• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೂಜಿ ದಾರ ಇಲ್ಲದೆ ಪೋಣಿಸಿದ ಹಾರ

By * ಡಾ.ಕೆ.ಎನ್.ದೊಡ್ಡಮನಿ
|

ವೈದೇಹಿ ಅವರ 'ಕ್ರೌಂಚ ಪಕ್ಷಿಗಳು" ಕಥಾ ಸಂಕಲನಕ್ಕೆ 2009ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕೇವಲ ಪುರುಷರ ಸೊತ್ತಾಗಿದ್ದ ಇಂಥ ಬಹುಮಾನಗಳು ಮಹಿಳಾ ಬರಹಗಾರರಿಗೂ ಇತ್ತೀಚೆಗೆ ದೊರೆಯುತ್ತಿರುವುದು ಸಮಾಧಾನ. ವೈದೇಹಿ ಅವರು ವೈಯಕ್ತಿಕವಾಗಿ ನನಗೆ ಪರಿಚಯಸ್ಥರಲ್ಲ. ಸಾಹಿತ್ಯ ವಿದ್ಯಾರ್ಥಿಯಾದ ನಾನು ಅವರ ಎಲ್ಲ ಬರಹವನ್ನು ಓದಲಿಕ್ಕೆ ಆಗದಿದ್ದರೂ ಅಷ್ಟಿಷ್ಟು ಗಮನಿಸಿದ್ದೇನೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತ ಕಾರಣಕ್ಕೆ ಕುತೂಹಲದಿಂದ 'ಕ್ರೌಂಚ ಪಕ್ಷಗಳು" ಕೃತಿಯನ್ನು ಸಮಾಧಾನದಿಂದ ಓದಿದ್ದೇನೆ.

ಯಾವುದೇ ಒಂದು ಕೃತಿಗೆ ಇಂಥ ಬಹುಮಾನ ದೊರೆತಾಗ ಕೃತಿಯ ಹಾಗೂ ಕೃತಿಕಾರನ ವಿಜೃಂಭಣೆಯೇ ಜಾಸ್ತಿಯಾಗುವುದನ್ನು ಕಾಣುತ್ತೇವೆ. 'ಗಂಭೀರ ಬರಹಗಾರರು" ಎಂದು ಕರೆಯಿಸಿಕೊಂಡವರಲ್ಲಿಯೂ ಅನೇಕರು ಕೃತಿಯಲ್ಲಿ ಇದ್ದುದನ್ನು ಮತ್ತು 'ಇಲ್ಲದನ್ನು" ಸೇರಿಸಿಕೊಂಡು ಜಾಣತನದಿಂದ ಈ ಕೆಲಸ ನಿರ್ವಹಿಸಿ ತಮ್ಮ ಶಾಣ್ಯಾತನವನ್ನು ಪ್ರದರ್ಶಿಸುತ್ತಾರೆ. ಈ 'ಶಾಣ್ಯಾತನ" ವೈದೇಹಿ ಅವರ ಸಾಹಿತ್ಯದ ಹಿನ್ನಲೆಯಲ್ಲಿ ನಡೆದಿಲ್ಲ ಎಂದು ಹೇಳಲಾಗುವುದಿಲ್ಲ. ಅತಿರೇಕತೆಯ ಇದಾವುದನ್ನೂ ಇಲ್ಲಿ ಪ್ರಸ್ತಾಪಿಸಲು ಹೊರಟ್ಟಿಲ್ಲ ಅನ್ನೊ ಕಾರಣಕ್ಕಾಗಿ ಪ್ರಾರಂಭದಲ್ಲಿ ಒಂದೆರಡು ಮಾತುಗಳನ್ನು ಅನಿವಾರ್ಯವಾಗಿ ಉಲ್ಲೇಖಿಸಬೇಕೆನಿಸುತ್ತದೆ.

ಕೃತಿಯ ಬಗ್ಗೆಯಾಗಲಿ ಆಮೂಲಕ ಕೃತಿಕಾರರ ಕುರಿತಾಗಲಿ ಇಲ್ಲದ ರೀತಿಯಲ್ಲಿ ವಿಜೃಂಭಿಸುವುದರಿಂದ ಕೃತಿಗೂ ಮತ್ತು ಕೃತಿಕಾರನಿಗೂ ಅನ್ಯಾಯ ಮಾಡುವುದರ ಜೊತೆಗೆ ಲೇಖಕನ ಮುಂದಿನ ದಾರಿಯನ್ನೂ ತಪ್ಪಿಸಿ ಬಿಡಲಾಗುತ್ತದೆ. ಈ ಕಾರಣಕ್ಕಾಗಿ ಯಾವುದೇ ಪೂರ್ವಗ್ರಹ , ರಾಗದ್ವೇಷಗಳಿಗೆ, ಗುಂಪುಗಾರಿಕೆ , ಜಾತಿಯತೆ ಮೊದಲಾದ 'ಆಧುನಿಕ ವಿಮರ್ಶಾ ಅರ್ಹತೆಗಳಿಗೆ" ಒಳಗಾಗದೇ ವೈದೇಹಿ ಅವರ 'ಕ್ರೌಂಚ ಪಕ್ಷಿಗಳು" ಕೃತಿಯನ್ನು ಪರಿಚಯಿಸುವುದು ಈ ಪ್ರಬಂಧದ ಉದ್ದೇಶ. ಇಲ್ಲಿ ಪ್ರಸ್ತಾಪವಾದ ವಿಚಾರಗಳು ವೈಯಕ್ತಿಕವಾಗಿದ್ದು, ಅವುಗಳನ್ನು ಸ್ವೀಕರಿಸುವುದು ಬಿಡುವುದು 'ಅವರವರ ಭಾವಕ್ಕೆ" ಬಿಟ್ಟ ವಿಷಯ.

***

ಲಿಂಗತಾರತಮ್ಯ ಹಾಗೂ ಮಹಿಳಾ ಶೋಷಿತ ಮನೋವೃತ್ತಿಯನ್ನು ತಲೆಯಲ್ಲಿ ತುಂಬಿಕೊಂಡು ಅದನ್ನು ನಯವಾಗಿ ವಿರೋಧಿಸುವ ಧಾಟಿಯಲ್ಲಿ ಪುರುಷರ ಬುದ್ದಿಗೇಡಿ ಮಾನಸಿಕ ಸ್ಥಿತಿಯನ್ನು ಬಿಂಬಿಸುವ ಉದ್ದೇಶಿದಿಂದಲೇ 'ದಾಳಿ" ಕತೆಯನ್ನು ರಚಿಸಲಾಗಿದೆ. ತುಂಬಿದ ಬಸ್ಸಿನಲ್ಲಿ 'ಸೀಟುಕೋಡುತ್ತೇನೆ" ಎಂದು ಹೇಳಿ ಕಥಾ ನಾಯಕಿಯನ್ನು ಬಸ್ಸಿನಲ್ಲಿ ಉಳಿದ ಪ್ರಯಾಣಿಕರಂತೆ ಕಂಡಕ್ಟರ್ ಹತ್ತಿಸಿಕೊಳ್ಳುತ್ತಾನೆ. ಆದರೆ, ಕಂಡಕ್ಟರ್‌ಗಾಗಿ ಮೀಸಲಾದ ಸೀಟು ಖಾಲಿ ಇದ್ದರೂ ಆ ಮಹಿಳೆ ಕೇಳಿದರೂ ಆತ ಕೊಡದೆ ಹೊರಳಿ ಅತಿಯಾಗಿ ರೇಗಾಡುತ್ತಾನೆ. ಆ ಮೂಲಕ ತನ್ನ ಇಡೀ ದಿನದ ಒತ್ತಡದ ಜೀವನವನ್ನೇ ಆಕೆಯ ಮೇಲೆ ಆರೋಪಿಸಲು ಲಜ್ಜೆಗೆಟ್ಟು ಪ್ರಯತ್ನಿಸುತ್ತಾನೆ. ಆಕೆಯಾದರೂ ಕಂಡಕ್ಟರ್‌ನ ವರ್ತನೆಗೆ ಮಾತಿನ ಮೂಲಕ ಪ್ರತಿಕ್ರಿಯೇ ನೀಡದೇ 'ಆತನ ಬುದ್ದಿಗೇಡಿತನ" ಎನ್ನುವಂತೆ ಮುಗಳ ನಗೆಯ ಮೂಲಕವೇ ಸಹಿಸಿಕೊಳ್ಳುತ್ತಾಳೆ.

ಆತನ ರೇಗಾಟ ಮುಂದುವರೆದಂತೆ ನಾಯಕಿಯ ಮುಗುಳನಗೆಯೂ ಮುಂದುವರೆಯುತ್ತದೆ. ಕಂಡಕ್ಟರ್ ಟಿಕೆಟ್‌ಕ್ಕೆಂದು ಮುಂದೆ ಸರೆದಾಗ ಆತನ ಪರಿಚಯಸ್ಥ ಪ್ರಯಾಣಿಕನೊಬ್ಬ ಮೀಸಲು ಸೀಟಿನ ಮೇಲೆ ಸಲುಗೆಯಿಂದಲೇ ಕುಳಿತುಕೊಳ್ಳುತ್ತಾನೆ. ಹಾಗೆ ಕುಳಿತವನ ಬಗ್ಗೆ ಯಾವುದೇ ಮಾತುಗಳನ್ನಾಡದ ಇದೇ ಕಂಡಕ್ಟರ್ ಸಂತೋಷದಿಂದ ಆತನೊಂದಿಗೆ ಉಪಭಯಕುಶಲೋಪರಿಗೆ ಇಳಿಯುತ್ತಾನೆ. ಇದು 'ದಾಳಿ" ಕತೆಯ ವಸ್ತು. ಲೇಖಕಿ ಇಲ್ಲಿ ಬಹುಶಃ ಲಿಂಗತಾರತಮ್ಯ ನೀತಿ ಹಾಗೂ ಪುರುಷನ ದಾಳಿಯನ್ನು ಖಂಡಿಸುತ್ತಾರೆ ಎಂದೆನಿಸುತ್ತದೆ.

ಕಥೆಯಲ್ಲಿ ಹೇಳಿಕೊಳ್ಳುವ ಗಟ್ಟಿತನ ಹಾಗೂ ಸೈದ್ಧಾಂತಿಕ ಸ್ಪಷ್ಟ ತಿಳುವಳಿಕೆ ಇಲ್ಲದೆ ಕತೆ ಸಂಪೂರ್ಣವಾಗಿ ಸೊರಗಿ ಬತ್ತಿಯಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದು. ಕಂಡಕ್ಟರ್‌ನ ಅತೀ ರೇಗಾಟ, ಅದಕ್ಕೆ ಆಕೆಯ ಮುಗುಳ ನಗೆಯ ಧಾರವಾಹಿ ಅವಾಸ್ತವ ಎನ್ನುವ ಮಟ್ಟದಲ್ಲಿ ಬಂದಿದೆ. ವಾಸ್ತವಾಗಿ ಕಂಡಕ್ಟರ್ ಈ ರೀತಿ ಮಾತನಾಡಲು ಸಾಧ್ಯವೇ ಇಲ್ಲ. ಆಕಸ್ಮಿಕವಾಗಿ ಅದು ಸತ್ಯವಾಗಿದ್ದರೂ ತುಂಬಾ ವಿರಳ ಎನ್ನಬಹುದು. ಇದನ್ನೇ ಸಾಮುದಾಯಕವಾಗಿ ಸಾರ್ವತ್ರಿಕಗೊಳಿಸುವುದು ಲೇಖಕಿಯ ತಿಳುವಳಿಕೆಯ ಮಿತಿಯನ್ನು ಬಿಂಬಿಸುತ್ತದೆ.

ಹವಾನಿಯಂತ್ರಿತ ಕಾರು,ಬಸ್, ರೈಲಿನಲ್ಲಿ ಸುತ್ತಾಡುವ ವೈದೇಹಿ ಅವರಿಗೆ ಈ ರೀತಿ ರಿಕ್ಕಾಗಿ ತುಂಬಿದ ಬಸ್ಸಿನಲ್ಲಿ ಓಡಾಡಿದ ಅನುಭವ ಇಲ್ಲ ಎಂಬುದನ್ನು ಕತೆ ಸ್ಪಷ್ಟವಾಗಿ ಹೇಳುತ್ತದೆ. ಯಾರೋ ಹೇಳಿದನ್ನು ಕೇಳಿ ಅತೀಯಾಗಿ ಕಲ್ಪಿಸಿಕೊಂಡು ಕತೆಯನ್ನು ಪೂರ್ವಗ್ರಹ ಪೀಡಿತದಿಂದ ಮನಸ್ಸಿಗೆ ತೋಚಿದಂತೆ ಬರೆಯಲಾಗಿದೆ. ಸರಿಯಾದ ಅನುಭವ ಇಲ್ಲದಿದ್ದರೆ ಸಾಹಿತ್ಯ ಹೇಗಾಗುತ್ತದೆ ಎನ್ನುವುದಕ್ಕೆ ವೈದೇಹಿ ಅವರ 'ದಾಳಿ" ನಿದರ್ಶನವಾಗುತ್ತದೆ.

ಲೇಖಕಿ ಬಿಂಬಿಸಿದಂತೆ ಕಂಡೆಕ್ಟರ್ ರೇಗಾಟ ಬಸ್ಸುಗಳಲ್ಲಿ ನಡೆಯುವುದಿಲ್ಲವೆಂದಲ್ಲ. ಆದರೆ, ಲೇಖಕಿ ಹೇಳಿದ ಸ್ವರೂಪದಲ್ಲಿ ನಡೆಯದೆ ಬೇರೆ ಸ್ವರೂಪದಲ್ಲಿ ನಡೆಯುತ್ತದೆ. ಅವರಿಗೆ ಅದು ಗೊತ್ತಿಲ್ಲ. ಹೀಗಾಗಿ ಯಾವುದೋ ಗುಂಗಿನಲ್ಲಿ ತಮಗೆ ತಿಳಿದಂತೆ ಬರೆಯುತ್ತ ಹೋಗುತ್ತಾರೆ. ಕಂಡಕ್ಟರ್‌ನ ಪರಿಚಯಸ್ಥರೊಬ್ಬರು ಆತನ ಸೀಟಿನ ಮೇಲೆ ಕುಳಿತಾಗ 'ಎದ್ದೇಳಿ" ಎಂದು ಹೇಳುವುದು ಸುಸಂಸ್ಕೃತ ಲಕ್ಷಣ ಅನ್ನಿಸುವುದಿಲ್ಲ. ಅದನ್ನೇ ದೊಡ್ಡದಾಗಿ ಬಿಂಬಿಸುವ ಅವಶ್ಯಕತೆಯೂ ಬರುವುದಿಲ. ಇದನ್ನೆ ಲಿಂಗತಾರಮ್ಯ ಎಂದು ಬಗೆಯುದರಲ್ಲಿ ಯಾವ ಅರ್ಥವೂ ಇಲ್ಲ. ಲೇಖಕಿ ಈ ಫಿಲಾಸಾಫಿಯನ್ನು ಮುಂದಿಟ್ಟುಕೊಂಡು ತುಂಬಾ ತ್ರಾಸು ತೆಗೆದುಕೊಂಡು ಗುದ್ದಾಡಿ ಕತೆ ಬರೆದಂತೆ ಭಾಸವಾಗುತ್ತದೆ. ಹೀಗಾಗಿ 'ದಾಳಿ" ತನ್ನ ಸಹಜತೆಯನ್ನು ಕಳೆದುಕೊಳ್ಳುತ್ತ, ಒಂದು ದೋಷಪೂರಿತ ಕತೆಯಾಗಿ ಉಳಿದುಕೊಳ್ಳುತ್ತದೆ.

'ದಾಳಿ" ಕತೆ ಓದುತ್ತಿದ್ದಂತೆ ಮೇಲಿನ ಈ ಭಾವನೆಗಳು ನನ್ನಲ್ಲಿ ಮೂಡಿದಾಗ ಅದನ್ನು ಪರೀಕ್ಷಿಸಲೆಂದು ಗೆಳೆಯರೊಬ್ಬರಿಗೆ ಈ ಕತೆಯನ್ನು ಓದಿ ಹೇಳಲು ಪ್ರಾರಂಭಿಸಿದೆ. ಎರಡನೇ ಪ್ಯಾರಾಗ್ರಾಫ್ ಓದಿ ಮೂರನೇ ಪ್ಯಾರಾ ಪ್ರವೇಶಿಸುತ್ತಿದ್ದಂತೆ 'ದಯಮಾಡಿ ಸಾಕು ನಿಲ್ಲಿಸಿ, ಮುಂದೆ ಓದಬೇಡಿ, ಅದರಲ್ಲಿ ಏನೂ ಇಲ್ಲ, ಅಸಂಬದ್ಧವಾದ ಕತೆ" ಎಂದು ಕಡ್ಡಿತುಂಡು ಮಾಡಿದಂತೆ ಹೇಳಿದರು.

'ಕ್ರೌಂಚ ಪಕ್ಷಿಗಳು" ಹತ್ತು ಕಥೆಗಳಿಂದ ಕೂಡಿದ ಸಂಕಲನ. 'ಮೊದಲನೆಯ ತುತ್ತಿಗೆ ಕಲ್ಲು" ಎನ್ನುವ ಹಾಗೆ ಸಂಕಲನದ ಮೊದಲನೆಯ ಕತೆ 'ದಾಳಿ" ತುಂಬಾ ನಿರಾಶೆಯನ್ನುಂಟುಮಾಡಿತು. ಲೇಖಕಿಯ ಸೃಜನಶೀಲತೆ, ಅನುಭವ ಮತ್ತು ಸೈದ್ಧಾಂತಿಕ ಅಭಿವ್ಯಕ್ತಿಯ ಕೊರತೆಯನ್ನು ಮೊದಲ ಕತೆಯೇ ಬೇಡವೆಂದರೂ ಎತ್ತಿ ತೋರಿಸಿದೆ. ಅನ್ನ ಕುದ್ದಿರುವ ಬಗ್ಗೆ ಅರಿತುಕೊಳ್ಳಲು 'ಒಂದಗಳು ಹಿಚುಕಿ ನೋಡಿದರೆ ಸಾಕು" ಎನ್ನುವಂತೆ 'ಮೊದಲನೆ ಕತೆ ಇಡೀ ಕಥಾ ಸಂಕಲನದ ಅಡುಗೆಯನ್ನು ತಿಳಿಯಪಡಿಸುತ್ತದೆ" ಎಂಬ ಮಾತು ನೆನಪಿಗೆ ಬಂದರೂ ಮೊದಲನೆ ಕತೆಯ ಮೂಲಕವೇ ಸಂಕಲನದ ಇಡೀ ಕತೆಗಳು ನಿರಾಶಾದಾಯಕ ಎಂದು ಹೇಳಲಾಗುವುದಿಲ್ಲ. ಮೊದಲನೆಯ ಕತೆಯ ನಿರಾಶೆಯಿಂದ ಮುಂದಿನ ಕತೆಗಳ ಓದನ್ನು ಬಿಟ್ಟಿಲ್ಲ. ವೈದೇಹಿ ಅವರು ಎಷ್ಟು ತ್ರಾಸು ತೆಗೆದುಕೊಂಡು ಮೊದಲನೆಯ ಕತೆ ಹೆಣೆದಿದ್ದಾರೋ ಅದಕ್ಕಿಂತ ಹೆಚ್ಚು ತ್ರಾಸು ತೆಗೆದುಕೊಂಡು, ಮನಸ್ಸು ಗಟ್ಟಿ ಮಾಡಿ ಅಷ್ಟೂ ಕತೆಗಳನ್ನು ಓದಿ ಜಯಶಾಲಿಯಾದ ತೃಪ್ತಿ ಇದೆ. ಒಂದಿಷ್ಟು ಸಮಾಧಾನ ತರುವ, ಮತ್ತೊಂದಿಷ್ಟು ಖುಷಿ ಕೊಡುವ ಕತೆಗಳೂ ಇಲ್ಲಿವೆ.

ನಟಿ,ಸಬಿತಾ ಮಾತು ಸೋತ ಕ್ಷಣ, ಇತ್ಯಾದಿ

ತನ್ನ ಒಡಲಿನ ಉಡಿಯಲ್ಲಿ ನೋವು ತುಂಬಿಕೊಂಡು ಎಲ್ಲರನ್ನೂ ನಗಿಸುವ ವಿದೂಷಕಿಯೋರ್ವಳ ಹಾಸ್ಯಪ್ರವೃತ್ತಿಯನ್ನು ಬಿಂಬಿಸುವುದು 'ನಟಿ" ಎಂಬ ಕತೆ. ಬೇರೆಯವರ ಅನುಕರಣೆ ಮಾಡಿ ನಗೆಸುವ ಈಕೆಯಲ್ಲಿಯೂ ನೋವು ತುಂಬಿಕೊಂಡಿರುವ ಬಗ್ಗೆ ಕತೆಯ ಕೊನೆಯಲ್ಲಿ ಲೇಖಕಿ ನಿರೂಪಿಸಲು ಪ್ರಯತ್ನಿಸಿದ್ದಾರೆ. ಅಷ್ಟೊಂದು ನಗೆಸುವ ಆಕೆ ಕೊನೆಗೆ ಕೋಣೆಯನ್ನು ಪ್ರವೇಶಿಸಿ ಬಾಗಿಲು ಹಾಕಿಕೊಂಡು ಎಷ್ಟು ಕರೆದರೂ ಬರದೆ ಇರುವುದು ನಗಿಸಿ ಸುಸ್ತಾಗಿ ಮಲಗಿರುವಳೋ ಇಲ್ಲ ಸತ್ತಳೋ ಎಂಬುದು ಅರ್ಥವೇ ಆಗುವುದಿಲ್ಲ. ಆಕೆಯಲ್ಲಿ ಎಂಥ ಬಗೆಯ ನೋವು, ಯಾವ ಕಾರಣ ಎಂಬುದು ಕತೆಯಲ್ಲಿ ಸುಳಿವು ಸಿಗುವುದಿಲ್ಲ. ಹೀಗಾಗಿ ಕತೆ ದೋಷಪೂರಿತ ಅನ್ನಿಸದಿದ್ದರೂ ಅಂತ್ಯ ಅಷ್ಟು ಸಹಜವೆನಿಸುವುದಿಲ್ಲ.

'ಸಬಿತಾ" ಹೆಣ್ಣಿನ ವಿಚಿತ್ರ ಮನೋವೃತ್ತಿಯನ್ನು ಬಿಂಬಿಸುವ ಇನ್ನೊಂದು ಕತೆ. ತನ್ನ ಇರುವಿಕೆಯ ಬಗ್ಗೆ ಹಳಿಯುತ್ತ ಎದುರು ಮನೆಯ ಶ್ರೀಮಂತಿಕೆ ಹಾಗೂ ಅವರ ವರ್ತನೆಯ ಬಗ್ಗೆಯೇ ಚಿಂತಿಸುವ ಮನೋವೃತ್ತಿಯನ್ನು ಈ ಕತೆಯಲ್ಲಿ ತಂದುಕೊಳ್ಳಲಾಗಿದೆ. ಇಂಥ ಸ್ವಭಾವ ಹೊಂದಿದ 'ಸಬಿತಾ" ಒಂದು ದಿನದ ಮಟ್ಟಿಗೆ ಮನೆಗೆ ಬಂದ ಗೆಳತಿಗೆ ಆ ಬಗ್ಗೆ ನಿರಂತರ ಪ್ರಸ್ತಾಪಿಸಿ ಆಕೆ ಮರುದಿನ ಓಡಿ ಹೋಗುವ ಮಟ್ಟದವರೆಗೆ ವರ್ತಿಸುತ್ತಾಳೆ. ಇದು ಲಘು ಹಾಸ್ಯ ಪ್ರಾಧಾನ್ಯದ ಒಂದು ಸಾಮಾನ್ಯ ಕತೆ ಎಂದು ಹೇಳಬಹುದು.

'ಮಾತು ಸೋತ ಕ್ಷಣ" ಇನ್ನೊಂದು ಕತೆ. ಮಹಿಳೆಯೋರ್ವಳ ಸಾವಿಗೀಡಾದ ಸೂತಕದ ಮನೆಗೆ ಆಗಮಿಸಿದ ವೃದ್ಧನೋರ್ವ ಯಾವುದೇ ಮಾತುಗಳನ್ನಾಡದೇ ಆತನಲ್ಲಿ ಉಮ್ಮಳಿಸಿ ಬಂದ ದುಃಖದ ಸಂದರ್ಭ ಕತೆಯ ವಸ್ತು. 'ನಟಿ" ಕತೆಯ ಧಾಟಿಯಂತೆಯೇ, ಮೌನವೇದನೆ ಅನುಭವಿಸುವ ವೃದ್ಧನಿಗೆ ಸತ್ತವಳು ಯಾವು ಸಂಬಂಧ ಹೊಂದಿದ್ದಳು ಎಂಬುದನ್ನು ಲೇಖಕಿ ಎಲ್ಲಿಯೂ ಪ್ರಸ್ತಾಪಿಸದಿದ್ದರೂ ಆಕೆಯ ಸಾವಿನಿಂದ ಆತ ಮಾತುಹೊರಡದ ಮೌನವೇದನೆ ಅನುಭವಿಸಲು ಕಾರಣವೇನು ಅಂಬುವುದನ್ನೂ ಹೇಳುವುದಿಲ್ಲ. ಹೀಗಾಗಿ ಕತೆ ತಡಬುಡವಿಲ್ಲದಂತಾಗುತ್ತದೆ. ವೈದೇಹಿ ಅವರ ಈ ತಂತ್ರ - ಯಾವುದೋ ಪ್ರಾಣಿವೊಂದನ್ನು ಕಂಬಳಿಯಲ್ಲಿ ಮುಚ್ಚಿಟ್ಟು 'ಇದರಲ್ಲಿ ಮನುಷ್ಯನೇ ಇದ್ದಾನೆ, ಯಾರು ಅನ್ನುವುದನ್ನು ಗುರುತಿಸಿ" ಎಂದು ಸೂಚಿಸಿದಂತಾಗಿದೆ.

ಆಧುನಿಕ ಬದುಕಿನ ಪ್ರವೇಶದ ತರಾತುರಿ ಮತ್ತು ಇದರಿಂದಾಗಿ ತಳಮಳಿಸುವ ಸಾಂಪ್ರದಾಯಿಕ ಬದುಕಿನ ಸ್ಥಿತಿಯನ್ನು ಸಂಕೇತಿಸುವ ಕತೆ 'ಮನೆಯವರೆಗಿನ ಹಾದಿ". ಎರಡೂ ಬದಕನ್ನು ಮುಖಾಮುಖಿಗೊಳಿಸುವ ಈ ಕತೆ ಒಂದಿಷ್ಟು ಸಮಾಧಾನ ನೀಡಿದರೂ ಈ ಕಥಾ ವಸ್ತುವನ್ನು ಪರಿಣಾಮಕಾರಿಯಾಗಿ ಸಾಧಿಸಲು ಸಾಧ್ಯತೆ ಇದ್ದರೂ ಲೇಖಕಿಗೆ ಬಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಮುಂದಿನ ಭಾಗದಲ್ಲಿ: ಕ್ರೌಂಚ ಪಕ್ಷಿಗಳು ಕೃತಿ ವಿಮರ್ಶೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more