ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಸುಧೇಂದ್ರರ ತ್ರಿವಳಿ ಪುಸ್ತಕ ಸಂಭ್ರಮ ; ತ್ರಿಮೂರ್ತಿಗಳ ಸಂಗಮ !

By Super
|
Google Oneindia Kannada News

ಪುಸ್ತಕ ಮೂರು ರೂಪಾಯಿ ನೂರು! ಇಂಥದೊಂದು ಒನ್‌ಲೈನರ್‌ ಆಕರ್ಷಣೆಯ ಪುಸ್ತಕ ಬಿಡುಗಡೆ ಸಮಾರಂಭ ಜನವರಿ 25ರ ಭಾನುವಾರ ಬೆಂಗಳೂರಿನಲ್ಲಿ ನಡೆಯುತ್ತಿದೆ.

ಕೆಂಪೇಗೌಡ ಊರಿಸಿದ್ದ ಗೋಪುರಗಳ ಪರಿಧಿ ಮೀರಿ ಬೆಳೆದಿರುವ ಬೆಂಗಳೂರು ಮಹಾನಗರದ ಯಾವುದೋ ಮೂಲೆಯಲ್ಲಿ , ಪ್ರತಿದಿನವೂ ಒಂದಲ್ಲಾ ಒಂದು ಪುಸ್ತಕ ಬಿಡುಗಡೆ ಸಮಾರಂಭ ನಡೆಯುವಾಗ- ಜ.25ರ ಸಮಾರಂಭದ್ದೇನು ಅಗ್ಗಳಿಕೆ? ಸ್ವಲ್ಪ ತಾಳಿ, ವಿಶೇಷತೆ ಇದೆ ;

ಪುಸ್ತಕಗಳ ಕರ್ತೃ ವಸುಧೇಂದ್ರ. ವಸುಧೇಂದ್ರ ಗೊತ್ತಲ್ಲ - ತರುಣ ಕಥೆಗಾರ, ಮೆಲುದನಿಯ ಕಥೆಗಾರ. ಬಳ್ಳಾರಿ ಸೀಮೆಯ ವಸುಧೇಂದ್ರ ಅವರ ತಿಳಿಗನ್ನಡದ ಕಥೆಗಳನ್ನು ಮೆಚ್ಚದವರು ಕಡಿಮೆ. ಹೊಸಪೀಳಿಗೆಯ ಕಥೆಗಾರರಲ್ಲಿ ವಸುಧೇಂದ್ರ ಅವರದ್ದು ಎದ್ದು ಕಾಣುವ ಹೆಸರು.
ವಸುಧೇಂದ್ರ ಅವರ ಮೂರು ಪುಸ್ತಕಗಳು ಒಮ್ಮೆಗೇ ಬಿಡುಗಡೆಯಾಗುತ್ತಿವೆ. ಒಂದು, ಕಥಾಸಂಕಲನ, ಹೆಸರು 'ಯುಗಾದಿ'. ಇನ್ನೊಂದು- ಸುಲಲಿತ ಪ್ರಬಂಧಗಳ ಸಂಕಲನ, 'ಕೋತಿಗಳು ಸಾರ್‌ ಕೋತಿಗಳು'. ಮತ್ತೊಂದು- ಅನುವಾದಿತ ಕಥೆಗಳ ಸಂಕಲನ- 'ಮಿಥುನ'. ಒಂದಕಿಂತ ಒಂದು ಛಂದ !
ಮೇಲಿನ ಮೂರು ಪುಸ್ತಕಗಳ ಪ್ರಕಟಣೆಯ ಮೂಲಕ ವಸುಧೇಂದ್ರ ಪ್ರಕಾಶಕರೂ ಆಗುತ್ತಿದ್ದಾರೆ. ಪ್ರಕಾಶನದ ಹೆಸರು 'ಛಂದ ಪುಸ್ತಕ'. ಹೆಸರು ಚಂದ ಇದೆಯಲ್ಲವಾ ?
ಮೂರು ಪುಸ್ತಕಗಳನ್ನೊಳಗೊಂಡ 'ಸಿಡಿ' ತಟ್ಟೆ ಕೂಡ ಸಮಾರಂಭದಲ್ಲಿ ಬಿಡುಗಡೆಯಾಗುತ್ತಿರುವುದು ಇನ್ನೊಂದು ವಿಶೇಷ.
ಛಂದದ ಪುಸ್ತಕಗಳು ಬಿಡುಗಡೆಯ ದಿನ ಸೋವಿಬೆಲೆಗೆ ಸಿಗುತ್ತಿವೆ. ಚಂದದ ಕಾಗದ- ಮುಖಪುಟದ ಮೂರೂ ಪುಸ್ತಕಗಳು ನೂರು ರುಪಾಯಿಗೆ ಲಭ್ಯ! ಕನ್ನಡ ಪುಸ್ತಕಗಳು ದುಬಾರಿ ಎಂದವರಾರು ? ಆ ಕಾರಣದಿಂದಲೇ ಇದು 'ಪುಸ್ತಕ ಮೂರು ರೂಪಾಯಿ ನೂರು!' ಶೀರ್ಷಿಕೆಯ ಕಾರ್ಯಕ್ರಮ. 50 ರುಪಾಯಿ ಬೆಲೆಯ 'ಸಿಡಿ' ತಟ್ಟೆ ಸಮಾರಂಭದಂದು 40 ರುಪಾಯಿಗೆ ದೊರೆಯುತ್ತದೆ.
ಇದಿಷ್ಟೇ ಅಲ್ಲ , ಖ್ಯಾತ ಕಥೆಗಾರರಾದ ಕುಂ.ವೀರಭದ್ರಪ್ಪ , ಜಯಂತ ಕಾಯ್ಕಿಣಿ ಹಾಗೂ ಕೆ.ಸತ್ಯನಾರಾಯಣ ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ತ್ರಿವಳಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕನ್ನಡ ಕಥನಲೋಕದ ತ್ರಿಮೂರ್ತಿಗಳ ಸಮಾಗಮ.

ಇದಿಷ್ಟು ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸುದ್ದಿವಿಶೇಷ. ಕಾರ್ಯಕ್ರಮ ನಡೆಯುವ ಸ್ಥಳ : ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌, ವಾಡಿಯಾ ರಸ್ತೆ , ಬಸವನಗುಡಿ, ಬೆಂಗಳೂರು.
25 ಜನವರಿ 2004 ರಂದು, ಬೆಳಗ್ಗೆ 10 ಗಂಟೆಗೆ.

*

ಪುಸ್ತಕ ಪ್ರಸವದ ಸಂಭ್ರಮದಲ್ಲಿರುವ ಕಥೆಗಾರ ವಸುಧೇಂದ್ರ ಅವರ ಕಿರು ಪರಿಚಯ ಮಾಡಿಕೊಡುವುದಾದರೆ-

ವಸುಧೇಂದ್ರ ಬಳ್ಳಾರಿ ಜಿಲ್ಲೆಯ ಸಂಡೂರಿನವರು. ಹುಟ್ಟಿದ್ದು 1969ರಲ್ಲಿ . ಸುರತ್ಕಲ್‌ನಲ್ಲಿ ಇಂಜಿನಿಯರಿಂಗ್‌ ಕಲಿತು. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ ಎಂ.ಇ. ಪದವಿ ಪಡೆದವರು. ಪ್ರಸ್ತುತ ಜೆನಿಸಿಸ್‌ ಸಾಫ್ಟ್‌ವೇರ್‌ನಲ್ಲಿ ಪ್ರಾಜೆಕ್ಟ್‌ ಡೈರೆಕ್ಟರ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ವಸುಧೇಂದ್ರ ಕಥೆಗಾರರಾಗಿ ಕನ್ನಡಿಗರಿಗೆ ಪರಿಚಿತರು.

'ಮನೀಷೆ' ವಸುಧೇಂದ್ರರ ಚೊಚ್ಚಿಲ ಕಥಾಸಂಕಲನ. ವಸುಧೇಂದ್ರರ ' ಇ-ಕಾಮರ್ಸ್‌ ' ಎನ್ನುವ ವೈಜ್ಞಾನಿಕ ಪುಸ್ತಕವೂ ಪ್ರಕಟವಾಗಿದೆ.

*

ಜ.25ರಂದು ಬಿಡುಗಡೆಯಾಗುತ್ತಿರುವ ಮೂರು ಪುಸ್ತಕಗಳ ಕಿರು ಪರಿಚಯ :

ಯುಗಾದಿ

ವಸುಧೇಂದ್ರರ ಈ ಕಥಾಸಂಕಲನದಲ್ಲಿ ಒಟ್ಟಾರೆ ಇಪ್ಪತ್ತೆೈದು ಕಥೆಗಳಿವೆ. ಬಯಲುಸೀಮೆ ಮತ್ತು ಸಾಫ್ಟ್‌ವೇರ್‌ ಬದುಕುಗಳ ನಡುವೆ ಸಂಚರಿಸುವ ಇಲ್ಲಿನ ದೊಡ್ಡ ಕಥೆಗಳ ನಡುವೆ ಪೋಣಿಸಿದ ಪುಟ್ಟ ಕಥೆಗಳು ಓದನ್ನು ಮತ್ತಷ್ಟು ಹಿತಕರವಾಗಿಸಿವೆ. ಮುನ್ನುಡಿ, ಲೇಖಕನ ಮಾತು ಮುಂತಾದ ಭಾರಗಳಿಲ್ಲದ ಈ ಪುಸ್ತಕದಲ್ಲಿ ಅರ್ಪಣೆಯೂ ಒಂದು ಕಥೆ ; ಬೆನ್ನುಡಿ ಇನ್ನೊಂದು ಕಥೆ! ಅಲ್ಲಲ್ಲಿ ಇರುವ ಸೃಜನ್‌ರ ರೇಖಾಚಿತ್ರಗಳು ನೋಟದ ಸೊಬಗನ್ನು ಹೆಚ್ಚಿಸಿವೆ. ಈ ಸಂಕಲನದಲ್ಲಿನ ಯುಗಾದಿ ಹಾಗೂ ಅಪಸ್ವರದಲ್ಲೊಂದು ಆರ್ತನಾದ ಕಥೆಗಳು http://www.thatskannada.com ನಲ್ಲಿ ಪ್ರಕಟವಾಗಿವೆ.

ಮಿಥುನ

ತೆಲುಗಿನ ಹೆಸರಾಂತ ಕಥೆಗಾರ ಶ್ರೀರಮಣರ ಐದು ಕಥೆಗಳನ್ನು ಇಲ್ಲಿ ವಸುಧೇಂದ್ರ ಕನ್ನಡಕ್ಕೆ ತಂದಿದ್ದಾರೆ. ಮಿಥುನ ತೆಲುಗಿನಲ್ಲಿ ಸಂಚಲನೆ ಉಂಟು ಮಾಡಿದ ಕಥೆ. ಒಂದೇ ಪತ್ರಿಕೆಯಲ್ಲಿ ಎರಡು ಬಾರಿ ಪ್ರಕಟವಾಗಿದ್ದು , ಷಷ್ಠಿಪೂರ್ತಿ ಸಮಾರಂಭಗಳಲ್ಲಿ ವಾಚಿಸಲ್ಪಡುವುದೂ, ಎಂ.ಟಿ.ವಾಸುದೇವನ್‌ ನಾಯರ್‌ ಸಿನಿಮಾ ಮಾಡಿದ್ದು ಈ ಕಥೆಯ ಬಗೆಗಿನ ದಂತಕಥೆಗಳಲ್ಲಿ ಕೆಲವು. ದಟ್ಸ್‌ಕನ್ನಡದಲ್ಲೂ ಪ್ರಕಟವಾಗಿರುವ ಮಿಥುನ ಕಥೆ ಓದುಗರ ಅಪಾರ ಮೆಚ್ಚುಗೆ ಪಡೆದ ಕಥೆಯೂ ಹೌದು. ಬಾಪು ಅವರ ರೇಖಾಚಿತ್ರಗಳಿಂದ ಮಿಥುನ ಪುಸ್ತಕದ ಸೌಂದರ್ಯ ಇಮ್ಮಡಿಸಿದೆ.

ಕೋತಿಗಳು ಸಾರ್‌ ಕೋತಿಗಳು

ಹದಿನೈದು ಪ್ರಬಂಧಗಳ ಸಂಕಲನವಿದು. ಬಯಲುಸೀಮೆ ಬದುಕಿನ ಕುರಿತಾದ ಇವುಗಳಲ್ಲಿ ಕೆಲವು ಲಲಿತ, ಮತ್ತೆ ಕೆಲವು ಸ್ವಾರಸ್ಯಕರ. ಉದ್ದಕ್ಕೂ ನವಿರು ಹಾಸ್ಯದ ಲೇಪನವುಳ್ಳ ಭಾಷೆ ಸರಳವಾಗಿ ಓದಿಸಿಕೊಳ್ಳುವುದರಿಂದ ಇವನ್ನು ಸುಲಲಿತ ಪ್ರಬಂಧಗಳು ಎಂದು ಕರೆಯಲಾಗಿದೆ. ಒಳಪುಟದಧಿಲ್ಲಿರುವ ಸೃಜನ್‌ ರೇಖಾಚಿತ್ರಗಳು ಚೆಂದ ಇವೆ.

ಈ ಮೂರೂ ಪುಸ್ತಕಗಳು ನಿಮ್ಮ ಸಂಗ್ರಹದಲ್ಲಿರಲಿ.

ಪ್ರತಿಗಳಿಗಾಗಿ ಸಂಪರ್ಕಿಸಿ : ಛಂದ ಪುಸ್ತಕ, I-004, ಮಂತ್ರಿ ಪ್ಯಾರಡೈಸ್‌, ಬನ್ನೇರುಘಟ್ಟ ರಸ್ತೆ , ಬೆಂಗಳೂರು-560076. ದೂರವಾಣಿ : 98444 22782

English summary
Vasudhendra is noted short story writer in Kannada. His three books, collection of short stories and collection of essays will be released in Bangalore on 25th Jan, 2004. Vasudhendra is playing the publisher role too! Three books package slated for release is available just for RS 100. A sunday buy for refreshing reading
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X