ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಚಾಪ :ಐದು ಪೆನ್ನುಗಳು ಬಿಡಿಸಿದ ಏಳುಬಣ್ಣ

By Staff
|
Google Oneindia Kannada News

ಚಿತ್ರಚಾಪ :ಐದು ಪೆನ್ನುಗಳು ಬಿಡಿಸಿದ ಏಳುಬಣ್ಣನನಗೆ ಬರೆಯುವ "ಹುಚ್ಚು" ಆರಂಭವಾಗಿದ್ದು ನಾನು ಬಿ.ಎ ಓದುತ್ತಿದ್ದ ಕಾಲದಲ್ಲಿ. ಕವನ, ಕಥೆಯಂತದ್ದನ್ನು ಬರೆಯಲು ಆರಂಭಿಸಿದ್ದೆ ಆವಾಗ. ಸುಮ್ಮನೇ ಮನಸ್ಸಿಗೆ ತೋಚಿದ್ದನ್ನು ಗೀಚುವುದು, ಸಿಕ್ಕಲ್ಲಿ ಎಸೆಯುವುದು ಮಾಮೂಲಾಗಿತ್ತು. ಇನ್ನು ನನಗೇ ತೀರಾ ಇಷ್ಟ ಅನ್ನಿಸಿದ್ದನ್ನು ಎಲ್ಲಾದರೂ ಪುಸ್ತಕದಲ್ಲಿ ಬರೆದಿಡುತ್ತಿದ್ದೆ. ಅಪ್ಪ ಒಂದಷ್ಟು ದಿನ "ಪುಣ್ಯಾತ್ಮಾ, ಬರೆದಿದ್ದನ್ನು ಯಾವುದಾದರೂ ಪತ್ರಿಕೆಗೆ ಕಳಿಸೋ" ಅಂತ ಹೇಳೀ ಹೇಳೀ ಸೋತು ಹೋದರು.ನಾನು ನನ್ನ ಪಾಡಿಗೆ ಗೀಚಿ ಎಲ್ಲಾದರೂ ಹಾಕುವುದನ್ನು ಹಾಯಾಗಿ ಮುಂದುವರೆಸಿದ್ದೆ. ಅಮ್ಮ ಮನೆ ಗುಡಿಸುವಾಗ ನಾನು ಬರೆದು ಬಿಸಾಕಿದ ಹಾಳೆಗಳನ್ನು ತಂದು ನನ್ನ ಮುಂದಿಡುತ್ತಿದ್ದರು. ಅವರಿಗೂ ಭ್ರಮನಿರಸನವಾಗಿ, ನನ್ನ ಬರಹವನ್ನು "ಸೂಟ್ ಕೇಸ್ ಸಾಹಿತ್ಯ" ಅಂತ ನಾಮಕರಣ ಮಾಡಿದರು.

ಆಮೇಲೆ ಬೆಂಗಳೂರಿಗೆ ಬಂದು ಬ್ಲಾಗೂ ಅದೂ ಇದೂ ಅಂತ ಶುರು ಮಾಡಿಕೊಂಡು ಬರೆದದ್ದು ಉಳಿಯತೊಡಗಿತು. ತಂಗಿ ಮನೆಯಿಂದ ಆವಾಗಾವಾಗ ಫೋನ್ ಮಾಡಿ, "ಅಣ್ಣಾ, ನೀ ಬರ್ದ್ ಕವ್ನ ಸಿಕ್ಕಿದ್ದು, ಅರ್ಧ ಬರ್ದಿಟ್ಟ ಕಥೆ ಸಿಕ್ಕಿದ್ದು" ಅಂತ ಅವ್ಳು ಬೆಂಗಳೂರಿಗೆ ಬರೋವರೆಗೂ ಹೇಳುತ್ತಿದ್ದಳು. ಈ ಬರವಣಿಗೆ ಎಲ್ಲಿಗೆ ಹೋಗುತ್ತದೆ ಅನ್ನುವುದು ನಂಗೂ ಗೊತ್ತಿರಲಿಲ್ಲ.

ಇಂಟರ್ನೆಟ್ಟಿನಲ್ಲಿ ಜೀಮೇಲೂ,ಆರ್ಕುಟ್ಟು ಅಂತೆಲ್ಲ ಬಂದು, ನನ್ನ ಹಾಗಿದ್ದೇ ಇನ್ನೊಂದಿಷ್ಟು ಜನ ಹುಚ್ಚರ ಪರಿಚಯ ಆಯಿತು. ಚಾರಣ, ಹರಟೆ ಹೆಚ್ಚಿತು. ಯಾವುದೋ ಒಂದು ಭಯಂಕರ ಘಳಿಗೆಯಲ್ಲಿ ನಾವೊಂದಿಷ್ಟುಜನ ಸೇರಿ ಪುಸ್ತಕ ಯಾಕೆ ಬರೀಬಾರದು ಅನ್ನುವ ಆಲೋಚನೆ ಬಂತು. ತಿಂಗಳಾನುಗಟ್ಟಲೇ ತಪಸ್ಸಿನ ನಂತರ ನಾವು ಕಂಡ ಕನಸು ನನಸಾಗೋ ಸಮಯವೂ ಹತ್ತಿರ ಬರ್ತಿದೆ ಈಗ.

ನಾಡಿದ್ದು ಭಾನುವಾರ ಬೆಳಿಗ್ಗೆ, ನಾನು, ಅರುಣ, ಸುಶ್ರುತ, ಅನ್ನಪೂರ್ಣ ಮತ್ತು ಶ್ರೀನಿವಾಸ್ ಸೇರಿ ಬರೆದಿರುವ "ಚಿತ್ರ ಚಾಪ" ಪುಸ್ತಕದ ಬಿಡುಗಡೆ. ಪರಿಸರ ನಮ್ಮ ಪುಸ್ತಕದ ವಿಷಯ. ನಮ್ಮ ಕಣ್ಣಿಗೆ ಹೇಗೆ ಪ್ರಕೃತಿ ಕಂಡಿದೆಯೋ , ಹಾಗೆ ಬರೆದಿದ್ದೇವೆ. ಲಲಿತ ಪ್ರಬಂಧ, ಅನುಭವ ಕಥನ, ಚಾರಣದ ಟ್ರಾವೆಲಾಗು, ಕವನಗಳು ಹೀಗೆ ಏನೇನೋ ಇವೆ, ಪರಿಸರದ ಬಗೆಗೆ.

ಬೆಂಗಳೂರಿನ ಬಸವನಗುಡಿಯ ಬಿ.ಪಿ ವಾಡಿಯಾ ರಸ್ತೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ, ನಮ್ಮ ಕನಸು "ಚಿತ್ರಚಾಪ" ನನಸಾಗ್ತಿದೆ. ನಮ್ಮೆಲ್ಲರ ಪ್ರೀತಿಯ ಲೇಖಕ ವಸುಧೇಂದ್ರ, ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಕನ್ನಡದ ಹಿರಿಯ ವಿದ್ವಾಂಸ ಪ್ರೊ. ಜಿ.ವೆಂಕಟಸುಬ್ಬಯ್ಯನವರು ಪುಸ್ತಕ ಬಿಡುಗಡೆ ಮಾಡಿ ನಮ್ಮ ಬೆನ್ನು ತಟ್ಟುತ್ತಾರೆ. ನಮ್ಮ ಪುಸ್ತಕಕ್ಕೆ ಬೆಳಕಾಗಿರುವುದು "ಪ್ರಣತಿ ಪ್ರಕಾಶನ ". ಪ್ರಣತಿಯ ಉದ್ಘಾಟನೆಯೂ ಅಂದೇ.

ಫೆಬ್ರವರಿ 10 ನೇ ತಾರೀಕು ಭಾನುವಾರ ಬೆಳಿಗ್ಗೆ 10.30ಕ್ಕೆ ನೀವೆಲ್ಲ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿರುತ್ತೀರಿ ಅನ್ನುವುದು ನಮ್ಮ ವಿಶ್ವಾಸ. ಬ್ಲಾಗುಗಳಲ್ಲೇ ಮಾತನಾಡುವುದು ಹೇಗೂ ಇದೆ. ಎಲ್ರೂ ಬನ್ನಿ , ಕೂತು ಮಾತಾಡೋಣ. ನಂಗೆ ಮತ್ತೇನು ಹೇಳಬೇಕು ಅಂತ ತೋಚುತ್ತಿಲ್ಲ.

ಶ್ರೀನಿಧಿ ಡಿ.ಎಸ್, ಬೆಂಗಳೂರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X