• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಲವು ಸಾಧ್ಯತೆಗಳ ‘ನಡೆ’

By Staff
|
  • ರಘುನಾಥ ಚ.ಹ.

P.N. Srinivas‘ಸ್ಪಂದನ’ ಹಾಗೂ ‘ಅಭಿಮಾನ’ದಂಥ ಒಳ್ಳೆಯ ಸಿನಿಮಾಗಳ ಮೂಲಕ ಪಿ.ಎನ್‌.ಶ್ರೀನಿವಾಸ್‌ ಕನ್ನಡ ಚಿತ್ರರಸಿಕರಿಗೆ ಪರಿಚಿತರು. ಇವತ್ತಿಗೂ ‘ಸ್ಪಂದನ’ ಚಿತ್ರದ ಎಂಥಾ ಮರುಳಯ್ಯ ಇದು ಎಂಥಾ ಮರುಳು ಚಿತ್ರಗೀತೆ ಬಾನುಲಿಯ ಮೆಚ್ಚಿನ ಚಿತ್ರಗೀತೆ ವಿಭಾಗದ ಖಾಯಂ ಹಾಡುಗಳಲ್ಲೊಂದು. ಆದರೆ, ಶ್ರೀನಿವಾಸ್‌ ಗಾಂಧಿನಗರದಿಂದ ಇದ್ದಕ್ಕಿದ್ದಂತೆ ದೂರವಾದರು. ಅವರ ಕಣ್ಮರೆ ಅಂಥ ದೊಡ್ಡ ಸುದ್ದಿಯೂ ಆಗಲಿಲ್ಲ . ಪುಟ್ಟಣ್ಣರ ವಿನಃ ನಿರ್ದೇಶಕ ಎನ್ನುವ ಪ್ರಾಣಿ ನಮ್ಮ ಚಿತ್ರರಸಿಕರ ಪಾಲಿಗೆ ಯಾವತ್ತೂ ಹೀರೋ ಆಗಿರಲೇ ಇಲ್ಲ . ಹಾಗಾಗಿ ಶ್ರೀನಿವಾಸ್‌ ಹೆಜ್ಜೆಗುರುತುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಯಾರು ?

ಕಳೆದ ವರ್ಷ (2003) ಶ್ರೀನಿವಾಸ್‌ ಮತ್ತೆ ಬೆಂಗಳೂರಿನಲ್ಲಿ ಧುತ್ತೆಂದು ಪ್ರತ್ಯಕ್ಷರಾಗಿದ್ದರು. ಆಗವರ ಕೈಯಲ್ಲಿದ್ದುದು ಸಿನಿಮಾ ಅಥವಾ ಸಿನಿಮಾ ಸ್ಕಿೃಪ್ಟ್‌ ಅಲ್ಲ ; ಎರಡು ಪುಸ್ತಕಗಳು. ಒಂದು ಕಾದಂಬರಿ, ‘ನಡೆ’ ಎಂದು ಶೀರ್ಷಿಕೆ. ಇನ್ನೊಂದು ಕಾದಂಬರಿಯಂತೆ ಕಾಣುವ ಸಿನಿಮಾ ತಂತ್ರಜ್ಞಾನ ಕುರಿತ ಪುಸ್ತಕ- ‘ಚಲನಚಿತ್ರ ನಿರ್ದೇಶಕ’.

ಸಿನಿಮಾದ ಶ್ರೀನಿವಾಸ್‌ ಇದ್ದಕ್ಕಿದ್ದಂತೆ ಲೇಖಕರಾದುದು ಹೇಗೆ ? ಉಹುಂ, ಇದು ರಾತ್ರೋರಾತ್ರಿಯ ಜಾದೂವಲ್ಲ . ಬರವಣಿಗೆ ಶ್ರೀನಿವಾಸ್‌ಗೆ ಹೊಸತೂ ಅಲ್ಲ . ಈ ಮುನ್ನ ಕೂಡ ಅವರು ಬರೆದುದ್ದುಂಟು. ‘ಮಾತುಗಳು’ ಎನ್ನುವ ಪ್ರಬಂಧ ಸಂಕಲನವನ್ನು ಪ್ರಕಟಿಸಿದ್ದೂ ಉಂಟು. ಆದರೆ, ಕರ್ನಾಟಕದಿಂದ ವಲಸೆ ಹೋಗಿದ್ದ ಶ್ರೀನಿವಾಸ್‌ ಅಮೆರಿಕಾವಾಸಿಯಾದುದರಿಂದ ಇದ್ಯಾವುದೂ ಸುದ್ದಿಯಾಗಿರಲಿಲ್ಲ . ಶ್ರೀನಿವಾಸ್‌ರ ಬರವಣಿಗೆ ತೆರೆಮರೆಯಲ್ಲೇ ಉಳಿಯಲು ಅವರ ವ್ಯಕ್ತಿತ್ವ ಕೂಡ ಕಾರಣವಿರಬೇಕು. ಸಿನಿಮಾದಲ್ಲಿ ಏಗಿದ್ದರೂ ಥಳಕ್ಕು ಬಳಕ್ಕು ಅವರಿಗೆ ಇಷ್ಟವಿದ್ದಂತಿಲ್ಲ . ನಗೆಯ ಗೆರೆಗಳು ದಟ್ಟವಾಗಿ ಕಾಣದ ಅವರ ಫೋಟೊ ನೋಡಿದರೆ, ಅವರು ಮಾತಿನಮಲ್ಲರಂತೆ ಕಾಣುವುದೂ ಇಲ್ಲ . ‘ಮಾತುಗಳು’ ಪುಸ್ತಕದಲ್ಲೇ ಖರ್ಚಾಗಿವೆಯೋ ಏನೋ!

ಇರಲಿ. ವ್ಯಕ್ತಿಯನ್ನು ಮರೆತು ಅಭಿವ್ಯಕ್ತಿಯತ್ತ ಗಮನ ಹರಿಸೋಣ. ಶ್ರೀನಿವಾಸ್‌ರ ‘ನಡೆ’ ಕಾದಂಬರಿಯ ಪರಿಚಯ ಈ ಲೇಖನದ ಉದ್ದೇಶ.

***

Nade : Kannada Novel by P.N. Srinivasಪಿ.ಎನ್‌.ಶ್ರೀನಿವಾಸ್‌ರ ‘ನಡೆ’ ಹಲವು ರೀತಿಗಳಿಂದ ವಿಶಿಷ್ಟವಾದುದು. ಶ್ರೀನಿವಾಸ್‌ ಬರಹಗಾರ ಮಾತ್ರವಲ್ಲ ;‘ಸ್ಪಂದನ’ದಂತ ಒಳ್ಳೆಯ ಸಿನಿಮಾದ ನಿರ್ದೇಶಕರು. ಅವರ ಬರಹಗಳ ಮೂಲಕ ಕಾಣುವುದಾದರೆ ಅವರೊಬ್ಬ ಒಳ್ಳೆಯ ವಿಡಿಯಾಗ್ರಾಫರ್‌ ಕೂಡ. ‘ಮಾತುಗಳು’ ಮೂಲಕ ತಮ್ಮೊಳಗಿನ ಬರಹಗಾರನ ಶಕ್ತಿಯನ್ನು ಪ್ರಕಟಿಸಿದ್ದ ಶ್ರೀನಿವಾಸ್‌, ‘ನಡೆ’ಯ ಮೂಲಕ ಸಾಹಿತ್ಯದ ಕಗ್ಗಾಡಲ್ಲಿ ತಮ್ಮ ಹೆಜ್ಜೆಯೂರಿದ್ದಾರೆ. ಅವರದು ಅಳುಕಿನ ನಡೆಯಲ್ಲ ; ಆತ್ಮವಿಶ್ವಾಸದ ನಡೆ, ದಿಟ್ಟತನದ ನಡೆ.

ಹೆಂಡತಿ ಮಕ್ಕಳೊಂದಿಗೆ ನಾಯಕ ನಯಾಗರ ಜಲಪಾತವನ್ನು ನೋಡಲು ಬಂದ ದೃಶ್ಯದೊಂದಿಗೆ ಕಾದಂಬರಿ ಪ್ರಾರಂಭವಾಗುತ್ತದೆ. ಜಲಪಾತದ ಎಲ್ಲಾ ಮುಖಗಳನ್ನು ತನ್ನ ವಿಡಿಯೋ ಕ್ಯಾಮರಾದಲ್ಲಿ ನಾಯಕ ಚಿತ್ರಿಸುವ ವಿವರಣೆ ಸಾಕಷ್ಟು ದೀರ್ಘವಾಗಿದೆ. ಭಾರತೀಯ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ಹೋಲಿಕೆಯೂ ಸೂಕ್ಷ್ಮವಾಗಿ ಕಾಣುತ್ತದೆ. ನಯಾಗರಾದ ಪರಿಸರದಲ್ಲಿನ ವಾಣಿಜ್ಯೀಕರಣ ಹಾಗೂ ಜೋಗದ ಸಹಜ ಪ್ರಕೃತಿಯ ಚಿತ್ರಣ ಇಲ್ಲಿದೆ. ಭಾರತೀಯ ಸಂಸ್ಕೃತಿಯ ಸಮರ್ಥನೆ ಕಾದಂಬರಿ ಉದ್ದೇಶವೇನೊ ಅನ್ನಿಸುತ್ತದೆ. ಆದರೆ, ಕ್ರಿಮಿನಲ್‌ ಲಾಯರ್‌ ಕೆ.ಕೆ.ಕಾಂತನ ಪ್ರವೇಶದೊಂದಿಗೆ ಕಥೆ ಬೇರೆಯೇ ಆದ ಆಯಾಮವನ್ನು ಪಡೆದುಕೊಳ್ಳುತ್ತದೆ.

‘ನಡೆ’ ಸಾವಿನ ಕುರಿತು ಚಿಂತಿಸುವ ಕಾದಂಬರಿ. ಇಲ್ಲಿನ ಸಾವು ವ್ಯಕ್ತಿಯ ಕೊನೆಯನ್ನು ಧ್ಯಾನಿಸುವ ಸಾವು ಮಾತ್ರವಾಗದೆ, ಜೀವಂತ ವ್ಯಕ್ತಿಯ ಸಾವಿನ ಕುರಿತೂ ಹೇಳುವುದು ವಿಶೇಷವಾಗಿದೆ.

‘ನಡೆ’ ಕೃತಿಯಲ್ಲಿ ಸಾವು ಮೂರು ರೀತಿಯಾಗಿ ಓದುಗನನ್ನು ಕಾಡುತ್ತದೆ. ಟರ್ಮಿನಲ್‌ ಕ್ಯಾನ್ಸರ್‌ಗೆ ತುತ್ತಾಗಿ ಸಾವಿನ ಹೊಸಿತಲಲ್ಲಿ ನಿಂತಿರುವ ಕೃಷ್ಣ , ವೈಭವೋಪೇತ ಹೊಸ ಮುಖವಾಡದ ಮೋಹಕ್ಕಾಗಿ ಕೊಂದುಕೊಂಡ ತನ್ನ ವ್ಯಕ್ತಿತ್ವದ ಕುರಿತು ತಲ್ಲಣಗೊಳ್ಳುವ ಕ್ರಿಮಿನಲ್‌ ಲಾಯರ್‌ ಕೆ.ಕೆ.ಕಾಂತ್‌ ಹಾಗೂ ತನ್ನದಲ್ಲದ ಪರಿಸರದಲ್ಲಿ ಸಂಸ್ಕೃತಿ- ನುಡಿಯ ಕುರಿತು ಅಭದ್ರತೆ ಎದುರಿಸುವ ಸುಮಾ. ಈ ಮೂರು ಪಾತ್ರಗಳೂ ಸಾವಿನ ಸಮಸ್ಯೆ ಎದುರಿಸುತ್ತವೆ. ಇಲ್ಲಿ ಮೂರೂ ಪಾತ್ರಗಳ ಸಾವಿನ ಸಮಸ್ಯೆಯೂ ಒಂದಕ್ಕಿಂತ ಇನ್ನೊಂದು ಭಿನ್ನ. ಕೃಷ್ಣನದು ಭೌತಿಕ ಸಾವಿನ ಆತಂಕವಾದರೆ, ಕೆ.ಕೆ.ಕಾಂತನದು ಮಾನಸಿಕ ಸಾವಿನ ಭಯ. ಇವರಿಬ್ಬರಿಗಿಂತಲೂ ಹೆಚ್ಚು ಭಯಾನಕವಾದದ್ದು ಸುಮಾಳ ಪರಿಸ್ಥಿತಿ. ಆಕೆ ವ್ಯಕ್ತಿತ್ವದ ಪತನದ ಆತಂಕ ಎದುರಿಸುತ್ತಿದ್ದಾಳೆ. ಸುಮಾಳದು ಸಾಂಸ್ಕೃತಿಕ ತಲ್ಲಣ. ವಿಶೇಷವೆಂದರೆ ಮೂರೂ ಪಾತ್ರಗಳು ಸಾವಿನ ಹೊಸಿತಿಲಿಗೆ ಬಂದು ಮತ್ತೆ ಜೀವಗೊಳ್ಳುತ್ತವೆ. ಕೃಷ್ಣನ ಬದುಕು ಹಾಗೂ ವ್ಯಕ್ತಿತ್ವ ಸುಮಾಳ ಗೊಂದಲಗಳಿಗೆ ಉತ್ತರ ಒದಗಿಸಿದರೆ, ಸುಮಾ ಹಾಡುವ ‘ಜವರಾಯ ಬಂದರೆ..’ ಎನ್ನುವ ಜಾನಪದ ಗೀತೆ ಕೃಷ್ಣನ ಪಾಲಿಗೆ ಸಂಜೀವಿನಿ ಮಂತ್ರವಾಗುತ್ತದೆ.

ಸುಮಾ ಹಾಗೂ ಕೃಷ್ಣನ ವ್ಯಕ್ತಿತ್ವಗಳ ವೈಭವದಲ್ಲಿ ಕೆ.ಕೆ.ಕಾಂತ ಸೊರಗಿದಂತೆ ಕಂಡರೂ, ಆತನ ಬದುಕು ಹಾಗೂ ತೊಳಲಾಟಗಳು ಸುಮಾ ಹಾಗೂ ಕೃಷ್ಣರ ತೊಳಲಾಟಕ್ಕಿಂಥ ಕಡಿಮೆಯವಲ್ಲ . ತನ್ನ ಮೂಲರೂಪವನ್ನು ಕೊಂದುಕೊಳ್ಳುವ ಕೆ.ಕೆ.ಕಾಂತ ಶ್ರೀಮಂತಿಕೆಯ ಪ್ರಭಾವಳಿಯ ಹೊಸರೂಪು ಹೊಂದುತ್ತಾನೆ. ಆದರೆ, ಕಳಕೊಂಡದ್ದು ರೂಪವನ್ನು ಮಾತ್ರವಲ್ಲ , ನೆಮ್ಮದಿಯನ್ನು ಕೂಡ ಎನ್ನುವ ಸತ್ಯ ಆತನಿಗೆ ಬೇಗನೆ ಅರ್ಥವಾಗುತ್ತದೆ. ಹೊಸ ಕಾಂತನನ್ನು ಒಪ್ಪಿಕೊಳ್ಳದ ಆತನ ಪತ್ನಿ ದೂರವಾಗುತ್ತಾಳೆ. ಕ್ಯಾನ್ಸರ್‌ನೊಂದಿಗೆ ಪತಿಯ ರೂಪದ ಸಾವೂ ಆಕೆಯನ್ನು ಕಾಡತೊಡಗುತ್ತದೆ. ಪತ್ನಿಯ ಸಾವಿನೊಂದಿಗೆ ಕೆ.ಕೆ.ಕಾಂತನ ಕೊರಗು ಒಳಗೇ ಬೆಳೆಯುತ್ತದೆ. ಆ ಕೊರಗು ಸ್ಫೋಟಿಸುವುದು ನಿರೂಪಕ ಹಾಗೂ ಕಾಂತನ ಮುಖಾಮುಖಿಯಾಂದಿಗೆ. ನಿರೂಪಕನ ರೂಪ ಹಾಗೂ ಸಂಸಾರವನ್ನು ನೋಡಿದ ಕಾಂತನಿಗೆ ಆತನ ಪೂರ್ವರೂಪ ಹಾಗೂ ನೆಮ್ಮದಿಯ ದಿನಗಳು ಕಾಡತೊಡಗುತ್ತವೆ. ವಿಹ್ವಲಗೊಳ್ಳುವ ಕಾಂತ ನಿರೂಪಕನ ರೂಪವನ್ನು ಕೊಲ್ಲಲು ಮುಂದಾಗುತ್ತಾನೆ. ಈ ಕೊಲ್ಲುವ ಆಟ ಹಾಗೂ ಸ್ವಂತಿಕೆ ಉಳಿಸಿಕೊಳ್ಳುವ ಹಠ- ಕಾದಂಬರಿಯ ಸಾರ್ಥಕ ಕ್ಷಣಗಳಲ್ಲಿ ಒಂದು.

‘ನಡೆ’ ಕಾದಂಬರಿಯನ್ನು ಅನಿವಾಸಿಯಾಬ್ಬನ ಸ್ವಗತ ಅಥವಾ ಸರ್ಕಸ್ಸು ಎಂದು ತಳ್ಳಿಹಾಕುವುದು ಸುಲಭ. ಆದರೆ, ಈ ಕೃತಿ ಮಾಮೂಲಿ ಪತ್ತೇದಾರಿ ಕಾದಂಬರಿಯಲ್ಲ . ಜನಪ್ರಿಯವಾಗುತ್ತಿರುವ ಜಾಗತಿಕ ಗ್ರಾಮದ ಪರಿಕಲ್ಪನೆಯಲ್ಲಿ , ನಮ್ಮೆಲ್ಲರ ಬೇರುಗಳು ಸಡಿಲಾಗಿ ವಿಳಾಸಗಳ ಸ್ಮರಣೆ ಕಲಸುಮೇಲೋಗರವಾಗುತ್ತಿರುವ ಸಂದರ್ಭದಲ್ಲಿ , ‘ನಡೆ’ ಆತ್ಮಾವಲೋಕನದ ನಡೆಯಾಗಿ ಕಾಣುತ್ತದೆ. ಕನ್ನಡದ ಕಾದಂಬರಿ ಕ್ಷೇತ್ರದಲ್ಲಿ ಪ್ರಯೋಗಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ‘ನಡೆ’ಯ ಹಲವು ಸಾಧ್ಯತೆಗಳು ಚೇತೋಹಾರಿಯಾಗಿ ಕಾಣಿಸುತ್ತದೆ. ತಾನೇ ಒಂದು ಪಾತ್ರವಾದರೂ, ಪಾತ್ರದಿಂದ ದೂರ ನಿಂತು ಕಥೆ ಹೇಳುವ ಸಂಯಮವೂ ಲೇಖಕರಿಗೆ ಸಾಧ್ಯವಾಗಿದೆ.

‘ನಡೆ’ ಜನಪ್ರಿಯ ಧಾಟಿಯಲ್ಲಿ ಚಿತ್ರಿತವಾದ ಕಲಾತ್ಮಕ ಕಾದಂಬರಿ. ಪತ್ತೇದಾರಿಕೆಯ ಕುತೂಹಲದ ಬಂಧ ಹಾಗೂ ಲವಲವಿಕೆಯಾಳಗೊಂಡ ಶ್ರೀನಿವಾಸ್‌ರ ಬರವಣಿಗೆ ತೇಜಸ್ವಿಯವರ ಕಥೆ ಕಾದಂಬರಿಗಳನ್ನು ಆಗಾಗ ನೆನಪಿಸುತ್ತದೆ. ಶ್ರೀನಿವಾಸ್‌ರ ಬರವಣಿಗೆ ಸರಳವಾಗಿದೆ. ಸಂಕೀರ್ಣ ವಿಷಯಗಳನ್ನೂ ಮನಮುಟ್ಟುವಂತೆ ಸರಳವಾಗಿ ಹೇಳುವುದು ಅವರಿಗೆ ಸಾಧ್ಯವಾಗಿದೆ. ಆದರೆ, ಮೊಸರಿನಲ್ಲಿನ ಕಲ್ಲಿನಂತೆ ಅನಾವಶ್ಯಕ ಒತ್ತುಗಳು (ನಂಬಿಕ್ಕೊಂಡು, ಸಹಿಸಿಕ್ಕೊಂಡು, ಬಿಟ್ಟುಕ್ಕೊಂಡು, ಸಹಿಸಿಕ್ಕೊಂಡು....) ಕಿರಿಕಿರಿ ಉಂಟುಮಾಡುತ್ತವೆ.

ಕಾದಂಬರಿಯಲ್ಲಿನ ಕೃಷ್ಣ ಹಾಗೂ ಸುಮಾ ಪಾತ್ರಗಳು ಓದುಗನನ್ನು ತುಂಬಾ ದಿನ ಕಾಡುವುದರಲ್ಲಿ ಅನುಮಾನವಿಲ್ಲ . ಈ ಪಾತ್ರಗಳು ಕನ್ನಡ ಕಾದಂಬರಿ ಲೋಕದ ವಿಶಿಷ್ಟ ಪಾತ್ರಗಳು ಕೂಡ. ಅದೇ ರೀತಿ ನಯಾಗರಾದ ಜಲಲ ಧಾರೆಯ ಚಿತ್ರಣವು ಅಕ್ಷರಗಳ ಮೂಲಕವೇ ಚಿತ್ರವಾಗಿ ಓದುಗನ ಎದೆಯನ್ನು ತೇವವಾಗಿಸುವಷ್ಟು ಶಕ್ತವಾಗಿದೆ. ವೈಭವೋಪೇತ ‘ಲಿಮೊ’ ಕಾರು ಒಂದು ರೂಪಕವಾಗಿ ಕಾಡುತ್ತದೆ.

‘ಜವರಾಯ ಬಂದರೆ ಬರಿಗೈಲಿ ಬರಲಿಲ್ಲ ’ ಎನ್ನುವ ಜನಪದ ಗೀತೆಯ ಬಳಕೆ ಕಾದಂಬರಿಯ ಯಶಸ್ಸಿನ ಸೂತ್ರಗಳಲ್ಲೊಂದು. ಈ ಹಾಡು ಕೃಷ್ಣನನ್ನು ಸಾವಿನ ಮನೆಯಿಂದ ವಾಪಸ್ಸು ಭೂಮಿಗೆ ಕರೆತರುತ್ತದೆ. ಜವರಾಯನ ಗೀತೆಯನ್ನು ಶ್ರೀನಿವಾಸ್‌ ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಕಾದಂಬರಿಯ ಓದಿನ ನಂತರ, ಜವರಾಯನ ಹಾಡು ಗೊತ್ತಿಲ್ಲದವರು ಕೂಡ ಆ ಗೀತೆಯ ಬಗೆಗೆ ಕುತೂಹಲ ತಾಳುವುದರಲ್ಲಿ ಆಶ್ಚರ್ಯವಿಲ್ಲ . ಅದೇರೀತಿ, ಈಗಾಗಲೇ ಹಾಡು ಕೇಳಿದವರು ಗೀತೆಯ ಅರ್ಥಸಾಧ್ಯತೆಗಳ ಕುರಿತು ಇನ್ನೊಮ್ಮೆ ಚಿಂತಿಸಲು ಕಾದಂಬರಿ ಪ್ರೇರೇಪಿಸುತ್ತದೆ. ಕಥೆಯ ಸ್ಫೂರ್ತಿಗಾಗಿ ಸದಾ ಪಶ್ಚಿಮದತ್ತ ನೋಡುವ ನಮ್ಮ ಚಿಂತಕರಿಗೆ ಜನಪದದ ಸಿರಿಕಣಜವನ್ನು ಶ್ರೀನಿವಾಸ್‌ ‘ನಡೆ’ಯ ಮೂಲಕ ತೆರೆದಿದ್ದಾರೆ.

‘ನಡೆ’ ಕಾದಂಬರಿ ಶ್ರೀನಿವಾಸ್‌ ಅವರ ಪ್ರಯೋಗಶೀಲತೆಯ ಒಂದು ಸಾಧ್ಯತೆಯಾಗಿ ಕಾಣುತ್ತದೆ. ಅವರ ಮುಂದಿನ ಕಾದಂಬರಿಯನ್ನು ಕುತೂಹಲದಿಂದ ನಿರೀಕ್ಷಿಸಬಹುದು. ‘ನಡೆ’ಯನ್ನು ಪ್ರಕಟಿಸಿರುವ ಪುರೋಗಾಮಿ ಪ್ರಕಾಶನದ ಮಾವಿನಕೆರೆ ರಂಗನಾಥನ್‌ ಅವರಿಗೂ ಅಭಿನಂದನೆಗಳು ಸಲ್ಲುತ್ತವೆ.

*

ಕೃತಿ : ನಡೆ (ಕಾದಂಬರಿ)

ಲೇಖಕ : ಪಿ.ಎನ್‌.ಶ್ರೀನಿವಾಸ್‌, srinprat@yahoo.com

ಪುಟ : 264+ 8, ಬೆಲೆ : 120 ರುಪಾಯಿ, ಅಮೆರಿಕದಲ್ಲಿ 20 ಡಾಲರ್‌.

ಪ್ರಕಾಶನ : ಪುರೋಗಾಮಿ ಸಾಹಿತ್ಯ ಸಂಘ, 21, ಯಲ್ಲಪ್ಪ ಗಾರ್ಡನ್‌, 10 ನೇ ಕ್ರಾಸ್‌, ಮಲ್ಲೇಶ್ವರಂ, ಬೆಂಗಳೂರು- 560 003.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more