ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಿವಾಸರಾಜು ಮೇಷ್ಟ್ರೇ,ಅಭಿನಂದನೆ ಬೇಡ ಅನ್ನಬೇಡಿ!

By Staff
|
Google Oneindia Kannada News


Felicitation to G. Srinivasaraju ಬೆಂಗಳೂರು : ‘ಸದ್ದಿಲ್ಲದ ಸಾಹಿತ್ಯ ಪರಿಚಾರಕ’ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಗುರ್ತಿಸಲ್ಪಡುವ, ಚಿ.ಶ್ರೀನಿವಾಸರಾಜು ಅವರನ್ನು ಅಭಿನಂದಿಸುವ ಸಮಾರಂಭವನ್ನು ಭಾನುವಾರ(ಜೂ.3) ಏರ್ಪಡಿಸಲಾಗಿದೆ.

ಅಂದು ಇಳಿಹೊತ್ತು 3ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದೆ. ಜಿ.ಎಸ್‌.ಶಿವರುದ್ರಪ್ಪ ಪ್ರಾಸ್ತಾವಿಕ ಮಾತುಗಳನ್ನು ನುಡಿಯಲಿದ್ದಾರೆ.

‘ಅಂತರ್ಜಲ’ ಎಂಬ ಅಭಿನಂದನ ಗ್ರಂಥವನ್ನು ಯು.ಆರ್‌.ಅನಂತಮೂರ್ತಿ ಬಿಡುಗಡೆ ಮಾಡಿ, ಶ್ರೀನಿವಾಸರಾಜು ಅವರಿಗೆ ಸಮರ್ಪಿಸುವರು. ಆಗ ಕೆ.ವಿ.ನಾರಾಯಣ ಅವರಿಂದ ಅಭಿನಂದನ ನುಡಿ. ಚೆನ್ನವೀರ ಕಣವಿ ಅವರಿಂದ ಅಧ್ಯಕ್ಷ ಭಾಷಣ.

ಎಂ.ಜಿ.ಚಂದ್ರಶೇಖರಯ್ಯ ಕಾರ್ಯಕ್ರಮವನ್ನು ನಿರೂಪಿಸುವರು. ಈ ಸಂದರ್ಭದಲ್ಲಿ ಶ್ರೀನಿವಾಸ ರಾಜು ಅವರ ನಾಟಕಗಳ ರಂಗ ಪ್ರಯೋಗ ನಡೆಯಲಿದೆ. ಅಭಿನಯ ತರಂಗ ತಂಡ ಈ ಹೊಣೆ ಹೊತ್ತಿದೆ. ಕರ್ನಾಟಕ ನಾಟಕ ಅಕಾಡೆಮಿ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ.

ಅಭಿನಂದನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಂಗಗೀತೆ, ಕಾವ್ಯನಮನವೂ ಉಂಟು. ಚಂದ್ರಶೇಖರ ತಾಳ್ಯ ಅಧ್ಯಕ್ಷತೆಯಲ್ಲಿ ಇವೆಲ್ಲವೂ ನಡೆಯಲಿವೆ ಎಂದು ಶ್ರೀನಿವಾಸರಾಜು ಅಭಿನಂದನ ಸಮಿತಿ ಕಾರ್ಯಾಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾವ್ಯ ನಮನದಲ್ಲಿ ಪಾಲ್ಗೊಳ್ಳುವ ಕವಿಗಳು : ಅಬ್ದುಲ್‌ ರಷೀದ್‌, ಮಮತಾ ಜಿ.ಸಾಗರ್‌, ಡಿ.ವಿ.ಪ್ರಹ್ಲಾದ್‌, ಸುಧಾ ಶರ್ಮ, ವಿನಯಾ ಒಕ್ಕುಂದ, ಜಿ.ಎನ್‌.ಮೋಹನ್‌, ಬಿ.ಎನ್‌.ಮಲ್ಲೇಶ್‌, ಎಲ್ಸಿ ನಾಗರಾಜ್‌, ಎಂ.ಆರ್‌.ಭಗವತಿ, ಡಿ.ಸಿ.ಗೀತಾ, ವಿಕ್ರಮ ವಿಸಾಜಿ, ಕವಿತಾ ರೈ, ಪಿ.ಚಂದ್ರಿಕಾ, ಸಂದೀಪ ನಾಯಕ, ಕೆ.ವೈ.ನಾರಾಯಣಸ್ವಾಮಿ, ಎನ್‌.ಕೆ.ಹನುಮಂತಯ್ಯ, ರಾಮಲಿಂಗಪ್ಪ ಟಿ.ಬೇಗೂರು, ಆರ್‌.ಚಲಪತಿ.

ಶ್ರೀನಿವಾಸರಾಜು ಯಾರು? ಗೊತ್ತಿಲ್ಲದವರಿಗೆ ಎರಡೇ ಮಾತಿನಲ್ಲಿ ವಿವರಣೆ...

  • ಸಾಕಷ್ಟು ಚಲನಶೀಲವೂ ಶಬ್ದಮಯವೂ ಆಗಿದ್ದಂಥ ವಾತಾವರಣದಲ್ಲಿ, ಬರೆಯುವ ಬಗ್ಗೆ ಬಹುಮಟ್ಟಿಗೆ ಅನಾಸಕ್ತರಾಗಿ, ಆದರೆ ಬರವಣಿಗೆಯ ಬಗ್ಗೆ, ಬರವಣಿಗೆಗೆ ತೊಡಗಿಕೊಳ್ಳುವವರ ಬಗ್ಗೆ ಅತ್ಯಂತ ಆಸಕ್ತರಾಗಿ, ನಿರಂತರವಾಗಿ ಮೂರು ದಶಕಗಳ ಕಾಲ, ಬರೆಯುವ ಸಾಮರ್ಥ್ಯವಿದ್ದೂ ತಕ್ಕ ಅವಕಾಶಗಳಿಲ್ಲದ ಬಹುಸಂಖ್ಯೆಯ ಯುವ ಪ್ರತಿಭೆಗಳಿಗೆ ಒಂದು ವೇದಿಕೆಯನ್ನು ಕಲ್ಪಿಸಿ, ಸಮೃದ್ಧವಾದ ಬೆಳೆಗೆ ‘ಅಂತರ್ಜಲ’ದಂತೆ ವರ್ತಿಸಿದವರು ಚಿ.ಶ್ರೀನಿವಾಸರಾಜು ಅವರು. -ಜಿ.ಎಸ್‌.ಶಿವರುದ್ರಪ್ಪ
  • ಸಂಕೋಚ ಸ್ವಭಾವದ, ಧ್ವನಿಯೆತ್ತಿ ಮಾತನಾಡಲೂ ಹಿಂಜರಿಯುವ, ಮಾಡಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ, ಕನ್ನಡಾಭಿಮಾನದ ಸೊಕ್ಕು ಕಿಂಚಿತ್ತೂ ಇಲ್ಲದ ಸಜ್ಜನ ಈ ಶ್ರೀನಿವಾಸರಾಜು. ಎಂದೂ ಕ್ರಾಂತಿಯ ಕಹಳೆ ಊದದ ಶ್ರೀನಿವಾಸರಾಜು ಕ್ರೆೃಸ್ಟ್‌ ಕಾಲೇಜಿನಲ್ಲಿ ನಡೆಸಿರುವುದು ನಿಜವಾದ ಕ್ರಾಂತಿ. -ಪಿ.ಲಂಕೇಶ್‌
(ದಟ್ಸ್‌ ಕನ್ನಡ ವಾರ್ತೆ)

ಪೂರಕ ಓದಿಗೆ
‘ಕನ್ನಡ ಮೇಷ್ಟ್ರು’ ಪರಂಪರೆ ಶ್ರೀಮಂತಗೊಳಿಸಿದ ರಾಜುಮೇಷ್ಟ್ರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X