• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಅನ್ವೇಷಣೆ’ : ಪ್ರಗತಿಪರ ವಿಚಾರಗಳ ಪ್ರಣಾಳಿಕೆ

By Staff
|
  • ರಘುನಾಥ ಚ.ಹ.

ಸೊಸೆ ತಂದ ಸೌಭಾಗ್ಯ, ನಾಗರಹಾವು ಮುಂತಾದ ಸಿನಿಮಾಗಳಲ್ಲಿನ ಅಂಬರೀಷ್‌- ವಿಷ್ಣುವರ್ಧನ್‌ರ ಕೇಶಶೈಲಿ ಹೋಲುವಂಥ ಉದ್ದನೆ ಕೂದಲಿನ ಈ ಜುಬ್ಬಾವಾಲ ರಾಜಧಾನಿ ಬೆಂಗಳೂರಿನ ಸಾಂಸ್ಕೃತಿಕ ಪರಿಸರದಲ್ಲಿ ಚಿರಪರಿಚಿತರು. ಕನ್ನಡ ಸಾಹಿತ್ಯ ಪರಿಷತ್ತು , ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ ಮುಂತಾದೆಡೆಗಳಲ್ಲಿ ಕಾಣಿಸಿಕೊಳ್ಳುವ ಹಾಗೂ ಮಾತಿಗೆ ನಿಂತರೆ ಸಾಹಿತ್ಯ, ಪತ್ರಿಕೋದ್ಯಮ, ಸಮಕಾಲೀನ ಸವಾಲುಗಳ ಬಗ್ಗೆ ಚರ್ಚಿಸುವ ಈತ ಗೆಳೆಯರ ಗುಂಪಿನಲ್ಲಿ ‘ಆರ್‌ಜಿಹಳ್ಳಿ’ ಎಂದೇ ಪರಿಚಿತರು. ಪೂರಾ ಹೆಸರು ಆರ್‌.ಜಿ.ಹಳ್ಳಿ ನಾಗರಾಜ್‌. ಹೆಗಲಲ್ಲೊಂದು ಜೋಳಿಗೆ ಮಾದರಿಯ ಚೀಲವನ್ನೂ ಸೇರಿಸಿಬಿಟ್ಟರೆ ಆರ್‌ಜಿಹಳ್ಳಿ ವ್ಯಕ್ತಿಚಿತ್ರಕ್ಕೊಂದು ಚೌಕಟ್ಟು ಸಿಕ್ಕಿಬಿಡುತ್ತದೆ. ಆ ಹೆಗಲಚೀಲದಲ್ಲಿ ಹತ್ತಾರು ಪುಸ್ತಕಗಳು. ಮಾತಿಗೆ ಸಿಕ್ಕ ವ್ಯಕ್ತಿಗೆ ಸಾಹಿತ್ಯದ ಗಂಧಗಾಳಿ ಇರುವುದು ಸ್ಪಷ್ಟವಾದರೆ, ಆರ್‌ಜಿಹಳ್ಳಿ ತಮ್ಮ ಚೀಲದಿಂದ ಒಂದು ಪುಸ್ತಕ ತೆಗೆದುಕೊಡುತ್ತಾರೆ ; ‘ಓದಿ, ಒಂದು ಸಾಲು ಪ್ರತಿಕ್ರಿಯೆ ಬರೆಯಿರಿ’ ಎನ್ನುವ ಕೋರಿಕೆಯಾಂದಿಗೆ. ಆ ಪುಸ್ತಕ ‘ಅನ್ವೇಷಣೆ’!

R.G.Halli Nagaraj, the person behind Anveshaneನಿಂತಲ್ಲಿ ನಿಲಲರಿಯದ ಚಲನಶೀಲ ಎಂದು ಆರ್‌ಜಿಹಳ್ಳಿ ನಾಗರಾಜ್‌ರನ್ನು ಗೆಳೆಯರು ತಮಾಷೆ ಮಾಡುತ್ತಾರೆ. ಈ ಮಾತು ಒಂದರ್ಥದಲ್ಲಿ ನಿಜ ಕೂಡ. ಒಂದೆಡೆ ಸಂಘಟನೆ, ಇನ್ನೊಂದೆಡೆ ಬರಹ, ಮತ್ತೊಂದೆಡೆ ಪ್ರಕಟಣೆ- ಹೀಗೆ ಆರ್‌ಜಿಹಳ್ಳಿ ಪುರುಸೊತ್ತು ಕಳಕೊಂಡ ವ್ಯಕ್ತಿ . ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿರುವ ಆರ್‌ಜಿಹಳ್ಳಿ ಅಂತರ್ಜಾಲ ಪತ್ರಿಕೋದ್ಯಮದಲ್ಲೂ ನೀರು ಕುಡಿದ ಅನುಭವಿ. ಆರ್‌ಜಿಹಳ್ಳಿ ಸಹಾಯಕ ಸಂಪಾದಕರಾಗಿದ್ದ http://www.vishvakannada.com ಅಂತರ್ಜಾಲ ನಿಯತಕಾಲಿಕೆ ಅನಿವಾಸಿ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿತ್ತು . ಅಂತರ್ಜಾಲದಲ್ಲಿ ಕನ್ನಡದ ಅಕ್ಷರಗಳನ್ನು ಮೂಡಿಸುವ ಅರ್ಥಪೂರ್ಣ ಸಾಹಸದಲ್ಲಿ ಯು.ಬಿ.ಪವನಜರೊಂದಿಗೆ ಆರ್‌ಜಿಹಳ್ಳಿ ನಾಗರಾಜ್‌ ಅವರು ವಹಿಸಿದ ಪಾತ್ರ ಮಹತ್ವದ್ದು . ಕನ್ನಡದ ಅನೇಕ ಸಾಹಿತಿಗಳನ್ನು ಕಾಡಿಬೇಡಿ ಕಥೆ/ಕವಿತೆ ಪಡೆದು ವಿಶ್ವಕನ್ನಡದ ಪುಟಗಳನ್ನು ಆರ್‌ಜಿಹಳ್ಳಿ ಸಿಂಗರಿಸುತ್ತಿದ್ದರು. ‘ಕನ್ನಡ ಸಾಹಿತ್ಯ ಪರಂಪರೆಯ ವಕ್ತಾರರು’ ಎನ್ನುವ ವಿಶ್ವಕನ್ನಡದಲ್ಲಿನ ಆರ್‌ಜಿಹಳ್ಳಿಯವರ ಲೇಖನ ಮಾಲಿಕೆಯಿಂದಾಗಿ ಅಂತರ್ಜಾಲದಲ್ಲಿ ಕನ್ನಡದ ಪ್ರಮುಖ ಸಾಹಿತಿಗಳ ಪರಿಚಯ ಮೊದಲ ಬಾರಿಗೆ ದೊರೆಯುವಂತಾಯಿತು.

ಬರಹ ಹಾಗೂ ಸಂಘಟನೆ ಆರ್‌ಜಿಹಳ್ಳಿ ಅವರ ಒಂದು ಮುಖವಾದರೆ, ‘ಅನ್ವೇಷಣೆ’ ಅವರ ಇನ್ನೊಂದು ಮುಖ.

‘ಅನ್ವೇಷಣೆ’ ಒಂದು ಸಾಂಸ್ಕೃತಿಕ ಪತ್ರಿಕೆ. ಸಾಕ್ಷಿ, ಸಂಕ್ರಮಣ, ರುಜುವಾತು, ಶೂದ್ರ, ಸಂಚಯಗಳ ಮಾದರಿಯ ನಿಯತಕಾಲಿಕೆ. ತಮ್ಮೊಳಗಿನ ಹುಡುಕಾಟಕ್ಕೆ ಪ್ರತೀಕವಾಗಿ ‘ಅನ್ವೇಷಣೆ’ ಎನ್ನುವ ಅಭಿವ್ಯಕ್ತಿಯನ್ನು ನಾಗರಾಜ್‌ ಕಂಡುಕೊಂಡರಾ? ಗೊತ್ತಿಲ್ಲ . ಆದರೆ, ಪ್ರಸಕ್ತ ಸಾಂಸ್ಕೃತಿಕ ಪರಿಸರದಲ್ಲಿನ ವಾಗ್ವಾದಗಳಿಗೆ ‘ಅನ್ವೇಷಣೆ’ ಆರೋಗ್ಯಕರವಾಗಿ ಪ್ರತಿಕ್ರಿಯಿಸುತ್ತಿರುವುದು ಪತ್ರಿಕೆಯ ಸಂಚಿಕೆಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ. ‘ ಒಂದು ಸಾಂಸ್ಕೃತಿಕ ಸಂದರ್ಭದಲ್ಲಿ ಯಾವುದೇ ವಿವಾದಕ್ಕೂ ಅನ್ವೇಷಣೆ ಪ್ರತಿಕ್ರಿಯಿಸಿ ತನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುತ್ತಿದೆ. ನಿರಂತರ ಮೌಲಿಕ ಬರಹಗಳನ್ನು ಹೊತ್ತು ಬರುತ್ತಿರುವ ಪತ್ರಿಕೆಯಿದು’ ಎಂದು ಪ್ರೊ.ಕೆ.ಎಸ್‌.ಭಗವಾನ್‌ ‘ಅನ್ವೇಷಣೆ’ ಪತ್ರಿಕೆಯನ್ನು ಸರಿಯಾಗಿಯೇ ಗುರ್ತಿಸಿದ್ದಾರೆ.

‘ಅನ್ವೇಷಣೆ’ಯಂಥ ಸಾಂಸ್ಕೃತಿಕ ಪತ್ರಿಕೆಗಳ ಕುರಿತು ಕವಿ ಸುಮತೀಂದ್ರ ನಾಡಿಗ ಹೇಳುವುದು ಹೀಗೆ: ‘ನಮ್ಮ ಸಾಹಿತ್ಯ ಸಂಸ್ಕೃತಿಯನ್ನು ಮತ್ತು ವಿಚಾರ ಶಕ್ತಿಯನ್ನು , ಬರವಣಿಗೆಯ ಶಕ್ತಿಯನ್ನು ಸಣ್ಣ ಪತ್ರಿಕೆಗಳು ಬೆಳಸುವ ಹಾಗೆ ಲಕ್ಷಾಂತರ ಜನರು ಕೊಂಡು ಓದುವ ಪತ್ರಿಕೆಗಳು ಬೆಳಸಲಾರವು. ಇಂತಹ ಸಣ್ಣ ಪತ್ರಿಕೆಗಳು ಹೆಚ್ಚಾಗಬೇಕು. ಅನ್ವೇಷಣೆಯಂತಹ ಸಾಹಿತ್ಯ ಮೌಲ್ಯವುಳ್ಳ ಪತ್ರಿಕೆಗಳು ಸತ್ತುಹೋಗದ ಹಾಗೆ ನೋಡಿಕೊಳ್ಳಬೇಕು. ಕಾಪಾಡಿಕೊಳ್ಳಬೇಕು. ಮುಖ್ಯವಾಗಿ ಇಂತಹ ಪತ್ರಿಕೆಗಳು ತರುಣ ವಿದ್ಯಾರ್ಥಿಗಳ ಕೈಗೆ, ಸಾಹಿತ್ಯಾಭ್ಯಾಸಿಗಳಿಗೆ ಸಿಗುವಂತಾಗಬೇಕು. ಇವು ಶಾಲೆ ಕಾಲೇಜುಗಳಲ್ಲಿ ಸಾರ್ವಜನಿಕ ಲೈಬ್ರರಿಗಳಲ್ಲಿ ಕಾಣಸಿಗಬೇಕು’.

‘ಅನ್ವೇಷಣೆ’ ಪೂರ್ವಾಪರ

ಬೆಂಗಳೂರಿನಲ್ಲಿ ಆರ್‌ಜಿಹಳ್ಳಿ ನಾಗರಾಜ್‌ರ ಕಾಲೇಜು ದಿನಗಳವು. 1984ನೇ ಇಸವಿ. ಕಾನೂನು ವಿದ್ಯಾರ್ಥಿಯಾಗಿ ಆರ್‌ಜಿಹಳ್ಳಿಯವರ ಕೊನೆಯ ವರ್ಷವದು. ಆ ವೇಳೆಗಾಗಲೇ ಆರ್‌ಜಿಹಳ್ಳಿ ಕಥೆ/ಕವಿತೆಗಳ ಬರೆದಿದ್ದರು, ಪುಸ್ತಕ ಪ್ರಕಟಿಸಿದ್ದರು. ಈ ಹುಮ್ಮಸ್ಸಿನ ದಿನಗಳಲ್ಲಿ ಆರ್‌ಜಿಹಳ್ಳಿ ಹಾಗೂ ಸಮಾನ ಆಸಕ್ತಿಯ ಗೆಳೆಯರು ‘ಅರುಣ’ ಎನ್ನುವ ಯುವ ಲೇಖಕರ ಬಳಗ ಕಟ್ಟಿಕೊಂಡರು. ‘ಅನ್ವೇಷಣೆ’ ಬೀಜವಾಗಿ ಮೊಳೆತದ್ದು ಇದೇ ವೇದಿಕೆಯ ಬೆಂಬಲದ ನೀರಿನಲ್ಲಿ . ಸಾಹಿತ್ಯ, ರಂಗಭೂಮಿ, ಸಿನಿಮಾ, ಚಿತ್ರಕಲೆ ಇತ್ಯಾದಿಗಳ ಕುರಿತು ಗಂಭೀರ ಚರ್ಚೆ ನಡೆಸುವ ಹಾಗೂ ಪ್ರಯೋಗಶೀಲ ಬರಹಗಳನ್ನು ಹೆಕ್ಕಿ ತೆಗೆಯುವ ಉದ್ದೇಶದ ‘ಅನ್ವೇಷಣೆ’ ಪತ್ರಿಕೆ ಪ್ರಾರಂಭವಾದದ್ದು ಬಂಡಾಯದ ಸುಗ್ಗಿಯ ಕಾವಿನ ಕಾಲದಲ್ಲಿ .

H.L.Pushpa, Life and work partner of R.G.Halli‘ಅನ್ವೇಷಣೆ’ಗೆ ಆಸರೆಯಾಗಿದ್ದ ‘ಅರುಣ’ ಮಿತ್ರ ಮಂಡಳಿಯ ಹುಮ್ಮಸ್ಸು ದೀರ್ಘಕಾಲ ಉಳಿಯಲಿಲ್ಲ . ಮಿತ್ರರ ಬದುಕಿನ ಆಸಕ್ತಿಗಳು ಬೇರೆಯಾಗಿ ದಾರಿಗಳೂ ದಿಕ್ಕಾಪಾಲಾದಾಗ, ಆರ್‌ಜಿಹಳ್ಳಿ ‘ಅನ್ವೇಷಣೆ’ಯ ಪೂರ್ಣ ಜವಾಬ್ದಾರಿ ಹೊತ್ತುಕೊಂಡರು. ಏಕವ್ಯಕ್ತಿ ಪ್ರದರ್ಶನದಿಂದಾಗಿ ಪತ್ರಿಕೆಯ ನಿರ್ವಹಣೆ ಭಾರ ಅನ್ನಿಸುತ್ತಿರುವಾಗ ಆರ್‌ಜಿಹಳ್ಳಿಗೆ ಜೊತೆಯಾದವರು ಎಚ್‌.ಎಲ್‌.ಪುಷ್ಪ . ಸಂಗಾತಿಯಾಗಿ ಪುಷ್ಪ ಅವರು ಆರ್‌ಜಿಹಳ್ಳಿಯವರ ಕೈ ಹಿಡಿದುದು ಮಾತ್ರವಲ್ಲದೆ ‘ಅನ್ವೇಷಣೆ’ಗೂ ಆಸರೆಯಾದರು.

‘ಅನ್ವೇಷಣೆ’ ಪುಸ್ತಕಲೋಕ

ಸಾಂಸ್ಕೃತಿಕ ಪತ್ರಿಕೆಯಾಗಿ ಮಾತ್ರವಲ್ಲದೇ ಪ್ರಕಾಶನ ಸಂಸ್ಥೆಯಾಗಿಯೂ ‘ಅನ್ವೇಷಣೆ’ ಕೆಲವು ಮಹತ್ವದ ಕೃತಿಗಳನ್ನು ಪ್ರಕಟಿಸಿದೆ. ಬರಗೂರು ರಾಮಚಂದ್ರಪ್ಪ ಅವರ ‘ಬಂಡಾಯ ಸಾಹಿತ್ಯ ಮೀಮಾಂಸೆ’, ಪ್ರೊ.ಎಸ್‌.ಜಿ.ಸಿದ್ಧರಾಮಯ್ಯನವರ ‘ಯಡೆಟುಂಟೆ ಗೆಣೆಸಾಲು’, ಡಾ.ಕೇಶವಶರ್ಮ ಅವರ ‘ಕ್ರಿಯೆ ಪ್ರತಿಕ್ರಿಯೆ’, ಎಚ್‌.ಎಲ್‌.ಪುಷ್ಪ ಅವರ ‘ಅಮೃತಮತಿ ಸ್ವಗತ’, ಸಂಧ್ಯಾ ರವೀಂದ್ರನಾಥ್‌ರ ‘ಮರಳಿ ಬರುವೆ ನಾ ಮತ್ತು ಇತರ ಕಥೆಗಳು’ ಅನ್ವೇಷಣೆ ಪ್ರಕಾಶನದ ಕೆಲವು ಪ್ರಕಟಣೆಗಳು. ಸತ್ಯನಾರಾಯಣರಾವ್‌ ಅಣತಿ ಅವರು ರಂಗರೂಪಕ್ಕೆ ತಂದಿರುವ ಸೂರ್ಯನ ಕುದುರೆ’ ಕೃತಿ(ಅನಂತಮೂರ್ತಿಯವರ ‘ಸೂರ್ಯನ ಕುದುರೆ’ ಕಥೆಯ ರಂಗರೂಪ)ಯನ್ನು ‘ಅನ್ವೇಷಣೆ’ ಪ್ರಕಟಿಸುತ್ತಿದೆ.

ಲೇಖಕನಾಗಿ ಆರ್‌ಜಿಹಳ್ಳಿಯವರ ಬರಹದ ಬೀಸು ದೊಡ್ಡದು. ಸಂಕರ, ಕಡೆಗೋಲು (ಕವನ ಸಂಕಲನ), ಸಿಡಿದವರು (ಕಥಾಸಂಕಲನ), ಸಮೂಹಪ್ರಜ್ಞೆ (ವಿಮರ್ಶೆ)- ಆರ್‌ಜಿಹಳ್ಳಿಯವರ ಪ್ರಕಟಿತ ಕೃತಿಗಳು. ‘ಬಂಡಾಯ ಹತ್ತು ವರ್ಷ’ ಹಾಗೂ ‘ಮಂದಿರ, ಮಸೀದಿ, ಕೋಮುವಾದ’ ಎನ್ನುವ ಕೃತಿ ಸಂಪಾದನೆಯೂ ಅವರ ಅಕ್ಷರಕೃಷಿಯ ಪಟ್ಟಿಯಲ್ಲಿದೆ.

ಇಪ್ಪತ್ತರ ಹುಟ್ಟುಹಬ್ಬದ ಹೊಸಿತಿಲಲ್ಲಿರುವ ‘ಅನ್ವೇಷಣೆ’ಯ ಮುಂದಿನ ಸವಾಲುಗಳು ಸಾಲುಸಾಲು. ಪ್ರತಿಯಾಂದಕ್ಕೂ ದುಡ್ಡಿನ ವಾಸನೆ ಅಮರಿಕೊಂಡ ಸನ್ನಿವೇಶದಲ್ಲಿ ‘ಅನ್ವೇಷಣೆ’ ತನ್ನ ಸಾಂಸ್ಕೃತಿಕ ಸೊಗಡಿನೊಂದಿಗೆ ಮುಂದುವರಿಯಬೇಕಾಗಿದೆ. ಜಾಗತೀಕರಣದ ಸಂದರ್ಭದಲ್ಲಿ ಕನ್ನಡದಂಥ ಪ್ರಾದೇಶಿಕ ನುಡಿಗಳಿಗೆ ‘ಅನ್ವೇಷಣೆ’ಯಂಥ ಪತ್ರಿಕೆಗಳು ದಿಕ್ಕುನೆಲೆಗಳ ಸೂಚಿಗಳಾಗಬಲ್ಲವು. ಹಾಗಾಗಲಿ. ಪತ್ರಿಕೆಯ ಮೂಲಕ ಆರ್‌ಜಿಹಳ್ಳಿಯವರ ಸಾಧನೆಯೂ ಹೆಚ್ಚಲಿ.

*

ಅನ್ವೇಷಣೆ ಪತ್ರಿಕೆಯ ವಿಳಾಸ :

ಅನ್ವೇಷಣೆ, 37/2 ಎ, ನಿಸರ್ಗ, ನಾಗರಬಾವಿ ರಸ್ತೆ , ವಿಜಯನಗರ, ಬೆಂಗಳೂರು- 40. ದೂರವಾಣಿ: 080-3404244. ಇ-ಮೇಲ್‌: halli_nagaraj@yahoo.com

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more