಿ ಬೆಕ್ಕು ಇಲಿ ಮಂಗ... ಪ್ರಾಣಿದರ್ಶನವೂ ಇದೆ. ಹಾಗೆ ನೋಡಿದರೆ ಏನಿದೆ ಏನಿಲ್ಲ ಎನ್ನುವಂತಿದೆ!

ಇವತ್ತಿನ ದಿನಗಳಲ್ಲಿ ಕವಿತೆ ಬರೆಯುವವರು ಬೇಕಾಷ್ಟಿದ್ದಾರೆ, ಬರೆದದ್ದನ್ನು ಒಟ್ಟುಸೇರಿಸಿ ಪುಸ್ತಕ ಪ್ರಕಟಿಸುವವರೂ ಇದ್ದಾರೆ. ಹಾಗಿದ್ದರೆ ಕೇಶವ ಹೆಬ್ಬಾರರ 'ಪಾರಿಜಾತ"ದ್ದೇನು ವಿಶೇಷ? ಎಂಬ ಪ್ರಶ್ನೆ ಬರಬಹುದು. ಇದೆ, ಖಂಡಿತವಾಗಿಯೂ ವಿಶೇಷವಿದೆ. ಮಗ್ಗಿ ಕಲಿಯಲಿಲ್ಲವೆಂದು ಶಾಲೆಯಿಂದ ಹೊರದೂಡಲ್ಪಟ್ಟ ಮೇಲೆ ಜೀವನದುದ್ದಕ್ಕೂ ಶಾಲೆ ಮೆಟ್ಟಿಲೇರದ, ಕುಗ್ರಾಮವೆನ್ನಬಹುದಾದ ಹಳ್ಳಿಯಲ್ಲಿ ಬೆಳೆದು ಕಷ್ಟಸಹಿಷ್ಣುತೆಯಿಂದ ಸಂಸಾರರಥ ಮುನ್ನಡೆಸಿದ, ಪತ್ರಿಕೆ ಓದಿಯೇ ಪ್ರಪಂಚಜ್ಞಾನ ಗಳಿಸಿದ, ತಾನೂ ಬರೆಯಬೇಕೆಂಬ ಛಲ ಅದಾವುದೋ ಗಳಿಗೆಯಲ್ಲಿ ಹುಟ್ಟಿಕೊಂಡಾಗ ಅದನ್ನು ಜತನದಿಂದ ಕಾಪಾಡಿ ಫಲಕಾರಿಯಾಗಿಸಿದ, ಬರೆದದ್ದು ಮೂವತ್ತೇ ಕವನಗಳಾದರೂ ಅದರಲ್ಲಿ ಯಾವುದೂ ಜೊಳ್ಳಿಲ್ಲ ಗಟ್ಟಿಕಾಳೇ ಎನ್ನುವಂತೆ ಲೀಲಾಜಾಲವಾಗಿ ಬರೆದ ಕೇಶವ ಹೆಬ್ಬಾರರು.

“ಬರಿಕೈಲೆ ಬಂದೆ, ಬರಿದಾಗಿ ಹೊರನಡೆವೆ, ಅಸಲು ಬಡ್ಡಿ ಲೆಕ್ಕ ಚುಕ್ತಾ; ಅನ್ನ ನೀರು ಉಂಡ ಜಡದೇಹವೇ ಅಸಲು, ಉಳಿದ ಬಡ್ಡಿಯ ಲೆಕ್ಕ ಈ ಪಾರಿಜಾತ ಎನ್ನುತ್ತ ಅದ್ಭುತವಾದ ಆಪ್ಯಾಯಮಾನವಾದ ಪಾರಿಜಾತ ಹೂವನ್ನಿತ್ತಿದ್ದಾರೆ ನಮ್ಮ ಕೈಗೆ. ಅದನ್ನು ಆಘ್ರಾಣಿಸೋಣ. ಕೇಶವ ಹೆಬ್ಬಾರರಂಥ 'ವನಸುಮ"ಗಳು ಇನ್ನೂ ಇನ್ನೂ ಅರಳಿ ನಮ್ಮ ಮನಗಳನ್ನೂ ಮನೆಗಳನ್ನೂ ಅರಳಿಸಲೆಂದು ಹಾರೈಸೋಣ.

ಮಾರ್ಚ್ 16, 2010 ಶ್ರೀವತ್ಸ ಜೋಶಿ. ಚೈತ್ರ ಶುಕ್ಲ ಪಾಡ್ಯ (ಚಾಂದ್ರಮಾನ ಯುಗಾದಿ 'ವಿಕೃತಿ" ಸಂವತ್ಸರಾರಂಭ) ವಾಷಿಂಗ್ಟನ್ ಡಿಸಿ.

***

[ಪುಸ್ತಕ ಬಿಡುಗಡೆ ಕಾರ್ಯಕ್ರಮ : 14 ಏಪ್ರಿಲ್ ಬುಧವಾರ. ಸ್ಥಳ; ಕೃತಿಕಾರರ ಮನೆ 'ನವೋದಯ', ಹೊಸಮಠ, ವಾಳ್ಯ. ಬೆಳಗ್ಗೆ 8ಕ್ಕೆ ಉಪಾಹಾರ, 9.30ಕ್ಕೆ ಶ್ರೀ ಸತ್ಯನಾರಾಯಣ ಪೂಜೆ. ಪೂಜಾ ಸಮಯದಲ್ಲಿ ಸಂಗೀತ ಸೇವೆ, ಹಾಡುಗಾರಿಕೆ, ಶ್ರೀಮತಿ ಅಂಜಲಿ ಸುಧೀರ್. 12.30ಕ್ಕೆ ಬ್ರಾಹ್ಮಣ ಸುವಾಸಿನೀ ಕುಮಾರಿಕಾ ಸಮಾರಾಧನೆ ಭೋಜನ.

2 ಗಂಟೆಗೆ ಪಾರಿಜಾತ ಪುಸ್ತಕ ಬಿಡುಗಡೆ ಸಮಾರಂಭ. ಕೃತಿ ಬಿಡುಗಡೆ: ಡಾ. ಪ್ರಭಾಕರ ಜೋಶಿ; ಅಧ್ಯಕ್ಷತೆ, ಎಚ್. ಸುಬ್ರಾಯ ಹೆಬ್ಬಾರ್]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more