ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಲೇಬಿ ; ಕಾಯ್ಕಿಣಿಯ ಹಿಂಗಾರು ಫಸಲು

By Staff
|
Google Oneindia Kannada News

Jayanth Kaikini presents 'Ondu Jilebi'
ಬೆಂಗಳೂರು, ಡಿ. 24 : ಒಂದು ಜನಾಂಗದ ಜೀವ ಹಿಂಡಿದ ಮಧುರ ಕವಿ ಜಯಂತ ಕಾಯ್ಕಿಣಿ. ಕಳೆದೆರಡು ಮೂರು ಎರಡು ದಶಕಗಳಿಂದ ಕವನ, ಪ್ರಬಂಧ, ಕಥೆ ಕಾದಂಬರಿ, ನಾಟಕಗಳನ್ನು ಬರೆಯುತ್ತ ಹೊಸಗನ್ನಡ ಓದುಗರಲ್ಲಿ ಬೆರಗು ಹುಟ್ಟಿಸಿದ ಲೇಖಕ ಅವರು. ಸ್ವಭಾವದಿಂದ ಏಕಾಂತವನ್ನು ತುಂಬ ಪ್ರೀತಿಸುವ ಕವಿ ಕಾಯ್ಕಿಣಿ ಇತ್ತೀಚೆಗೆ ಲೋಕಾಂತವಾಗುತ್ತಿರುವ ಬಗೆ ನಿಮಗೆ ಗೊತ್ತು. ಕನ್ನಡ ಹಾಡು ಅಭಿಮಾನಿಗಳಿಗಂತೂ ಅವರ ಹೆಸರೇ ಚಿರಪರಿಚಿತ ಧ್ವನಿಯಂತಾದುದಕ್ಕೆ ಮುಂಗಾರು ಮಳೆಯನ್ನೇ ನೆನೆಯಬೇಕು.

ಈಗ ಹಿಂಗಾರು. ಅವರು ಬರೆದ ಹೊಚ್ಚಹೊಸ ಕವನಗಳನ್ನು ಪುಸ್ತಕದಲ್ಲಿ ಓದುವುದಕ್ಕೆ ಹದವಾದ ಕಾಲ. ಆ ಪುಸ್ತಕದ ಹೆಸರು ಒಂದು ಜಿಲೇಬಿ. ಇದೇ ಡಿಸೆಂಬರ್ 28ರ ಭಾನುವಾರ ಬೆಳಗ್ಗೆ 10.30 ಸುಮಾರಿಗೆ ಜಿಲೇಬಿ ಲೋಕಾರ್ಪಣವಾಗಲಿದೆ. ಎಲ್ಲಿ ಎಂದು ನೀವು ಕೇಳುವ ಹಾಗೇ ಇಲ್ಲ. ಪುಸ್ತಕ ಬಿಡುಗಡೆಗೆ ಸಮೃದ್ಧ ನೆಲವೆನಿಸಿದ ಬಸವನಗುಡಿಯ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ. ಅಲ್ಲಿಗೆ ನೀವು ಈ ಭಾನುವಾರ ಹೋಗಬೇಕಾಗಿರುವುದಕ್ಕೆ ಕಾಯ್ಕಿಣಿ ಮತ್ತು ಕವನ ಬಿಟ್ಟು ಬೇರೆ ಆಕರ್ಷಣೆಗಳೂ ಇವೆ.

ಹಿಮ ಕರಡಿಯಂತೆ ಅಪರೂಪಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಮುಖ ತೋರಿಸುವ ರೋಡ್ಸ್ ಸ್ಕಾಲರ್ ಡಾ.ಗಿರೀಶ್ ಕಾರ್ನಾಡ್ ಬಿಡುಗಡೆ ಸಮಾರಂಭಕ್ಕೆ ಬಸವನಗುಡಿಗೆ ಆಗಮಿಸುವರು. ಅಂದು ಅಲ್ಲಿ ಅವರ ಕೆಲಸ ನಾಲ್ಕು ನಲ್ನುಡಿಗಳನ್ನು ಆಡುವುದು. ನೀವು ಅದನ್ನು ಮಿಸ್ ಮಾಡಿಕೊಳ್ಳಬಾರದು. ಆದರೆ, ಅವರನ್ನು ತಾವು ಕಂಡಾಗ 'ಇವನು ಗೆಳೆಯನಲ್ಲ, ಗೆಳತಿ ನಾನು ಮೊದಲೇ ಅಲ್ಲ, ಇವನು ಇನಿಯನಲ್ಲ, ತುಂಬ ಸನಿಹ ಬಂದಿಹನಲ್ಲ, ನೋವಿನಲ್ಲು ನಗುತಿಹನಲ್ಲ, ಯಾಕೆ ಈ ಥರ' ಎಂದು ಗುನುಗಿಕೋಬಾರದು.

ಅಂದು ನಿಮ್ಮ ಕಿವಿಗಳು ಇನ್ನೆರಡು ಉಪನ್ಯಾಸಕ್ಕೆ ತೆರೆಕೊಳ್ಳಬೇಕು. ವೈದ್ಯಕೀಯ ಅನುಭವ ಕಥನ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ತುರ್ತು ಔಷಧಿ ವಿಭಾಗದಲ್ಲಿ ಪರಿಣತ ವೈದ್ಯ ಮತ್ತು ಕಥೆಗಾರ ಡಾ. ಗುರುಪ್ರಸಾದ್ ಕಾಗಿನೆಲೆ ಮಾತನಾಡುವರು. ವಿಶೇಷ ಅತಿಥಿಗಳ ಇಷ್ಟೊಂದು ಆಪ್ತ ಮಾತುಗಳ ನಡುವೆ ಅಧಿಕ ಪ್ರಸಂಗದ ಮಾತುಗಳನ್ನಾಡುವವರು ಮುಂಗಾರು ಮಳೆ ನಿರ್ದೇಶಕ ಯೋಗರಾಜ ಭಟ್ಟರು.

ಜಿಲೇಬಿ ಜತೆ ಇತರ ಪದಾರ್ಥಗಳನ್ನೂ ಅಂದು ನೀವು ಸವಿಯಬಹುದು. ಜಯಂತರ ಈ ಮುಂಚಿನ ಸಂಕಲನಗಳಾದ ರಂಗದಿಂದೊಷ್ಟು ದೂರ ಕೋಟಿತೀರ್ಥ, ಶ್ರಾವಣ ಮಧ್ಯಾನ್ಹ ಮತ್ತು ನೀಲಿಮಳೆಯ ಎಲ್ಲ ಕವನಗಳನ್ನು ಒಟ್ಟಾಗಿಸಿದ ಇನ್ನೆರಡು ಸಂಪುಟಗಳು ಬೆಳಕು ಕಾಣುತ್ವೆ. ಜಯಂತ್ + ಕಾಯ್ಕಿಣಿ ಅವರ ಕವನ ಸಂಭ್ರಮದಲ್ಲಿ ನೀವು ಭಾಗಿಗಳಾಗಿ ಎಂದು ದಟ್ಸ್ ಕನ್ನಡ ಡಾಟ್ ಕಾಂ ಅಲ್ಲದೆ ವಿನಂತಿಸಿಕೊಳ್ಳುತ್ತಿರುವವರು ಅಂಕಿತ ಪ್ರಕಾಶನದ ಶ್ರೀಮತಿ ಮತ್ತು ಶ್ರೀ ಪ್ರಕಾಶ್ ಕಂಬತ್ತಳ್ಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X