ದಿವಾಕರ್ ಸಾರ್ ನಮಗಾಗಿ ಇನ್ನಷ್ಟು ಬರೆಯಿರಿ.. ಓದಿರಿ!
ಬೆಂಗಳೂರು, ಆಗಸ್ಟ್ 18 : ವೈಎನ್ ಕೆ ಕಡೆಯ ದಿನಗಳಲ್ಲಿ ಓದುತ್ತಿರಲಿಲ್ಲ. ಕೇವಲ ಬ್ರೌಸ್(ಕಣ್ಣಾಡಿಸು) ಮಾಡುತ್ತಿದ್ದರು. ಹೀಗಾಗಿಯೇ ಅವರ ಬರಹಗಳಲ್ಲಿ ಹಳೇ ಉಲ್ಲೇಖಗಳೇ ಮತ್ತೆ ಮತ್ತೆ ಬರುತ್ತಿದ್ದವುಎಂದು ಜಾನಕಿ ಹೆಸರಲ್ಲಿ ಪತ್ರಕರ್ತ ಜೋಗಿ ಒಂದು ಕಡೆ ಬರೆದಿದ್ದಾರೆ. ಈ ಮಾತು ವೈಎನ್ ಕೆ ಅವರಿಗೆ ಮಾತ್ರವಲ್ಲ, ನಮ್ಮ ನಡುವಿನ ಅನೇಕ ಲೇಖಕರು,ಕವಿಗಳು, ಕಥೆಗಾರರು, ಪತ್ರಕರ್ತರಿಗೂ ಅನ್ವಯ. ಆದರೆ ಈ ಮಾತು ಕಥೆಗಾರ ಎಸ್.ದಿವಾಕರ್ ಅವರಿಗೆ ಅನ್ವಯವಾಗುವುದಿಲ್ಲ ಎಂದು ಅವರ ಅಭಿಮಾನಿಗಳು ಹೇಳುತ್ತಾರೆ.
ದಿವಾಕರ್ ಬರೆಯುವಷ್ಟೇ ಪ್ರೀತಿಯಿಂದ ಈಗಲೂ ಓದುತ್ತಾರೆ. ಓದಿದ್ದನ್ನು ಮತ್ತೆ ಮತ್ತೆ ಓದಿ, ಅರಗಿಸಿಕೊಳ್ಳುತ್ತಾರೆ. ತಾವು ಓದಿದ್ದನ್ನು ಇನ್ನೊಬ್ಬರಿಗೆ ಹೇಳಿ, ಅಕ್ಷರ ಪ್ರಚಾರವನ್ನು ಸದ್ದಿಲ್ಲದೇ ನಡೆಸುತ್ತಾರೆ. ಹೀಗಾಗಿಯೇ ದಿವಾಕರ್ ಇತರರಿಗಿಂತಲೂ ಭಿನ್ನ. ಈಗ ದಿವಾಕರ್ ನೆನಪಾಗಲು ಒಂದು ಕಾರಣವಿದೆ.
ಭಾನುವಾರ(ಆಗಸ್ಟ್ 19) ಬೆಳಗ್ಗೆ 10.30ಕ್ಕೆ ದಿವಾಕರ್ ಅವರ ಎರಡನೇ ಕಥಾ ಸಂಕಲನ ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿಬಿಡುಗಡೆಗೊಳ್ಳಲಿದೆ.
ನಗರದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚ್ರರ್(ವಾಡಿಯಾ ರಸ್ತೆ, ಬಸವನಗುಡಿ)ನಲ್ಲಿ ನಡೆಯುವ ಸಮಾರಂಭದಲ್ಲಿ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಪುಸ್ತಕ ಬಿಡುಗಡೆ ಮಾಡುವರು. ಜೊತೆಗೆ ಸಮಾರಂಭದ ಅಧ್ಯಕ್ಷತೆ ವಹಿಸುವರು. ವಿವೇಕ ಶಾನಭಾಗ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ಅಂಕಿತ ಪುಸ್ತಕ ತನ್ನ 235ನೇ ಪ್ರಕಟಣೆಯಾಗಿ ದಿವಾಕರ್ ಅವರ ಸಂಕಲನವನ್ನು ಹೊರತಂದಿದೆ. ಪುಸ್ತಕ ಬಿಡುಗಡೆ ಸಮಾರಂಭದ ಇನ್ನೊಂದು ವಿಶೇಷ ಏನೆಂದರೆ, ದಿವಾಕರ್ ಅವರ ಅತಿ ಸಣ್ಣ ಕತೆಗಳನ್ನು ಕಿವಿಯಾರೆ ಕೇಳಬಹುದು. ಈ ಶ್ರವಣ ಸುಖವನ್ನು ಹಂಚಲು ಪತ್ರಕರ್ತ ರವಿ ಬೆಳಗೆರೆ, ಎಸ್.ಸುರೇಂದ್ರನಾಥ್, ಸಿಹಿಕಹಿ ಚಂದ್ರು, ಜಹಾಂಗೀರ್ ಮತ್ತು ಪವಿತ್ರಾ ಲೋಕೇಶ್ ಇರುತ್ತಾರೆ.
ಕತೆ ಕೇಳಿಯಾಯಿತು. ಆಮೇಲೆ ಅನ್ನುವಿರಾ? ಕಾಸರವಳ್ಳಿ ಸಹೋದರಿಯರಿಂದ ಭಾವಗೀತೆಗಳ ಗಾಯನವೂ ಇದೆ. ದಿವಾಕರ್ ಇನ್ನಷ್ಟು ಬರೆಯಲಿ, ಓದಲಿ, ಆ ಲಾಭ ನಮಗೆಲ್ಲರಿಗೂ ಸಿಗಲಿ ಎಂದು ಬನ್ನಿ ಒತ್ತಾಯಿಸೋಣ. ಅವರ ಇಮೇಲ್ ವಿಳಾಸ :
(ದಟ್ಸ್ ಕನ್ನಡ ವಾರ್ತೆ)