ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈ ಸೋಕಿ ಸಾಗುವ ‘ಬೆಳದಿಂಗಳು’

By Staff
|
Google Oneindia Kannada News
  • ರಘುನಾಥ ಚ.ಹ.
Coverpage of BeladingaladavaluKavitha Kusugalಕವಿತಾ ಕುಸುಗಲ್ಲ ರ ‘ಬೆಳದಿಂಗಳಾದವಳು’ ಸಂಕಲನದ ಬಹುತೇಕ ಕವಿತೆಗಳಲ್ಲಿ ಕವಿತೆ ಕಟ್ಟುವಲ್ಲಿನ ಕವಯತ್ರಿಯ ಹುಮ್ಮಸ್ಸು ಎದ್ದು ಕಾಣುತ್ತದೆ. ಯುವ ಕವಿಗಳಲ್ಲಿ ಸಾಮಾನ್ಯವಾದ ಬೆರಗು, ಸೌಂದರ್ಯೋಪಾಸನೆ, ಭಾವೋತ್ಕಟತೆ, ರಮ್ಯತೆಗಳು ಕವಿತಾರ ಕವನಗಳಲ್ಲಿ ಎದ್ದು ಕಂಡರೂ, ಅದೇವೇಳೆ- ಹತಾಶೆ, ವ್ಯಂಗ್ಯ, ನೋವು, ಹೋರಾಟದ ಧ್ವನಿಗಳೂ ಇಣುಕುತ್ತವೆ.

ಯಾವ ಕಟ್ಟುಪಾಡುಗಳಿಗೂ ಕಟ್ಟಿಹಾಕಿಕೊಳ್ಳದ ಕವಿತಾರದು ಅನ್ನಿಸಿದ್ದನ್ನು ಹಾಡಾಗಿಸುವ ಹುಚ್ಚುಕೋಡಿ ಮನಸ್ಸು. ಈ ಹುಮ್ಮಸ್ಸಿನಲ್ಲಿ ಕವಯತ್ರಿ ನವೋದಯದ ಗೀತ ಹಾಡುತ್ತಾರೆ. ನವ್ಯದ ಚಂಡಮದ್ದಳೆ ಮೊಳಗಿಸುತ್ತಾರೆ. ಬಂಡಾಯದ ಬಾವುಟವೂ ಇಲ್ಲಿದೆ. ಆದರೆ ಯಾವುದರ ಆಳಕ್ಕೂ ಕವಯತ್ರಿ ಮುಟ್ಟುವುದಿಲ್ಲ . ತನ್ನದೇ ಆದ ಅಭಿವ್ಯಕ್ತಿಯನ್ನು , ಶೈಲಿಯನ್ನು ಕವಿತಾ ಕಂಡುಕೊಳ್ಳಬೇಕಾಗಿದೆ.

ಸ್ವತಂತ್ರ ಭಾರತದ ಪ್ರಜೆಗಳು ನಾವು / ನಿಶ್ಚಿಂತ ರಾತ್ರಿಯ ನಿದ್ರಿತರು ನಾವು ಎನ್ನುವ ಸಾಲುಗಳನ್ನು ಬರೆಯುವ ಕವಯತ್ರಿ, ಮುಂದುವರಿದು-

ಪಶ್ಚಿಮದ ಬೀಜವದು ಇಲ್ಲಿ ಬೆಳೆದು
ಅದೆಷ್ಟೋ ಪರಕೀಯರು ನಮ್ಮಲ್ಲೇ ಹುಟ್ಟಿಹರು
ಒಡೆದು ಆಳುವ ಅವರ ನೀತಿ ಇವರಲ್ಲೂ ಇದೆ
ಏಕಾಗಬಾರದು ಇನ್ನೊಮ್ಮೆ ಸ್ವತಂತ್ರ ಹೋರಾಟ ?
(ಸ್ವತಂತ್ರ ಭಾರತದ 50 ವರ್ಷಗಳು)

ಎಂದು ಬರೆಯುತ್ತಾರೆ. ಏಕಾಗಬಾರದು ಮತ್ತೊಮ್ಮೆ ಹೋರಾಟ ಎನ್ನುವ ಕವಿತೆಯ ಕರೆ ಉತ್ಸಾಹದ ಕರೆ. ಆದರೆ ಸ್ವಾತಂತ್ರ ್ಯ ಅಂದರೆ ಏನು ? ಹೋರಾಟ ಯಾಕಾಗಿ? ಯಾವುದಕ್ಕಾಗಿ ? ಎನ್ನುವುದನ್ನು ಶೋಧಿಸದ ಕವಿತೆ ಮೇಲ್‌ಸ್ತರದ ಭಾವನೆಗಳಲ್ಲಿಯೇ ಕೊನೆಯಾಗುತ್ತದೆ.

ಮಿತಿಗಳೇ ಹೆಚ್ಚಾಗಿದ್ದರೂ, ‘ಬೆಳದಿಂಗಳಾದವಳು’ ಸಂಕಲನದಲ್ಲಿ ಇಷ್ಟವಾಗುವ ಅಂಶಗಳೂ ಇವೆ. ಕವಯತ್ರಿಯ ಭಾವನೆಗಳು ಎಲ್ಲಿಯೂ ಅಪ್ರಾಮಾಣಿಕ ಅನ್ನಿಸುವುದಿಲ್ಲ . ಸಂಕಲನದ ಕೆಲವು ಕವಿತೆಗಳಲ್ಲಿ ಥಟ್ಟನೆ ಇಷ್ಟವಾಗುವ ಸಾಲುಗಳಿವೆ. ಕೆಳಗಿನ ಕಾವ್ಯಭಾಗಗಳನ್ನು ನೋಡಿ:

ಮಳೆಯನ್ನು ತಂದು ನಿನ್ನೆಯನು ಮರೆಸು
ಬರಿದಾದ ಕೊಳದ ಕೂಗು
ಗಿಡಮರ ತುಂಬಲಿ ಹೂವುಹಣ್ಣು
ಮನದಲ್ಲಿ ಆಸೆಹಬ್ಬ
(ಆಗಸವೆ ಕೇಳು)

ಭರವಸೆಗಳ ಭ್ರಾಂತಿಯಲಿ
ಕೋಮುವಾದದ ಕರಾಳತೆಯಲಿ
ನಿರಾಸೆಯ ನಿಟ್ಟುಸಿರೊಡನೆ
ನಲುಗುತಿದೆ.
ನನ್ನಾಸೆಯ ಮಗುವಿನ ನಗೆ.
ಎಲ್ಲಿ ಹುಡುಕಲಿ ಗೆಳತಿ
ಎಲ್ಲ ಎದೆಯಂಗಳದಲ್ಲಿ
ದ್ವೇಷದ ಬಿಸಿಲ ಧಗೆ ಧಗೆ !
(ಕರಗಿ ಹೋಗಿದೆ ನಗು)

ಹೂವಾದರೆ ಕಾಯಾಗಬೇಕು
ಮತ್ತೆ ಎತ್ತರ ಮರವಾಗಬೇಕು,
ಕಲ್ಲಾದರೆ ನೆಲಮುಟ್ಟಿ ಮುಗಿಲೇರುವ
ಶಿಲೆಯಾಗಬೇಕು,
ವಾಚಾಳಿ ಜಗದೊಳಗೆ ಮೌನ ಜಂಗಮವಾಗಿ
ಮಾತು ನೀಡುವ ಕವಿತೆಯಾಗಬೇಕು,
ನಾನೊಂದು
ಪುಟಾಣಿ ನಗುವಿನ
ಪುಟ್ಟ ಕವಿತೆಯಾಗಬೇಕು, ಮತ್ತೆ
ಪಟ್ಟದಿಂದ ಬಹುದೂರ ನಿಲ್ಲಬೇಕು.
(ಏನಾಗಲಿ ?)

‘ಬೆಳದಿಂಗಳಾದವಳು’ ಕವಿತಾ ಕುಸುಗಲ್ಲರ ಚೊಚ್ಚಲ ಕೃತಿ. ಅಪಾರ ಜೀವನಪ್ರೀತಿಯ ಕವಿತಾ ತಮ್ಮ ಮುಂದಿನ ಕವಿತೆಗಳಲ್ಲಿ ಇನ್ನಷ್ಟು ಬೆಳೆಯಲಿ. ಕವಯತ್ರಿಯ ಹುಮ್ಮಸ್ಸಿನೊಂದಿಗೆ ಒಳದನಿಯ ಮೌನವೂ ಕೂಡಿ ಕವಿತೆಗಳು ಹದಗೊಳ್ಳಲಿ. ಮೈ ಸೋಕುವ ಬೆಳದಿಂಗಳು ಮನದೊಳಗೂ ಆಳಕ್ಕೂ ಇಳಿಯಲಿ.

*

ಕೃತಿ : ಬೆಳದಿಂಗಳಾದವಳು
ಲೇಖಕಿ : ಕವಿತಾ ಶಿ.ಕುಸುಗಲ್ಲ
ಪುಟ : 68, ಬೆಲೆ : 45 ರುಪಾಯಿ
ಮೊದಲ ಮುದ್ರಣ : 2002
ಪ್ರಕಾಶಕರು : ಮಂಜು ಪ್ರಕಾಶನ, ಪ್ಲಾಟ್‌ ನಂ.50, ಸೆಕ್ಟರ್‌ ನಂ.9, ಮಾಲಾ ಮಾರುತಿ ಎಕ್ಸ್‌ಟೆನ್ಷನ್‌, ಬೆಳಗಾವಿ-16

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X