• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದ ಬೀಸಣಿಗೆ

By Staff
|

ದಟ್ಸ್ ಕನ್ನಡ ಅಂತರ್ಜಾಲ ತಾಣದಲ್ಲಿ 'ಜಾಲತರಂಗ' ಅಂಕಣದಲ್ಲಿ ಪ್ರಕಟವಾದ ಡಾ. ಮೈಶ್ರೀ ನಟರಾಜ್ ಅವರ 55 ವಿಭಿನ್ನ ಲೇಖನಗಳ ಸಂಕಲನವೇ 'ಜಾಲತರಂಗಿಣಿ'. ಈ ಪುಸ್ತಕ ಮೇ 30 ಮತ್ತು 31ರಂದು ಅಮೆರಿಕಾದಲ್ಲಿ ನಡೆಯುತ್ತಿರುವ 4ನೇ ವಸಂತ ಸಾಹಿತ್ಯೋತ್ಸವದಲ್ಲಿ ಬಿಡುಗಡೆಯಾಗುತ್ತಿರುವ ಪುಸ್ತಕಗಳಲ್ಲೊಂದು. ನಟರಾಜ್ ಅವರನ್ನು ಪ್ರತ್ಯಕ್ಷ ಕಂಡಿರದಿದ್ದರೂ ಖ್ಯಾತ ಲೇಖಕ, ಪ್ರಾಧ್ಯಾಪಕ, ವಿಮರ್ಶಕರಾದ ಡಾ. ಸಿಎನ್ ರಾಮಚಂದ್ರನ್ ಅವರು 'ಜಾಲತರಂಗಿಣಿ'ಗೆ ಪ್ರೀತಿಯಿಂದ ಮುನ್ನುಡಿ ಬರೆದಿದ್ದಾರೆ.

* ಡಾ. ಸಿ. ಎನ್. ರಾಮಚಂದ್ರನ್

ತಮ್ಮ ಚೀನಾ ದೇಶದ ಬೌದ್ಧ ಯಾತ್ರಿಕರು' ಎಂಬ ಗ್ರಂಥದಲ್ಲಿ, ಫಾಹಿಯಾನ್ ಎಂಬ ಚೀನಾ ದೇಶದ ಯಾತ್ರಿಕನ ಬಗ್ಗೆ ಜಿ.ಪಿ. ರಾಜರತ್ನಂ ಒಂದು ಘಟನೆಯನ್ನು ಉಲ್ಲೇಖಿಸುತ್ತಾರೆ. ತನ್ನ ದಕ್ಷಿಣ ಭಾರತದ ಯಾತ್ರೆಯಲ್ಲಿ ಫಾಹಿಯಾನ್ ಒಮ್ಮೆ ಒಂದು ದೊಡ್ಡ ಜಾತ್ರೆಗೆ ಹೋಗುತ್ತಾನೆ. ಅಲ್ಲಲ್ಲಿ ಸುತ್ತಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಒಂದು ದೊಡ್ಡ ಅಂಗಡಿಯ ಮುಂದೆ ನಿಂತುಬಿಡುತ್ತಾನೆ; ಸ್ವಲ್ಪ ಹೊತ್ತಿನ ನಂತರ ತಡೆಯಲಾಗದೆ ಅಳಲು ಪ್ರಾರಂಭಿಸುತ್ತಾನೆ. ಏನಾಯಿತೆಂದು ಅಕ್ಕಪಕ್ಕದವರು ಕೇಳಿದಾಗ ಅವನು, ಮಾರಾಟಕ್ಕಿದ್ದ ಒಂದು ಬೀಸಣೆಗೆಯತ್ತ ಬೆರಳು ಮಾಡಿ ಅದು ತನ್ನ ದೇಶದಲ್ಲಿ ತಯಾರಾದ ಬೀಸಣಿಗೆ ಮತ್ತು ಅದನ್ನು ನೋಡಿದ ಕೂಡಲೇ ತನ್ನ ದೇಶ ನೆನಪಿಗೆ ಬಂದು ತಾನು ಭಾವಪರವಶನಾದೆನೆಂದು ಗದ್ಗದಿತನಾಗಿ ಹೇಳುತ್ತಾನೆ.

ನನಗೆ ಈ ಘಟನೆ ವಲಸೆಗಾರರ/ಪ್ರವಾಸಿಗರ ಸಂಕೀರ್ಣ ಅನುಭವದ ಅದ್ಭುತ ರೂಪಕದಂತೆ ಕಾಣುತ್ತದೆ. ವಲಸಿಗರು/ಪ್ರವಾಸಿಗಳು ಸ್ವಯಿಚ್ಛೆಯಿಂದಲೇ ಅನೇಕ ಕಾರಣಗಳಿಗಾಗಿ ತಮ್ಮ ಊರು-ದೇಶಗಳನ್ನು ಬಿಟ್ಟು ಎಲ್ಲೆಲ್ಲಿಗೋ ಹೋಗುತ್ತಾರೆ; ಆದರೆ ಹೊರಗಿದ್ದಾಗಲೆಲ್ಲಾ ತಮ್ಮ ನಾಡಿನ, ತಮ್ಮ ಭಾಷೆ-ಸಂಸ್ಕೃತಿಗಳ ನೆನಪು ಅವರನ್ನು ಸದಾ ಕಾಡುತ್ತಿರುತ್ತದೆ. ಪ್ರಾಯಃ, ಈ ಕಾರಣಕ್ಕಾಗಿಯೇ, ಇಂಗ್ಲೀಷ್‌ನಲ್ಲಿ ಟ್ರ್ಯಾವೆಲ್'(ಪ್ರಯಾಣ) ಮತ್ತು ಟ್ರವೇಲ್' (ನೋವು, ಕ್ಲೇಶ) ಈ ಎರಡೂ ಪದಗಳು ಒಂದೇ ಮೂಲದಿಂದ ಬಂದಿವೆ. ಈ ರೀತಿ ನೋವು-ಕ್ಲೇಶಗಳಿಲ್ಲದ ಪ್ರವಾಸ/ವಲಸೆ ಸಾಧ್ಯವೇ ಇಲ್ಲದಿರುವುದಕ್ಕೆ ಕಾರಣ ಪ್ರವಾಸಿ/ವಲಸಿಗ ಎಲ್ಲಿ ಹೋದರೂ ತನ್ನೊಡನೆ ಹೊತ್ತೊಯ್ಯುವ ಗಂಟು-ಮೂಟೆಗಳು -- ತನ್ನ ಮನೆಯ, ಸಮಾಜದ, ಭಾಷೆಯ ಅನೇಕಾನೇಕ ಅನುಭವಗಳು ಹುಟ್ಟಿಸಿದ ಆಸೆ-ಆಕಾಂಕ್ಷೆಗಳ, ನಿರೀಕ್ಷೆಗಳ, ಭೀತಿಯ, ದೊಡ್ಡ ಗಂಟು-ಮೂಟೆಗಳು. ಈ ಗಂಟು-ಮೂಟೆಗಳನ್ನು ಹೊತ್ತುಕೊಂಡೇ ಪ್ರತಿಯೊಬ್ಬ ವಲಸಿಗನೂ ತನ್ನ ಜನ್ಮಭೂಮಿಯಿಂದ ಹೊರಗೆ ಹೋಗುತ್ತಾನೆ. ಆದರೆ, ಕೆಲ ವಲಸಿಗರು ತಮ್ಮ ಬದುಕಿನುದ್ದಕ್ಕೂ ಈ ಗಂಟು-ಮೂಟೆಗಳನ್ನು ಹೊತ್ತುಕೊಂಡೇ ಬೆನ್ನು ಬಗ್ಗಿಸಿ ತಿರುಗಿದರೆ, ಮತ್ತೆ ಕೆಲವರು ತಮ್ಮ ಉದ್ದೇಶಿತ ಸ್ಥಳಕ್ಕೆ ಹೋದಕೂಡಲೇ ಆ ಗಂಟು-ಮೂಟೆಗಳನ್ನು ಬಿಚ್ಚಿ, ತಮಗೆ ಅವಶ್ಯಕವಾದದ್ದನ್ನು ಇಟ್ಟುಕೊಂಡು ಅವುಗಳನ್ನು ರಚನಾತ್ಮಕವಾಗಿ ಉಪಯೋಗಿಸುತ್ತಾ, ಉಳಿದವುಗಳನ್ನು ಎಸೆದು, ನೆಮ್ಮದಿಯಿಂದ ಬದುಕುತ್ತಾರೆ. ಈ ನೆಲೆಯಲ್ಲಿ ಡಾ. ನಟರಾಜ್ ಎರಡನೆಯ ವರ್ಗಕ್ಕೆ ಸೇರುತ್ತಾರೆ.

ಹಾಸನದಲ್ಲಿ ಹುಟ್ಟಿ ಬೆಳೆದ ನಟರಾಜ್, ಬೆಂಗಳೂರು ಮತ್ತು ಮುಂಬಯಿಯಲ್ಲಿ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉಚ್ಚ ಶಿಕ್ಷಣ ಪಡೆದು, ಅನಂತರ ಅಮೆರಿಕಾದಲ್ಲಿ ಪಿಟ್ಸ್‌ಬರ್ಗ್ ವಿ.ವಿ.ಯಿಂದ ಪಿ.ಎಚ್.ಡಿ. ಪದವಿ ಪಡೆದು, ಅಲ್ಲಿಯ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಾ, ಕಳೆದ ನಾಲ್ಕು ದಶಕಗಳಿಂದ ಅಮೆರಿಕಾದಲ್ಲಿಯೇ ನೆಲೆಸಿದ್ದಾರೆ --ಅಮೆರಿಕನ್ ಪೌರತ್ವವನ್ನೂ ಪಡೆದು. ಆದರೆ, ಭಾರತದಿಂದ ತಂದ ತಮ್ಮ ರಚನಾತ್ಮಕ ಗಂಟು-ಮೂಟೆಗಳನ್ನು ಇನ್ನೂ ಅವರು ಎಸೆದು ಕೈತೊಳೆದುಕೊಂಡಿಲ್ಲ. ಅಮೆರಿಕಾದಲ್ಲಿ ಕನ್ನಡ ಸಂಘಗಳನ್ನು ಕಟ್ಟಿ, ಅಲ್ಲಿಗೆ ಬಂದ ಕನ್ನಡ ಕವಿ-ಕಲಾವಿದರನ್ನು ಆದರಿಸುತ್ತಾ, ಸೃಷ್ಟಿಶೀಲ ಲೇಖಕರಾಗಿಯೂ ತಮ್ಮನ್ನು ಅವರು ಕನ್ನಡದಲ್ಲಿ ಗುರುತಿಸಿಕೊಂಡಿದ್ದಾರೆ. ಸಂಗೀತ-ಸಾಹಿತ್ಯಗಳೆರಡರಲ್ಲಿಯೂ ಸಮಾನ ಆಸಕ್ತಿ-ಪಾಂಡಿತ್ಯವುಳ್ಳ ನಟರಾಜ್ ಇದುವರೆಗೆ ಎರಡು ಕವನ ಸಂಕಲನಗಳನ್ನು ಹಾಗೂ ಮೂರು ನಾಟಕಸಂಕಲನಗಳನ್ನೂ ಪ್ರಕಟಿಸಿದ್ದಾರೆ. 2003ರಿಂದ ದಟ್ಸ್‌ಕನ್ನಡ.ಕಾಮ್' ಎಂಬ ಅಂತರ್ಜಾಲ ತಾಣದಲ್ಲಿ ಒಂದು ಅನಿಯಮಿತ ಅಂಕಣವನ್ನೂ ಬರೆಯುತ್ತಿರುವ ಇವರು 2006ರಲ್ಲಿ, ಅಲ್ಲಿಯವರೆಗೆ ಬರೆದಿದ್ದ ಎಲ್ಲಾ ಲೇಖನಗಳನ್ನು ಜಾಲತರಂಗ' ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಅನಂತರ ಬರೆದ ಲೇಖನಗಳ ಸಂಕಲನ ಸದ್ಯದಲ್ಲಿಯೇ ಹೊರಬರುತ್ತಿರುವ ಜಾಲತರಂಗಿಣಿ'.

ಜಾಲತರಂಗಿಣಿ'ಯಲ್ಲಿ ಭಿನ್ನ ಭಿನ್ನ ಕ್ಷೇತ್ರಗಳಿಗೆ ಸಂಬಂಧಿಸಿದ ಒಟ್ಟು 55 ಲೇಖನಗಳಿವೆ. ಇವುಗಳಲ್ಲಿ, ಇಂತಹ (ಎಂದರೆ ವಲಸೆಗಾರರ) ಲೇಖನಗಳಲ್ಲಿ ನಾವು ನಿರೀಕ್ಷಿಸುವಂತಹ ಅಮೆರಿಕನ್ ಅನುಭವಗಳು', ಸಾಂದರ್ಭಿಕ ಲೇಖನಗಳು ಮತ್ತು ಇತ್ತೀಚೆಗೆ ತುಂಬಾ ಜನಪ್ರಿಯವಾಗಿರುವ ವ್ಯಕ್ತಿತ್ವ ವಿಕಸನ' ಲೇಖನಗಳಿವೆ; ಹಾಗೆಯೇ, ನಾವು ನಿರೀಕ್ಷಿಸದ ಹಾಗೂ ಗಂಭೀರ ಚಿಂತನೆಯನ್ನೊಳಗೊಂಡ ಅನೇಕ ಲೇಖನಗಳೂ ಇವೆ. ಇಂತಹವುಗಳನ್ನು ನಾವು ಅ)ವೈಚಾರಿಕ ಲೇಖನಗಳು, ಆ) ಕನ್ನಡ ಸಾಹಿತ್ಯ-ಸಂಸ್ಕೃತಿಗಳನ್ನು ಕುರಿತ ಲೇಖನಗಳು ಎಂದು ಎರಡು ವರ್ಗಗಳಲ್ಲಿ, ಸಾಧಾರಣವಾಗಿ, ಗುರುತಿಸಬಹುದು. ಇವೆಲ್ಲಕ್ಕಿಂತಲೂ ಭಿನ್ನವಾದ, ಇವರೇ ರಚಿಸಿದ ರಾಮಾಯಣ: ಸುಂದರಕಾಂಡ' ಎಂಬ ಖಂಡಕಾವ್ಯವೂ ಇಡಿಯಾಗಿ ಇಲ್ಲಿ ಬಂದಿದೆ.

ಮುಂದುವರೆಯುವ ಮೊದಲು, ವಲಸಿಗರಾದ ಇವರು ಅಮೆರಿಕನ್ ಸಮಾಜವನ್ನು ಕುರಿತು ಬೆಳೆಸಿಕೊಂಡಿರುವ ದೃಷ್ಟಿಕೋನದ ಬಗ್ಗೆ ಒಂದೆರಡು ಮಾತು ಹೇಳಬೇಕು. ವಿದ್ಯಾರ್ಥಿಯಾಗಿ ಹಾಗೂ ಅಧ್ಯಾಪಕನಾಗಿ ಏಳು ವರ್ಷಗಳನ್ನು ಅಮೆರಿಕಾದಲ್ಲಿ ಕಳೆದ ನಾನು, ನನ್ನ ಅನುಭವವನ್ನಾಧರಿಸಿ ಹೇಳಬಹುದಾದರೆ, ಇವರ ದೃಷ್ಟಿಕೋನ ಅಥವಾ ಭಿನ್ನ ಸಂಸ್ಕೃತಿಗಳನ್ನು ಕುರಿತ ನಿಲುವು ತುಂಬಾ ಆರೋಗ್ಯಕರವಾದದ್ದು. ನನಗೆ, ಮೊದಲ ಎರಡು-ಮೂರು ವರ್ಷಗಳವರೆಗೆ ಅಮೆರಿಕನ್ ಸಮಾಜವನ್ನು ಕುರಿತು ಇನ್ನಿಲ್ಲದ (ಕಾರಣವಿಲ್ಲದ) ತೀವ್ರ ಅಸಮಾಧಾನವಿತ್ತು. ನಾನಾಗಿಯೇ ಬಯಸಿ, ಬಯಸಿ ಅಲ್ಲಿಗೆ ಹೋಗಿದ್ದರೂ, ಅಲ್ಲಿಯ ಒಂಟಿತನ, (ನಾನು ಗ್ರಹಿಸಿದಂತೆ) ಅಮೆರಿಕನ್ನರ ಗರ್ವ-ಅಧಿಕಾರ, ಎರಡು ತಿಂಗಳು (ಕಾರಿಲ್ಲದುದರಿಂದ) ಮಂಡಿಯವರೆಗಿನ ಹಿಮದಲ್ಲಿ ನಡೆಯುವ ಯಾತನೆ, ಇವೆಲ್ಲವೂ ಸೇರಿ ಅಮೆರಿಕಾ ರಾಷ್ಟ್ರದ ಬಗ್ಗೆಯೇ ನನಗೆ ಅಸಾಧ್ಯ ಕೋಪವಿತ್ತು. (ನಟರಾಜ್ ಒಂದು ಲೇಖನದಲ್ಲಿ ದಾಖಲಿಸಿರುವಂತೆ, ನನಗೂ ಪ್ರಾರಂಭದಲ್ಲಿ ಅವರ ಫುಟ್‌ಬಾಲ್ ಆಟ ರಾಕ್ಷಸರ ಆಟದಂತೆ ಕಂಡಿತ್ತು.) ನನ್ನ ಭಾವನವರಾದ ಡಾ. ಅನಂತಕೃಷ್ಣ ಆಗ ಅಲ್ಲಿರದಿದ್ದರೆ ನನಗೆ ಏನಾಗುತ್ತಿತ್ತೋ ಗೊತ್ತಿಲ್ಲ. ಆದರೆ, ಪ್ರಾರಂಭದಿಂದಲೂ, ನಟರಾಜ್ ತಾವಲ್ಲಿಗೆ ಬಂದಿರುವುದಕ್ಕೆ ಕಾರಣ ತಾವೇ ಹೊರತು, ತಮಗೆ ಅಲ್ಲಿ ದೊರಕಬಹುದಾದ ಸ್ಥಾನ-ಮಾನಗಳೇ ಹೊರತು ಮತ್ತೇನೂ ಅಲ್ಲ--ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಾರೆ. ಕಾನೂನಿನ ದೃಷ್ಟಿಯಲ್ಲಿ ನಾವು ಅಮೆರಿಕನ್ ಆಗಿದ್ದರೂ ಹೃದಯಾಂತರಾಳದಲ್ಲಿ ಇನ್ನೂ ಭಾರತೀಯರಾಗೇ ಇದ್ದೀವಾ?' ಎಂದು ಮತ್ತೆ ಮತ್ತೆ ತಮ್ಮನ್ನೇ ಕೇಳಿಕೊಳ್ಳುವ ಎಚ್ಚರ ಅವರಿಗಿದೆ; ಭಾರತೀಯರು ಹೊರುವ ಬ್ಯಾಗೇಜಿನ ಭಾರ ಪಾಶ್ಚಿಮಾತ್ಯರಿಗಿಲ್ಲ' ಎಂಬ ಅರಿವೂ ಅವರಿಗಿದೆ. ಆದುದರಿಂದಲೇ ಅವರಿಗೆ ಎರಡು ಸಂಸ್ಕೃತಿಗಳ ನಡುವೆ, ಸೇತುವೆಯಂತೆ, ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈಗ ಅವರ ಕೆಲವು ಪ್ರಮುಖ ಲೇಖನಗಳನ್ನು ನೋಡಬಹುದು.

ಅ) ವೈಚಾರಿಕ ಲೇಖನಗಳು : ಈ ವರ್ಗದಲ್ಲಿ ಅನೇಕ ಲೇಖನಗಳಿದ್ದರೂ, ನನಗೆ ಎರಡು ಲೇಖನಗಳನ್ನು ಇಲ್ಲಿ ಪ್ರಸ್ತಾಪಿಸಬೇಕೆನಿಸುತ್ತದೆ. ಮೊದಲನೆಯದು ನಾಲ್ಕು ವೃತ್ತಗಳ ವೃತ್ತಾಂತ.' ಒಂದು ಸಂದರ್ಭದಲ್ಲಿ, ಅಮೆರಿಕನ್ ಸೊಸೈಟಿ ಆಫ್ ಸಿವಿಲ್ ಎಂಜಿನಿಯರ್ಸ್ ಎಂಬ ಸಂಸ್ಥೆ ಲೀಡರ್‌ಶಿಪ್' ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಉಪನ್ಯಾಸಕನೊಬ್ಬನು ಎತ್ತಿದ ಪ್ರಶ್ನೆ ಮತ್ತು ನಡೆಸಿದ ಚರ್ಚೆ ಇವುಗಳನ್ನಾಧರಿಸಿರುವ ಲೇಖನ ಇದು. ಆ ಉಪನ್ಯಾಸಕನು ಅಭ್ಯರ್ಥಿಗಳನ್ನು ಒಂದು ಹಾಳೆಯಲ್ಲಿ ನಾಲ್ಕು ವೃತ್ತಗಳನ್ನು ರಚಿಸಲು ಹೇಳುತ್ತಾನೆ: ವ್ಯಕ್ತಿಗೆ ಸಂಬಂಧಿಸಿದ ಮೊದಲ ವೃತ್ತ, ಸಂಸಾರಕ್ಕೆ ಸಂಬಂಧಿಸಿದುದು ಎರಡನೆಯದು, ವೃತ್ತಿಗೆ ಸಂಬಂಧಿಸಿದುದು ಮೂರನೆಯದು ಮತ್ತು ನಾಲ್ಕನೆಯದು ಸಮುದಾಯಕ್ಕೆ ಸಂಬಂಧಿಸಿದುದು. ಪ್ರತಿಯೊಂದು ವೃತ್ತವೂ ಆ ವಸ್ತುವಿಗೆ ಎಷ್ಟು ಸಮಯವನ್ನು ಆ ಅಭ್ಯರ್ಥಿಗಳು ಮೀಸಲಿಡುತ್ತಾರೆಂಬುದನ್ನು ತನ್ನ ಗಾತ್ರದಲ್ಲಿ ಸೂಚಿಸುವಂತಿರಬೇಕು. ಲೇಖಕರು ಹೇಳುವಂತೆ, ಅಭ್ಯರ್ಥಿಗಳು ಈ ಚಟುವಟಿಕೆಯಿಂದ ಅರಿತುಕೊಂಡಿದ್ದೇನೆಂದರೆ, ವೃತ್ತಿಗಾಗಿ ಕಳೆಯುವ ಸಮಯವನ್ನು ಸೂಚಿಸುವ ವೃತ್ತ ಉಳಿದೆಲ್ಲವುಗಳಿಗಿಂತ ದೊಡ್ಡದಾಗಿರುತ್ತದೆ, ಮತ್ತು ನಾಲ್ಕನೆಯ ಸಮುದಾಯ-ಸೂಚಕ ವೃತ್ತ ಇರುವುದೇ ಇಲ್ಲ ಅಥವಾ ತುಂಬ ಚಿಕ್ಕದಾಗಿರುತ್ತದೆ. ಎಂದರೆ, ಶಿವರಾಮ ಕಾರಂತರು ಮತ್ತೆ ಮತ್ತೆ ಹೇಳುತ್ತಿದ್ದ ಸಾಮಾಜಿಕ ಋಣ'ವನ್ನು ತೀರಿಸುವ ಬಗೆ ಹೇಗೆ? ಇಂದಿನ ಕಾಲದಲ್ಲಿ, ಲೇಖಕರಿಗೆ/ಅಮೆರಿಕನ್ನರಿಗೇ ಅಲ್ಲದೆ ನಮಗೆಲ್ಲರಿಗೂ ಅತಿ ಪ್ರಸ್ತುತವಾಗುವ ಲೇಖನ ಇದು.

ಇದೇ ಬಗೆಯಲ್ಲಿ, ನಮ್ಮೆಲ್ಲರನ್ನೂ ಗಂಭೀರ ಚಿಂತನೆಗೆ ಹಚ್ಚುವ ಮತ್ತೊಂದು ಲೇಖನವೆಂದರೆ ಗಣರಾಜ್ಯೋತ್ಸವ 2007' ಮತ್ತು ಅದರ ಮುಂದುವರೆದ ಭಾಗ ಧರ್ಮಸಂಕಟ.' ಈ ಎರಡೂ ಲೇಖನಗಳು ಅಮೆರಿಕಾದಲ್ಲಿರುವ (ಅಥವಾ ಇತರ ರಾಷ್ಟ್ರಗಳಲ್ಲಿರುವ) ಭಾರತೀಯರ ಪ್ರಜ್ಞೆಯ ಬಗ್ಗೆ, ಕರ್ತವ್ಯದ ಬಗ್ಗೆ, ಅನೇಕ ಗಂಭೀರ ಪ್ರಶ್ನೆಗಳನ್ನೆತ್ತುತ್ತದೆ: ಅವುಗಳಲ್ಲಿ ಮುಖ್ಯವಾದುದೆಂದರೆ ಅಲ್ಲಿ ನೆಲೆಸಿರುವ ಭಾರತೀಯರ ಆದ್ಯ ನಿಷ್ಠೆ ಯಾವ ರಾಷ್ಟ್ರಕ್ಕಿರಬೇಕು? ಅಮೆರಿಕಾಕ್ಕೋ ಅಥವಾ ಭಾರತಕ್ಕೋ?' ಇವೇನೂ ಉತ್ತರಿಸಲು ಸುಲಭವಾದ ಪ್ರಶ್ನೆಗಳಲ್ಲ. ಏಕೆಂದರೆ, ನಮ್ಮ ಬೌದ್ಧಿಕ ಕೋಶ ಅಮೆರಿಕಾದತ್ತ ಎಳೆದರೆ ನಮ್ಮ ಭಾವಕೋಶ ಭಾರತದತ್ತ (ಕರ್ನಾಟಕದತ್ತ) ಎಳೆಯುತ್ತದೆ. ಆ ಕಾರಣದಿಂದಲೇ, ಅಮೆರಿಕಾದ ರಾಷ್ಟ್ರಗೀತೆಯನ್ನು ನಾವು ಜನಗಣಮನ...' ಹಾಡಿದಂತೆ ತಲ್ಲೀನರಾಗಿ ಹಾಡಲಾಗುವುದಿಲ್ಲ; ಅಮೆರಿಕಾದ ವಿರುದ್ಧ ಯಾವುದೇ ಕ್ಷೇತ್ರದಲ್ಲಾದರೂ ಭಾರತವು ಯಶಸ್ಸು ಕಂಡರೆ ನಮಗೆ ಸಂತೋಷವಾಗುತ್ತದೆ. ಇದು ನಿಜವಾದ ಧರ್ಮಸಂಕಟ ಮತ್ತು ಇದನ್ನು, ಓದುಗರೊಬ್ಬರು ಸೂಚಿಸಿದಂತೆ, ಆಧ್ಯಾತ್ಮಿಕತೆಯಿಂದ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ಲೇಖಕರು ಅರ್ಥಪೂರ್ಣವಾಗಿ ಹೇಳುವಂತೆ, ದೇಶವೆಂಬುದು ಕೇವಲ ಒಂದು ನೆಲವಲ್ಲ, ಅದು ಒಂದು ಭಾವನಾತ್ಮಕ ಶ್ರದ್ಧೆಯೂ ಹೌದು.'

ಆ) ಕನ್ನಡ ಸಾಹಿತ್ಯ, ಸಂಸ್ಕೃತಿ, ಇತ್ಯಾದಿ : ಡಾ. ನಟರಾಜ್ ಅವರ ಭಾವಕೋಶವನ್ನು ಭಾರತೀಯ ಸಂಗೀತ, ಸಾಹಿತ್ಯ-ಸಂಸ್ಕೃತಿಗಳು ಕಟ್ಟಿಕೊಟ್ಟಿರುವುದರಿಂದ, ಸಹಜವಾಗಿಯೇ, ಈ ಸಂಕಲನದ ಬಹುಪಾಲು ಲೇಖನಗಳು ಈ ಬಗೆಯ ಭಾವಕೋಶದಿಂದಲೇ ರೂಪಿಸಲ್ಪಟ್ಟಿವೆ. ಅಮೆರಿಕಾದಲ್ಲಿರುವ ಕನ್ನಡ ಸಂಘಗಳ ಕಾರ್ಯ, ಕನ್ನಡದ ಪ್ರಮುಖ ವ್ಯಕ್ತಿಗಳ ಪರಿಚಯ (ಪ್ರಸಿದ್ಧ ವೈಜ್ಞಾನಿಕ ಲೇಖಕ ಜಿ.ಟಿ.ಎನ್, ಅತ್ಯಂತ ಯಶಸ್ವಿ ಕನ್ನಡ ಧಾರಾವಾಹಿಗಳ ನಿರ್ಮಾಪಕ-ನಿರ್ದೇಶಕ ಟಿ. ಎನ್. ಸೀತಾರಾಮ್, ದಾಸವರೇಣ್ಯ ಪುರಂದರದಾಸರು, ಭೈರವಿ ಕೆಂಪೇಗೌಡರು, ...) ಮತ್ತು ಅನೇಕ ಕನ್ನಡ ಕೃತಿಗಳ ಕೃತಿನಿಷ್ಠ ವಿಮರ್ಶೆ, ಇತ್ಯಾದಿಗಳನ್ನೊಳಗೊಂಡ ಪ್ರಮುಖ ಲೇಖನಗಳು ಈ ಭಾಗದಲ್ಲಿವೆ.

ಬೆಂಗಳೂರಿನಲ್ಲಿದ್ದುಕೊಂಡು, ಅಮೆರಿಕಾದಲ್ಲಿ ನಡೆಯುವ ಕನ್ನಡ ಕಾರ್ಯಗಳನ್ನು (ಮುಖ್ಯವಾಗಿ ಸಮ್ಮೇಳನಗಳನ್ನು) ಸುಲಭವಾಗಿ ಜರಿಯುವವರಿಗೆ ಇಲ್ಲಿಯ ಎರಡು-ಮೂರು ಲೇಖನಗಳು ಸೂಕ್ತ ಉತ್ತರಗಳನ್ನು ಕೊಡುತ್ತವೆ. ವಾರ್ಷಿಕ-ದ್ವೈವಾರ್ಷಿಕ ಸಮ್ಮೇಳನಗಳನ್ನು ನಟರಾಜ್ ಭಾರತದಲ್ಲಿ ನಡೆಯುವ ರಥೋತ್ಸವಗಳಿಗೆ ಹೋಲಿಸುತ್ತಾ, ಅಮೆರಿಕಾದ ನಾನಾ ಮೂಲೆಗಳಲ್ಲಿ ಚದುರಿದ್ದರೂ ಕನ್ನಡ ನುಡಿಯ ಕಾರಣದಿಂದ ಬಂಧಿಸಲ್ಪಟ್ಟ ಅಮೆರಿಕನ್ನಡಿಗರು ಒಂದು ಛಾವಣಿಯಡಿ ಕೂಡಿ ಆಚರಿಸುವ ಹಬ್ಬ ಈ ಸಮ್ಮೇಳನಗಳು' ಎಂದು ಸ್ಪಷ್ಟಪಡಿಸುತ್ತಾರೆ. ಇದು ಕನ್ನಡ ಸಮ್ಮೇಳನ ಅಲ್ಲ, ಕನ್ನಡಿಗರ ...ಮೇಳ' ಎಂದು ವಿವರಿಸುತ್ತಾರೆ. ಈ ಸಂದರ್ಭದಲ್ಲಿ ನಾವು ಮರೆಯಬಾರದ ಒಂದು ಸತ್ಯವೆಂದರೆ, ಕರ್ನಾಟಕದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನಡಿ, ನಡೆಯುವ ವಾರ್ಷಿಕ ಅಖಿಲ ಭಾರತ ಸಾಹಿತ್ಯ ಸಮ್ಮೇಳನ'ಗಳೂ ಕಳೆದ ದಶಕದಿಂದ ಜಾತ್ರೆ'ಗಳೇ ಆಗುತ್ತಿವೆ; ಮತ್ತು ಅದಕ್ಕೆ ಸಂಯೋಜಕರು ಕೊಡುವ ಸಮರ್ಥನೆಗಳೂ ನಟರಾಜ್ ಕೊಡುವ ಸಮರ್ಥನೆಗಳೇ ಎಂಬ ಸತ್ಯ.

ಹಾಗೆಯೇ, ವ್ಯಕ್ತಿಗಳ ಬಗ್ಗೆ ಬರೆಯುವಾಗ ಲೇಖಕರ ಶೈಲಿ ಆಪ್ತವಾಗುತ್ತದೆ; ವ್ಯಕ್ತಿಯ ಸಾಧನೆಗಳನ್ನು ನಿಸ್ಸಂಕೋಚವಾಗಿ ಗುರುತಿಸುತ್ತದೆ. ಜಿ.ಟಿ.ಎನ್. ಅವರ ವ್ಯಕ್ತಿತ್ವವನ್ನು ತುಂಬು ಗೌರವದಿಂದ ಚಿತ್ರಿಸಿದರೆ, ಅವರ (ಲೇಖಕರ) ಸಹಪಾಠಿಯಾಗಿದ್ದ ಸೀತಾರಾಂ ಬಗ್ಗೆ ಅಭಿಮಾನದಿಂದ ಬರೆಯುತ್ತಾರೆ. ಒಂದೆರಡು ವೈಯಕ್ತಿಕ ದೌರ್ಬಲ್ಯಗಳಿಂದಾಗಿ ತಮ್ಮ ಅದ್ಭುತ ಪ್ರತಿಭೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ಹೋದ ಕೆಂಪೇಗೌಡರ ಬಗ್ಗೆ ವಿಷಾದದಿಂದ ಬರೆಯುತ್ತಾರೆ. ಅತ್ಯಂತ ಗೌರವಾದರಗಳನ್ನಿಟ್ಟುಕೊಂಡೇ ಪುರಂದರ ದಾಸರು ಇಂದು ಕೆಲವರು ಹೇಳುವಂತೆ ನಾಲ್ಕು ಲಕ್ಷದ ಎಪ್ಪತ್ತೈದು ಸಾವಿರ ಕೀರ್ತನೆಗಳನ್ನು ರಚಿಸಿರಲು ಸಾಧ್ಯವೇ ಇಲ್ಲ ಎಂದು ವಿವರವಾಗಿ ವಾದಿಸುತ್ತಾರೆ. ಇನ್ನೂ ಮುಂದುವರೆದು, ಇಂದು ನಮಗೆ ದಾಸರು ರಚಿಸಿದ ಕೃತಿಸಂಖ್ಯೆ ಮುಖ್ಯವಲ್ಲ, ಮುಖ್ಯವಾಗುವುದು ಆ ಕೃತಿಗಳ ಶ್ರೇಷ್ಠತೆ ಎಂದು ಖಚಿತವಾಗಿ ತೀರ್ಮಾನಿಸುತ್ತಾರೆ.

ಆವರಣ, ಬಿಳಿಯ ಚಾದರ, ಪುರುಷ ಸರಸ್ವತಿ ಇತ್ಯಾದಿ ಕೃತಿಗಳ ವಿಮರ್ಶೆಯಲ್ಲಿ ನಟರಾಜ್ ಅವರ ವಿಮರ್ಶನ ಪ್ರೌಢಿಮೆ ಎದ್ದು ಕಾಣುತ್ತದೆ. ಆವರಣದ ಅಬ್ಬರದ ಪ್ರಚಾರವನ್ನೂ ನಿರ್ಲಕ್ಷಿಸಿ, ಅದನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುತ್ತಾ, ಪುಸ್ತಕ ಓದಿ ಮುಗಿಸಿದ ಮೇಲೆ, ಒಂದು ರೀತಿಯ ವಿಷಾದ ಮತ್ತು ಖಾಲೀತನದ ಅನುಭವವಾಯಿತೇ ವಿನಃ ರಸಾಸ್ವಾದನೆಯ ತೃಪ್ತಿ ದೊರಕಲಿಲ್ಲ' ಎಂದು ಪ್ರಾಮಾಣಿಕವಾಗಿ ದಾಖಲಿಸುತ್ತಾರೆ. ಬಿಳಿಯ ಚಾದರದ ಬಗ್ಗೆ ಈ ಪ್ರಬುದ್ಧ ಒಳನೋಟವನ್ನು ಕೊಡುತ್ತಾರೆ: ಉತ್ತಮ ರಚನಾ ಕೌಶಲದಿಂದ ಉತ್ಪನ್ನವಾದ ಈ ಕಾದಂಬರಿಯ ದೌರ್ಬಲ್ಯವಿರುವುದು ಪಾತ್ರಗಳ ಬೆಳವಣಿಗೆ ಸಾಕಷ್ಟು ಆಳವನ್ನು ತಲಪದೇ ತೇಲುತನವನ್ನು ಪ್ರದರ್ಶಿಸುವುದರಲ್ಲಿ.' ರಾಜರತ್ನಂ ಅವರ ಮಹಾಕವಿ ಪುರುಷ ಸರಸ್ವತಿಯ ವಿಮರ್ಶೆಯಂತೂ ವಿದ್ವತ್ಪೂರ್ಣವಾಗಿದೆ; ಆ ವಿಡಂಬನೆಯ ಎಳೆಎಳೆಯನ್ನೂ ಸೂಕ್ಷ್ಮವಾಗಿ ವಿಶ್ಲೇಷಿಸುತ್ತಾ, ಒಟ್ಟು ಕೃತಿಯ ವೈಶಿಷ್ಟ್ಯ-ಸಾಧನೆಗಳನ್ನು ಸಾಧಾರವಾಗಿ ನಟರಾಜ್ ಗುರುತಿಸುತ್ತಾರೆ.

ಕೂಡಲೇ ಮತ್ತೂ ಒಂದು ಮಾತು ಸೇರಿಸಬೇಕು; ಸಹಜವಾಗಿಯೇ, ಭಿನ್ನ ಸಂದರ್ಭಗಳಲ್ಲಿ ಬರೆದ ಲೇಖನಗಳ ಸ್ವರೂಪ ಒಂದೇ ಬಗೆಯದಾಗಿರಲು ಸಾಧ್ಯವಿಲ್ಲ; ಕೆಲವು ಪ್ರಬುದ್ಧ ಚಿಂತನೆಯನ್ನು ದರ್ಶಿಸಿದರೆ ಮತ್ತೆ ಕೆಲವು ಪರಿಚಯಾತ್ಮಕ ಮಟ್ಟದಲ್ಲೇ ಉಳಿದುಬಿಡುತ್ತವೆ. ವಿಶೇಷವಾಗಿ, ಕನ್ನಡತನ'ದ ಬಗ್ಗೆ ಇರುವ ಮೂರ್ನಾಲ್ಕು ಲೇಖನಗಳನ್ನು ಕೈಬಿಟ್ಟಿದ್ದರೂ ಸಂಕಲನಕ್ಕೆ ಏನೂ ನಷ್ಟವಾಗುತ್ತಿರಲಿಲ್ಲ. ಇಂದು ಕನ್ನಡಿಗರು ಅಭಿಮಾನಶೂನ್ಯರು,' ಕನ್ನಡ ಸಾಯುತ್ತಿದೆ' -ಇತ್ಯಾದಿ ಹೇಳಿಕೆಗಳು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಉಪಯೋಗಕ್ಕೆ ಬರುವ ಅರ್ಥಹೀನ ಹೇಳಿಕೆಗಳು. ...ವಿಜಯನಗರ ವೀರರ ಗತವೈಭವ ಸಾರುವ ಸಂದೇಶವನ್ನು ಕುರಿತು ಚಿಂತಿಸುವುದು ಕನ್ನಡಿಗರ ಕರ್ತವ್ಯವಲ್ಲವೆ?' (ವಿಜಯನಗರ ಸಾಮ್ರಾಜ್ಯವು ಕನ್ನಡಿಗರದೆಷ್ಟೋ ಅಷ್ಟೇ ಆಂಧ್ರದವರದೂ ಆಗಿತ್ತು.) ನಮ್ಮಂಥ ಪರದೇಶಿಗಳಿಗಿರುವಷ್ಟು ಕನ್ನಡದ ಕಾಳಜಿಯೂ ಕರ್ನಾಟಕದಲ್ಲೇ ನೆಲೆಸಿರುವ ಕನ್ನಡಿಗರಿಗೇಕೆ ಇಲ್ಲ ಎಂಬುದನ್ನು ಯೋಚಿಸಿದಾಗ ... ಕೋಪ ಬರುತ್ತದೆ,' ಇತ್ಯಾದಿ ಕೇವಲ ಭಾವುಕ ಹಾಗೂ ದುಡುಕಿನ ಹೇಳಿಕೆಗಳಾಗುತ್ತವೆ. (ಕನ್ನಡಿಗರಿಗೆ ಕಾಳಜಿಯಿರದಿದ್ದರೆ ವರ್ಷಕ್ಕೆ 3000 ಹೊಸ ಪುಸ್ತಕಗಳು ಕನ್ನಡದಲ್ಲಿ ಹೇಗೆ ಹೊರಬರುತ್ತಿದ್ದುವು?) ಸಮಾಧಾನದ ಸಂಗತಿಯೆಂದರೆ, ಈ ಬಗೆಯ ಜನಪ್ರಿಯ' ಲೇಖನಗಳು ಈ ಸಂಕಲನದಲ್ಲಿ ಹೆಚ್ಚಿಲ್ಲ.

ಈ ಮುನ್ನುಡಿ ಎಂಬ ಪ್ರವೇಶ' ಈಗಾಗಲೇ ದೀರ್ಘವಾಗಿರುವುದರಿಂದ, ಈ ಕೊನೆಯ ಮಾತುಗಳನ್ನು ಹೇಳಿ ನಾನು ವಿರಮಿಸಬಹುದು. ಮುನ್ನುಡಿ-ಹಿನ್ನುಡಿ-ಬೆನ್ನುಡಿಗಳನ್ನು ಬರೆಯುವುದು ಹಾಗೂ ಬರೆಸುವುದು, ಮುಖ್ಯವಾಗಿ, ಸ್ನೇಹದ ಕಾರಣದಿಂದ --ಇರುವ ಸ್ನೇಹವನ್ನು ವೃದ್ಧಿಸುವುದಕ್ಕಾಗಿ ಅಥವಾ ಹೊಸ ಸ್ನೇಹವನ್ನು ಕಟ್ಟಿಕೊಳ್ಳುವುದಕ್ಕಾಗಿ. ನಾನು ಈವರೆಗೂ ಡಾ. ನಟರಾಜ್ ಅವರನ್ನು ಪ್ರತ್ಯಕ್ಷವಾಗಿ ಭೇಟಿ ಮಾಡಿಲ್ಲ; ಆದರೆ, ಅವರ ಸಂಕಲನಕ್ಕೆ ಪ್ರವೇಶವನ್ನು ಕಲ್ಪಿಸುವ ಈ ಮುನ್ನುಡಿಯ ಕಾರಣದಿಂದ ನನಗೆ ಅವರ ಗೆಳೆತನ ಲಭಿಸಿದೆ. ಸಂಸ್ಕೃತ-ಕನ್ನಡ-ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿರುವ, ಸಂಗೀತ-ಸಾಹಿತ್ಯಗಳಲ್ಲಿ ಆಸ್ಥೆಯನ್ನು ಉಳಿಸಿಕೊಂಡಿರುವ, ಲಲಿತ ಆದರೆ ಸತಾರ್ಕಿಕ ಶೈಲಿಯನ್ನು ಸಾಧಿಸಿಕೊಂಡಿರುವ, ಡಾ|| ನಟರಾಜ್ ಅವರ ಲೇಖನಗಳನ್ನು ಓದಿ, ಮತ್ತೊಮ್ಮೆ ಓದಿ, ನನಗೆ ಸಂತೋಷವಾಗಿದೆ ಮತ್ತು ನನ್ನ ಅರಿವು ಹೆಚ್ಚಿದೆ. ಇದೇ ಅನುಭವ ಇತರ ಓದುಗರಿಗೂ ಆಗುತ್ತದೆಂಬ ವಿಶ್ವಾಸ ನನಗಿದೆ. ನಮಸ್ಕಾರ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X