ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಟಿಪ್ಪೂ - ನಿಜಸ್ವರೂಪ’

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೊ

Cover page of the book Tippoo Nijaswaroopaಕೃತಿ : ಟಿಪ್ಪೂ ನಿಜ ಸ್ವರೂಪ
ಇಂಗ್ಲಿಷ್‌ ಮೂಲ : ಎಚ್‌.ಡಿ.ಶರ್ಮಾ
ಕನ್ನಡ ಅನುವಾದ : ಡಾ।। ಪ್ರಧಾನ್‌ ಗುರುದತ್ತ
ಪುಟ : 167, ಬೆಲೆ : 75 ರುಪಾಯಿ
ಪ್ರಕಾಶಕರು : ಸಾಹಿತ್ಯ ಸಿಂಧು ಪ್ರಕಾಶನ, 14 / 3-ಎ, ನೃಪತುಂಗ ರಸ್ತೆ, ಬೆಂಗಳೂರು- 560 001

ಇತ್ತೀಚಿನ ದಿನಗಳಲ್ಲಿ ಪುಸ್ತಕಲೋಕದ ಗಮನ ಸೆಳೆದ ಪುಸ್ತಕ. ಎಚ್‌.ಡಿ.ಶರ್ಮಾ ಅವರ ಇಂಗ್ಲಿಷ್‌ ಕೃತಿಯನ್ನು ಡಾ।। ಪ್ರಧಾನ್‌ ಗುರುದತ್ತ ಅವರು ಕನ್ನಡಕ್ಕೆ ತಂದಿದ್ದಾರೆ. ಟಿಪ್ಪೂ ಸುಲ್ತಾನನ ಬಗೆಗಿನ ನಮ್ಮೆಲ್ಲಾ ಕಲ್ಪನೆಗಳನ್ನೂ ಉಲ್ಟಾ ಮಾಡುತ್ತಾ ಓದಿಸಿಕೊಳ್ಳುವ ಈ ಪುಸ್ತಕ ಅನೇಕ ಟಿಪ್ಪೂ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ವಿವಾದಗಳೇನೇ ಇದ್ದರೂ ಟಿಪ್ಪೂ ಸುಲ್ತಾನನ ವ್ಯಕ್ತಿತ್ವದ ಕುರಿತು ಮರು ಮೌಲ್ಯಮಾಪನಕ್ಕೆ ಕೃತಿ ಅವಕಾಶ ಮಾಡಿಕೊಟ್ಟಿದೆ. ಜೀವಂತ ಸಾಂಸ್ಕೃತಿಕ ಪರಿಸರದಲ್ಲಿ ಇಂಥ ಸಂಘರ್ಷಗಳು ಅಗತ್ಯ ಹಾಗೂ ಅನಿವಾರ್ಯ.

ಪ್ರಾಥಮಿಕ ಶಾಲೆಯ ಇತಿಹಾಸದ ಪುಸ್ತಕಗಳ ಮೂಲಕ ‘ಮೈಸೂರು ಹುಲಿ’ ಎಂದು ಕನ್ನಡದ ಮನಸ್ಸುಗಳಲ್ಲಿ ಅಚ್ಚೊತ್ತಿರುವ ಟಿಪ್ಪೂ ಸುಲ್ತಾನ್‌ ರಾಷ್ಟ್ರಪ್ರೇಮದ ಸಂಕೇತ. ಇಂಗ್ಲೀಷರ ವಿರುದ್ಧ ಎದೆಸೆಟೆಸಿ ಹೋರಾಡಿದ್ದು, ಶತ್ರುದಮನಕ್ಕಾಗಿ ಫ್ರೆಂಚರ ಸಹಾಯ ಕೋರಿದ್ದು , ಯುದ್ಧದಲ್ಲಿ ಫಿರಂಗಿ ಬಳಸಿದ್ದು , ಒತ್ತೆ ಹಣ ನೀಡಲು ವಿಫಲನಾಗಿ ತನ್ನ ಮಕ್ಕಳನ್ನೇ ಬ್ರಿಟೀಷರ ಬಳಿ ಒತ್ತೆ ಇಟ್ಟದ್ದು , ರಣರಂಗದಲ್ಲಿ ಹೋರಾಡುತ್ತಲೇ ವೀರ ಮರಣ ಹೊಂದಿದ್ದು - ಇವೆಲ್ಲಾ ನಾವು ಈವೆರಗೂ ಕಂಡ ಟಿಪ್ಪೂವಿನ ಮುಖಗಳು. ಈ ಟಿಪ್ಪೂ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿಯ ಭಕ್ತನಾಗಿದ್ದ . ಧರ್ಮ ಸಹಿಷ್ಣುವಾಗಿದ್ದ . ಒಟ್ಟಾರೆ ಟಿಪ್ಪೂ ಎನ್ನುವವನು ಆದರ್ಶ ರಾಜ !

ಶರ್ಮರ ಕೃತಿ ನಮ್ಮ ಮನಸ್ಸಿನ ಪುಟಗಳಲ್ಲಿ ಅಚ್ಚೊತ್ತಿರುವ ಟಿಪ್ಪೂವಿನ ಚಿತ್ರಗಳನ್ನು ಪುಟಪುಟದಲ್ಲೂ ಪ್ರಶ್ನಿಸುತ್ತಾ ಮುನ್ನಡೆಯುತ್ತದೆ. ಟಿಪ್ಪೂವಿನ ನಿಜ ಸ್ವರೂಪ ಇದು ಎಂದು ನಮ್ಮೆಲ್ಲ ಕಲ್ಪನೆಗಳಗೆ ವಿರುದ್ಧವಾದ ಚಿತ್ರಗಳನ್ನು ಕೃತಿ ಮುಂದಿಡುತ್ತದೆ.

ಕೃತಿ ರಚಿಸಲು ಶರ್ಮರಿಗೆ ಪ್ರೇರಣೆ ನೀಡಿದ್ದೇ ಟಿಪ್ಪೂ ಕುರಿತ ದಂತಕಥೆಗಳು ಹಾಗೂ ವಿವಾದಗಳು. ‘ಭಗವಾನ್‌ ಎಸ್‌.ಗಿಡ್ವಾನಿ ಅವರ The Sword of Tipu Sultan ಕಾದಂಬರಿ ಅಸತ್ಯಗಳಿಂದ ತುಂಬಿದೆ. ಈ ಕಾದಂಬರಿಯನ್ನು ಆಧರಿಸಿದ ದೂರದರ್ಶನದ ಧಾರಾವಾಹಿ ಕೂಡ ಸತ್ಯಕ್ಕೆ ದೂರವಾದ ಸಂಗತಿಗಳಿಗೆ ತನ್ನದೇ ಆದ ಕಾಣಿಕೆಯನ್ನು ನೀಡಿದೆ. ಈ ವಿವಾದವೇ ಟಿಪ್ಪೂವಿನ ಬಗೆಗೆ ವಿವರ ಅಧ್ಯಯನಕ್ಕೆ ಪ್ರೇರಣೆ ನೀಡಿತು’ ಎಂದು ಶರ್ಮಾ ತಮ್ಮ ಪುಸ್ತಕ ರಚನೆಯ ಹಿನ್ನೆಲೆಯನ್ನು ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ.

ಶರ್ಮಾ ಅವರ ವಿಚಾರಗಳನ್ನು ಒಪ್ಪುವುದು ಬಿಡುವುದು ಬೇರೆಯ ಮಾತು. ಆದರೆ, ಕೃತಿ ರಚಿಸುವಲ್ಲಿನ ಲೇಖಕರ ಶ್ರಮವನ್ನು ಅಲ್ಲಗಳೆಯುವಂತಿಲ್ಲ . ದಾಖಲೆಗಳಿಗಾಗಿ ಇತಿಹಾಸದ ಪುಸ್ತಕಗಳನ್ನು , ಅನೇಕ ಆಕರಗಳನ್ನು , ಹುದುಗಿಹೋಗಿದ್ದ ದಾಖಲೆಗಳನ್ನು ಲೇಖಕರು ಬೆದಕಿದ್ದಾರೆ. ಇಡೀ ಪುಸ್ತಕ ಇಂಥ ದಾಖಲೆಗಳಿಂದಲೇ ತುಂಬಿದೆ. ಲೇಖಕರ ಅಭಿಪ್ರಾಯವನ್ನು ಒಪ್ಪಲು ಹಿಂಜರಿದರೂ ಅಲ್ಲಗಳೆಯುವುದು ಕಷ್ಟ. ಅದು ಕೃತಿಯ ಯಶಸ್ಸು .

ಕೃತಿಯಲ್ಲಿ ಇರುವುದಾದರೂ ಏನು ? ಕೆಲವು ಉದಾಹರಣೆಗಳನ್ನು ನೋಡಿ :

  • ಆಫಘನಿಸ್ತಾನ, ಪರ್ಷಿಯ, ತುರ್ಕಿ, ಅರೇಬಿಯಾದ ಪ್ರಭುಗಳಿಗೆ ಭಾರತದ ಮೇಲೆ ಆಕ್ರಮಣ ನಡೆಸಿ ಮುಸ್ಲಿಂ ಆಳ್ವಿಕೆಯನ್ನು ಸ್ಥಾಪಿಸುವಂತೆ ಟಿಪ್ಪೂ ಮೇಲಿಂದ ಮೇಲೆ ಪತ್ರ ಬರೆಯುತ್ತಿದ್ದ .
  • ಟಿಪ್ಪೂ ಓರ್ವ ಮತಾಂಧ. ದೇವಾಲಯ ವಿಧ್ವಂಸ, ಬಲಾತ್ಕಾರದ ಮತಾಂತರದಲ್ಲಿ ಕ್ರೌರ್ಯದ ಹೊಸ ದಾಖಲೆಗಳನ್ನು ನಿರ್ಮಿಸಿದ.
  • ಭಾರತದ ಅನ್ಯ ಭಾಗಗಳ ಮುಸ್ಲಿಂ ನವಾಬರಿಂದಲೂ ಟಿಪ್ಪೂ ತಾತ್ಸಾರಕ್ಕೆ ತುತ್ತಾಗಿದ್ದ . ಅವನ ಆಳ್ವಿಕೆಯ ಪ್ರದೇಶಗಳ ಜನರು ದಂಗೆಯೇಳಲು ಅವಕಾಶಗಳಿಗಾಗಿ ಕಾಯುತ್ತಿದ್ದರು.
  • ದಕ್ಷಿಣಭಾರತದಾದ್ಯಂತ ಟಿಪ್ಪೂ 8 ಸಾವಿರ ದೇಗುಲಗಳನ್ನು ನಾಶ ಮಾಡಿದ.
  • ಟಿಪ್ಪೂವಿನ ಭಯದಿಂದ ಗುರುವಾಯೂರು ದೇವಸ್ಥಾನದ ಮೂರ್ತಿಯನ್ನು ಸ್ಥಳೀಯರು ಅಂಬಲಪ್ಪುಳ ಎಂಬಲ್ಲಿಗೆ ಸಾಗಿಸಿದರು.
  • ಇಡೀ ಜಗತ್ತನ್ನೇ ನನಗೆ ಉಡುಗೊರೆಯಾಗಿ ನೀಡಿದರೂ ನಾನು ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡದಿರಲಾರೆ ಎಂದು ಟಿಪ್ಪೂ ಸುಲ್ತಾನ ಚಿರಕ್ಕಲ್‌ ರಾಜರಿಗೆ ಹೇಳಿದ.
  • ಟಿಪ್ಪೂ ವೀರನಂತೂ ಅಲ್ಲವೇ ಅಲ್ಲ . ನಾಲ್ಕನೇ ಮೈಸೂರು ಯುದ್ಧದಲ್ಲಿ ಆತ ಶೌರ್ಯದಿಂದ ಹೋರಾಡಿ ವೀರಮರಣ ಹೊಂದಲಿಲ್ಲ . ಬದಲಿಗೆ ಇತರ ಸೈನಿಕರ ಗುಂಪಿನ ನಡುವೆ ಪಲಾಯನಗೈಯ್ಯಲು ಪ್ರಯತ್ನಿಸುವಾಗ ಸತ್ತ .
  • ಲಕ್ಷಾಂತರ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದ. ವಿರೋಧಿಸಿದವರನ್ನು ನಿರ್ದಾಕ್ಷಿಣ್ಯವಾಗಿ ಕೊಂದ. ಮಲಬಾರಿನಲ್ಲಿ ನಾಲ್ಕು ಲಕ್ಷ ಹಿಂದೂಗಳನ್ನು ಇಸ್ಲಾಂಗೆ ಮತಾಂತರಿಸಿರುವುದಾಗಿ ಟಿಪ್ಪೂ ಪತ್ರವೊಂದರಲ್ಲಿ ಬರೆದಿದ್ದಾನೆ.
ಕೃತಿ ಕಾದಂಬರಿಯಂತೆ ಓದಿಸಿಕೊಳ್ಳುತ್ತದೆ. ಇತಿಹಾಸದ ಮರುಓದು ಹಾಗೂ ಮರು ಮೌಲ್ಯಮಾಪನಕ್ಕೆ ಒತ್ತಾಯಿಸುವ ಈ ಕೃತಿ- ‘ರಾಜ ರಹಸ್ಯ’ದ ನಂತರ ಕನ್ನಡಿಗರ ಗಮನ ಸೆಳೆದ ಪುಸ್ತಕ ಎನ್ನುವುದರಲ್ಲಿ ಅನುಮಾವಿಲ್ಲ .


ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X