ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸತಲೆಮಾರಿನ ಸಂಶೋಧನಾ ಲೇಖನಗಳು

By Staff
|
Google Oneindia Kannada News

Nepathya by Tamil Selviಪುಸ್ತಕ ಪರಿಚಯ
ಪುಸ್ತಕದ ಹೆಸರು :
ನೇಪಥ್ಯ
ವಿಷಯ : ಐತಿಹಾಸಿಕ ಸಂಶೋಧನಾ ಲೇಖನಗಳು
ಲೇಖಕರು : ತಮಿಳ್ ಸೆಲ್ವಿ, ಮುಖ್ಯಸ್ಥರು, ಕನ್ನಡ ವಿಭಾಗ, ಮದರಾಸು ವಿಶ್ವವಿದ್ಯಾಲಯ, ಮದರಾಸು
ಪ್ರಕಾಶಕರು : ಸಚಿನ್ ಪಬ್ಲಿಷರ್‍ಸ್, ಬೆಂಗಳೂರು.

ಸತ್ಯನಾರಾಯಣ. ಬಿ.ಆರ್, ಬೆಂಗಳೂರು.

ಕೇವಲ ರಾಜವಂಶಗಳ ಇಸವಿ ವಂಶವೃಕ್ಷಗಳನ್ನು ಗಮನಿಸದೆ, ಅತ್ಯಂತ ಸೂಕ್ಷ್ಮ ಹಾಗೂ ಜೀವಂತಿಕೆಯುಳ್ಳ ವಿಚಾರಗಳನ್ನು ಕುರಿತು ಅಧ್ಯಯನ ನಡೆಸಿರುವುದೇ "ನೇಪಥ್ಯ" ಕೃತಿಯ ವಿಶೇಷ. ಈ ಬಗೆಯ ಲೇಖನಗಳನ್ನು ಶ್ರೀಮತಿ ಜೋತ್ಸ್ನಾ ಕಾಮತ್ ಅವರು ಬರೆದುದ್ದನ್ನು ಮಾತ್ರ ನಾನು ನೋಡಿದ್ದೇನೆ. ಆಗಿನ ಕಾಲದ ಉಡುಗೆ, ತೊಡುಗೆ, ಅಡುಗೆ ಮೊದಲಾದವುಗಳನ್ನು ಅತ್ಯಂತ ಸರಳವಾಗಿ ಲಘುಪ್ರಬಂಧ ಮಾದರಿಯಲ್ಲಿ ಬರೆಯುತ್ತಿದ್ದರು. ಇತಿಹಾಸದ ಸತ್ಯಾಸತ್ಯತೆಗಳನ್ನು ಮರೆಮಾಚದೆ, ಐತಿಹಾಸಿಕ ವಿಚಾರಗಳಿಗೆ ಅಪಚಾರವೆಸಗದಂತೆ ಲೇಖಕಿ ತಮಿಳು ಸೆಲ್ವಿಯವರೂ ಅತ್ಯಂತ ಸರಳವಾಗಿ ಲೇಖನಗಳನ್ನು ಬರೆದಿದ್ದಾರೆ.

ಇದನ್ನೇ ಮೈಕ್ರೋ ಅಧ್ಯಯನ ಅಥವಾ ಸೂಕ್ಷ್ಮ ಅಧ್ಯಯನ ಎನ್ನುತ್ತಾರೆ. ಭಾರತೀಯ ಇತಿಹಾಸದ ಇದುವರೆಗಿನ ಅಧ್ಯಯನಗಳು ಹೆಚ್ಚಾಗಿ ಮ್ಯಾಕ್ರೋ ಅಧ್ಯಯನಗಳಾಗಿದ್ದವು. ಈಗ ಅದರ ಜೊತೆಜೊತೆಗೇ ಮೈಕ್ರೋ ಅಧ್ಯಯನಗಳಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸೆಲ್ವಿಯವರ "ನೇಪಥ್ಯ" ಅಪೂರ್ವ ಕೃತಿಯಾಗಿ ದಾಖಲಾಗುತ್ತದೆ. ಹೊಸ ತಲೆಮಾರಿನ ಮಾದರಿ ಲೇಖಕಿಯಾಗಿ ತಮಿಳ್ ಸೆಲ್ವಿಯವರೂ ದಾಖಲಾಗುತ್ತಾರೆ.

ನೇಪಥ್ಯದಲ್ಲಿ 12 ಲೇಖನಗಳಲ್ಲಿ 10ನೇ ಲೇಖನ "ಕೂಟಶಾಸನಗಳನ್ನು ನಿರ್ಣಯಿಸುವ ಮಾನದಂಡಗಳು , ಒಂದು ಮರುಪರಿಶೀಲನೆ" ಎಂಬುದು. ಇದೊಂದು ಮಾತ್ರ ಸೈದ್ಧಾಂತಿಕ ವಿವರಗಳನ್ನುಳ್ಳ ಲೇಖನವಾಗಿದೆ. ಅದರಲ್ಲಿ ಒಂದು ಮಾತು ಹೀಗಿದೆ. ಚರಿತ್ರೆ ಬರೆಯುವವರಿಗೆ ವಿಷಯವೊಂದಿರುತ್ತದೆ. ಆ ವಿಷಯ ಮಾತ್ರವೆ ಮುಖ್ಯವಲ್ಲ. ಅದಕ್ಕೆ ಅನ್ವಯಿಸುವ ವಿಧಾನವೂ ಮುಖ್ಯವಾಗಿರುತ್ತದೆ. ಈ ಮಾತುಗಳಿಂದಲೇ ಲೇಖಕಿಯ ವಿಭಿನ್ನ ದೃಷ್ಟಿಕೋನವನ್ನು ನಾವು ಗುರುತಿಸಬಹುದು. ಕೇವಲ ಐತಿಹಾಸಿಕ ಸತ್ಯವನ್ನು ಶೋಧಿಸುವತ್ತ ಮಾತ್ರ ಮನಸ್ಸು ನಿಂತರೆ, ಒಂದೆರಡು ದಿನಗಳಲ್ಲಿಯೇ ಈ ದೇಶ ಹತ್ತಿ ಉರಿಯುತ್ತದೆ. ಇತಿಹಾಸದ ಅರಿವು ಅರಾಜಕತೆಯನ್ನು ಉಂಟುಮಾಡಬಾರದು. ನಮ್ಮ ನಾಳಿನ ಬದುಕಿಗೆ, ಮುಂದಿನ ಜನಾಂಗಕ್ಕೆ ಭದ್ರಬುನಾದಿಯನ್ನು ನಮ್ಮ ಇಂದಿನ ಅರಿವು ಕಟ್ಟಿಕೊಡಬೇಕಾಗುತ್ತದೆ.

ಆರನೇ ಲೇಖನ ಪ್ರಾಚೀನ ಜೈನಕೇಂದ್ರ ಅರೆತಿಪ್ಪೂರು ಒಂದು ಅವಲೋಕನ ಕ್ಷೇತ್ರಕಾರ್ಯಾಧರಿತವಾಗಿದೆ. ಶ್ರವಣಬೆಳಗೊಳದ ಗೊಮ್ಮಟನಿಗಿಂತ ಪ್ರಾಚೀನವಾದ ಗೊಮ್ಮಟೇಶ್ವರ, ಮತ್ತು ಜೈನಕೇಂದ್ರವೆಂದು ಅಧ್ಯಯನದಿಂದ ಸ್ಪಷ್ಟೀಕರಿಸಿದ್ದಾರೆ. ಒಂದು ಪರಿಪೂರ್ಣ ಅಧ್ಯಯನಕ್ಕೆ ಐತಿಹಾಸಿಕ ಆಕರಗಳಾಗಿ ಕಾವ್ಯಗಳೂ ನೆರವು ನೀಡಬಲ್ಲವು. ಅಂತಹ ಒಂದು ಸಾಧ್ಯತೆಯನ್ನು ಲೇಖಕಿ ಇಲ್ಲಿ ಬಳಸಿಕೊಂಡಿದ್ದಾರೆ. ಜೈನಕೇಂದ್ರಗಳನ್ನು ಕನಕಗಿರಿ ತೀರ್ಥ್ಥಗಳೆಂದು ಸಾಮಾನ್ಯವಾಗಿ ಕರೆಯುತ್ತಾರೆ ಎಂಬ ನಿಲುವಿಗೆ ಪಂಪನ ಆದಿಪುರಾಣವನ್ನು ಅವರು ಉಲ್ಲೇಖಿಸುತ್ತಾರೆ. ಒಂದು ಊರಿನ ಐತಿಹಾಸಿಕತೆಯನ್ನು ಹೇಗೆ ಸಮಗ್ರವಾಗಿ ಅಧ್ಯಯನ ನಡೆಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿ ಈ ಲೇಖನ ಮೂಡಿಬಂದಿದೆ.

ಇನ್ನುಳಿದ 10 ಲೇಖನಗಳಲ್ಲಿ ಎರಡು ಲೇಖನಗಳು ಕೈಫಿಯತ್ತುಗಳ ಅಧ್ಯಯನದಿಂದ ಮೂಡಿದವುಗಳಾಗಿವೆ. ದೊಡ್ಡದೇವರಾಯರ ಚರಿತ್ರೆ ಎನ್ನುವ ತಮಿಳು ಕೈಫಿಯತ್ತು ಎಂಬ ಲೇಖನದಲ್ಲಿ, ತಮಿಳು ಕೈಫಿಯತ್ತನ್ನು ಅತ್ಯಂತ ಪರಿಣಾಮಕಾರಿಯಾಗಿ ಕನ್ನಡಿಸಿದ್ದಾರೆ. ಅದರ ಮೂಲ ಹೇಗಿತ್ತೋ ನನಗೆ ತಿಳಿದಿಲ್ಲ. ಆದರೆ ಅದರ ಕನ್ನಡಾನುವಾದವನ್ನು ನೋಡಿದರೆ ಸೊಗಸಾದ ಗದ್ಯಮಾದರಿಯಂತೆ ಭಾಸವಾಗುತ್ತದೆ. ಅವನ ತಮ್ಮ ಬೊಳಶಂಕರರಾಯನು ಬಾಲ್ಯದಲ್ಲೇ ತಲೆಯಲ್ಲಿ ಸಿಡಿಲು ಬಡಿದು ಆ ಚಾಮುಂಡೇಶ್ವರಿಯ ಕೃಪಾಕಟಾಕ್ಷದಿಂದ ಅವನ ತಲೆಗೂದಲು ಮಾತ್ರ ಉದುರಿ ಹೋದುದರಿಂದ ಬೊಳಚಾಮರಾಜನೆಂದು ಅವನಿಗೆ ಹೆಸರಾಗಿ ಆ ರಾಜ್ಯವನ್ನು ರಕ್ಷಿಸುತ್ತಿದ್ದನು.. ಹೀಗೆ ಅತ್ಯಂತ ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಆದರೆ ಈ ಲೇಖನದಲ್ಲಿ ಮೂಲ ತಮಿಳು ಕೈಫಿಯತ್ತನ್ನು ಕೊಟ್ಟಿಲ್ಲ. ಕೈಫಿಯತ್ತನ್ನು ಆಧರಿಸಿದ ಇನ್ನೊಂದು ಲೇಖನ ಅನ್ನಮದೇವರಾಯನ ಒಂದು ತಮಿಳು ಕೈಫಿಯತ್ತು ಲೇಖನದಲ್ಲಿ ಕನ್ನಡಾನುವಾದದ ಜೊತೆಗೆ ಮೂಲವನ್ನು ಕೊಟ್ಟಿದ್ದಾರೆ. ಮೂಲ ಮತ್ತು ಅನುವಾದ ಎರಡನ್ನೂ ಕೊಡುವುದರಿಂದ ದ್ವಿಭಾಷಾ ವಿದ್ವಾಂಸರಿಗೆ ಹೆಚ್ಚು ಅನುಕೂಲವಾಗುತ್ತದೆ.

ಇನ್ನುಳಿದ ಎಲ್ಲ ಲೇಖನಗಳೂ ಶಾಸನಗಳ ಅಧ್ಯಯನದಿಂದ ಮೂಡಿದಂತಹವುಗಳು. ಮೊದಲ ಲೇಖನ ಶಾಸನಗಳಲ್ಲಿ ಕರ್ನಾಟಕ ಕನ್ನಡ ಪರಿಕಲ್ಪನೆಯಲ್ಲಿ ಕನ್ನಡ, ಕರ್ನಾಟಕದ ಹಿರಿಮೆ ಗರಿಮೆ ಹಾಗೂ ವಿಸ್ತಾರ ವಿಚಾರಗಳನ್ನು ಶಾಸನ ಮೂಲಗಳಿಂದ ಸಂಗ್ರಹಿಸಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಶಾಸ್ತ್ರೀಯ ವಿಚಾರಗಳನ್ನು ಬರೆಯುವಾಗ ಒಂದು ಬಗೆಯೆ ಗಂಭೀರತೆ ಲೇಖನಗಳನ್ನು ಆವರಿಸಿಕೊಂಡು ಬಿಡುತ್ತದೆ. ಏಕೆಂದರೆ ಅವುಗಳನ್ನು ವಿಚಾರಸಂಕಿರಣಗಳಿಗಾಗಿಯೋ, ವಿದ್ವತ್ ಪತ್ರಿಕೆಗಳಿಗಾಗಿಯೋ ಬರೆಯಬೇಕಾಗಿರುತ್ತದೆ. ಆದರೆ ಅಂತಹ ಮಿತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ತಮಿಳ್ ಸೆಲ್ವಿಯವರು ಮೀರಿದ್ದಾರೆ. ಇಲ್ಲಿನ ಲೇಖನಗಳನ್ನು ವಿದ್ವಾಂಸರಲ್ಲದೆ, ಸಾಮಾನ್ಯ ಓದುಗರೂ ಲಘುಪ್ರಬಂಧಗಳಂತೆ ಓದಿ ಆನಂದಿಸಬಹುದು. ಇತಿಹಾಸಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಿ ನಕ್ಕು ಸಂತೋಷ ಪಡಬಹುದು ಎಂಬುದಕ್ಕೆ ಉತ್ತಮ ಉದಾಹರಣೆಗಳಿವು. ಬಹುಶಃ, ಹೊಸ ಮಾದರಿಯೆನ್ನಬಹುದು.

ಕೋಳಿ ಕಲ್ಲುಗಳು ಲೇಖನದಲ್ಲಿ ಕೋಳಿ ಕಾಳಗ ಎಂಬ ಜಾನಪದೀಯ ಆಟದ ಬಗೆಗೆ ಲೇಖಕಿ ತಮಿಳು, ಕನ್ನಡ ಮೂಲಗಳಿಂದ ಕಲೆಹಾಕಿರುವ ವಿಚಾರಗಳು ಆಶ್ಚರ್ಯ ಮೂಡಿಸುತ್ತವೆ. ಕರ್ನಾಟಕದ ನಾನಾ ಭಾಗಗಳಲ್ಲಿ ಇಂದಿಗೂ ಪ್ರಚಲಿತದಲ್ಲಿರುವ ಈ ಆಟದ ಬಗೆಗೆ ಹತ್ತು ಹಲವಾರು ವಿಚಾರಗಳು ಇಲ್ಲಿ ವ್ಯಕ್ಯವಾಗಿವೆ. ಯುದ್ಧಕ್ಕೆ ಹೋಗುವಾಗ ಪಂಚಾಂಗ ನೋಡುವ ಪದ್ಧತಿಯಂತೆ, ಕೋಳಿ ಕಾಳಗಕ್ಕೆ ಹೋಗುವಾಗ ಪಂಚಾಂಗ ನೋಡುವ ಪದ್ಧತಿಯೂ ಇತ್ತು ಎಂಬುದು ಈ ಲೇಖನದಲ್ಲಿ ಸ್ಪಷ್ಟವಾಗುತ್ತದೆ. ಕೋಳಿ ಪಂಚಾಂಗ ಅಥವಾ ಕುಕ್ಕುಟ ಪಂಚಾಂಗ ಎಂಬ ಪರಿಕಲ್ಪನೆಯೇ ಇದ್ದುದ್ದು ಆಶ್ಚರ್ಯ ಮೂಡಿಸುತ್ತದೆ. ಕೋಳಿಗಳ ಜಾತಿ ನಿರ್ಣಯ, ಅವುಗಳ ಶರೀರ ಮೀಮಾಂಸೆ, ಕಾಲಿಗೆ ಕಟ್ಟುವ ಕತ್ತಿಗಳು, ಕತ್ತಿ ಕಟ್ಟುವವನಿಗೆ ನೀಡುವ ಕತ್ತಿ ಸುಂಕ, ಸೋತ ಅಥವಾ ಸತ್ತ ಕೋಳಿಯನ್ನು ವಿತರಿಸುವ ಬಗೆ, ಗಾಯಗೊಂಡ ಕೋಳಿಗೆ ನೀಡುವ ಚಿಕಿತ್ಸೆ, ಗಾಯಕ್ಕೆ ಹುಡುಗರ ಮೂತ್ರ ಹಾಕುವ ಪದ್ಧತಿ, ಕೋಳಿಗಳನ್ನು ಕುರಿತ ಗಾದೆಗಳು ಇವುಗಳ ಮೇಲೂ ಬೆಳಕು ಚೆಲ್ಲಲಾಗಿದೆ. ಕೋಳಿಗಳಿಗೆ ಹೆಂಡ ಕುಡಿಸುವ ಪದ್ಧತಿಯನ್ನು ಗುರುತಿಸಲಾಗಿದೆ.

ನಾನು ನನ್ನಜ್ಜನಿಂದ ತಿಳಿದ, ಆದರೆ ಇಲ್ಲಿ ಪ್ರಸ್ತಾಪಿಸಿಲ್ಲದ ಇನ್ನೆರಡು ವಿಚಾರಗಳನ್ನು ಇಲ್ಲಿ ಹೇಳ ಬಯಸುತ್ತೇನೆ. ಮೊದಲನೆಯದು ಕಾಳಗದ ಕೋಳಿಗೆ ನಾಗರ ಹಾವಿನ ಮಾತ್ಸರ್ಯ ಬರಬೇಕೆಂದು ನಾಗರಹಾವನ್ನೇ ಕೊಂದು ಬೇಯಿಸಿ ಕಾಳಗದ ಕೋಳಿಗೆ ತಿನ್ನಿಸುವ ಪದ್ಧತಿ. ಎರಡನೆಯದು ಗಂಡು ರಣಹದ್ದನ್ನು ಹಿಡಿದು ಪಳಗಿಸಿ, ಅದರೊಂದಿಗೆ ಹೆಣ್ಣುಕೋಳಿಯನ್ನು ಬೆಳೆಸಿ, ಅದರಿಂದ ಸಂಕರಣಗೊಂಡು ಉತ್ಪಾದಿಸಿದ ಮೊಟ್ಟೆಗಳಿಂದ ಕಾಳಗದ ಕೋಳಿಯನ್ನು ಉತ್ಪಾದಿಸುವ ಚಾತುರ್ಯ. ಇವೆಲ್ಲವೂ ಜನಪದರ ಸಂಶೋಧನಾ ಪ್ರಜ್ಞೆಯನ್ನು ಸೂಚಿಸುತ್ತವೆ. ಐತಿಹಾಸಿಕ ಸಂಶೋಧನೆಯಲ್ಲಿ ತೊಡಗಿದವರು ವರ್ತಮಾನವನ್ನು ಮರೆಯಬಾರದು. ಆದ್ದರಿಂದಲೇ ಸೆಲ್ವಿಯವರಂತಹ ಸಂಶೋಧಕಿ ಈಗಲೂ ಕೆಲವು ಹಳ್ಳಿಗಳಲ್ಲಿ ಕೋಳಿ ಕಾಳಗ ನಡೆಸಲು ಸಾರಾಯಿ ಅಂಗಡಿಯವರು ಸ್ಪಾನ್ಸರ್ ಮಾಡುವ ವಿಚಾರವನ್ನು ದಾಖಲಿಸುತ್ತಾರೆ. ಮುನ್ನುಡಿಯಲ್ಲಿ ಸೂರ್ಯನಾಥ ಕಾಮತರು ಗುರುತಿಸುವಂತೆ ತುಳುವಿನಲ್ಲಿ ಕೋಳಿಗಳಿಗೆ ಕೋರಿ ಎಂಬ ಹೆಸರಿದೆ. ಕೋರಿ ರೊಟ್ಟಿ ಎಂಬ ಖಾದ್ಯ ಕರಾವಳಿಯಲ್ಲಿ ಅತ್ಯಂತ ಜನಪ್ರಿಯ. ಇದಿಷ್ಟು ಕೋಳಿಪುರಾಣವನ್ನು ಓದಿ ಮುಗಿಸುವಷ್ಟರಲ್ಲಿ ನೀವು ಒಂದು ಉತ್ತಮ ಲಘುಪ್ರಬಂದವನ್ನು ಓದಿದ ಖುಷಿಯಲ್ಲಿರುತ್ತೀರಿ. ಜೊತೆಗೇ ನಿಮಗರಿವಿಲ್ಲದಂತೆ ಸಾಕಷ್ಟು ಐತಿಹಾಸಿಕ ವಿಚಾರಗಳನ್ನು ತಿಳಿದುಕೊಂಡಿರುತ್ತೀರಿ.

ಕೋಳಿ ಕಾಳಗ ಲೇಖನದಂತೆಯೇ ಸರಸವಾಗಿ ಸರಳವಾಗಿ ಓದಿಸಿಕೊಂಡು ಖುಷಿ ಕೊಡುವ ಇನ್ನೊಂದು ಲೇಖನ ಕನ್ನಡ ಸಾಹಿತ್ಯದಲ್ಲಿ ಮೂಗು ಕತ್ತರಿಸುವ ಪ್ರಕ್ರಿಯೆ ಎಂಬ ಲೇಖನ. ರಾಮಾಯಣದ ಕಾಲದಿಂದಲೂ ಮೂಗು ಕತ್ತರಿಸುವ ಪ್ರಕ್ರಿಯೆ ಈ ನಾಡಿನಲ್ಲಿದೆ. ಪ್ರಸ್ತುತ ಲೇಖನದಲ್ಲಿ ಕನ್ನಡ ಸಾಹಿತ್ಯ, ಶಾಸನ ಮತ್ತು ಜಾನಪದ ಮೂಲಗಳಿಂದ ಆಧಾರಗಳನ್ನು ಕ್ರೋಢಿಕರಿಸಿರುವುದು ಅಧ್ಯಯನಕ್ಕೊಂದು ಸಮಗ್ರತೆ ದೊರಕಿಸಿಕೊಟ್ಟಿದೆ. ಮೂಗು ಕತ್ತರಿಸುವುದರಲ್ಲಿಯೇ ನೈಪುಣ್ಯತೆ ಸಾಧಿಸಿದ ಸೈನಿಕರ ಬಗ್ಗೆ ಓದುವಾಗ ಅಚ್ಚರಿ ಮೂಡುತ್ತದೆ. ಉಲ್ಲೇಖಿಸಿರುವ ಪದ್ಯಗಳನ್ನು ಓದುವಾಗ ನಮ್ಮ ನಮ್ಮ ಊರಿನ ಸೈನಿಕರು ಎಷ್ಟೆಷ್ಟು ಶತ್ರು ಸೈನಿಕರ ಮೂಗು ಕೊಯ್ದರು ಎಂಬುದನ್ನು ತಿಳಿದುಕೊಳ್ಳಬಹುದು. ನಮ್ಮದು ಚೆನ್ನರಾಯಪಟ್ಟಣ ತಾಲ್ಲೋಕು. ಚೆನ್ನರಾಯಪಟ್ಟಣದ ಭಟರು ಎರಡು ಸಾವಿರ ಶತ್ರು ಸೈನಿಕರ ಮೂಗನ್ನು ಹರಿದರು ಎಂದು ಬರುತ್ತದೆ. ಇದೇನು ಸಣ್ಣ ಸಂಖ್ಯೆಯಲ್ಲ ಅಲ್ಲವೇ?! ಹೀಗೆ ಮೂಗು ಕೊಯ್ಯಿಸಿಕೊಂಡ ಸೈನಿಕರಿಗೆ ಬಿಜಾಪುರದ ಅರಸು ಒಂದು ಬಡಾವಣೆಯನ್ನೇ ನಿರ್ಮಿಸಿಕೊಡುವ ಹಾಗೂ ಅದನ್ನು ಮೂಕೊರೆಯರ ವೀದಿ ಎಂದು ಕರೆದಿರುವುದನ್ನೂ ಲೇಖಕಿ ಗುರುತಿಸಿದ್ದಾರೆ. ಇನ್ನೊಂದು ಅಚ್ಚರಿಯ ವಿಷಯವನ್ನು ಸೆಲ್ವಿಯವರು ಶೋಧಿಸಿದ್ದಾರೆ. ಕತ್ತರಿಸಿದ ಮೂಗಿಗೆ ಕೊಡುತ್ತಿದ್ದ ಹಲವಾರು ಬಗೆಯ ಚಿಕಿತ್ಸೆಗಳನ್ನು ಅವರು ಗುರುತಿಸಿದ್ದಾರೆ. ಅದರಲ್ಲಿ ಪ್ಲಾಸ್ಟಿಕ್ ಸರ್ಜರಿಯನ್ನು ಹೆಲುವ ಚಿಕಿತ್ಸೆಗಳೂ ಇದ್ದುವೆಂಬುದು ಸಾಮಾನ್ಯ ವಿಷಯವಲ್ಲ.

ಕರ್ನಾಟಕದ ಇತಿಹಾಸದುದ್ದಕ್ಕೂ, ವಿಸ್ತಾರದುದ್ದಕ್ಕೂ ಆಗಿಹೋದ ಎಲ್ಲಾ ಬಾಲಚಂದ್ರ ಮುನಿಗಳ ಬಗ್ಗೆಯೂ "ಕವಿಕಂದರ್ಪ ಮತ್ತು ಬಾಳಚಂದ್ರ ಮುನಿ - ಒಂದು ಅವಲೋಕನ" ಎಂಬ ಒಂದೇ ಲೇಖನದಲ್ಲಿ ಬೆಳಕು ಚೆಲ್ಲಿದ್ದಾರೆ. ಹೊರನಾಡಿನಲ್ಲಿರುವ ಗಂಗರ ಶಾಸನಗಳು ಎಂಬ ಲೇಖನವೂ ಇದೆ ಬಗೆಯದು. ತಮಿಳು ಮತ್ತು ಕನ್ನಡ ಅರಸರ ನಡುವಿನ ವೈವಾಹಿಕ ಸಂಬಂಧಗಳು ಎಂಬ ಲೇಖನದಲ್ಲಿ ಅಂದಿನ ಅರಸು ಮನೆತನಗಳ ಮದುವೆಯ ಹಿಂದಿನ ಉದ್ಧೇಶ, ಪರಿಣಾಮಗಳ ಜೊತೆಗೆ ಬೇರೆ ಬೇರೆ ರಾಜರುಗಳ, ರಾಜಮನೆತನದವರ ನಡುವಿನ ಕೌಟಂಬಿಕ ಸಂಬಂಧವನ್ನು ಗುರುತಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಲಾಗಿದೆ.

ಈ ಕೃತಿಯ ಕೊನೆಯ ಹಾಗೂ ಆಸಕ್ತಿದಾಯಕ ಲೇಖನ ಕೃಷ್ಣದೇವರಾಯನ ಕಾಲದಲ್ಲಿ ಪಾಂಡಿಚೆರಿಯಲ್ಲಿ ನಿರ್ಮಾಣವಾದ ಒಂದು ಕೆರೆ ಎಂಬುದು. ಕೃಷ್ಣದೇವರಾಯ ತನ್ನ ಮಂತ್ರಿ ಅಪ್ಪಾಜಿಯೊಂದಿಗೆ ದೇಶಪರ್ಯಟನ ಮಾಡುವಾಗ, ಅಂಗಾಲಿನಲ್ಲಿ ರೋಮ ಬೆಳೆದಿರುವ ಉಯ್ಯಗುಂಡ ವಿಶ್ವರಾಯ ಮೊದಲಿಯಾರ ಎಂಬುವನನ್ನು ನೋಡಿ ಬರುವಾಗ, ದಾರಿಯಲ್ಲಿ ಉನ್ನತವಾಗಿ ಕಾಣುತ್ತಿದ್ದ ಸೌಧವನ್ನು ದೇವಾಲಯವೆಂದು ಭ್ರಮಿಸಿ ರಾಜ ಮಂತ್ರಿ ಇಬ್ಬರೂ ಕೈಮುಗಿಯುತ್ತಾರೆ. ಆದರೆ ಅದು ಆಯಿ ಎಂಬ ಗಣಿಕಾಸ್ತ್ರೀಯೊಬ್ಬಳ ಮನೆಯೆಂದು ತಿಳಿದಾಗ ಕೋಪಗೊಂಡು, ಅದನ್ನು ಕೆಡವಿ ಅಲ್ಲೊಂದು ಕೆರೆಯನ್ನು ನಿರ್ಮಿಸಲು ಹೇಳುತ್ತಾನೆ. ಆಗ ಆಯಿ ತಾನೇ ತನ್ನ ಖರ್ಚಿನಿಂದ ಕೆರೆ ಕಟ್ಟುವುದಾಗಿ ಹೇಳಿ, ವಿಶಾಲವಾದ ಕೆರೆ ಕಟ್ಟಿಸುತ್ತಾಳೆ. ಅದು ಆಯಿಕೊಳವೆಂದು ಹೆಸರಾಗುತ್ತದೆ.

ಈ ಘಟನೆ ಕೃಷ್ಣದೇವರಾಯನ ಕಾಲದ್ದಾದರೆ, ಶಾಸನ ಹಾಕಿಸಿರುವುದು ಹತ್ತೊಂಬತ್ತನೆ ಶತಮಾನದಲ್ಲಿ. ಆಗ ಪಾಂಡಿಚೆರಿಯನ್ನು ಮೂರನೇ ನೆಪೋಲಿಯನ್ನನ ಪ್ರತಿನಿಧಿಯಾಗಿ ಆಳುತ್ತಿದ್ದ ಅಲೆಕ್ಸಾಂಡರ್ ಡ್ಯುರಾಂಡ್ ದುಬ್ರಾಯ್, ನೆಪೋಲಿಯನ್ನನ ಆಜ್ಞೆಯಂತೆ ಅಲ್ಲಿ ಒಂದು ಸುಂದರವಾದ ಜಲಮಂಟಪವನ್ನು ಆಯಿಯ ಶಿಲ್ಪವನ್ನೂ ನಿರ್ಮಿಸಿ ಶಾಸನ ಹಾಕಿಸುತ್ತಾನೆ. ಅದನ್ನು ಈಗ ಆಯಿಮಂಟಪವೆಂದೇ ಕರೆಯಲಾಗುತ್ತಿದೆ. ಈ ಲೇಖನವನ್ನು ಲೇಖಕಿ ನಿರ್ವಹಿಸಿರುವ ರೀತಿ ಅನನ್ಯವಾಗಿದೆ. ರಾಜನ ದರ್ಪವನ್ನು, ಆಯಿಯ ಅಸಾಹಯಕತೆಯನ್ನು ಅವರು ಗುರುತಿಸಿದ್ದಾರೆ. ಅರಸರು ಪ್ರಜೆಗಳೊಂದಿಗೆ ನಡೆದುಕೊಳ್ಳುತ್ತಿದ್ದ ಕ್ರೂರ ದರ್ಪದ ಪ್ರತೀಕದಂತೆ ಹೊರಟಿತು ಆ ಆಜ್ಞೆ ಎಂಬ ಲೇಖಕಿಯ ಮಾತಿನಲ್ಲಿ ಅಸಹನೆಯಿದೆ. ಇತಿಹಾಸದಲ್ಲಿ, ಸೈನೈವನ್ನು ಸ್ವತಃ ಮುನ್ನೆಡೆಸಿದ ಕೆಲವೇ ರಾಜರಲ್ಲಿ ಕೃಷ್ಣದೇವರಾಯನೂ ಒಬ್ಬ ಎಂಬಂತಹ ವಿಷಯಗಳಿಂದ ನಾನು ಗೌರವಿಸುತ್ತಿದ್ದ ಕೃಷ್ಣದೇವರಾಯನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಈ ಲೇಖನ ಓದಿದ ನಂತರ ನಾನು ಹಿಂಜರಿಯಲಿಲ್ಲ. ಆದರೆ ಲೇಖಕಿ ಲೇಖನದ ಶೀರ್ಷಿಕೆಯನ್ನು ಕೊಡುವಾಗ ಮಾತ್ರ ಮತ್ತೆ ಸಂಪ್ರದಾಯಕ್ಕೆ ಬದ್ಧರಾಗಿರುವಂತೆ ಕಾಣುತ್ತಾರೆ. ಅದೇನು ಅಂಥ ಅಪರಾಧವೇನಲ್ಲ. ರಾಜರ ಮುಖಾಂತರವೇ ಇತಿಹಾಸವನ್ನು ಪರಿಭಾವಿಸುವ ನಮ್ಮ ಆನುಷಂಗಿಕ ಮನೋಸ್ಥಿತಿ ಇದು ಅಷ್ಟೆ.

ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಅಸಂಖ್ಯಾತ ಪುಸ್ತಕಗಳನ್ನು ನೋಡಿ ದೃಷ್ಟಿ ತಿರುಗಿಸಿದಂತೆ ಈ ಕೃತಿಯ ವಿಷಯದಲ್ಲಿ ನಡೆದುಕೊಳ್ಳಲಾಗುವುದಿಲ್ಲ. ಇದೊಂದು ಓದಲೇಬೇಕಾದ ಕೃತಿ. ಒಬ್ಬ ಗ್ರಂಥಪಾಲಕನಾಗಿ ನನಗನ್ನಿಸುವುದೇನೆಂದರೆ, ಪ್ರತಿಯೊಂದು ಗ್ರಂಥಾಲಯದಲ್ಲೂ ಇಂತಹ ಕೃತಿ ಇರಲೇಬೇಕು. ಈ ಮಾತು ಹೇಳುವಾಗ ಇಲ್ಲೂ ನನಗೊಂದು ಭಯ ಕಾಡುತ್ತದೆ. ಏಕೆಂದರೆ ಗ್ರಂಥಾಲಯದಲ್ಲಿ ಇರುವ ಪುಸ್ತಕಗಳೆಲ್ಲಾ ಓದಲು ಯೋಗ್ಯವೇನಲ್ಲ ಎಂಬುದು ನಾನು ಅರಿತಿರುವ ಸತ್ಯ. ಆದ್ದರಿಂದ ಇದು ಪ್ರತಿಯೊಬ್ಬರು ಕೊಂಡು ಓದುವ ಕೃತಿ ಎಂಬ ಮಾತು ಸರಿಯೆನ್ನಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X