• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಗುರುವಿನ ಕರೆ’ : ಕರ್ಮಸಿದ್ಧಾಂತಕ್ಕೆ ಕನ್ನಡ ಭಾಷ್ಯ

By Super
|

*ಎಂ.ವಿನೋದಿನಿ

The Coverpage of Guruvina Kareಪುಸ್ತಕದ ಹೆಸರು : 'ಗುರುವಿನ ಕರೆ"

ಲೇಖಕಿ : ಡಾ।। ಮೈನಾ ವಿಜಯಕುಮಾರ್‌

ಪುಟ : 337, ಬೆಲೆ : 150

ಪ್ರಕಾಶಕರು : ಶ್ರೀ ಚಕ್ರ ಟ್ರಸ್ಟ್‌ , 461, 80 ಅಡಿ ರಸ್ತೆ , ಐಡಿಯಲ್‌ ಹೋಮ್‌ ಟೌನ್‌ಶಿಪ್‌, ರಾಜರಾಜೇಶ್ವರಿ ನಗರ, ಬೆಂಗಳೂರು- 560 098

ದೂರವಾಣಿ : 080- 8603060

ಕರ್ಮ ಎಂದರೇನು ?

ಒಂದೆಡೆ ಒಬ್ಬನ ಅಭ್ಯುದಯ. ಇನ್ನೊಂದೆಡೆ ಒಬ್ಬನ ದಾರಿದ್ರ್ಯ. ಒಂದೆಡೆ ಒಬ್ಬ ಸುಖ-ಸಂತಸಗಳಲ್ಲಿ . ಇನ್ನೊಂದೆಡೆ ಒಬ್ಬ ಕಲ್ಲುಮುಳ್ಳುಗಳ ಹಾದಿಯಲ್ಲಿ . ಒಂದೆಡೆ ಮಗು ಆರೋಗ್ಯವಾಗಿ. ಇನ್ನೊಂದೆಡೆ ಕುಂಟನಾಗಿ, ಕುರುಡನಾಗಿ...

ಏಕೆ ಈ ಪ್ರಪಂಚದಲ್ಲಿ ಈ ಭೇದ ? -

'ನಾವು ಮಾಡಿದ್ದನ್ನು ನಾವು ಕೊಯ್ಯುತ್ತೇವೆ"- ಅದು ನಾವು ಮಾಡಿದ ಕರ್ಮ.

ಡಾ।। ಮೈನಾ ವಿಜಯಕುಮಾರ್‌ ಅವರ 'ಗುರುವಿನ ಕರೆ" ಕೃತಿ ಎದುರಾಗುವುದೇ ಇಂಥದೊಂದು ಜಿಜ್ಞಾಸೆಯಾಂದಿಗೆ. ಆಧ್ಯಾತ್ಮದ ಹಂಬಲವುಳ್ಳವರಿಗೆ, ಪರಮಾರ್ಥದಲ್ಲಿ ಪ್ರೀತಿ ಇರುವವರಿಗೆ ಇಲ್ಲಿರುವ ವಿವರಗಳು ಒಂದಲ್ಲಾ ಒಂದು ರೀತಿಯಲ್ಲಿ ಮಾರ್ಗದರ್ಶನ ನೀಡಬಲ್ಲವು ಎಂದು ಪುಸ್ತಕದ ಅಗತ್ಯ-ಮಹತ್ವವನ್ನು ಸಾ.ಕೃ.ರಾಮಚಂದ್ರ ರಾವ್‌ ಅವರು ತಮ್ಮ ಮುನ್ನುಡಿಯಲ್ಲಿ ಸರಿಯಾಗಿಯೇ ಗುರ್ತಿಸಿದ್ದಾರೆ.

ನಮ್ಮ ಆತ್ಮವು ನಮ್ಮದೇ ಆಸೆಗಳನ್ನು ಪೂರೈಸಿಕೊಳ್ಳಲೋಸುಗ ಹಲವಾರು ಪುನರ್ಜನ್ಮಗಳನ್ನು ಪಡೆಯುತ್ತದೆ. ಇದೇ ಪರಮರಹಸ್ಯ. ಜೀವನದ ಮೂಲಕವೇ ಕರ್ಮ. ಜೀವನದ ಆಧಾರವೇ ಕರ್ಮ, ಜೀವನದ ಅಂತ್ಯವೇ ಕರ್ಮ.. ಹೀಗೆ, ನಮ್ಮ ಪ್ರತಿಯಾಂದು ಪರಿಸ್ಥಿತಿಗೂ ಕರ್ಮಗಳೇ ಕಾರಣ. ಆದರೆ ನಾವು ಅದಕ್ಕಾಗಿ ಮರುಗಬೇಕಿಲ್ಲ . ಏಕೆಂದರೆ- 'ಪ್ರತಿಯಾಬ್ಬ ಸಂತನಿಗೂ ಒಂದು (ಕೆಟ್ಟ) ಭೂತಕಾಲವಿದೆ. ಹಾಗೆಯೇ ಪ್ರತಿಯಾಬ್ಬ ಪಾಪಿಗೂ ಒಳ್ಳೆಯ ಭವಿಷ್ಯವಿದೆ". ಇದು 'ಗುರುವಿನ ಕರೆ" ಕೃತಿಯ ವಿಶೇಷತೆ.

'ಗುರುವಿನ ಕರೆ"ಯಲ್ಲಿನ ಲೇಖಕಿಯ ವಿಚಾರಗಳು ಒಣ ಸಿದ್ಧಾಂತಗಳಲ್ಲ . ಪುಸ್ತಕದ ಬದನೆಕಾಯಿಯೂ ಅಲ್ಲ . ತಮ್ಮ ಜೀವನದ ಅನುಭವಗಳನ್ನು ಹಾಗೂ ಸಹ ಸಾಧಕರ ಬದುಕಿನ ಅನುಭಾವ ಸಾರವನ್ನು ಉದಾಹರಣೆಗಳ ಮೂಲಕ ಲೇಖಕಿ ತಮ್ಮ ವಿಚಾರಗಳ ಸ್ಪಷ್ಟೀಕರಿಸಿದ್ದಾರೆ. ಈ ನಿಟ್ಟಿನಲ್ಲಿ ಈ ಪುಸ್ತಕವೊಂದು ಗಟ್ಟಿಕಾಳು. ಗುರು ಕೃಪೆಯಿಂದ, ಸ್ವ ಸಾಧನೆಯಿಂದ ಸಂಸಾರದಲ್ಲಿದ್ದುಕೊಂಡೇ ಆಧ್ಯಾತ್ಯದ ಸಾಧನೆ ಸಿದ್ಧಿಯನ್ನು ಸಾಧಿಸಬಹುದು ಹಾಗೂ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನಗಳಲ್ಲಿ ತೃಪ್ತಿ ಆನಂದದಿಂದ ಜೀವನ ನಡೆಸಬಹುದು ಎನ್ನುವುದನ್ನು ಲೇಖಕಿ ಸಾದೋಹರಣವಾಗಿ ವಿವರಿಸಿದ್ದಾರೆ. ಆದರೆ ಈ ಸಾಧನೆಯ ಹಾದಿಯಲ್ಲಿ ಶ್ರದ್ಧೆ , ನಂಬಿಕೆ, ಭಕ್ತಿ , ಶರಣಾಗತಿ ಹಾಗೂ ಸಮರ್ಪಣಾಭಾವ ಅತ್ಯಗತ್ಯ.

ಸರಳ ಹಾಗೂ ಸರಾಗ

ಮೈನಾ ವಿಜಯಕುಮಾರ್‌ ಅವರು 'ಗುರುವಿನ ಕರೆ" ಕೃತಿಯ ಮೂಲಕ ಓದುಗರೊಂದಿಗೆ ಹಂಚಿಕೊಳ್ಳಲು ಬಯಸಿರುವುದು ಆಧ್ಯಾತ್ಮದಂಥ ಸಂಕೀರ್ಣ ವಿಚಾರವನ್ನು. ಜನ ಸಾಮಾನ್ಯರ ಪಾಲಿಗೆ ಆಧ್ಯಾತ್ಮವೆನ್ನುವುದು ಗಂಟಲಲ್ಲಿಳಿಯದ ಕಡುಬು. ಆದರಿಲ್ಲಿ ಆ ಸಂದೇಹಕ್ಕೆ ಆಸ್ಪದವಿಲ್ಲ . ಕಠಿಣ ಹಾಗೂ ನೀರಸ ಎನ್ನುವ ಆಧ್ಯಾತ್ಮಿಕ ಸತ್ಯಗಳನ್ನು ಮೈನಾ ಅವರು ಸರಳವಾಗಿ ಹೇಳುತ್ತಾರೆ. ಕೆಲವೆಡೆಯ ಸಂಭಾಷಣಾ ರೂಪದ ನಿರೂಪಣೆ ಕೂಡ ಓದನ್ನು ಸರಾಗವಾಗಿಸುತ್ತದೆ. ರೇಖಾಚಿತ್ರಗಳು ಪರಿಣಾಮಕಾರಿಯಾಗಿವೆ.

'ಗುರುವಿನ ಕರೆ" ಜನಸಾಮಾನ್ಯರ ಆಧ್ಯಾತ್ಮಿಕ ಅರಿವನ್ನು ವಿಸ್ತರಿಸಿದರೆ, ಸಾಧಕರಿಗೆ ತಮ್ಮ ಸಾಧನೆಯ ಹಂತಗಳನ್ನು ಗುರ್ತಿಸಿಕೊಳ್ಳಲು ಕನ್ನಡಿಯಾಗಬಲ್ಲದು. ಕೃತಿಯ 3 ನೇ ಅಧ್ಯಾಯದಲ್ಲಿ , ಸಾಧನೆಯ ವಿವಿಧ ಮಜಲುಗಳಲ್ಲಿ ಸಾಧಕನ ಮನೋಭೂಮಿಕೆ ಹೇಗಿರುತ್ತದೆನ್ನುವ ವಿಚಾರಗಳು ಸಾಧನೆಯ ಹಾದಿಯಲ್ಲಿರುವವರಿಗೆ ಉಪಯುಕ್ತ .

ಮೈನಾ ಅವರ ಕೃತಿ ಸಂಗ್ರಾಹ್ಯ ಮಾಹಿತಿಗಳ ಖಜಾನೆಯೂ ಹೌದು. ಸಾಧನೆಗೆ ಅಗತ್ಯವಾದ ಆಚಾರ ವಿಚಾರ, ಮಕ್ಕಳ ಆಧ್ಯಾತ್ಮಿಕ ಜೀವನ ಮಾದರಿಗಳು, ಗುರೂಜಿ ಅವರು ಹೇಳುವ ದಿನಾದಿಗಳ ಶುಭಫಲಗಳನ್ನು ವಿವರಿಸಿದ ಕೋಷ್ಟಕಗಳು ಸಂಗ್ರಹಯೋಗ್ಯ.

14 ಅಧ್ಯಾಯಗಳ 'ಗುರುವಿನ ಕರೆ" ಕೃತಿ ಉದ್ದಕ್ಕೂ ಕರ್ಮ ಸಿದ್ಧಾಂತದ ಒಳಹೊರಗುಗಳ ಅನಾವರಣದ ಪ್ರಯತ್ನ ನಡೆಸುತ್ತದೆ. ಇಲ್ಲಿನದು ಹೊರಗಿನಿಂದ ಹೇರುವ ಕರ್ಮ ಸಿದ್ಧಾಂತವಲ್ಲ . ಇದು ನಮ್ಮ ನಮ್ಮ ಅನುಭವ ಹಾಗೂ ಪ್ರಯತ್ನಗಳ ಮೂಲಕವೇ ಕಂಡುಕೊಳ್ಳುವ ಸಿದ್ಧಾಂತ ; ಮಹಾತ್ಮ ಗಾಂಧಿಯವರ ಸತ್ಯಾನ್ವೇಷಣೆಯನ್ನು ಹೋಲುವಂಥದ್ದು .

ಗುರುವಿನ ಕರುಣೆ

'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎನ್ನುವ ದಾಸರ ಕೀರ್ತನೆಯಾಂದಿದೆ. ಮೈನಾ ಅವರಿಗೆ ಪುಸ್ತಕ ಪ್ರಸವದ ಮುಕುತಿ ದೊರೆತದ್ದೂ ದೇವಿ ನಿಮಿಷಾಂಬ ಹಾಗೂ ಶ್ರೀಹರ್ಷ ಗುರೂಜಿಗೆ ಶರಣಾಗತರಾದ ನಂತರವೇ.

ಡಾ।। ಮೈನಾ ವಿಜಯಕುಮಾರ್‌ ಅವರು ಕೃತಿಯಲ್ಲಿ ತಿಳಿಸಿರುವಂತೆ, 'ಗುರುವಿನ ಕರೆ"ಯನ್ನು ಅವರು ರಚಿಸಲಿಕ್ಕೆ ಕಾರಣ ದೇವಿಯ ಪ್ರೇರಣೆ ಹಾಗೂ ಗುರೂಜಿಯ ಅನುಗ್ರಹ. ಕಾಫಿ ಹೀರುತ್ತಾ ದಿನಪತ್ರಿಕೆಯಲ್ಲಿ ಮುಳುಗಿಹೋಗಿದ್ದ ಲೇಖಕಿಗೆ 'ನೀನು ಕರ್ಮ ಸಿದ್ಧಾಂತದ ಬಗೆಗೆ ಒಂದು ಪುಸ್ತಕ ಬರೆ" ಎನ್ನುವ ಪ್ರೇರಣೆಯಾಯಿತಂತೆ. ಮೈನಾ ಅವರಿಗೂ ಯಾಕಾಗಬಾರದು ಅನ್ನಿಸಿತು. ಆನಂತರ ಈ ಕುರಿತು ಗುರೂಜಿ ಅವರೊಂದಿಗೆ ಚರ್ಚಿಸಿದರು. ಆನಂತರ ಗುರೂಜಿ ಅವರ ಅನುಗ್ರಹ-ದರ್ಶನದ ಮೂಲಕ ಕೃತಿ ರಚಿಸಿದರು.

ಲೇಖಕಿಗೆ ಬರಹ ಹಾಗೂ ಆಧ್ಯಾತ್ಮ ಎರಡೂ ಹೊಸತಲ್ಲವಾದರೂ, 'ಗುರುವಿನ ಕರೆ" ಕೃತಿಯ ರಚನೆ ಅಷ್ಟು ಸುಲಭವಾಗಿ ಆಗಲಿಲ್ಲ . ಸಮರ್ಪಣೆ, ಭಕ್ತಿ , ಅಧ್ಯಯನ, ಶರಣಾಗತಿ ಎಲ್ಲವನ್ನೂ ಬಯಸಿದ ಕೃತಿಯಿದು. ಬರವಣಿಗೆಯ ಹಾದಿಯಲ್ಲಿ ಲೇಖಕಿ ಎದುರಿಸಿದ ತುಮುಲಗಳು- ಅನುಭವಗಳನ್ನು ಪುಸ್ತಕ ಓದಿಯೇ ಅರಿಯಬೇಕು.

ಕೈಲಾಸ ಪರ್ವತದ ಹಿನ್ನೆಲೆಯ ಮುಖಪುಟ 'ಗುರುವಿನ ಕರೆ" ಕೃತಿಯ ಆಕರ್ಷಣೆಯನ್ನು ಹೆಚ್ಚಿಸಿದೆ. ಮುದ್ರಣ ಕೂಡ ಸೊಗಸಾಗಿದೆ. ಆಧ್ಯಾತ್ಮದಂಥ ಸಂಕೀರ್ಣ ವಿಷಯವನ್ನು ಕನ್ನಡದಲ್ಲಿ ನೀಡಿದ ಡಾ।।ಮೈನಾ ವಿಜಯಕುಮಾರ್‌ ಅಭಿನಂದನಾರ್ಹರು. ದೇವಿ ಹಾಗೂ ಗುರೂಜಿ ಅವರಿಂದ ಇನ್ನೂ ಹಲವು ಮಹತ್ವದ ಕೃತಿಗಳು ಮೂಡಲಿಕ್ಕೆ ಪ್ರೇರಣೆಯಾಗಲಿ .

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more