ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಜೀವಿ’ಯವರ ‘ಔಷಧಿಯಿಲ್ಲದೆ ಬದುಕಲು ಕಲಿಯಿರಿ’: ಸ್ವಾನುಭವದ ಎರಕ

By ಡಾ. ವಸುಂಧರಾ ಭೂಪತಿ
|
Google Oneindia Kannada News

ಬದುಕು ಸಂಕೀರ್ಣವಾಗುತ್ತಿರುವ ಇಂದಿನ ದಿನಗಳಲ್ಲಿ ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳಲು ಬಹಳಷ್ಟು ಹೆಣಗಾಡುತ್ತಿದ್ದಾನೆ. ಹೈಟೆಕ್‌ ಆಸ್ಪತ್ರೆಗಳು ಹೆಚ್ಚುತ್ತಿದ್ದು ಚಿಕಿತ್ಸೆ ದುಬಾರಿಯೆನಿಸುತ್ತಿರುವುದು ಜನಸಾಮಾನ್ಯರ ಪಾಲಿಗೆ ಬಿಸಿ ತುಪ್ಪದಂತಾಗಿದೆ. ‘Prevetion is better than cure’ ಎಂಬ ಆಂಗ್ಲ ನಾಣ್ನುಡಿಯಂತೆ ಕಾಯಿಲೆ ಬಂದ ಮೇಲೆ ಚಿಕಿತ್ಸೆಗೆ ಪರದಾಡುವುದಕ್ಕಿಂತ ಕಾಯಿಲೆ ಬಾರದಂತೆ ನೋಡಿಕೊಳ್ಳುವುದು ಒಳಿತಲ್ಲವೆ? ಈ ಮಾತನ್ನೇ ಅಕ್ಷರಶಃ ಪ್ರತಿಧ್ವನಿಸುತ್ತಿದೆ 'ಔಷಧಿಯಿಲ್ಲದೆ ಬದುಕಲು ಕಲಿಯಿರಿ' ಪುಸ್ತಕ.
ಪ್ರಕೃತಿಯಾಂದಿಗೇ ಹುಟ್ಟಿ ಬೆಳೆದ ಮನುಷ್ಯ ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರಕೃತಿಯನ್ನೇ ಮರೆತು ಬಾಳುತ್ತಿದ್ದಾನೆ. ಆದ್ದರಿಂದಲೇ ಬಹುಶಃ ಕಾಯಿಲೆಗಳು ಹೆಚ್ಚಾಗುತ್ತಿವೆಯೇನೋ? ಇದನ್ನು ಮನಗಂಡ ಲೇಖಕರು 'ಔಷಧಿಯಿಲ್ಲದೆ ಬದುಕಲು ಕಲಿಯಿರಿ' ಪುಸ್ತಕದಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಮಹತ್ವವನ್ನು ವಿಚಾರಪೂರ್ಣವಾಗಿ ಮತ್ತು ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಕನ್ನಡ, ಸಂಸ್ಕೃತ, ಇಂಗ್ಲಿಷ್‌ ಭಾಷೆಗಳಲ್ಲಿ ಪದವಿ ಮತ್ತು ಡಾಕ್ಟರೇಟ್‌ ಪಡೆದಿರುವ ಡಾ।'ಜೀವಿ' ಕುಲಕರ್ಣಿಯವರು ಕನ್ನಡ ಸಾರಸ್ವತ ಲೋಕಕ್ಕೆ ಕವನ ಸಂಕಲನಗಳನ್ನು, ಕಥಾ ಸಂಗ್ರಹಗಳನ್ನು, ಕಾದಂಬರಿ, ನಾಟಕ ಸಂಗ್ರಹ, ಜೀವನ ಕಥನ, ವಿಮರ್ಶೆ, ಅನುವಾದ ಮುಂತಾದ ಅನೇಕ ಪ್ರಕಾರಗಳಲ್ಲಿ ಕೊಡುಗೆಯನ್ನು ನೀಡಿದ ಬಹುಮುಖ ಪ್ರತಿಭೆಯುಳ್ಳವರು.

ಈಗ ಪುಷ್ಟಿಕರ ಆಹಾರ, ಶುದ್ಧವಾದ ಗಾಳಿ, ಪರಿಶುದ್ಧ ನೀರು ನಮಗೆ ದೊರೆಯುತ್ತಿಲ್ಲ. ಇದಲ್ಲದೇ ನಮ್ಮದೇ ಪ್ರಜ್ಞಾಪರಾಧದಿಂದ ಮದ್ಯ, ಮಾಂಸ, ತಂಬಾಕು ಮುಂತಾದವುಗಳ ಸೇವನೆಯಿಂದಲೇ ಕೆಲವು ಕಾಯಿಲೆಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದೇವೆ. ಈ ಎಲ್ಲವನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಯೋಗಾಭ್ಯಾಸ ಮತ್ತು ಪ್ರಕೃತಿ ಚಿಕಿತ್ಸೆಯೆಂದು ಲೇಖಕರು ಅಭಿಪ್ರಾಯಪಡುತ್ತಾರೆ. ಯೋಗವನ್ನು ಒಂದು ಚಿಕಿತ್ಸಾಕ್ರಮವಾಗಿ ಬಳಸದೇ ಜೀವನ ವಿಧಾನವನ್ನಾಗಿ ರೂಪಿಸಿಕೊಂಡರೆ ಜೀವನ ಆನಂದಮಯವಾಗುತ್ತದೆ.

ಮಾನಸಿಕ ಒತ್ತಡ ನಿಭಾಯಿಸಲಾಗದೇ ಒದ್ದಾಡುತ್ತಿರುವ ಜನರಿಗೆ ಮತ್ತು ಔಷಧಿಗಳ ಪಾರ್ಶ್ವ-ಪರಿಣಾಮಗಳಿಂದ ಬೇಸತ್ತಿರುವವರಿಗೆ ಈ ಪುಸ್ತಕ ಚೇತೋಹಾರಿಯಾಗಿದೆ ಮಾತ್ರವಲ್ಲ ಜೀವನೋತ್ಸಾಹವನ್ನು ಮರಳಿ ಮೂಡಿಸುತ್ತದೆ. ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಂಡ 'ಜೀವಿ'ಯವರು ತಮ್ಮದೇ ಬದುಕಿನ ಅನುಭವಗಳನ್ನು ಮತ್ತು ಸಾಧನೆಗಳನ್ನು ದಾಖಲಿಸಿದ್ದಾರೆ.

Learning to live without DRUGS !

ಈ ಪುಸ್ತಕದ ಮೊದಲ ಒಂಭತ್ತು ಅಧ್ಯಾಯಗಳಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಬಗ್ಗೆ ವಿವರಿಸಿದ್ದಾರೆ. ನಮ್ಮ ದೇಶದ ಹಲವಾರು ಕಡೆ ಮಾತ್ರವಲ್ಲದೇ ಅಮೇರಿಕೆಯಲ್ಲಿಯೂ ಲೇಖಕರು ಯೋಗಶಿಬಿರಗಳನ್ನೇರ್ಪಡಿಸಿ ಯಶಸ್ವಿಯಾಗಿದ್ದಾರೆ. ಆಹಾರದ ಬಗ್ಗೆ ಎಚ್ಚರಿಕೆ ನೀಡುತ್ತ ವ್ಯಾಯಾಮ, ಪ್ರಾರ್ಥನೆಯ ಮಹತ್ವ ಮತ್ತು ಉಪವಾಸದ ಮಹಿಮೆಯನ್ನು ವರ್ಣಿಸಿದ್ದಾರೆ. ಬರ್ನಾಡ್‌ ಶಾ ರ ‘Don’t teach, motivate’ ಎಂಬ ಮಾತು ಲೇಖಕರ ಮೇಲೆ ಪ್ರಭಾವ ಬೀರಿದ್ದರಿಂದ ಅದರಂತೆಯೇ ತಾವೇ ಮೊದಲು ಯೋಗಾಭ್ಯಾಸವನ್ನು ಅನುಷ್ಠಾನಕ್ಕೆ ತಂದು ನಂತರ ಇತರರಿಗೆ ಕಲಿಸಿದರು.

ಪ್ರಕೃತಿ ಚಿಕಿತ್ಸೆಯಲ್ಲಿನ ಜಲ ಚಿಕಿತ್ಸೆ, ಮಣ್ಣಿನ ಚಿಕಿತ್ಸೆ, ಸೂರ್ಯ ಸ್ನಾನ ಮುಂತಾದವುಗಳು ಯಾವ ರೀತಿ ದೇಹದಲ್ಲಿನ ವಿಷಾಣುಗಳನ್ನು ಹೊರಹಾಕಿ ಶುದ್ಧಿಗೊಳಿಸುತ್ತವೆಂಬುದನ್ನು ವಿವರಿಸಿದ್ದಾರೆ. ಜಲನೇತಿ, ಪ್ರಾಣಾಯಾಮ, ಕಪಾಲಭಾತಿ ಮುಂತಾದವುಗಳನ್ನು ಪ್ರತಿದಿನ ಮಾಡುತ್ತಿದ್ದಲ್ಲಿ ತಲೆನೋವು ನೆಗಡಿ ದೂರವಾಗಬಹುದೆಂದು ಮತ್ತು ಔಷಧಿಯಿಲ್ಲದೆ ಕಾಯಿಲೆ ಹೇಗೆ ಗುಣಪಡಿಸಿಕೊಳ್ಳಬಹುದೆಂದು ತಿಳಿಸಿದ್ದಾರೆ.

ಪ್ರತಿಯಾಬ್ಬರೂ ಜೀವನದಲ್ಲಿ 'ಐದು ಬೇಕು'ಗಳನ್ನು 'ಐದು ಬೇಡ'ಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮ ಆರೋಗ್ಯ ಪಡೆಯಲು ಖಂಡಿತ ಸಾಧ್ಯವಿದೆ ಎಂದಿದ್ದಾರೆ.

ಐದು ಬೇಕುಗಳು :

ಸೂರ್ಯೋದಯದ ಮೊದಲು ಏಳಬೇಕು,
ನೀರು ಕುಡಿಯಬೇಕು,
ಒಂದು ಮೈಲು ನಡೆಯಬೇಕು,
ಯೋಗಾಭ್ಯಾಸ ಮಾಡಬೇಕು,
ಧ್ಯಾನ ಮಾಡಬೇಕು.

ಐದು ಬೇಡಗಳು:

ಹೆಚ್ಚು ಉಣಬೇಡ,
ದುರಭ್ಯಾಸ ಬೇಡ,
ದುಷ್ಟರ ಸಂಗತಿ ಬೇಡ,
ನಕಾರಾತ್ಮಕ ವಿಚಾರ ಬೇಡ,
ಮೃದು-ಫೋಮ್‌ ಹಾಸಿಗೆ ಬೇಡ, ಚಾಕೊಲೇಟ್‌ ತಿನ್ನಬೇಡ, ಮಾತ್ರೆ ನುಂಗಬೇಡ.

ವಾಯು ವಿಹಾರವೇ ಉತ್ತಮ ವ್ಯಾಯಾಮವೆಂದು ಮತ್ತು ಸೂರ್ಯನಮಸ್ಕಾರದಲ್ಲಿ ಹತ್ತು ಆಸನಗಳು, ಅಂದರೆ- ಊರ್ಧ್ವ ನಮಸ್ಕಾರಾಸನ, ಜಾನುಶಿರಾಸನ, ಏಕಪಾದ ಪ್ರಸರಣ, ದ್ವಿಪಾದ ಪ್ರಸರಣ, ಸಾಷ್ಟಾಂಗ ಪ್ರಣಿಪಾತಾಸನ, ಭುಜಂಗಾಸನ, ಭೂಧರಾಸನ, ಏಕಪಾದ ಆಕರ್ಷಣಾಸನ, ದ್ವಿಪಾದ ಆಕರ್ಷಣಾಸನ, ನಮಸ್ಕಾರಾಸನ ಮುಂತಾದವುಗಳು ಅಡಕವಾಗಿರುವುದರಿಂದ ಇದು ಅತ್ಯುತ್ತಮ ಆಸನವೆಂದು ತಿಳಿಸಿದ್ದಾರೆ.

ನಿಸರ್ಗ ಚಿಕಿತ್ಸಾ ತಜ್ಞ ಡಾ. ಕೆ.ಎಸ್‌.ಶರ್ಮ, ಯೋಗಶಿಕ್ಷಕ ಬಿ.ಕೆ.ಎಸ್‌.ಐಯ್ಯಂಗಾರ್‌, ಹಠಯೋಗಿ ನಿಕಂ ಗುರೂಜಿ, ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ, ಮತ್ತು ಡಾ. ಪದ್ಮನಾಭ ಬೋಳಾರರವರೊಂದಿಗೆ ನಡೆಸಿದ ಮಹತ್ವದ ಸಂವಾದ ಹಾಗೂ ಸಂದರ್ಶನಗಳಿವೆ. ಅಲ್ಲದೇ ಪ್ರಕೃತಿ ಚಿಕಿತ್ಸೆಯ ಕುರಿತು ಅನೇಕ ಉಪಯುಕ್ತ ಪುಸ್ತಕಗಳನ್ನು ಆಂಗ್ಲಭಾಷೆಯಲ್ಲಿ ರಚಿಸಿದ ಡಾ.ಎಚ್‌.ಕೆ ಬಾಖ್ರುರವರ ಜನಪ್ರಿಯ ಪರಿಚಯಾತ್ಮಕ ಲೇಖನಗಳಿವೆ.

ಅನುಬಂಧದಲ್ಲಿ ಹಣ್ಣುಗಳು ತರಕಾರಿಗಳು ಮತ್ತು ಅಕ್ಕಿ ಗೋಧಿ ಮುಂತಾದ ಆಹಾರ ಧಾನ್ಯಗಳಲ್ಲಿರುವ ಪೋಷಕಾಂಶಗಳ ಬಗೆಗೆ ವಿವರಣೆಯಿದೆ. 'ಯೋಗ ಎಟ್‌ ಹೋಂ' ಅಧ್ಯಾಯದಲ್ಲಿ ಮನೆಮನೆಗೆ ತೆರಳಿ ಲೇಖಕರು ಮುಂಬಯಿಯಲ್ಲಿ ಮಾತ್ರವಲ್ಲ ಅಮೇರಿಕೆಯಲ್ಲಿಯೂ ಯೋಗ ಕಲಿಸಿದ ಬಗ್ಗೆ ವಿವರಣೆಯಿದೆ. ಯೋಗ ಕಲಿಯಲು ಸಮಯವಿಲ್ಲ ಎಂದು ಹೇಳುವವರಿಗೆ ಮನೆಗೆ ಹೋಗಿ ಯೋಗ ಕಲಿಸಿ ಸಾರ್ಥಕತೆ ಅನುಭವಿಸಿದ್ದಾರೆ.

'ಔಷಧಿಯಿಲ್ಲದೆ ಬದುಕಲು ಕಲಿಯಿರಿ' ಪುಸ್ತಕವು, ಡಾ. 'ಜೀವಿ' ಕುಲಕರ್ಣಿಯವರು ತಮ್ಮ ಅನುಭವಗಳನ್ನು ಎರಕ ಹೊಯ್ದು, ಜನಸಾಮಾನ್ಯರಿಗೆ ಆರೋಗ್ಯಕರ ಜೀವನ ನಡೆಸಲು ನೀಡಿದ ಖರ್ಚಿಲ್ಲದ ರೆಡಿಮೇಡ್‌ ಫುಡ್‌ನಂತಿದೆ. ಈಗಾಗಲೇ ಮೂರು ಮುದ್ರಣಗಳನ್ನು ಕಂಡಿರುವ ಪುಸ್ತಕ ಪ್ರತಿಯಾಬ್ಬ ಕನ್ನಡಿಗನ ಮನೆಯ ಗ್ರಂಥಾಲಯದಲ್ಲಿರಬೇಕು ಮತ್ತು ಈ ಪುಸ್ತಕದ ಪ್ರಯೋಜನವನ್ನು ಎಲ್ಲರೂ ಪಡೆದುಕೊಂಡಲ್ಲಿ ಲೇಖಕರ ಶ್ರಮ ಸಾರ್ಥಕವಾಗುತ್ತದೆ.

ಧ್ಯಾನಾಸಕ್ತ ಲೇಖಕರ ಮುಖಪುಟ ಹೊಂದಿರುವ, ವಿವರಣೆ ಸಹಿತ ಕೆಲವು ಯೋಗಾಸನದ ಚಿತ್ರಗಳನ್ನೊಳಗೊಂಡಿರುವ, ಯಾವುದೇ ಮುದ್ರಣ ದೋಷವಿಲ್ಲದ ಈ ಪುಸ್ತಕ ಎಲ್ಲರೂ ಓದುವುದಲ್ಲದೇ ಇದರಲ್ಲಿಯ ನಿಯಮಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ನಿರಾತಂಕ ಮತ್ತು ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯವಾಗುತ್ತದೆ.

***

ಕೃತಿ : ಔಷಧಿಯಿಲ್ಲದೆ ಬದುಕಲು ಕಲಿಯಿರಿ
ಲೇಖಕ : ಡಾ. 'ಜೀವಿ' ಕುಲಕರ್ಣಿ
ಪುಟ : 180, ಬೆಲೆ : 100 ರೂ.

ಪ್ರಕಟಣೆ : ಹರ್ಷವರ್ಧನ ಪ್ರಕಾಶನ, 8-ಎ/15, ಜವಾಹರ ಸೊಸೈಟಿ, ಗೋವಿಂದನಗರ, ಬೊರಿವಿಲಿ(ಪಶ್ಚಿಮ), ಮುಂಬಯಿ-400 092.
(ಸ್ನೇಹಸೇತು : ವಿಜಯ ಕರ್ನಾಟಕ)

English summary
Dr. Vasundhara Bhoopathy’s review of ‘Oushadhiyillade Badukalu Kaliyiri’, a book by Dr. Jeevi Kulakarni
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X