• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಹೊಸ ಬೀಡು’ ಮತ್ತು ಕಾವ್ಯಾಕ್ಷತೆ

By Staff
|
  • ರಘುನಾಥ ಚ.ಹ.

Coverpage of Hosabeeduಧಾಂ ಧೂಂ ಮದುವೆಗಳ ನಡುವೆ ಅಲ್ಲೊಂದು ಇಲ್ಲೊಂದು ನಡೆಯುವ ಸರಳ ಮದುವೆಗಳು ಮನ ಸೆಳೆಯುತ್ತವೆ. ಅಂತರ್ಜಾತಿ ವಿವಾಹ, ಉಡುಗೊರೆಗಳನ್ನು ನಿಷೇಧಿಸಿದ ಮದುವೆ, ನಾಲ್ಕೈದು ಗೆಳೆಯರ ಹಾಜರಿಯಲ್ಲಿ ಹಾರ ಬದಲಿಸಿಕೊಳ್ಳುವ ಮದುವೆ, ಇತ್ಯಾದಿ ಇತ್ಯಾದಿ ಗಮನ ಸೆಳೆವ ಮದುವೆಗಳು ಅಲ್ಲೊಂದು ಇಲ್ಲೊಂದು ನಡೆಯುತ್ತಿರುತ್ತವೆ. ಮಂತ್ರಾಕ್ಷತೆಯಾಂದಿಗೆ ಕಾವ್ಯಾಕ್ಷತೆಯ ಮದುವೆಗಳೂ ಉಂಟು. ಮದುವೆಯಲ್ಲಿ ‘ಕವಿಗೋಷ್ಠಿ’ ನಡೆಯುವುದು ಹೊಸಮಾತೇನೂ ಅಲ್ಲ . ಆದರೆ, ಈ ಲೇಖನದ ವಸ್ತು ಮದುವೆಯಲ್ಲ -ಮನೆ ; ಮದುವೆಯಷ್ಟೇ ದುಂದಿಗೆ ಕಾರಣವಾಗುವ ‘ಗೃಹ ಪ್ರವೇಶ’. ಅಂದಹಾಗೆ, ಈ ‘ಗೃಹ ಪ್ರವೇಶ’ ಗಮನ ಸೆಳೆದದ್ದು ಅದ್ಧೂರಿತನದಿಂದಲ್ಲ , ಅರ್ಥಪೂರ್ಣತೆಯಿಂದಾಗಿ. ಅರ್ಥಾತ್‌ ಕವಿತೆಯಿಂದಾಗಿ !

ಮನೆ ಕಟ್ಟುವ ಕನಸು ಕಾಣದವರಾರು ? ನೂರಕ್ಕೆ ತೊಂಬತ್ತು ಮಂದಿಗೆ ಮನೆ ಕಟ್ಟುವುದು ತಮ್ಮ ಜೀವಮಾನದ ಗುರಿ. ಹತ್ತಾರು ಪಡಿಪಾಟಲು ಪಟ್ಟು ದುಡ್ಡು ಮಿಗಿಸಿ, ಇನ್ನಷ್ಟು ದುಡ್ಡನ್ನು ಅಲ್ಲಿ ಇಲ್ಲಿ ಹೊಂಚಿಕೊಂಡು ಮನೆ ಕಟ್ಟಲು ಆರಂಭಿಸಿದರೆನ್ನಿ ; ನಕ್ಷೆಯ ಮೇಲಿನ ಮನೆ ನಿವೇಶನದಲ್ಲಿ ಸಾಕಾರಗೊಂಡಂತೆ ಮನೆಯಾಡೆಯ- ಒಡತಿಗೆ ‘ಗೃಹ ಪ್ರವೇಶ’ದ ಚಿಂತೆ. ಕೈ ಖಾಲಿಯಾದರೂ ‘ಗೃಹ ಪ್ರವೇಶ’ವನ್ನು ಅದ್ಧೂರಿಯಾಗಿಯೇ ಮಾಡುವ ಹಂಬಲ. ಮನೆ ಭವ್ಯವಾಗಿದ್ದ ಮೇಲೆ ‘ಗೃಹ ಪ್ರವೇಶ’ ಭರ್ಜರಿಯಾಗಿ ಇರದಿದ್ದರೆ ಹೇಗೆ ? ಖರ್ಚಿನ ಬಾಬತ್ತಿನಲ್ಲಿ ಮದುವೆಗೂ ಗೃಹಪ್ರವೇಶಕ್ಕೂ ಅಷ್ಟೇನೂ ವ್ಯತ್ಯಾಸವಿಲ್ಲ. ‘ಗೃಹ ಪ್ರವೇಶ’ವೆಂಬುದೀಗ ಮಿನಿ ಮದುವೆಯಂತಾಗಿದೆ.

ಈ ಲೇಖನದ ಕಥಾನಾಯಕ ಪ್ರೊ.ಎಚ್‌.ಆರ್‌.ಕೃಷ್ಣಮೂರ್ತಿಯವರಿಗೂ ಮನೆ ಕಟ್ಟುವ ಕನಸಿತ್ತು . ಆ ಕನಸು ಸಾಕಾರಗೊಂಡಿದ್ದೂ ಆಯಿತು (ಪುಟ್ಟೇನಹಳ್ಳಿ, ಜೆ.ಪಿ.ನಗರ 7ನೇ ಹಂತ, ಬೆಂಗಳೂರು). ಮನೆಯೇನೊ ಆಯಿತು ; ಗೃಹಪ್ರವೇಶ? ಕೃಷ್ಣಮೂರ್ತಿಯವರಿಗೆ ‘ಗೃಹ ಪ್ರವೇಶ’ವನ್ನು ವಿಭಿನ್ನವಾಗಿ ನಡೆಸುವ ಆಸೆ. ಅದ್ಧೂರಿಯ ಬದಲು ಅರ್ಥಪೂರ್ಣತೆಯತ್ತ ಅವರ ಒಲವು. ಈ ಯೋಚನೆಯಲ್ಲಿ ಅವರಿಗೆ ಹೊಳೆದದ್ದು ‘ಕಾವ್ಯಾಕ್ಷತೆ’!

ಒಂದಷ್ಟು ಕವಿಗಳನ್ನು ಕಲೆ ಹಾಕುವುದು, ಹೊಸಮನೆಯಲ್ಲಿ ಕವಿಗೋಷ್ಠಿ ನಡೆಸುವುದು- ಇದಿಷ್ಟು ಕೃಷ್ಣಮೂರ್ತಿಯವರ ‘ಗೃಹ ಪ್ರವೇಶ’ದ ಪರಿಕಲ್ಪನೆ. ಹೊಸಮನೆಯಲ್ಲಿ ಕಾವ್ಯದ ಚಿಲುಮೆಯುಕ್ಕಿಸಲು ಕೃಷ್ಣಮೂರ್ತಿಯವರು ಕರೆದುದು ‘ಕಾವ್ಯ ಕಾಲವಶಂ’ ಎನ್ನುವ ವೃದ್ಧಕವಿಗಳನ್ನಲ್ಲ ; ಯುವಕವಿಗಳನ್ನು.

ಕವಿಗೋಷ್ಠಿಯಲ್ಲಿ ಭಾಗವಹಿಸಿದವರಾದರೂ ಯಾರು ಯಾರು ? ಈಗಾಗಲೇ ಸಂಕಲನ ಪ್ರಕಟಿಸಿ ಸಹೃದಯರ ಗಮನ ಸೆಳೆದಿರುವ ಸುಧಾಶರ್ಮ ಚವತ್ತಿ , ಪಿ.ಚಂದ್ರಿಕಾ, ‘ಸಂಚಯ’ ಸಾಂಸ್ಕೃತಿಕ ಪತ್ರಿಕೆಯ ಡಿ.ವಿ.ಪ್ರಹ್ಲಾದ್‌, ಎಂ.ಆರ್‌.ಭಗವತಿ, ಎನ್‌.ಸಿ.ಮಹೇಶ್‌ ಅಲ್ಲಿದ್ದರು. ಇವರೊಂದಿಗೆ- ಅಂಕುರ್‌ ಬೆಟಗೇರಿ, ಎಂ.ಆರ್‌.ಗಿರಿಜ, ಡಿ.ಸಿ.ಗೀತಾ, ಛಾಯಾ ಭಗವತಿ, ನಾಗಣ್ಣ ಕಿಲಾರಿ, ಬಿ.ಎಸ್‌.ನಾಗೇಶ್‌, ಕೆ.ವೈ.ನಾರಾಯಣ ಸ್ವಾಮಿ, ರವಿ ಜನ್ನಸಂದ್ರ, ರಾಜೇಂದ್ರ ಬುರಡಿಕಟ್ಟಿ , ರಾಮಲಿಂಗಪ್ಪ ಬೇಗೂರು, ರೋಸಿ ಶೈಲೇಶ್‌, ಆರ್‌.ಡಿ.ಜಿ. , ವೃಂದಾ ಭಟ್‌ ತಮ್ಮ ಕವಿತೆಗಳನ್ನು ವಾಚಿಸಿದರು.

ಕವಿತೆಗಳ ವಾಚನದ ಮೂಲಕ ಗೃಹಪ್ರವೇಶವೇನೋ ಸರಿ, ಆದರೆ ಶುಭ ಸಮಾರಂಭ ಎಂದಮೇಲೆ ತಾಂಬೂಲವಿಲ್ಲದಿದ್ದರೆ ಹೇಗೆ ? ಪ್ರೊ.ಕೃಷ್ಣಮೂರ್ತಿ ತಾಂಬೂಲಕ್ಕೂ ವ್ಯವಸ್ಥೆ ಮಾಡಿದ್ದರು. ಅದು ಪುಸ್ತಕ ತಾಂಬೂಲ ! ಗೋಷ್ಠಿಯಲ್ಲಿ ಕವಿತೆ ವಾಚಿಸುವ ಕವಿತೆಗಳ ಸಂಕಲನವನ್ನೂ ಪ್ರಕಟಿಸಿ, ‘ಹೊಸಬೀಡು’ ಸಂಕಲನದ ಪ್ರತಿಗಳನ್ನು ಫಲತಾಂಬೂಲದ ರೂಪದಲ್ಲಿ ನೀಡಲಾಯಿತು. ‘ಹೊಸಬೀಡು’ ಮನೆಯ ಹೆಸರು ಕೂಡ. ಹಿರಿಯರಾದ ಚಿ.ಶ್ರೀನಿವಾಸರಾಜು ಮೇಷ್ಟ್ರು ಹಾಗೂ ವಿಮರ್ಶಕ ಎಚ್‌.ಎಸ್‌.ರಾಘವೇಂದ್ರರಾವ್‌ ಸಂಪಾದಕತ್ವದಲ್ಲಿ ಪ್ರಕಟವಾದ ‘ಹೊಸಬೀಡು’ ಸಂಕಲನವನ್ನು ಬಿಡುಗಡೆ ಮಾಡಿದ್ದು, ‘ಕಾಂಟೆಸ್ಸಾದಲ್ಲಿ ಕಾವ್ಯ’ ಖ್ಯಾತಿಯ ಬರಗೂರು ರಾಮಚಂದ್ರಪ್ಪ .

ಅಂದಹಾಗೆ, ಹೊಸಮನೆಗೆ ಔಪಚಾರಿಕವಾಗಿ ಮೊದಲು ಪ್ರವೇಶಿಸಿದವರು ಯಾರು ಗೊತ್ತೇ ? ನ್ಯಾಷನಲ್‌ ಕಾಲೇಜಿನ ಹಿರೀಕ ಎಚ್‌.ಎನ್‌.ನರಸಿಂಹಯ್ಯ. ಎಚ್ಚೆನ್‌ ಪಾದ ಬೆಳೆಸುವುದರೊಂದಿಗೆ ‘ಹೊಸ ಬೀಡು’ ಗೃಹ ಪ್ರವೇಶಕ್ಕೆ ಚಾಲನೆ, ಆನಂತರ ಕವಿಗಳಿಂದ ಮಂತ್ರಾಕ್ಷತೆ.

ಈ ಅಪರೂಪದ ಅರ್ಥಪೂರ್ಣ ‘ಗೃಹ ಪ್ರವೇಶ’ ನಡೆದದ್ದು ಕಳೆದ ಅಕ್ಟೋಬರ್‌ (2003) ನಲ್ಲಿ .

***

ಸಂಕಲನದ ಉದ್ದೇಶವನ್ನು ಧ್ವನಿಸುವಂಥ ಒಂದು ಕವಿತೆ (ಕವಿ : ರಾಜೇಂದ್ರ ಬುರಡಿಕಟ್ಟಿ) ಇಲ್ಲಿದೆ :

ಹೊಸಬೀಡುಹೊಸಬೀಡಿನೀಮನೆಯ ಹೊಸಿಲು ದಾಟಿದ ನೆನಪು

ಹಸಿರಾಗಿ ಉಳಿಯಲಿ ಕೊನೆಯ ತನಕ

ಹೊಸ ಬಗೆಯ ಚಿಂತನೆಗೆ ಹೊಸ ಹೆಜ್ಜೆ ಇಡುವಂಗೆ

ಹಸಿರುಧ್ವಜವನು ಕೊಡುವ ನಿಮಮ ತವಕ

ಅಗ್ನಿಕುಂಡವ ಉರಿಸಿ ವೇದ ಮಂತ್ರವ ಪಠಿಸಿ

ಬೂದಿ ಊದುವರನ್ನು ಕರೆಯಲಿಲ್ಲ

ವಾಸ್ತುಶಾಸ್ತ್ರವನೋದಿ ಕಟ್ಟಿಸಿದ ಮನೆ ಕೂಡ

ವಾಸ ಮೊದಲೇ ಬಿದ್ದುದ ಮರೆಯಲಿಲ್ಲ

ಧರ್ಮ ದೇವರುಗಳ ಮೂಢಾಂಧಕಾರದಲಿ

ಜಡವಾದ ತಲೆಗಳಲಿ ಬೆಳಕ ಬರಿಸಿ

ಜ್ಞಾನ-ವಿಜ್ಞಾನಗಳ ಅರಿವಿಂಗೆ ಬದುಕಿಟ್ಟ

ಹಿರಿಯ ಚೇತನ ಮೊದಲ ಅಡಿಯನಿರಿಸಿ

ಹೊಸಬೀಡು ಎಂಬುದು ಬರಿ ಒಂದು ಹೆಸರಲ್ಲ

ಅದರ ಒಳಗಡೆ ಹೂತ ನೆನಪು ನೂರು

ಸಹ್ಯಾದ್ರಿ ಉಡಿಯಲ್ಲಿ ಆ ತುಂಗೆ ಮಡಿಲಲ್ಲಿ

ನಕ್ಕು ನಲಿಯುವ ಒಂದು ಪುಟ್ಟ ಊರು

ಎಡೆಬಿಡದೆ ಸುರಿವ ಮಳೆ ತುಂಬಿ ಹರಿಯುವ ಹೊಳೆಯು

ಭತ್ತ ಅಡಿಕೆ ಬೆಳೆಯ ಸಾಲು ತೋಟ

ಮಲೆಯ ಮಕ್ಕಳ ಮಾತು ಎಷ್ಟೊಂದು ಶ್ರುತಿಮಧುರ

ಮಿಂಚುಳ್ಳಿ ಕಾಜಾಣ ರಮ್ಯನೋಟ

ಎಷ್ಟು ದೂರದವರೆಗು ಬೆಳೆದು ಹೋದರು ಕೂಡ

ಅಟ್ಟಿ ಬರುವುದು ನಮ್ಮ ಬಾಲ್ಯ ಬದುಕು

ಹುಟ್ಟಿದೂರಿನ ಹೆಸರ ಕಟ್ಟಿದ ಮನೆಗಿರಿಸಿ

ಕಟ್ಟಿಕೊಳ್ಳುವ ಬಂಧ ಅರ್ಥಪೂರ್ಣ

ದೂರದೂರುಗಳಿಂದ ಹಾರಿ ಬಂದಿಹವಿಲ್ಲಿ

ಶುಭವ ಕೋರಲು ನಿಮಗೆ ಹಾಡುಹಕ್ಕಿ

ತುಂಬಿ ತುಳುಕಲಿ ಮನೆಯು ಧನಕನಕ ಮಿಗಿಲಾದ

ಪ್ರೀತಿ ಸಂತಸಗಳ ಹಾಲು ಉಕ್ಕಿ

***

ಕೃತಿ : ಹೊಸಬೀಡು

ಸಂಪಾದಕರು : ಚಿ.ಶ್ರೀನಿವಾಸರಾಜು ಮತ್ತು ಎಚ್‌.ಎಸ್‌.ರಾಘವೇಂದ್ರರಾವ್‌

ಪುಟ : 69 +5 , ಬೆಲೆ : ನಮೂದಿಸಿಲ್ಲ

ಮೊದಲ ಮುದ್ರಣ : ಅಕ್ಟೋಬರ್‌ 2003

ಪ್ರಕಾಶನ : ಹೊಸಬೀಡು ಪ್ರಕಾಶನ, ನಂ.11, ಹೊಸಬೀಡು, 13ನೇ ಮುಖ್ಯರಸ್ತೆ , ಪುಟ್ಟೇನಹಳ್ಳಿ, 7 ನೇ ಹಂತ, ಜೆಪಿ ನಗರ, ಬೆಂಗಳೂರು- 560 078.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X