• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಂಸ್ಕೃತಿಕ ಮುಖಾಮುಖಿಯ ‘ಮರೀಚಿಕೆ ಮತ್ತು ಇತರ ಕಥೆಗಳು’

By Staff
|
  • ಬಿ.ವಿ.ಕೆದಿಲಾಯ, ಬೆಂಗಳೂರು

Nalini Maiya‘ಮರೀಚಿಕೆ ಮತ್ತು ಇತರ ಕಥೆಗಳು’ ಅಮೆರಿಕಾದಲ್ಲಿ ಕಳೆದ ಮೂವತ್ತು ವರ್ಷಗಳಿಂದ ವಾಸಿಸುತ್ತಿರುವ ನಳಿನಿ ಮೈಯ ಅವರ 19 ಕತೆಗಳ ಸಂಕಲನ. ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ಒಂದು ಸೂಕ್ಷ್ಮ ಸಂವೇದನಾಶೀಲ ಜೀವ ಹತ್ತು ಸಾವಿರ ಮೈಲಿಗಳಾಚೆಯ ವಿಭಿನ್ನ ಸಾಂಸ್ಕೃತಿಕ ವಾತಾವರಣದ ವಿವಿಧ ಸನ್ನಿವೇಶಗಳಿಗೂ, ಅನುಭವಗಳಿಗೂ ಸ್ಪಂದಿಸಿದ ಪರಿ ಈ ಕತೆಗಳಲ್ಲಿ ಸೊಗಸಾಗಿ ಮೂಡಿ ಬಂದಿದೆ.

ಲೇಖಕಿ ಹೇಳುವಂತೆ ‘30 ವರ್ಷಗಳ ಹಿಂದೆ ಅಮೆರಿಕಕ್ಕೆ ಬಂದ ಕನ್ನಡಿಗರ ಅನುಭವಗಳು ಇತ್ತೀಚೆಗೆ ಬಂದವರ ಅನುಭವಗಳಿಗಿಂತ ಭಿನ್ನವಾದವು. ಆಗ ಅಮೆರಿಕದಲ್ಲಿ ಕನ್ನಡಿಗರೇಕೆ, ಹೆಚ್ಚು ಮಂದಿ ಭಾರತೀಯರೇ ಇರಲಿಲ್ಲ. ಭಾರತವೂ ಈಗಿನಂತೆ ‘ಅಮೆರಿಕನೈಸ್‌’ ಆಗಿರಲಿಲ್ಲ. ಪೂರ್ವ ಪೂರ್ವವೇ; ಪಶ್ಚಿಮ ಪಶ್ಚಿಮವೇ ಆಗಿದ್ದ ಕಾಲವದು. ಈ ಹೊಸ ಲೋಕದಲ್ಲಿ ಗಂಡ-ಹೆಂಡಿರ ಸಂಬಂಧ, ಸಮಾಜದಲ್ಲಿ ಹೆಣ್ಣಿನ ಸ್ಥಾನ, ಹೆತ್ತವರಿಗೆ ಸಲ್ಲಿಸಬೇಕಾದ ಋಣ ಮುಂತಾದ ಮೌಲ್ಯಗಳೂ, ಹಳೆಯ ನಂಬಿಕೆಗಳೂ ತೀವ್ರ ಪರೀಕ್ಷೆಗೀಡಾಗುತ್ತಿದ್ದವು. ಅಲ್ಲದೆ ನಾವು ಯಾವ ಭಾರತಕ್ಕಾಗಿ ಹಂಬಲಿಸುತ್ತಿದ್ದೇವೋ ಆ ಭಾರತ ಈಗ ಅಲ್ಲಿಲ್ಲ ಎಂಬ ಭ್ರಮ ನಿರಸನ, ನಾವು ಅರಸುತ್ತಿದ್ದ ಸುಖ, ಸಂತೃಪ್ತಿ, ಸಂತೋಷಗಳು ಈ ವೈಭೋಗ, ಐಸಿರಿಗಳ ನಾಡಾದ ಅಮೆರಿಕದಲ್ಲಿ ನಮಗೆ ಸಿಕ್ಕುತ್ತಿಲ್ಲವೇಕೆ ಎಂಬ ನಿರಾಸೆ- ಹೀಗೆ ಅನಿವಾಸಿ ಕನ್ನಡಿಗರ ಮನಸ್ಸಿನೊಳಗಿನ ಆಂದೋಳನಗಳನ್ನು ಕಥೆಯಾಗಿ ಕಾದಿಡುವ ಪ್ರಯತ್ನ ಇಲ್ಲಿದೆ.’ ಈ ಪ್ರಯತ್ನದಲ್ಲಿ ಲೇಖಕಿ ಗಣನೀಯ ಯಶಸ್ಸನ್ನು ಗಳಿಸಿದ್ದಾರೆ. ಮೂರು ದಶಕಗಳ ಕಾಲ ಅಮೆರಿಕದಲ್ಲಿದ್ದರೂ ಕನ್ನಡವನ್ನು ಮರೆಯದಿರುವುದಷ್ಟೇ ಅಲ್ಲ , ಸಮರ್ಥವಾಗಿ ಬಳಸಿ ತನ್ನ ಅನುಭವಗಳನ್ನು, ಚಿಂತನೆಗಳನ್ನೂ ಸೂಕ್ತ ರೀತಿಯಲ್ಲಿ ವ್ಯಕ್ತಗೊಳಿಸುವುದರಲ್ಲಿ ಯಶಸ್ವಿಯಾಗಿರುವುದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಬೇಕು.

ಅನಿವಾಸಿಗಳ ಮಾನಸಿಕ ತುಮುಲಗಳು, ಸಾಂಸ್ಕೃತಿಕ ಮುಖಾಮುಖಿಯಲ್ಲಿ ಎದುರಿಸಬೇಕಾಗಿ ಬರುವ ಸವಾಲುಗಳು, ಮೌಲ್ಯ ಸಂಘರ್ಷದಿಂದುಂಟಾಗುವ ಸಮಸ್ಯೆಗಳು, ಹದಗೆಡುವ ಮಾನವೀಯ ಸಂಬಂಧಗಳು, ತಲೆಮಾರುಗಳ ಅಂತರ ಸೃಷ್ಟಿಸುವ ಸಮಸ್ಯೆಗಳು, ‘ಇಲ್ಲಿರಲಾರೆ, ಅಲ್ಲಿ ಹೋಗಲಾರೆ’ ಎಂಬಂಥ ಸನ್ನಿವೇಶಗಳು- ಇಂಥ ಅನೇಕ ಜೀವಂತ ವಾಸ್ತವಗಳ ಮನಮುಟ್ಟುವ ಚಿತ್ರಣ ಈ ಕತೆಗಳಲ್ಲಿ ಪರಿಣಾಮಕಾರಿಯಾಗಿ ಮೈ ತಾಳಿದೆ. ಅನುಭವದ ಪ್ರಾಮಾಣಿಕತೆ, ವಸ್ತುವಿನ ನಾವೀನ್ಯ, ಸಲೀಸಾಗಿ ಓದಿಸಿಕೊಂಡು ಹೋಗುವ ಭಾಷೆ, ಅಲ್ಲಲ್ಲಿ ಮಿಂಚುವ ಹಾಸ್ಯ ಪ್ರಜ್ಞೆ, ಭಾವಲಿಪ್ತವಾಗಿದ್ದೂ ಭಾವಾತಿರೇಕಕ್ಕೆ ಬಲಿಯಾಗದ ಸಂಯಮಪೂರ್ಣ ಬರವಣಿಗೆ.. ಡಾ. ಎಚ್‌.ಎಸ್‌.ವಿ.ಯವರು ಹೇಳಿರುವಂತೆ ‘ಬದುಕನ್ನು ತೆರೆದ ಕಣ್ಣಿಂದ ನೋಡುವ ಧೈರ್ಯ ಮತ್ತು ಧಾರಣ ಶಕ್ತಿಯಿಂದ ಓದುಗರಿಗೆ ಆಪ್ತವಾಗುತ್ತದೆ.’

ಇಲ್ಲಿನ ಕತೆಗಳ ವಸ್ತುವಿನಲ್ಲಿ ಸಾಕಷ್ಟು ವೈವಿಧ್ಯವೂ ಇರುವುದು ಗಮನಿಸಬೇಕಾದದ್ದು. ‘ಸೋಲು ಗೆಲುವು’, ಪ್ರೀತಿಯ ಸ್ಪರ್ಶ’ ಅಪ್ಪಟ ಅಮೆರಿಕನ್‌ ದಂಪತಿಗಳ ಕತೆಗಳಾದರೆ ‘ಬಡತನ ಮತ್ತು ಆತ್ಮ ಗೌರವ’ ಬಾಲ್ಯದ ನೆನಪನ್ನಾಧರಿಸಿದ ಕತೆ, ‘ಮರಳಿ ಯತ್ನವ ಮಾಡದಿರು’, ‘ಸಮರಸವೇ ಜೀವನ’, ‘ಲಾಟರಿ ಜ್ವರ’ ಹಾಸ್ಯ ಪ್ರಧಾನವಾದ ಲಘು ಧಾಟಿಯ ಕತೆಗಳಾದರೆ ‘ಮರೀಚಿಕೆ’, ‘ಗಿಳಿಯು ಪಂಜರದೊಳಿಲ್ಲ’, ‘ಸುಖವಾಗಿದ್ದೀಯಾ’, ‘ಯಾರು ಹಿತವರು ನಿನಗೆ’ ಎಂಬ ಕತೆಗಳಲ್ಲಿ ಅನಿವಾಸಿ ಅನುಭವಗಳ ಸೂಕ್ಷ್ಮಗಳನ್ನು ಗ್ರಹಿಸಿ ಗಂಭೀರವಾದ ಚಿಂತನೆಗೊಡ್ಡುವ ಪ್ರಕ್ರಿಯೆ ಸಮರ್ಥವಾಗಿ ಮೂಡಿ ಬಂದಿದೆ. ಉದಾಹರಣೆಗೆ -‘ಸುಖವಾಗಿದ್ದೀಯಾ’ ಕತೆಯಲ್ಲಿ ಸೀತಮ್ಮ ಅಮೆರಿಕಾದಲ್ಲಿರುವ ಮಗನ ಮನೆಗೆ ಬಂದು ಅಲ್ಲಿನ ಪರಿಸರಕ್ಕೆ ಒಗ್ಗಿಕೊಳ್ಳಲು ಯತ್ನಿಸುತ್ತಿರುತ್ತಾಳೆ. ಆ ಪ್ರಕ್ರಿಯೆಯಲ್ಲಿ ಅವಳಿಗಾಗುವ ಸಿಹಿ-ಕಹಿ ಅನುಭವಗಳ ಹಿನ್ನೆಲೆಯಲ್ಲಿ ಅವಳ ಚಿಂತನೆ ವ್ಯಕ್ತವಾಗುವುದು ಹೀಗೆ- ‘ಸುಖ ಅಂದರೆ ನನ್ನ ಅಗತ್ಯ ಇನ್ನೊಬ್ಬರಿಗಿದ್ದು ಆ ಸೇವೆಯಲ್ಲಿ ತೃಪ್ತಿಯನ್ನು ಕಾಣುವುದಿರಬಹುದೆ?’

ಹಾಗೆಯೇ ಪರಕೀಯ ಪ್ರಜ್ಞೆ ಕೇವಲ ಭಾರತದಿಂದ ವಿದೇಶಕ್ಕೆ ಹೋದವರಿಗಷ್ಟೇ ಅಲ್ಲ , ಅಲ್ಲಿ ಕೆಲವು ವರ್ಷ ಕಾಲ ಇದ್ದು ಈಗ ಹುಟ್ಟೂರಿಗೆ ಬಂದ ಅನಿವಾಸಿಗಳಿಗೂ ಅಂಥದೇ ಅನುಭವವಾಗಬಹುದು ಎನ್ನುವುದು ‘ಸುಮ್ಮನೆ ನಿಮಗೆ ತೊಂದರೆ’ ಎಂಬ ಕತೆಯಲ್ಲಿ ನವಿರಾಗಿ ವ್ಯಕ್ತವಾಗಿದೆ. ಭಾರತೀಯರೂ ‘ಅಮೆರಿಕನೈಸ್ಡ್‌’ ಆಗುತ್ತಿರುವುದರ ಸೂಚನೆ ಇಲ್ಲಿ ಧ್ವನಿತವಾಗಿದೆ. ‘ಯಾರು ಹಿತವರು ನಿನಗೆ’ ಇನ್ನೊಂದು ಸೊಗಸಾದ ಕತೆ. ಈ ಕತೆಯ ಅಂತ್ಯ ಅನಿರೀಕ್ಷಿತವಾಗಿದ್ದು ವಿಶಿಷ್ಟ ಅನುಭವ ನೀಡುತ್ತದೆ.

ಈ ಕತೆಗಳ ರಚನೆಯಾದದ್ದು 1982ರಿಂದ 2002ವರೆಗಿನ ಇಪ್ಪತ್ತು ವರ್ಷಗಳ ಅವಧಿಯಲ್ಲಿ. ಲೇಖಕಿ ತನ್ನ ಅನುಭವಗಳ ಮಿತಿಯಾಳಗೇ ಕತೆ ಕಟ್ಟುವ ಕಲೆಗಾರಿಕೆಯಲ್ಲಿ ನಿಧಾನವಾಗಿ ಮಾಗುತ್ತಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. ಯಾವುದೇ ಲೇಖಕರ ಕೃತಿಗಳಲ್ಲಿ ಸಾಫಲ್ಯದ ತಾರತಮ್ಯ ಇರುವುದು ಸ್ವಾಭಾವಿಕ. ಇದು ವಿಖ್ಯಾತ ಸಾಹಿತಿಗಳ ಕೃತಿಗಳಿಗೂ ಅನ್ವಯಿಸುವ ಮಾತು. ನಳಿನಿ ಮೈಯರು ಇನ್ನೂ ಉತ್ತಮ ಕತೆಗಳನ್ನು ಬರೆಯಬಲ್ಲರೆಂಬ ಭರವಸೆಯನ್ನು ಈ ಸಂಕಲನ ಓದುಗರ ಮನಸ್ಸಿನಲ್ಲಿ ಮೂಡಿಸುತ್ತದೆ. ಅನಿವಾಸಿ ಕನ್ನಡಿಗರ ಹಾಗೂ ಅವರ ಬಂಧು, ಬಳಗದವರ ಸಂಖ್ಯೆ ಗಣನೀಯವಾಗಿ ಬೆಳೆದಿರುವ ಇಂದಿನ ದಿನಗಳಲ್ಲಿ ಈ ಸಂಕಲನದ ಕತೆಗಳು ಸಾಕಷ್ಟು ಮಂದಿ ಓದುಗರಿಗೆ ಆಪ್ತವಾಗುವುದರಲ್ಲಿ ಸಂದೇಹವಿಲ್ಲ. ಅಲ್ಲದೆ ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರ ಜೀವನ ಅಂದರೆ ವೈಭವಯುತ ಭೋಗ ಜೀವನ ಎಂಬ ಸರಳೀಕೃತ ಗ್ರಹಿಕೆ ಹೊಂದಿರುವವರ ಕಣ್ಣು ತೆರೆಸುತ್ತಾ ವಾಸ್ತವದ ವಿವಿಧ ಮುಖಗಳನ್ನು ಅನಾವರಣಗೊಳಿಸುವುದರಲ್ಲಿ ಇಲ್ಲಿನ ಕತೆಗಳು ಸಾಕಷ್ಟು ಯಶಸ್ವಿಯಾಗಿವೆ.

ಒಟ್ಟಿನಲ್ಲಿ ‘ಮರೀಚಿಕೆ’ ಕನ್ನಡ ಕಥಾ ಪ್ರಪಂಚಕ್ಕೆ ಒಂದು ವಿಶಿಷ್ಟ ಕೊಡುಗೆ. ಈ ಸಾಹಸಕ್ಕಾಗಿ ನಳಿನಿ ಮೈಯರಿಗೆ ಕನ್ನಡಿಗರ ಮೆಚ್ಚಿಗೆ ಸಲ್ಲಬೇಕು.

ಇವನ್ನೂ ಓದಿ-

ನಳಿನಿ ಮೈಯರ ‘ಬಣ್ಣದ ಕನ್ನಡಕ’ ಕಥೆ

ಚೊಚ್ಚಿಲ ಪುಸ್ತಕ ಪ್ರಸವಕ್ಕೆ ತವರಿಗೆ ಬಂದ ಕತೆಗಾರ್ತಿ

ನಳಿನಿ ಮೈಯ: ಭರವಸೆಯ ಕಾವ್ಯ ವ್ಯವಸಾಯ

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X