• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಕನ್ನಡ ಕಾದಂಬರಿ ಲೋಕದಲ್ಲಿ'ಯ ಒಳನೋಟಗಳು

By * ಜಿ.ಎಸ್.ಆಮೂರ, ಧಾರವಾಡ
|

ಕನ್ನಡ ಸಾಹಿತ್ಯ ರಂಗ ತನ್ನ ನಾಲ್ಕನೆಯ ವಸಂತ ಸಾಹಿತ್ಯೋತ್ಸವದ ಸಂದರ್ಭದಲ್ಲಿ ಇತ್ತೀಚಿನ ಕನ್ನಡ ಕಾದಂಬರಿಗಳನ್ನು ಕುರಿತು ಅಮೆರಿಕೆಯಲ್ಲಿ ವಾಸವಾಗಿರುವ ಲೇಖಕರೇ ಬರೆದ ಬರಹಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸುತ್ತಿರುವುದು ಸಂತೋಷದ ಸಂಗತಿ. ಸಾಹಿತ್ಯರಂಗ ಈಗಾಗಲೇ ಕುವೆಂಪು ಸಾಹಿತ್ಯ ಸಮೀಕ್ಷೆ (2004), ಆಚೀಚೆಯ ಕತೆಗಳು (2005) ಹಾಗೂ ನಗೆಗನ್ನಡಂ ಗೆಲ್ಗೆ (2007) ಎಂಬ ಮೂರು ಒಳ್ಳೆಯ ಪುಸ್ತಕಗಳನ್ನು ಹೊರ ತಂದಿದೆ. ಈ ಪ್ರಕಟಣೆಗಳಿಗೆ ಕನ್ನಡ ಓದುಗರಿಂದ ಪ್ರೋತ್ಸಾಹವೂ ದೊರೆತಿದೆ. ಅಮೆರಿಕೆಯಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಸಾಹಿತ್ಯಾಸಕ್ತಿಯನ್ನು ಹುಟ್ಟಿಸಿ, ಅದರ ಅಭಿವ್ಯಕ್ತಿಗಾಗಿ ವೇದಿಕೆಯನ್ನು ಒದಗಿಸುತ್ತಿರುವ ಸಾಹಿತ್ಯರಂಗದ ಪರಿಶ್ರಮ ಮೆಚ್ಚುವಂಥದ್ದು. ಈ ಸಂಘದ ಪ್ರಮುಖ ಕಾರ್ಯಕರ್ತರಲ್ಲೊಬ್ಬರಾದ ಎಚ್.ವೈ. ರಾಜಗೋಪಾಲರೊಡನೆ ನನ್ನ ಸ್ನೇಹ 1973ರಷ್ಟು ಹಳೆಯದು. ಹೋದಸಲ ನಾನು ಅಮೆರಿಕೆಯಲ್ಲಿದ್ದಾಗ ಶಶಿಕಲಾ ಚಂದ್ರಶೇಖರ ಹಾಗೂ ಮೈ. ಶ್ರೀ. ನಟರಾಜರ ಪರಿಚಯವಾಯಿತು. ಈ ಪುಸ್ತಕದ ಯೋಜನೆಯ ಹಂತದಲ್ಲಿ ನಾನು ಪಾಲ್ಗೊಂಡಿದ್ದರಿಂದ ಮುನ್ನುಡಿಯ ರೂಪದಲ್ಲಿ ಎರಡು ಮಾತುಗಳನ್ನು ಹೇಳಲು ಸಂತೋಷದಿಂದಲೇ ಒಪ್ಪಿಕೊಂಡಿದ್ದೇನೆ.

ಈ ಪುಸ್ತಕದ ಒಂದು ಎದ್ದು ಕಾಣುವ ವೈಶಿಷ್ಟ್ಯವೆಂದರೆ ಇಲ್ಲಿ ಓದಿಗಾಗಿ ಆಯ್ದುಕೊಂಡ ಎಲ್ಲ ಕಾದಂಬರಿಗಳು, ರಾಮಾನುಜನ್‌ರ ಮತ್ತೊಬ್ಬನ ಆತ್ಮಚರಿತ್ರೆ(1978)ಯಂಥ ಒಂದೆರಡು ಅಪವಾದಗಳನ್ನು ಬಿಟ್ಟರೆ, ಕಳೆದ ಮೂರು ದಶಕಗಳಲ್ಲಿ ಪ್ರಕಟವಾದವುಗಳು. ಇವುಗಳಲ್ಲಿ ಬಹಳಷ್ಟು ಕೃತಿಗಳ ಬಗ್ಗೆ ವಿಶೇಷ ಚರ್ಚೆ ನಡೆದಿಲ್ಲ. ಅಷ್ಟೇ ಮಹತ್ವದ ಇನ್ನೊಂದು ವೈಶಿಷ್ಟ್ಯವೆಂದರೆ, ಈ ಪುಸ್ತಕಕ್ಕೆ ಸೇರಿದ ಲೇಖನಗಳನ್ನು ಬರೆದವರಲ್ಲಿ ಹೆಚ್ಚಿನವರು ಸಾಹಿತ್ಯಕ್ಷೇತ್ರಕ್ಕೆ ಹೊರಗಿನವರು. ಗುರುಪ್ರಸಾದ ಕಾಗಿನೆಲೆ, ಮೈ.ಶ್ರೀ. ನಟರಾಜ, ಆಹಿತಾನಲ, ಟಿ.ಎನ್. ಕೃಷ್ಣರಾಜು ಇಂಥ ಕೆಲವರನ್ನು ಬಿಟ್ಟರೆ ಸಾಹಿತ್ಯೇತರ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದವರು, ಕನ್ನಡ ಓದುಗರಿಗೆ ಹೊಸಬರು. ಆದರೆ ಚೆನ್ನಾಗಿ ಬರೆಯಬಲ್ಲವರು. ಇವರನ್ನು ಒಳಗೊಳ್ಳುವ ಮೂಲಕ ಪುಸ್ತಕಕ್ಕೆ ತಾಜಾತನ ಹಾಗೂ ವೈವಿಧ್ಯ ಬಂದಿದೆ. ಕನ್ನಡದಲ್ಲಿ ವಿಮರ್ಶೆ ಬರೆಯುವವರಲ್ಲಿ ಹೆಚ್ಚಿನವರು ಸಾಹಿತಿಗಳೇ ಆಗಿರುವುದರಿಂದ ಅದಕ್ಕೆ ಎಷ್ಟೋ ಸಲ ಅಕೆಡೆಮಿಕ್ ಸ್ವರೂಪ ಬಂದುಬಿಡುತ್ತದೆ. ಗಮನಿಸಬೇಕಾದ ಒಂದು ಸಂಗತಿಯೆಂದರೆ ಈ ಸಂಗ್ರಹದ ಹಲವಾರು ಲೇಖಕರಿಗೆ ವಿಮರ್ಶೆಯಲ್ಲಿ ಆಸಕ್ತಿ ಇಲ್ಲದೇ ಇರುವುದು. ಯಾವುದಾದರೂ ಕಲಾಕೃತಿಯನ್ನು ವಿಮರ್ಶೆಗೆ ಒಳಪಡಿಸಬಹುದು ಎನ್ನುವುದರ ಬಗ್ಗೆ ನನಗೆ ನಂಬಿಕೆ ಹೊರಟುಹೋಗಿದೆ ಎಂಬ ಮಾತಿನಿಂದಲೇ ಎಂ.ಆರ್. ದತ್ತಾತ್ರ್ರಿಯವರು ಎನ್ನ ಭವದ ಕೇಡು ಕಾದಂಬರಿಯ ಬಗೆಗಿನ ತಮ್ಮ ಲೇಖನವನ್ನು ಪ್ರಾರಂಭಿಸುತ್ತಾರೆ. ವಿಮರ್ಶೆಯ ಅಗತ್ಯ ಒಂದು ಕೃತಿಗಾಗಲಿ, ಅದರ ಓದುಗರಿಗಾಗಲಿ ಇಲ್ಲ ಎಂಬ ನಂಬುಗೆಯನ್ನು ಹೇಳಿಕೊಳ್ಳುವುದು ಪುರುಷೋತ್ತಮದ ಬಗ್ಗೆ ಬರೆದ ಮೀರಾ ಪಿ. ಆರ್ ಆವರಿಗೆ ಅವಶ್ಯವೆನಿಸಿದೆ. ಹಾಗೆಯೇ, ಹಳ್ಳ ಬಂತು ಹಳ್ಳ ಕಾದಂಬರಿಯ ಬಗ್ಗೆ ಬರೆಯುತ್ತ ವಿಮರ್ಶೆ ಸಾಧ್ಯವೇ ಇಲ್ಲ. ಇದು ನನ್ನ ಅನಿಸಿಕೆಗಳು' ಎಂದು ವಲ್ಲೀಶ ಶಾಸ್ತ್ರಿ ಸ್ಪಷ್ಟಗೊಳಿಸುತ್ತಾರೆ. ಬಹುಶಃ ವಿಮರ್ಶೆ' ಎಂಬ ಪದದ ಅರ್ಥವ್ಯಾಪ್ತಿಯ ಬಗ್ಗೆ ಸರಿಯಾದ ಕಲ್ಪನೆಯ ಅಭಾವದಲ್ಲಿ ಇಂಥ ಮಾತುಗಳು ಬಂದಿರಬೇಕು. ಸಾಹಿತ್ಯದ ಪ್ರಾಮಾಣಿಕ ಅನುಭವದ ಯಾವ ಅಭಿವ್ಯಕ್ತಿಯೇ ಇರಲಿ ಅದು ವಿಮರ್ಶೆಯೇ.

ಈ ಪುಸ್ತಕದ ಲೇಖನಗಳಲ್ಲಿ ಹೆಚ್ಚಿನವು ಪರಿಚಯಾತ್ಮಕ ಬರಹಗಳು. ಇಲ್ಲಿ ಚರ್ಚಿಸಲಾದ ಹಲವಾರು ಕಾದಂಬರಿಗಳು ತೀರ ಇತ್ತೀಚಿನವಾದುದರಿಂದ, ಎಂದರೆ ಹೊಸ ಶತಮಾನದ ಮೊದಲ ದಶಕದಲ್ಲಿ ರಚಿತವಾದವುಗಳಾದುದರಿಂದ ಇದು ಅನಿವಾರ್ಯವಷ್ಟೇ ಅಲ್ಲ, ಉಪಯುಕ್ತವೂ ಆಗಿದೆ. ಒಂದು ಕಾದಂಬರಿಯನ್ನು ಸಮರ್ಪಕವಾಗಿ ಪರಿಚಯಿಸುವುದು ಸುಲಭದ ಕೆಲಸವೇನಲ್ಲ. ಒಂದು ಕೃತಿಯನ್ನು ಸರಿಯಾಗಿ ತಿಳಿದುಕೊಳ್ಳದೆಯೇ ಅದನ್ನು ಪರಿಚಯಿಸಲಾಗದು. ಕೃತಿ ಹೊಸದಿದ್ದರಂತೂ ಈ ಸಮಸ್ಯೆ ಇನ್ನಷ್ಟು ಕಠಿಣವಾಗುತ್ತದೆ. ಆದರೆ ಈ ಸಂಗ್ರಹದ ಲೇಖಕರು ಈ ಕಾರ್ಯವನ್ನು ಸಮರ್ಥವಾಗಿ ನೆರವೇರಿಸಿದ್ದಾರೆ. ಮಧು ಕೃಷ್ಣಮೂರ್ತಿಯವರ, ಕುಂ.ವೀ. ಅವರ ಅರಮನೆ ಅನುಭವ ಮತ್ತು ಪ್ರತಿಕ್ರಿಯೆ', ಶ್ರೀಕಾಂತ ಬಾಬು ಅವರ ಅವಧೇಶ್ವರಿ', ತ್ರಿವೇಣಿ ಶ್ರೀನಿವಾಸರಾವ್ ಅವರ ನಾ ಕಂಡ ಅಶ್ವಮೇಧ', ವಿಶ್ವನಾಥ ಹುಲಿಕಲ್ ಅವರ ವಿವೇಕ ಶಾನಭಾಗರ ಒಂದು ಬದಿಯ ಕಡಲು', ಟಿ.ಎನ್. ರಾಜಶೇಖರರು ಬರೆದ ಶಾಂತಿನಾಥ ದೇಸಾಯಿಯವರ ಮೇರುಕೃತಿ ಓಂ ಣಮೋ', ಅಲಮೇಲು ಆಯ್ಯಂಗಾರ್‌ರವರ ದೇವನೂರ ಮಹಾದೇವರ ಕುಸುಮಬಾಲೆ', ಯಶವಂತ ಚಿತ್ತಾಲರ ಕೇಂದ್ರ ವೃತ್ತಾಂತ' ಮತ್ತು ಅನಂತಮೂತಿರ್ಯಯವರ ದಿವ್ಯ'ಗಳನ್ನು ಕುರಿತ ಆಹಿತಾನಲರ ಲೇಖನಗಳು, ಮೀರಾ ಪಿ. ಆರ್. ಅವರ ಪುರುಷೋತ್ತಮ', ಮಾಲಾ ರಾವ್ ಅವರ ಪ್ರಸನ್ನರ ಬಾಲಗೋಪಾಲ ಒಂದು ಇಣುಕು ನೋಟ', ಜ್ಯೋತಿ ಮಹದೇವ ಅವರ ತೇರು ನನ್ನ ನೋಟದಲ್ಲಿ', ಪ್ರತಿಭಾ ಭಾಗವತರ ತೊಟ್ಟಿಲು ಒಂದು ಅವಲೋಕನ', ಶಾಂತಲಾ ಭಂಡಿಯವರ ಜೋಗಿಯವರ ಯಾಮಿನಿಯೊಂದಿಗೆ ಮುಖಾಮುಖಿ', ನಳಿನಿ ಮೈಯ ಅವರ ಶಿಖರಸೂರ್ಯ' ಹಾಗೂ ವಲ್ಲೀಶ ಶಾಸ್ತ್ರಿಯವರ ಹಳ್ಳ ಬಂತು ಹಳ್ಳ' ಇಂಥ ಲೇಖನಗಳು ವಿಮರ್ಶೆಯ ಪ್ರಾಥಮಿಕ ಕರ್ತವ್ಯವನ್ನು ಸಮರ್ಥವಾಗಿ ಹಾಗೂ ಅಚ್ಚುಕಟ್ಟಿನಿಂದ ನೆರವೇರಿಸುತ್ತವೆ.

ಆದರೆ ಕೃತಿಗಳೊಡನೆ ಇನ್ನೂ ಹೆಚ್ಚು ಗಂಭೀರವಾದ ತೊಡಗಿಕೊಳ್ಳುವಿಕೆಯನ್ನು ತೋರುವ ಹಲವಾರು ಲೇಖನಗಳೂ ಈ ಪುಸ್ತಕದಲ್ಲಿವೆಯೆನ್ನುವುದು ಮಹತ್ವದ್ದಾಗಿದೆ. ಗುಂಡೂ ಶಂಕರ ಮತ್ತು ಶೈಲಜಾ ಶಂಕರರ ಸಾಹಿತ್ಯ, ಧರ್ಮ ಮತ್ತು ರಾಜಕೀಯ ಸಮಕಾಲೀನ ಸಾಹಿತ್ಯದಲ್ಲಿ ಭೈರಪ್ಪನವರ ಆವರಣದ ಸ್ಥಾನ', ಎಂ.ಆರ್. ದತ್ತಾತ್ರಿಯವರ ಎನ್ನ ಭವದ ಕೇಡು' ವಿರುದ್ಧ ಧ್ರುವಗಳ ಜಟಾಪಟಿಯ ವ್ಯಥೆ', ಎಚ್.ವೈ. ರಾಜಗೋಪಾಲರ ಗಾಂಧಿಯುಗಕ್ಕೆ ಕನ್ನಡಿ - ನಾಗವೇಣಿಯವರ ಗಾಂಧಿ ಬಂದ' ಮತ್ತು ವ್ಯಾಸರಾಯ ಬಲ್ಲಾಳರ ಹೆಜೆ', ಗುರುಪ್ರಸಾದ ಕಾಗಿನೆಲೆಯವರ ಲಂಕೇಶರ ಅಕ್ಕ', ಎಚ್.ವಿ. ರಂಗಾಚಾರ್ ಅವರ ಮಂದ್ರದಲ್ಲಿ ಕಲೆ ಮತ್ತು ಕಾಮ', ಟಿ.ಎನ್. ಕೃಷ್ಣರಾಜು ಅವರ ನೆನಪುಗಳ ದರ್ಪಣ ಲೋಕ ಮತ್ತೊಬ್ಬನ ಆತ್ಮಚರಿತ್ರೆ', ವಿಮಲಾ ರಾಜಗೋಪಾಲರ ಮಾನವೀಯ ಮಾಯಾಲೋಕ ಅಸಮಾನ ಬದುಕು' ಹಾಗೂ ಶಶಿಕಲಾ ಚಂದ್ರಶೇಖರ್ ಅವರ ನೇಮಿಚಂದ್ರರ ಯಾದ್ ವಶೇಮ್' ಇಂಥ ಲೇಖನಗಳಲ್ಲಿ ಗ್ರಹಿಕೆಯ ಸೂಕ್ಷ್ಮತೆ, ತಾತ್ವಿಕ ತಿಳಿವು ಮತ್ತು ಸಮಕಾಲೀನ ಸಂವೇದನೆಗಳು ಒಟ್ಟುಗೂಡಿದಾಗ ಉತ್ಪನ್ನವಾಗುವ ವಿಮರ್ಶೆಯ ಪ್ರಬುದ್ಧತೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಗುಂಡೂ ಶಂಕರ ಹಾಗೂ ಶೈಲಜಾ ಶಂಕರ ಅವರ ಆವರಣದ ವಿಶ್ಲೇಷಣೆ ಭೈರಪ್ಪನವರ ಈ ಕಾದಂಬರಿಯನ್ನು ಕುರಿತು ಬಂದ ಅತ್ಯುತ್ತಮ ಲೇಖನಗಳಲ್ಲೊಂದಾಗಿದೆ. ಭೈರಪ್ಪನವರ ಆವರಣ ಹಾಗೂ ಟರ್ಕಿಯ ಕಾದಂಬರಿಕಾರ ಅರ್ಹಸ್ ಪಮುಕ್‌ರ My Name is Red ಕಾದಂಬರಿಗಳನ್ನು ಕೇಂದ್ರದಲ್ಲಿಟ್ಟುಕೊಂಡು ಸಮಕಾಲೀನ ಜಗತ್ತಿನ ಅತ್ಯಂತ ಮಹತ್ವದ ಸಮಸ್ಯೆಯಾದ ಧಾರ್ಮಿಕ ಘರ್ಷಣೆಯ ಸಾಹಿತ್ಯಕ ಮತ್ತು ರಾಜಕೀಯ ಆಯಾಮಗಳನ್ನು ಶಂಕರ್ ದಂಪತಿ ಸಮರ್ಥವಾಗಿ ವಿಶ್ಲೇಷಿಸಿದ್ದಾರೆ. ಧಾರ್ಮಿಕ ಘರ್ಷಣೆಯ ಸ್ವರೂಪ ಈ ಎರಡೂ ಕಾದಂಬರಿಗಳಲ್ಲಿ ಬೇರೆ ಬೇರೆಯಾಗಿದ್ದರೂ ಕಲೆ ಹಾಗೂ ಚರಿತ್ರೆಗಳನ್ನು ಮುಖಾಮುಖಿಯಾಗಿಸುವ ಅವುಗಳ ತಂತ್ರದ ಮೂಲಕ ಹೋಲಿಕೆ ಸಾಧ್ಯವಾಗುತ್ತದೆ. ಪಮುಕ್‌ನ Redಗೆ ಹೋಲಿಸಿದಲ್ಲಿ ಆವರಣದಲ್ಲಿ ಬರುವ ಪಾತ್ರಗಳು ತೀರ ಏಕದೃಷ್ಟಿಯಿಂದ ಕೂಡಿ ಪೇಲವವಾಗಿ ಕಾಣುತ್ತವೆ. ಪ್ರೊ. ಶಾಸ್ತ್ರಿಯ ಪಾತ್ರವಂತೂ ಭಾರತದ ಪ್ರಗತಿಪರ ಪ್ರಾಜ್ಞನೊಬ್ಬನ ವಿಕಟ ಚರಿತ್ರೆ(cartoon)ಯಂತೆ ಕಾಣುತ್ತದೆ. ಲಕ್ಷ್ಮಿಯ ಬಾಹ್ಯಪ್ರಪಂಚ ತೀರ ಭಾವರೂಪಕವಾಗಿದೆ. ಅವಳ ಪಾತ್ರ ಯಾವ ರೀತಿಯಲ್ಲಿಯೂ ವಾಸ್ತವ ಪ್ರಜ್ಞೆಯನ್ನು ಬಿಂಬಿಸುವುದಿಲ್ಲ' ಎಂಬ ಒಳನೋಟ ಶಂಕರರಿಗೆ ಸಾಧ್ಯವಾಗುವುದು ಈ ಹೋಲಿಕೆಯ ಮೂಲಕವೇ. ಸಾಹಿತ್ಯಕ ದೃಷ್ಟಿಯಿಂದ ಈ ಎರಡು ಕಾದಂಬರಿಗಳನ್ನು ಹೋಲಿಸಿದಂತೆ ಅವುಗಳ ರಾಜಕೀಯ ಆಯಾಮಗಳನ್ನೂ ಶಂಕರ ಪರೀಕ್ಷಿಸುತ್ತಾರೆ. ಇಲ್ಲಿ ಅವರಿಗೆ ಸ್ಯಾಮ್ಯುಅಲ್ ಹಂಟಿಂಗ್‌ಟನ್‌ರ ನಾಗರಿಕತೆಗಳ ಸಂಘರ್ಷದ ತತ್ವ ಹಾಗೂ ಅದನ್ನು ವಿರೋಧಿಸಿದ ಎಡ್ವರ್ಡ್ ಸೈದ್ ಹಾಗೂ ಅಮರ್ತ್ಯಸೇನ್‌ರ ವಿಚಾರಗಳು ಉಪಯುಕ್ತವಾಗುತ್ತವೆ. ಭೈರಪ್ಪನವರ ಪಾತ್ರಗಳು ಮೂಲತಃ ರೂಪಿತವಾಗಿರುವುದು ಲೇಖಕರ ಧಾರ್ಮಿಕ ಅನನ್ಯತೆಯ ಮತ್ತು ಅವರ ಅಸ್ಮಿತೆ ನಂಬಿಕೆಯ ಮೇಲೆ, ಹಂಟಿಂಗ್‌ಟನ್ ಅವರ ಆಲೋಚನಾ ಧಾಟಿಯಲ್ಲಿ, ಇದಕ್ಕೆ ತೀವ್ರ ವಿರೋಧವಾಗಿ, ಪಮುಕರ ಪಾತ್ರಗಳು ರೂಪಿತವಾಗಿರುವುದು ಕೇವಲ ಧಾರ್ಮಿಕ ಅನನ್ಯತೆಯ ಹಿನ್ನೆಲೆಯಲ್ಲಲ್ಲ. ಅದಕ್ಕೂ ಹೆಚ್ಚಾಗಿ ಇವರ ಕಲಾತ್ಮಕ, ಲೌಕಿಕ, ಲೈಂಗಿಕ ಮುಂತಾದ ಆಯಾಮಗಳ ಹಿನ್ನೆಲೆಯಲ್ಲಿ. ಪಮುಕ್‌ರ ಪಾತ್ರಗಳಲ್ಲಿ ಸೇನ್ ಮತ್ತು ಸೈದ್ ಅವರ ಆಲೋಚನಾ ಧಾಟಿಯನ್ನು ಕಾಣಬಹುದು' ನವ್ಯೋತ್ತರ ಚಿಂತನೆಯ ಬೆಳಕಿನಲ್ಲಿ ಹಾಗೂ ತೌಲನಿಕ ಪರಿಪ್ರೇಕ್ಷ್ಯದಲ್ಲಿ ಆವರಣವನ್ನು ಓದುವ ಮೂಲಕ ಶಂಕರ್ ಅವರಿಗೆ ಹೊಸ ಒಳನೋಟಗಳು ಲಭ್ಯವಾಗಿವೆ.

ಮುನ್ನುಡಿಯ ಮುಂದುವರಿದ ಭಾಗ »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more