• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಕನ್ನಡ ಕಾವ್ಯಗಳ ಗೆಜ್ಜೆನಾದ’ ಅಪೂರ್ವ ಆಕರ ಗ್ರಂಥ

By Staff
|

ಕನ್ನಡ ಕಾವ್ಯ ನಡೆದು ಬಂದ ದಾರಿಯನ್ನು ಇಲ್ಲಿ ಗುರುತಿಸಲಾಗಿದೆ. ನಿಮ್ಮ ಮನೆ-ಯಲ್ಲಿ ಈ ಪುಸ್ತಕದ ಒಂದು ಪ್ರತಿ ಇರ-ಲಿ...

Gejjenada : Poems for all Occasionsಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಕಸ್ತೂರಿ ಕನ್ನಡದಲ್ಲಿ, ಓದುಗರ ಮನಕ್ಕೆ ಮುದ ಕೊಡುವ ಅಸಂಖ್ಯಾತ ಕಾವ್ಯಗಳು, ಕವಿ-ಕವಯತ್ರಿ ತಿಲಕರ ಹೃದಯವೀಣೆಯಿಂದ ಹೊನಲಾಗಿ ಹರಿದು ಬಂದಿವೆ. ಈ ಕಾವ್ಯರಸದ ಕಂಪು-ಇಂಪುಗಳ ಶ್ರೀಮಂತ ಶ್ರೇಣಿಯ ಒಂದು ಸಿಂಹಾವಲೋಕನವನ್ನು, ಸುವರ್ಣ ಕರ್ನಾಟಕದ ಸುಸಂದರ್ಭದಲ್ಲಿ ಕನ್ನಡದ ಅಭಿಮಾನಿಗಳಿಗೆ ಅರ್ಪಿಸುವ ಒಂದು ಮಹೋದ್ದೇಶದಿಂದ ಕನ್ನಡ ಕಾವ್ಯಗಳ ‘ಗೆಜ್ಜೆನಾದ ’ ಎಂಬ ಒಂದು ಸಂಕಲನ ಕೃತಿಯನ್ನೀಗ ಪ್ರಕಾಶಿಸಲಾಗಿದೆ.

ಕ್ರಿ.ಶ. 5ನೇ ಶತಮಾನದಿಂದ, ಕ್ರಿ.ಶ. 21ನೇ ಶತಮಾನದ ಇಂದಿನವರೆಗೂ ಮೂಡಿ ಬಂದಿರುವ ಕಾವ್ಯಗಳಲ್ಲಿ ಬಳಕೆಯಾಗಿರುವ ದ್ವಿಪದಿ, ತ್ರಿಪದಿ, ಚೌಪದಿ, ಷಟ್ಪದಿ, ಕಂದ, ವೃತ್ತ, ಸೀಸಪದ್ಯ, ಕೀರ್ತನೆ, ವಚನ, ಉಗಾಭೋಗ, ಸುಳಾದಿ, ದಂಡಕ, ವೃತ್ತನಾಮ, ಗುಂಡಕ್ರಿಯವೇ ಮೊದಲಾದ ವಿವಿದ ಛಂದಸ್ಸಿನ ಮಾದರಿ ಪದ್ಯಗಳ ಮಧುರ-ಮಂಜುಳ ಗಾನವನ್ನು ಈ ಒಂದೇ ಸಂಕಲನದಲ್ಲಿ ಓದುಗರು ಸವಿಯಬಹುದಾಗಿದೆ.

ಸಂಕಲನಕಾರರಾದ ಪ್ರೊ।।ಎ.ವಿ. ಸೂರ್ಯನಾರಾಯಣಸ್ವಾಮಿ ಮತ್ತು ಎಚ್‌.ಎಸ್‌. ಗೋವಿಂದಗೌಡ ಅವರು ಸುಮಾರು 40 ವರ್ಷಗಳಿಂದ ತಾವೇ ಸಂಗ್ರಹಿಸಿ ರಕ್ಷಿಸಿಟ್ಟುಕೊಂಡಿದ್ದ, ಈ ವರೆಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗದ ಅನೇಕ ಕವಿ-ಕೃತಿಗಳನ್ನೊಳಗೊ0ಡ, ಮುನ್ನೂರನ್ನೂ ಮೀರಿದ ಗ್ರಂಥಗಳ ಆಧಾರವುಳ್ಳ, ಪ್ರತಿ ದಾಖಲೆಯೂ ಪ್ರಮಾಣೀಕರಿಸಲ್ಪಟ್ಟ ಕಾವ್ಯ ಭಂಡಾರವನ್ನು, ಓದುಗರ ರಸಾನುಭವಕ್ಕಾಗಿ ಈ ಗ್ರಂಥದ ಮೂಲಕ ನಿವೇದಿಸಿರುತ್ತಾರೆ. ಕನ್ನಡ ಕಾವ್ಯ ನಡೆದು ಬಂದ ದಾರಿಯನ್ನು ಇಲ್ಲಿ ಹತ್ತು ಪ್ರಮುಖ ಹೆಜ್ಜೆಗಳ ಗೆಜ್ಜೆನಾದದಿಂದ ಗುರುತಿಸಲಾಗಿದೆ.

 • ಒಂದನೆಯ ಗೆಜ್ಜೆ : ಕನ್ನಡ ಶಾಸನ ಮತ್ತು ನಾಡು ನುಡಿ ವರ್ಣನೆಗಳ ತೋರಣ.
 • ಎರಡನೆಯ ಗೆಜ್ಜೆ : ಕನ್ನಡ ಕಾವ್ಯ ಕಥಾಸಂಗತಿಗಳ ಮತ್ತು ಕವಿಶೈಲಿಯ ಸಿಹಿ ಹೂರಣ.
 • ಮೂರನೆಯ ಗೆಜ್ಜೆ : ಕನ್ನಡ ಶರಣ ಶರಣೆಯರ ವಚನ, ದಾಸರ ಕೀರ್ತನೆ, ಉಗಾಭೋಗ, ಸುಳಾದಿ, ದಂಡಕ, ವೃತ್ತನಾಮ, ಗುಂಡಕ್ರಿಯ, ತತ್ತ್ವಪದ, ಅನುಭಾವ ನುಡಿ ಮತ್ತು ನೀತಿ ಪದ್ಯಗಳ ಬೋಧನ.
 • ನಾಲ್ಕನೆಯ ಗೆಜ್ಜೆ : ಕನ್ನಡ ಕಥನ ಕವನಗಳ ರಸಾಯನ.
 • ಐದನೆಯ ಗೆಜ್ಜೆ : ಕನ್ನಡ ಚಿತ್ರಕವಿತ್ವ, ಸಮಸ್ಯೆ, ಬೆಡಗಿನ ವಚನಗಳು, ಕೀರ್ತನೆಗಳು, ಪದ್ಯಗಳು ಮತ್ತು ಒಗಟುಗಳ ರಂಜನ.
 • ಆರನೆಯ ಗೆಜ್ಜೆ : ಕನ್ನಡ ಜನಪದ ಗೀತೆಗಳ ಉಲ್ಲಾಸನ.
 • ಏಳನೆಯ ಗೆಜ್ಜೆ : ಕನ್ನಡ ಯಕ್ಷಗಾನ, ರಂಗಗೀತೆ ಮತ್ತು ಚಿತ್ರಗೀತೆಗಳ ಆಲಾಪನ.
 • ಎಂಟನೆಯ ಗೆಜ್ಜೆ : ಕನ್ನಡ ಭಾವಗೀತೆಗಳ ಸುಗಂಧ ಸಿಂಚನ.
 • ಒಂಬತ್ತನೆಯ ಗೆಜ್ಜೆ : ಕನ್ನಡ ಗಂಭೀರ ಹಾಸ್ಯ ಗೀತಾಂಜಲಿಯ ನಗುನಂದನ.
 • ಹತ್ತನೆಯ ಗೆಜ್ಜೆ : ಕನ್ನಡ ಕವಿಸೂಕ್ತಿ ಮತ್ತು ಗಾದೆಗಳ ಸಮಾಲೋಕನ.

ಇತ್ತೀಚೆಗೆ ಬಿಡುಗಡೆಯಾದ ಕನ್ನಡ ಕಾವ್ಯಗಳ ಗೆಜ್ಜೆನಾದವು ಈಗಾಗಲೇ ವಿಮರ್ಶಕರಿಂದ, ವಿದ್ವಾಂಸರಿಂದ, ಅಧ್ಯಾಪಕರಿಂದ, ವಿದ್ಯಾರ್ಥಿಗಳಿಂದ ಮತ್ತು ಸಾಮಾನ್ಯ ಓದುಗರಿಂದ ವ್ಯಾಪಕವಾದ ಮೆಚ್ಚುಗೆಯನ್ನು ಪಡೆದಿದೆ. ತಾವು ಬಹುದಿನಗಳಿಂದ ಹುಡುಕುತ್ತಿದ್ದ ಅನೇಕ ಪದ್ಯಗಳು ಅಥವಾ ಪದ್ಯಗಳ ಪೂರ್ಣಪಾಠ, ಅಚ್ಚರಿಗೊಳಿಸುವ0ಥ ಅಜ್ಞಾತ ಕೃತಿಗಳು ಮತ್ತು ಕವಿಗಳು (‘‘ಎಲ್ಲವೂ ಅಲ್ಲಾಹ್‌’’ ಎಂಬ ಸಂಸ್ಕೃತದ ‘‘ಅಲ್ಲೋಪನಿಷತ್‌’’ನ ಭಾವಾನುವಾದ; ‘ಗೋವಿನ ಹಾಡು’ ಕೃತಿಯ 114 ಪಂಕ್ತಿಗಳ ಅಪರೂಪದ ಪೂರ್ಣಪಾಠ; ಮಹಮದ್‌ ಪೀರ್‌ ಹೇಳಿರುವ ‘ನಸ್ಯದ ಹಾಸ್ಯ ಮಂತ್ರ’; ಇ. ಮಾರ್ಸ್‌ ಡೆನ್‌ ಎಂಬ ಇಂಗ್ಲಿಷ್‌ ಕವಿ ತಾನೇ ರಚಿಸಿದ ‘ತಾಯಿ’ ಪದ್ಯ ಇತ್ಯಾದಿ), ಜನಸಾಮಾನ್ಯರಲ್ಲಿನ ಕವಿತಾ ಪ್ರತಿಭೆ - ಇವೆಲ್ಲವನ್ನೂ ಈ ಗ್ರಂಥದಲ್ಲಿ ಕಂಡು ಆಶ್ಚರ್ಯ-ಆನಂದ ಪಟ್ಟಿದ್ದೇವೆ0ದು ಹಲವಾರು ಓದುಗರು ಬರೆದು ತಿಳಿಸಿದ್ದಾರೆ.

ಕನ್ನಡ ಕಾವ್ಯದ ನುಡಿಮುತ್ತುಗಳನ್ನು ಉಲ್ಲೇಖಿಸಿ, ತಮ್ಮ ಭಾಷಣ-ಬರವಣಿಗೆಗಳನ್ನು ಶ್ರೀಮಂತಗೊಳಿಸಲಿಚ್ಛಿಸುವವರಿಗೆ; ಭಾವಗೀತೆ-ಭಕ್ತಿಗೀತೆ ಚಿತ್ರಗೀತೆ-ಜನಪದ ಗೀತೆ-ನಾಡಗೀತೆ ಇವುಗಳಲ್ಲಿ ಸ್ಪರ್ಧೆ ಏರ್ಪಡಿಸುವವರಿಗೆ; ರಸಪ್ರಶ್ನೆ, ಒಗಟುಗಳು, ನಗೆಹನಿಗಳಿಂದ

ಸಭೆ-ಸಮಾರಂಭಗಳಿಗೆ ಮೆರಗು ನೀಡಬಯಸುವವರಿಗೆ; ಮತ್ತು ಕನ್ನಡ ವಿಭಾಗಗಳ, ಸಂಘ-ಸಂಸ್ಥೆಗಳ ಗ್ರಂಥಾಲಯಗಳಿಗೆ ಕನ್ನಡ ಕಾವ್ಯಗಳ ಗೆಜ್ಜೆನಾದವು ಒಂದು ಅಮೂಲ್ಯ ಆಕರ ಗ್ರಂಥ ಹಾಗೂ ಸಿದ್ಧ ಕೈಪಿಡಿಯಾಗುವುದೆಂಬುದರಲ್ಲಿ ಸಂದೇಹವೇ ಇಲ್ಲ.

ಸುಂದರ ಮುಖಪುಟ ಮತ್ತು ಮುದ್ದಾದ ವಿನ್ಯಾಸ-ಮಾಟಗಳಲ್ಲಿ, 702 ಪುಟಗಳಲ್ಲಿ ಅಚ್ಚಾಗಿ ಬಂದಿರುವ ಈ ‡‡ಸುವರ್ಣ ಕೊಡುಗೆ‡‡ಯು ಸುಲಭ ದರದಲ್ಲಿ ಈ ಕೆಳಕಂಡ ವಿಳಾಸದಲ್ಲಿ ದೊರೆಯುತ್ತದೆ.

ಹನ್ಯಾಳು ಪ್ರಕಾಶನ, ನಂ.-1, ನ್ಯೂ ಕಾಂತರಾಜ ಅರಸ್‌ ರಸ್ತೆ, ಕುವೆಂಪುನಗರ, ಮೈಸೂರು-23

ದೂರವಾಣಿ - 98458 61887 (ಗೋವಿಂದಗೌಡ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X