• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೈದೇಹಿಯವರ ಕ್ರೌಂಚಪಕ್ಷಿ ಕಥೆ ವಿಮರ್ಶೆ

By * ಡಾ.ಕೆ.ಎನ್.ದೊಡ್ಡಮನಿ
|

ಹಿಂದಿನ ಭಾಗ: ಸೂಜಿ ದಾರ ಇಲ್ಲದೆ ಪೋಣಿಸಿದ ಹಾರ

ವೈದೇಹಿಯವರು ಒಂದಿಷ್ಟು ಧೈರ್ಯದಿಂದ ಬರೆದ ಇನ್ನೊಂದು ಕತೆ 'ಪ್ರಶ್ನೆ". ತುಂಬಿದ ಸಭೆಯಲ್ಲಿ ಸಾಹಿತ್ಯಿಕವಾಗಿ ಮಾತನಾಡುವ ವಿದ್ವತ್‌ವುಳ್ಳ ಐವತ್ತರ ಇಳಿ ವಯಸ್ಸಿನವನೊಂದಿಗೆ ಹೆಣ್ಣೊಂದು ಒಂದು ರಾತ್ರಿ ಕಳೆಯಲು ತೆರಳುವ ಸುತ್ತ ಹೆಣೆಯಲಾಗಿದೆ. ವಿದ್ವಾಂಸನ ಇಡೀ ವ್ಯಕ್ತಿತ್ವಕ್ಕೆ ಮರುಳಾದ ಸಭೆಯೊಳಗಿದ್ದ ಭುವಿ ಅವನೊಂದಿಗೆ ಒಂದು ರಾತ್ರಿ ಅಥವಾ ರಾತ್ರಿಯ ಒಂದು ತಾಸು ಕಳೆಯಲು ಬಯಸುತ್ತಾಳೆ. ತನ್ನ ಈ ಮನೋ ಇಂಗಿತವನ್ನು ಮಗ್ಗುಲಲ್ಲಿಯೇ ಇದ್ದ ಗೆಳತಿ ಅನು ಮುಂದೆ ಪ್ರಸ್ತಾಪಿಸುತ್ತಾಳೆ. ಪ್ರಾರಂಭದಲ್ಲಿ ಅನು ಈ ಅನೈತಿಕ ಮನೋಸ್ಥಿತಿಯನ್ನು ವಿರೋಧಿಸಿದರೂ ನಂತರ ಅದಕ್ಕೆ ಪ್ರೋತ್ಸಾಹಿಸುತ್ತಾಳೆ.

ಸಭೆಯಲ್ಲಿ ಸಂವಾದ ನಡೆದಾಗ ಈ ಬಗ್ಗೆ ಪ್ರಶ್ನೆ ಕೇಳಲು ಉತ್ತೇಜಿಸುತ್ತಾಳೆ. ಕಡೆಗೆ ಅನು ಭುವಿಯಿಂದ ಪ್ರಶ್ನೆ ಬರೆಯಿಸಿ ತಾನೇ ಚೀಟಿ ಸಾಗಿಸುತ್ತಾಳೆ. ಕೊನೆಯ ಪ್ರಶ್ನೆಯಾಗಿ ಎತ್ತಿಕೊಳ್ಳುವ ವಿದ್ವಾಂಸ ಪ್ರಶ್ನೆ ಬರೆದವರಿಗೆ ತುಂಬಿದ ಸಭೆಯಲ್ಲಿ ಎದ್ದು ನಿಲ್ಲಲು ಸೂಚಿಸುತ್ತಾನೆ. ಎದ್ದು ನಿಲ್ಲಲು ಅನು ಎಷ್ಟೇ ಉತ್ತೇಜಿಸಿದರೂ ತನ್ನ ಅಚಾತುರ್ಯದಿಂದ ನಡುಗುತಿದ್ದ ಭುವಿ ಕುಸಿದುಹೋಗುತ್ತಾಳೆ. ವಿದ್ವಾಂಸ ಸಭೆಯ ನಂತರ ಸಂದರ್ಶಿಸಲು ಸೂಚಿಸುತ್ತಾನೆ. ಸಭೆಯ ನಂತರವೂ ಅವನನ್ನು ಕೇಳಲು ಅನು ಭುವಿಗೆ ಒತ್ತಾಯಿಸುತ್ತಾಳೆ. ಕಡೆಗೆ ಭುವಿ ಮಾಡದ ಧೈಯವನ್ನು ಅನು ಮಾಡುತ್ತಾಳೆ; ಭುವಿ ಕೇಳಿದ ಪ್ರಶ್ನೆಗೆ ಅನು ಉತ್ತರ ಪಡೆದುಕೊಳ್ಳಲು ಆತನೊಂದಿಗೆ ರಾತ್ರಿ ಕಳೆಯಲು ತೆರಳುತ್ತಾಳೆ.

ಆದರೆ, ಅವನೊಂದಿಗೆ ಒಂದು ರಾತ್ರಿ ಕಳೆಯಲು ಸಾಧ್ಯವಾಗದಿದ್ದರೂ ಅದೇ ರಾತ್ರಿಯ ಒಂದು ತಾಸನ್ನಾದರೂ ಕಳೆಯಬೇಕೆಂದು ಬಯಸಿ ಧೈರ್ಯವಾಗಿ ಪ್ರಶ್ನೆ ಕೇಳಲು ಮುಂದಾಗುವ ಭುವಿ ಅವನೊಂದಿಗೆ ಪ್ರಾಯೋಗಿಕತೆಗೆ ಹಿಂದೆಟುಹಾಕುವುದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗುತ್ತದೆ. ಅಡ್ಡಿಯಿಲ್ಲ ಒಳ್ಳೆ ಕತೆ ಎಂದು ಹೇಳುವುದರಲ್ಲಿ ತಪ್ಪಿಲ್ಲ. ಇಂಥ ಒಂದು ರಾತ್ರಿಗಾಗಿಯೇ ಸಭೆ ಸಮಾರಂಭಗಳು ನಡೆಯುವ, ಅದನ್ನೇ ಉಪಯೋಗಿಸಿಕೊಳ್ಳುವ ಹೆಣ್ಣಿನ ಮನೋಸ್ಥಿತಿಯನ್ನು ಬಿಂಬಿಸುವಲ್ಲಿ ಗಮನ ಸೆಳೆಯುತ್ತದೆ. ತಮ್ಮ ಕೆಲ ಸಾಹಿತ್ಯ ಸಾಂಸ್ಕೃತಿಕ ಸಮಾರಂಭಗಳಿಗೆ ಬರೆದ ವ್ಯಾಖ್ಯಾನದಂತಾಗಿದೆ.

ವೈದೇಹಿಯವರು, 'ಸಜ್ಜನ" ಎನಿಸಿಕೊಳ್ಳುವ ವ್ಯಕ್ತಿತ್ವದೊಳಗಿನ ಇನ್ನೊಂದು 'ಮುಖ"ವನ್ನು ದರ್ಶಿಸುವ ಮನೋವೈಜ್ಞಾನಿಕತೆ ವಿಶಿಷ್ಟವಾದದ್ದು. ವೈಯಕ್ತಿಕ ಹಾಗೂ ಸಾಮಾಜಿಕ ಬದುಕಿನ ನಡುವೆ ಇಟ್ಟುಕೊಳ್ಳುವ ಅಂತರವನ್ನು ವೈದೇಹಿ ಅವರು ಬಟಾಬಯಲುಗೊಳಿಸುವ ರೀತಿ ಗಮನಸೆಳೆಯುತ್ತದೆ. ಇದು 'ಪ್ರಶ್ನೆ" ಕತೆಯಲ್ಲಿ ಅನುಸರಿಸಿರುವಂತೆ 'ಒಗಟು" ಹಾಗೂ 'ಮಾತು ಸೋತ ಕ್ಷಣ" ಕತೆಗಳಲ್ಲಿಯೂ ತಂದುಕೊಳ್ಳುತ್ತಾರೆ. ಆದರೆ, ಆ ಮಾನಸಿಕ ತುಮಲಗಳ ಹಿಂದೆ ಇರುವ ಕಾರಣದ ಪೂರಕತೆಯನ್ನು ಲೇಖಕಿ ಒದಗಿಸುವಲ್ಲಿ ಹಿಂದೇಟು ಹಾಕುವುದರಿಂದ ಕತೆಗಳು ಸಡಿಲಿಕೆ ಅನುಭವಿಸುತ್ತವೆ.

'ಒಗಟು"ದೊಳಗಿನ ಶೋಭಾ ಅಂಟಿ ಮನೆಬಿಟ್ಟು ಎಂದೂ ಹೊರಗೆ ಬರದೆ ಇದ್ದವಳು ಒಂದು ಸಲ ಸಂಬಂಧಿಕರ ಮನೆಗೆ ಬಂದರೂ ಅವರ ಮನೆಯಲ್ಲಿ ಉಳಿದುಕೊಳ್ಳದೇ ಇಡೀ ದಿನ ಹೊರಗೆ ಹೋಗಿ ಸಂಜೆ ಮತ್ತೇ ಮನೆಗೆ ಬಂದು ಅದೇ ರಾತ್ರ್ರಿ ಗಂಡನ ಮನೆಗೆ ತೆರಳುತ್ತಾಳೆ. ಶೋಭಾ ಅಂಟಿ ಇಡೀ ದಿನ ಎಲ್ಲಿಗೆ? ಯಾವ ಕಾರಣಕ್ಕೆ ಇಷ್ಟೋತ್ತು ಹೋದಳು? ಎಂಬ ಪ್ರಶ್ನೆಗಳಿಗೆ ಕತೆಯಲ್ಲಿ ನೇರವಾಗಿ ಉತ್ತರ ಕೊಡದಿದ್ದರೂ ಮನೆಯಾಕಿ ಅಂಟಿ ಬಟ್ಟೆಯನ್ನು ಮೂಸಿ ನೋಡುವಲ್ಲಿ ಲೇಖಕಿ ಒಗಟನ್ನು ಬಿಡಿಸುತ್ತಾರೆ. 'ಪ್ರಶ್ನೆ" ಹಾಗೂ 'ಒಗಟು" ಎರಡೂ ಕತೆಗಳನ್ನು ಒಂದುಸಲ ಓದಿ ಖುಷಿ ಪಡಲು ಅಭ್ಯಂತರವಿಲ್ಲ.

ಇನ್ನೊಂದು ರೀತಿಯಲ್ಲಿ ಖುಷಿ ಕೊಡುವ ಕತೆ 'ಅವರವರ ಭಾವಕ್ಕೆ". ಬಾಡಿಗೆ ಮನೆಯ ದೇವರನ್ನು ಪ್ರತಿಷ್ಟಾಪಿಸುವ ಜಗುಲಿಯ ಮೇಲೆ ಬೇರೆ ಬೇರೆ ಬಾಡಗೆದಾರರು ಬೇರೆ ಬೇರೆ ದೇವರನ್ನು ಪೂಜಿಸುವ ಮೂಲಕ ತಮ್ಮ ಮತ ಧರ್ಮವನ್ನು ಸಾಬೀತು ಪಡೆಸುವಂತೆ, ಅದೇ ಸ್ಥಳದಲ್ಲಿ ಇನೊಂದು ಕುಟುಂಬ ಮಧ್ಯದ ಬಾಟಲಿಗಳನ್ನು ಇಡುವುದರ ಮೂಲಕ ತಮ್ಮ ಸಂಸ್ಕೃತಿಯನ್ನು ತೋರ್‍ಪಡಿಸುತ್ತಾರೆ. ಕೊನೆಗೆ ಮತ್ತೊಂದು ಕುಟುಂಬ ಅದೇ ಸ್ಥಳದಲ್ಲಿ ಮಗುವನ್ನು ಕುಳ್ಳಿರಿಸಿ ಸಂತೋಷ ಪಡುವ ವೈಚಾರಿಕತೆಯನ್ನು ಲೇಖಕಿ ಬಿಂಬಿಸಿದ್ದಾರೆ. ಕತೆ ಪರವಾಗಿಲ್ಲ.

'ತೆರೆಯದ ಪುಟಗಳು" ಕತೆಯಲ್ಲಿ ಹೆಣ್ಣಿನ ಲೈಂಗಿಕ ಬಯಕೆಯ ಹತಾಶಯ ಹಾಗೂ ಗಂಡಸಿನ ಶಂಡತನ ಸಾಂಕೇತಿಕವಾಗಿ ಧ್ವನಿತಗೊಂಡಿದೆ. ಹಾಗೆಯೇ ಕೃತಿಯ ತಲೆಬರಹವನ್ನು ಹೊತ್ತಿರುವ 'ಕ್ರೌಂಚ ಪಕ್ಷಿಗಳ" ಕತೆಯಲ್ಲಿ ಅಶಯ ಚನ್ನಾಗಿದ್ದರೂ ತುಂಬಾ ಗೊಂದಲ ಸೃಷ್ಟಿಸಿ, ಒಂದು ಬಗೆಯಲ್ಲಿ ಅಸಂಬದ್ಧ ಸನ್ನಿವೇಶಗಳನ್ನು ಒತ್ತಾಯಪೂರ್ವಕವಾಗಿ ತಂದು ಹಾಕಿ ಓದುಗರಿಂದ ಕತೆಯನ್ನು ದೂರು ಸರಿಸುತ್ತಾರೆ.

'ಕ್ರೌಂಚ ಪಕ್ಷಿಗಳು" ಕೃತಿಯನ್ನು ಹೇಗೆ ಇದೆಯೋ ಹಾಗೆಯೇ ಮುಕ್ತ ಮನಸ್ಸಿನಿಂದ (ಮಾನಸಿಕ ದೂರು) ಓದಿದರೆ ಲೇಖಕಿಯ ಸೃಜಶೀಲತೆ, ಅನುಭವ ಮತ್ತು ಅಭಿವ್ಯಕ್ತಿಯ ನಿಜವಾದ ಗಟ್ಟಿತನ ಗೊತ್ತಾಗುತ್ತದೆ. ಅದನ್ನು ಬಿಟ್ಟು ಮೊದಲೇ ಕೃತಿ ಮತ್ತು ಕೃತಿಕಾರರ ಬಗ್ಗೆ ಇಲ್ಲಸಲ್ಲದನ್ನು ತಲೆಯಲ್ಲಿ ಚನ್ನಾಗಿ ತುಂಬಿಕೊಂಡು ಓದುತ್ತ ಹೋದರೆ ಒಂದು ಸಾಮಾನ್ಯತೆಯನ್ನು ಅಸಾಮಾನ್ಯ ಮಟ್ಟಕ್ಕೆ ಏರಿಸಿ ಕೆಟ್ಟ ಮನಸ್ಥಿತಿಯನ್ನು ಪ್ರದರ್ಶಿಸುವಂತೆ, ಅಸಮಾನ್ಯವಾದುದ್ದನ್ನು ಸಾಮಾನ್ಯ ಮಟ್ಟಕ್ಕೆ ಇಳಿಸಿ ಕೊಳಕು ಮನಸ್ಸನ್ನು ತೋರ್ಪಡಿಸಿ ದುರಂತಕ್ಕೆ ಕಾರಣವಾಗಬಹುದಾಗಿದೆ.

ವೈದೇಹಿ ಅವರ ಮೇಲೆ ಮಧ್ಯಮ ವರ್ಗದ ಬದುಕಿನ ಮಾನಸಿಕ ಸ್ಥಿತಿ ಪ್ರಭಾವ ಬೀರಿರುವುದು ಸ್ಪಷ್ಟವಾಗುತ್ತದೆ. ಹೀಗಾಗಿ ಈ ವರ್ಗದ ಪಾತ್ರಗಳು, ಸನ್ನಿವೇಶ, ಸಂದರ್ಭಗಳು ಎಲ್ಲ ಕತೆಗಳಲ್ಲಿ ವಿಶೇಷ ಸ್ಥಾನ ಪಡೆದುಕೊಳ್ಳುತ್ತವೆ. ವೈದೇಹಿ ಅವರ ಸ್ತ್ರೀ ಪಾತ್ರಗಳು 'ನನಗೂ ಶ್ರೀಮಂತ ಗಂಡ ಇದ್ದಿದ್ದರೆ?" ಎಂದು ಭಾವಿಸುತ್ತ ಮಧ್ಯಮ ವರ್ಗದಿಂದ ಶ್ರೀಮಂತ ವರ್ಗಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತವೆ.

ಇಲ್ಲಿಯ ಒಂದೆರಡು ಕತೆಗಳು ದೋಷಪೂರಿತ, ಅಸಂಬದ್ಧ ಕತೆಗಳು ಎನಿಸುವಂತೆ ಎರಡ್ಮೂರು ಕತೆಗಳು ಜೊಳ್ಳ ಜೊಳ್ಳ ಎನಿಸಿದರೂ ಕೆಲ ಕತೆಗಳು ಸಮಾಧಾನ, ಖುಷಿ ನೀಡುತ್ತವೆ. ಆದರೆ, ಯಾವ ಕತೆಯೂ ಓದುಗನನ್ನು ಗಟ್ಟಿಯಾಗಿ ತಡೆದು ನಿಲ್ಲಿಸಿ ಸಂವಾದಿಸುವುದಿಲ್ಲ. ಮತ್ತೇ ಮತ್ತೇ ಓದಬೇಕೆನ್ನುವ ಗಟ್ಟಿ ಅನುಭವಗಳು ತೀರ ಕಡಿಮೆ ಎನ್ನುವುದರಲ್ಲಿ ಸಂಶಯವಿಲ್ಲ. ವೈದೇಹಿ ಅವರು ಯಾವುದೇ ವರ್ಗದ ಬದುಕಿನ ಬಗ್ಗೆ ಚಿತ್ರಿಸಿದರೂ ಯಾವುದೋ ಒಂದು ವಾದದ ಗುಂಗಿನಲ್ಲಿ ವಾಸ್ತವದಿಂದ ದೂರ ಉಳಿದು, ಕಲ್ಪನಾಲೋಕದಲ್ಲಿಯೇ ವಿಹರಿಸುತ್ತಾರೆ.

ಅಪವಾದ ಎನ್ನುವಂತೆ ಒಂದೆರೆಡು ಕತೆಗಳು ವಾಸ್ತವವನ್ನು ಮುಟ್ಟಿ ಮತ್ತೇ ದೂರ ಸರಿದು ನಿಲ್ಲುತ್ತವೆ. ಪಾಪ! ಇವರ ಕತೆಗಳಲ್ಲಿ ಕೆಳ ವರ್ಗದ ಮಹಿಳೆಗಂತೂ ಸಂಪೂರ್ಣವಾಗಿ ನಿಷೇಧವಿದೆ. ಇಂದಿಗೂ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಕಾಣದೆ ಭಾರತದಲ್ಲಿ ನಿಜವಾದ ಶೋಷಣೆಗೆ ಒಳಗಾದ ಮಹಿಳೆ ಆಧುನಿಕ ಬಹುತೇಕ ಮಹಿಳಾ ಬರಹಗಾರರ ಸಾಹಿತ್ಯದಲ್ಲಿ ಜಾಗ ಪಡೆದುಕೊಳ್ಳದೇ ಇರುವುದು ಸ್ತ್ರೀ ಸಾಹಿತ್ಯದ ಹೆಚ್ಚುಗಾರಿಕೆಯೋ ದುರಂತವೊ ಗೊತ್ತಿಲ್ಲ.

ಭಾರತದಲ್ಲಿ ದಲಿತರೊಂದಿಗೆ ಮಹಿಳೆಯೂ ಇತಿಹಾಸದ ಉದ್ದಕ್ಕೂ ಶೋಷಣೆಗೆ ಒಳಗಾಗಿದ್ದಾಳೆ. ಇಂಥ ಮಹಿಳಾ ಸಮುದಾಯದಿಂದ ಬಂದ ಇಂದಿನ ಅನೇಕ ಮಹಿಳಾ ಬರಹಗಾರರಿಗೆ ಮಧ್ಯಮ ಮತ್ತು ಶ್ರೀಮಂತ ವರ್ಗದ ಮಹಿಳೆಯರ ಉಡುವ, ತಿನ್ನುವ, ಒಬ್ಬನನ್ನು ಬಿಟ್ಟು ಮತ್ತೊಬ್ಬನ ಬೆನ್ನಟ್ಟಿ ಓಡಿಹೋಗುವ ಸಮಸ್ಯೆಗಳೇ ಮುಖ್ಯ ಸಮಸ್ಯೆಗಳಾಗಿ ಕಾಡುತ್ತವೆ. ತಮ್ಮಂತೆಯೇ ಮಹಿಳೆಯೊಬ್ಬಳು ತಮ್ಮ ಕೆಳಗೆ ಇದ್ದಾಳೆ ಎಂಬುದೇ ಕಾಣಿಸುವುದಿಲ್ಲ.

ಆಕಸ್ಮಿಕಾಗಿ ಕಂಡರೂ ಅದು ನೆಪ ಮಾತ್ರ. ಏನಿದ್ದರೂ ಇವರ ಸ್ವಾತಂತ್ರ್ಯ, ಸಮಾನತೆ ಎನ್ನುವುದು ತಾವು ಹೊರಡುವ ಬಸ್ಸಿನಲ್ಲಿನ ಸೀಟುಪಡೆದುಕೊಳ್ಳುವಲ್ಲಿ ಮಾತ್ರ ಸೀಮಿತವಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಒಂದು ವರ್ಗದ ಮಹಿಳೆಯರು ಸ್ವಾತಂತ್ರ್ಯ , ಸಮಾನತೆಯ ದೃಷ್ಟಿಯಿಂದ ಯಾವ ಹೇಸಿಗೆಯ ಮಟ್ಟ ಮುಟ್ಟಿದ್ದಾರೆ ಎಂಬುದು ಇವರಿಗೆ ಮಹತ್ವದಾಗುವುದಿಲ್ಲ. ಕೆಲವರು ಅದೇ ನಿಜವಾದ ಮಹಿಳಾ ಸ್ವಾತಂತ್ರ್ಯ, ಸಮಾನತೆ ಎಂದು ಬಿಂಬಿಸುವರೂ ಇದ್ದಾರೆ. 'ಕ್ರೌಂಚ ಪಕ್ಷಿಗಳು" ಈ ದೃಷ್ಟಿಯಿಂದ ಸಂಪೂರ್ಣವಾಗಿ ಹೊರತಾಗಿದೆ ಎಂದು ಹೇಳಿದರೆ ತಪ್ಪಾಗುತ್ತದೆ.

ಕತೆ ತನ್ನ ಗಟ್ಟಿತನದೊಂದಿಗೆ ಪರಿಣಾಮಕಾರಿಯಾಗಬೇಕಾದರೆ, ಅದು ತನ್ನ ಕಲಾತ್ಮಕತೆಯೊಂದಿಗೆ ವಾಸ್ತವತೆಯನ್ನು ತನ್ನ ಹೃದಯ ಸ್ಥಾನವನ್ನಾಗಿರಿಸಿಕೊಳ್ಳಬೇಕಾಗುತ್ತದೆ. ಯಾವುದೋ ಒಂದು ವಾದಕ್ಕೆ ಗಂಟುಬಿದ್ದು, ಅದಕ್ಕೆ ಪೂರಕವಾದ ಸಂದರ್ಭ, ಸನ್ನಿವೇಶ, ಪಾತ್ರಗಳನ್ನು ತೀರ ಕಾಲ್ಪನಿಕವಾದ ರೀತಿಯಲ್ಲಿ ಚಿತ್ರಿಸುತ್ತ ಹೋದಂತೆ ಕತೆಗಳು ಸಹಜವಾಗಿ ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತವೆ. ಇದು ವೈದೇಹಿ ಅವರ ಕತೆಗಳಲ್ಲಿ ವಿಶೇಷವಾಗಿ ಕಂಡು ಬರುತ್ತದೆ. ಕತೆಗಳು ಯಾವ ಕಾರಣಕ್ಕೂ ಹೆಚ್ಚು ಕಾಡುವುದೇ ಇಲ್ಲ. ಸಾಮಾನ್ಯವಾದ ಪರಿಣಾಮದ ಮೂಲಕ ಮನಸ್ಸಿನ ಪಟಲದ ಮೇಲೆ ತಾತ್ಕಾಲಿಕ ಪರಿಣಾಮ ಬೀರಿ ಮೋಡದಂತೆ ಮರೆಯಾಗುತ್ತವೆ.

ಒಂದು ಹೂವಿನ ಹಾರ ನಿರ್ಮಾಣಗೊಳ್ಳಬೇಕಾದರೆ, ಅದರೊಳಗೆ 'ದಾರ" ಬೇಕೇ ಬೇಕಾಗುತ್ತದೆ. ಆದರೆ, 'ದಾರವೇ ಹಾರಾಗುವುದಿಲ್ಲ; ದಾರವಿಲ್ಲದೆ ಹಾರಕ್ಕೆ ಅಸ್ತಿತ್ವವೇ ಇಲ್ಲ." ಸುಮ್ಮನೆ ಹೂವುಗಳನ್ನು ನೆಲದ ಮೇಲೆ ಹಾರದಾಕಾರದಲ್ಲಿ ಜೋಡಿಸಿಟ್ಟ ಮಾತ್ರಕ್ಕೆ ಹಾರ ಅನ್ನಿಸಿಕೊಳ್ಳುವುದಿಲ್ಲ. ಹಾಗೆ ಜೋಡಿಸಿಟ್ಟ ಹೂವುಗಳಲ್ಲಿ ಯಾವುದಾದರೂ ಒಂದು ಹೂವು ತನ್ನ ಜಾಗಾ ಬಿಟ್ಟರೆ ಹಾರಿನ ಇಡೀ ಆಕಾರವೇ ಕಳೆದುಹೋಗುತ್ತದೆ. ಸೈದ್ಧಾಂತಿಕತೆ, ತಾತ್ವಿಕತೆ ಅನ್ನವುದು ಹಾರದೊಳಗಿನ ದಾರವಾಗಿ ಕಾರ್ಯನಿರ್ವಹಿಸುತ್ತದೆ. ಗಟ್ಟಿ ದಾರ ಬಳಸಿಕೊಂಡು ವೈವಿದ್ಯಮಯ ಹೂವುಗಳನ್ನು ಜೋಡಿಸಿಡುವುದು ಕಲೆಗಾರನ ಪ್ರತಿಭೆಗೆ ಸವಾಲಾಗುತ್ತದೆ. }

ಆದರೆ, ಹಾರವನ್ನು ಸಿದ್ದಪಡೆಸಬೇಕಾದರೆ ಹೂವು, ದಾರ ಮತ್ತು ಸೂಜಿ ಬೇಕೇ ಬೇಕಾಗುತ್ತೆದೆ. ವೈದೇಹಿ ಅವರ ಹತ್ತಿರ ಈ ಮೂರೂ ಇವೆ. ಆದರೆ, ಹಾರವನ್ನಾಗಿಸುವ ಕಲೆಗಾರಿಕೆ ಅಷ್ಟೊಂದು ಕೈಗೂಡಿಲ್ಲ. ಮೊದಲನೆಯದು, ಸರಿಯಾದ ಹೂವುಗಳ ಆಯ್ಕೆಯಾಗಿಲ್ಲ; ಹೂವೆಂದು ಭಾವಿಸಿ ಎಲೆಗಳನ್ನೇ ಹೆಚ್ಚು ಹರೆದುಕೊಂಡಿದ್ದಾರೆ. ಸೂಜಿಯಲ್ಲಿ ದಾರ ಸಿಕ್ಕಿಸಿ, ಬೇಕಾದ ಹೂವುಗಳು ಸಿಗದೇ ಇದ್ದಾಗ ಕಳ್ಳಿಗಿಡದ ಹೂವುಗಳನ್ನೂ ಜೋಡಿಸಿ ಹಾರವನ್ನಾಗಿಸುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ವೈದೇಹಿ ಅವರ ಕೈಯಲ್ಲಿರುವ ದಾರ ಹೂವಿಗಿಂತ ದಪ್ಪಾಗಿದೆ. ಹಾಗಂತ ಸೂಜಿಯಲ್ಲಿ ಹಗ್ಗ ಪೋಣಿಸಿದ್ದಾರೆ ಎಂದು ಭಾವಿಸಬೇಕಾಗಿಲ್ಲ. ಕೆಲವು ಕಡೆ ಅವರು ಸೂಜಿ ದಾರವಿಲ್ಲದೆ ನೆಲೆದ ಮೇಲೆ ಹೂವುಗಳನ್ನು ಜೋಡಿಸಿಟ್ಟು 'ಇದು ಹೂವಿನ ಹಾರ" ಎಂದು ಹೇಳಲು ಹೊರಟಂತಾಗಿದೆ. ಆದರೆ, ಅದನ್ನು ನಂಬಲು ಎಷ್ಟು ಜನರಿಗೆ ಸಾಧ್ಯ?

'ಕ್ರೌಂಚ ಪಕ್ಷಿಗಳು" ಭಾರತೀಯ ಹಾಗೂ ಭಾರತೇತರ ಭಾಷೆಗಳಿಗೆ ತರ್ಜುಮೆಗೊಂಡು ಅವರೂ ಗಂಭೀರವಾಗಿ ಓದಿದರೆ, ಪ್ರಸ್ತುತ ಸಂದರ್ಭದ ಕನ್ನಡ ಕಥಾ ಸಾಹಿತ್ಯದ ಮಟ್ಟಕ್ಕೆ ಹುಬ್ಬೇರಿಸಬಹುದು! ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ಎಂದರೆ ಇನ್ನೂ ಹೆಚ್ಚು ಹುಬ್ಬುಗಳು ಮೇಲೆರಬಹುದು!!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more