ಮೂಡಬಿದಿರೆ ನೆನಪಿಗಾಗಿ ಹೊಂಬಿದಿರು
- ವಿಶಾಖ ಎನ್.
ಪುಸ್ತಕವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲ 95 ಪುಟಗಳು ಸಮ್ಮೇಳನಾಧ್ಯಕ್ಷೆ ಕಮಲ ಹಂಪನಾ ಅವರಿಗೆ ಮೀಸಲಾಗಿದೆ. ಕಮಲಾ ವ್ಯಕ್ತಿ ತ್ವದ ವಿವಿಧ ಮುಖಗಳ ಪರಿಚಯದ ಜೊತೆಗೆ ಅವರ ಕೃತಿ ವಿಚಾರ, ಲೇಖಕರು ಕಂಡಂತೆ ಕಮಲಾ ಹಾಗೂ ಅವರ ಸಂದರ್ಶನಗಳನ್ನು ಪ್ರಕಟಿಸಲಾಗಿದೆ. ಕೃತಿಯ ಎರಡನೇ ಭಾಗ ಮಹತ್ವವಾದದ್ದು. 1805 ರಿಂದ 1904ರ ತನಕ, ಹೊಸಗನ್ನಡ ಸಾಹಿತ್ಯ ಹೋಮಕ್ಕೆ ಹವಿಸ್ಸು ಸಲ್ಲಿಸಿರುವ ಸಾಹಿತಿ ಕಟ್ಟಾಳುಗಳ ಸ್ಥೂಲ ಪರಿಚಯಾತ್ಮಕ ಲೇಖನಗಳು ಈ ಭಾಗದಲ್ಲಿವೆ. ತುಪಾಕಿ ವೆಂಕಟರಮಣಾಚಾರ್ಯ, ಮೋಗ್ಲಿಂಗ್, ಶರೀಫ, ಹರಪನಹಳ್ಳಿ ಭೀಮವ್ವರಿಂದ ಹಿಡಿದು ವಿ.ಸೀ, ಎಸ್.ವಿ.ರಂಗಣ್ಣ, ಶಿವರಾಮ ಕಾರಂತ, ಗೊರೂರು, ಕಡೆಂಗೋಡ್ಲು ಶಂಕರಭಟ್ಟ, ಕುವೆಂಪುವರೆಗೆ ಸುಮಾರು ಇನ್ನೂರು ಸಾಹಿತಿಗಳ ಬದುಕು- ಬರಹವನ್ನು ವಿವಿಧ ಲೇಖಕರು ಕಟ್ಟಿಕೊಟ್ಟಿದ್ದಾರೆ. ಪ್ರಸ್ತುತತೆ ಹಾಗೂ ನಿತ್ಯ ವ್ಯಾಪಾರದಲ್ಲಿ ಕನ್ನಡದ ಯಶಸ್ವಿ ಅನುಷ್ಠಾನದ ದೃಷ್ಟಿಯಿಂದ ಮೂರನೇ ಭಾಗ ಮುಖ್ಯವಾಗುತ್ತದೆ. ವಿಶ್ವವಿದ್ಯಾಲಯದಲ್ಲಿ, ಮಾಧ್ಯಮಗಳಲ್ಲಿ, ನ್ಯಾಯಾಲಯದಲ್ಲಿ, ಬ್ಯಾಂಕುಗಳಲ್ಲಿ, ವಿಮಾ ನಿಗಮದಲ್ಲಿ, ಗಣಕಯಂತ್ರ ಮೊದಲಾದ ವಲಯಗಳಲ್ಲಿ ಕನ್ನಡದ ಬಳಕೆ ಎಷ್ಟರ ಮಟ್ಟಿಗೆ ಆಗಿದೆ, ಆಗುತ್ತಿದೆ ಎಂಬುದರ ಚಿತ್ರ ನೀಡುವಂಥಾ ಲೇಖನಗಳಿವೆ.
ಎರಡನೇ ಭಾಗದಲ್ಲಿ ಅಕ್ಷರಕ್ಕೆ ಇಳಿಸಲಾಗಿರುವ ಸಾಹಿತಿಗಳ ಪೈಕಿ ಸುಮಾರು ಅರ್ಧದಷ್ಟು ಮಂದಿ ಎಲೆ ಮರೆಯ ಕಾಯಿಯಾಗಿದ್ದವರು ಎಂಬುದು ಮುಖ್ಯ ಅಂಶ. ವೆಂ.ತಿ.ಕುಲಕರ್ಣಿ, ನರ್ಕಳ ಮಾರಪ್ಪ ಶೆಟ್ಟಿ, ಬೋಳಾರ್ ಬಾಬೂರಾವ್, ಸೋಸಲೆ ಅಯ್ಯಾಶಾಸ್ತ್ರಿ , ಉಳ್ಳಾಲ ಮಂಗೇಶರಾವ್, ಎಸ್.ವಿ.ಪಣಿಯಾಡಿ, ಕೊಳಂಬೆ ಪುಟ್ಟಣ್ಣಗೌಡ, ಬೇಕಲ ರಾಮನಾಯಕ, ಕಡವ ಶಂಭುಶರ್ಮ- ಇಂತಹ ಅನೇಕರ ಪರಿಚಯ ಪುಸ್ತಕದಲ್ಲಿದೆ.
ಇಷ್ಟಾದರೂ ಇದು ಪರಿಪೂರ್ಣವಲ್ಲ ಎಂಬ ಸ್ಪಷ್ಟ ಅರಿವು ನಮಗಿದೆ. ನಮ್ಮ ಮಿತಿಯನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ನಮ್ರತೆಯಿಂದ ಬರೆದಿರುವ ಸಂಪಾದಕರು ಓತಪ್ರೋತವಾಗಿ ಹರಿಯುವ ನವೋದಯ, ನವ್ಯ, ನವ್ಯೋತ್ತರಗಳ ಸಾಗರದಲ್ಲಿ ಮುಳುಗೇಳುವ ಕಷ್ಟದ ಕೆಲಸದ ಬಗ್ಗೆ ಮುಂದಿನ ಸಮ್ಮೇಳನದವರು ಅಥವಾ ಇನ್ನಾರಾದರೂ ತಲೆಕೆಡಿಸಿಕೊಳ್ಳಲಿ ಎಂದು ಕರೆ ಕೊಟ್ಟಿದ್ದಾರೆ.
ಸಂಪಾದಕರೇ ಬರೆದಿರುವಂತೆ ಕೇವಲ ಮೂರೂವರೆ ತಿಂಗಳ ಅವಧಿಯಲ್ಲಿ ಕೃತಿಯ ಸಂಪಾದನೆ ನಡೆದಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಬಹುಶಃ ಈ ತರಾತುರಿಯ ಕಾರಣಕ್ಕೋ ಏನೋ, ಈಗಾಗಲೇ ಬೇರೆಡೆಗಳಲ್ಲಿ ಪ್ರಕಟವಾಗಿರುವ ಕೆಲವು ಲೇಖನಗಳು ಇಲ್ಲೂ ಜಾಗ ಕಂಡಿವೆ ಎಂಬ ಆರೋಪವೂ ಉಂಟು. ಅದನ್ನು ಪಕ್ಕಕ್ಕಿರಿಸಿ ನೋಡಿದರೆ, ಕನ್ನಡ ಸಾಹಿತ್ಯದ ಬಗೆಗೆ ಆಸಕ್ತಿ ಇಟ್ಟುಕೊಂಡವರ ಮೂಲ ಸ್ಥೂಲ ಮಾಹಿತಿ ಆಕರವಾಗಿ ಪುಸ್ತಕ ನಿಜಕ್ಕೂ ಉಪಯುಕ್ತವಾದುದು. ಸುಮಾರು ನೂರು ಲೇಖಕರಿಗೆ ಕೃತಿಯಲ್ಲಿ ಬರೆಯುವ ಅವಕಾಶ ದೊರೆತಿರುವುದು ಕನ್ನಡದ ಸಂಶೋಧಕರ- ಸಾಹಿತಿಗಳ ದಂಡು ಎಷ್ಟು ದೊಡ್ಡದೆಂಬುದಕ್ಕೆ ಹಿಡಿದ ಕನ್ನಡಿ.
ಪಿ.ಎಸ್.ಪುಣಿಂಚತ್ತಾಯರ ಹೊಂಬಿದಿರಿನ ಮುಖಪುಟ ವಿನ್ಯಾಸವಿರುವ ಈ ಪುಸ್ತಕವನ್ನು 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಪ್ರಕಟಿಸಿದೆ. ಬಿದಿರು ಹೆಚ್ಚಾಗಿ ಬೆಳೆಯುವ ಕಾರಣಕ್ಕೆ ಹೆಸರು ಪಡಕೊಂಡಿರುವ ಮೂಡಬಿದಿರೆಯ ನೆನಪಿಸಲು ಇದಕ್ಕಿಂತ ಸೊಗಸಾದ ಹೆಸರು ಸಿಗುವುದಿಲ್ಲ. ಶ್ರೀನಿವಾಸ ಹಾವನೂರ್ ಅವರಂಥ ಹಿರಿಯರ ಸಲಹೆಯಿಂದ ಸಿದ್ಧಗೊಂಡಿರುವ ಈ ಪುಸ್ತಕವನ್ನು ಬೈಕಂಪಾಡಿಯ ಪ್ರಕಾಶ್ ಆಫ್ಸೆಟ್ ಪ್ರಿಂಟರ್ಸ್ ಚೆನ್ನಾಗಿ ಮುದ್ರಿಸಿದ್ದಾರೆ. ಬೆಲೆ ಕೂಡ ತೀರಾ ಜಾಸ್ತಿಯಲ್ಲ , 200 ರುಪಾಯಿ ಮಾತ್ರ.