ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿ ಭಯದ ಆರು ಕೃತಿಗಳು ಅನಾವರಣ

By Shami
|
Google Oneindia Kannada News

Nagesh Hegde
ಬೆಂಗಳೂರು,ಫೆ.1: ಅತ್ತಿ ಆಲ ನೇರಳೆ ಸಿಲ್ವರ್ ಓಕ್ಸ್ ಮರದ ಒಂದೊಂದು ಸಸಿಗಳನ್ನು ಸ್ವೀಕಾರ ಮಾಡುವುದರ ಮೂಲಕ ಕರ್ನಾಟಕದ ಮೂವರು ಮಹನೀಯರು ಪರಿಸರ ವಿಜ್ಞಾನ ಮತ್ತು ವಾತಾವರಣ ವಿವೇಚನೆಯ ಪುಸ್ತಕಗಳನ್ನು ಪ್ರಕಟಿಸುವುದಕ್ಕೆ ಮೀಸಲಾದ 'ಭೂಮಿ ಬುಕ್ಸ್' ಪ್ರಕಾಶನ ಸಂಸ್ಥೆಯನ್ನು ಜನವರಿ 31ರ ಭಾನುವಾರ ಬೆಳಗ್ಗೆ ಬೆಂಗಳೂರಿನಲ್ಲಿ ಉದ್ಘಾಟಿಸಿದರು.

ಕೃತಿಗಳನ್ನು ಸ್ವೀಕರಿಸಿದವರು ಚಿರಂಜೀವಿ ಸಿಂಗ್, ವಿಜಯ್ ಗೋರೆ ಮತ್ತು ಈಶ್ವರ ಚಂದ್ರ. ಈ ಸಂದರ್ಭದಲ್ಲಿ ನಾಗೇಶ್ ಹೆಗಡೆ ವಿರಚಿತ ಹೊಸ ಪುಸ್ತಕಗಳಾದ'ಅಭಿವೃದ್ಧಿಯ ಅಂಧಯುಗ', 'ಟಿಪ್ಪೂ ಖಡ್ಗದ ನ್ಯಾನೊ ಕಾರ್ಬನ್', 'ಕೊಪೆನ್ ಹೇಗನ್ ಋತು ಸಂಹಾರ' ಭೂಮಿ ಬುಕ್ಸ್ ವತಿಯಿಂದ ಬಿಡುಗಡೆ ಆದವು. ಇದೇ ವೇಳೆ ಅಂಕಿತ ಪ್ರಕಾಶನದ ವತಿಯಿಂದ ಮರುಮುದ್ರಣಗೊಂಡ ಹೆಗಡೆ ಅವರ ಇತರ ಮೂರು ಪುಸ್ತಕಗಳಾದ 'ಇರುವುದೊಂದೇ ಭೂಮಿ', 'ಪ್ರತಿದಿನ ಪರಿಸರ ದಿನ' ಮತ್ತು 'ಸುರಿಹೊಂಡ - ಭರತಖಂಡ' ಬಿಡುಗಡೆಗೊಂಡವು.

ಕೃತಿ ಬಿಡುಗಡೆ ಮಾಡಿದವರು ತಿರುಗಾಟದ ಕೆವಿ ಅಕ್ಷರ, ವಿಜ್ಞಾನ ಲೇಖಕಿ ನೇಮಿಚಂದ್ರ ಮತ್ತು ಅರೆಕಾಲಿಕ ರಾಜಕಾರಣಿ ಪ್ರೊ.ಬಿ.ಕೆ.ಚಂದ್ರಶೇಖರ್. ಪುಸ್ತಕ ಬಿಡುಗಡೆ ಕಾರ್ಯಕ್ರಮ ಆರಂಭವಾಗುವುದಕ್ಕೆ ಮುನ್ನ ಸಭಾಂಗಣದಲ್ಲಿ ಭೂಮ್ತಾಯಿ ಬಳಗದ ಹಾಡುಗಾರರು ಹಸುರು ಗೀತೆಗಳ ಸಮೂಹಗಾನವನ್ನು ಸುಶ್ರಾವ್ಯವಾಗಿ ಹಾಡಿದರು. ಪರಿಸರ ಕಾಳಜಿಗೆ ಮುಡಿಪಾದ ಗೀತೆಗಳ ಸಾಹಿತ್ಯದಲ್ಲಿ ಪ್ರಮುಖವಾಗಿ ಕರ್ನಾಟಕದ ರೈತ ಮತ್ತು ಭೂಮಿಯ ನಡುವೆ ನಡೆಯುತ್ತಿರುವ ಜಗಳ ಮಾರ್ದನಿಸಿತು.

ಇದಲ್ಲದೆ, ಬಹುರಾಷ್ಟೀಯ ಕಂಪನಿಗಳ ಹಾವಳಿಯನ್ನು ಗೇಲಿ ಮಾಡುವ ಹಾಡೂ ಇತ್ತು. ಕೋಕಾಕೋಲ ಮತ್ತು ಪೆಪ್ಸಿಗೆ ಅರ್ಪಿಸಲಾಗಿದ್ದ ಒಂದು ಕನ್ನಡಗೀತೆಯ ಸಾಹಿತ್ಯದಲ್ಲಿ 'ವಿಟಮಿನ್ ಎಬಿಸಿಡಿ' ಇಲ್ಲದ ಪಾನೀಯಗಳನ್ನು ಕೇವಲ ಒಂದು ತೈಲ ಎಂದು ಬಣ್ಣಿಸಲಾಗಿತ್ತು. ಕಡೆಪಕ್ಷ ಆ ಪಾನೀಯಗಳಲ್ಲಿ ಕಾರ್ಬೋಹೈಡ್ರೇಟ್ ಕೂಡ ಇಲ್ಲ ಎಂದು ಗೀತೆ ಸಾರಿತು. ಬೆಂದಕಾಳೂರು ಬೆಂಗಲೋರ್ ಆದ ಬಗೆಯನ್ನು ಹಾಡಿನಲ್ಲಿ ಚಿತ್ರಿಸುವ ಗೀತೆಯನ್ನು ಕಾರ್ಯಕ್ರಮದ ಆಶಯ ಗೀತೆಯನ್ನಾಗಿ ಪ್ರಸ್ತುತಪಡಿಸಲಾಯಿತು.

ಪತ್ರಕರ್ತ ಪರಿಸರ ವಿಜ್ಞಾನಿ ಮತ್ತು ಲೇಖಕ ನಾಗೇಶ್ ಹೆಗಡೆ ದಂಪತಿಗಳನ್ನು ಪ್ರೊ ಬಿಕೆ ಚಂದ್ರಶೇಖರ್ ಶಾಲು ಹೊದಿಸಿ ಸನ್ಮಾನಿಸಿದರು. ವಿರೋಧಿನಾಮ ಸಂವತ್ಸರದ ಕರ್ನಾಟಕ ಚಳಿಗಾಲದ ಈ ಕೊನೆಯ ದಿನಗಳಲ್ಲಿ ಕನ್ನಡ ಲೇಖಕರಿಗೆ ಕಾಶ್ಮೀರಿ ಶಾಲು ಹೊದಿಸಿ ಗೌರವಿಸಿದ್ದು ಸಮಯೋಚಿತವಾಗಿತ್ತು.

ಭೂಮಿ ಬುಕ್ಸ್ ಸಂಸ್ಥೆಯ ಒಡತಿ ದಿವ್ಯಾ ಉಪಸ್ಥಿತರಿದ್ದರು. ಕರ್ನಾಟಕದ ಹೆಸರಾಂತ ಕನ್ನಡ ಪ್ರಕಟಣಾ ಸಂಸ್ಥೆಗಳಾದ ಗಾಂಧೀಬಜಾರಿನ ಅಂಕಿತ, ಹೆಗ್ಗೋಡಿನ ಅಕ್ಷರ ಮತ್ತು ನೂತನ ಭೂಮಿ ಬುಕ್ಸ್ ಸಂಸ್ಥೆಯ ರೂವಾರಿಗಳು ಒಂದೇ ವೇದಿಕೆಯಲ್ಲಿ ಇದ್ದುದು ಕಾರ್ಯಕ್ರಮದ ವಿಶೇಷ ಅಂಶವಾಗಿತ್ತು. ಅಂಕಿತದ ಪ್ರಕಾಶ್ ಕಂಬತ್ತಳ್ಳಿ ಸ್ವಾಗತ ಮತ್ತು ವಂದನಾರ್ಪಣೆ ಮಾಡಿದರು. ಪುಸ್ತಕ ಖರೀದಿಸ ಬಯಸುವವರು ಅಂಕಿತ ಪ್ರಕಾಶನಕ್ಕೆ ದೂರವಾಣಿ ಕರೆಮಾಡಿ ವಿವರ ಪಡೆದುಕೊಳ್ಳಬಹುದು : 080- 2661 7100 ಅಥವಾ 080-2661 7755.

ಭೂಮಿ ಬುಕ್ಸ್ ವಿಳಾಸ : 150, ಮೊದಲನೇ ಮುಖ್ಯ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು, 560 020 ಇಮೇಲ್ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X