ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪ್ತರಿಗೆ ಕಾಣಿಕೆ ನೀಡಲು ತೇಜಸ್ವಿ ಪುಸ್ತಕಗಳೇ ಸರಿ!

By Staff
|
Google Oneindia Kannada News


ಯಾಂತ್ರಿಕ ಬದುಕಿನಲ್ಲಿ ಸಿಲುಕಿರುವವರ ಗಮನವನ್ನು ತೇಜಸ್ವಿ ಪುಸ್ತಕಗಳತ್ತ ತಿರುಗಿಸುವ ಪ್ರಯತ್ನ; ಈ ಕಿರು ಬರಹ. ತೇಜಸ್ವಿ ಪುಸ್ತಕಗಳೆಂಬ ಮಾಯಾಲೋಕ ಪ್ರವೇಶಿಸಿ, ಖುಷಿ ಪಡಿ ಎನ್ನುವುದು ಇಲ್ಲಿನ ಆಶಯ.

Annana Nenapugalu - Image Courtesy : www.kamat.comಕನ್ನಡದ ಕೆಲವು ಅತ್ಯುತ್ತಮ ಲೇಖಕರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಇವರ ಮೊದಲ ಪುಸ್ತಕವನ್ನು ನಾನು ಓದಿದ್ದು ದ್ವಿತೀಯ ಪಿ.ಯು.ಸಿ.ಯಲ್ಲಿದ್ದಾಗ. ಅದು ಕರ್ವಾಲೋ ಕಾದಂಬರಿ.

ಹಾರುವ ಓತಿಯ(flying lizzard) ಸಂಶೋಧನೆಯಲ್ಲಿ ಬೆನ್ನತ್ತಿ ಹೋಗುವ ಕರ್ವಾಲೋ ಜೊತೆ ಬರುವ ಪ್ಯಾರ, ಕಿವಿ ಎಂಬ ಹೆಸರಿನ ನಾಯಿ ಮತ್ತು ತೇಜಸ್ವಿಯ ಕತೆ ಹೇಳುವ ಸರಳ, ಸ್ವಾರಸ್ಯಕರ ರೀತಿ ನನ್ನನ್ನು ಅವರ ಅಭಿಮಾನಿಯನ್ನಾಗಿ ಮಾಡಿತು. ಬದುಕಿನ ಸೂಕ್ಷ್ಮಗಳನ್ನು ಗಂಭೀರ ಸಮಸ್ಯೆಗಳನ್ನು ಅತ್ಯಂತ ಸರಳವಾಗಿ ಮತ್ತು ಅಷ್ಟೇ ಸ್ವಾರಸ್ಯಕರವಾಗಿ ನಿರೂಪಿಸುವುದರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಪೂರ್ಣ ಹಸ್ತರು.

ಮಲೆನಾಡಿನ ಕಾಡುಗಳ ರಮ್ಯ ಕತೆಗಳನ್ನು, ಪ್ರಾಣಿ ಪಕ್ಷಿಗಳ ಜೀವನ ರೀತಿಯನ್ನು ಸೂಕ್ಷ್ಮವಾಗಿ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಬರೆಯುವ ತೇಜಸ್ವಿಯ ಪುಸ್ತಕಗಳನ್ನು ಒಮ್ಮೆ ಓದಲು ತೆಗೆದರೆ ಮುಗಿಸುವ ತನಕ ಕೆಳಗಿಡಲು ಅವರ ಬರವಣಿಗೆ ಬಿಡುವುದಿಲ್ಲ.

ತೇಜಸ್ವಿಯವರ ಪುಸ್ತಕಗಳಲ್ಲಿ ಮಾಯ ಮೃಗ ಎಂಬ ಕತೆಗೆ ‘ಕಥಾ’ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ. ಕ್ರಿಷ್ಣೇಗೌಡನ ಆನೆ ಎಂಬ ಕತೆ ಇಂಗ್ಲೀಷ್‌,ಹಿಂದಿ ಭಾಷೆಗಳಿಗೆ ತರ್ಜುಮೆಯಾಗಿದೆ. ಮೂಡಿಗೆರೆಯಲ್ಲಿ ಕುಳಿತು ಸಮೃದ್ಧವಾದ ಸಾಹಿತ್ಯವನ್ನು ಕನ್ನಡಿಗರಿಗೆ ನೀಡಿರುವ ತೇಜಸ್ವಿಯವರು ಎಂದಿಗೂ ಪ್ರಚಾರದಿಂದ ದೂರವೇ ಉಳಿದವರು.

ತೇಜಸ್ವಿಯವರ ಪುಸ್ತಕಗಳೆಲ್ಲವೂ ಸಂಗ್ರಹ ಯೋಗ್ಯ ಹಾಗೂ ಮತ್ತೆ, ಮತ್ತೆ ಓದಲು ಕಾಡುತ್ತಿರುತ್ತವೆ. ಮಲೆನಾಡಿನಲ್ಲಿ ಹಾರುವ ಹಕ್ಕಿ, ಅಲ್ಲಿ ಬೆಳೆಯುವ ಏಲಕ್ಕಿ, ಅಂಡಮಾನ್‌ ನ ಬಂಗಾಳ ಕೊಲ್ಲಿಯಲ್ಲಿ ಈಜುವ ಮೀನುಗಳಿಂದ ಹಿಡಿದು, ಚಂದ್ರನ ಚೂರಿನ ತನಕ ಚಮತ್ಕಾರಕವಾಗಿ ಬರೆದಿರುವ ಪುಸ್ತಕಗಳು ‘ಪುಸ್ತಕ ಪ್ರಕಾಶನ’ ದ ಕೊಡುಗೆಗಳು. ಪೂರ್ಣಚಂದ್ರ ತೇಜಸ್ವಿಯವರ ಕೆಲವು ಪುಸ್ತಕಗಳ ಪಟ್ಟಿ ಇಲ್ಲಿದೆ.

1. ಕರ್ವಾಲೋ
2. ಪರಿಸರದ ಕತೆಗಳು
3. ಕಿರಗೂರಿನ ಗಯ್ಯಾಳಿಗಳು
4. ಚಿದಂಬರ ರಹಸ್ಯ
5. ಸಹಜ ಕೃಷಿ
6. ಅಲೆಮಾರಿಯ ಅಂಡಮಾನ್‌ ಹಾಗು ಮಹಾನದಿ ನೈಲ್‌
7. ಜುಗಾರಿ ಕ್ರಾಸ್‌
8. ಏರೋಪ್ಲೇನ್‌ ಚಿಟ್ಟೆ ಮತ್ತು ಇತರೆ ಕತೆಗಳು
9. ಅಬಚೂರಿನ ಪೋಸ್ಟ್‌ ಆಫೀಸ್‌
10. ಅಣ್ಣನ ನೆನಪು
11. ಮಿಲೇನಿಯಂ ಸೀರೀಸ್‌ 16 ಪುಸ್ತಕಗಳು ( 20ನೇ ಶತಮಾನದ ಕುತೂಹಲಕಾರಿ,ವಿಸ್ಮಯಕಾರಿ ವೈಜ್ಞಾನಿಕ ಕತೆಗಳು)
12. ಮಹಾ ಯುಧ್ಧ ಭಾಗ 1,2,3
13. ಕಾಡಿನ ಕತೆಗಳು ಭಾಗ 1,2,3,4
14. ರುದ್ರ ಪ್ರಯಾಗದ ಭಯಾನಕ ನರಭಕ್ಷಕ ಚಿರತೆ
15. ಮಿಸ್ಸಿಂಗ್‌ ಲಿಂಕ್ಸ್‌
16. ಮಾಯ ಲೋಕ (ಭಾಗ 1 ಮತ್ತು 2)
17. ಪ್ಯಾಪಿಲಾನ್‌ (ಭಾಗ 1 ಮತ್ತು 2) - ಅನುವಾದಿತ ಕೃತಿ

ಈ ಮೇಲಿನ ಯಾವುದೇ ಪುಸ್ತಕಗಳನ್ನು ಉಡುಗೊರೆಯಾಗಿ ವಿಶೇಷ ಸಮಾರಂಭಗಳಲ್ಲಿ ಗೆಳೆಯರಿಗೆ ಕೊಟ್ಟರೆ ಉತ್ತಮ. ಇವು ವಿಶೇಷವಾಗಿ ಇರುತ್ತವೆ ಮತ್ತು ಜೊತೆಗೆ ಕನ್ನಡದ ಕಂಪನ್ನು ಹಂಚುವ ಕೆಲಸ ಮಾಡಿದಂತೆಯೂ ಆಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X