ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಾಹಿತ್ಯ ರಂಗ- ಕುವೆಂಪು ಸಾಹಿತ್ಯ ಸಮೀಕ್ಷೆ

By Super
|
Google Oneindia Kannada News

ಅಮೆರಿಕದಲ್ಲಿರುವ ಕೆಲವು ಕನ್ನಡಿಗರು ತಮ್ಮ ದೈನಂದಿನ ಕೆಲಸ ಕಾರ್ಯ, ಒತ್ತಡಗಳ ನಡುವೆಯೂ ಕರ್ನಾಟಕದಲ್ಲಿರುವ ಕೆಲವು ಕನ್ನಡಿಗರಿಗಿಂತ ಹೆಚ್ಚು ಸಾಹಿತ್ಯ ಚಟುವಟಿಕೆಗಳಲ್ಲಿ ನಿರತರಾಗಿರಬಹುದೇ ಎಂಬ ಅನುಮಾನ, ಹೆಮ್ಮೆ ಆಗಾಗ ನನ್ನನ್ನು ಕಾಡುವುದುಂಟು. www.thatskannada.com ಹಾಗೂ ಕೆಲವು ಕನ್ನಡ ಪತ್ರಿಕೆಗಳಿಗೆ ಅಮೆರಿಕಾದ ಲೇಖಕರು ನಿಯಮಿತವಾಗಿ ಬರೆಯುತ್ತಿರುವುದನ್ನು ಗಮನಿಸಿದರೆ ಈ ಅನುಮಾನ ಸಹಜ.

ಅಮೆರಿಕದ ಕೆಲ ಸ್ನೇಹಿತರು ಹಿರಿಯ ಕವಿ ಮಿತ್ರ ಡಾ. ಲಕ್ಷ್ಮಿನಾರಾಯಣ ಭಟ್ಟರ ಮೂಲಕ ' ಕುವೆಂಪು ಸಾಹಿತ್ಯ ಸಮೀಕ್ಷೆ ' ಎಂಬ ಪುಸ್ತಕವನ್ನು ನನಗೆ ಕಳುಹಿಸಿ ಕೊಟ್ಟಿದ್ದಾರೆ. ದಕ್ಷಿಣ ಕ್ಯಾಲಿಫೋರ್ನಿಯಾದ ಅರ್ಕೇಡಿಯಾದಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿರುವ ನಾಗ ಐತಾಳ ರು ( ಅಹಿತಾನಲ- ಕಾವ್ಯನಾಮ) ಈ ಕೃತಿಯನ್ನು ಸಂಪಾದಿಸಿದ್ದಾರೆ. ಕುವೆಂಪು ಜನ್ಮ ಶತಾಬ್ದಿ ಸಂದರ್ಭದಲ್ಲಿ ಅಮೆರಿಕಾದ ನಾನಾ ಪ್ರಾಂತ್ಯಗಳಲ್ಲಿ ನೆಲೆಸಿರುವ ಲೇಖಕರಿಂದ ಬರೆಯಿಸಿದ ಲೇಖನಗಳ ಸಂಗ್ರಹವಿದು. ಕನ್ನಡದ ರಸಋಷಿಗೆ ಅಮೆರಿಕನ್ನಡಿಗರು ಅರ್ಪಿಸಿದ ಪ್ರೀತಿಯ, ಶ್ರಧ್ಧೆಯ ನುಡಿನಮನವಿದು.

ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರು ಕಳೆದ ಮೂರ್ನಾಲ್ಕು ದಶಕಗಳಲ್ಲಿ ಅನೇಕ ಕನ್ನಡ ಸಂಘ /ಕೂಟಗಳನ್ನು ಸ್ಥಾಪಿಸಿಕೊಂಡಿದ್ದಾರೆ. ನೀವು ಯಾವುದೇ ಪ್ರಮುಖ ನಗರಕ್ಕೆ ಹೋದರೂ ಅಲ್ಲೊಂದು ಕನ್ನಡ ಕೂಟವನ್ನು ಕಾಣಬಹುದು. ಸಾಂಸ್ಕೃತಿಕ , ಸಾಮಾಜಿಕ , ಸಮುದಾಯ ಚಟುವಟಿಕೆಗಳು ಈ ಕೂಟಗಳ ಉದ್ದೇಶ. ಆದರೆ, ಕನ್ನಡ ಸಾಹಿತ್ಯಕ್ಕೇ ಮೀಸಲಾದ ಯಾವುದೇ ಸಂಘಟನೆ ಇರಲಿಲ್ಲ. ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯಿರುವ, ಕನ್ನಡದಲ್ಲಿ ಬರೆಯಲು ಒಲವಿರುವ ಕನ್ನಡಿಗರ ಅಭಿಲಾಷೆಯನ್ನು ಗಮನದಲ್ಲಿಟ್ಟು ಸಮಾನ ಮನಸ್ಕರು ಕಲೆತು ಹೊಸ ಸಂಘಟನೆ ಸ್ಥಾಪಿಸಿಕೊಂಡಿದ್ದಾರೆ. ಅದರ ಹೆಸರು ' ಕನ್ನಡ ಸಾಹಿತ್ಯ ರಂಗ '. ಈ ಸಂಘವೇ ಪ್ರಸ್ತುತ ಕೃತಿಯನ್ನು ಪ್ರಕಟಿಸಿರುವುದು. ಮೇ ತಿಂಗಳ ಕೊನೆಯಲ್ಲಿ ಸಾಹಿತ್ಯ ರಂಗವು ಫಿಲಡಲ್ಫಿಯದಲ್ಲಿ ಏರ್ಪಡಿಸಿದ್ದ ಮೊದಲ ಸಮ್ಮೇಳನದಲ್ಲಿ ಈ ಕೃತಿ ಬಿಡುಗಡೆಯಾಯಿತು. ಕೃತಿ ಬಿಡುಗಡೆ ಮಾಡಿದವರು ಡಾ. ಪ್ರಭುಶಂಕರ.

ಕುವೆಂಪು ಜೀವನ-ವಿಚಾರ ಸಾಹಿತ್ಯ, ಕವನ-ಕಥನ ಸಾಹಿತ್ಯ , ಕಥೆ-ಕಾದಂಬರಿ-ನಾಟಕ ಸಾಹಿತ್ಯ, ಶ್ರೀ ರಾಮಾಯಣ ದರ್ಶನಂ .. ಹೀಗೆ ನಾಲಕ್ಕು ಪ್ರಮುಖ ಭಾಗಗಳನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಡಾ. ಹೆಚ್‌. ವೈ. ರಾಜಗೋಪಾಲ್‌, ಡಾ. ಮೈ. ಶ್ರೀ. ನಟರಾಜ್‌, ವೈ. ಆರ್‌. ಮೋಹನ್‌, ಎಚ್‌. ವಿ. ರಂಗಾಚಾರ್‌, ಶ್ರೀವತ್ಸ ಜೋಶಿ, ಎಂ. ಆರ್‌. ದತ್ತಾತ್ರಿ, ನಳಿನಿ ಮೈಯ, ತ್ರಿವೇಣಿ ಶ್ರೀನಿವಾಸ ರಾವ್‌, ಶಶಿಕಲಾ ಚಂದ್ರಶೇಖರ್‌, ರಮೇಶ ಎ. ಎಂ. ಗೌಡ, ಗುಂಡು ಶಂಕರ, ಎನ್‌. ಲಕ್ಷ್ಮಿಪತಿ, ಲಕ್ಷ್ಮಿನಾರಾಯಣ ಗಣಪತಿ, ಪ್ರಕಾಶ್‌ ಹೇಮಾವತಿ, ಸಂಧ್ಯಾ ರವೀಂದ್ರನಾಥ್‌, ವಿಶ್ವನಾಥ್‌ ಹುಲಿಕಲ್‌, ಮಾಯಾ ಪರಪನಹಳ್ಳಿ, ವಿಮಲಾ ರಾಜಗೋಪಾಲ್‌ ಮುಂತಾದವರು ಕುವೆಂಪು ಕುರಿತ ಸಾಕಷ್ಟು ಅಧ್ಯಯನ ಮಾಡಿ ಶ್ರಮವಹಿಸಿ ಲೇಖನಗಳನ್ನು ಬರೆದಿದ್ದಾರೆ.

ಅಮೆರಿಕಾದ ನೆಲದಲ್ಲಿ ಮನೆಮಾಡಿ, ಇಂಗ್ಲಿಷ್‌ಮಯ ಪರಿಸರದಲ್ಲಿ ಕನ್ನಡವನ್ನು ನೆನಪು ಮಾಡಿಕೊಳ್ಳುವುದೇ ದೊಡ್ಡ ಸಂಗತಿ. ಅದರಲ್ಲೂ ಕುವಂಪು ಕುರಿತು 354 ಪುಟಗಳ ಬೃಹತ್‌ಗ್ರಂಥ ಹೊರತರುವುದಿದೆಯಲ್ಲ ಅದು ನಿಜಕ್ಕೂ ಅಭಿಮಾನದ ವಿಷಯ. ಈ ಗ್ರಂಥ ಸಂಪಾದನೆ ಮಾಡಿದ ನಾಗ ಐತಾಳರಿಗೆ ಅಭಿನಂದನೆ ಹೇಳಿದರೆ ([email protected]) ಪುಸ್ತಕದ ಹಿಂದೆ ಕೆಲಸ ಮಾಡಿದ ಅಮೆರಿಕನ್ನಡಿಗರ ಮನ ಪುಳಕಗೊಂಡೀತು. ಅಂತೆಯೇ, ಸಾಹಿತ್ಯ ರಂಗ ಸಂಸ್ಥೆಯನ್ನು ಕಟ್ಟುವಲ್ಲಿ ಅಪಾರ ಶ್ರಮವಹಿಸಿರುವ ಹೆಚ್‌. ವೈ. ರಾಜಗೋಪಾಲರಿಗೂ ಸಹ. ([email protected])

ಈ ಪುಸ್ತಕದಿಂದ ಕನ್ನಡದ ತವರು ನೆಲದಲ್ಲಿರುವ ನಾವು ಕಲಿವಂಥದ್ದು ಸಾಕಷ್ಟಿದೆ. ಅಮೆರಿಕನ್ನಡಿಗರ ಪ್ರೀತಿಗೆ ಸಲಾಮುಗಳು!

English summary
Kuvempu Sahithya Sammekshe, collection of articles and essays by nri kannada writers, published by Kannada Sahithya Ranga. A book talk by Vishweshwara Bhat
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X