ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಥೆ ಹುಟ್ಟಿದ ಸಮಯ !

By Staff
|
Google Oneindia Kannada News
  • ರಘುನಾಥ ಚ.ಹ.
‘ಯಾರಾದರೂ ಬುಷ್‌ಗೆ ಹೇಳಿ ಈ ಕಟ್ಟಡದ ಮೇಲೆ ಬಾಂಬ್‌ ಹಾಕಿಸಿದರೆ ಕನ್ನಡದ ಓದುಗರು ಒಂಚೂರು ನೆಮ್ಮದಿಯಾಗಿರಬಹುದು’ !
ಹಾಗೆಂದವರು ಕಥೆಗಾರ ಜಯಂತ ಕಾಯ್ಕಿಣಿ.

ಅಮೆರಿಕದ ಮಿನೆಸೊಟದ ನಿವಾಸಿ ಡಾ.ಗುರುಪ್ರಸಾದ್‌ ಕಾಗಿನೆಲೆಯವರ ಚೊಚ್ಚಿನ ಕಥಾಗುಚ್ಛ ‘ನಿರ್ಗುಣ’ ಅನಾವರಣಗೊಳಿಸಿ ಮಾತನಾಡುತ್ತಿದ್ದ ಕಾಯ್ಕಿಣಿ ಮಾತು ಶುರು ಮಾಡಿದ್ದೇ ಬಾಂಬಿನೊಂದಿಗೆ. ಕಾಯ್ಕಿಣಿ ಖುಷಿಯಾಗಿದ್ದರು. ಮಾತಿನಲ್ಲಿ ಯಾವತ್ತಿನ ಉತ್ಸಾಹ ಜುಲೈ 6ರ ಭಾನುವಾರವೂ ಇತ್ತು . ಸುಚಿತ್ರಾ ಸಿನಿಮಾ ಸೊಸೈಟಿ ಸಭಾಂಗಣದ ತುಂಬ ಕಥೆ ಕಥೆ ಕಥೆ !

Dr.Guruprad Kaginele, The Author of Nirgunaಎಷ್ಟೊಂದು ಕಥೆಗಾರರು : ಜಿ.ಎಸ್‌.ಸದಾಶಿವ, ದೇಶ ಕುಲಕರ್ಣಿ, ವಿವೇಕ್‌ ಶಾನುಭಾಗ್‌, ಎಂ.ಎಚ್‌.ನಾಯಕಬಾಡ, ವಸುಧೇಂದ್ರ, ಮಹಾಬಲಮೂರ್ತಿ ಕೊಡ್ಲೆಕೆರೆ, ಬೇಳೂರು ಸುದರ್ಶನ, ಅಶೋಕ್‌ ಹೆಗಡೆ, ನಾಗತಿಹಳ್ಳಿ ಚಂದ್ರಶೇಖರ... ಹಿರಿಯ ಕವಿ ಡಾ.ಎನ್‌.ಎಸ್‌.ಲಕ್ಷ್ಮಿನಾರಾಯಣಭಟ್ಟ , ವಿಮರ್ಶಕ ಎಂ.ಎಚ್‌.ಕೃಷ್ಣಯ್ಯ, ಕಾರ್ಯಕ್ರಮವನ್ನು ನಿರೂಪಿಸಿದ ಪ್ರತಿಭಾ ನಂದಕುಮಾರ್‌, ಅಮೆರಿಕನ್ನಡಿಗರ ಪ್ರತಿನಿಧಿ ನಾಗಲಕ್ಷ್ಮಿ ಹರಿಹರೇಶ್ವರ, ಬರಹ ವಾಸು ಅವರ ತಂದೆ ಕೆ.ಟಿ.ಚಂದ್ರಶೇಖರ್‌.... ಅಲ್ಲಿದುದು ಕಥೆಗಾರರಲ್ಲದವರನ್ನು ಕಥನ ಕುತೂಹಲಿಗಳಲ್ಲದವರನ್ನು ಹುಡುಕುವ ಪರಿಸ್ಥಿತಿ. ‘ಬಹುಶಃ ಬೆಂಗಳೂರಿನಲ್ಲಿರುವ ಕಥೆಗಾರರೆಲ್ಲ ಇಲ್ಲಿ ಸೇರಿದ್ದಾರೆ. ಅದರಲ್ಲೂ ಒಳ್ಳೆಯ ಬರಹಗಾರರ ಸಂಖ್ಯೆ ಸಾಕಷ್ಟಿದೆ. ಇಂಥ ಸಭೆಯ ಮೇಲೆ ಬಾಂಬ್‌ ಹಾಕಿದರೆ ಓದುಗರು ನೆಮ್ಮದಿಯಿಂದಿದ್ದಾರು’ ಎಂದು ಕಾಯ್ಕಿಣಿ ನಕ್ಕರು. ಮಾತಿನ ತುಂಬ ನೊರೆ ನೊರೆ ಉತ್ಸಾಹ.

ದಾರಿ ಯಾವುದಯ್ಯ ಕಥೆಗೆ !

ಅದು ಜ್ಞಾನೋದಯವಾದ ಬುದ್ಧರ ಹಾಗೂ ಜ್ಞಾನಾಕಾಂಕ್ಷಿ ಕುತೂಹಲಿಗಳ ಕೂಟ ! ಮೊದಲಿಗೆ ತಮಗೆ ಜ್ಞಾನೋದಯವಾದ ಕುರಿತು ಹೇಳಿಕೊಂಡವರು ಪುಸ್ತಕ ಬಿಡುಗಡೆ ಮಾಡಿದ ಜಯಂತ ಕಾಯ್ಕಿಣಿ. ಜ್ಞಾನೋದಯದ ಮಾರ್ಗದಲ್ಲಿ ಮುನ್ನಡೆದವರು ಕನ್ನಡಪ್ರಭದ ಎಚ್‌.ಗಿರೀಶ್‌ರಾವ್‌ (ಜೋಗಿ) ಹಾಗೂ ದಟ್ಸ್‌ಕನ್ನಡ.ಕಾಂ ಸಂಪಾದಕ ಎಸ್‌.ಕೆ.ಶಾಮಸುಂದರ.

ಕಾಯ್ಕಿಣಿಯವರ ಜ್ಞಾನೋದಯದ ಸಾರವನ್ನು ಒಂದು ಸಾಲಿನ ಬೀಜವಾಕ್ಯದಲ್ಲಿ ಹೇಳುವುದಾದರೆ- ಅಸಾಹಿತ್ಯದ ಮೂಲಕ ಸಾಹಿತ್ಯ ಸೃಷ್ಟಿಯಾಗಬೇಕು.

‘ಗೊತ್ತಿದ್ದುಕೊಂಡು ಬರೆಯುವ ಕಾಲ ಮುಗಿದಿದೆ. ಈಗ ಬರೆಯುವ ಮೂಲಕ ಗೊತ್ತು ಮಾಡಿಕೊಳ್ಳಬೇಕಾದ ಸಾಹಿತ್ಯ ಸಂದರ್ಭ ನಮ್ಮೆದುರಿಗಿದೆ. ಮನುಷ್ಯಪ್ರೀತಿ ಕಥೆಗಾರರ ದ್ರವ್ಯವಾಗಬೇಕು. ಮನುಷ್ಯಪ್ರೀತಿ ಹಾಗೂ ಜೀವನಪ್ರೀತಿ ಎರಡೂ ಬೇರೆಬೇರೆಯಲ್ಲ . ಮನುಷ್ಯ ಇನ್ನೊಬ್ಬ ಮನುಷ್ಯನಿಂದ ದೂರ ಓಡುತ್ತಿದ್ದಾನೆ. ಒಬ್ಬರನ್ನು ಇನ್ನೊಬ್ಬರು ಅನುಮಾನಿಸುತ್ತಿದ್ದೇವೆ. ವ್ಯಕ್ತಿಗಳು ದ್ವೀಪವಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮನುಷ್ಯರನ್ನು ಪರಸ್ಪರ ಹತ್ತಿರಕ್ಕೆ ತರುವ ಸಾಧನ ಕಥೆಯಾಗಬೇಕು’ ಎಂದರು ಕಾಯ್ಕಿಣಿ.

ಕಥೆಗಳನ್ನು ಬರೆಯುವಲ್ಲಿನ ಡಾ.ಗುರುಪ್ರಸಾದ್‌ ಕಾಗಿನೆಲೆ ಕಸುಬುದಾರಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಾಯ್ಕಿಣಿ, ಅಸಾಹಿತ್ಯಿಕ ತಲ್ಲಣ ಗುರು ಅವರನ್ನು ಕಾಪಾಡಲಿ ಎಂದು ಆಶಿಸಿದರು.

Cover Page of Nirguna, Collection of short stories by Dr.Guruprasad Kagineleಗುರುಪ್ರಸಾದ್‌ ಅವರ ಕಥೆಗಳ ಬಗ್ಗೆ ಮಾತನಾಡುತ್ತಿದ್ದ ಕಾಯ್ಕಿಣಿ, ವೈದ್ಯಕೀಯ ವಿಜ್ಞಾನ ಹಾಗೂ ಸಾಹಿತ್ಯ ಕೃಷಿಗಳ ಬಗೆಗಿನ ಯಶವಂತ ಚಿತ್ತಾಲರು ಹೇಳುತ್ತಿದ್ದ ಮಾತನ್ನು ನೆನಪಿಸಿಕೊಂಡರು. ‘ವೈದ್ಯಕೀಯ ವಿಜ್ಞಾನ ಮನುಷ್ಯನ ನೋವುಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಜೀವವನ್ನು ಉಳಿಸಲು, ನೋವನು ಶಮನಗೊಳಿಸಲು ಪ್ರಯತ್ನಿಸುತ್ತದೆ. ಸಾಹಿತ್ಯ ಕೃಷಿಯೂ ವೈದ್ಯಕೀಯ ವಿಜ್ಞಾನದಂತಾಗಬೇಕು’ ಎನ್ನುವ ಚಿತ್ತಾಲರ ಮಾತನ್ನು ಗುರು ಅವರ ಕಥೆಗಾರ ಹಾಗೂ ವೈದ್ಯನ ಪಾತ್ರದ ಕುರಿತು ಮಾತನಾಡುವಾಗ ಕಾಯ್ಕಿಣಿ ಹೇಳಿದರು.

ಚಿತ್ತಾಲರ ಮಾತನ್ನು ಕಾಯ್ಕಿಣಿ ನೆನಪಿಸಿಕೊಳ್ಳಲಿಕ್ಕೆ ಕಾರಣ, ಪುಸ್ತಕ ಬಿಡುಗಡೆಗೆ ಮುನ್ನ ತಮ್ಮ ಕಥನದ ಹಿನ್ನೆಲೆ ಮುನ್ನೆಲೆಗಳ ಬಗ್ಗೆ ಹೇಳಿಕೊಂಡ ಗುರುಪ್ರಸಾದ್‌ ಕಾಗಿನೆಲೆ ಪ್ರಸ್ತಾಪಿಸಿದ ತಮ್ಮ ಡಾಕ್ಟರ್‌ಗಿರಿ, ಅಮೆರಿಕ ಹಣೆಪಟ್ಟಿಯ ಗೊಂದಲಗಳು. ಡಾಕ್ಟರ್‌ ಹಾಗೂ ಅಮೆರಿಕ ವಿಶೇಷಣಗಳಿಂದ ಹೊರಬರುವ ಹಾಗೂ ಬರುವ ಔಚಿತ್ಯದ ಕುರಿತ ಗೊಂದಲಗಳು ನನ್ನನ್ನು ಕಾಡುತ್ತಿವೆ. ಈ ಕಥೆಗಳೇ ಗೊಂದಲಗಳಾದರೆ ಚೆನ್ನಾಗಿರುತ್ತೆ ಎಂದರು ಗುರು.

ತಮ್ಮಲ್ಲಿನ ಸೃಜನಶೀಲತೆಯ ಅಭಿವ್ಯಕ್ತಿಗೆ ಅಮೆರಿಕ ಸಹಾಯ ಮಾಡುತ್ತಿದೆ ಎಂದ ಗುರು- ‘ಎನ್‌ಆರ್‌ಐ ಸಾಹಿತ್ಯ’ ಎನ್ನುವ ಹಣೆಪಟ್ಟಿ ಬೇಡ ; ಅನಿವಾಸಿ ಬರಹಗಾರರ ಸಾಹಿತ್ಯವನ್ನೂ ಮುಖ್ಯವಾಹಿನಿಯಲ್ಲಿ ಪರಿಗಣಿಸಬೇಕು ಎಂದರು. ‘ಅಮೆರಿಕದಲ್ಲಿ ನಮ್ಮಂಥವರ ಸಾಹಿತ್ಯಿಕ ಬರಹಗಳಿಂದ ಕನ್ನಡ ಬದುಕುಳಿಯುವುದಿಲ್ಲ . ಎರಡನೆಯ ತಲೆಮಾರಿನ ಮಕ್ಕಳು ಕನ್ನಡ ಮಾತಾಡುವಂತಾದರೆ ಮಾತ್ರ ಕನ್ನಡ ಉಳಿಯಬಲ್ಲದು. ಆದರೆ, ಅಮೆರಿಕದಲ್ಲಿ ಸಾಹಿತ್ಯವೆನ್ನುವುದು ಬುದ್ಧಿಜೀವಿ ಎಂದು ತೋರಿಸಿಕೊಳ್ಳಲಿಕ್ಕೆ ಸಾಧನವಾಗಿದೆ’ ಎಂದ ಗುರುಪ್ರಸಾದ್‌ ತಮ್ಮ ಚೊಚ್ಚಿಲ ಪುಸ್ತಕ ‘ನಿರ್ಗುಣ’ ಬಿಡುಗಡೆ ಕಾರಣರಾದವರಿಗೆ ಧನ್ಯವಾದ ಹೇಳಿದರು.

ಅಬ್ಬಬ್ಬಾ ಕಥೆ !!

‘ನಿರ್ಗುಣ’ ಸಂಕಲನದ ಬಗ್ಗೆ ಮಾತನಾಡಿದ ಜೋಗಿ ಹಾಗೂ ಶಾಮಸುಂದರ್‌ ಮುಖ್ಯವಾಗಿ ಪ್ರಸ್ತಾಪಿಸಿದ್ದು ಕಥೆಗಳ ಪ್ರಕಟಣೆಯ ಸಂಕಟಗಳ ಕುರಿತು. ಪತ್ರಿಕೆಗೆ ಕಥೆಗಳನ್ನು ಆಯ್ಕೆ ಮಾಡುವ ಪ್ರಯಾಸದ ಹಾಗೂ ಕಥೆಗಾರರು ಮಾಧ್ಯಮಗಳನ್ನು ವ್ಯಾಪಕವಾಗಿ ಬಳಸಿಕೊಳ್ಳುವ ಸಾಧ್ಯತೆಗಳನ್ನು ವಿವರಿಸಿದ ಜೋಗಿ- ಸಿನಿಮಾ ಪತ್ರಕರ್ತನಾಗಿ ಅನುಭವ ಹಾಗೂ ಪುರವಣಿ ವಿಭಾಗದಲ್ಲಿನ ತಮ್ಮ ಅನುಭವಗಳ ಮೂಲಕ ಪ್ರಸಕ್ತ ಕಥನ ಸಂದರ್ಭದ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು.

‘ಕಾಗಿನೆಲೆಯವರ ಕಥೆಗಳು ದೃಷ್ಟಿಕೋನವನ್ನು ಬದಲು ಮಾಡುವ ಕಥೆಗಳು’ ಎಂದು ಜೋಗಿಯವರ ಅಭಿಪ್ರಾಯಪಟ್ಟರು. ಹೆಣ್ಣಿನ ಅಭದ್ರತೆಯ ಕಥಾವಸ್ತುಗಳು ನಮಗೆ ಹೊಸತಲ್ಲ . ಆದರೆ, ಕಾಗಿನೆಲೆಯವರ ಕಥೆಗಳು ಹೆಂಡತಿ ಬಿಟ್ಟುಹೋಗುತ್ತಾಳೆನ್ನುವ ಗಂಡಸಿನ ಅಭದ್ರತೆ, ಕೀಳರಿಮೆಯನ್ನು ಚಿತ್ರಿಸುತ್ತವೆ. ನಿರ್ಗುಣ, ಆಲ್‌ಮೋಸ್ಟ್‌ ಒಂದು ಕಥೆಗಳು ಪುರುಷನ ಭದ್ರತೆಯ ಚಿತ್ರಣಕ್ಕೆ ಉತ್ತಮ ಉದಾಹರಣೆ ಎಂದ ಜೋಗಿ- ಕಾಗಿನೆಲೆ ಅವರ ಕಥೆಗಳಲ್ಲಿನ ಅತಿ ವಿವರಣೆ ತಾಳ್ಮೆ ಬೇಡುತ್ತದೆ ಎಂದರು.

ಯಾವ ತಂತ್ರಗಳಿಗೂ ಬದ್ಧವಾಗದ ಗುರು ಕಥೆಗಳು ಪ್ರಬಂಧದ ದಾಟಿಯಲ್ಲಿ ಓಡುತ್ತವೆ ಎಂದು ‘ನಿರ್ಗುಣ’ ಸಂಕಲನದ ಕಥೆಗಳ ಕುರಿತು ಮಾತನಾಡಿದ ಎಸ್‌.ಕೆ.ಶಾಮಸುಂದರ ಅಭಿಪ್ರಾಯಪಟ್ಟರು. ತಮಗೆ ಇಷ್ಟವಾದ ನಿರ್ಗುಣ, ಅಂತ, ಆಲ್‌ಮೋಸ್ಟ್‌ ಒಂದು ಕಥೆ, ಪ್ರವೇಶ ಕಥೆಗಳ ಕುರಿತು ಪ್ರಸ್ತಾಪಿಸಿದ ಶಾಮ್‌, ಸಾಹಿತಿಗಳು ತಂತಮ್ಮ ಪ್ರಪಂಚದಲ್ಲಿ ಮುಳುಗಿದ್ದಾರೆ, ದ್ವೀಪಗಳಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಮಾತು ಮುಗಿಸುವ ಕಡೆಗೆ ಶಾಮ್‌ ಹೇಳಿದ್ದು - ‘ಗುರುಪ್ರಸಾದ್‌ ಇನ್ನೂ ಒಳ್ಳೆಯ ಕಥೆ ಬರೆಯಬಹುದು’.

ಕಥೆಗಾರರು ಮಾತನಾಡಿದರು...

ವೇದಿಕೆಯ ಮೇಲಿದ್ದವರಷ್ಟೇ ಅಲ್ಲ , ಸಭಿಕರ ಸಾಲಿನಲ್ಲಿದ್ದ ಕಥನ ಕುತೂಹಲಿಗಳಿಗೂ ಮಾತನಾಡುವ ಅವಕಾಶ ದೊರೆತಿದ್ದು ಕಾರ್ಯಕ್ರಮದ ವೈಶಿಷ್ಟ್ಯ. ಸದಾಶಿವ, ವಿವೇಕ್‌, ವಸುದೇಂಧ್ರ, ಅಶೋಕ್‌ ಹೆಗಡೆ, ಕೆ.ಟಿ.ಚಂದ್ರಶೇಖರ್‌, ಎಂ.ಎಚ್‌. ಕೃಷ್ಣಯ್ಯ ಮತ್ತಿತರರು ಕಥನ ಸವಾಲು-ಸಾಧ್ಯತೆ-ಸಮಸ್ಯೆಗಳ ಕುರಿತು ಚರ್ಚಿಸಿದರು.

ಮಹಾಬಲಮೂರ್ತಿ ಕೂಡ ತಮಗಾದ ಜ್ಞಾನೋದಯದ ಕುರಿತು ಹೇಳಿಕೊಂಡರು. ‘ಮನುಷ್ಯ ಪ್ರೀತಿ ಕಳೆದುಹೋಗಿಲ್ಲ . ಆದರೆ, ಅವರು ಅವರ ಬಾಗಿಲು ಹಾಕಿಕೊಳ್ಳುತ್ತಿದ್ದಾರೆ. ನಾವು ನಮ್ಮ ಬಾಗಿಲು ಮುಚ್ಚಿಕೊಳ್ಳುತ್ತಿದ್ದೇವೆ’ ಎಂದು ಮಹಾಬಲಮೂರ್ತಿ ಹೇಳಿದರು.

ನಾಗತಿಹಳ್ಳಿ ಮಾತನಾಡಲಿಲ್ಲ ; ದಾಳಿ ನಡೆಸಿದರು. ‘ನಾನು ಗುರುಪ್ರಸಾದ್‌ ಕಥೆಗಳನ್ನು ಓದಿಲ್ಲ . ಆದರೆ ಗುರುಪ್ರಸಾದ್‌ ನನಗೆ ಗೊತ್ತು . ಅವರು ನನ್ನ ವಿರುದ್ಧ ಅನೇಕ ಬಹಿರಂಗ ಪತ್ರ ಬರೆದಿದ್ದಾರೆ. ಒಂದು ಅವರ ಹೆಸರಿನಲ್ಲಿ , ಉಳಿದವು ಅನಾಮಧೇಯ ರೂಪದಲ್ಲಿ . ಈ ಗುದ್ದಾಟ ಬಿಟ್ಟು ಕಥೆ ಬರೆ ಎಂದು ಡೆಟ್ರಾಯಿಟ್‌ ಸಮ್ಮೇಳನದಲ್ಲಿ ಗುರು ಅವರಿಗೆ ಹೇಳಿದ್ದೆ . ಗುರು ಈಗ ಕಥೆ ಬರೆದಿದ್ದಾರೆ. ಆ ಕಾರಣದಿಂದಾಗಿ ‘ನಿರ್ಗುಣ’ ಸಂಕಲನ ಹೊರಬರುವಲ್ಲಿ ನನ್ನ ಪಾತ್ರವೂ ಇದೆಯೆನ್ನುವುದು ದುರಾಸೆಯಾಗಲಾರದು’ ಎಂದು ನಾಗತಿಹಳ್ಳಿ ಹಕ್ಕುಸ್ಥಾಪನೆ ಮಾಡಿದರು. ‘ನಾನು ನಾಗತಿಹಳ್ಳಿ ವಿರುದ್ಧ ಬರೆದುದು ಒಂದೇ ಪತ್ರ, ನನ್ನ ಹೆಸರಿನಲ್ಲಿಯೇ ಬರೆದಿದ್ದೇನೆ. ಅನಾಮಧೇಯನಾಗಿ ಬರೆಯುವ ಅಗತ್ಯ ನನಗಿಲ್ಲ’ ಎಂದು ಗುರು ಸ್ಪಷ್ಟನೆ ನೀಡುವ ಹೊತ್ತಿಗೆ ನಾಗತಿಹಳ್ಳಿ ಸಭಾತ್ಯಾಗ ಮಾಡಿದ್ದರು.

ನಾಗಲಕ್ಷ್ಮಿ ಹರಿಹರೇಶ್ವರ ಅವರದು ಸಂದೇಶವಾಹಕನ ಪಾತ್ರ. ‘ಅಮೆರಿಕನ್ನಡಿಗರ ಪರವಾಗಿ ಗುರುಪ್ರಸಾದ್‌ ಕಾಗಿನೆಲೆ ಅವರನ್ನು ಅಭಿನಂದಿಸುತ್ತೇನೆ’ ಎಂದ ನಾಗಲಕ್ಷ್ಮಿ- ಗುರು ಅವರ ಬರಹಗಳನ್ನು ತಾವು ಹಾಗೂ ಹರಿಹರೇಶ್ವರ ದಟ್ಸ್‌ಕನ್ನಡ.ಕಾಂನಲ್ಲಿ ಓದಿ ಖುಷಿಪಟ್ಟ ಗಳಿಗೆಗಳನ್ನು ನೆನಪಿಸಿಕೊಂಡರು.

ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆಯ ಸಮಾರಂಭವೊಂದಕ್ಕೆ ಇಷ್ಟೊಂದು ಮಂದಿ ಬರಹಗಾರರು ಸೇರಿ ಯಾವ ಕಾಲವಾಗಿತ್ತೊ ? ಅನಂತಮೂರ್ತಿಯವರ ‘ದಿವ್ಯ’ ಕಾದಂಬರಿ ಬಿಡುಗಡೆ ಸಂದರ್ಭದಲ್ಲಿ ಕೂಡ ಕನ್ನಡದ ಬರಹಗಾರರು ಇದೇ ಸಂಖ್ಯೆಯಲ್ಲಿ ಸೇರಿದ್ದರು. ಆ ಕಾರ್ಯಕ್ರಮ ನಡೆದುದು ಕೂಡ ಸುಚಿತ್ರಾ ಅಂಗಳದಲ್ಲಿ .

ಗುರುಪ್ರಸಾದ್‌ ಬರೆಯುತ್ತಿರಲಿ. ಮುಂದಿನ ಸಂಭ್ರಮ ಇನ್ನಷ್ಟು ಅರ್ಥಪೂರ್ಣವಾಗಿರಲಿ.

ಕೃತಿ : ನಿರ್ಗುಣ , ಲೇಖಕ : ಡಾ.ಗುರುಪ್ರಸಾದ್‌ ಕಾಗಿನೆಲೆ, ಪುಟ : 156 ಪ್ಲಸ್‌ 12, ಬೆಲೆ : 125, ಪ್ರಕಾಶಕರು : ಎಂಆರ್‌ಎಲ್‌ ಇನ್ಫೋಟೆಕ್‌ ಸರ್ವೀಸಸ್‌, ನಂ.1208, ಎರಡನೇ ಮಹಡಿ, 41ನೇ ತಿರುವು, 26ನೇ ಮುಖ್ಯರಸ್ತೆ , 9 ನೇ ಬ್ಲಾಕ್‌, ಜಯನಗರ, ಬೆಂಗಳೂರು- 560069

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X