ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀನಾರ ಫ್ರಾನ್ಸ್‌ ಪ್ರವಾಸ ಕಥನ- ‘ಎತ್ತಣಿಂದೆತ್ತ’ ಬಿಡುಗಡೆ

By Staff
|
Google Oneindia Kannada News
  • ಮೈಸೂರು ಪ್ರತಿನಿಧಿಯಿಂದ
Meena Mysore speaking on the occasion of her book releaseಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರೊ.ಯು.ಆರ್‌. ಅನಂತಮೂರ್ತಿಯವರ ನೇತೃತ್ವದಲ್ಲಿ ಕೆಲವು ದಶಕಗಳ ಹಿಂದೆ ಬರುತ್ತಿದ್ದ ಸಾಹಿತ್ಯಕ ತ್ರೈಮಾಸಿಕ ‘‘ರುಜುವಾತು’’ ವೈಚಾರಿಕ ಲೇಖನಗಳಿಗೆ ಮುಕ್ತ ವಿಮರ್ಶೆಗೆ ತುಂಬಾ ಹೆಸರು ಮಾಡಿತ್ತು. ಆ ಋಜುವಾತು ಪ್ರಕಾಶನ ಕೆಲವು ಪುಸ್ತಕಗಳನ್ನಾದರೂ ಪ್ರಕಟಿಸಬೇಕೆಂಬ ಇಚ್ಛೆಯಿಂದ ಈಗ ಕಾರ್ಯೋನ್ಮುಖವಾಗಿದೆ. ಆ ಯೋಜನೆಯಲ್ಲಿ ಮೊನ್ನೆ ಡಿಸೆಂಬರ್‌ 23 ರ ಮಂಗಳವಾರ ಮೈಸೂರಿನಲ್ಲಿ ತಾನು ಪ್ರಕಟಿಸಿದ ಮೀನಾ ಮೈಸೂರು ರವರ ಫ್ರಾನ್ಸ್‌ ಪ್ರವಾಸ ಕಥನ ‘ಎತ್ತಣಿಂದೆತ್ತ’ ಪುಸ್ತಕ ಬಿಡುಗಡೆಯಾಯಿತು.

ಮೈಸೂರಿನ ಸ್ಪಂದನಾ ಸೇವಾ ಟ್ರಸ್ಟ್‌ ಮತ್ತು ಬೆಂಗಳೂರಿನ ಋಜುವಾತು ಪ್ರಕಾಶನ ಜೊತೆಗೂಡಿ ಈ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಮಹಿಳಾ ಅಧ್ಯಯನ ಕೇಂದ್ರದ ಮಾಜಿ ನಿರ್ದೇಶಕರಾದ ಶ್ರೀಮತಿ ರಾಮೇಶ್ವರಿ ವರ್ಮ ಅವರು ಪುಸ್ತಕವನ್ನು ಬಿಡುಗಡೆ ಮಾಡಿದರು. ಮಹಿಳಾ ಅಧ್ಯಯನ ಕೇಂದ್ರದ ಈಗಿನ ನಿರ್ದೇಶಕರಾದ ಡಾ. ಪದ್ಮಾ ಶೇಖರ್‌ರವರು ಪ್ರಸ್ತಾವಿಕ ಭಾಷಣ ಮಾಡಿದರು. ಖ್ಯಾತ ಬರಹಗಾರರಾದ ಕಿಕ್ಕೇರಿ ನಾರಾಯಣ ರವರು ಪುಸ್ತಕವನ್ನು ಕುರಿತು ಮಾತನಾಡಿದರು. ಹೆಸರಾಂತ ಅಂಕಣಕಾರರಾದ ಪ್ರೊ. ಲಿಂಗದೇವರು ಹಳೇಮನೆ ಅವರು ಅಧ್ಯಕ್ಷತೆ ವಹಿಸಿದ್ದರು.

France travelogue in Kannada by Meenaಪ್ರಾಸ್ತಾವಿಕ ಭಾಷಣವನ್ನು ಮಾಡುತ್ತಾ, ಡಾ।। ಪದ್ಮಾ ಶೇಖರ್‌ ಅವರು, ‘‘ಮಹಿಳಾ ಸಾಹಿತ್ಯವನ್ನು ವಿಮರ್ಶಕರು ಗಂಭೀರವಾಗಿ ಏಕೆ ಪರಿಗಣಿಸುತ್ತಿಲ್ಲ’, ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಇಂಥ ಕೃತಿಯನ್ನು ಕೊಟ್ಟರೆ ವಿಮರ್ಶಕರು ಏಕೆ ಅವುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ? ಎಳಸು ಕೃತಿಗಳಿಗೆ ಎತ್ತರದ ವಿಮರ್ಶೆ ನಿರೀಕ್ಷಿಸುವುದು ಎಷ್ಟು ಸರಿ?’’- ಎಂದು ಪ್ರಶ್ನಿಸಿದರು. ‘‘ಲೇಖಕರ ಜನಪ್ರಿಯತೆ ಕೃತಿಯ ಮಾನದಂಡವಾಗಬಾರದು. ಜನಪ್ರಿಯತೆಯನ್ನು ಕೃತಿಯ ಮೌಲ್ಯವೇ ತಂದುಕೊಡಬೇಕೆಂಬ ಆಶಯವನ್ನಿಟ್ಟುಕೊಂಡು ಬರೆಯಬೇಕು’’ ಎಂದರು.

‘‘ಮೀನಾಳ ಭಾಷೆ ಸುಂದರವಾಗಿದೆ. ಅವಳ ಕಲ್ಪನಾ ಲಹರಿಗಳು ಅಚ್ಚರಿ ತರುತ್ತವೆ. ಆಕೆಯ ಸೃಜನಾತ್ಮಕತೆಯ ಶಕ್ತಿ ಅದ್ಭುತವಾಗಿದೆ. ಅವರ ನಡವಳಿಕೆ ಗಮನಿಸಿದಲ್ಲಿ ಅವರ ಬರವಣಿಗೆ ವಿಭಿನ್ನವಾಗಿದೆ. ಗದ್ಯ-ಪದ್ಯಗಳ ಅರ್ಥಪೂರ್ಣ ಮಿಲನವನ್ನು ಈ ಪುಸ್ತಕದಲ್ಲಿ ಕಾಣಬಹುದಾಗಿದೆ. ಒಂದೇ ಓದಿನಲ್ಲಿ ಓದಬೇಕೆನ್ನಿಸುತ್ತದೆ. ವಿಷಯ ನಿರ್ವಹಣೆ ನವಿರಾಗಿದ್ದು, ಓದಿಸಿಕೊಂಡು ಹೋಗುತ್ತದೆ. ಮೀನಾ ಫ್ರಾನ್ಸ್‌ನಲ್ಲಿ ಕಂಡದ್ದನ್ನು ಬರೀ ಕಾಣಿಸುವುದರಲ್ಲಷ್ಟೇ ತೃಪ್ತಳಾಗದೆ, ಮನುಷ್ಯ ಸಂಬಂಧಗಳಲ್ಲಿ ತನ್ನನ್ನು ತಾನೇ ಶೋಧಿಸಿಕೊಳ್ಳುತ್ತಾ ಹೋಗುತ್ತಾಳೆ. ಈ ಶೋಧಿಸಿಕೊಳ್ಳುವಿಕೆಯಿಂದಾಗಿ ಈ ಕೃತಿ ಭಿನ್ನವಾಗಿದ್ದು, ನಮಗೆ ಮತ್ತಷ್ಟು ಆಪ್ತವಾಗುತ್ತದೆ. ಈ ಪುಸ್ತಕ ಲೇಖಕಿಯ ಮೊದಲ ಕೃತಿ ಎಂಬುದು ಅಚ್ಚರಿ ತರುತ್ತದೆ, ಹಾಗೆ ಮೊದಲ ಪುಸ್ತಕವೆಂಬ ಯಾವ ಮುಲಾಜಿಗೂ ಸಿಗದೆ ಪ್ರೌಢವಾಗಿ ಮೂಡಿಬಂದಿದೆ’’, ಎನ್ನುತ್ತಾ ಗೆಳತಿ ಮೀನಾಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಪುಸ್ತಕವನ್ನು ಬಿಡುಗಡೆ ಮಾಡಿದ ಶ್ರೀಮತಿ ರಾಮೇಶ್ವರಿ ವರ್ಮ ಅವರು ‘ಎತ್ತಣಿಂದೆತ್ತ’ ಓದಿ ನನಗೆ ಬಹಳ ಖುಷಿಯಾಗಿದೆ. ಇದು ಬಹಳ ಸುಲಭವಾಗಿ ಓದಿಸಿಕೊಂಡು ಹೋಗಿ, ಮನಸ್ಸಿಗೆ ಮುದಕೊಡುವ ಪುಸ್ತಕ. ನಾನು ಬಹಳ ಪ್ರವಾಸ ಕಥನಗಳನ್ನು ಓದಿಲ್ಲ. ಆದರೆ ಓದಿರುವುದೆಲ್ಲವೂ ಆ ಸ್ಥಳಗಳಿಗೆ ಕಳಿಸುವುದು ಹೇಗೆ? ಅಲ್ಲಿ ಏನೇನು ನೋಡುವಂತಹವಿವೆ, ಇತ್ಯಾದಿ ವಿವರಗಳನ್ನು ಹೊಂದಿರುವಂತಹವು. ಆದರೆ ಮೀನಾಳ ಪುಸ್ತಕವು ಇಂತಹ ಪ್ರವಾಸಕಥನಗಳಿಗಿಂತ ಬಹಳ ಮೆಲಕ್ಕೆ ಜಿಗಿದಿವೆ. ಇಲ್ಲಿ, ಮೀನಾ ನಮ್ಮ ಮುಂದೆ ಬಿಚ್ಚಿಡುವುದು ಒಂದು ಸಂಸ್ಕೃತಿಯ ಕಥನವನ್ನು ‘ಟೂರಿಸ್ಟ್‌ ಗೈಡ್‌’ ಆಗಿರಿಸದೆ, ಅಲ್ಲಿಯ ಜನರ ನಡವಳಿಕೆ, ಟಾಯ್ಲೆಟ್‌ನಿಂದ ಹಿಡಿದು ಸ್ಮಾರಕಗಳ ತನಕ ವಿಶ್ಲೇಷಣಾತ್ಮಕತೆಯ ನಿರೂಪಣೆಯನ್ನ ಕಾಣಬಹುದು. ಪ್ರತಿಯಾಂದು ಸ್ಥಳಗಳನ್ನು ಅಚ್ಚರಿಯಿಂದ, ಬಿಚ್ಚುಗಣ್ಣಿನಿಂದ ಅವರು ನೋಡಿದ್ದಾರೆ. ನಮ್ಮ ದೇಶದಲ್ಲಿ ಯಾಕೆ ಹೀಗಿಲ್ಲ?- ಎಂಬ ವಿಮರ್ಶೆಯ ಮೂಲಕ ತನ್ನೊಳಗೆ ತಾನು ಗಮನಿಸುತ್ತಾ ಹೋಗುವುದನ್ನು ಇಲ್ಲಿ ಕಾಣಬಹುದು. ಕೆಲವೊಮ್ಮೆ ವಿಷಾದ ವ್ಯಕ್ತಪಡಿಸುತ್ತಾರೆ, ವಿಷಯವನ್ನು ಸೆನ್ಸೆಟಿವ್‌ ಆಗಿ ವಿಮರ್ಶಾತ್ಮಕವಾಗಿ ಕೊಡುತ್ತಾರೆ. ಆಡಂಬರ, ಕಪಟಗಳಿಲ್ಲದ, ಸರಳವಾದ, ಸುಂದರ, ಶ್ರೀಮಂತ ಭಾಷೆಯ ಮೋಹಕತೆಯಿಂದ ಕೂಡಿದ್ದು, ಮನಸ್ಸನ್ನು ತಬ್ಬಿ ಮುದ ನೀಡುವ ಪುಸ್ತಕವಿದು. ಪುಸ್ತಕ ಓದುತ್ತಿದ್ದಂತೆ ನಮಗೆ ಕಾಣಿಸಿಕೊಳ್ಳುವ ಮೀನಾ, ಫ್ರಾನ್ಸಿನ ಸಂಸ್ಕೃತಿಯನ್ನು ಪರೀಕ್ಷಿಸುವ ಚಿಂತಕಿಯಾಗಿ, ವಿಶ್ಲೇಷಕಿಯಾಗಿ ಕಾಣಿಸುತ್ತಾಳೆ. ಈ ಪ್ರಕ್ರಿಯೆಯ ವಿಶೇಷವೆನೆಂದರೆ, ಅನೇಕ ಘಟನೆಗಳಿಗೆ, ಸ್ಥಳಗಳಿಗೆ ಮೀನಾ ಪ್ರತಿಕ್ರಿಯಿಸುವ ರೀತಿ, ಫ್ರಾನ್ಸಿನ ಸಂಸ್ಕೃತಿ, ಸ್ಥಳಗಳನ್ನು ಆಕೆ ಖುಷಿಯಿಂದ, ಅಚ್ಚರಿಯಿಂದ ಅನುಭವಿಸುತ್ತಿರುವಾಗ್ಗೆ... ಆಕೆ ನಮ್ಮ ದೇಶದ ಆಗು-ಹೋಗುಗಳ ಬಗ್ಗೆ, ನಮ್ಮ ದೇಶದ ವಾಸ್ತವಗಳ ಬಗ್ಗೆ, ತನ್ನ ಬಗ್ಗೆ, ತನ್ನವರ ಬಗ್ಗೆ ತಲೆಕೆಡಿಸಿಕೊಳ್ಳುವುದು, ಉದಾಹರಣೆಗೆ, ಅಲ್ಲಿ ಒಂದು ಮನೆಯಲ್ಲಿ ಯಥೇಚ್ಛವಾಗಿರುವ ಆಟಿಕೆಗಳನ್ನು ನೋಡಿದಾಗ, ನಮ್ಮ ದೇಶದ ಅಂಗನವಾಡಿಗಳ ಬಗ್ಗೆ ಚಿಂತಿಸುತ್ತಾರೆ,’’ ಎಂದರು.

On the Diasಮುಂದುವರಿದು, ‘‘ಈ ಪುಸ್ತಕದಲ್ಲಿ ನನ್ನನ್ನು ಅಚ್ಚರಿಗೊಳಿಸುವ ವಿಷಯವೆಂದರೆ, ಮೀನಾ ತಾನು ನೋಡಿದ, ಅನುಭವಿಸಿದ ಪ್ರತಿಯಾಂದನ್ನೂ ತೀಕ್ಷ ್ಣವಾಗಿ ಹಾಗೂ ಸೂಕ್ಷ್ಮವಾಗಿ ಪರೀಕ್ಷಿಸುವುದು. ಉದಾಹರಣೆಗೆ, ಒಂದು ಬೀಚ್‌ನಲ್ಲಿ ಆಕೆ ನೋಡಿದ ಜನಗಳ ವರ್ಣನೆ ಹೀಗೆ... ಅನೇಕ ವೇಳೆ ನನಗೆ ಅನ್ನಿಸಿದ್ದು, ಏನು ಈ ಮೀನಾ ಆ ಬೀಚ್‌ನಲ್ಲೇ ನಿಂತು ಪ್ರತಿಯಾಬ್ಬರ ಹಾವಭಾವಗಳನ್ನು ಅಲ್ಲೇ ನೋಟ್‌ ಮಾಡಿಕೊಂಡಳೇ ಹೇಗೆ? ಅಂತ! ಅನೇಕ ವೇಳೆ ಅವಳ ಪ್ರತಿಕ್ರಿಯೆಯಲ್ಲಿ ಹಾಸ್ಯದ ನವಿರಾದ ಎಳೆಯನ್ನು ಕಾಣಬಹುದು. ಪ್ರತಿಯಾಂದು ಘಟನೆಗೂ, ಪ್ರತಿಯಾಂದು ಕಡೆಗೆ ಹೋದಾಗಲೂ ಆ ವಿವರಗಳಿಗೂ, ಚೆಂದದ ಘಟನೆಗಳಿಗೂ ಪ್ರತಿಯಾಂದು ಕಡೆ ಪುಟ್ಟ ಶೀರ್ಷಿಕೆಗಳನ್ನು ಕೊಟ್ಟಿದ್ದಾರೆ. ನನಗೆ ತುಂಬಾ ಹಿಡಿಸಿದ್ದು ಎಂದರೆ, ಪುಸ್ತಕದಲ್ಲಿ ಬಳಸಿರುವ ಭಾಷೆ ಮತ್ತು ಶೈಲಿ. ಅದು ಮೀನಾಳಂತೆಯೇ ಸರಳ ಆತ್ಮೀಯವೆನಿಸುವ, ಆಡಂಬರ, ಕಪಟಗಳಿಲ್ಲದ, ಸುಂದರ, ಶ್ರೀಮಂತ ಭಾಷೆ ಮತ್ತು ಶೈಲಿ. ಒಂದು ಸರ್ತಿ ಪುಸ್ತಕ ಕೈಗೆತ್ತಿಕೊಂಡರೆ, ಪುಸ್ತಕ ಮುಗಿಸುವವರೆಗೂ ನಮ್ಮನ್ನು ಹಿಡಿದಿರಿಸುವ ಮೋಹಕತೆ ಈ ಪುಸ್ತಕಕ್ಕಿದೆ. ಹೀಗೆ ಇನ್ನೂ ಅನೇಕ ಒಳ್ಳೆಯ ಅಂಶಗಳಿವೆ. ನಾನು ಸಾಹಿತ್ಯ ವಿಮರ್ಶೆಯನ್ನು ಹೆಚ್ಚು ಬಲ್ಲವಳಲ್ಲ. ಪುಸ್ತಕದ ಬಗ್ಗೆ ನನಗೆ ಅನ್ನಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಭಾರತ ದೇಶದ ಸಾಂಸ್ಕೃತಿಕ ಅನನ್ಯತೆಯನ್ನು ಫ್ರಾನ್ಸಿನ ಸಂಸ್ಕೃತಿಯ ಜೊತೆಗೆ ಹೋಲಿಸಿ ನೋಡುತ್ತಲೇ ಮೀನಾ ಸಾಗುತ್ತಾಳೆ. ಈ ಪುಸ್ತಕ ಖಂಡಿತವಾಗಿಯೂ ಜನಪ್ರಿಯವಾಗಿ, ಒಳ್ಳೆಯ ವಿಮರ್ಶೆಗಳನ್ನು ಆಕರ್ಷಿಸುತ್ತದೆ, ಎಂಬುದರಲ್ಲಿ ನನಗೆ ಸಂಶಯವಿಲ್ಲ, ಈ ಪುಸ್ತಕದ ಯಶಸ್ಸು ಇನ್ನೂ ಅನೇಕ ಯಶಸ್ಸುಗಳಿಗೆ ನಾಂದಿಯಾಗಲಿ ಎಂದು ಹಾರೈಸುತ್ತೇನೆ’’- ಎಂದರು.

ಪುಸ್ತಕ ಕುರಿತು ಕಿಕ್ಕೇರಿ ನಾರಾಯಣ್‌ ಮಾತನಾಡಿದರು. ‘‘ಫ್ರಾನ್ಸ್‌ನ ಇಟೆಲೆಕ್ಚ್ಯುಯಲ್‌ ಜೊತೆ ಒಡನಾಟದಿಂದಾಗಿ, ನಮಗೆ ತಿಳಿದು ಬರುವುದೇನೆಂದರೆ, ಅಲ್ಲಿಯ ಸಿದ್ಧಾಂತಗಳ ವೈಪರೀತ್ಯ, ಆದರೆ ‘ಎತ್ತಣಿಂದೆತ್ತ’ದಲ್ಲಿ ಆ ಸಿದ್ಧಾಂತಗಳು, ಅವುಗಳ ವೈಪರೀತ್ಯದ ಸೋಂಕೇ ಇಲ್ಲದೆ, ಅದಕ್ಕೆ ಹೊರತಾದ ಫ್ರಾನ್ಸ್‌ ದೇಶ, ಅಲ್ಲಿಯ ಜನಜೀವನ, ಸಂಸ್ಕೃತಿಗಳ ಬಗ್ಗೆ ಸರಳವಾಗಿ, ಸಂಕೀರ್ಣವಾಗಿ ಹೇಳಿರುವುದನ್ನು ಕಾಣಬಹುದು’’- ಎನ್ನುತ್ತಾ, ಈ ಪುಸ್ತಕವನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದೆಂದರು.

1) ಲೈಂಗಿಕ ಬಿಡುಗಡೆ, 2) ಸಾಂಸ್ಕೃತಿಕ ನೋಟ 3) ರೈತಾಪಿ ಜನರ ಬದುಕು.

‘‘ಲೈಂಗಿಕ ಬಿಡುಗಡೆ ಎಂದರೆ, ಸೆಕ್ಸ್‌ ಬರಿ ಸೆಕ್ಸ್‌ ಅಲ್ಲ. ಮೇಲ್‌ ಡಾಮಿನೇಷನ್‌ನಿಂದ ಬಿಡುಗಡೆ ಹೊಂದಿರುವ ರೀತಿ. ಲೈಂಗಿಕತೆಯಿಂದ ಬಿಡುಗಡೆಗೊಂಡಿರುವ ಹಾದಿ. ಅದರಿಂದ ಸ್ವಾತಂತ್ರ ಪಡೆದರೆ? ಸುಖ ಕಂಡು ಕೊಂಡರೆ? ಎಂಬುದನ್ನು ಬಿಚ್ಚುಕೊಡುತ್ತದೆ. ಅಲ್ಲಿ ಗಂಡು ಹೆಣ್ಣು ಮದುವೆಯಾಗದೆ ಜೊತೆಯಲ್ಲಿ ಬದುಕುತ್ತಾರೆ, ಮಕ್ಕಳನ್ನು ಪಡೆಯುತ್ತಾರೆ. ಅಲ್ಲಿ ಜೊತೆಯಲ್ಲಿ ಬದುಕುವ ಸಂಬಂಧಗಳಲ್ಲಿ ಕೀಳರಿಮೆಯಿಲ್ಲ. ಆದರೆ ನಮ್ಮ ಸಂಸ್ಕೃತಿಯಲ್ಲಿ ಅದು ಅವಹೇಳನಕ್ಕೆ ಒಳಗಾಗುತ್ತದೆ. ಇಂಥದ್ದು ಒಳ್ಳೆಯದು ಎಂದು ಬ್ರಾಂಡ್‌ ಮಾಡದೆ, ವ್ಯಾಲ್ಯೂ ಜೆಡ್ಜ್‌ಮೆಂಟ್‌ ಮಾಡದೆ, ಎಲ್ಲವನ್ನೂ ಹೇಗಿದೆಯೋ ಹಾಗೆ ಹೇಳಿದ್ದಾರೆ. ಮುಗ್ಧ ಮೀನಾಗೆ ಅಡಿಗರು ಹೇಳಿದ ‘‘ಮಗು ಮಾದರಿಯ ಕ್ಯಾಮರಾ ಕಣ್ಣು’’ ಇದೆ. ಅದು ಆಕೆಯ ಸೂಕ್ಷ್ಮತೆ ಗ್ರಹಿಸುವ ದೃಷ್ಟಿ. ಸೆಕ್ಸ್‌ ಲಿಬರಲ್‌ ಆಗಿದ್ದಾಗ ಬರುವ ಸಮಸ್ಯೆಗಳಿರುತ್ತದೆ. ಆಡುವ ಹುಡುಗಗೆ ಕಾಡುವ ಮಾಗುವಿನಂತೆ! ಸಲಿಂಗಕಾಮಿಯ ಚಿತ್ರಣ ಮನ ಕಲಕುವಂತೆ ಮೂಡಿಬಂದಿದೆ. ಲೈಂಗಿಕತೆಗಿರುವುದು ತೆಳುವಾದ ಪೊರೆ. ಅದನ್ನು ಎಲ್ಲೂ ಎಲ್ಲೆ ದಾಟದೆ ಆತ್ಮೀಯವಾಗಿ ಸ್ಪಷ್ಟವಾಗಿ, ಸ್ವಚ್ಛವಾದ ಚಿತ್ರಣ ನೀಡುತ್ತಾರೆ. ಅದರಿಂದಾಗಿ ಈ ಪುಸ್ತಕ ಇಷ್ಟವಾಗುತ್ತದೆ. ಮೀನಾರ ಗ್ರಹಿಕೆ, ಪ್ರತಿಯಾಂದನ್ನು ಸಂವಾದವಾಗಿ ಕನ್ವರ್ಟ್‌ ಮಾಡುವ ಕಲೆ ಸಹಜವಾಗಿ ಮೂಡಿಬಂದಿದೆ’’ ಎಂದರು.

‘‘ಸಂಸ್ಕೃತಿಯನ್ನು ಚಾರಿತ್ರಿಕ ಸನ್ನಿವೇಶದಲ್ಲಿಟ್ಟು ಪ್ರಸ್ತುತಿಯಲ್ಲಿ ತಿಳಿಸುತ್ತಾರೆ. ಫ್ರೆಂಚ್‌ ಸಂಸ್ಕೃತಿ ಪ್ರಪಂಚದಲ್ಲೇ ಅತಿ ಹೆಚ್ಚು ಸಂಪದ್ಭರಿತವಾದದ್ದು. ಅವುಗಳನ್ನು ನೋಡುತ್ತಾ ವೈದೃಶ್ಯಗಳನ್ನು ತಂದಿಡುತ್ತಾರೆ. ತನ್ನನ್ನು ತಾನು ಪ್ರಶ್ನಿಸಿಕೊಳ್ಳುತ್ತಾ ತನ್ನನ್ನು ತಾನು ಗುರುತಿಸಿಕೊಳ್ಳುವ ಪ್ರಕ್ರಿಯೆಯಾಗುತ್ತದೆ. ಮೈಸೂರು ಮತ್ತು ಫ್ರಾನ್ಸನ್ನು ನೋಡುವ ರೀತಿ, ನಮ್ಮ ಜನರ ‘ದೇಹಿ’ ಎನ್ನುವ ಮನಸ್ಸಿನ ಬಗ್ಗೆ ವಿಷಾದಿಸುತ್ತಾರೆ. ಎರಡು ಸಂಸ್ಕೃತಿಗಳ ಮುಖಾಮುಖಿ ಸಾಧಿಸುತ್ತಾರೆ. ಎರಡು ಸಂಸ್ಕೃತಿಗಳ ವ್ಯಾಕರಣಗಳ ನಡುವಿನ ತಾಕಲಾಟ ಹೇಳುತ್ತಾರೆಯೇ ಹೊರತು ಎಲ್ಲೂ ತಮ್ಮ ನಿಲುವನ್ನು ಹೇರುವುದಿಲ್ಲ. ಅದು ಫೈನ್‌ನೆಸ್‌ ಆಫ್‌ ಹರ್‌ ಮೈಂಡ್‌!

‘‘ಗ್ಯಾಟ್‌ ಒಪ್ಪಂದದ ಹಿನ್ನಲೆ, ಸಣ್ಣ ಹಿಡುವಳಿದಾರರ ಹಿನ್ನೆಲೆ ಸಮಾಜದಲ್ಲಿ ಬದಲಾವಣೆಯ ಹಿನ್ನೆಲೆ, ಫಸ್ಟ್‌ ವರ್ಲ್ಡ್‌ನ ಬಾಲಬುಡುಕುತನದಲ್ಲಿ ಇತರ ದೇಶಗಳು ಹಾಳಾಗುತ್ತಿರುವ ಚಿತ್ರಣ, ರಾಜಕೀಯ ಮತ್ತು ಆರ್ಥಿಕ ಹಿನ್ನೆಲೆಗಳೆಲ್ಲವೂ. ಹರಟೆಯಾಗದೆ ಉಳಿದಿವೆ. ಪುತಿನ ಅಮೇರಿಕಾಕ್ಕೆ ಹೋಗಿ ಬಂದಾಗ, ‘‘ಕೃಷ್ಣ ಇರುವುದು ಇಂಡಿಯಾದಲ್ಲಲ್ಲ. ಅಮೇರಿಕಾದಲ್ಲಿದ್ದಾನೆ’’- ಎಂದಿದ್ದರು. ಆ ಮಾತು ಈ ಕೃತಿ ಓದುವಾಗ ನೆನಪಾಗುತ್ತದೆ. ಅನುಭವದ ನೆಲೆಯಿಂದ ಅನುಭಾವದ ನೆಲೆಗೆ ಜಿಗಿಯುವ ಮೌಲಿಕ ಗ್ರಂಥವಿದು’’- ಎಂದರು.

‘ಎತ್ತಣಿಂದೆತ್ತ’ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ, ಪ್ರೊ. ಲಿಂಗದೇವರು ಹಳೇಮನೆಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ‘‘ಓದುಗನೊಬ್ಬನನ್ನು ಓದಿಸಿಕೊಂಡು ಹೋಗುವವರು ನಿಜವಾದ ಲೇಖಕರು. ಅನುಭವಗಳಿಗೆ ಮುಕ್ತಿ ಕಾಣಿಸಲು ಬರೆಯಬೇಕು. ಜನರನ್ನು ಮೆಚ್ಚಿಸಬೇಕೆಂಬ ಹಂಬಲವಿಲ್ಲದೆ ಅನುಭವದ ನೆಲೆಯಲ್ಲಿ ಚಿತ್ರಣಗೊಂಡ ಪುಸ್ತಕ ‘ಎತ್ತಣಿಂದೆತ್ತ’. ಸಾಹಿತ್ಯ ಕ್ಷೇತ್ರಕ್ಕೆ ಫ್ರಾನ್ಸ್‌ನ ಕೊಡುಗೆ ಅಪಾರ. ಯೋಚನೆಯ ಪಾರಾಪಿಗ್ಮಾ ಬದಲಿಸಿದ ದೇಶ ಫ್ರಾನ್ಸ್‌. ಫ್ರಾನ್ಸ್‌ ಎಂದ ಕೂಡಲೇ ಅಲ್ಲಿಯ ಕಲೆ, ತತ್ವಗಳು ನೆನಪಾಗುತ್ತವೆ. ಪೋಸ್ಟ್‌ ಮಾಡ್ರನ್‌ ಥಿಂಕರ್ಸ್‌ ಅಲ್ಲಿಂದ ಬಂದವರು. ಚಿಂತನೆಯನ್ನು ಪಲ್ಲಟಗೊಳಿಸಿದವರು. ಅದೆಲ್ಲವನ್ನು ಬಿಟ್ಟು ಇಲ್ಲಿ ಮೀನಾ ಇಂಟಿರಿಯರ್‌ ಲ್ಯಾಂಡ್‌ಸ್ಕೇಪ್‌ನ ಕಡೆಗೆ ಹೋಗುತ್ತಾರೆ. ಮೈಕ್ರೋ ಲೆವೆಲ್‌ನ್ನು ಎತ್ತಿ ತೋರಿಸುತ್ತಾರೆ. ನವರತ್ನರಾಂ ರವರ ‘ಪ್ಯಾರಿಸಿನಿಂದ ಪ್ರೇಯಸಿಗೆ’ ಪುಸ್ತಕದಲ್ಲಿ ಇಡೀ ಜಗತ್ತಿಗೇ ವೈಯ್ಯಾರ ಕಲಿಸಿದ ಫ್ರಾನ್ಸ್‌ ಚಿತ್ರಣವಿದೆ. ಆದರೆ ಮೀನಾರ ಪುಸ್ತಕದಲ್ಲಿ ಹೊಸ ರೀತಿಯ ಮೌಲ್ಯಗಳು ಕಂಡು ಬರುತ್ತವೆ. ಹೊರಗಡೆ ಯಾವುದಕ್ಕೂ ಗಂಭೀರವಾಗಿ ಚಿಂತಿಸದ ಮೀನಾ ಒಳಗಡೆ ಎಲ್ಲದ್ದಕ್ಕೂ ಗಂಭೀರವಾಗಿ ಚಿಂತಿಸುವುದನ್ನಿಲ್ಲಿ ಕಾಣಬಹುದಾಗಿದೆ. ಸೂಕ್ಷ್ಮಗಳ ಗುರುತಿಸುವಿಕೆಯಿಂದಾಗಿ ನಮಗಿದು ಮತ್ತಷ್ಟು ಆಪ್ತವಾಗುತ್ತದೆ’’- ಎಂದರು.

‘ರುಜುವಾತಿ’ನ ಸಹಸಂಪಾದಕಿಯಾಗಿದ್ದ, ಮೈಸೂರಿನ ಬರಹಗಾರ್ತಿ ಚ.ಸರ್ವಮಂಗಳ ಅವರ ಮುನ್ನುಡಿ ಮತ್ತು ಪ್ರೊ.ಯು.ಆರ್‌. ಅನಂತಮೂರ್ತಿ ಅವರ ಬೆನ್ನುಡಿಯನ್ನುಳ್ಳ ಈ ಪುಸ್ತಕ ಫ್ರಾನ್ಸಿನ ಅನೇಕ ಚಿತ್ರಗಳನ್ನೂ, ಮೀನಾ ತಿರುಗಾಡಿದ ಕಡೆಯ ಪ್ರದೇಶದ ನಕ್ಷೆಯನ್ನೂ ಒಳಗೊಂಡಿದೆ.

‘ಸ್ಪಂದನಾ ಸೇವಾ ಟ್ರಸ್ಟಿ’ನ ಅಧ್ಯಕ್ಷರಾದ ಕೆ.ಆರ್‌.ಲಕ್ಷ್ಮೀಶ ರವರು ಮತ್ತು ಅದರ ಕಾರ್ಯದರ್ಶಿಗಳಾದ ಅಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪುಸ್ತಕ ವಿವರ: ‘ಎತ್ತಣಿಂದೆತ್ತ’ (ಪ್ರವಾಸ ಕಥನ); ಲೇಖಕಿ: ಮೀನಾ ಮೈಸೂರು ( ನಂ. 1143/2ಂ ಎ, ಎಸ್‌ ಜಿ ಎಚ್‌ ರಸ್ತೆ, 6ನೇ ಮೈನ್‌, ವಿದ್ಯಾರಣ್ಯಪುರಂ, ಮೈಸೂರು-570008); ಪ್ರಕಟಣೆ: 2003; ಋಜುವಾತು ಪ್ರಕಾಶನ (498. 6‘ಎ’ ಮೈನ್‌, ಆರ್‌ ಎಂ ವಿ 2ನೆಯ ಹಂತ, ಬೆಂಗಳೂರು 560094); ಪುಟಗಳು 254 + 10; ಬೆಲೆ: ರೂ 150.00

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X