ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಿ ಕಂಡಂತೆ ಇನ್ನೊಬ್ಬ ಕವಿ !

By Staff
|
Google Oneindia Kannada News
B.M. Srikantayyaವಿಜಯಪ್ರಕಾಶನ ಸಂಸ್ಥೆಯಿಂದ ‘ಕವಿ ಕಂಡ ಕವಿ’ ಎಂಬೊಂದು ಪುಸ್ತಕ ಹೊರಬಂದಿದೆ. ಹೊರಾ ಸತ್ಯನಾರಾಯಣರಾವ್‌ ಮತ್ತು ವೈಎನ್‌ ಗುಂಡೂರಾವ್‌ ಸಂಪಾದಿಸಿದ ಇದೊಂದು ಅಪರೂಪದ ಕವನ ಸಂಕಲನ. ಹೆಸರೇ ಸೂಚಿಸುವಂತೆ ಇದು ಒಬ್ಬ ಕವಿ ಮತ್ತೊಬ್ಬ ಕವಿಯ ಬಗ್ಗೆ ಬರೆದ ಕವಿತೆಗಳ ಸಂಗ್ರಹ.

ಒಬ್ಬ ಕವಿ ಇನ್ನೊಬ್ಬ ಕವಿಯ ಬಗ್ಗೆ ಬರೆಯುವ ಕವಿತೆಗಳು ಬಹುತೇಕ ಸಂದರ್ಭಗಳಲ್ಲಿ ಅಷ್ಟೇನೂ ಕುತೂಹಲ ಹುಟ್ಟಿಸುವಂತಿರುವುದಿಲ್ಲ. ಅವುಗಳಲ್ಲಿ ಕವಿಯ ಹೊಗಳಿಕೆ ಇರುತ್ತದೆಯೇ ಹೊರತು, ಒಳನೋಟ ಅಷ್ಟಾಗಿ ಕಾಣಿಸುವುದಿಲ್ಲ. ಬಹುತೇಕ ಕವಿತೆಗಳು ಯಾರದೋ ಒತ್ತಾಯಕ್ಕೆ ಬರೆದಂತೆಯೂ ಕಾಣಿಸುತ್ತವೆ. ಉದಾಹರಣೆಗೆ ಎಸ್‌ವಿ ಪರಮೇಶ್ವರ ಭಟ್ಟರು ವೆಂಕಟಾಚಾರ್ಯರ ಕುರಿತು ಬರೆದ ಸಾಲುಗಳು; ನಮ್ಮ ಬಂಕಿಮಚಂದ್ರ ಓ ವೆಂಕಟಾಚಾರ್ಯ ಎಂಬ ಕವಿತೆ, ಪಂಜೆಯವರ ಕುರಿತು ಕಯ್ಯಾರ ಕಿಂಞ್ಞಣ್ಣ ರೈ ಬರೆದ ‘ಬಂಜೆಯಲ್ಲ ತುಳುತಾಯಿ ಪಡೆದಳು, ಪಂಜೆಯಂಥ ಪುತ್ರನನು- ಇವೆಲ್ಲ ಕೇವಲ ಹೊಗಳಿಕೆಯ ಹೊನ್ನ ಶೂಲಕ್ಕೇರಿಸುವ ಸಾಲುಗಳು. ಆದರೆ ಇದೇ ಸಂಕಲನದಲ್ಲಿ ಬಿಎಂಶ್ರೀ ಬಗ್ಗೆ ಅಡಿಗರು ಬರೆದ ಕವಿತೆಯಿದೆ;

ದಾರಿ ತೋರಿದಿರಿ, ಗುರಿ ತೋರದಾದಿರಿ ನೀವು ;
ಚಾಳೇಶದಾನವೇ ಯುವಜನಕ್ಕೆ?
ರಾಜಭಕ್ತಿಯ ಭದ್ರಕೋಟೆಕೊತ್ತಳದಾಚೆ ಸುತ್ತಲೂ
ನಿತ್ಯ ಮೊರೆಯುತ್ತಿದ್ದ ಸ್ವಾತಂತ್ರಘೋಷ
ಮರೆಯೆ, ಮರಸಲು ನಿರಂತರವಾದ ಮಾತೇ ಸರಿ
ಎಂದು ಸುತ್ತಿದಿರಿ ಊರೂರು ಕನ್ನಡದ ಬಾವುಟವನೆತ್ತಿ
ಮಾತಲ್ಲಿ ಸ್ವಾಲಂಬನೆಯನರಸಿ.
.....
ಉತ್ತರದ ಉತ್ತರೋತ್ತರ ಕೆಲಸ ನಮಗೆ ಬಿಡಿ;
ದೊಡ್ಡವರು ನೀವು ನಾವೇನು ಕುಬ್ಜರಲ್ಲ.

ಎನ್ನುವ ಸಾಲುಗಳಲ್ಲಿ ಬಿಎಂಶ್ರೀಯವರನ್ನು ಅಡಿಗರು ಕೆತ್ತಿಟ್ಟಿದ್ದಾರೆ. ‘ವಾದ ಪರದೇಶಿ; ಅನುವಾದ ಶುದ್ಧ ಸ್ವದೇಶಿ. ಇದು ನವೋದಯವೇ? ಅಥವಾ ಅದರ ಒಳಗುದಿಯೇ? ಮುಂತಾದ ಅರ್ಥಪೂರ್ಣ ಸಾಲುಗಳು ಇಲ್ಲಿವೆ.

ಮಾಸ್ತಿಯವರ ಬಗ್ಗೆ ಕೆ. ಎಸ್‌. ನಿಸಾರ್‌ ಅಹಮದ್‌ ಬರೆದ ಕವಿತೆಯೂ ಇಲ್ಲಿದೆ. ಎ.ಕೆ. ರಾಮಾನುಜನ್‌ ಬಗ್ಗೆ ಪ್ರತಿಭಾ ಕವಿತೆ, ಕುರ್ತಕೋಟಿಯ ಕುರಿತ ಕಂಬಾರರ ಸಾಲುಗಳೂ ಇಲ್ಲಿ ಸಿಗುತ್ತವೆ.

ಆದರೆ ಲಂಕೇಶರು ಚುರುಕು ಮುಟ್ಟಿಸುವಂತ ಬರೆದ ಕೆಲವು ಕಿರುಗವಿತೆಗಳನ್ನು ಒಂದು ಬಹುಮುಖ್ಯ ಸುದೀರ್ಘ ಕವಿತೆಯನ್ನು ಈ ಸಂಕಲನದಲ್ಲಿ ಬಳಸಿಕೊಂಡಿಲ್ಲ. ಸಂಕಲನದಲ್ಲಿ ಡುಂಡಿರಾಜ್‌ ಬರೆದ ‘ಅಡಿಗರೆ ಅಡಿಗೆರೆ ಉಡುಗೊರೆ ಗಾರುಡಿಗರೆ’ ಮುಂತಾದ ಸಾಮಾನ್ಯ ಕವಿತೆಗಳೂ ಸೇರಿಕೊಂಡಿವೆ. ಆದರೆ ಲಂಕೇಶರ ಈ ರಚನೆಗಳನ್ನು ನೋಡಿ;

ಕ. ವೆಂ.

ರಾಜಗೋಪಾಲ
ಹೊಸಕಾವ್ಯದ ಬಾಲ
ಬಾಲಕ್ಕೆ ಅರ್ಥ
ಹಚ್ಚುವುದು ವ್ಯರ್ಥ

ಕೆ. ಎಸ್‌.ನ.

ಸಿರಿಗೆರೆಯ ನೀರು
ಮುತ್ತೂರ ತೇರು
ಪ್ರಿಯತಮನ ಕರೆಗೆ
ಇವಳು ಸದಾ ಹೊರಗೆ
ನನ್ನ ಹಸಿದ ಹಲ್ಲಿಗೆ
ನಿಮ್ಮ ಮೈಸೂರು ಮಲ್ಲಿಗೆ

ಅಡಿಗರು

ಕವಿ ಅಡಿಗರ ಅರ್ಥ
ಭೂತದಲ್ಲಿ ಅಡಗಿ
ತಿಳಿಯದೆ ತೊಡೆಯ ನಡುವೆ
ನಗುತಿದ್ದಳು ಹುಡುಗಿ

ಇದಕ್ಕಿಂತ ಗಂಭೀರವಾದ ಅಡಿಗರು ಕವಿತೆ ಕೇಳಿ;

ಹೊರಗೆ ಬೊಕ್ಕತಲೆ, ಒಳಗಿನ ಮಾತು ಬೇರೆ, ಮಾತಿನ ಮಾತು ಬೇರೆ. ಈ
ಬುಡಕ್ಕೆ ಈ ಬೇರೇ, ಇದು ಬೇರೆ?
ಈ ಸೂಟಿನೊಳಗಿನ ಸಮಶೀತೋಷ್ಣ ವಲಯದ ಗಿಳಿಯ
ಅದು ಉಲಿವ ಪರಿಯ
ಈ ಶೂದ್ರ ಹೇಗೆ ಬಗೆವುದು ಗೆಳೆಯ?

ಕವಿ ಮೇಲೆ ಕವಿ ಕವಿಯುವುದು ಅಂದರೆ ಇದಲ್ಲವೆ?

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X